ಮೊನ್ನೆ ಗಂಡಾ ಹೆಂಡ್ತಿ ಇಬ್ಬರೂ ಕೂಡಿ ಭಾಳ ದಿವಸದ ಮ್ಯಾಲೆ ಅಕ್ಷಯಪಾರ್ಕ ಸಂತಿಗೆ ಹೋಗಿದ್ವಿ. ಹಂಗ ನಮ್ಮಲ್ಲೆ ದಂಪತ್ ಸಂತಿಗೆ ಹೋಗೊ ಪದ್ದತಿ ಇಲ್ಲಾ. ಅದರಾಗ ನಾ ಹೆಂಡ್ತಿ ಜೊತಿ ಸಂತಿಗೆ ಹೋಗೊ ಮನಷ್ಯಾನೂ ಅಲ್ಲಾ. ಮ್ಯಾಲೆ ಅಕಿ ಸಂತಿ ಮಾಡೋದ ನಂಗ ಬಗಿ ಹರೆಯಂಗೇಲಾ.
ಹತ್ತ ಕಡೆ ಜಿಕೇರಿ ಮಾಡೋಕಿ, ಹತ್ತ ವೇರೈಟಿ ನೋಡೋಕಿ
’ಇನ್ನ ಒಂದ ಸ್ವಲ್ಪ ಮುಂದ ಹೋದರ..ಇನ್ನೂ ಸಸ್ತಾ ಸಿಗ್ತಾವ’ ಅಂತ ಸಂತಿ ತುಂಬ ತಿರಗೋಕಿ. ನನಗ ಟೈಮ್ ಇಜ್ ಮನಿ, ಇದ್ದಿದ್ದರಾಗ ಛಲೋ ಇತ್ತಿಲ್ಲೋ ಭಾಳ ಜಿಕೇರಿ ಮಾಡಲಾರದ ತೊಗೊಂಡ ಕೈಬಿಡೊಂವಾ.
ಅಲ್ಲಾ, ಮದ್ವಿ ಮಾಡ್ಕೊಬೇಕಾರ ಜಿಕೇರಿ ಮಾಡಿದೊಂವ ಅಲ್ಲಾ, ನೋಡಿದ್ದ ಒಂದ ಕನ್ಯಾಕ್ಕ ಇದ್ದಿದ್ದರಾಗ ಅಡ್ಡಿಯಿಲ್ಲಾ ಅಂತ ಕೊಟ್ಟಸ್ಟ ಇಸ್ಗೊಂಡ ಕಟಗೊಂಡಂವಾ. ಇನ್ನ ಕಾಯಿಪಲ್ಯಾಕ್ಕ ಜಿಕೇರಿ ಮಾಡ್ತೇನಿ? ಹಂಗ ಅಕಿ ಗತೆ ನಾನೂ ಇನ್ನೂ ಒಂದ ಸ್ವಲ್ಪ ಮುಂದ ಹೋಗಿದ್ದರ ಇನ್ನೂ ಛಲೋ ಕನ್ಯಾ ಸಿಗ್ತಿತ್ತೇನೋ ಅಂತ ಈಗ ಅನಸ್ತದ ಆ ಮಾತ ಬ್ಯಾರೆ.
ಅದರಾಗ ಅಕಿ ಹಳೇಹುಬ್ಬಳ್ಳಿ ಹುಡಗಿ ಬ್ಯಾರೆ, ಅಲ್ಲೇ ಸೋಯಿ ಕಾಯಿಪಲ್ಲೆ ತೊಗೊಂಡ ರೂಡಿ ಆಗಿತ್ತ ಹಿಂಗಾಗಿ ಇಕಿ ಇಲ್ಲೆ extension areaದಾಗೂ ಜಿಕೇರಿ ಮಾಡ್ತಿದ್ಲು.
