ಈಗ ಒಂದ ಮೂರ ತಿಂಗಳ ಹಿಂದ ಒಂದ ಹೊಸಾ ಸ್ಮಾರ್ಟ ಫೋನ ತೊಗೊಂಡಿದ್ದೆ. ಹಂಗ ಒಂದೂ ಮನ್ಯಾಗ ಸ್ಮಾರ್ಟ ಹೆಂಡ್ತಿನರ ಇರಬೇಕ, ಇಲ್ಲಾ ಸ್ಮಾರ್ಟ ಫೋನರ ಇರಬೇಕ ಅಂತಾರ ಖರೆ ಆದರ ಯಾವಾಗ ಸ್ಮಾರ್ಟ ಫೋನ್ ಸ್ಮಾರ್ಟ ಹೆಂಡ್ತಿಕಿಂತಾ ಜಾಸ್ತಿ ಅನಿವಾರ್ಯ ಆಗ್ತದಲಾ ಆವಾಗ ತೊಗೊ ಬೇಕಾಗತದ.
ಇನ್ನ ಒಂದ ಫೋನ ತೊಗೊಂಡ್ರಿಲ್ಲೋ ಮುಂದ ಒಂದ ವಾರಕ್ಕನ
’ಏ ಆ ಫೋನ ತೊಗೊಬೇಕಿತ್ತ ಅದರಾಗ ಇದರಕಿಂತಾ ಛಲೋ ಫೀಚರ್ಸ್ ಇತ್ತ’ ಅಂತ ಮರಗೊದ ಗ್ಯಾರಂಟಿ.
ಅದ ಒಂಥರಾ ಕನ್ಯಾ ಫಿಕ್ಸ್ ಮಾಡ್ಕೊಂಡ ಚಂಚಗಾರ ಅಂತ ಹೂವು-ಹಣ್ಣ ಉಡಿ ತುಂಬಿ ಬಂದ ಮ್ಯಾಲೆ ಅದರಕಿಂತ ಛಲೋ ಕನ್ಯಾದ್ದ ಆಫರ್ ಬಂದಂಗ.
ಇನ್ನ ಹೊಸಾ ಮೋಬೈಲ್ ಬಂತಂದರ ಒಂದ ನಾಲ್ಕೈದ ದಿವಸ 24 ತಾಸು ಅದನ್ನ ಹಿಡಕೊಂಡ ಕೂಡೋದ, ಹೊಸ್ತಾಗಿ ಲಗ್ನ ಆದಾಗ ಹೆಂಗ ಹೆಂಡ್ತಿ ಸಿರಿ ಪಿಕೊ ಹಿಡ್ಕೊಂಡ ಅಡ್ಡಾಡ್ತೇವಿ ಅಲಾ ಹಂಗ.
ಮುಂದ ಹೆಂಡ್ತಿ
’ಸಾಕ ಬಿಡ್ರಿ ಆ ಸುಡಗಾಡ ಮೋಬೈಲ್, ಎಲ್ಲೇರ ಬಟ್ಟ್ ಸವದ ಹೋಗ್ಯಾವ’ ಅಂತ ಅಂದರೂ ನಾವೇನ ಬಿಡೋರ ಅಲ್ಲಾ.
ನಾ ನನ್ನ ಹೊಸಾ ಫೋನ ಒಳಗ ಇದ್ದಿದ್ದ ಗೂಗಲ್ ಅಸಿಸ್ಟಂಟ್ ಸ್ಟಡಿ ಮಾಡಿ ಅದನ್ನ ಉಪಯೋಗ ಮಾಡಿದರಾತು ಹೆಂಗ ವರ್ಕ್ ಆಗ್ತದ ನೊಡೇರ ನೊಡೋಣ ತಡಿ ಅಂತ ಇನ್ಸ್ಟಾಲ್ ಮಾಡಿದೆ.
