ಪ್ರತಿ ಮಂಗಳವಾರ ನಾ ಗಣಪತಿ ಗುಡಿಗೆ ಹೋಗ್ತೇನಿ…ಅಲಾಲಾಲಾ…ಯಾವಾಗಿಂದ ಆಸ್ತಿಕ ಆದಿ ಅನಬ್ಯಾಡ್ರಿ…ಹಂಗ ನಾ ಗಣಪತಿ ಗುಡಿಗೆ ಹೋಗ್ಲಿಕತ್ತ ಮೂವತ್ತ ವರ್ಷ ಆತ….ನಾ ಸುಳ್ಳ ಹೇಳಿದರ ಬೇಕಾರ ಗಣಪತಿಗೆ ಕೇಳ್ರಿ….
ಈಗ ದಿವಸಾ ನನಗ ಮಗಳನ ಕಾಲೇಜಿಗೆ ಬಿಟ್ಟ ನಾ ಆಫೀಸಗೆ ಹೋಗೊದ ಇರ್ತದ, ಹಿಂಗಾಗಿ ಮಂಗಳವಾರ ದಿವಸ ನಾ ಮುಂಜಾನೆ ರವಿನಗರ ಗಣಪತಿ ಗುಡಿ ಕಡೆ ನಾ ಇಳ್ಕೊಂಡ ಕಾರ್ ಮುಂದ IBMR ಕಾಲೇಜಗೆ ಕಳಸ್ತೇನಿ, ಡ್ರೈವರ ಅಕಿನ್ನ ಬಿಟ್ಟ ವಾಪಸ ಗುಡಿ ಕಡೆ ಬರೋದರಾಗ ನಂದ ದೇವರ ದರ್ಶನ ಮುಗದ ನಾ ರೋಡ ಕಡೆ ಬಂದಿರ್ತೇನಿ, ಅಲ್ಲಿಂದ ಮುಂದ ಆಫೀಸಗೆ ಕಾರ್ ನಾಗ ಹೋಗ್ತೇನಿ. ಇದ ಪ್ರತಿ ಮಂಗಳವಾರದ್ದ ರೂಟಿನ್ ಅನ್ನರಿ….
ಒಮ್ಮೋಮ್ಮೆ ಡ್ರೈವರ ಬರೋದ ಲೇಟ್ ಆದರ ನಾ ರವಿನಗರದಿಂದ ಅಕ್ಷಯ ಪಾರ್ಕ್ ರೋಡಗೆ ನಡ್ಕೋತ ಹೊಂಟಿರ್ತೇನಿ, ಎಲ್ಲೇ ಕಾರ ನನ್ನ ಹತ್ತರ ಬರ್ತದ ಅಲ್ಲೇ ನಾ ಹತ್ತತೇನಿ.
ಹಂಗ ನಂಗ ಮೊದ್ಲಿಂದ ಅಂದರ ಕಾಲ ಬಂದಾಗಿಂದ, ಒಂದ ಕಡೆ ನಿಂತಲ್ಲೇ ನಿಂತ ರೂಡಿ ಇಲ್ಲಾ ಅನ್ನರಿ.
ಹೋದ ಮಂಗಳವಾರನೂ ಹಂಗ ಗಣಪತಿ ಗುಡಿಗೆ ಹೋಗಿ ದರ್ಶನ ಮಾಡ್ಕೊಂಡ ನಾ ರವಿನಗರದಿಂದ ಅಕ್ಷಯ ಪಾರ್ಕ ರೋಡಿಗೆ ನಡ್ಕೋತ ಹೊಂಟಿದ್ದೆ, ಒಂದ ಮೂನ್ನೂರ ಮೀಟರ್ ದೂರ ನಾ ಹೋದರು ಗಾಡಿ ಬರಲಿಲ್ಲಾ..ನಾನು ನಡದರಾತ ತೊಗೊ ಕಾಲ ಏನ ಸವೇಯಂಗಿಲ್ಲಾ ಅಂತ ನಡ್ಕೋತ ಹೊಂಟೆ….