ಒಂದ ಕಾಲದಾಗ ನಾನೂ ಜಿಕೇರಿ ಮಾಡ್ತಿದ್ದೆ. ಹತ್ತ ಕಡೇ ಅಡ್ಡಾಡಿ ಹತ್ತ ಮಂದಿ ಹೌದ ಅನ್ನಬೇಕ ಹಂತಾ ಕಾಯಿಪಲ್ಯೆ ತರತಿದ್ದೆ. ಆವಾಗ ನಂಗ money is more important than time ಇತ್ತ. ಯಾಕಂದರ ಆವಾಗ ನಾ ಜಿಕೇರಿ ಮಾಡಿ ತೊಗೊಂಡ ನಮ್ಮವ್ವಗ MRP ಹೇಳಿ ರೊಕ್ಕಾ ಹೊಡ್ಕೊತಿದ್ದೆ. ಅದ ನನ್ನ ಪಾಕೇಟ್ ಮನಿ.
ಅಲ್ಲಾ, ಹಂಗ ನಾ ಒಬ್ಬನ ಅಲ್ಲಾ, ನಮ್ಮ ದೋಸ್ತರ ಭಾಳ ಮಂದಿ ಹಿಂಗ ಮಾಡ್ತಿದ್ದರು. ಒಬ್ಬ ದೋಸ್ತ ಅಂತು ಇನ್ನೇನ ಸಂತಿ ಮುಗಿತದ ಅನ್ನೋ ಹೊತ್ತಿನಾಗ ರಾತ್ರಿ ಏಳೂವರಿ-ಏಂಟ ಗಂಟೆಕ್ಕ ಸಂತಿಗೆ ಹೋಗೊಂವಾ. ಆವಾಗ ಪಾಪ ಹಳ್ಳಿಯಿಂದ ಕಾಯಿಪಲ್ಯೆ ಮಾರಲಿಕ್ಕೆ ಬಂದೋರ ಇನ್ನ ಉಳದದ್ದನ್ನ ವಾಪಸ ಹೊತಗೊಂಡ ಹೋಗೊದೇನ ಅಂತ ಉಳದ-ಬಳದ ಕಾಯಿಪಲ್ಯಾ ಎಲ್ಲಾ ಕೆ.ಜಿ ಲೆಕ್ಕಾ ಬಿಟ್ಟ ಗುಂಪ ಮಾಡಿ ’ಐದ ರೂಪಾಯಿಕ್ಕ ಒಂದ ಗುಂಪ’ ಅಂತ ಮಾರಿ ಹೋಗ್ತಿದ್ದರು. ಈ ಮಗಾ ಆವಾಗ ಹೋಗಿ ಬೇಕಾಗಿದ್ದ ಕಾಯಿಪಲ್ಯಾ ಒಂದೊಂದ ಗುಂಪ ತೊಗೊಂಡ ಮನಿಗೆ ಹೋಗ್ತಿದ್ದಾ. ನಾ ಪಾವ ಕೆ.ಜಿ ಗೆ ಬಾರ್ಗೇನ್ ಮಾಡಿದರ ಇಂವಾ ಗುಂಪಿಗೆ ಬಾರ್ಗೇನ ಮಾಡಿ ಉಳದಿದ್ದ ಹುಳಕಲಾ-ಬಳಕಲಾ ತೊಗೊಂಡ ಮನಿಗೆ ಹೋಗಿ ’ಏನ ಕಾಯಿಪಲ್ಯಾ ಛಲೋನ ಬಂದಿಲ್ಲ ಬಿಡಬೇ’ ಅಂತ ಹೇಳಿ ರೊಕ್ಕಾ ಹೊಡ್ಕೊತಿದ್ದಾ.
ಆದರ ನಾ ಯಾವಾಗ ದುಡಿಲಿಕತ್ತೆ ಆವಾಗ ಜಿಕೇರಿ ಮಾಡೋದ ಬಿಟ್ಟೆ. ಮ್ಯಾಲೆ ಸುಳ್ಳ ಸುಳ್ಳ ಹೇಳಿ ರೊಕ್ಕಾ ಹೋಡ್ಕೊಳೋದ ಬಿಟ್ಟೆ. ಅಲ್ಲಾ ನನ್ನ ರೊಕ್ಕಾ ನಾನ ಹೋಡ್ಕೋಳೊದರಾಗ ಏನ ಮಜಾ? ಮೊದ್ಲ ಆದರ ಅವ್ವಾ ಅಪ್ಪಂದ ರೊಕ್ಕಾ ನಡಿತಿತ್ತ.
