’ಮತ್ತ ಹುಡುಗ ಹೆಂಗ…..ಚಟಾ-ಪಟಾ?’

ಹದಿನೈದ ದಿವಸದ ಹಿಂದ ನನ್ನ ಹೆಂಡ್ತಿ ಅತ್ಯಾನ ಮಗಗ ಕನ್ಯಾ ನೋಡಲಿಕ್ಕೆ ಹೋಗಿದ್ದ ಪ್ರಹಸನ ಬರದಿದ್ದೆ, ಇದ ಅದರ ಮುಂದಿನ ಕಥಿ. ಅದರ ಅರ್ಥ ನನ್ನ ಹೆಂಡ್ತಿ ನೋಡಿದ್ದ ಆ ಕನ್ಯಾ ನಮ್ಮ ಹುಡುಗಗ ರಿಜೆಕ್ಟ ಮಾಡ್ತ ಅಂತ ಬಿಡಿಸಿ ಹೇಳೋದ ಏನ ಬ್ಯಾಡ ಅಲಾ? ಅಲ್ಲಾ, ಹಂಗ ಬಿ.ಎಸ್ಸಿ ಕಂಪ್ಯೂಟರ್ಸ್ ಮಾಡಿದ್ದ ಹುಡಗಿಗೆ ನನ್ನ ಹೆಂಡತಿ tough ಸಾಂಪ್ರದಾಯಿಕ questions ಕೇಳಿದರ ಹುಡಗಿ ಹೆಂಗ ಹೂಂ ಅಂತಾಳ್ರಿ?
ಆ ಹುಡುಗ ಅಂತೂ ಕನ್ಯಾದವರ ಮನಿ ಇಂದ ಹೊರಗ ಬಂದವನ
’ಮಾಮಾ, ನೀವ ಒಂದ ಇದ್ದದ್ದರಾಗ ಛಲೋ ಕನ್ಯಾ ನೋಡ್ರಿ, ಇವರೇಲ್ಲಾ ಹಿಂಗ ಪದ್ದತಿ, ಸಂಪ್ರದಾಯ ಕೇಳೋದ, ಹಾಡ ಹೇಳಸೋದು, ಓದಲಿಕ್ಕೆ ಬರ್ತದ ಏನ ಅಂತ ಕೇಳ್ಕೋತ ಹೊಂಟರ ನಂದೇನ ಈ ಜನ್ಮದಾಗ ಲಗ್ನ ಆಗಂಗಿಲ್ಲಾ. ನೀವು ಯಾವದರ ಹುಡಕರಿ, ಒಟ್ಟ ಕನ್ಯಾ ಇದ್ದರ ಸಾಕ’ ಅಂತ ದಯನಾಸ ಪಡ್ತ ಪಾಪ.
“ಸಜ್ಜನಸ್ಯ ಹೃದಯ ನವನೀತಂ” ಅಂತಾರಲಾ ಹಂಗ ಬೆಣ್ಣೆ ಹಂತಾ ನನ್ನ ಹೃದಯ ಕರಗಿ ಹೋತ. ಅಲ್ಲಾ ಹಂಗ ನಾ ಸ್ವಂತ ಕನ್ಯಾ ನೋಡಿದಾಗನೂ ನನ್ನ ಬೆಣ್ಣೆ ಹಂತಾ ಹೃದಯ ಕರಗಿ ಹೋಗಿ ಹೂಂ ಅಂದ ಮುಂದ ವರ್ಷ ತುಂಬೋದರಾಗ ಬೆಣ್ಣಿ ಕಾದ ತುಪ್ಪ ಆಗಿ ತಳಾ ಹತ್ತಿ ಹೊತ್ತಿ ಹುರಕಡ್ಲಿ ಆಗಿದ್ದ ನಿಮಗೇಲ್ಲಾ ಗೊತ್ತ ಅದ. ಆದರೂ ನಾ ಹುಡುಗಗ
’ಏ, ತಮ್ಮಾ ನೀ ಚಿಂತಿ ಬಿಡ’ ಅಂತ ಮುಂದಿನವಾರನ ನಾ ಒಂದ ಕನ್ಯಾ ನೋಡೊ ಕಾರ್ಯಕ್ರಮ ಆರೇಂಜ್ ಮಾಡಿದೆ
ಕನ್ಯಾ ನೋಡೊ formality ಮುಗದ ಮ್ಯಾಲೆ ಹುಡಗಿ ಅಪ್ಪಾ
’ಹುಡಗಾ ಹುಡಗಿ ಏನರ personal ಮಾತೋಡದಿದ್ದರ ಮಾತಾಡ್ರಿ’ ಅಂತ ಹೇಳಿದರು. ನಂಗೂ ಅದ ಬೇಕಾಗಿತ್ತ, ನಾ ಸೀದಾ ಎದ್ದ ನಿಂತೆ, ಒಂದಿಷ್ಟ ಮಂದಿ ನಾನ ಎಲ್ಲೆ ಪರ್ಸನಲ್ ಮಾತಾಡ್ಲಿಕ್ಕೆ ಹುಡುಗಿನ ಕರಕೊಂಡ ಹೊಂಟೇನಿ ಅಂತ ಗಾಬರಿ ಆದರ. ನಾ ಎದ್ದ ರಾಘುನ ಕಿವ್ಯಾಗ
’ಲೇ…ಏನೇನ ಕೋಳೋದ ಈಗ ಭಿಡೆ ಬಿಟ್ಟ ಕೇಳಿ ಬಿಡ, ಆಮ್ಯಾಲೆ ಕೊಂಯ್ಯ..ಕೊಂಯ್ಯ.. ಅನಬ್ಯಾಡ’ ಅಂದೆ.
