‘ಅಣ್ಣಾ… ಇದ ಲಾಸ್ಟ, ಮುಂದ ಯಾ ಅಂಗಡಿ ಇಲ್ಲಾ…ಇನ್ನ ಹತ್ತ ಕಿ.ಮಿ ಗೆ ಊರ ಬರತದ ತೊಗೊತಿದ್ದರ ಇಲ್ಲೇ ತೊಗೊ’ ಅಂತ ನನ್ನ ಕಜೀನ್ ಅಂದಾ….
’ಏ ಮುಂದ ಯಾವದರ ಛಲೋ ಅಂಗಡಿ ಇದ್ದರ ನೋಡೋಣ ತಡಿಯೋ ಮಾರಾಯಾ’ ಅಂತ ನಾ ಅಂದರ….
’ಯಪ್ಪಾ ಇದ ಹುಬ್ಬಳ್ಳಿ ಅಲ್ಲಾ ಎಡವಿ ಬಿದ್ದರ ಒಂದೊಂದ MRP ಅಂಗಡಿ ಇರಲಿಕ್ಕೆ, ಇಲ್ಲೆ ಇರೋದ ಎಲ್ಲಾ MSIL ತೊಗೊತಿದ್ದರ ಇಲ್ಲೆ ತೊಗೊ, ಇಲ್ಲಾ ಅಂದರ ಖಾಲಿ ಕೈಲೇ ಹೋಗ್ಬೇಕಾಗ್ತದ ನೋಡ…ಆಮ್ಯಾಲೆ ಮಾಮಾ ಬೈದರ ನಂಗ ಸಂಬಂಧ ಇಲ್ಲ ಮತ್ತ’ ಅಂತ ಅಗದಿ ನನ್ನ ಮ್ಯಾಲೆ ಹಾಕಿ ಸರಕೊಂಡಾ….
ಹಂಗ ನಾವಿಬ್ಬರೂ ನಮ್ಮ ಕಜೀನ ಸೋದರಮಾವನ ಊರ ಬೈಲೂರಕ್ಕ ಹೊಂಟಿದ್ವಿ…
ಇನ್ನ ಆ ಹಳ್ಳ್ಯಾಗ MRPನೂ ಇಲ್ಲಾ MSIL ಇಲ್ಲಾ. ಇನ್ನ ಸೋದರ ಮಾವನ ಮನಿಗೆ ಖಾಲಿ ಕೈಲೇ ಹೋಗೊದ ಛಲೋ ಕಾಣಂಗಿಲ್ಲಾ ಅಂತ ಒಂದ್ಯಾರಡ ಬಡ್-ವೈಸರ್ ಮ್ಯಾಗ್ನಮ್ ಟಿನ್ ಹಿಡ್ಕೊಂಡ ಹೋಗೊದ ನಮ್ಮದ ಮೊದ್ಲಿಂದ ಚಟಾ…ಅಲ್ಲಾ ಹಂಗ ನಮಗೇಲ್ಲಾ ಮೊದ್ಲನೇ ಸಲಾ ಬೀಯರ್ ಕುಡಿಲಿಕ್ಕೆ ಕಲಸಿದ್ದ ಇದ ಸೋದರಮಾವಂದರ…
’ಏನ ಆಗಂಗಿಲ್ಲಾ ಕುಡಿ ಮಗನ…ಅಂಟ್ಲಕಾಯಿ ನೀರ ಇದ್ದಂಗ ಇರ್ತದ’ ಅಂತ ಸ್ಟೀಲಿನ ವಾಟಗದಾಗ ನಾವ ಮನ್ಯಾಗ ಕಾಯಿ ಒಡದಾಗ ನೀರ ಹಿಡದಿರ್ತೇವೆ ಅಲಾ ಅಷ್ಟಷ್ಟ ಬೀಯರ್ ಕುಡಿಲಿಕ್ಕೆ ಕಲಿಸಿಸಿ ಈಗ ಕೇಸ್ ಲೇವಲ್ ತೊಗೊಂಡ ಬಂದ ಕೀರ್ತಿ ನಮ್ಮ ಸೋದರಮಾವಂದರಿಗೆ ಹೋಗಬೇಕ….ಹಂಗ ಅದ ನಮ್ಮಪ್ಪಗ ಗೊತ್ತ ಆದಾಗ