ಮುಂದ ಒಂದಿಬ್ಬರ ನನ್ನ ಹಿಂದ ಬರೋರ ತಮ್ಮ ಗಾಡಿ ಹಾರ್ನ್ ಹೊಡದ ಹೊಡದ ’ ಅಕ್ಷಯ ಪಾರ್ಕಗೆ ಡ್ರಾಪ್ ಮಾಡ್ಲಿ ಏನ’ ಅಂತ ಕೇಳಿದರು, ಹಂಗ ಮುಖ ಪರಿಚಯ ಇದ್ದೋರ ಬಿಡ್ರಿ ಪಾಪ ನಾ ನನ್ನ ಕಾಲ ಮ್ಯಾಲೆ ನಾ ನಡ್ಕೋತ ಹೊಂಟದ್ದ ನೋಡಿ courtesyಗೆ ಕೇಳಿದರ.
ನಾ ’ no, thanks..ಗಾಡಿ ಹಿಂದ ಬರಲಿಕ್ಕತ್ತದ’ ಅಂತ ಅಂದ ಮುಂದ ನಡ್ಕೋತ ಹೊಂಟೆ.
ಒಂದ ಹತ್ತ ಹೆಜ್ಜಿ ಮುಂದ ಹೋಗೊದಕ್ಕ ಹಿಂದಿನಿಂದ ನಮ್ಮ ಅನಿಲ್ ಗಾಡಿ ಒಳಗಿಂದ ಬಂದ ಹಾರ್ನ್ ಹೊಡಿಲಿಕ್ಕೆ ಹತ್ತಿದಾ. ನಾ ಹಿಂದ ತಿರಗಿ ನೋಡೊದಕ್ಕ
’ಏನ..ಮುಂಜ- ಮುಂಜಾನೆನ ಬಂದ ಬಿಟ್ಟಿ ಅಲಾ’ ಅಂದಾ…. ನಂಗ ಒಮ್ಮಿಕ್ಕಲೇ ಅಂವಾ ಏನಂದಾ, ಹಂಗ್ಯಾಕ ಅಂದ ತಿಳಿಲಿಲ್ಲಾ….ನಾ ಉಲ್ಟಾ ಅವಂಗ
’ನೀ ಯಾಕ ಇಲ್ಲೇ?’ ಅಂದೆ..
’ಏ ತೋಳನಕೇರಿಗೆ ವಾಕಿಂಗ್ ಹೋಗಿದ್ದೆ ಅಲ್ಲೇ ಆರೋಗ್ಯಾ ಕೇಫೆ ಒಳಗ ಒಂದ ಪ್ಲೇಟ್ ಇಡ್ಲಿ ಹೊಡದ ಈಗ ಮನಿಗೆ ಹೊಂಟೇನಿ’ ಅಂದಾ.
ಅಷ್ಟರಾಗ ಅವನ ಹಿಂದ ಸುನಿಲ ಬಂದಾ, ಅವನೂ ದಿವಸಾ ತೋಳನಕೇರಿಗೆ ವಾಕಿಂಗ್ ಹೋಗೊಂವಾ….
ನಮ್ಮ ದೋಸ್ತರಿಗೆ ಒಂದಿಷ್ಟ ಮಂದಿಗೆ ದಿವಸಾ ಮುಂಜಾನೆ ಎದ್ದ ಸ್ನಾನ ಮಾಡಲಾರದ ಸ್ಮಾರ್ಟ್ ಆಗಿ ಹೈ ಎಂಡ್ ಕಾರ ತೊಗೊಂಡ ಏಳ- ಏಂಟ ಕಿ.ಮಿ ದೂರದಿಂದ ತೋಳನ ಕೇರಿಗೆ ಬಂದ ಊರ ಉಸಾಬರಿ ಮಾತಾಡ್ಕೋತ ಒಂದ್ಯಾರಡ ರೌಂಡ್ ಹೊಡದ ವಾಕಿಂಗ್ ಮಾಡಿದಂಗ ಮಾಡಿ ಲಾಸ್ಟಿಗೆ ದಿವಸಾ ಒಂದೊಂದ ಕಡೆ ಇಡ್ಲಿ, ದ್ವಾಸಿ, ಪುರಿ ಭಾಜಿ ತಿಂದ ಮನಿಗೆ ಹೋಗೊ ಚಟಾ ಅದ.
