ಈಗ ಲಾಸ್ಟ ಒಂದ ದಿಡ ತಿಂಗಳದೊಳಗ ನಮಗ 13 ಮುಂಜವಿ, 6 ಲಗ್ನ ಮತ್ತ 5 ಮನಿ ಒಪನಿಂಗದ್ದ ಆಮಂತ್ರಣ ಬಂದಿದ್ವು..ಒಂದ ತಿಂಗಳದ್ದ ಅರ್ಧಾ ದುಡದದ್ದ ಪಗಾರ ಈ ಸರತೆ ಉಡಗೊರೆ ಕೊಡ್ಲಿಕ್ಕೆ ಮತ್ತ್ತ ಕಾರ್ ಪೆಟ್ರೋಲ್ ಗೆ ಹೋಗೇದ….ಇನ್ನ ಅಷ್ಟ ಖರ್ಚ ಮಾಡಿದ್ದ ಸಂಕಟಕ್ಕ ಒಂದಿಷ್ಟ ಕಾರ್ಯಕ್ರಮಕ್ಕ ಹೆಂಗಿದ್ದರೂ ಅವರ ಕರದಾರ ತಡಿ ಅಂತ ದೇವರ ಊಟದಿಂದ ಹಿಡದ ಸತ್ಯನಾರಾಯಣ ಪೂಜಾ ತನಕಾ ಎಲ್ಲಾ ಕಾರ್ಯಕ್ರಮಕ್ಕೂ ಹೋಗಿ ಊಟಾ ಹೊಡದ ಬಂದೇವಿ…’ ಊಟ ಹೋದರ ಕೋಟಿ ಲಾಭ’ ಅಂತ…ಮ್ಯಾಲೆ ಇಷ್ಟ ಖರ್ಚ ಮಾಡಿದ್ದ workout ಆಗಬೇಕಲಾ.
ಇನ್ನಇಷ್ಟ ಕಾರ್ಯಕ್ರಮದೊಳಗ ಒಂದಿಷ್ಟ ನನ್ನ ಪೈಕಿ ಇದ್ದವು, ಒಂದಿಷ್ಟ ಹೆಂಡ್ತಿ ಬಳಗದ್ವು ಇದ್ವು. ಒಮ್ಮೋಮ್ಮೆ ಅಂತೂ ಒಂದ ದಿವಸ ಮೂರ-ಮೂರ ಮುಂಜವಿ…ಅವರ ಕರದದ್ದ ಸಂಕಟಕ್ಕ ಹೋಗಿ ಗಿಫ್ಟ ಅಂತೂ ಕೊಡಬೇಕ…ಆದರ ಊಟಾ ಹೆಂಗ ಮೂರ-ಮೂರ ಕಡೆ ಮಾಡ್ತೀರಿ…ಹಂಗ ನಂದೂ ಮುಂಜವಿ ಆಗೇದ..ಮುಂಜ್ವಿ ಆದವರ ದಿನಕ್ಕ ಎರಡ ಸಲಾ ಬಾಯಿ ಎಂಜಲಾ ಮಾಡ್ಕೋಬೇಕಂತ ನಮ್ಮವ್ವ ಹೇಳ್ಯಾಳ.