’ಲೇ… ಮಹಾಭಾರತ ಆಗಿದ್ದ ಹಿಂತಾ ಸೋದರಮಾವಂದರಿಂದ, ನೀ ಹಂತಾವರ ಮಾತ ಕೇಳ್ತಿ ಅಂದರ…ಬುದ್ಧಿ ಎಲ್ಲಿ ಇಟ್ಟಿ’ ಅಂತ ಎಷ್ಟ ಬಡ್ಕೊಂಡರು ನಾವೇನ ನಮ್ಮ ಅಪ್ಪನ ಮಾತ ಕೇಳಲಿಲ್ಲ ಅನ್ನರಿ…
Now coming back to MSIL Shop, ಇನ್ನ ನನ್ನ ತಮ್ಮ ನನ್ನಕಿಂತಾ ಜಾಸ್ತಿ ಆ ರಸ್ತೆ ಅಡ್ಡಾಡಿದಂವಾ ಅದರಾಗ ಅವಂಗ ಅಂವಾ ಯಾವ ಯಾವ ಊರಿಗೆ ಹೋಗಬೇಕಾರ ಎಲ್ಲೇಲ್ಲೆ MRP-MSIL ಶಾಪ್ ಅವ ಅಂತ ಅಗದಿ ಕಣ್ಣಮುಚಗೊಂಡ ಹೇಳ್ತಿದ್ದಾ. ಸರಿ ಅಂತ ಇಬ್ಬರೂ ಗಾಡಿ ಬಿಟ್ಟ ಇಳದ್ವಿ…
ಆ ಅಂಗಡಿಯವಂಗ ನಾ ದೊಡ್ಡಿಸ್ತನಾ ಮಾಡಿ ಯಾವದರ ಸ್ಕಾಚ್ ಅದ ಏನ ಅಂತ ಕೇಳಿದೆ…ನಮ್ಮ ತಮ್ಮಗ ತಲಿ ಕೆಡ್ತ…
’ಏ..ಅಣ್ಣಾ… ಇದ ಸಣ್ಣ ಹಳ್ಳ್ಯಾಗಿಂದ MSIL ಅಂಗಡಿ…ಇಲ್ಲೆ ನಿನಗ ಹುಬ್ಬಳ್ಳಿ ದಾರುವಾಲಾ ದುಕಾನದಾಗ ಸಿಗೋ ಬ್ರ್ಯಾಂಡ್ ಸಿಗಂಗಿಲ್ಲಾ..ಇಲ್ಲೀ ಬ್ರ್ಯಾಂಡ ಬಾರೇ ಇರ್ತಾವ ಸುಮ್ಮನ ಒಂದ ಆರ ಟಿನ್ ತೊಗೊ ಹೋಗೋಣ’ ಅಂತ ನಂಗ ಜೋರ ಮಾಡಿದಾ…ಅಷ್ಟರಾಗ ಇನ್ನೊಂದ KA 63 ಪಾಸಿಂಗ್ ಗಾಡಿ ಬಂದ ಅದ ಅಂಗಡಿ ಮುಂದ ನಿಂತ…ಇಬ್ಬರ ಗಂಡಸರ ಗಾಡಿ ಬಿಟ್ಟ ಇಳದರ…ನೋಡ್ಲಿಕ್ಕೆ ಅಗದಿ ಸಿಸ್ಟಿಮ್ಯಾಟಿಕ್ ಟಿಪ್ ಟಾಪ್ ಇದ್ದರು…ಒಳಗ ಬಂದವರ ಗಲ್ಲೇ ಮ್ಯಾಲೆ ಕೂತಿದ್ದ ಮಾಲಿಕಗ ಮೋಬೈಲ್ ತಗದ ಒಂದ ಫೋಟೊ ತೋರಿಸಿ
’ಇಂವಂಗ ಎಲ್ಲೇರ ನೋಡಿರಿ ಏನ?’ ಅಂತ ಕೇಳಿದರು…ಆ ಅಂಗಡಿಯಂವಾ ಒಂದ ಸರತೆ ಹೆದರಿದಾ, ಎಲ್ಲೋ ಪೋಲಿಸ್ ಎನ್ಕ್ವೈರಿ ಅನಿಸಿದಂಗ ಅವಂಗ ಅನಸ್ತ…
’ಇಲ್ಲರಿ ಸರ್…’ ಅಂದಾ.
