ಈಗ ಒಂದ ಮೂರ ವರ್ಷದ ಹಿಂದ ಲಾಕ್ ಡೌನ್ ಆದಾಗ ದಿವಸಾ ಮುಂಜಾನೆ-ಸಂಜಿಗೆ ವಾಕಿಂಗ್ ಹೋಗ್ತಿದ್ದೆ. ಹಂಗ ಮನಿ ಇಂದ ಹೊರಗ ಬರಬಾರದ ಅಂತ ಲಾಕ್ ಡೌನ್ ಮಾಡಿದ್ದರ ಖರೆ ಆದರ ಏಷ್ಟಂತ ಮನ್ಯಾಗ ’ಅದ ಹೆಂಡ್ತಿ ಅದ ಮಕ್ಕಳ’ ಜೊತಿ ಇರಲಿಕ್ಕೆ ಆಗ್ತದ ಅಂತ ವಾಕಿಂಗ್ ಹೋಗ್ತಿದ್ದೆ. ಇನ್ನ ನಾ ಹೊಂಟಿದ್ದ ನೋಡಿ ನನ್ನ ಹೆಂಡ್ತಿ ತಾನೂ ಬರ್ತೇನಿ ಅಂತ ಹಟಾ ಮಾಡಿ ಅಕಿನೂ ಬರಲಿಕತ್ಲು.
ನಮ್ಮಂಗ ರಗಡ ಜನಾ ವಾಕಿಂಗ್ ಬರ್ತಿದ್ದರು. ಅಗದಿ ಸಹ ಕುಟಂಬ ಪರಿವಾರ ಸಹಿತ ಬರ್ತಿದ್ದರ. ಹಂಗ ಬರೋರ ಒಳಗ ಜಗ್ಗಿಷ್ಟ ಮಂದಿ ತಮ್ಮ ನಾಯಿ ಬ್ಯಾರೆ ಹಿಡಕೊಂಡ ಬರೋರ. ಇನ್ನ ಕೊರೊನಾ ಮನಷ್ಯಾರಿಗ ಇಷ್ಟ ಇತ್ತ ಆದರ ಒಂದಿಬ್ಬರ ಡಾಕ್ಟರ ಅಂತು ಆ ನಾಯಿ ಬಾಯಿ-ಮೂಗಿಗೂ ಮಾಸ್ಕ್ ಹಾಕಿ ಕರಕೊಂಡ ಬರ್ತಿದ್ದರು. ಇನ್ನ ನಾಲ್ಕ ಮಂದಿ ಪರಿಚಯದವರ ಎದರಿಗೆ ಸಿಕ್ಕರ ಸಹಜ ನನ್ನ ಹೆಂಡ್ತಿಗೆ ಅದ ಇದ ಮಾತಾಡ್ತ-ಮಾತಾಡ್ತ
“ಯಾಕ ಪ್ರೇರಣಾ ನೀವ ನಾಯಿ ಸಾಕಿಲ್ಲೇನ?” ಅಂತ ನನ್ನ ಮಾರಿ ನೋಡಿ ಕೇಳೋರ. ನನಗ ಅವರ ನನ್ನ ಮಾರಿ ನೋಡಿ ಯಾಕ ಅಂದರು ಅಂತ ತಲಿ ಕೆಟ್ಟ ಹೋಗ್ತಿತ್ತ. ಮ್ಯಾಲೆ ಆವಾಗ ಲಾಕ್ ಡೌನ್, ಇಪ್ಪತ್ತನಾಲ್ಕ ತಾಸು ಮನ್ಯಾಗ ಹೆಂಡ್ತಿ ಹೇಳಿದ್ದ ಕೆಲಸಾ ಮಾಡ್ಕೋತ ಬಿದ್ಕೊಂಡಿರ್ತಿದ್ದವಿ. ಮ್ಯಾಲೆ ತಾಸ-ತಾಸಿಗೊಮ್ಮೆ ಅಕಿಗೆ ಅದನ್ನ ಮಾಡ ಇದನ್ನ ಮಾಡ ಅಂತ ಬೌ ಬೌ ಅನ್ಕೋತ ಅಕಿ ಜೀವಾ ತಿನ್ಕೋತ ಇದ್ದವಿ. ಇನ್ನ ಇಡಿ ದಿವಸ ಮನ್ಯಾಗ ಅಂದ ಮ್ಯಾಲೆ ಗಂಡನ ಪಾಡ ನಾಯಿ ಪಾಡ ಆಗಿರ್ತಿತ್ತ ಅಂತ ಬಾಯಿ ಬಿಟ್ಟ ಹೇಳೋದ ಏನ ಬ್ಯಾಡ ಅಲಾ.
