’ಬಾಣಂತನನ ಮುಗ್ಗಲಗೇಡಿತನಕ್ಕ ಮೂಲ ಕಾರಣ’ ಇದ ನನ್ನ ಡೈಲಾಗ ಅಲ್ಲಾ ನಮ್ಮ ಅಜ್ಜಿದ. ಅಕಿ ಹಗಲಗಲಾ ಹೇಳೋಕಿ ಹೆಣ್ಣ ಮಕ್ಕಳ ಮುಗ್ಗಲಗೇಡಿ ಆಗೋದ ಬಾಣಂತನ ಆದ ಮ್ಯಾಲೆ ಅಂತ.
“ಅಲ್ಲಾ ಹಂಗ ಗೊತ್ತ ಇದ್ದರು ನೀ ಯಾಕ ಮೂರ ನಾಲ್ಕ ಹಡದಿ, ನಿಮ್ಮವ್ವ ಯಾಕ ಏಳ ಎಂಟ ಹಡದ್ಲು’ ಅಂತ ನಾ ಕೇಳಿದರ “ಏ ನಮ್ಮ ಕಾಲದಾಗ ಅಲ್ಲಲೇ ನಾ ಹೇಳಲಿಕತ್ತಿದ್ದ ನಿಮ್ಮ ಕಾಲದಾಗ” ಅಂತ ನನ್ನ ಹೆಂಡ್ತಿ ಮಾರಿ ನೋಡ್ಕೋತ ಅಂತಿದ್ಲು.
ಅಲ್ಲಾ ಹಂಗ ಅಕಿ ಹೇಳಿದ್ದ ಅಗದಿ ಖರೇ ಅನ್ನರಿ. ಹಂಗ ನನಗೂ ನನ್ನವು, ಅಂದರ ನನ್ನ ಹೆಂಡ್ತಿವು ಎರಡ ಬಾಣಂತನ ಆದಮ್ಯಾಲೆ ನಮ್ಮಜ್ಜಿ ಹೇಳಿದ್ದ ಖರೇ ಅನಸ್ತ.
ಹಂಗ ನಮ್ಮಕಿ ಗಡತರ ಆಗಿದ್ದ ಎರಡ ಹಡದ ಮ್ಯಾಲೆ. ಇಲ್ಲಾಂದರ ಮೊದ್ಲ ಹೆಂಗ ಇದ್ಲ ಅಂದರಿ, ಅಗದಿ ಊಬಿದರ ಹಾರಿ ಹೋಗೊ ಹಂಗ ಇದ್ಲು. ಹಿಂಗಾಗಿನ ಪಾಪಾ ಅವರವ್ವಾ-ಅಪ್ಪಾ ಅಕಿಗೆ ನಾನ ತಕ್ಕ ಹುಡಗಾ, ಒಬ್ಬರ ಗಾಳಿಗೆ ಹಾರಿದರ ಇನ್ನೊಬ್ಬರ ಹಿಡ್ಕೋತಾರ ಅಂತ ನಂಗ ಗಂಟ ಹಾಕಿದ್ದ. ಅಲ್ಲಾ ನೀವು ನನ್ನ ಮದ್ವಿ ಫೋಟೊ ನೋಡಿದರ
“ನಿನ್ನ ಮದ್ವಿ ಫೋಟೊದಾಗ ಇದ್ಲಲಾ ನಿನ್ನ ಹೆಂಡ್ತಿ ಇಕಿ ಅದ ಹೆಂಡ್ತಿ ಏನ?” ಅಂತ ಕೇಳ್ತಿರಿ.