’ಏ..ಬ್ಯಾರೆ ನಿಮ್ಮ ಅಂಗಡ್ಯಾಗಿನವರ ಕರಿಸಿ ಕೇಳ…ಈ ಮನಷ್ಯಾ ಅಂಗಡಿಗೆ ಬರ್ತಿರ್ತಾನ ಏನ ಅಂತ….ಇಲ್ಲಾ ನಿಮ್ಮ ಕಡೆ cctv camera ಇದ್ದರ ಅದರಾಗ footage ನೋಡಿ ಹೇಳ್ರಿ’ ಅಂತ ಜೋರ ಮಾಡಿದರು….
ನಂಗೂ ಇದ ಏನೊ ಲಫಡಾ ಅಂತ ಅನಸ್ತ…ಕಡಿಕೆ ಆ ಅಂಗಡ್ಯಾಗಿದ್ದ ಒಂದ ಮೂರ ಮಂದಿಗೆ ಕರಿಸಿಸಿ ಮೋಬೈಲ್ ತೋರಿಸಿ ’ಈ ಮನಷ್ಯಾ ಇಲ್ಲೆ ಬರ್ತಿರ್ತಾನ ಏನ…ಇಲ್ಲೇ ಬಾಜು ಹಳ್ಳಿಯಂವ ಅಂವಾ…ಲಾಸ್ಟ ಯಾವಾಗ ಬಂದಿದ್ದಾ’ ಅಂತ ತೋರಿಸಿದ್ರು…ಅವರ ಯಾರು ಅವನ್ನ ಗೊತ್ತ ಹಿಡದಂಗ ಕಾಣಲಿಲ್ಲಾ, ಅಷ್ಟರಾಗ ಅಲ್ಲೇ ಕೌಂಟರ್ ಮ್ಯಾಲೆ ಒಂದ ಕ್ವಾರ್ಟರ್ RC ರಾ ಹಾಕ್ಕೊಂಡ ಒಂದ ಹಾಳ್ಯಾಗ ಕಳತಿದ್ದ ಲಿಂಬಿಕಾಯಿ ಉಪ್ಪಿನಕಾಯಿ ಚಪ್ಪರಸಿಗೋತ ನಿಂತಿದ್ದ ಒಬ್ಬ ಮನಷ್ಯಾ
’ಎಲ್ಲೇ ಒಂದೀಟ್ ಮುಖಾ ತೋರಸರಿ’ ಅಂತ ಮೋಬೈಲ್ ಇಸ್ಗೊಂಡ ನೋಡಿದವನ…ಆ ಅಂಗಡಿಯವಂಗ
’ಲೇ…ಇಂವಾ ಬೈಲೂರ್ ಬಸ್ಸ್ಯಾಲೇ ….ಕಿತ್ತೂರ ಸಂತಿಗೆ ಬಂದಾಗೋಮ್ಮೆ ಮಟಾ- ಮಟಾ ಮಧ್ಯಾಹ್ನ ಫೂಲ್ ಬಾಟಲ್ ಪಾರ್ಸೆಲ್ ಓಯ್ತಾನಲಾ ಅವನ ಅಂವಾ’ ಅಂದಾ…ಅದನ್ನ ಕೇಳಿದವನ ಅಲ್ಲೇ ಒಂದ ಹತ್ತ ಕೇಸ್ ನಾಕ್ ಔಟ್ ಅನಲೋಡ್ ಮಾಡ್ಲಿಕ್ಕೆ ಬಂದ ಟಾಟಾ ಏಸ್ ಡ್ರೈವರ್ ಜಿಗದ ಬಂದ..’ಎಲ್ಲೇ ತಾಯಿಲ್ಲೇ ನೋಡೋಣ’ ಅಂತ ನೋಡಿ…
’ಆ ನಂದಗೌಡ ನಿಂಗವ್ವನ ಜೋತಿ ಲಫಡಾ ಮಾಡಿ ಬಡಸಿಗೊಂಡಿದ್ದನಲಾ ಇದ ಬಸ್ಸ್ಯಾ ಅಂವಾ’ ಅಂತ ಅಂದಾ….
