ಮುಂಜಾನೆ ಆರ-ಆರುವರಿ ಆಗಿತ್ತ ನಾ ಹಿಂಗ ವಾಕಿಂಗ ಮಾಡ್ಕೋತ ಮೋರಾರ್ಜಿನಗರ ಸರ್ಕಲ ಕಡೆ ಬರಲಿಕತ್ತಿದ್ದೆ, ಒಂದ ಸ್ವಲ್ಪ ದೂರ ನಮ್ಮ ದೋಸ್ತ ಬಸ್ಯಾ ಬೈಕ್ ಮ್ಯಾಲೆ ಸ್ಪೀಡ್ ಆಗಿ ನನ್ನ ಎದರಗಿಂದ ಬರಲಿಕತ್ತಿದ್ದ ಕಾಣತ. ಅಂವಾ ಕೀವ್ಯಾಗ ಒಂದ ಇಯರ್ ಫೋನ ತುರ್ಕೊಂಡ ಮಾತಾಡ್ಕೋತ ಗಾಡಿ ಹೊಡಿಲಿಕತ್ತಿದ್ದಾ….ಇನ್ನ ಬಸ್ಯಾ ಲೆಫ್ಟ ಸೈಡ ಇದ್ದಾ ಅಂತ ರೈಟ್ ಸೈಡ ವಾಕಿಂಗ ಹೊಂಟಿದ್ದ ನಾ ರಸ್ತೆ ಕ್ರಾಸ್ ಮಾಡಿದೆ…ನಾ ಇನ್ನೇನ ಒಂದ ಹತ್ತ ಫೂಟ್ ಇದ್ದೇ ಅನ್ನೊದಕ್ಕ ಅಂವಾ ಭಡಕ್ಕನ್ ಗಿಚ್ಚ ಅಂತ ಗಾಡಿ ಬ್ರೇಕ್ ಹಚ್ಚಿ ಒಂದ ಸರತೆ ಮುಂದ ಒಂದ ಸರತೆ ಹಿಂದ ನೋಡಿ, ಗಾಡಿ ಯು-ಟರ್ನ್ ಮಾಡಿ ಬಂವ್ವ್ ಅಂತ ಎಷ್ಟ ಸ್ಪೀಡ್ ಒಳಗ ಬಂದಿದ್ದಾ ಅಷ್ಟ ಸ್ಪೀಡ ಒಳಗ ವಾಪಸ ಹೋಗಿ ಬಿಟ್ಟಾ…..
ಒಂದ ಐದ-ಆರ ಫೂಟ್ ಮುಂದ ಇದ್ದ ನನ್ನ ನೋಡಿ, ನೋಡಿನೂ ನೋಡಲಾರದಂಗ ಗಾಡಿ ತಿರಗಿಸಿಕೊಂಡ ಹೋಗಿದ್ದ ನೋಡಿ ನಂಗ ಭಾಳ ಸಿಟ್ಟ ಬಂತ….ಅಗದಿ ಯಾವದೋ ಕೆಲಸಕ್ಕ ಹೋಗಬೇಕಾರ ಎದರಿಗೆ ಬೆಕ್ಕ್ ಅಡ್ಡ ಹೋದರ ವಾಪಸ ಗಾಡಿ ತಿರಗಿಸಿಕೊಂಡ ಬ್ಯಾರೆ ದಾರಿಗೆ ಹೋಗ್ತಾರಲಾ ಹಂಗ ಅಂವಾ ನನ್ನ ನೋಡಿ ಹೋದಾ ಅಂತ ನನಗ ಅನಸಲಿಕತ್ತ….ಅಂವಾ ಏನ ನನಗ ಮಾರಿ ತೋರಸಲಾರದಂತಾ ತಪ್ಪ ಮಾಡಿದ್ದಿಲ್ಲಾ ಮ್ಯಾಲೇ ರೊಕ್ಕಾನೂ ಏನ ಕೊಡೊದಿದ್ದಿಲ್ಲಾ…..ಹಂಗ ಆರ ತಿಂಗಳ ಹಿಂದ ನನ್ನ ಕಡೆ ಕಡಾ ಇಸ್ಗೊಂಡಿದ್ದ ಒಂದ ಬ್ಲ್ಯಾಕ್ & ವೈಟ್ ಸ್ಕಾಚ್ ಬಾಟಲಿ ಇನ್ನೂ ರಿಟರ್ನ್ ಕೊಟ್ಟಿದ್ದಿಲ್ಲಾ ಆ ಮಾತ ಬ್ಯಾರೆ…
ಅಲ್ಲಾ ನಾ ಒಂದ ಎರಡ ಸರತೆ ಸ್ಕಾಚ್ ವಾಪಸ ಕೊಡ್ತಿ ಇಲ್ಲಲೇ ಅಂತ ಸೂಕ್ಷ್ಮ ಕೇಳಿ ಕೇಳಿ ಸಾಕಾಗಿ ಆಮ್ಯಾಲೆ ಭೇಟ್ಟಿ ಆದರೂ ಅವಂಗ ಸ್ಕಾಚ್ ಕೇಳೋದ ಬಿಟ್ಟ ಬಿಟ್ಟಿದ್ದೆ. ಆದರೂ ಇಂವಾ ಅವನೌನ ಹಿಂಗ ನನ್ನ ನೋಡಿದರು ನೋಡ್ಲಾರದ ಹೋದನಲಾ ಅಂತ ನಾ ತಲಿಗೆಡಸಿಗೊಂಡ ಒಂದ ಹತ್ತ-ಹದಿನೈದ ನನ್ನ ಹುಬ್ಬಳ್ಳಿ ಮಾತೃಭಾಷಾದಾಗಿನ ಬೈಗಳಾ ಮನಸ್ಸಿನಾಗ ಬೈದ ಕಡಿಕೂ ತಡ್ಕೊಳಲಾರದ ಅವಂಗ ಫೋನ್ ಹಚ್ಚಿ
’ಲೇ..ನಿನ್ನೌನ, ರಸ್ತೆ ಮ್ಯಾಲೆ ನಾ ಕಂಡರ ನನ್ನ ನೋಡಿದರು ನೋಡ್ಲಾರದಂಗ ಹಂಗ ಹೋಗ್ತಿ’ ಅಂತ ನಾ ಅಂದರ
’ಯಾವಾಗ, ಎಲ್ಲೇ’ ಅಂತ ಕೇಳಿದಾ
’ಈಗ ಒಂದ ಅರ್ಧಾ ತಾಸ ಹಿಂದ ಮೋರಾರ್ಜಿನಗರ ಸರ್ಕಲ್ ಕಡೆ ಬಂದಿದ್ದಿಲ್ಲ?’