ಆದರ ನಾ ತರೋ ತರಕಾರಿ ನಮ್ಮ ಮನ್ಯಾಗ ನಮ್ಮವ್ವಗೂ ಲೈಕ್ ಆಗ್ತಿದ್ದಿಲ್ಲಾ ಹೆಂಡ್ತಿಗೂ ಲೈಕ ಆಗ್ತಿದ್ದಿಲ್ಲಾ. ನಮ್ಮವ್ವ ಏನ ತುಟ್ಟಿ ತಂದಿ ಅಂದರ ನನ್ನ ಹೆಂಡತಿ ಅಂತೂ ನನಗ ಹೆಸರ ಇಟ್ಟಂಗ ನಾ ತರೊ ಕಾಯಿಪಲ್ಯಾಕ್ಕೂ ಹೆಸರ ಇಡ್ತಿದ್ಲು
’ಇವೇನ ಸವತಿಕಾಯಿರಿ…ಏಳೇವ ತೊಗೊಂಡ ಬಾ ಅಂದರ ಬಾಡಿ ಬತ್ತಿ ಹೋಗ್ಯಾವ ನಿಮ್ಮ ಗತೆ’ ಅಂತ ಅನ್ನೋದು.
’ರ್ರೀ..ನಿಮಗ ಗಜ್ಜರಿ ಯಾವದ ಕ್ಯಾರೇಟ್ ಯಾವುದು ಗೊತ್ತ ಆಗಂಗಿಲ್ಲಾ’ ಅಂತಿದ್ಲು.
’ಏಳೇ ಕೊತಂಬರಿ ತೊಗೊಂಡ ಬಾ ಅಂದರ ಹವೀಜ ಗಿಡಾ ತೊಗೊಂಡ ಬಂದಿರೇಲಾ’ ಅನ್ನೊದ. ಹಿಂಗ ಹೆಸರ ಇಡೋದ ಅಕಿ ಚಟಾ. ಹಿಂಗಾಗಿ ನೀ ಏನರ ಹಾಳ ಗುಂಡಿ ಬೀಳ್ಕೊ ಅಂತ ನಾ ಅಕಿನ್ನ ಸಂತಿಗೆ ಕಳಸ್ತಿದ್ದೆ.
ಆದರ ಮೊನ್ನೆ ಏನೋ ತಪ್ಪಿ ಇಬ್ಬರು ಹೋಗಿದ್ವಿ. ಇನ್ನ ಅಕಿ ಜೊತಿ ಹೋಗಿದ್ದ ಸಂಕಟಕ್ಕೆ ಹತ್ತ ಅಂಗಡಿ ಅಡ್ಡಾಡಿ ಕಾಯಿಪಲ್ಯಾ ತೊಗೊಂಡ ಕಡಿಕೆ ಹಣ್ಣ ತರಲಿಕ್ಕೆ ಹೋದ್ವಿ. ಅಲ್ಲಿನೂ ಇಕಿ ಹತ್ತ ಕಡೆ ಜಿಕೇರಿ ಶುರು ಮಾಡಿದ್ಲು. ಆ ಕಟಗಿ ಡಬ್ಬಿ ಇಟಗೊಂಡ ಹಳ್ಳಿ ಹೆಣ್ಣಮಕ್ಕಳ ಹಣ್ಣ ಮಾರ್ತಾರಲಾ ಅವರ ಕಡೆನ ಇಕಿ ಸೋವಿ ಇರ್ತವಾ ಅಂತ ಒಬ್ಬೊಕಿ ಕಡೆ ಹೋಗಿ, ಕಿತ್ತಾಳಿ ಹೆಂಗ ಕೊಟ್ಟಿ, ಮೊಸಂಬಿ ಸಣ್ಣವ ಅವ, ದ್ರಾಕ್ಷಿ ಹುಳಿ ಅವ ಏನ ಅಂತೇಲ್ಲಾ ಇಕಿ ಜೀವಾ ತಿಂದ ತಿಂದ ಕೇಳಲಿಕತ್ಲು.