ಇನ್ನ ಅದರಾಗ ಯಾರರ ನೀವು ದಂಪತ್ ಬರಬೇಕ ಅಂತ ಕರದರ ನನಗರ ತಲಿಕೆಟ್ಟ ಹೋಗಿತ್ತ…ಹಂಗ ನನಗ ಪ್ರತಿ ಸಲಾ ಅದ ಇದ್ದ ಒಂದ ಹೆಂಡ್ತಿನ್ನ ಕರಕೊಂಡ ಹೋಗ್ಲಿಕ್ಕೆ ಬ್ಯಾಸರ ಅಂತ ಅಲ್ಲಾ… ಒಂದೂ ನಾ ಒಂದ ಕಡೆ ಹೋದರ ಅಕಿನ್ನ ಒಂದ ಕಾರ್ಯಕ್ರಮಕ್ಕ ಕಳಸಬಹುದು, ಇನ್ನೊಂದು ನಾ ಒಬ್ಬನ ಆದರ ಯಾವದರ ದೋಸ್ತನ ಜೊತಿ ಊಟದ ಟೈಮಕ್ಕ್ ಹೋಗಿ ಉಂಡ, ಗಿಫ್ಟ್ ಕೊಟ್ಟ ಪಟಕ್ಕನ ವಾಪಸ ಬರಬಹುದರಿಪಾ..ಈ ಹೆಣ್ಣಮಕ್ಕಳನ ಕರಕೊಂಡ ಹೋದರ ಇವರ ಒಂದ ಹತ್ತ ಮಂದಿ ಜೊತಿ ಹರಟಿ ಹೊಡಿಯೋರ, ಮ್ಯಾಲೆ ಗಿಫ್ಟ ಕೊಡಲಾರದ ಅದ ಹೆಂಗ ಊಟಕ್ಕ್ ಹೋಗೊದ ಅಂತ ತಾಸ ಗಟ್ಟಲೇ ಆಧಾರ ಕಾರ್ಡ ಕರೇಕ್ಷನ್ ಮಾಡಸಲಿಕ್ಕೆ ಪಾಳೆ ಹಚ್ಚಿದಂಗ ಪಾಳೆ ಹಚ್ಚಿ ಗಿಫ್ಟ ಕೊಡೊದ, ಆಮ್ಯಾಲೆ ಊಟಾ. ಇನ್ನ ಹೆಂಡ್ತಿನ್ನ ಕರಕೊಂಡ ಹೋಗಿದ್ದ ಸಂಕಟಕ್ಕ ಕರದವರ ಹೋಗಬೇಕಾರ ಬಂದ ಭೇಟ್ಟಿ ಆಗಿ ಕುಂಕಮಾ ತೊಗೊಂಡ ಹೋಗರಿ ಅಂತ ಹೇಳ್ತಾರ. ಅದಕ್ಕೊಂದ ತಾಸ.
ನಾ ಎಷ್ಟ ಸರತೆ ನನ್ನ ಹೆಂಡ್ತಿ ಬರಂಗಿಲ್ಲಾ ಅಂತ..ಇಲ್ಲಾ ಅಕಿ ಬರೋಹಂಗ ಇರಲಿಲ್ಲಾ ಅಂತ ಅಕಿನ್ನ ಬಿಟ್ಟ ನಾ ಒಬ್ಬನ ಲಗ್ನಾ-ಮುಂಜವಿಗೆ ಹೋಗಿರ್ತೇನಿ, ಅಲ್ಲೇ ಗಿಫ್ಟ ಕೊಡಬೇಕಾರ ಒಂದ ದೊಡ್ಡ ಇಶ್ಯು ಆಗೋದ..ನಾ ಬರೇ ಒಂದ ಕವರ ಕೊಟ್ಟ ಬರ್ತೇನಿ ಅಂತ ಅಂದರ ನಮ್ಮವ್ವ
’ಏ ಅದ ಹೆಂಗ ಬರೇ ಒಂದ ಕವರ್ ಕೊಟ್ಟ ಬರ್ತಿ, ಒಂದ ಜಂಪರ್ ಪೀಸ್ ಕೊಡಬೇಕಪಾ ಮುತ್ತೈದಿಗೆ’ ಅನ್ನೋಕಿ.
ಇನ್ನ ನಾ ಹೆಂಗ ಬ್ಯಾರೆ ಹೆಣ್ಣಮಕ್ಕಳಿಗೆ ಕುಂಕಮಾ ಹಚ್ಚಿ ಜಂಪರ್ ಪೀಸ್ ಕೊಡ್ಲಿಕ್ಕೆ ಬರತದ ಹೇಳ್ರಿ, ಅದು ಅಕಿ ಗಂಡನ ಮುಂದ?