ಅಲ್ಲಾ ಹಂಗ ನಾರ್ಮಲಿ ಹಡದ ಮ್ಯಾಲೆ ಹೆಣ್ಣಮಕ್ಕಳಿಗೆ ಮೈ ಬರತದ ಅಂತಾರ ಖರೇ ಆದರ ನಮ್ಮಕಿಗೆ ಒಂದ ಸ್ವಲ್ಪ ಜಾಸ್ತಿನ ಬಂತ ಅನ್ನರಿ. ಅದರಾಗ ಇಕಿವು ಎರಡು ಸಿಜರಿನ್ ಬ್ಯಾರೆ ಹಿಂಗಾಗಿ ಮತ್ತೊಂದ ಸ್ವಲ್ಪ ಜಾಸ್ತಿ ಬಂತ. ಮುಂದ ನಮ್ಮಿಬ್ಬರದು ಜೋಡಿ ಮಿಸ್ ಮ್ಯಾಚ್ ಆತ. ನಾ ಇಕಿ ಜೊತಿ ಹೊಂಟರ ನಮ್ಮ ಮೌಶಿ ಜೊತಿ ಹೊಂಟಂಗ ಕಾಣಲಿಕತ್ತ. ಪಾಪ ಅಕಿಗೆ ನಾಚಕಿ ಬರಲಿಕತ್ತ. ಅದರಾಗ ಅಕಿಗೆ ಗೊತ್ತ ಇತ್ತಲಾ ಆಪರೇಶನ್ ಮಾಡಿಸ್ಗೊಂಡರ ಮೈ ಬರತದ ಅಂತ. ಹಿಂಗಾಗಿ ನಂಗ ಮಕ್ಕಳಾಗಲಾರದ್ದ ಆಪರೇಶನ್ನರ ನೀವು ಮಾಡಿಸ್ಗೊರಿ ಅಂದರ ನೀವು ದಪ್ಪ ಆಗ್ತೀರಿ ಅಂತ ಗಂಟ ಬಿದ್ಲು. ಅಲ್ಲಾ ಹಂಗ ನಾ ಏನ ಅಕಿ ಮಾತ ಕೇಳಲಿಲ್ಲ ಬಿಡ್ರಿ
’ನಿಂಗ ಮಕ್ಕಳ ಬ್ಯಾಡಂದರ ನೀ ಆಪರೇಶನ್ ಮಾಡಿಸ್ಗೊ, ನಂಗ ಬೇಕ ನಾ ಯಾಕ ಮಾಡಿಸ್ಗೊಳ್ಳಿ’ ಅಂತ ನಾ ದಾಟ್ಕೊಂಡೆ. ಅಕಿನ ಮತ್ತ ನಾ ಎಲ್ಲೇರ ಮತ್ತೊಂದ ಹಡದ ಗಿಡದೇನಿ ಅಂತ ಹೆದರಿ ಮಾಡಿಸ್ಗೊಂಡ್ಳು ಆ ಮಾತ ಬ್ಯಾರೆ. ಹಿಂಗಾಗೇ ನಾ ಹಗಲಗಲಾ ಚಾಷ್ಟಿ ಮಾಡತಿರ್ತೇನಿ, ಇನ್ನ ನನ್ನ ಹೆಂಡತಿಗೆ ಮಕ್ಕಳ ಆಗಂಗಿಲ್ಲಾ ನಂಗ ಆದರೂ ಆಗಬಹುದು ಅಂತ.
ಇನ್ನ ನಮ್ಮಜ್ಜಿ ಹೇಳೊ ಹಂಗ ’ಬಾಣಂತನನ ಮುಗ್ಗಲಗೇಡಿ ತನಕ ಕಾರಣ’ ಅನ್ನೋದರಾಗ ಭಾಳ ಲಾಜಿಕ್ ಅದರಿಪಾ. ಅಲ್ಲಾ ಹಂಗ ಬಾಣಂತನ ಅಲ್ಲಾ ಅದರಕಿಂತ ಒಂದ ವರ್ಷದಿಂದನ ಮುಗ್ಗಲಗೇಡಿ ತನಕ್ಕ ಮುನ್ನಡಿ ಸ್ಟಾರ್ಟ್ ಆಗಿರ್ತದ. ಅದರಾಗ ಈಗ ಕಾಲನೂ ಭಾಳ ಬದಲಾಗೇದ. ಕ್ಯಾರಿಂಗ ಅಂತ ಡಾಕ್ಟರ್ ಕನಫರ್ಮ ಮಾಡೋ ಪುರಸತ್ತ ಇಲ್ಲದ ಎರಡ ತಿಂಗಳ ಬೆಡ್ ರೆಸ್ಟ ಹೇಳಿ ಬಿಡ್ತಾರ.
“ವಜ್ಜಾ ಸಾಮಾನ ಎತ್ತ ಬ್ಯಾಡಾ, ಗಾಡಿ ಹೋಡಿ ಬ್ಯಾಡಾ…ಅದರಾಗ ಹುಬ್ಬಳ್ಳಿ ಧಾರವಾಡದಾಗಂತೂ ಬಸ್ಸೂ ಹತ್ತ ಬ್ಯಾಡ” ಅಂತ ವಾರ್ನಿಂಗ್ ಕೊಟ್ಟ ಮ್ಯಾಲೆ ಒಂದಿಷ್ಟ ವಿಟಾಮಿನ್, ಟಾನಿಕ್ ಅದು ಇದು ಅಂತ ಸುಟ್ಟು ಸುಡಗಾಡ ಕೊಡ್ತಾರ. ಅಲ್ಲಾ ಒಂದ ಕಾಪರ್ ಟಿ ತಗಸಿದ್ದ ತಪ್ಪಿಗೆ ಐರನ್, ಝಿಂಕ್ ಎಲ್ಲಾ ಕೊಡಬೇಕ.