“ಅಯ್ಯ ನಮ್ಮವ್ವಾ ವಾರಾ ಒಯ್ತಿ, ಮತ್ತ ಕೇಳ್ತಿ ಅಲಾ….’ ಅಂತ ಇಕಿಗೆ ಅಕಿ ಜೋರ ಮಾಡಿದ್ರೂ ಇಕಿ
’ಇದನ್ನ ಹೆಂಗ ಕೊಟ್ಟಿ..ಅದನ್ನ ಹೆಂಗ ಕೊಟ್ಟಿ’ ಅಂತ ಕೇಳೋಕಿನ. ಅಕಿ ಇಕಿ ಬರೇ ಜೀವಾ ತಿನ್ನೋಕಿ ವ್ಯಾಪಾರ ಮಾಡೋಕಿ ಅಲ್ಲಾ ಅಂತ ಇಕಿ ಕಡೇ ಲಕ್ಷನಾ ಕೊಡವಳ್ಳಾಗಿದ್ಲು. ನಂಗರ ತಲಿ ಕೆಟ್ಟ ಹೋತ. ಅಕಿ ಹೇಳಿದಷ್ಟ ಕೊಟ್ಟರ ಹೆಂಗ? ಬಾರ್ಗೇನ್ ಮಾಡಿದರ ಸೋವಿ ಮಾಡ್ತಾರ ಅಂತ ಅನ್ಕೋತ ನನ್ನ ಹೆಂಡ್ತಿ ಬಾಜುದೋಕಿಗೆ ಕೇಳಲಿಕ್ಕೆ ಹೋದ್ಲು. ಇತ್ತಲಾಗ ಇಕಿ ಕಡೆ ಮತ್ತ ಎರಡ ಗಿರಾಕಿ ಬಂದ್ವು, ಅಕಿ ನಮ್ಮ ಕಡೆ ಲಕ್ಷಾನ ಕೊಡಲಿಲ್ಲಾ. ನಾ ಸಿಟ್ಟಿಗೆದ್ದ ಆ ಹಣ್ಣ ಮಾರೋಕಿ ಬಾಜೂಕ ಕೂತಿದ್ದ ಅಕಿ ಮಗಳಿಗೆ
’ಏ, ಬಾಳೆ ಹಣ್ಣ ಹೆಂಗ ಕೊಟ್ಟಿ’ ಅಂತ ಕೇಳಿದೆ ಅಕಿನೂ ಬ್ಯಾರೆ ಗಿರಾಕಿ ಕಡೆ ಮಾತಾಡ್ಕೋತ ನನಗ ದಾದ ಇಲ್ಲದಂಗ ಮಾಡಿದ್ಲು. ನಾ ಕಡಿಕೆ ಆ ಹುಡಗಿದ ಒಂಚೂರ ಭುಜಾ ಅಳಗ್ಯಾಡಸಿ
“ಏ..ನಿಂಗ ಕೇಳೋದ ಬಾಳೆ ಹಣ್ಣ ಹೆಂಗ ಕೊಟ್ಟಿ’ ಅಂತ ಜೋರಾಗಿ ಅಂದೆ.
ತೊಗೊ ಅವರವ್ವ ನಾ ಒಂಚೂರ ಅಕಿ ಮಗಳದ ಭುಜಾ ಬಡದಿದ್ದ ನೋಡಿ ಬಿಟ್ಟಳು, ಅಕಿ ಪಿತ್ತ ನೆತ್ತಿಗೇರತ
’ಲೇ…ಭಾಡ್ಯಾ ಹತ್ತ ರೂಪಾಯಿದ್ದ ವ್ಯಾಪಾರ ಮಾಡಾಕಿಲ್ಲಾ…ನನ್ನ ಮಗಳದ ಮೈ ಮುಟ್ಟತಿ ಏನ, ಮಂದಿ ಹೆಣ್ಮಕ್ಕಳನ ಕಂಡಿ ಇಲ್ಲ’ ಅಂತ ಜೋರ ಓದರಿ ಬಿಟ್ಟಳು. ತೊಗೊ ಆಜು ಬಾಜು ಮಂದಿ ಎಲ್ಲಾ ನನ್ನ ನೋಡಲಿಕತ್ತರು.