ಹಂಗ ನಾ ಒಬ್ಬೊಕಿಗೆ ಇಪ್ಪತ್ತ ನಾಲ್ಕುವರಿ ವರ್ಷದ ಹಿಂದ ಕುಂಕುಮಾ ಹಚ್ಚಿ ಉಡಿ ತುಂಬಿಸಿಗೊಂಡ ರಗಡ ಆಗಿದ್ದ ನಿಮಗೇಲ್ಲಾ ಗೊತ್ತ ಅದ. ಆದರ ನಮ್ಮವ್ವಾ
’ಒಂದೂ ಹೆಂಡ್ತಿನ್ನ ಕರಕೊಂಡ ಹೋಗ ಇಲ್ಲಾ ಅಲ್ಲೇ ಯಾವದರ ಮುತ್ತೈದಿ ಕಡೆಯಿಂದ ಕುಂಕುಮಾ ಹಚ್ಚಿಸಿಸಿ ಕೊಡ’ ಅನ್ನೋಕಿ.
ಇನ್ನ ನಾ ಆ ಲಗ್ನಾ, ಮುಂಜವಿ ಮನ್ಯಾಗ ಮತ್ತೊಬ್ಬರ ಮುತ್ತೈದಿನ್ನ ಹುಡಕಿ
ಆ ಹುಡಗಿಗೆ ’ಕುಂಕುಮ ಹಚ್ಚಿ ಇದ ಒಂದ ಮೂರ ವಾರಿ ಜಂಪರ್ ಪೀಸ್ ಕೊಡರಿ’ ಅಂತ ರಿಕ್ವೆಸ್ಟ ಮಾಡ್ಕೊಬೇಕ.
ಮೊನ್ನೆ ನಮ್ಮ ದೋಸ್ತನ ಮಗಂದ ಒಂದ ಮುಂಜ್ವಿ ಫಂಕ್ಶನ್ ದೇವರ ಊಟ ಇತ್ತ, ಅವರ ಮನಿ ಮುಂಜ್ವಿ ದಿವಸ ಮತ್ತೊಂದ ಬಿಡಲಾರದ್ದ ಲಗ್ನ ಇತ್ತ ಹಿಂಗಾಗಿ ನಾನ ’ದೇವರ ಊಟಕ್ಕ ಬಂದ ಹೋಗ್ತೇನಿ ತೊಗೊ’ ಅಂತ ಅವರ ದೇವರ ಊಟಕ್ಕ ನನ್ನ ಕರೆಯೋಕಿಂತ ಮೊದ್ಲ ಔತಣಾ ತೊಗೊಂಡಿದ್ದೆ. ಅದ ಏನೋ ಅಂತಾರಲಾ ’ಅತ್ತು ಕರದು ಔತಣಾ ತೊಗೊಳೊದು’ ಅಂತ, ಹಂಗ ತೊಗೊಂಡಿದ್ದೆ ಅನ್ನರಿ.
ಇನ್ನ ಹೆಂಗಿದ್ದರೂ ದೋಸ್ತನ ಪೈಕಿ ಫಂಕ್ಶನ್, ಹೆಂಡ್ತಿ inevitable ಏನ ಅಲ್ಲಾ, ಮ್ಯಾಲೆ ಅಕಿ ಬ್ಯಾರೆ ಫಂಕ್ಶನದ್ದ ಸತ್ಯನಾರಾಯಣ ಪೂಜಾಕ್ಕ ಹೋಗೊಕಿ ಇದ್ಲು.
ನಮ್ಮವ್ವ ದೇವರ ಊಟಕ್ಕ ಹೊಂಟಿ, ಅಲ್ಲೇ ಪುಣ್ಯಾವಚನಿಗೆ ಕೂತಾಗ ಬರೇ ಆ ಹುಡಗಗ ಗಿಫ್ಟ ಕೊಡೋದ ಸರಿ ಅನಸಂಗಿಲ್ಲಾ, ಪುಣ್ಯಾವಚನಿಗೆ ಕೂತ ದಂಪತ್ತಗೂ ಕೊಡಬೇಕಾಗ್ತದ ಅಂತ ಗಂಟ ಬಿದ್ದಲು. ನಾ ನಮ್ಮವ್ವನ ಕಾಟಕ್ಕ ಒಂದ ಜಂಪರ್ ಪೀಸ್ – ಶರ್ಟ ಪೀಸ್ ಇಟಗೊಂಡ ಹೋಗಿದ್ದೆ, ಶರ್ಟ ಪೀಸ್ ಏನೋ ನಾ ಕೊಡಬಹುದು ಆದರ ಜಂಪರ್ ಪೀಸ್ ನಾ ಹೆಂಗ ಕೊಡಬೇಕ…ಅಲ್ಲೇ ನೋಡಿದರ ನಂಗ ಪರಿಚಯ ಇದ್ದ ಮುತ್ತೈದಿಯರ ಯಾರು ಕಾಣವಲ್ಲರಾಗಿದ್ದರು…ಇದ ನನ್ನ ದೋಸ್ತನ ಪೈಕಿ ಕಾರ್ಯಕ್ರಮ ಹಿಂಗಾಗಿ ಗೊರ್ತಿನವರ ಯಾರು ಕಾಣಲಿಲ್ಲಾ. ಕಡಿಕೆ ಅಲ್ಲೇ ಒಬ್ಬೋಕಿ ವಯಸ್ಸಿಗೆ ಬಂದ ಹುಡಗಿ, ಇನ್ನೂ ಲಗ್ನ ಆಗಿದ್ದಿಲ್ಲಾ, ಅಗದಿ ಛಂದಾಗಿ ಡೌಲ ಮಾಡ್ಕೋತ ಅಡ್ಡಾಡಲಿಕತ್ತಿದ್ಲು ನಾ ಅಕಿನ್ನ ಕರದ ಅಕಿ ಕಡೆ ಜಂಪರ್ ಪೀಸ್ ಉಡಿ ತುಂಬಸಿಸಿದೆ ನಾ ನಮ್ಮ ದೋಸ್ತಗ ಶರ್ಟ್ ಪೀಸ್ ಉಡಿ ತುಂಬಿದೆ.
ಮುಂದ ಎಲಿ ಹಾಕೋದ ತಡಾ ಒಂದನೇ ಪಂಕ್ತಿಗೆ ಊಟಕ್ಕ ಕೂತೆ..ಅಷ್ಟರಾಗ ಹಿಂದಿನಿಂದ ಬೆನ್ನಿಗೆ ಬಡದ ನಮ್ಮಜ್ಜಿ ಅಬಚಿ ಮಗಾ ವಾಸಪ್ಪಜ್ಜ
’ಏನ ಮಗನ…..ಹೆಂಡ್ತಿ ಮಕ್ಕಳನ ಬಿಟ್ಟ ಕೈಬಿಸ್ಗೋತ ಒಬ್ಬನ ಬಂದಿ ಅಲಾ’ ಅಂತ ನನ್ನ ಬಾಜೂ ಕುರ್ಚಿ ಮ್ಯಾಲೆ ಬಂದ ಕೂತಾ.
ಏನ ನೀ ಇಲ್ಲೆ…ಅಂದೆ…ನಮ್ಮ ದೋಸ್ತನ ಅಪ್ಪಾ, ಇಂವಾ ವಾಕಿಂಗ್ ಮೇಟ್ ಅಂತ ಅದಕ್ಕ ಅವನೂ ಊಟ ಹೋದರ ಕೋಟಿ ಲಾಭ ಅನ್ನೋ ಲೆಕ್ಕದಾಗ ಬಂದಿದ್ದಾ…
ಹಿಂಗಾ ಊಟಾ ಮಾಡ್ಕೋತ ಮಾತಾಡ್ತ ಮಾತಾಡ್ತ…