ಅಂವಾ ಹುಡಗಿ ಜೊತಿ ಮಾತಾಡ್ಲಿಕ್ಕೆ ಟೆರೆಸ್ ಮ್ಯಾಲೆ ಕರಕೊಂಡ ಹೋದಾ.
ಮುಂದ ಒಂದ ಹತ್ತ- ಹದಿನೈದ ನಿಮಿಷಕ್ಕ ಕೆಳಗ ಇಳದ ಬಂದ ಬಿಟ್ಟಾ. ಅವನ ಮಾರಿ ನೋಡಿದರ ಕೆಲಸ ಆದಂಗ ಕಾಣಲಿಲ್ಲಾ, ನಾ ಏನ ಅಲ್ಲೇ ಜಾಸ್ತಿ ಮಾತಾಡ್ಲಿಲ್ಲಾ. ಇನ್ನ ನಾವ ಗಂಡಿನವರ ಅಂದ ಮ್ಯಾಲೆ ’ಆತ ತಿಳಸ್ತೇವಿ ತೊಗೊರಿ’ ಅಂತ ಅನಬೇಕು ಅನ್ನೋದರಾಗ ಹುಡಗಿ ಅಪ್ಪಾ ’ನಮ್ಮ ಮಗಳ ಜೊತಿ ಮಾತಾಡಿ ಹೇಳ್ತೇವಿ ತೊಗೊರಿ’ ಅಂದಾ.
ಓಹ್ ನಾವ ಗಂಡಿನವರಲಾ, ಈಗ ಹೆಣ್ಣಿನವರ ಹೂಂ ಅಂದರ ಇಷ್ಟ ಹೂಂ ಅಂದಂಗ ಅನ್ನೋದನ್ನ ಮರತ ಬಿಟ್ಟಿದ್ದೆ.
’ಆತ ಆದಷ್ಟ ಲಗೂನ ತಿಳಸರಿ’ ಅಂತ ಏನ ಅಗದಿ ನಮ್ಮ ರಾಘ್ಯಾನ ಮುಂದ ಸರ್ಕಾರಿ ನಳದ ಮುಂದ ಪಾಳೆಕ್ಕ ಇಟ್ಟಿದ್ದ ಕೊಡದಗತೆ ಕನ್ಯಾ ನಿಂತಾವ ಅನ್ನೋರಗತೆ ಅಂದ ಬಂದೆ.
ಹೊರಗ ಬರೋ ಪುರಸತ್ತ ಇಲ್ಲದ.
’ಲೇ..ಏನಂದ್ಲಲೇ..ಹುಡಗಿ, ಹತ್ತ ನಿಮಿಷದಾಗ ಬರೇ ಮಾತಾಡಿ ಬಂದೇಲಾ?’ ಅಂತ ನಾ ಅವಂಗ ಕೇಳಿದರ ಅಂವಾ ಶಾರ್ಟ ಆಗಿ ಒಂದ ಉಸಿರನಾಗ ಕಥಿ ಹೇಳಿದಾ.