’ಹೌದ…ನೀ ಎಲ್ಲೆ ಇದ್ದಿ…’ ಅಂತ ಮತ್ತ ನನ್ನಗ ಕೇಳಿದಾ..
’ಮಗನ ನಿನ್ನ ಮುಂದ ಇದ್ದೆ…ನನ್ನ ನೋಡಿದವನ ಅಡ್ಡ ಬೆಕ್ಕ್ ಬಂದವರಗತೆ ಬೈಕ್ ತಿರಗಿಸಿಕೊಂಡ ಹೋದಿ ಇಲ್ಲ ?’ ಅಂತ ನಾ ಅಂದರ
’ಲೇ…ನಾ ನಿಂಗ ನೋಡೇ ಇಲ್ಲಲೇ…ನಾ ನಿದ್ದಿಗಣ್ಣಾಗ ಎದ್ದ ಹೆಂಡ್ತಿ ಹೇಳಿದ್ಲಂತ ಮೊಸರ ತರಲಿಕ್ಕೆ ಬಂದಿದ್ದೆ…ಅಷ್ಟರಾಗ ಅವನೌನ ನಮ್ಮ ರಿಜಿನಲ್ ಮ್ಯಾನೇಜರ್ ಫೋನ ಬಂತ….ಅವನ ಜೊತಿ ಮಾತಾಡ್ಕೋತ ನಾ ಲಕ್ಷ ಇಲ್ಲದ ಮೊಸರಿನ ಅಂಗಡಿ ದಾಟಿ ಬಂದಿದ್ದೆ…ಅವನ ಫೊನ್ ಕಟ್ ಆದಮ್ಯಾಲೆ ನಾ ಮೊಸರಿನ ಅಂಗಡಿ ದಾಟಿ ಬಂದಿದ್ದ ಲಕ್ಷಕ್ಕ ಬಂತ…ಗಾಡಿ ಯು ಟರ್ನ್ ಮಾಡ್ಕೊಂಡ ವಾಪಸ ಹೋದೆ….ಅನ್ನಂಗ ನೀ ಎಲ್ಲೇ ಇದ್ದಿ..? ’ ಅಂತ ಮತ್ತ ನನ್ನ ಕೇಳಿದಾ…ನಾ ತಲಿಕೆಟ್ಟ
’ಖಬರಗೇಡಿ ನನ್ನ ಮಗನ…ಭಾಳ ಶಾಣ್ಯಾ ಇದ್ದಿ ತೊಗೊ…..ಕೀವ್ಯಾಗ ಇಯರ್ ಫೋನ ತುರ್ಕೊಂಡ ಖಬರ ಇಲ್ಲದ ಗಾಡಿ ಹೋಡ್ಕೊತ ಹೊಂಟ ಬಿಡ್ತಿ …..ತಲಿ ಮ್ಯಾಲೆ ಹೆಲ್ಮೇಟ್ ಇಲ್ಲಾ, ಎದರಿಗೆ ಯಾರ ಬಂದರು ಖಬರ ಇರಂಗಿಲ್ಲಾ…. ನೀ ಹಿಂಗ ಹೊಂಟರ ಒಂದ ದಿವಸ ನಮಗೇಲ್ಲಾ ಮೊಸರೇನ ಅದರ ಜೊತಿ ವಡಾನೂ ತಿನ್ನಸ್ತಿ….ಗಾಡಿ ಒಂದ ಸ್ವಲ್ಪ ಲಕ್ಷ ಕೊಟ್ಟ ಹೊಡಿ drive safely, wear helmet, dont use mobile while driving- good day’ ಅಂತ ಬೈದ ಫೋನ್ ಇಟ್ಟೆ.
This article is written in the interest of road safety and safe driving practices, since I lost one of my friends just a week back in a bike accident.
Please drive safely and follow traffic rules.
Thank you