’ಏ, ನಂಗೇನ ಹುಚ್ಚ ಹಿಡದದೇನ ನಿನ್ನ ಮಗಳ ಮೈಮುಟ್ಟಲಿಕ್ಕೆ, ನೋಡಿ ಅಲ್ಲೆ ನಿನ್ನ ಮಗಳಕಿಂತ ಛಂದನ ಹೆಂಡ್ತಿ ಇನ್ನೂ ಬಾಜೂಕ ಇದ್ದಾಳ, ಹಂತಾದರಾಗ ಎಲ್ಲಾ ಬಿಟ್ಟ ನಿನ್ನ ಮಗಳ ಮೈ ನಾ ಯಾಕ ಮುಟ್ಟಲಿ, ಬೇಕಾರ ವ್ಯಾಪಾರ ಮಾಡ ಇಲ್ಲಾ ಬಿಡ್ಕೋ” ಅಂತ ಅಂದ ದರಾ ದರಾ ನನ್ನ ಹೆಂಡ್ತಿನ್ನ ಜೊತಿ ನಾನೂ ಮುಂದಿನ ಅಂಗಡಿಗೆ ಹೋದೆ. ಅಷ್ಟರಾಗ ಒಂದ ಹತ್ತ ಮಂದಿ ನನ್ನ ದುರುಗಟ್ಟಿ ನೋಡಲಿಕತ್ತಿದ್ದರು. ಮಂದಿ ಬಿಡ್ರಿ, ನನ್ನ ಹೆಂಡ್ತಿ
“ರ್ರಿ..ಖರೇ ಹೇಳ್ರಿ, ನೀವು ಆ ಹಣ್ಣ ಮಾರೋಕಿ ಮಗಳಿಗೆ ಏನ್ಮಾಡಿದಿರಿ? ಅಕಿ ಯಾಕ ನಿಮಗ ಹಂಗ ಅಂದ್ಲು” ಅಂತ ಗಂಟ ಬಿದ್ಲು. ತೊಗೊ ಊರ ಮಂದಿ ನನ್ನ ಬಗ್ಗೆ ಏನರ ತಿಳ್ಕೊವಲ್ಲರಾಕ ಇಕಿಗೆರ ಬುದ್ಧಿ ಬೇಕೊ ಬ್ಯಾಡೋ? ನಾ ಹೆಂಡ್ತಿಗೆ ಮುಟ್ಟಬೇಕಾರ ಕೇಳಿ ಮುಟ್ಟತೇನಿ, ಇನ್ನ ಮಂದಿ ಹೆಣ್ಣಮಕ್ಕಳನ ಕೇಳಲಾರದ ಮುಟ್ಟತೇನಿ?
ಅವತ್ತ ಮನಿಗೆ ಬಂದೋಕಿನ
’ಇನ್ನ ಸತ್ತರೂ ನಿಮ್ಮನ್ನ ಸಂತಿಗೆ ಕರ್ಕೊಂಡ ಹೋಗಂಗಿಲ್ಲಾ..ಇವತ್ತ ನಾ ಜೊತಿಗೆ ಇದ್ದೆ ಅಂತ ನೀವು ಉಳದರಿ’ ಅಂದ್ಲು, ಅಲ್ಲಾ ಅದ ಖರೇ ಅನ್ನರಿ. ನನ್ನ ಹೆಂಡತಿ ಬಾಜು ಇದ್ದಿದ್ದಿಲ್ಲಾಂದರ ಆ ಎಲ್ಲಾ ಹಣ್ಣ ಮಾರೋರ ನನ್ನ ಹೆಣಾನ ಹೊರ್ತಿದ್ದರು.