ಯಾರಿಗರ ಫೋನ್ ಮಾಡಂದರ ’ಓ.ಕೆ ಗೂಗಲ್….. ಕಾಲ್ ’ ಅಂತ ಅವರ ಹೆಸರ ಹೇಳಿದರ ಅವರಿಗೆ ಫೋನ್ ಹೋಗ್ತಿತ್ತ, sms ಕಳಸ ಅಂದರ ಕಳಸ್ತಿತ್ತ, ವಾಟ್ಸಪ್ ಮೆಸೆಜ್ ಹೇಳಿದರ ಸಾಕ ತಾನ ಕಳಸ್ತಿತ್ತ. ನಾ ಫುಲ್ ಖುಶ್ ಆಗಿ ನನ್ನ ಹೆಂಡ್ತಿಗೆ ಕರದ
’ನೋಡ ಎಪ್ಪತ್ತ ಸಾವಿರ ಬಡದದ್ದಕ್ಕೂ ಸಾರ್ಥಕ ಆತ, ಕಟಗೊಂಡ ಹೆಂಡ್ತಿ ಮಾತ ಕೇಳಲಿಲ್ಲಾಂದರು ಸಾಲಾ ಮಾಡಿ ತೊಗೊಂಡ ಮೋಬೈಲ್ ಹೇಳಿದ್ದ ಮಾತ ಕೇಳ್ತದ’ ಅಂತ ಅಂದೆ.
ಅಕಿಗೆ ಆಶ್ಚರ್ಯ ಆತ, ಟೆಕ್ನಾಲಜಿ ವಿಷಯದಾಗ ಪಾಪ ಅಕಿ ಅಷ್ಟಕ್ಕ-ಅಷ್ಟ. ಅಕಿ ಅಗದಿ ’ಕೀ ಪ್ಯಾಡ’ ಗೋತ್ರದೊಕಿ. ನಾ ಯಾವಾಗ ಹೊಸಾ ಫೋನ್ ತೊಗೊತೇನಿ ಆವಾಗ ಹಳೇ ಫೋನ್ ತಾ ಇಟ್ಗೊಂಡ ಇವತ್ತಿನ ತನಕಾ ಸಂಸಾರ ನಡಸಿಗೊಂಡ ಹೊಂಟಾಳ.
ನಾ ದೊಡ್ಡಿಸ್ತನಾ ಮಾಡಿ ಅಕಿಗೆ ಈ ’ ಓ.ಕೆ ಗೂಗಲ್’ ಹೆಂಗ ವರ್ಕ ಆಗ್ತದ ಅಂತ ತೊರಸಲಿಕ್ಕೆ ಹೋದೆ.
ಇನ್ನ ಈ ’ಓ.ಕೆ ಗೂಗಲ್’ ಅನ್ನೋದ ಒಂಥರಾ ಹೆಂಡ್ತಿ ಹೆಂಗ ಗಂಡನ ಜೊತಿ ಮಾತ ಶುರು ಮಾಡೊಕಿಂತಾ ಮುಂಚೆ ’ ರ್ರಿ..’ ಅಂತಾಳಲಾ ಹಂಗ. ನೀವು ’ ಓ.ಕೆ ಗೂಗಲ್’ ಅಂದ ಮುಂದ ಅದಕ್ಕ ಏನ್ಮಾಡಬೇಕ ಅಂತ ಹೇಳಿದರ ಅದ ಮಾಡ್ತದ. ಮತ್ತ ಅದಕ್ಕ ಏನರ ಒಂದ ಕೆಲಸಾ ಹೇಳಿದಿರಿ ಇಲ್ಲೊ, ಅದ ಮುಂದ ಮತ್ತೊಂದ ಕ್ವೆಶನ್ ಕೇಳ್ತದ. ಸೇಮ ಟು ಸೇಮ್ ಹೆಂಡ್ತಿ ಇದ್ದಂಗ ಅನ್ನರಿ. ಹಿಂಗಾಗಿ ಒಮ್ಮೊಮ್ಮೆ ಸುಮ್ಮನ ಗೂಗಲ್ ಗೆ ಹೇಳೊದಕಿಂತ ನಾವ ಮಾಡೊದ ಛಲೋ ಅನಸ್ತಿತ್ತ ಆ ಮಾತ ಬ್ಯಾರೆ.