ಅದರಾಗ ನಮ್ಮಪ್ಪ ನಾವು ನಾಯಿ ಸಾಕೋಣ ಅಂದಾಗ ’ಲಗ್ನ ಮಾಡ್ಕೊ ಮಗನ ಆಮ್ಯಾಲೆ ನಿನ್ನ ಜೀವನನ ನಾಯಿ ಪಾಡ ಆಗ್ತದ’ ಅಂತ ಅಂದಿದ್ದ ನೆನಪಾಗ್ತಿತ್ತ.
ಇನ್ನ ಈ ವಾಕಿಂಗ ಬರೋ ನಾಯಿ ಅಂತು ಒಂದರಕಿಂತಾ ಒಂದ ಖತರನಾಕ್ ಮತ್ತ ಕಾಸ್ಟ್ಲಿ ಇರ್ತಿದ್ವು. ನಮ್ಮಕಿಗೆ ಮೊದ್ಲ ನಾಯಿ ಕಂಡರ ಆಗ್ತಿದ್ದಿಲ್ಲಾ. ಹಿಂಗಾಗಿ ಎಲ್ಲೇರ ದೂರ ನಾಯಿ ಹಿಡ್ಕೊಂಡ ಬರೋರ ಕಂಡರೊ ಇಲ್ಲೊ ಇಕಿ ಇಲ್ಲೇ ನನ್ನ ಕೈ ಗಟ್ಟೆ ಹಿಡ್ಕೊಂಡ ನಡಿಯೋಕಿ. ಅಲ್ಲಾ ನಾ ಪ್ರೀತಿಲೇ ವಾಕಿಂಗ್ ಹೋಗ್ಬೇಕಾರ ಕೈ ಹಿಡ್ಕೊಂಡರ
“ರ್ರಿ…ಕೈ ಬಿಡ್ರಿ ಅದ ಏನ ಅಸಂಯ್ಯ…ಯಾರರ ನೋಡಿದರ ಏನ ತಿಳ್ಕೋಬೇಕ” ಅಂತ ಬೈತಿದ್ಲು. ಆದರ ಯಾವದರ ನಾಯಿ ಕಂಡರ ತಾನ ಜಗ್ಗಿ- ಜಗ್ಗಿ ಕೈ ಹಿಡಿತಿದ್ಲು.
