ನಮ್ಮ ಪಕ್ಯಾ ಯಾ ಮೂಹೂರ್ತದಾಗ ಮಾಡಬಾರದ ಕಿತಾಪತಿ ಮಾಡಿ ಸಿಕ್ಕೊಂಡ ಜೇಲ ಸೇರಿದ್ನೋ ಏನೋ, ಆಮ್ಯಾಲೆ ಹೆಂತಿತಾವರ ಜೇಲ ಸೇರಿದ್ರು.
‘ಎದ್ದ ಕ್ಯಾಮಾರಿಲೇ ಬಂಗಾರದ ಕುರ್ಚಿಮ್ಯಾಲೇ ಕುಂತ ಹಲತಿಕ್ಕೊಳ್ಳೊರಿಂದ ಹಿಡದ, ವತ್ರ ವಂದಕ್ಕ ಬಂದ್ರ ಫಾರೆನಗೆ ಹೋಗಿ ಡಯಾಲಸಿಸ್ ಮಾಡಿಸಿಕೊಂಡ ಬರೋರ ತನಕ’ ಎಲ್ಲಾರು ಇವತ್ತ ಒಳಗ ಇದ್ದಾರ, ಕೋಟಿಗಟ್ಟಲೇ ನುಂಗಿದವರು ಇದ್ದಾರ, ಎಕರೆ ಗಟ್ಟಲೆ ಗುಳಂ ಮಾಡಿದವರು ಇದ್ದಾರ. ಹಂಗ ನೋಡಿದ್ರ ಪಕ್ಯಾ’ನೋಣಾ ತಿಂದ ಜಾತಿ ಕೆಡಸಗೊಂಡರು’ ಅಂತಾರಲ ಹಂಗ ಬರೇ ಒಂದ ನಾಲ್ಕ ಗುಂಟೆ ಸರ್ಕಾರಿ ಜಮೀನ ಮಾರ್ಕೊಂಡ ತಿಂದ ಸಿಕ್ಕೋಂಡಾಂವ. ಆದರ ಇವತ್ತ ‘ಕೋಣಾ ನುಂಗಿ ಕುಲಗೇಡಿಯಾದವರೂ’ ಭಾಳ ಮಂದಿ ಜೇಲನಾಗ ಖೋಲಿ ಹಿಡದಾರ.
ಮನ್ನೆ ಪಕ್ಯಾಗ ನೋಡಾಕ ಅವನ ‘ಕರೆ ಕೋಟ’ ಗೆಳ್ಯಾ ಪಚ್ಯಾ ಜೇಲಗೆ ಹೋಗಿದ್ದಾ. ಅವನ್ನ ನೋಡಿದವನ ಪಕ್ಯಾ
” ಯಪ್ಪಾ ದೇವರ , ಹೆಂಗರ ಮಾಡಿ ನನಗ ಜಾಮೀನ ಕೊಡಸೋ ಮಾರಾಯಾ, ದುಡ್ಡ ಎಷ್ಟರ ಖರ್ಚ ಆಗಲಿ, ಇಲ್ಲೇ ಜೀವಾ ಸಾಕ ಸಾಕಾಗಿ ಹೋಗೈತಿ ” ಅಂತ ಕೈಕಾಲ ಹಿಡಕೊಂಡಾ.
” ಲೇ ಎಲ್ಲಿ ಜಾಮೀನ ಮಗನ. ದುಡ್ಡ ಕೊಟ್ಟರ ಜಾಮೀನ ಕೊಡತಾರ ಅಂತ ತಿಳ್ಕೊಂಡಿ ಏನ? ಅದ ಅಷ್ಟ ಹಗರ ಇಲ್ಲ ” ಅಂತ ವಕೀಲಾ ತಿಳಸಾಕ ಹೋದಾ.