’ಅಲ್ಲಲೇ ಮಗನ….ಖಾಸ ಹೆಂಡಿನ್ನ ಬಿಟ್ಟ ಬ್ಯಾರೆ ಬ್ಯಾರೆ ಯಾರನೋ ಕರಕೊಂಡ ಬಂದ ಉಡಿ ತುಂಬಿಸಿದೇಲಾ’ ಅಂತ ಕೇಳೆ ಬಿಟ್ಟಾ…ಆತ ತೊಗೊ ಇನ್ನ ಇಂವಾ ಒಂದಿದ್ದ ಹತ್ತ ಮಾಡಿ ನನ್ನ ಹೆಸರ ಹಳ್ಳಾ ಹಿಡಸ್ತಾನ ಅಂತ ಗ್ಯಾರಂಟೀ ಆತ. ನಾ ಸಿಟ್ಟಲೇ…
’ಯಪ್ಪಾ……ಅಕಿ ನಮ್ಮ ದೋಸ್ತನ ಪೈಕಿಪಾ…..ನಮ್ಮ ಮನಿ ಮುತ್ತೈದಿ ಬಂದಿಲ್ಲಾ ಹಿಂಗಾಗಿ proxy ಮುತ್ತೈದಿ ಕಡೆ ಉಡಿ ತುಂಬಿಸಿಸೇನಿ…ನೀ ಮತ್ತ ಅದನ್ನ ಒಂದ ದೊಡ್ಡ ಇಶ್ಯೂ ಮಾಡಿ ಇಡೀ ದೇಶಪಾಂಡೆ ಮನೆತನಕ್ಕೇಲ್ಲಾ ’ ಪರ್ಶ್ಯಾ ಬ್ಯಾರೆ ಯಾವಕಿನ್ನೋ ಕರಕೊಂಡ ಫಂಕ್ಶನ್ ಗೆ ಬಂದಿದ್ದಾ ಅಂತ ಡಂಗರಾ ಹೊಡಿ ಬ್ಯಾಡಾ’ ಅಂತ ಟಾಪಿಕ್ ಅಲ್ಲೇ ಕ್ಲೋಸ್ ಮಾಡಿದೆ ಅನ್ನರಿ.
ಅಲ್ಲಾ, ಹಂಗ ಹಿಂದ ಪ್ರಾಕ್ಜಿ ಹೆಂಡಂದರ ಇರ್ತಿದ್ದರು, proxy ಲಗ್ನ ಆಗ್ತಿದ್ದವು…ಇನ್ನ ನಾ ಪ್ರಾಕ್ಜಿ ಮುತ್ತೈದಿ ಅಂದಿದ್ದರಾಗ ತಪ್ಪ ಏನರಿ?
proxy ಹೆಂಡ್ತಿ ಅಂತ ನಾ ಅಂದಿದ್ದರ ಒಂದ ಮಾತ ತಪ್ಪ ಅಂತ ಅನಬಹುದಿತ್ತ ಅನ್ನರಿ.
ಪ್ರಾಕ್ಸಿ ಅಂದರ ಕನ್ನಡದಾಗ ಪ್ರತಿನಿಧಿ ಅಂತ ಅರ್ಥ…
ಹಂಗ ನನ್ನ ಪ್ರಾಕ್ಸಿ ಹೆಂಡ್ತಿ ಆಗಲಿಕ್ಕೆ ಎಷ್ಟೋ ಮಂದಿ ತುದಿಗಾಲ ಮ್ಯಾಲೆ ನಿಂತಾರ ಆ ಮಾತ ಬ್ಯಾರೆ…
ಆದರೂ ಒಮ್ಮೇಮ್ಮೆ ಈಗ ಇದ್ದ ಹೆಂಡ್ತಿನ ಪ್ರಾಕ್ಸಿ ಹೆಂಡ್ತಿ ಯಾಕ ಇರಬರಾದು, ಇನ್ನೊಬ್ಬೊಕಿ ಯಾರರ ರಿಯಲ್ ಹೆಂಡ್ತಿ ಇದ್ದರ ಹೆಂಗ ಆಗ್ತಿತ್ತ ಅಂತ ಕನಸ ಕಾಣತಿರ್ತೇನಿ…ಆದರ ಎರೆಡ ಮಕ್ಕಳನ ಹಡದ ಮ್ಯಲೆ ಅಕಿ ಹೆಂಗ ಪ್ರಾಕ್ಸಿ ಆಗ್ತಾಳ ಅಂತ ಸುಮ್ಮನಾಗ್ತೇನೆ…ಆದರ ನಾ ಮಾತ್ರ ಇವತ್ತಿಗೂ ಯಾರಿಗರ proxy ಗಂಡ ಅಂತೂ ಆಗಬಹುದ ಆ ಮಾತ ಬ್ಯಾರೆ.