ಅಲ್ಲಾ, ’ನನ್ನ ಹೆಂಡ್ತಿ ಕೈ ನಾ ಹಿಡದರ ಮಂದಿ ಏನ ತಿಳ್ಕೋತಾರಲೇ…ಅದರಾಗ ಅಸಂಯ್ಯ ಏನ ಬಂತ’ ಅಂತ ನಾ ಅಂದರು ಕೇಳ್ತಿದ್ದಿಲ್ಲಾ ಆದರ ನಾಯಿ ಬಂದಾಗ ಅಕಿ ಗಂಡನ ಕೈ ಹಿಡಿದರ ಆವಾಗ ಅಸಂಯ್ಯ ಅನಸ್ತಿದ್ದಿಲ್ಲಾ. ಹಂಗ ಅಕಿಗೆ ಒಟ್ಟ ನಾಯಿ ಕಂಡರ ಆಗ್ತಿದ್ದಿಲ್ಲ ಅನ್ನರಿ. ರಾತ್ರಿ ಮಲ್ಕೊಂಡಾಗ ನಮ್ಮಕಿ ಅಂತು ಕನಸಿನಾಗ ನಾಯಿ ಬೊಗಳಿದರು ಗಂಡನ್ನ ಗಟ್ಟೆ ಹಿಡ್ಕೊಂಡ ಮಲ್ಕೊಳೊಕಿ. ಹಂಗ ಇಕಿ ಗಟ್ಟಿ ಹಿಡ್ಕೊಂಡ್ಳು ಅಂದರ ಮೊದ್ಲ ನಾ ಅಕಿದ ಮೂಡ ಚೇಂಜ್ ಆಗಿ ಪ್ರೀತಿ ಜಾಸ್ತಿ ಆತ ಅಂತ ತಿಳ್ಕೊತಿದ್ದೆ. ಆಮ್ಯಾಲೆ ಗೊತ್ತಾತ ಇದ ನನ್ನ ಬಗ್ಗೆ ಪ್ರೀತಿ ಅಲ್ಲಾ ಅಕಿಗೆ ನಾಯಿ ಕನಸ ಬಿದ್ದದ ಅಂತ. ಅಕಸ್ಮಾತ ನಮ್ಮಕಿ ಮನ್ಯಾಗ ನಾಯಿ ಸಾಕಲಿಕ್ಕೆ ಪರ್ಮಿಶನ್ ಕೊಟ್ಟಿದ್ದರ ಅದ ಒದರಿದಾಗೊಮ್ಮೆ ಇಕಿ ಗಟ್ಟಿ ಹಿಡ್ಕೊತಿದ್ಲು ಆ ಮಾತ ಬ್ಯಾರೆ. ಹೋಗ್ಲಿ ಬಿಡ್ರಿ ಅದಕ್ಕೂ ಪಡದ ಬರಬೇಕ.
ಇನ್ನ ಇಕಿ ಯಾರರ ನೀವ ಯಾಕ ನಾಯಿ ಸಾಕಿಲ್ಲಾ ಅಂತ ಕೇಳಿದರ ಸಾಕ ’ಅಯ್ಯ ನಮ್ಮವ್ವಾ….ಗಂಡಾ ಮಕ್ಕಳನ ಸಾಕೋದ ರಗಡ ಆಗೇದ..ಇನ್ನ ನಾಯಿ ಎಲ್ಲೆ ಸಾಕ್ತಿ’ ಅಂತ ಡೈಲಾಗ ಹೊಡಿಯೋಕಿ ಅದು ನನ್ನ ಮುಂದ. ಅವರ ಮತ್ತೊಮ್ಮೆ ನನ್ನ ಮಾರಿ ನೋಡಿ ” ಹೌದ ಬಿಡ್ವಾ..ಅದು ಖರೇನ….ನಾಯಿ ಸಾಕೋದು ಒಂದ, ಗಂಡಾ ಮಕ್ಕಳನ ಹಿಡಿಯೋದು ಒಂದ” ಅಂತ ಅಂದ ಹೋಗ್ತಿದ್ದರು. ಅದರಾಗ ಆವಾಗ ಲಾಕ್-ಡೌನ್ ಬ್ಯಾರೆ, ಗಂಡಾ ಮಕ್ಕಳು ಮನ್ಯಾಗ ಇರ್ತಿದ್ದರು.