ಇವರ ವಾಕಿಂಗ್ ಅಂತ ಹೋಗೊದ ನಾಲ್ಕ ಮಂದಿಗೆ ತೊರಸಲಿಕ್ಕೆ ಇಷ್ಟ…ನಾನೂ ಹತ್ತ ವರ್ಷ ಆತ ನೋಡ್ಲಿಕತ್ತ ಒಬ್ಬನೂ ಒಂದ ಗ್ರಾಮ್ ತೂಕಾ ಇಳಸಿಲ್ಲಾ…ಅಲ್ಲಾ ಇಳಸ್ತಾರ ಹೆಂಗ , ವಾಕಿಂಗ್ ಮಾಡಿ ಹತ್ತ ಕ್ಯಾಲರಿ ಬರ್ನ್ ಮಾಡಿ ಹೊರಗ ಬಂದ ನೂರ ಕ್ಯಾಲರಿ ತಿಂತಾರ. ಮತ್ತ ರಾತ್ರಿ ಸೆಶನ್ ಬ್ಯಾರೆ ಇರ್ತಾವ ಇವರವು.
ಸುನಿಲ ನನ್ನ ನೋಡಿದವನ
’ನೀ …ಏನಪಾ..ಮುಂಜ ಮುಂಜಾನೆನ ಶುರು ಹಚಗೊಂಡಿ ಏನ?’ ಅಂತ ಅಂದಾ. ನಂಗ ಇವನೂ ಯಾಕ ಹಿಂಗ ಅಂದಾ ಅಂತ ತಿಳಿಲಿಲ್ಲಾ…
’ನಾ ಏನ ಶುರು ಹಚಗೊಂಡೇನಪಾ ದೋಸ್ತ….ಆಫೀಸಗೆ ಹೊಂಟೇನಿ, ಕಾರ ಮಗಳನ ಬಿಡ್ಕಿಕ್ಕೆ ಹೋಗೇದ, ಹಿಂದ ಬರಲಿಕತ್ತದ, ಹಿಂಗಾಗಿ ವಾಕಿಂಗ್ ಹೊಂಟಿದ್ದೆ’ ಅಂದೆ.
’ಏ…ಖರೇ ಹೇಳ ಮಗನ….ಮುಂಜ ಮುಂಜಾನೆ ಕ್ಲಾಸಿಕ್ ಬಾರ್ ಮುಂದ ನಿಂತಿ ಮತ್ತ ವಾಕಿಂಗ್ ಹೊಂಟೇನಿ ಅಂತ ಹೇಳ್ತಿ ಏನ’ ಅಂದಾ.
ಆವಾಗ ನಾ ಎಡಕ್ಕ ನೋಡ್ತೇನಿ ಕರೆಕ್ಟ ನಾ ಕ್ಲಾಸಿಕ್ ಬಾರ್ & ರೆಸ್ಟೋರೆಂಟ್ ಗೇಟ್ ಮುಂದ ಇದ್ದೆ.
ಅಲ್ಲಾ ರವಿನಗರ ಗಣಪತಿ ಗುಡಿಯಿಂದ ಅಕ್ಷಯ ಪಾರ್ಕಕ್ಕ ಹೋಗಬೇಕಂದರ ವಾಯಾ ಕ್ಲಾಸಿಕ್ ಬಾರ್ ಹೋಗಬೇಕ, ನಾ ನಡ್ಕೋತ ಕರೆಕ್ಟ ಅದರ ಹತ್ತರ ಬರೋದಕ್ಕ ಈ ದೋಸ್ತರ ಭೇಟ್ಟಿ ಆಗೋದಕ್ಕ ಕರೆಕ್ಟ ಆಗಿತ್ತ ಅನ್ನರಿ.
ನಂಗ ಆಮ್ಯಾಲೆ ಇವರಿಬ್ಬರಿಗೂ
’ಇಲ್ಲಪಾ, ನನ್ನ ಮಗಳನ ಕಾಲೇಜಿಗೆ ಬಿಡ್ಲಿಕ್ಕೆ ಕಾರ ಹೋಗೇದ, ನಾ ಖರೇನ ಗುಡಿಗೆ ಹೋಗಿದ್ದೆ, ಬೇಕಿದ್ದರ ನನ್ನ ತಲಿಮ್ಯಾಲೆನ ಅಕ್ಕಿಕಾಳ ನೋಡ, ಹಣಿ ಹಚಗೊಂಡಿದ್ದ ಕುಂಕಮಾ ನೋಡ ಅದಕ್ಕೂ ಮೀರಿ ಡೌಟ ಇದ್ದರ ನನ್ನ ಬಾಯಿ ವಾಸನಿ ನೋಡ್ರಿ ’ ಪಂಚಾಮೃತದ’ ವಾಸನಿ ಬರ್ತದ ಅಂತ’ ತಿಳಿಸಿ ಹೇಳೋದರಾಗ ಸಾಕ-ಸಾಕಾಗಿ ಹೋತ. ಇನ್ನೇನ ಅವರ ಕನ್ವಿನ್ಸ್ ಆಗಿ ಹೋಗಬೇಕ ಅನ್ನೋದರಾಗ ಹಿಂದ ನಮ್ಮ ಸೋಮಾಪುರ್ ಸಾಹೇಬರ ಬಂದರ.