ಇನ್ನ ಇತ್ತಲಾಗ ಆ ಹುಡಗಿ ತವರಮನಿಯವರು ಎಲ್ಲೆ ಅತ್ತಿ ಮನ್ಯಾಗ ತಮ್ಮ ಮಗಳಿಗೆ ಕೆಲಸಾ ಹಚ್ಚಿ-ಗಿಚ್ಚ್ಯಾರ ಅಂತ
’ನಮ್ಮ ಮನ್ಯಾಗ ರೆಸ್ಟ ತೊಗೊವಳ್ಳಾಕ..ಅಲ್ಲೇ ಕಳಿಸಿ ಬಿಡ್ರಿ’ ಅಂತ ತಮ್ಮ ಮನಿಗೆ ಕರಕೊಂಡ ಹೋಗಿ ಬಿಡ್ತಾರ. ಮುಂದ ಗಂಡನ ಸಂಸಾರ ಹೆಂಗ ಅಂತ ವಿಚಾರ ಮಾಡಂಗಿಲ್ಲಾ. ಅಲ್ಲಾ ಗಂಡ ಏನ ಹಂತಾ ಸಂಸಾರದ ವಜ್ಜಾ ಹಾಕ್ತಿದ್ದಾನ ಅಂತೇನಿ, ಇಲ್ಲೇ ಅತ್ತಿ ಮನ್ಯಾಗ ಇರಬಾರದ. ಅದರಾಗ ಆ ಹುಡಗಿಗೂ ಅದ ಬೇಕಾಗಿರ್ತದ
’ರ್ರಿ…ನಾ ತವರ ಮನಿಗೆ ಹೋಗೆ ರೆಸ್ಟ ತೊಗೊತೇನಿ…ಇಲ್ಲೇ ನಿಮ್ಮವ್ವ ಸಣ್ಣ ಪುಟ್ಟ ಕಲಸಾ ಮಾಡ್ಕೋತ ಇರು, ಯಾಕ್ಟೀವ್ ಇರ್ತಿ ಅಂತ ಕೆಲಸ ಹಚ್ಚತಾರ’ ಅಂತ ಜಿಗದ ಬಿಡ್ತಾಳ. ಅಲ್ಲಾ ನಮ್ಮಜ್ಜಿ ಅವ್ವಾ ಕಾಡಿಗೆ ಕಟಗಿ ಆರಿಸೊಗಂಡ ಬರಲಿಕ್ಕೆ ಹೋದಾಗ ಹಡ್ಕೊಂಡ ಬಂದಿದ್ಲಂತ. ಅಂದರ ಹಡೇಯೊತನಕ ಅಷ್ಟ ಯಾಕ್ಟಿವ್ ಇದ್ಲ ನೋಡ್ರಿ. ಹಂಗ ಅದಕ ಅಕಿ ಒಂದ ಬಿಟ್ಟ ಎಂಟ ಹಡದದ್ದ ಬಿಡ್ರಿ.
ಇನ್ನ ಎರಡ ತಿಂಗಳ ರೆಸ್ಟ ತೊಗೊಂಡ ಸ್ಕ್ಯಾನಿಂಗ ನಾರ್ಮಲ ಆದ ಕೂಡಲೇ ಮತ್ತ ಗಂಡನ ಮನಿ. ಆಮ್ಯಾಲೆ ಆವಾಗ ಬೈಕಿ ಬ್ಯಾರೆ ಜೋರ ಇರ್ತಾವ, ಇನ್ನ ಬೈಕಿ ತೀರಸಲಿಕ್ಕೆ ಗಂಡನ ಬೇಕಲಾ. ಪಿಜ್ಜಾ, ಸಾವಜಿ, ಲಿಂಗಾಯತ ಖಾನಾವಳಿ, ಅಕ್ಷಯ ಪಾರ್ಕ್ ಚಾಟ್ಸ ಒಂದ ಎರಡ.