ಇನ್ನ ನನಗ ಹಂಗ ಸಣ್ಣಂವ ಇದ್ದಾಗಿಂದ ನಾಯಿ ಸಾಕಬೇಕಂತ ಅನಸ್ತಿತ್ತ ಖರೆ ಆದರ ಆವಾಗ ಸ್ವಂತ ನಾಯಿನ ಸಾಕಬೇಕ ಅಂತ ಇರ್ತಿದ್ದಿಲ್ಲಾ. ಯಾಕಂದರ ನಮ್ಮ ಓಣಿ ತುಂಬ ನಾಯಿ ಇರ್ತಿದ್ದವು. ನಮ್ಮ ವಠಾರದಾಗ ಬಂದ ಮಲಗತಿದ್ದವು, ನಾವ ಹಾಕಿದ್ದ ತಿಂತಿದ್ವು, ನಮ್ಮನ್ನ ಹಚಗೊಂಡಿದ್ವು ನಾವು ಹಚಗೊಂಡಿದ್ವಿ. ಆಮ್ಯಾಲೆ ನಾ ಈ ನಾಯಿ ಸಾಕೋದ ಅದು ಸಾವಿರರಗಟ್ಟಲೇ ರೊಕ್ಕಾ ಕೊಟ್ಟ ನಾಯಿ ತರೋದ, ಅವಕರ ಕೊಳ್ಳಾಗ ಪಟ್ಟಾ ಹಾಕೋದ, ಅವಕ್ಕ ಹೆಸರ ಇಡೊದ ಇವೇಲ್ಲಾ ಅಗರ್ಭ ಶ್ರೀಮಂತರ ಚಟಾ ಅಂತ ಅನ್ಕೊಂಡಿದ್ದೆ.
ಅಲ್ಲಾ ಹಂಗ ಇವತ್ತಿಗೂ ನಾಯಿ ಸಾಕೋದು ಒಂದ ಶ್ರೀಮಂತರ ಲಕ್ಷಣನ ಬಿಡ್ರಿ, ಅದರಾಗ ಯಾರ ಎಷ್ಟ ಕಿಮ್ಮತ್ತಿನ ನಾಯಿ ಸಾಕ್ತಾರ ಅಷ್ಟ ಶ್ರೀಮಂತರ ಇದ್ದಂಗ. ಇನ್ನ ಅವರ ಪ್ರಾಣಿ ಪ್ರೀತಿ, ಮಮತೆ ನೋಡಿ ಬಿಟ್ಟರ ಒಮ್ಮೋಮ್ಮೆ ಮನ್ಯಾಗಿನ ಖಾಸ ಮಕ್ಕಳಿಗೆರ ಅಷ್ಟ ಕಾಳಜಿ ಮಾಡ್ತಾರಿಲ್ಲೋ ಅಂತ ಅನಸ್ತದ.
ಹಂಗ ನಾ ಸ್ವಂತ ಮನಿ ಕಟ್ಟಿದ ಮ್ಯಾಲೆ ’ಅಡ್ಡಿ ಇಲ್ಲಾ ಇನ್ನರ ಒಂದ ನಾಯಿ ಸಾಕೋಣ’ ಅಂತ ವಿಚಾರ ಮಾಡಿದೆ. ಆದರ ನನ್ನ ಹೆಂಡ್ತಿ, ನಮ್ಮವ್ವ ಅಂತೂ
’ನೀ ಏನ ಮಾಡಿದರು ನಾಯಿ ಸಾಕಂಗಿಲ್ಲಾ’ ಅಂತ ಗಂಟ ಬಿದ್ದರು. ಆದರು ನಾ ಒಂದ ಸಲಾ ಮನ್ಯಾಗ ಹೇಳಲಾರದ ಒಂದ ಮೂರ ಸಾವಿರ ಬಡದ ಒಂದ ಲ್ಯಾಬ್ರಡರ್ ನಾಯಿ ಮನಿಗೆ ತಂದ ಬಿಟ್ಟೆ. ತೊಗೊ ನಮ್ಮಕಿ ಯಾ ಪರಿ ರಂಪಾಟ ಮಾಡಿದ್ಲ ಅಂದರ ಆಜು ಬಾಜುದವರ ನಾ ಎಲ್ಲೆ ಮತ್ತೊಬ್ಬಕಿ ಕೊಳ್ಳಿಗೆ ತಾಳಿ ಕಟ್ಟಿ ಕರಕೊಂಡ ಬಂದೇನಿ ಅನಬೇಕ ಹಂಗ ಬಾಯಿ ಮಾಡಿದ್ಲು. ಕಡಿಕೆ ’ಒಂದ ನಾಯಿನರ ಇರಬೇಕು ಇಲ್ಲಾ ನಾನರ ಇರಬೇಕು’ ಅಂತ ನಿಂತ ಬಿಟ್ಟಳು. ಇನ್ನ ನಾಯಿನ ಇರಲಿ ಅನ್ನೊ ಅಷ್ಟ ಧೈರ್ಯ ನಂಗ ಇರಲ್ಲಿಲ್ಲಾ ಮ್ಯಾಲೆ ಆವಾಗ ಇನ್ನೂ ಹರೇದ ವಯಸ್ಸಿತ್ತ, ಹೆಂಡ್ತಿನ ಬಿಟ್ಟ ಬದಕೊ ಹಂಗನೂ ಇರಲಿಲ್ಲಾ. ತಂದ ತಪ್ಪಿಗೆ ಮತ್ತೊಬ್ಬರಿಗೆ ಆ ನಾಯಿ ಪುಕ್ಕಟ್ಟ ಕೊಡೊ ತನಕಾ ನಮ್ಮವ್ವಾ ನನ್ನ ಹೆಂಡ್ತಿ ಇಬ್ಬರೂ ಸೇರಿ ನನಗ ನಾಯಿ ಮಾಡಿದಂಗ ಮಾಡಿದರು. ನಾ ಅಷ್ಟರಾಗ ಆ ನಾಯಿಗೆ ಪ್ಲೂಟೋ ಅಂತ ಹೆಸರ ಬ್ಯಾರೆ ಇಟ್ಟಿದ್ದೆ, ಸ್ಟೇನಲೇಸ್ ಸ್ಟೀಲ್ ಚೈನ್ ತಂದಿದ್ದೆ, ಕೊಳ್ಳಾಗ ವೆಲ್ವೆಟ್ ಕಮ್ ಲೆದರ್ ಕಾಲರ್ ಬೆಲ್ಟ್ ಆನ್ ಲೈನ ಒಳಗ ಬುಕ್ ಮಾಡಿದ್ದೆ, ಮೂರ ಬಾಕ್ಸ್ ಪಿಡಿಗ್ರೀ ಫುಡ್ ತಂದಿದ್ದೆ. ಎಲ್ಲಾ ಹೋಳ್ಯಾಗ ಹುಣಸಿಹಣ್ಣ ತೊಳದಂಗ ಆತ. ನಮ್ಮವ್ವ ನಾ ಅಷ್ಟೇಲ್ಲಾ ತಂದಿದ್ದ ನೋಡಿ
’ಆಯ್ಯ ನಮ್ಮಪ್ಪಾ…ಖಾಸ ಮಗಗ ಒಂದ ಬೆಳ್ಳಿ ಉಡದಾರ ಮಾಡಸ ಅಂದರ ನಾಳೆ ಜವಳದಾಗ ಬೀಗರ ಕೋಡ್ತಾರ ಅಂದಿ ಈಗ ಯಾರೊ ಹಡದದ್ದ ಅಂದರ ಯಾವದೋ ನಾಯಿ ಹಡದದ್ದ ನಾಯಿ ತಂದ ಅದಕ್ಕ ಇಷ್ಟೇಲ್ಲಾ ಮಾಡ್ಲಿಕತ್ತಿ ಅಲಾ’ ಅಂತ ಬೈದ ’ಆ ನಾಯಿ ಜೋತಿ ತಂದದ್ದ ಸಾಮಾನ ಸಹಿತ ಯಾರಿಗೆ ನಾಯಿ ಕೊಡ್ತಿ ಅವರಿಗೆ ಕೊಟ್ಟ ಬಿಡ ಅಂತ ಅಂದ್ಲು. ಹಂಗ ನಾ ತಂದಿದ್ದ ಪೆಡಿಗ್ರೀ ಫುಡ್ ವೆಜ್ ಅಂದರೂ ಕೇಳಲಿಲ್ಲಾ.