ಅವರಿಬ್ಬರ ಮಾತ ಕೇಳಿದವರ ಆ ಮನಷ್ಯಾ ಯಾರ ಅಂತ ಕೇಳಲಿಕ್ಕೆ ಬಂದವರ
’ಇವರೇಲ್ಲಾ ಇಷ್ಟ ಹೇಳ್ತಾರ…ಅಂವಾ ನಿಮ್ಮ ಅಂಗಡಿಗೆ ಬಂದು-ಹೋಗಿದ್ದ ನಿಮಗ ಗೊತ್ತ ಇರಂಗಿಲ್ಲಾ…’ ಅಂತ ಅಂಗಡಿಯವಂಗ ಜೋರ್ ಮಾಡಿದರು.
ಪಾಪ ಅಂಗಡಿಯಂವಾ ಒಂದ ಸ್ವಲ್ಪ ಹೆದರಿದಾ…
’ಸಾಹೇಬ್ರ ಸಂತಿ ದಿವಸ ನಮ್ಮ ಅಂಗಡಿ ಗದ್ಲ ಇರ್ತೈತ್ರಿ….ಆಜು-ಬಾಜು ಮೂರ ನಾಲ್ಕ ಹಳ್ಳಿ ಜನಾ ಇಲ್ಲೇ ಬರ್ತಾರು…ನಾವ ಯಾರಂತ ಗೊರ್ತ ಹಿಡಿಯೋಣ ಹೇಳ್ರಿ….ಈಗ ಏನಾಗೈತ್ರಿ ಸರ್…ಏನ ಮಾಡ್ಯಾನ ಈ ಬಸ್ಸ್ಯಾ…’ ಅಂತ ಅವರಿಗೆ ಕೇಳಿದಾ.
’ಏನಿಲ್ಲ ತೊಗೊ ಹಂತಾದೇನ ಇನ್ನೂ ಮಾಡಿಲ್ಲಾ…ನಾವ ಇಲ್ಲೆ ಬಂದ ಎನ್ಕ್ವೈರಿ ಮಾಡಿದ್ದು ಎಲ್ಲೇನೂ ಬಾಯಿ ಬಿಡಬ್ಯಾಡ ನೀ ಮತ್ತ…’ ಅಂತ ಅವಂಗ ಟಬರ್ ಮಾಡಿ ವಾಪಸ ಕಾರ ಹತ್ತಿ ಹೋದರು…ಅವರ ಹೋಗಬೇಕಾರ ನನಗ ಕಾರ್ ಒಳಗ ಒಂದಿಬ್ಬರ ಹೆಣ್ಣಮಕ್ಕಳು ಇದ್ದದ್ದ ಕಾಣತ…ಪಾಪ ಅವರ ಶೆರೆ ಅಂಗಡಿ ಮುಂದ ಇಳದಿದ್ದಿಲ್ಲಾ.
ನಂಗ ಇದ ಏನೊ ದೊಡ್ಡ ಲಫಡಾ ಇರಬೇಕ ನಮಗ್ಯಾಕ ಉಸಾಬರಿ ಅಂತ ಒಂದ ಆರ ಬಡ್-ವೈಸರ್ ಮ್ಯಾಗ್ನಮ್ ಚಿಲ್ಡ್ ಕೊಡ ಅಂದೆ…ಸರ್ ಚಿಲ್ಡ್ ಇಲ್ಲಾ…ನಿನ್ನೇ ರಾತ್ರಿ ಇಂದ ಕರೆಂಟ್ ಇಲ್ಲಾ…’ ಅಂತ ಆರಿ ಅಂಗಾರ ಆಗಿದ್ದ ಆರ ಟಿನ್ ಕೊಟ್ಟಾ…ಇನ್ನ ಬ್ಯಾರೆ ನಮ್ಮ ಲೇವಲ್ ಬ್ರ್ಯಾಂಡ ಇರಲಿಲ್ಲಾ ಅಂತ ಕಡಿಕೆ ಅವನ್ನ ತೊಗೊಂಡ ದಾರಿ ಒಳಗ ಒಂದ್ಯಾರಡ ಪಾಪಡಿ ಪಾಕೇಟ್ ಖರೀದಿ ಮಾಡಿ ಹೋಲದಾಗ ಗಾಡಿ ನಿಲ್ಲಿಸಿ ಎಲ್ಲೇ ಎರೆಡ ಟಿನ್ ಮುಗಿಸಿ ಉಳದದ್ದ ತೊಗೊಂಡ ನಾವ ನಮ್ಮ ಮಾವನ ಊರು ಬೈಲೂರಿಗೆ ಹೋದ್ವಿ….
