ಇದ ಅಕ್ಟೋಬರ್ ತಿಂಗಳದ್ದ ಸುದ್ದಿ ಇರಬೇಕ, ನಮ್ಮ ಧಾರವಾಡ ಶಶಿ ಮೌಶಿ ಮನ್ಯಾಗ ಒಂದ ಪೂಜಾ ಇತ್ತ ಅಂತ ನಾವ ದಂಪತ್ ಹೋಗಿದ್ವಿ. ಅಲ್ಲೇ ನಮ್ಮ ಮೌಶಿ ನಿಗೇಣ್ಣಿನೂ ಬಂದಿದ್ದರು.
ಹಂಗ ನಮಗ ಈ ಮೌಶಿನ ದೂರದಿಂದ ಮೌಶಿ ಆಗಬೇಕ, ಇನ್ನ ಹಂತಾದರಾಗ ಅಕಿ ನಿಗೇಣ್ಣಿ ಅಂತೂ ಎರೆಡ-ಮೂರ ವರ್ಷಕ್ಕೊಮ್ಮೆ ಭೇಟ್ಟಿ ಆಗೋಕಿ ಅನ್ನರಿ.
ಅದೇನ ಆಗಿತ್ತಂದರ ಮುಂದ ನವೆಂಬರ್ 28ಕ್ಕ ಅವರ ಮಗಳದ ಮದ್ವಿ ಇತ್ತ. ಅದಕ್ಕ ಅವರ ಬೆಂಗಳೂರಿಂದ ಮುದ್ದಾಂ ಗಾಡಿ ಖರ್ಚ ಮಾಡ್ಕೊಂಡ ಈ ಫಂಕ್ಶನ್ ಗೆ ಬಂದ, ಹೆಂಗಿದ್ದರೂ ಅರ್ಧಾ ಬಳಗ ಇಲ್ಲೆ ಬಂದಿರ್ತದ ಇಲ್ಲೇ ಕಾರ್ಡ್ ಕೊಟ್ಟಬಿಟ್ಟರಾತು ಅಂತ ಬಂದಿದ್ದರು. ಅಲ್ಲಾ, ಅದರಾಗ ತಪ್ಪೇನಿಲ್ಲ ಬಿಡ್ರಿ.
ಇನ್ನ ಅವರ ಕರಿಯೋ ಲಿಸ್ಟ ಒಳಗ ನಮ್ಮ ಹೆಸರ ಇರಲಿಲ್ಲಾ. ಅಲ್ಲಾ ಅದರಾಗೂ ಏನ ತಪ್ಪ ಇಲ್ಲಾ, ನಾವೇನ ಹಂತಾ ಕ್ಲೋಸ್ ರಿಲೇಟಿವ್ ಅಲ್ಲಾ ಏನಲ್ಲಾ.
ಇನ್ನ ಎಲ್ಲಾರನೂ ಕರಿಬೇಕಾರ ನಮ್ಮನ್ನ ಕರಿಲಿಲ್ಲಾ ಅಂದರ ತಪ್ಪ ಆಗ್ತದ ಅಂತ ನಮಗೂ ಕಾರ್ಡ ಕೊಟ್ಟ ಮ್ಯಾಲೆ ರಿಟರ್ನ್ ಗಿಫ್ಟ ಬ್ಯಾರೆ ಕೊಟ್ಟರು.
ಹಂಗ ನಮಗ ರಿಟರ್ನ್ ಗಿಫ್ಟ ಕೊಡಲಿಕ್ಕೆ ಕಾರಣ ಅಂದರ ನಮ್ಮ ಮೌಶಿ ತಮ್ಮ ನಿಗೇಣ್ಣಿಗೆ
’ನೀವ ಎಲ್ಲಾರಿಗೂ ಕಾರ್ಡ – ರಿಟರ್ನ್ ಗಿಫ್ಟ ಕೊಟ್ಟ ಅವರಿಗೆ ಕೊಡಲಿಲ್ಲಾ ಅಂದರ ಪ್ರಶಾಂತ ಎಲ್ಲೇರ ಮುಂದ ಅದರ ಮ್ಯಾಲೆ ಆರ್ಟಿಕಲ್ ಬರೆಯೋ ಪೈಕಿ ಸುಮ್ಮನ ಕೊಟ್ಟ ಬಿಡ್ರಿ’ ಅಂತ ಹೇಳಿ ಕೊಡಸಿದ್ಲ ಅಂತ.
ಅವರ ಕಾರ್ಡ, ರಿಟರ್ನ್ ಗಿಫ್ಟ ನನ್ನ ಕೈಯಾಗ ಕೊಟ್ಟ
’ನವೆಂಬರ 28ಕ್ಕ ನಮ್ಮ ಮಗಳದ ಲಗ್ನಪಾ..ಪ್ರಶಾಂತ..ಇಬ್ಬರೂ ಬರ್ರಿ’ ಅಂತ ಕರದರು.