ಆ ಹುಡಗಿ ಇವನ ಜೊತಿ ಹಿಂಗ ಒಂದ್ಯಾರಡ ಮಾತೋಡದಕ್ಕ ಸೀದಾ
’ನೀವು ತೊಗೊತಿರೇನ’ ಅಂತ ಡೈರೆಕ್ಟ ಕೇಳಿದ್ಲಂತ. ಇಂವಾ ಗಾಬರಿ ಆಗಿ, ಹೋಗ್ಲಿ ಬಿಡ ಮೊದ್ಲ ಕನ್ಯಾ ಹೂಂ ಅನ್ನೋದ ತ್ರಾಸ ಹಂತಾದರಾಗ ಇನ್ನ ಇದ್ದದ್ದ ಇದ್ದಂಗ ಹೇಳಿ ಸೀಗೊ ಕನ್ಯಾನೂ ಕಳ್ಕೋಬಾರದ ಅದರಾಗ ಈ ಹುಡಗಿ ಸುಸಂಸ್ಕೃತ ಮನೆತನದೋಕಿ ಕಂಡಂಗ ಕಾಣ್ತಾಳ ಅಂತ ಏನ ದಿವಸಕ್ಕ ಎರಡ ಸರತೆ ಸಂಧ್ಯಾವಂದನಿ ಮಾಡೋರಗತೆ
’ಏ…ನಾ ಹಂತಾ ಹುಡುಗನ ಅಲ್ಲಾ. ಅಗದಿ traditional ಮನತನದಂವ, ನಂಗ ಒಂದೂ ಚಟಾ ಇಲ್ಲಾ ..’ ಅಂತ ಅಗದಿ ಸಾಚಾನ ಗತೆ ಹೇಳಿದ್ನಂತ. ಅದಕ್ಕ ಹುಡುಗಿ ಡೈರೆಕ್ಟ ಆಗಿ
’ಓ ಐ..ಸಿ….ಅಲ್ಲಾ ಹಂಗ ನಾವು traditional ಮನೆತನದವರ ಖರೆ ಆದರ ಬೆಂಗಳೂರಿಗೆ ಹೋದ ಮ್ಯಾಲೆ ಸ್ವಲ್ಪ ಮಾಡರ್ನ್ ಆಗೇವಿ, ದೊಡ್ಡ ಊರಾಗ ಇದ್ದ ಮ್ಯಾಲೆ, ಒಂದ ಸ್ವಲ್ಪರ ಬ್ರಾಡ್ ಮೈಂಡೆಡ್ ಆಗಬೇಕಾಗ್ತದ, at least occasionally ಪಾರ್ಟಿಗೆ ಹೋದಾಗರ ತೊಗೊ ಬೇಕಾಗ್ತದ. ಅದರಾಗ ಗಂಡಸಾಗಿ ಹುಟ್ಟಿ ಒಂದೂ ಚಟಾ ಇಲ್ಲ ಅಂದರ ಹೆಂಗ’ ಅಂತ ಅಂದ ‘ I will think over ‘ ಅಂತ ಭಡಾ ಭಡಾ ಟೇರೆಸ್ ಇಳದ ಬಂದ ಬಿಟ್ಟಳಂತ
ಏನ್ಮಾಡ್ತೀರಿ? ನಂಗ ಅದನ್ನ ಕೇಳಿ ತಲಿ ಕೆಟ್ಟ ಹೋತ.
ಅಲ್ಲಾ ಈ ಮಗಾ ಇದ್ದ ಹಕಿಕತ್ ಹೇಳಿದ್ದರ ಕನ್ಯಾ ಹೂಂ ಅಂತಿತ್ತೋ ಏನೋ ಅಂತ ಅನಸ್ತ. ನಾ ಅವಂಗ
’ಏನ ಮನಷ್ಯಾ ಇದ್ದೀಲೆ, ಎಷ್ಟ ಸರತೆ ಹೇಳೇನಿ ನನ್ನಂಗ ಸ್ಟ್ರೇಟ್ ಫಾರ್ವಡ್ ಇರ ಮಗನ ಅಂತ ನಾ ಹೇಳಿದ್ದ ಎಲ್ಲೆ ಕೇಳ್ತಿ’ ಅಂತ ಬೈದ ವಾಪಸ ಕರಕೊಂಡ ಬಂದೆ
ಮುಂದಿನ ವಾರ ಮತ್ತೊಂದ ಕನ್ಯಾ ಕಡೆದವರದ ಫೋನ ಬಂತ. ಅವರ ಫೋನ ಒಳಗ ಸೂಕ್ಷ್ಮ
’ಮತ್ತ…ಆಡೂರವರ ಹುಡುಗ ಹೆಂಗ.. ಚಟಾ- ಪಟಾ ಏನರ ಅವ ಇನ, ಅಲ್ಲಾ ನಿಮ್ಮ ಪೈಕಿ ಅಂದರ ಹಂಗ ಕೇಳೋದ ತಪ್ಪ ಆಗ್ತದ ಆದರೂ ಹುಡಗಿ ಭವಿಷ್ಯದ ಪ್ರಶ್ನೆ ಅದಕ್ಕ ಒಂದ ಮಾತ ಕೇಳಿದೆ ಏನ ತಪ್ಪ ತಿಳ್ಕೊಬ್ಯಾಡ್ರಿ’ ಅಂತ ಅಂದರು.
