ಡಿಸೆಂಬರ್ ೨೯ ರ ರಾತ್ರಿ ನಮ್ಮ ಎಮ್. ಎಲ್. ಏ ಮಾಮಾ ಹನ್ನೆರಡ ಆದ್ರು ಮಲ್ಕೋಳ್ಳಲಾರದ ಟಿ.ವಿ ಮುಂದ ಕೂತಿದ್ದಾ
” ಮಾಮಾ ಇವತ್ತ ಹೊಸ ವರ್ಷ ಅಲ್ಲಾ ಹೋಗಿ ಮಲ್ಕೊ , ಹೊಸಾ ವರ್ಷಕ್ಕ ಇನ್ನೂ ಎರಡ ದಿವಸ ಅದ ” ಅಂದೆ,
” ಲೇ, ನೀ ಸುಮ್ಮನ ಮಲ್ಕೊ ಮಗನ, ಇವತ್ತ ರಾತ್ರಿ ರಾಜ್ಯಸಭಾದಾಗ ಲೋಕಪಾಲ್ ಬಿಲ್ ಬಿತ್ತಂದರ ನಮಗೆಲ್ಲಾ ಇವತ್ತ ಹೊಸ ವರ್ಷ ಇದ್ದಂಗ ” ಅಂದಾ.
ಕಡಿಕೂ ಅವತ್ತ ರಾಜ್ಯಸಭಾದಾಗ ಲೋಕಪಾಲ್ ಬಿಲ್ ಬಿದ್ದ ಮ್ಯಾಲೆ ನಮ್ಮ ಮಾಮಾ ಟಿ.ವಿ ಬಿಟ್ಟ ಎದ್ದಾ , ಹಂಗ ನಮ್ಮ ದೇಶದಾಗ ಲೋಕಪಾಲ್ ಬಿದ್ದಮ್ಯಾಲೆ ಎಷ್ಟ ಮಂದಿ ಖುಷಿಲೇ ಎದ್ದ ಕೂತರೋ ಆ ಭಾರತಮಾತಾಗ ಗೊತ್ತ. ಆದ್ರ ಒಂದ ಅಂತೂ ಖರೆ ಈ ಲೋಕಪಾಲ್ ಬಿಲ್ ಯಾ ಪಕ್ಷದವರಿಗೆ ಬೇಕಾಗಿತ್ತು ಯಾರಿಗೆ ಬ್ಯಾಡಾಗಿತ್ತು ಅನ್ನೋದ ಒಂದೂ ಕಡಿತನಕ ಗೊತ್ತಾಗಲಿಲ್ಲ. ‘ನಾ ಸತ್ತಂಗ ಮಾಡ್ತೇನಿ. ನೀ ಅತ್ತಂಗ ಮಾಡ’ ಅಂತ ಆಡಳಿತ ಪಕ್ಷದವರೂ – ವಿರೋಧ ಪಕ್ಷದವರು ಇಬ್ಬರೂ ಸೇರಿ ಈಡಿ ದೇಶಕ್ಕ ಮೂರ್ಖ ಮಾಡಿದರು. ಲೋಕಪಾಲ್ ತಿಳದವರು ತಿಳಿಲಾರದವರೂ ಎಲ್ಲಾ ಸೇರಿ ಪಾರ್ಲಿಮೆಂಟನಾಗ ಲೋಕಪಾಲ್ ಬಿಲ್ಲಿಗೆ ತಲಿಗೊಂದೊಂದ ತಿದ್ದುಪಡಿ ಮಾಡರಿ ಅಂತ ಗಂಟ ಬಿದ್ದು ಕಡಿಕೆ ಅದನ್ನ ತಡದ ಬಿಟ್ಟರು.