ನಾ ರಿಟರ್ನ್ ಗಿಫ್ಟ್ ಇಸ್ಗೊಂಡ ಬಾಯಿಮುಚಗೊಂಡ ಹೂಂ ಅಂದ ಕೂತಿದ್ದರ ಮುಗಿತಿತ್ತ, ದೊಡ್ಡಿಸ್ತನಾ ಮಾಡಿ ಅಗದಿ ಸ್ಟ್ರೇಟ್ ಪಾರ್ವರ್ಡ್ ಆಗಿ
’ಏ..ಇಲ್ಲರಿ ಮೌಶಿ ಅವತ್ತ ನಂಬದ ಅನಿವರ್ಸರಿ ಅದ, ಅದು 25ನೇದ…ನಾವ ಗೋವಾಕ್ಕ ಹೊಂಟೇವಿ, ನಮಗೇನ ಬರಲಿಕ್ಕ ಆಗಂಗಿಲ್ಲಾ’ ಅಂದ ಬಿಟ್ಟೆ. ಅವರ ರಿಟರ್ನ್ ಗಿಫ್ಟ ಕೊಟ್ಟದ್ದ ಸಂಕಟಕ್ಕ
’ಆತ ತೊಗೊ ನಿಂಗ ಬರಲಿಕ್ಕೆ ಆಗಲಿಲ್ಲಾಂದರ ಏನಾತ ನಿನ್ನ ಹೆಂಡ್ತಿನ್ನರ ಕಳಸ’ ಅಂದ ಬಿಟ್ಟರ.
ನಂಗ ಒಂದ ಸರತೆ ಏನ ಹೇಳ್ಬೇಕ ತಿಳಿಲಿಲ್ಲಾ. ಅಲ್ಲಾ ಬಾಯಿ ಬಿಟ್ಟ ನನ್ನ ಮ್ಯಾರೇಜ್ ಅನಿವರ್ಸರಿ ಅಂತ ಹೇಳಿಕತ್ತೇನಿ ಆದರೂ ಹೆಂಡ್ತಿನ್ನ ಒಬ್ಬಕಿನ್ನರ ಕಳಸ ಅನ್ನಲಿಕತ್ತಾರಲಾ ಅಂತ ನಂಗ ವಿಚಿತ್ರ ಅನಸ್ತ. ನನ್ನ ಹೆಂಡ್ತಿ ಒಂದ ಸರತೆ ನನ್ನ ಮಾರಿ, ಒಂದ ಸರತೆ ಅವರ ಮಾರಿ ನೋಡ್ಲಿಕತ್ತಳು. ಅಕಿಗೆ ನಾ ಎಲ್ಲೇ ರಿಟರ್ನ್ ಗಿಫ್ಟ್ ಇಸ್ಗೊಂಡಿದ್ದ ಭಿಡೇಕ್ಕ ’ಹೆಂಡ್ತಿನ್ನ ಒಬ್ಬೋಕಿನ್ನ ಕಳಸ್ತೇನಿ’ ಅಂತೇನಿ ಅಂತ ತಿಳ್ಕೊಂಡಿದ್ಲು.
ಅದ ಇರಲಿ ನಂಬದ ಅನಿವರ್ಸರಿ, ಅದೂ 25ನೇದ ಅಂತ ಹೇಳಿದರು ಹಿಂಗ ಇವರ ಹೆಂಡ್ತಿನ್ನ ಒಬ್ಬೋಕಿನ್ನ ಕಳಸ ಅಂತಾರ ಅಂದರ ಏನ ಹೇಳ್ಬೇಕ ಅಂತ ನಂಗ ತಿಳಿಲಿಲ್ಲಾ. ಇನ್ನ ಸುಮ್ಮನ ಅವರ ಜೊತಿ ಏನ ಜಾಸ್ತಿ ಮಾತಾಡೋದ ಬಿಡ ಅಂತ ನಾ ನನ್ನ ಹೆಂಡ್ತಿ ಅನ್ಕೊಂಡಂಗ
’ಆತ ತೊಗೊರಿ ಮೌಶಿ ಜೊತಿ ನನ್ನ ಹೆಂಡ್ತಿನ್ನ ಕಳಸ್ತೇನಿ’ ಅಂದ ಬಿಟ್ಟೆ. ನನ್ನ ಹೆಂಡ್ತಿಗೆ ಪಿತ್ತ ನೆತ್ತಿಗೇರತ….ಮನಿಗೆ ವಾಪಸ ಬರತ
’ಹೆಂಡ್ತಿನ್ನ ಬಿಟ್ಟ ನೀವ ಒಬ್ಬರ ಯಾರ ಜೊತಿ ಅನಿವರ್ಸರಿ ಮಾಡೋರ ’ ಅಂತ ಜೀವಾ ತಿನ್ನಲಿಕ್ಕೆ ಹತ್ತಿದ್ಲು.