ನಾ ಖರೇನ ಗಾಬರಿ ಆದೆ, ನಂಗ ಏನ ಹೇಳ್ಬೇಕ ತಿಳಿಲಿಲ್ಲಾ, ಮ್ಯಾಲೆ ಹುಡುಗ ನಿಮ್ಮ ಪೈಕಿ ಅಂದರ ಹಿಂಗ ಕೇಳೋದ ತಪ್ಪ ಅಂತ ಬ್ಯಾರೆ ಅಂತಾರ. ಹಂಗಂದರ ಮೊದ್ಲ ಇವರ ನನ್ನ ಏನ ಅಂತ ತಿಳ್ಕೊಂಡಾರ ಅನ್ನೊದ ಡೌಟ ಬರಲಿಕತ್ತ. ನಾ ಸೀದಾ
’ನೋಡ್ರಿ ಸರ್, ಈಗಿನ ಕಾಲದಾಗ ಹುಡುಗರು ಹೆಂಗ ಇರಬೇಕ ಹಂಗ ಇದ್ದಾನ್ರಿಪಾ, ಸುಳ್ಳ ಯಾಕ ಹೇಳ್ಬೇಕ. ಈಗ ಕಾಲ ಬದಲಾಗೇದ ಮಾಡರ್ನ್ ಹುಡುಗರು ಹಂಗ occasional ಪಾರ್ಟಿ-ಗಿರ್ಟಿ ಮಾಡ್ತಿರ್ತಾರ’ ಅಂತ ಅಗದಿ ಸ್ಟ್ರೇಟ್ ಪಾರ್ವರ್ಡ್ ಆಗಿ ಹೇಳಿ ಬಿಟ್ಟೆ. ಅವರ ಅದಕ್ಕ
’ ಓಹ್ …ಐ ಸಿ…..ಹಂಗ ನಾವ ನೋಡ್ಲಿಕ್ಕೆ ಮಾಡರ್ನ ಇದ್ದರೂ thinking ಒಳಗ traditional ಇದ್ದೇವ್ರಿಪಾ, ನಮ್ಮ ಮನ್ಯಾಗರ ಇವತ್ತೂ ಶ್ರಾದ್ಧಾ-ಪಕ್ಷಾ ಇದ್ದಾಗ ಇದ್ಲಿ ಒಲಿ ಮ್ಯಾಲೆ ಅಡಗಿ ಮಾಡ್ತೇವಿ’. ಪಾರ್ಟಿ-ಗಿರ್ಟಿ ಹಿಂತಾವೇಲ್ಲಾ ನಮಗ ನಡೆಯಂಗಿಲ್ಲಾ, if one drinks occasionally then occasion comes daily’ ಅಂತಾರ’
ಅಂತ ಅವರ ನನ್ನಕಿಂತ ಸ್ಟ್ರೇಟ್ ಫಾರ್ವರ್ಡ್ ಆಗಿ ಹೇಳಿ ಫೋನ ಇಟ್ಟರ.
ನಂಗ ಏನ ಮಾತಾಡ್ಬೇಕ ತಿಳಿಲಿಲ್ಲಾ. ಹುಡುಗ ತೊಗೊಳಂಗಿಲ್ಲಾ ಅಂದರ ಗಂಡಸಾಗಿ ಅಷ್ಟು ಚಟಾ ಮಾಡ್ಲಿಲ್ಲಾ ಅಂದರ ಹೆಂಗ ಅಂತಾರ, ಮಾಡರೇಟ ಆಗಿ ಅಕೇಜನಲ್ ಕುಡಿತಾನ ಅಂದರ, ಏ ಆಕೇಜನ ದಿವಸಾ ಬರ್ತಾವ ಅಂತಾರ.