” ಯೇ ಕರೇ ಕೋಟ ,ಇಲ್ಲೆ ಊಟಾ ಹೊಟ್ಟಿಗೆ ಹತ್ತವಲ್ತು, …. ಇಲ್ಲಿದ ಉಂಡ ಬೈಲಕಡಿ ಹತ್ತೈತಿ,,,,,, ಬೇಲ್ ಕೊಡಸೋ ದೇವರ….. ಅದರಾಗ ಇಲ್ಲೇ ಪಾಳೆದಾಗ ನಿಂತ ತಡಕೊಳ್ಳಾಕೂ ಆಗಕಿಲ್ಲ. ಆ ಕಡೆ ಬಯಲಾಗ ಹೋಗಬೇಕಂದ್ರ ಕಂಪೌಂಡ ಬ್ಯಾರೆ ಸಿಕ್ಕಾಪಟ್ಟೆ ಎತ್ತರ ಐತಿ ”
“ಲೇ ನೀ ಕಂಪೌಂಡ ಹಾರಿ ಮತ್ತೊಂದ ಕೇಸ್ ಮಾಡ್ಕೋಬ್ಯಾಡಾ ಮಗನ, ಬೈಲಕಡಿ ಹತ್ತೈತಿ,,,,ಅಂದರ,, ಬೇಲ್ ಕೊಡತಾರ ಏನ್?, ಅಲ್ಲೇ ಮ್ಯಾಲೇ ದಿಲ್ಯಾಗ ನೋಡಿಯಿಲ್ಲ, ಕಿಡ್ನಿ ಕೆಟ್ಟಾವ ರೀಪೇರಿ ಮಾಡಸಾಕ ಫಾರೆನ್ ಹೋಗತೇನಿ ಬೇಲ್ ಕೊಡ್ರಿ ಅಂದ್ರ, ಇಲ್ಲೇ ಲೋಕಲನಾಗ ರಿಪೇರಿ ಮಾಡಿಸಿಗೋ ಅಂತ ಹೇಳ್ಯಾರ, ಇಕಡೆ ಕೆಳಗ ಬೆಂಗಳೂರಾಗ ನಮ್ಮ ಉಣ್ಣಿ ಟೋಪಿಗಿ ಧಣ್ಯಾರಗ ಹೊಟ್ಯಾಗ ಹುಣ್ಣ ಆಗೇತಿ ನಾ ಲಂಡನ್ ಗೆ ಹೋಗಬೇಕ ಅಂದ್ರ ಇಲ್ಲೇ ಬಾಂಬೆದಾಗ ‘ಖುರಾ’ನೋಡೊ ಡಾಕ್ಟರ್ ಗೆ ತೊರಸು ಅನ್ನಕತ್ತಾರ , ಇನ್ನ ಬಳ್ಳಾರಿ ಒಳಗ ಮಣ್ಣ ಮಾರಿ ದವರು ಹೇಂಗ ಜೇಲನಾಗ ಹಣ್ಣ ಆಗ್ಯಾರ ಅಂತ ನಿನಗ ಗೂತ್ತ ಐತಿ, ಹಂತಾವರಿಗೆ ಬೇಲ್ ಸಿಗವಲ್ತು, ಇನ್ನ ನಿನ್ನ ಬೈಲಕಡಿಗೆ ಹೇಂಗ ಸಿಗತೈತಲೇ”
“ಯಪ್ಪಾ ವಕೀಲಾ ಯಾವದರ ಡಾಕ್ಟರ್ ಕಡೆಯಿಂದ ನನಗ ಒಂದ ದೂಡ್ಡ ಜಡ್ಡ ಐತಿ ಅಂತ ಒಂದ ಸರ್ಟಿಫಿಕೇಟರ ಕೊಡಿಸಿ ದಾವಾಖಾನೆದಾಗರ ಹಾಕೋ ನಮ್ಮಪ್ಪಾ, ಪುಣ್ಯಾ ಬರ್ತೈತಿ ”
” ಲೇ ಹಂಗೇಲ್ಲಾ ನೀ ಹಳ್ಯಾಗ ವಾರಸಾ ಕೊಟ್ಟಂಗ ಸರ್ಟಿಫಿಕೇಟ ಕೊಟ್ಟರ ಮುಗದಹೋತ ನಿನ್ನ ಕೂಟ ಡಾಕ್ಟರನೂ ಇಲ್ಲೇ ಬರತಾನ. ಮದ್ಲ ಮನ್ನೆ ಜಡ್ಜ ಸಾಹೇಬರು ಬೇಕಾ ಬಿಟ್ಟಿ ಸರ್ಟಿಫಿಕೇಟ ಕೊಟ್ಟಿದ್ದಕ್ಕ ಡಾಕ್ಟರಗೆ ಬೇದಾರ. ನಾಳೆ ನಿಮ್ಮಂತಾವರಿಗೆ ಬೇಲ್ ಕೇಳಾಕ ಹೋದರ ನಮ್ಮಂತಾ ವಕೀಲರಿಗೂ ಒಳಗ ಹಾಕಿದರೂ ಹಾಕಿದರ ಮತ್ತ ಹೇಳಾಕ ಬರಂಗಿಲ್ಲಾ. ಮನ್ನೇ ನೋಡಿದಿಲ್ಲ, ’ಇವರು ಪಾರ್ಲಿಮೆಂಟನಾಗ ಓಟ ಹಾಕಾಕ ಲಂಚಾ ಕೊಟ್ಟಾರೂ’ ಅಂತ ಕಂಪ್ಲೇಟ ಕೊಟ್ಟವರನ ಒಳಗ ಹಾಕ್ಯಾರ, ಏನ್ಮಾಡತಿ”
” ಯಪ್ಪಾ ವಕೀಲಾ ಏನರ ಮಾಡ ….ಇಲ್ಲೆ ಉಂಡ ಬೈಲಕಡಿ ಹತ್ತೈತಿ….. ಬೇಲ್ ಕೊಡಸೋ “.