ನಾ ನಮ್ಮಕಿಗೆ ಕರದ ಗೂಗಲ್ ಅಸಿಸ್ಟಂಟ್ ಹೆಂಗ ಹೇಳಿದ್ದ ಮಾತ ಕೇಳ್ತದ ನೋಡಿಲ್ಲೇ ಅಂತ ಖುಶಿಲೇ
’ o.k. google…call peeda’ ಅಂದೆ…ಅಲ್ಲಾ ಯಾರಿಗೆ ಗೊತ್ತಿಲ್ಲಾ, ಯಾರ ನನ್ನ ಹಳೇ ಪಾಸವರ್ಡ್ ಆರ್ಟಿಕಲ್ ಓದಿಲ್ಲಾ ಅವರಿಗೆ ಹೇಳಲಿಕತ್ತೇನಿ ಪೀಡಾ ಅನ್ನೋದ ನಾ ಮೋಬೈಲನಾಗ ಸೇವ ಮಾಡಿರೋ ನನ್ನ ಹೆಂಡ್ತಿ ಹೆಸರ. ಇದ noun ಅಂದರ ನಾಮಪದ. ಕನ್ನಡದ ಪೀಡಾ ಅಂತ ತಿಳ್ಕೊಂಡ ಅದನ್ನೊಂದ ದೊಡ್ಡ ಇಶ್ಯು ಮಾಡಬ್ಯಾಡ್ರಿ. ಪೀಡಾ ಅಂದರ short form of prerana darling.
ಇನ್ನ ಗೂಗಲಗ ಪೀಡಾಗ ಫೋನ ಮಾಡ ಅಂದ ಕೂಡ್ಲೇ ಅದ which peeda? there are many peedas’ in your contacts ಅಂತ.
ಅದನ್ನ ಕೇಳಿ ನನ್ನ ಹೆಂಡ್ತಿ ಗಾಬರಿ ಆಗಿ ಮತ್ತ ’ಯಾ ಪೀಡಾ ಕಟಗೊಂಡಿರಿ ನಂಗ ಗೊತ್ತಾಗಲಾರದ’ ಅಂದ್ಲು.
’ಲೇ…ನಿನ್ನ ಒಬ್ಬೊಕಿ ಬಿಟ್ಟರ ನನಗ ಮತ್ತ ಯಾ ಪೀಡಾ ಇದ್ದಾರಲೇ…..ನಿನ್ನವ ಮೂರ ನಂಬರ್ ಸೇವ ಮಾಡೇನಿ ಹಿಂಗಾಗಿ ಅದ ಯಾ ನಂಬರಗೆ ಫೋನ್ ಮಾಡಬೇಕ ಅಂತ ಕೇಳಲಿಕತ್ತದ ಅಂತ ತಿಳಿಸಿ ’ಡೈಲ್ ಹೋಮ್ ಪೀಡಾ’ ಅಂತ ಅಂದೆ. ಅದ ಕರೆಕ್ಟ ಪೀಡಾಕ್ಕ ಫೊನ ಮಾಡ್ತ ಅಂದರ ಪ್ರೆಸೆಂಟ್ ಪ್ರೇರಣಾನ ನಂಬರಗೆ ಫೋನ ಮಾಡ್ತ.
ನನ್ನ ಹೆಂಡ್ತಿ ಖುಶ್ ಆಗಿ ಮತ್ತೊಬ್ಬರಿಗೆ ಯಾರಿಗರ ಟ್ರೈ ಮಾಡ್ರಿ ಅಂದ್ಲು. ನಾ ಮತ್ತೊಮ್ಮೆ
’ಓ.ಕೆ ಗೂಗಲ್…send ‘ waiting for your reply’ sms to ಸ್ಮೀತಾ’ ಅಂದೆ
ನನ್ನ ಹೆಂಡ್ತಿ ಆ ಗೂಗಲ್ ರಿಪ್ಲೈಕಿಂತಾ ಮೊದ್ಲ ಗಾಬರಿ ಆಗಿ ’ಯಾರರಿ ಸ್ಮೀತಾ’ ಅಂದ್ಲು, ನಾ ನೀ ಗಪ್ ಕೂಡ ಅನ್ನೋದರಾಗ ಗೂಗಲ್ ನನಗ ತಿರಗಿ
’home or work?’ ಅಂತ ಕೇಳ್ತ ನಾ ’ವರ್ಕ್ ’ಅಂದೆ…
“ರ್ರಿ..ಇಷ್ಟ ರಾತ್ರಿ ಯಾ ಸ್ಮೀತಾ ರಿಪ್ಲೈ ಮಾಡ್ತಾಳ ನಿಮಗ’ ಅಂತ ಕೇಳಿದ್ಲು
ಇತ್ತಲಾಗ ಗೂಗಲ್ ಸ್ಮೀತಾಗ ಮೆಸೆಜ್ ಕಳಸ್ತ . ಅದನ್ನ ನಮ್ಮಕಿಗೆ ತೊರಿಸಿ , ಸ್ಮೀತಾ ಅಂದರ ಸ್ಮೀತಾ ಇಂಡಸ್ಟ್ರೀಜ್, ನಮ್ಮ ಕಸ್ಟಮರ್. ಅವರಿಗೆ ಪೇಮೆಂಟ್ ಯಾವಾಗ ಮಾಡ್ತಿರಿ ಅಂತ ಮೆಸೆಜ್ ಮಾಡಿದ್ದೆ, ಈಗ ಮತ್ತೊಮ್ಮೆ ರಿಮೈಂಡ ಮಾಡಿದೆ ಅಂತ ತಿಳಿಸಿ ಹೇಳೊದರಾಗ ಸಾಕ ಸಾಕಾತ.