ಮುಂದಿನ ವಾರ ಮತ್ತೊಂದ ಕನ್ಯಾದ್ದ query ಬಂತ, ಅಗದಿ ಗೋವಾ ಕಡೆದ್ದ. ನಮಗ ಏನ ಮಾತಾಡ್ಬೇಕ ತಿಳಿವಲ್ತಾಗಿತ್ತ.
ಹಂಗ ಹುಡುಗಿ ಗೋವಾ ಕಡೆದೋಕಿ ಅಂತ
’ನಿಮ್ಮ ಕಡೆ ಕಾಜು ಫೆನ್ನಿ ಹೆಂಗ ಲಿಟರ್ ಅಂತ ಕೇಳಲಿಕ್ಕೂ ಬರಂಗಿಲ್ಲಾ’
ಎಲ್ಲೇರ ಅಕಿ ಗೋವಾದಾಗ ಇದ್ರೂ ಗೋಮೂರ್ತದ ಪೈಕಿ ಇದ್ದರ ಏನ್ಮಾಡೋದ?
ಈ ಸರತೆ ನಾನ ಹ್ಯಾಂಡಲ್ ಮಾಡ್ತೇನಿ ತಡಿ ಅಂತ ಆ ಹುಡಗಿನ್ನ ಸಹಜ ಮಾತಾಡ್ಸಿದ್ರ ಅಕಿ ಅದು-ಇದು ಫಾರ್ಮಲ್ ಮಾತಾಡಿ
’ಮಾಮಾ, ನಿಮ್ಮ ಕಡೆ ತೊಗೊತಾರೋ ಇಲ್ಲೋ ನಂಗ ಗೊತ್ತಿಲ್ಲಾ. ಆದರ ನಾವ ಗೋವಾದವರ ನಮಗ ಬೀಯರ್, ಬ್ರ‍ೀಝರ್, ವೈನ್ ಇವೇಲ್ಲಾ ಕಾಮನ್. ಯಾಕೋ ಹುಡುಗ ಒಂಬತ್ತವಾರಿಯಂವ ಕಂಡಂಗ ಕಂಡಾ ಅದಕ್ಕ ಕೇಳಿದೆ dont mind’ ಅಂತ ಅಂದ ಬಿಟ್ಟಳು. ತೊಗೊ ನಂಗ ತಡ್ಕೊಳಿಕ್ಕೆ ಆಗ್ಲಿಲ್ಲಾ, ತರಸ ಒಂದ ಬಾಟಲ್ ಅನ್ನೋವ ಇದ್ದೆ, ಆದರ ಬ್ಯಾಡ ತಡಿ ಒಂದ ಬಾಟಲ್ ಇಬ್ಬರಿಗೂ ಸಾಲಂಗಿಲ್ಲಾ ಕೇಸ ಬೇಕ ಅಂತ ಸುಮ್ಮನಾದೆ.
ಅಲ್ಲಾ ಹಿಂತಾ ಕನ್ಯಾ ಸಿಕ್ಕರ ಗಂಡಂದರಿಗೆ ಪಾನಕದಾಗ, ಎಳನೀರಾಗ ವೋಡ್ಕಾ ಮಿಕ್ಸ್ ಮಾಡ್ಕೊಂಡ ಕೊಸಂಬರಿ ಬಾಡಿಸ್ಗೋಳೊ ಪ್ರಸಂಗನ ಬರಂಗಿಲ್ಲಾ ಅಂತ ಅನಸ್ತ. ಹೌದಲ್ಲ ಮತ್ತ?
ಇರಲಿ ನಾಳೆ ನಾವ ದಂಪತ್ ಗೋವಾಕ್ಕ ಮಾತುಕತಿಗೆ ಹೊಂಟೇವಿ. ಹಂಗ ಯಾರಿಗರ ಏನರ ತರಬೇಕಿದ್ದರ ಹೇಳ್ರಿ ಮತ್ತ. ಅಲ್ಲಾ ಅಲ್ಲೇ ಗೋಡಂಬಿ-ಗೇರಬೀಜ ಸೋವಿ ಸಿಗ್ತಾವ ಅದಕ್ಕ ಕೇಳಿದೆ ಇಷ್ಟ.
e

One thought on “’ಮತ್ತ ಹುಡುಗ ಹೆಂಗ…..ಚಟಾ-ಪಟಾ?’

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