ನಮ್ಮ ಮಾವನ ಮನಿಗೆ ಹೋದಾಗ ಮಾಮಿ ಒಬ್ಬರ ಇದ್ದರ, ಮಾಮಾ ಎಲ್ಲೇ ಅಂತ ಕೇಳಿದರ
’ಇಲ್ಲೆ… ಪಾಟೀಲರ್ ಮನಿಗೆ ಹೋಗ್ಯಾರ…ಇನ್ನೊಂದ ಅರ್ಧಾ ತಾಸಿಗೆ ಬರ್ತಾರ ಅಂದ್ಲು..
’ಮಾಮಿ ಹಂಗರ ಅಲ್ಲಿ ತನಕಾ ಈ ನಾಲ್ಕ ಟಿನ್ ಫ್ರೀಜರ್ ಒಳಗ ಇಡ ಅಂತ ಅಕಿಗೆ ಕೊಟ್ಟೆ
ಮುಂದ ಒಂದ ಹತ್ತ ನಿಮಿಷಕ್ಕ ನಮ್ಮ ಮಾಮಾ ಬಂದಾ…ಅದು ಇದ ಮಾತಾಡಿ, ಮಾಮಿಗೆ ಬಿಸಿಬ್ಯಾಳಿ ಅನ್ನದ ಜೋತಿ ಕಾಂದಾಭಜಿ ಕರಿ ಅಂತ ಹೇಳಿ ಹಿತ್ತಲದಾಗ ಚಾಪಿ ಹಾಸ್ಗೊಂಡ ಮಾವಾ ಅಳಿಯಂದರ ಬೈಠಕ್ ಶುರು ಮಾಡಿದ್ವಿ…. ಹಂಗ ಮಾತಾಡ್ತ- ಮಾತಾಡ್ತ..
’ಆ ಪಾಟೀಲರ ಹೊಲಕ್ಕ ಬೋರ್ ಹಾಕಿಸಿದ್ರಲಾ..ಎಷ್ಟ ಇಂಚ ನೀರ ಹತ್ತ’ ಅಂತ ನಾ ಸಹಜ ಕೇಳಿದೆ..
’ಏ…ಅಗದಿ ನಾಲ್ಕ ಇಂಚ ನೀರ ಬಿದ್ದೈತಿ…ಮುಂದಿನ ಸರತೆ ಭತ್ತಾ ಹಾಕೋರ ಇದ್ದಾರ….ಯುಗಾದಿಗೆ ಎರಡನೇ ಮಗನ ಮದ್ವಿ ಬ್ಯಾರೆ ಮಾಡೋರ ಇದ್ದಾರ…. ನಿಮ್ಮ ಹುಬ್ಬಳ್ಳಿ ಕಡೆ ದೇವರ ಗುಡಿಹಾಳದ ಹೆಣ್ಣ ಗೊತ್ತ ಮಾಡ್ಯಾರಪಾ, ಅದ ಬೀಗರ ಮನಿ ನೋಡಾಕ ಇವತ್ತ ಬರ್ತಾರ ಅಂತ ನನಗ ಕರದಿದ್ದರ, ಅದಕ್ಕ ನಾ ಅವರ ಮನಿಗೆ ಹೋಗಿದ್ದೆ…ಈಗ ಫೋನ್ ಮಾಡಿ ಅವರ ಪೈಕಿ ಯಾರಿಗೋ ಆರಾಮ ಇಲ್ಲಾ ಮುಂದ ಬರ್ತೈವಿ ಅಂತ ಬೀಗರ ಹೇಳಿದರು…ಅದಕ್ಕ ನಾ ವಾಪಸ ಬಂದೆ’ ಅಂದಾ…
ನಂಗ ಒಮ್ಮಿಕ್ಕಲೇ ಏನೋ ಸಿಕ್ಸ್ಥ ಸೆನ್ಸ್ ( sixth sense) ಹೊಡಿತ..