’ಹಂಗ ಅಲ್ಲಾ, ಪಾಪ ಅವರ ಅಷ್ಟ ಪ್ರೀತಿಲೇ…ಅಡ್ವಾನ್ಸ ರಿಟರ್ನ್ ಗಿಫ್ಟ ಕೊಟ್ಟ ಲಗ್ನಕ್ಕ ಬಾ ಅನಬೇಕಾರ ಇಲ್ಲಾ ಅಂತ ಹೆಂಗ ಅನ್ನಲಿಕ್ಕೆ ಆಗ್ತದ ಹೇಳ, ಅದಕ್ಕ ಹಂಗ ಹೇಳಿದೆ ತೊಗೊ’ ಅಂತ ಸಮಾಧಾನ ಮಾಡಿ ಮನಿಗೆ ಕರಕೊಂಡ ಬಂದೆ.
ಮುಂದ ನಾವೇನ ಮದ್ವಿಗೂ ಹೋಗಲಿಲ್ಲಾ, ಅನಿವರ್ಸರಿಗೆ ಗೋವಾಕ್ಕೂ ಹೋಗಲಿಲ್ಲಾ.
ಇನ್ನೂ ಅವರ ರಿಟರ್ನ್ ಗಿಫ್ಟ ಭಿಡೇ ಒಳಗ ಇದ್ದೇವಿ.
ಇನ್ನ ಎರೆಡುವರಿ ತಿಂಗಳ ಹಿಂದಿಂದ ಈ ಸುದ್ದಿ ಇವತ್ತ ಯಾಕ ಬಂತು ಅಂದರ ಇವತ್ತ ಮುಂಜಾನೆ ನನ್ನ ಹೆಂಡ್ತಿ
’ರ್ರೀ…ಆ ಬೆಂಗಳೂರಿನ ಸುಧಾ ಮೌಶಿ ಮಗಳದ ನಿನ್ನೆ ಕಳ್ಳ ಕುಬಸ ಆತ ಅಂತ’ ಅಂದ್ಲು. ನಾ
’ಯಾವ ಸುಧಾ ಮೌಶಿ’ ಅಂದೆ.
’ಅದ ಶಶಿಕಲಾ ಮೌಶಿ ಅವರ ನಿಗೇಣ್ಣಿ, ನಮ್ಮ ಅನಿವರ್ಸರಿ ದಿವಸ ಅವರ ಮಗಳದ ಲಗ್ನ ಆಗಿತ್ತಲಾ’ ಅಂತ ನೆನಪ ಮಾಡಿದ್ಲು. ನಾ
’ಭಾಳ ಛಲೋ ಆತ ತೊಗೊ…..ಅವರ ಏನರ ಕುಬಸಕ್ಕ ಕರದರ ಮದ್ವಿ ಗಿಫ್ಟ ಕುಬಸದಾಗ ಕೊಟ್ಟ ಬಂದರಾತು’ ಅಂದೆ.
ಅಲ್ಲಾ, ಹಂಗ ನಮಗೂ ರಿಟರ್ನ್ ಗಿಫ್ಟ ಇಸ್ಗೊಂಡ ಫಂಕ್ಶನ್ ಹೋಗಿ ಗಿಫ್ಟ ಕೊಡಲಿಲ್ಲಾ ಅನ್ನೋ guilty feeling ಇತ್ತ, ಅದ ಕ್ಲೀಯರ್ ಆಗ್ತದ ಅಂತ ಸುಮ್ಮನಾದೆ. ನಾ ಆಮ್ಯಾಲೆ ನನ್ನ ಹೆಂಡ್ತಿಗೆ
’ಅನ್ನಂಗ ನಿನಗ್ಯಾರ ಅವರ ಮಗಳದ ಕಳ್ಳ ಕುಬಸ ಆತ ಅಂತ ಹೇಳಿದರು’ ಅಂತ ಕೇಳಿದರ.
’ರ್ರೀ…..ಆ ಹುಡಗಿ ಅವ್ವನ ಕುಬಸಾ ಮಾಡಿದ್ದ whatsapp status ಇಟ್ಟಾರ’ ಅಂದ್ಲು.
ನಂಗ ಒಂದ ಸರತೆ ಏನ ಹೇಳ್ಬೇಕ ತಿಳಿಲಿಲ್ಲಾ….ಕಳ್ಳ ಕುಬಸಾ ಮಾಡಿ, ಅಲ್ಲಾ ಕಳ್ಳ ಕುಬಸಾ ಅಂದರ ನಾಲ್ಕ ಮಂದಿಗೆ ಗೊತ್ತ ಆಗಲಾರದಂಗ ಮನಿ ಮಂದಿ ಇಷ್ಟ ಮಾಡೋದು, ಇನ್ನ ಹಂತಾದನ್ನೂ ವಾಟ್ಸಪ್ ಸ್ಟೇಟಸ್ ಇಡತಾರಂದರ ಹೆಂತಾ ಜನಾ ಅಂತೇನಿ…..ಹೋಗ್ಲಿ ಬಿಡ್ರಿ ನಮಗ್ಯಾಕ ಬೇಕ ಮಂದಿ ಸುದ್ದಿ …ವಾಟ್ಸಪ್ ಸ್ಟೇಟಸ್ ನೋಡ್ಕೊತಿದ್ದರ ತನ್ನತಾನ ಎಲ್ಲಾರ ಮನಿ ಸುದ್ದಿ ಗೊತ್ತ ಆಗೇ ಆಗ್ತದ.