ಮುಂದ ನನ್ನ ಹೆಂಡ್ತಿ ತಾ ಮೊಬೈಲ ತೊಗೊಂಡ ’ಓ.ಕೆ. ಗೂಗಲ್ ..’ ಅಂತ ಶುರು ಹಚಗೊಂಡ್ಲು
’ಓ.ಕೆ. ಗೂಗಲ್ ……ನಮ್ಮ ಮನೆಯವರ ಎಲ್ಲೆ ಇದ್ದಾರ’
’ಓ.ಕೆ. ಗೂಗಲ್ …..ನಳಾ ಯಾವಾಗ ಬರತದ;
’ಓ.ಕೆ. ಗೂಗಲ್ ….ಕೆಲಸದೋಕಿ ನಾಳೆ ಬರ್ತಾಳ ಇಲ್ಲೋ?’
ಅಂತ ಇಕಿ ಹುಚ್ಚುಚಾಕಾರ ಬೆನ್ನ ಹತ್ತಿದ್ಲು. ಅದನ್ನ ಕೇಳಿ ಗೂಗಲ್ ತಲಿ ಕೆಟ್ಟ
’sorry I could not get you’ ಅಂತ ಅಂದ, ಮ್ಯಾಲೆ you are draining your battery ಅಂತ.
ನಂಗ ಒಂದ ಸರತೆ ಅದ ನನ್ನ ಮೋಬೈಲ್ ಬ್ಯಾಟರಿ ಬಗ್ಗೆ ಹೇಳ್ತೋ ಇಲ್ಲಾ ನನ್ನ ಹೆಂಡತಿ ಕ್ವೆಶನ್ಸ್ ಕೇಳಿ ನನಗ
’ನೀ ಹಿಂತಾಕಿನ್ನ ಕಟಗೊಂಡ ನಿನ್ನ ಜೀವನದ್ದ ಬ್ಯಾಟರಿ ಡ್ರೇನ್’ ಮಾಡ್ಕೊಳಿಕತ್ತಿ ಅಂತ ಅಂತೊ ಅನ್ನೋದ ಗೊತ್ತಾಗಲಿಲ್ಲಾ. ಇಕಿ ಹಿಂಗ ಗಂಡಗ ಜೀವಾ ತಿಂದಂಗ ಗೂಗಲ್ ಗೆ ಜೀವಾ ತಿನ್ನೋದ ನೋಡಿ ನಾ ಸಿಟ್ಟಿಗೆದ್ದ
’ಓ.ಕೆ. ಗೂಗಲ್… ಬ್ಲಾಕ್ ಪೀಡಾ’ ಅಂದೆ. ಅದ ಮತ್ತ ವಿಚ್ ಪೀಡಾ ಅಂತ ಕೇಳ್ತ. ನಾ ಸಿಟ್ಟಿಗೆದ್ದ ಮೋಬೈಲ್ ಒಗೆಯೊಂವ ಇದ್ದೆ ಅಷ್ಟರಾಗ ನನ್ನ ಹೆಂಡ್ತಿ ಮೋಬೈಲ್ ಇಸ್ಗೊಂಡ ’ಓ.ಕೆ ಗೂಗಲ್…ಡಿಲಿಟ್ ಗೂಗಲ್ ಅಸಿಸ್ಟಂಟ್’ ಅಂತ ಅಂದ ಮೋಬೈಲ್ ಸ್ವಿಚ್ ಆಫ್ ಮಾಡಿದ್ಲು.