’ಪಾಟೀಲರ ಎರಡನೇ ಮಗನ ಹೆಸರ ಬಸ್ಸ್ಯಾ ಏನ?’ ಅಂತ ತಟಕ್ಕನ ಕೇಳಿದೆ…
’ಹೌದ..ನಿಂಗ ಹೆಂಗ ಗೊತ್ತಾತ’ ಅಂತ ನಮ್ಮ ಮಾಮಾ ಅಂದಾ.
ಆತ ತೊಗೊ ಆ ದೇವರ ಗುಡಿಹಾಳ ಕನ್ಯಾ ಮರತ ಬಿಡ ಅಂತ ಹೇಳ ಅಂತ ಅವಂಗ ಹೇಳಿ MSIL ಅಂಗಡಿ ಒಳಗಿಂದ ಪೂರ್ತಿ ಕಥಿ ಹೇಳಿದೆ…
’ಅವನೌನ ಹುಡುಗ ಛಲೋನೋ ಕೆಟ್ಟ ಅಂತ ಜನಾ ಹಿಂಗ nearest MRP- MSIL ಅಂಗಡಿಗೆ ಹೋಗಿ ಕೇಳ್ತಾರಂದರ ಹೆಂಗೋ ಮಾರಾಯಾ…ಮುಂದ ನನ್ನ ಮಗನ ಮದ್ವಿ ಗತಿ ಏನ ಅಂತೇನಿ’ ಅಂತ ನಮ್ಮ ಮಾಮಾ ಅಂದಾ…
’ಯಾಕ ನಿನ್ನ ಮಗಾನೂ ಅಲ್ಲೇ ತೊಗಾತಾನ ಏನ?’ ಅಂತ ನಾ ಕೇಳಿದರ…
’ಲೇ..ಇಲ್ಲಲೇ ಪಾಪ ಅಂವಂಗ ಒಂದ ಚಟಾ ಇಲ್ಲಾ…ಅದರ ವಾರದಾಗ ಮೂರ ಸರತೆ ನಂಗ ತರಲಿಕ್ಕೆ ಅಲ್ಲೇ ಹೋಗಿರ್ತಾನಲಾ’ ಅಂತ ತನ್ನ ಸಂಕಟಾ ತೊಡ್ಕೊಂಡಾ.
ಏನ್ಮಾಡ್ತೀರಿ?
ಆದರೂ ಜನಾ ಕನ್ಯಾ ಕೊಡಬೇಕಾರ ಹುಡುಗನ ಬಗ್ಗೆ ಒಂದ ನಾಲ್ಕ ಕಡೆ , ನಾಲ್ಕ ಮಂದಿಗೆ ಚೌಕಸಿ ಮಾಡೋದ ಸಹಜ ಆದರ ಇವರ ಹಿಂಗ MRP-MSIL ಅಂಗಡಿ ತನಕ ಹೋಗಿ ವಿಚಾರ ಮಾಡ್ತಾರಂದರ ಹೆಂಗ ಅಂತೇನಿ…ಅಲ್ಲಾ ಅವರ ಮನ್ಯಾಗ ಒಂದ ಕನ್ಯಾ ಅದ ಅಂತ ಈ ಪರಿ ಹುಡುಗನ ಜಾತಾಕಾ ಜಾಲಾಡೋದ ಅಂದರ ಏನ್ರಿ ಅದ….ಯಾಕೋ ಇದ ಹೆಣ್ಣ ಹಡದವರದ ಭಾಳ ಆತ ಅನಸಲಿಲ್ಲಾ……ಅಲ್ಲಾ, ಹಂಗ ನಾನೂ ಒಂದ ಗಂಡ ಹಡದೇನಿ ಅದಕ್ಕ ಹೇಳಿದೆ ಇಷ್ಟ.
’ಲೇ ಮಗನ…ನಿನ್ನ ಆರ್ಟಿಕಲ್ ಓದಿ ಬಿಟ್ಟರ ಸಾಕ ತೊಗೊ …ನಿಮ್ಮ ಮನಿಗೆ ಕನ್ಯಾ ಕೊಟ್ಟಂಗ’ ಅಂತ ಅನಬ್ಯಾಡ್ರಿ ಮತ್ತ…….