ಮುಂದ ಒಂದ ತಿಂಗಳಕ್ಕ ತವರಮನಿ ಕುಬಸಾ, ಹಂಗ ಅದರಕಿಂತ ಮೊದ್ಲ ಕಳ್ಳ ಕುಬಸದಿಂದ ಹಿಡದ ಕರಿದಿಂಗಳ ಕುಬಸದ ತನಕಾ ನೂರಾ ಎಂಟ ಕುಬಸ ಆಗಿರ್ತಾವ ಆ ಮಾತೆ ಬ್ಯಾರೆ. ಇನ್ನ ಅವರ ಮನಿ ಕುಬಸಾ ಇವರ ಮನಿ ಕುಬಸಾ ಅಂತ ದಿವಸಾ ಹೊರಗ ಉಂಡಿದ್ದ ಉಂಡಿದ್ದ. ಮೊದ್ಲ ಕೆಲಸ ಇಲ್ಲಾ ಬೊಗಸಿ ಇಲ್ಲಾ ಹಿಂಗ ತಿಂದರ ಮೈ ಬರಲಾರದ ಏನ, ಇನ್ನ ಮನ್ಯಾಗ ಸಣ್ಣ – ಪುಟ್ಟ ಕೆಲಸ ಮಾಡಂದರ
’ಸುಳ್ಳ ಯಾಕ ರಿಸ್ಕರಿ…ಡಾಕ್ಟರ ವಜ್ಜಾ ಎತ್ತ ಬ್ಯಾಡ ಅಂದಾರ, ಸುಳ್ಳ ಒಂದ ಹೋಗಿ ಒಂದ ಆದರ ಏನ್ಮಾಡೋದ’ ಅಂತ ದೊಡ್ಡ ಡೈಲಾಗ ಹೊಡಿಯೋದ.
ಕಡಿಕೆ ಮತ್ತ ದಿವಸ ಹತ್ತರ ಬಂದ್ವು ಅಂತ ಅತ್ತಿ ಮನ್ಯಾಗ ಸೀಮಂತ ಮಾಡಿಸ್ಗೊಂಡ ಒಂದ ಎರಡ ತಿಂಗಳ ಮೊದ್ಲ ಹಡಿಲಿಕ್ಕೆ ತವರಮನಿಗೆ ಹೋಗೊದ. ಅಲ್ಲೇ ಅಂತೂ ಅವರವ್ವಾ ಮಾಡಿ ಮಾಡಿ ಹಾಕೋಕಿ ಇಕಿ ಕಟಗೋತ ಕೂತ ಬಿಡೋಕಿ. ಇನ್ನ ಹಡದ ಮ್ಯಾಲೆ ಅಂತೂ ಮತ್ತ ರೆಸ್ಟ ರೆಸ್ಟ, ಅದರಾಗ ಇತ್ತೀಚಿಗೆ ನಾರ್ಮಲಿ ನಾರ್ಮಲ ಹಡಿಯೋ ಹೆಣ್ಣ ಮಕ್ಕಳ ಕಡಮಿ ಆಗ್ಯಾರ ಹಿಂಗಾಗಿ ಸಿಜರಿನ್ ಆಗೇದ ಅಂತ ಐದ ತಿಂಗಳ ಪದ್ದತ ಸೀರ ಬಾಣಂತನ. ಅದರಾಗ ಬಾಣಂತನ ಅಂತ ಅಂಟಿನ ಉಂಡಿ, ಅದು ಇದು ಅಂತ ನೂರಾ ಎಂಟ ಟೊಂಕ ಗಟ್ಟಿ ಆಗಲಿಕ್ಕೆ ತಿನ್ಕೋತ ಹೊರಸ ಬಿಟ್ಟ ಇಳದರ ಕೇಳ್ರಿ.
ಒಟ್ಟ ಹಿಂಗ ಒಂದ ಬಸರ ಇದ್ದಾಗ ಶುರು ಆಗಿದ್ದ ಮುಗ್ಗಿಲಗೇಡಿತನ ಹಡದ ಆರ ತಿಂಗಳ ತನಕಾ ಇರ್ತದ. ಅದ ಮುಂದನೂ ಕಂಟಿನ್ಯೂ ಆಗ್ತದ. ಅದರಾಗ ಮಾತ ಮಾತಿಗೆ ಕೂಸಿನ ಯಾರ ನೋಡ್ಕೋಳೊರು ಅಂತ ಅದ ಒಂದ ನೆವಾ ಹಾಕಿ ಮಾಡೋ ಮೂರ ಕೆಲಸಾನೂ ಗಂಡಗ ಹೇಳಿ ಟಿ.ವಿ. ಮುಂದ ಕೂತ ಬಿಡೋದ.