ನಾ ಅಕಿಗೆ ಕಾಡಸಲಿಕ್ಕೆ ಮತ್ತ
’ನೋಡ ಆ ಗೂಗಲ್ ಅಸಿಸ್ಟಂಟ್ ನೋಡೆರ ಕಲಿ, ಅದ ಹೆಂಗ ಗಂಡನ ಮಾತ ಕೇಳ್ತದ’ ಅಂದರ
’ಸುಮ್ಮನ ಅದನ್ನ ಕಟಗೊ ಬೇಕಿತ್ತಿಲ್ಲ, ಸುಳ್ಳ ನನ್ನ ಲೈಫ್ ಯಾಕ ಹಾಳ ಮಾಡಿದ್ರಿ’ ಅಂತ ಅಗದಿ ಇಮೋಶನಲ್ ಆಗಿ ಅಂದ್ಲು.
ಹಂಗ ಈ ಗೂಗಲ್ ಅಸಿಸ್ಟಂಟ್ ಸ್ಟೋರಿಸ್ ಭಾರಿ ಭಾರಿ ಅವ ಬಿಡ್ರಿ, ಇವತ್ತ ಗೂಗಲ್ ನೋಡ್ಲಲಾರದ್ದ, ಅದನ್ನ ಉಪಯೋಗ ಮಾಡ್ಲಲಾರದ್ದ ದಿನಾನ ಇಲ್ಲ ಅನ್ನರಿ.
ಮೊನ್ನೆ ನಾ ನಮ್ಮ ದೋಸ್ತ ಪಕ್ಯಾಗ ಈ ಗೂಗಲ್ ಅಸಿಸ್ಟಂಟದ ಸ್ಟೋರಿ ಹೇಳಿದರ ಅಂವಾ ನಂದೂ ಅದ ಹಣೇಬರಹ ಆಗೇದ ಆ ಸುಡಗಾದ ಗೂಗಲ್ ಮ್ಯಾಪ್ ಆನ್ ಇಟ್ಟಿದ್ದಕ್ಕ ನಾ ಎಲ್ಲೇಲ್ಲೆ ಹೋಗ್ತೇನಿ ಅದೇಲ್ಲಾ ನನ್ನ ಹೆಂಡ್ತಿಗೆ ಗೊತ್ತಾಗತೈತಿ. ಮೊನ್ನೆ ಮಠಕ್ಕ ಅಂತ ಹೇಳಿ ಬಸ್ಯಾನ ಜೊತಿ ಪಂಜೂರ್ಲಿಗೆ ಹೋಗಿದ್ದ ಅಕಿ ಮೋಬೈಲನಾಗೂ ನನ್ನ ಲೋಕೆಶನ್ ತೊರಿಸೈತಿ. ಅದರಾಗ ಇಬ್ಬರದೂ ಗೂಗಲ್ ಅಕೌಂಟ್ ಸೇಮ್, ಲಗ್ನ ಆದಾಗಿಂದ ನಮ್ಮ ಜೊತಿ ಅವು ಸಿಂಕ್ರೊನೈಜ್ ಆಗ್ಯಾವ. ಹಿಂಗಾಗಿ ನಾ ಎಲ್ಲೇ ಹೋದರು ಆ ಗೂಗಲ್ ಪೀಡಾಗತೆ ಗಂಟ ಬೀಳ್ತೈತಿ, ನಾ ಎಲ್ಲೇರ ಹೆಂಡ್ತಿಗೆ ಹೇಳಲಾರದ ಹೋಗಬೇಕಾರ ಸುಮ್ಮನ ಮೋಬೈಲ್ ಮನ್ಯಾಗ ಬಿಟ್ಟ ಹೋಗ್ತೇನಿ’ ಅಂದಾ.
ಹಂಗ ಅಂವಾ ಹೇಳಿದ್ದ ಖರೆ ಇತ್ತ, ಇನ್ನೊಂದ ಮಜಾ ಅಂದರ ಈ ದೊಸ್ತ ತನ್ನ ಮೋಬೈಲನಾಗ ತನ್ನ ಹೆಂಡ್ತಿ ಹೆಸರ ’ಗೂಗಲ್’ ಅಂತ ಸೇವ ಮಾಡ್ಯಾನ, ನಾ ಹೆಂಗ ಪೀಡಾ ಅಂತ ಸೇವ ಮಾಡೇನಲಾ ಹಂಗ. ಈಗ ಆ ಗೂಗಲ್ ಅವಂಗ ಪೀಡಾ ಅಗೇದ ಅಂದರ actual ಗೂಗಲ್ ಅವಂಗ actually ಪೀಡಾ ಆಗೇದ ಅಂತ.