” ಯಪ್ಪ ಇಲ್ಲಾ, ಯವ್ವ ಇಲ್ಲಾ….ನಮ್ಮ ಯ.ಪ್ಪಾ.ರಗ ನಿನ್ನೇ ಬೇಲ್ ಸಿಗಲಿಲ್ಲಾ ಇನ್ನ ನೀ ಯಾವಲೇ….ದೊಡ್ಡವರ ತೆಪ್ಪಗ ಬಾಯಿ ಮುಚಗೋಂಡ ಒಳಗ ಹೊಂಟಾರ ನೀ ಸುಮ್ಮ ಗಪ್ಪ್ ಕುಂದರ”
ಆದ್ರ ಒಂದ ಅಂತೂ ಖರೆ ಇವತ್ತ ಹೆಂತೀತಾವರ ತಾವ ಮಾಡಿದ್ದ ತಪ್ಪಿಗೆ ಜೇಲ್ ಸೇರ್ಯಾರ. ನಾವು ಕನಸನಾಗೂ ಅನಕೊಂಡಿದ್ದಿಲ್ಲಾ ಹೀಂತಾವರೂ ಒಳಗ ಹೋಗ್ತಾರ ಅಂತ. ಈ ದೇಶಾ ಅಂದರ ಅವರಪ್ಪನ ಮನಿ ಆಸ್ತಿ ಅಂತ ತೀಳ್ಕೋಂಡ ತಿಂದ ತೇಗಿದವರೆಲ್ಲಾ ಅಜೀರ್ಣಾಗಿ ಈಗ ಜೇಲ್ ನಾಗ ವಾಂತಿ, ಬಯಲಕಡಿ ಮಾಡಕತ್ತಾರ. ಉಳದದ್ದ ಇನ್ನೋಂದಿಷ್ಟ ಗಿರಾಕಿನೂ ಇವತ್ತಿಲ್ಲಾ ನಾಳೆ ಒಳಗ ಹೋಗತಾವ. ಪಾಪ, ಹೀಂತಾವರಿಗೆಲ್ಲಾ ಜೇಲನಾಗಿನ ಊಟಾ ಹೊಟ್ಟಿಗೆ ಹತ್ತಿರಾಕ್ಕಿಲ್ಲಾ, ಆದ್ರ ಎನ್ ಮಾಡೋದು ‘ಮಾಡಿದ್ದ ಉಣ್ಣೋ’ ಮಾರಾಯ…..ಸುಮ್ಮನ ಬಾಯಿ ಮುಚಗೋಂಡ ತಿನ್ನಬೇಕ ಅಷ್ಟ.
ಯಾಕ ಸರ್ಕಾರದವರು ಜೇಲನ್ಯಾಗ ಇರೋವರಿಗೂ ‘ಬಿಸಿ ಊಟದ’ ಯೋಜನೆ ಲಾಗೂ ಮಾಡಬಾರದು ?ಹೇಂಗಿದ್ರೂ ಸರ್ಕಾರನೂ ನಮ್ಮ ಯಪ್ಪಾರದ ಐತಿ. ಪಾಪ, ಅವರ ಇಷ್ಟ ದಿವಸ ತಿಂದಿದ್ದ ಎಲ್ಲಾ ಬೈಲಕಡ್ಯಾಗ ಹೋದರ ಹೇಂಗ ಮತ್ತ.