ಇದನ್ನೇಲ್ಲಾ ನೋಡಿನ ನಮ್ಮಜ್ಜಿ ಈ ಬಾಣಂತನನ ಮುಗ್ಗಲಗೇಡಿ ತನಕ ಮೂಲ ಕಾರಣ ಅಂತ ಹೇಳಿದ್ದ.
ಅದರಾಗ ಈಗ ಒಂದ ವರ್ಷಗಟ್ಟಲೇ ಗಂಡಗೂ ಪಾಪ ಮನಿ ಕೆಲಸಾ ಮಾಡಿ ರೂಡಿ ಆಗಿ ಬಿಟ್ಟಿರ್ತದ ಅಂವಾ, ನೀ ಕೂಸಿನ ನೋಡ್ಕೊ ಸಾಕ ಮಾರಾಯ್ತಿ, ನಾ ಮನಿ ನೋಡ್ಕೋತೇನಿ ಅಂತ ಅಂದ ಹೆಂಡ್ತಿಗೆ ಇನ್ನಿಷ್ಟ ಮುಗ್ಗಲಗೇಡಿ ಮಾಡಿ ಕೈ ಬಿಡ್ತಾನ ಇಷ್ಟ.
ಅಲ್ಲಾ ಹಂಗ ನನ್ನ ಅನುಭವ ನೋಡಿನ ನಮ್ಮಜ್ಜಿ ಈ ಮಾತ ಹೇಳಿದ್ದ ಬಿಡ್ರಿ. ಹಂಗ ಇದ ಎಲ್ಲಾರಿಗೂ ಅಪ್ಲೈ ಆಗಂಗಿಲ್ಲಾ, ಆದರೂ ಹೆಂಡ್ತಿ ಅನ್ನೋಕಿ ಮುಗ್ಗಲಗೇಡಿ ಆಗೋದ ಬಾಣಂತನದಿಂದನ ಅನ್ನೋದರಾಗ ಎರಡ ಮಾತಿಲ್ಲಾ,
’ಮೊದ್ಲ ಎಷ್ಟ ಚುರುಕ ಇತ್ತ ಹುಡಗಿ, ಎರಡ ಹಡದ ಹೆಂಗ ಆತ ನೋಡ’ ಅಂತ ಅದಕ್ಕ ಮತ್ತ ಮಂದಿ ಅನ್ನೋದ…ಇತ್ತಲಾಗ ಗಂಡಗ ’ಒಂದ ಕಡ್ಡಿ ಇತ್ತಲಾಗಿಂದ ಎತ್ತಿ ಅತ್ತಲಾಗ ಇಡ್ತಿದ್ದಿಲ್ಲಾ ಮಗಾ, ಈಗ ನೋಡ ಇಡೀ ಮನಿ ಕಸಾ ಎಷ್ಟ ಸ್ವಚ್ಛ ಹುಡಗ್ತಾನ’ ಅಂತ ಅನ್ನೋರು ಇವರ.
ಹೋಗ್ಲಿ ಬಿಡ್ರಿ ಹಂಗ ಹೆಂಡ್ತಿ ಮುಗ್ಗಲಗೇಡಿತನದ ಬಗ್ಗೆ ಎಷ್ಟ ಬರದರು ಕಡಮಿನ, ಅಕಿ ಇವತ್ತ ಮನಿ ಧೂಳಾ ಹೊಡಿರಿ ಅಂತ ಹೇಳಿದ್ಲು ನಾ ಅದನ್ನ ಮರತ ನಿಮ್ಮ ಜೊತಿ ಹರಟಿ ಹೋಡ್ಕೋತ ಕೂತೆ. ಈಗ ಮತ್ತ
“ಏನ ಮುಗ್ಗಲಗೇಡಿ ಇದ್ದೀರಿ..ಹೇಳಿದ್ದ ಒಂದ ಕೆಲಸಾನೂ ಮಾಡಲಿಕ್ಕೆ ಆಗಂಗಿಲ್ಲ ನಿಮಗ” ಅಂತ ಒದರತಾಳ.
ಆದರೂ ನಮ್ಮಜ್ಜಿ ಹೇಳಿದ್ದ ನೆನಪ ಇಡ್ರಿ ಮತ್ತ ” ಬಾಣಂತನನ ಮುಗ್ಗಲಗೇಡಿ ತನಕ ಮೂಲ ಕಾರಣ”.