ಅವತ್ತ ಲಾಸ್ಟ ನಾ ಮುಂದ ನಾಯಿ ಸಾಕೋ ವಿಚಾರನ ಮಾಡ್ಲೇಲಾ. ಆಮ್ಯಾಲೆ ನಮ್ಮಪ್ಪ ಹೇಳಿದಂಗ ಲಗ್ನ ಮಾಡ್ಕೊಂಡ ಹೆಂಡ್ತಿ ಮಕ್ಕಳನ ಸಾಕೋದರಾಗ ಜೀವನನ ನಾಯಿ ಪಾಡ ಆಗಿತ್ತ ಇನ್ನ ಅದನ್ನೊಂದ ಎಲ್ಲೇ ಬಿಡ ಅಂತ ಬಿಟ್ಟ ಬಿಟ್ಟೆ.
ಇನ್ನೊಂದ ಮಜಾ ಕೇಳ್ರಿಲ್ಲೆ…ನಾವ ಈಗ ಇದ್ದ ಓಣ್ಯಾಗೂ ಒಂದ ಹತ್ತ ನಾಯಿ ಅವ, ಅವ ದಿವಸಾ ನಮ್ಮ ಮನಿ ಸೆಲ್ಲರ್ ಒಳಗ ಇರ್ತಾವ, ನಮ್ಮ ಮನಿ ಚಪ್ಪಲ್ ಓಯ್ದನೇ, ನಮ್ಮ ಗಾರ್ಡನ್ ಹಾಳ ಮಾಡಿದ್ನೆ, ನಮ್ಮ ಗಾಡಿ ಸೀಟ್ ಹರದ್ನೇ ಮಾಡತಿರ್ತಾವ. ನನ್ನ ಹೆಂಡ್ತಿ ಒಂದ ಆರ ತಿಂಗಳ ಹಿಂದ ಒಂದ ಸರತೆ ಡೈರೆಕ್ಟ ಕಾರ್ಪೋರೇಶನ್ ದವರಿಗೆ ಕಂಪ್ಲೇಂಟ್ ಕೊಟ್ಟ ಇಡಿ ಓಣ್ಯಾಗಿನ ನಾಯಿ ಅಷ್ಟು ಹಿಡಿಸಿ ಕಳಸಿ ಬಿಟ್ಟಳು. ತೊಗೊ ಅದರಾಗ ಒಂದಿಷ್ಟ ಆಜು-ಬಾಜು ಮನಿಯವರ ಸ್ವಂತ ನಾಯಿನೂ ಹೋಗಿ ಅವರ ನಮ್ಮ ಮನಿಗೆ ಜಗಳಕ್ಕ ಬಂದ ದೊಡ್ಡ ರಾಮಾಯಣನ ಆತ.
ಆವಾಗಿಂದ ಅಂತೂ ನಾ ನಾಯಿ ಅನ್ನೋದ ಬಿಟ್ಟ ಬಿಟ್ಟೇನಿ. ಏನಿಲ್ಲದ ’ ನಾಯಿ ಯಾಕ ಸಾಕಿಲ್ಲಾ ಅಂದರ..ಗಂಡ ಮಕ್ಕಳನ ಸಾಕೋದ ರಗಡ ಆಗೇದ ಅಂದೋಕಿ ಇನ್ನ ನಾ ಎಲ್ಲೇರ ’ನಾಯಿ’ ಅಂದರ ಕಾರ್ಪೋರೇಶನ್ ದವರಿಗೆ ಫೋನ್ ಮಾಡಿ ನಂಗೂ ಹಿಡಿಸಿ ಕೊಟ್ಟರ ಏನ್ಮಾಡ್ತೀರಿ?