ಅವರು ಇವರ ಹಂಗ ವೊಲ್ವೊ ಕಾರನಾಗ ತೋಳನಕೇರಿಗೆ ವಾಕಿಂಗ ಹೋಗಿ ಬರಲಿಕತ್ತಿದ್ದರ….ಅವರ ನನ್ನೊಮ್ಮೆ ನೋಡಿದರು, ಬಾಜುಕ ಕ್ಲಾಸಿಕ್ ಬಾರ್ ನೋಡಿದರು…
’ಏನ ಆಡೂರ ನಿನ್ನೆ ರಾತ್ರಿ ಕ್ಲಾಸಿಕ್ ಒಳಗ ವಸ್ತಿ ಇದ್ದಿ ಏನ’ ಅಂತ ಕೇಳಿದರ..
ನಂಗ ಏನ ಹೇಳ್ಬೇಕ ತಿಳಿಲಿಲ್ಲಾ…ಅಷ್ಟರಾಗ ನನ್ನ ಕಾರ ಬಂತ…
’see you guys…have a good day’ ಅಂತ ನಾ ಕಾರ್ ಹತ್ತಿದೆ….ಅಷ್ಟರಾಗ ಸೋಮಾಪುರ ಸರ್
’ಸಂಜಿಗೆ ಫ್ರೀ ಇದ್ದರ ಬಾ…ನಿನ್ನ ಸಂಬಂಧ ಕ್ಯಾಪ್ಟನ್ ಮಾರ್ಗನ್ ಸ್ಪೈಸಿ ರಮ್ ತರಸೇನಿ ಬೆಂಗಳೂರನಿಂದ’ ಅಂತ ನಂಗ ಬ್ಯಾಟಾ ಹಚ್ಚಿ ಹೋದರು.
ಅಲ್ಲಾ ಅದರೂ ಏನ ಜನಾ ಅಂತೇನಿ….ನಾ ಬಾರ್ ಅಂಗಡಿ ಮುಂದಿನ ರೋಡನಾಗ ಅಡ್ಡಾಡೊದ ತಪ್ಪ? ಅಲ್ಲಾ…ನಾ ಗುಡಿಗೆ ಹೋಗಿದ್ದೆ ಅಂತ ಎಷ್ಟ ಹೇಳಿದರು ಇವರಿಗೆ ವಿಶ್ವಾಸ ಇಲ್ಲಾ ಅಂದರ ಏನ್ಮಾಡ್ತೀರಿ….ಅದು ಮುಂಜ ಮುಂಜಾನೆ ಎಂಟು ವರಿಗೆ…..ಅದ ರಾತ್ರಿ ಎಂಟುವರಿ ಆಗಿದ್ದರ ಒಂದೊಪ್ಪತ್ತ ಒಪ್ಕೋಬಹುದಿತ್ತ ಅನ್ನರಿ…ಅಪ್ಪಿ-ತಪ್ಪಿ ನಾ ಯಾರದರ ಭಿಡೆಕ್ಕ ಹೋದರು ಹೋಗಿರ್ಬಹುದು ಅನಬಹುದಿತ್ತ.
ಆದರು ಏನ ಅನ್ನರಿ ನನ್ನ ಬಗ್ಗೆ ಯಾರಿಗೂ ವಿಶ್ವಾಸನ ಉಳದಿಲ್ಲಾ…
ಏನ್ಮಾಡೋದ ಇದ್ದದ್ದ ಇದ್ದಂಗ ಬರದ ಬರದ ನಾ ನನ್ನ TRP ಹಾಳ ಮಾಡ್ಕೊಂಡಂಗ ಆಗೇದ.