ಇತ್ತಲಾಗ ನಮ್ಮ ‘ಅಣ್ಣಾ’ ದೇಶದ ಆರೋಗ್ಯ ಸುಧಾರಸಲಿಕ್ಕ ಹೋಗಿ ತನ್ನ ಆರೋಗ್ಯ ಹಾಳಮಾಡ್ಕೊಂಡಾ. ‘ಲೋಕಪಾಲ್ ಬಂದ್ರ ನಮ್ಮ ದೇಶದಾಗಿನ ಭ್ರಷ್ಟಾಚಾರ ಎಲ್ಲಾ ಹೋಗೆ ಬಿಡತದ’ ಏನೋ ಅನ್ನೊರಗತೆ ಅಣ್ಣಾನ ಜೊತಿ ಉಪವಾಸ ಹೊರಾಡಲಿಕತ್ತವರು ಎಲ್ಲಾ ತಲಿ ಕೆಟ್ಟ ನಮ್ಮ ದೇಶದ ಹಣೆಬರಹ ಇಷ್ಟ ತೊಗೋ ಅಂತ ಹೊಟ್ಟಿತುಂಬ ಉಂಡ ತಮ್ಮ-ತಮ್ಮ ಕೆಲಸಕ್ಕ ಹತ್ತಿದ್ರು.
” ಲೇ ಹಂಗ ಮಾತ-ಮಾತಿಗೆ ನಾ ಉಪವಾಸ ಮಾಡ್ತೇನಿ ಅಂತ ಹೆದರಿಸಿದರ ಏನ ಲೋಕಪಾಲ್ ಬರ್ತದೇನ ಮಗನ? ನಾಳೆ ಯಾರೋ ಕಾಶ್ಮೀರ ಬೇಕಂತ ಉಪವಾಸ ಮಾಡ್ತಾರ, ಮತ್ತೊಬ್ಬರ ನಂಗ ತೆಲಂಗಾಣ ಬೇಕ ಅಂತ ಉಪವಾಸ ಮಾಡ್ತಾರ. ಹಂಗ ಉಪವಾಸ ಮಾಡ್ತಾರಂತ ಅವರ ಕೇಳಿದ್ದ ಎಲ್ಲಾ ಕೊಡೊಂಗಿತ್ತಂದ್ರ ನಮಗ ಪಾರ್ಲಿಮೆಂಟ, ಸರ್ಕಾರ ಅಂತ ಯಾಕಬೇಕು? ” ಅಂತ ನಮ್ಮ ಮಾಮಾ ಅಂತಿದ್ದಾ.
” ನಮ್ಮ ದೇಶದಾಗ ಭ್ರಷ್ಟಾಚಾರ ಅಂಬೋದ ‘ರಕ್ತದಾಗಿನ ಬಿಳಿ ರಕ್ತ ಕಣ’ ಇದ್ದಂಗ, ಜಾಸ್ತಿ ಇದ್ದರೂ ತ್ರಾಸ್, ಕಡಿಮೆ ಆದ್ರೂ ತ್ರಾಸ. ಅದ ಇಲ್ಲದ ಬದುಕಲಿಕ್ಕೆ ಸಾಧ್ಯ ಇಲ್ಲಾ ” ಅಂತ ಭಾಷಣಾ ಬ್ಯಾರೆ ಮಾಡ್ತಿದ್ದಾ.
ಕಡಿಕೂ ‘ಲೋಕಪಾಲೆಬಿನ್ನರುಚಿ’ ಅನ್ನೊ ಹಂಗ ಎಲ್ಲಾ ರಾಜಕೀಯ ಪಾರ್ಟಿಯವರು ತಮ್ಮ ತಲ್ಯಾಗ ತಿಳಿದಂಗ ಅದರ ಬಗ್ಗೆ ಮಾತಾಡಿ, ಅವರ ಮ್ಯಾಲೆ ಇವರು- ಇವರ ಮ್ಯಾಲೆ ಅವರು ಹಾಕ್ಕೋತ ‘ಲೋಕಪಾಲ್ ಬಚಾವೊ, ಭ್ರಷ್ಟಾಚಾರ ಹಠಾವೋ’ ಇದ್ದದ್ದನ್ನ ‘ಲೋಕಪಾಲ್ ಹಠಾವೊ – ಲೋಕತಂತ್ರ ಬಚಾವೊ’ ಅಂತ ನಡರಾತ್ರ್ಯಾಗ ನಾಟಕ ಮಾಡಿದರು.