ಇದರಾಗ ನನ್ನ ತಪ್ಪ ಏನ್ರಿ. ಅಕಿ ಎಷ್ಟ ಹೆಂಗ ಕೊಟ್ಟಿ ಅಂತ ಕೇಳಿದರು ರಿಸ್ಪಾನ್ಸ್ ಮಾಡವಳ್ಳಾಗಿದ್ಲು, ಹಿಂಗಾಗಿ ಒಂಚೂರ ಅಳಗ್ಯಾಡಸಿ ಕೇಳಿದ್ದ ತಪ್ಪಾಗಿತ್ತ.
ಅಲ್ಲಾ ಒಂದ ಇಪ್ಪತ್ತ ವರ್ಷದ ಹಿಂದ, ಅದ ಗುಂಪ ಗಟ್ಟಲೇ ಕಾಯಿಪಲ್ಯಾ ಖರೀದಿ ಮಾಡೋ ನಮ್ಮ ದೋಸ್ತ ಮಾವಿನ ಹಣ್ಣಿನ ಸೀಜನ್ನಾಗ ಹಿಂಗ ಒಬ್ಬೊಕಿ ಮಾವಿನ ಹಣ್ಣಿನ ಬುಟ್ಟಿ ಇಟಗೊಂಡ ಮಾರ್ಕೋತ ಕೂತೊಕಿಗೆ
’ಮಾವಿನ ಹಣ್ಣ ಹೆಂಗ ಕೊಟ್ಟಿ… ಇವೇನ ಪೂರ್ತಿ ಹಣ್ಣ ಆಗ್ಯಾವೋ ಇಲ್ಲಾ ಮನಿಗೆ ಹೋಗಿ ಕಾವ ಕೊಡಬೇಕೊ?’
ಅಂತ ಕೇಳಿ ಅಕಿ ಕಡೆ ಬಾಯಿ ಬಂದಂಗ ಬೈಸ್ಗೊಂಡ ಬಂದಿದ್ದ ನೆನಪಾತ.
ಇರಲಿ ಈಗ ನನ್ನ ಹೆಂಡ್ತಿ ಹೊರಗ ಹೋದಲ್ಲೆ-ಬಂದಲ್ಲೆ ನನ್ನ ಕೈ ಸುಮ್ಮನ ಕುಡಂಗಿಲ್ಲಾ ಅಂತ ಹೇಳಿ ನನ್ನ ಒಟ್ಟ ಇನ್ನ ಮುಂದ ಸಂತಿಗೆ ಕರಕೊಂಡ ಹೋಗಬಾರದು ಅಂತ ಆಣಿ ಮಾಡ್ಯಾಳ.
ಎಪ್ಪಾ ಎಪ್ಪಾ ಏನ್ ಚಂದ್ ಬರ್ದೀರಿ ಸರ ನಕ್ಕು ನಕ್ಕು ಸಾಕಾತು 😄😄😄😄 ನೀವ್ನಮ್ ಏನ ಹೇಳ್ರಿ ಸರ, ಹಳೇ ಹುಬ್ಬಳ್ಳಿ ಮಂದೀ ಅಂದ್ರ ಬಾಳೆದಾಗ ಭಾಳಂದ್ರ ಭಾಳ ಶ್ಯಾನೆ ರೀ, ಹಿಡಿತದಾಗ ಜೀವ್ನಾ ಮಾಡ್ಕೊಂತ್ ನಾಕ್ ದುಡ್ಡ ಉಳಸೊವ್ರಿ,
ಅಂದಂಗ ಹಣ್ಣ ಮಾರುವಾಕಿ ಬುಜಾ ನೀವ್ ಯಾಕ್ ಹಿಡದ್ರೀ ಅನ್ನೋದು ವೈನಿಯವ್ರಿಗೆ ಗೊತ್ತಲ್ಲಂತ ಕಾಣ್ತದ 😄😄
ಕಾಯಿ ಹಣ್ಣ ಆಗಾಕ ಕಾವ್ ಕೊಟ್ರಿಲ್ಲೋ ಮತ್ತ 😄😄
ಸಕತ್ ರ್ರೀ ಸರ ✍️👌👌💞💞