” ಏ ಹಂಗ ಭ್ರಷ್ಟಾಚಾರ ಬಂದ ಆಗ್ಬೇಕಂದ್ರ ಮೊದ್ಲ ನೀವು, ಅಂದರ ಜನಾ ಸುಧಾರಸಬೇಕು ‘ನಾ, ಏನ ಬರಲಿ ಲಂಚ ಕೂಡಂಗಿಲ್ಲಾ, ನಾ ಮನಿ ಕಟ್ಟಲಿಲ್ಲಾ ಅಂದ್ರು ಅಡ್ಡಿಯಿಲ್ಲಾ ಲಂಚಾ ಕೊಟ್ಟ ಸೈಟ್ ತೊಗಳ್ಳಂಗಿಲ್ಲಾ , ನನಗ ಸರ್ಕಾರಿ ನೌಕರಿ ಸಿಗದಿದ್ದರೂ ಅಡ್ಡಿಯಿಲ್ಲಾ ನಾ ಯಾ ಮಂತ್ರಿಗೂ ರೊಕ್ಕಾ ಕೊಡಂಗಿಲ್ಲಾ , ಕಡಿಕೆ ನಾ ಬದುಕಲಿಲ್ಲಾಂದರೂ ಅಡ್ಡಿಯಿಲ್ಲಾ ಭ್ರಷ್ಟಾಚಾರ ಮಾಡಂಗಿಲ್ಲಾ’ ಅಂತ ಆ ನಿಮ್ಮ ‘ ಜನಲೋಕಪಾಲ್’ ಮುಟ್ಟಿ ಆಣಿ ಮಾಡರಿ. ಆವಾಗ ಈಡಿ ದೇಶನ ಸುಧಾರಸ್ತದ, ಈ ಲೋಕಪಾಲರ ಯಾಕಬೇಕು” ಅಂತ ಪ್ರವಚನನ ಶುರು ಮಾಡಿದಾ.
” ಹೌದ ಬಿಡಪಾ, ನೀ ಹೇಳೋದು ಖರೇ ಅದ. ನಿಮ್ಮ ಕಣ್ಣಾಗ ಬರೆ ಜನರ ತಪ್ಪ ಎದ್ದ ಕಾಣ್ತದ. ನೀ ಮುಂದಿನ ಸರತೆ ವೊಟ ಕೇಳಲಿಕ್ಕೆ ಹೋದಾಗ ಇದ ಭಾಷಣಾ ಮಾಡು, ಜನಾ ನಿನ್ನ ಮಾರಿಗೆ ಮಂಗಳಾರತಿ ಮಾಡಲಿಲ್ಲಂದ್ರ ಹೇಳು” ಅಂದೆ.
” ಲೇ, ಹುಚ್ಚಾ. ಮಂದಿ ಮುಂದ ಹಂಗ ಯಾರ ಹೇಳ್ತಾರಲೆ. ನಾಳೆ ಇಲೆಕ್ಷನ್ ಬರಲಿ ನೋಡ, ನಾವೂ ನಿಮ್ಮ ಅಣ್ಣಾಗ ಜೈ ಅಂತೇವಿ. ‘ನಮಗ ಅಧಿಕಾರ ಕೊಡ್ರಿ, ನಾವ ಲೋಕಪಾಲ್ ತರತೇವಿ’, ಅನ್ನೋದ ನಮ್ಮ ಮುಂದಿನ ಇಲೆಕ್ಷನ್ ಆಶ್ವಾಸನೆ ” ಅಂದಾ.
ಆತ ತೊಗೊ ಇನ್ನ ಈ ರಾಜಕೀಯ ಮಂದಿ ‘ಭ್ರಷ್ಟಾಚಾರ ಹಠಾವೋ’ ಅಂದೋಲನ ಇದ್ದದ್ದನ್ನ ‘ಸರ್ಕಾರ ಹಠಾವೊ’ ಮಾಡಿ ತಮ್ಮ ಬ್ಯಾಳಿ ಬೆಸ್ಗೋಂಡ ‘ ಲೋಕಪಾಲ್ ಭೂಲ್ ಜಾವೋ’ ಮಾಡ್ತಾರ ಅಂತ ಗ್ಯಾರಂಟೀ ಆತ.