ಇಬ್ಬರ ಗಂಡಂದರ ಆದಮ್ಯಾಲೆ ಒಬ್ಬಾಕಿ ಹೆಂಡತಿ

(ಸೆಪ್ಟೇಂಬರ್ 10, world suicide prevention day ನಿಮಿತ್ತ ಬರದ ಲೇಖನ)
ಇದೇನ ‘ಇಬ್ಬರ ಗಂಡಂದರಾದ ಮ್ಯಾಲೆ ಒಬ್ಬಕಿ ಹೆಂಡತಿ’? ಗಂಡಂದರ ಯಾಕ ಮೊದ್ಲ , ಹೆಂಡ್ತಿ ಯಾಕ ಅಲ್ಲಾ? ಇದು ಹೆಣ್ಣಮಕ್ಕಳಿಗೆ ಅನ್ಯಾಯ ಅಂತ ಅನಬ್ಯಾಡರಿ. ನಾ ಹೇಳಿದ್ದು ನಮ್ಮ ದೇಶದಾಗ ಇಬ್ಬರು ಗಂಡಂದರ ಆತ್ಮಹತ್ಯೆ ಮಾಡ್ಕೋಂಡ ಮ್ಯಾಲೆ ಒಬ್ಬಾಕಿ ಹೆಂಡತಿ ಆತ್ಮಹತ್ಯೆ ಮಾಡ್ಕೋತಾಳ ಅಂತ.
ಹಂಗ ನಮ್ಮ ದೇಶದಾಗ ಪ್ರತಿ ತಾಸಿಗೆ ಹದಿನೈದ ಮಂದಿ ಆತ್ಮಹತ್ಯೆ ಮಾಡ್ಕೊಂಡ ಸಾಯಿತಾರ. ಅದರಾಗ ಹತ್ತ ಮಂದಿ ಮದುವಿ ಆದವರ ಇರತಾರಂತ, ಇನ್ನ ಈ ಮದುವಿ ಆದವರ ಪೈಕಿ ಹತ್ತ ನಿಮಿಷಕ್ಕ ಒಬ್ಬ ಗಂಡ ಆತ್ಮಹತ್ಯೆ ಮಾಡ್ಕೊಂಡ ಸಾಯಿತಾನ. ಅಲ್ಲಾ ಹಂಗ ಗಂಡಸರಿಗಂತೂ ಮದುವಿ ಆಗೋದ ಅಂದರ ಅರ್ಧಾ ಆತ್ಮಹತ್ಯೆ ಮಾಡ್ಕೊಂಡಂಗ ಆ ಮಾತ ಬ್ಯಾರೆ ಆದರು ನಮ್ಮ ದೇಶದಾಗ ಗಂಡಾ ಅನ್ನೋ ಪ್ರಾಣಿ ಹೆಂಡತಿ ಕಾಟ ತಾಳಲಾರದ ಹತ್ತ ನಿಮಿಷಕ್ಕ ಒಬ್ಬಬ್ಬರಂತ ಆತ್ಮಹತ್ಯೆ ಮಾಡ್ಕೋತಾನ ಅಂದರ ಅಂವಾ ಹೆಂಡತಿ ಕೈಯಾಗ ಸಿಕ್ಕ ಎಷ್ಟ ವಿಲಿ-ವಿಲಿ ಒದ್ದಾಡತಿರಬೇಕು ನೀವ ವಿಚಾರ ಮಾಡ್ರಿ. ಇನ್ನ ಹಂಗ ಇಬ್ಬರ ಗಂಡಂದರ ಗೊಟಕ ಅಂದದ್ದ ಖಾತ್ರಿ ಆದ ಮ್ಯಾಲೆ ಒಬ್ಬಕಿ ಹೆಂಡತಿ ಆತ್ಮಹತ್ಯೆ ಮಾಡ್ಕೋತಾಳ. ಅಂದರ ಪ್ರತಿ ಇಪ್ಪತ್ತ ನಿಮಿಷಕ್ಕ ಒಬ್ಬಾಕಿ ಹೆಂಡತಿ ನಮ್ಮ ದೇಶದಾಗ ಆತ್ಮಹತ್ಯೆ ಮಾಡ್ಕೋತಾಳ.
ಇದೇನಾತಲೇ ಇವಂಗ ಮುಂಜ ಮುಂಜಾನೆ ಎದ್ದ ಓದೋರಿಗೆ ಹೆಂಡ್ತಿಮ್ಯಾಲೆ, ಜೀವನದಮ್ಯಾಲೆ ಜಿಗೂಪ್ಸೆ ಬರೋಹಂಗ ಎಲ್ಲಾ ಬಿಟ್ಟ ಆತ್ಮಹತ್ಯೆ ಬಗ್ಗೆ ಕೊರಿಲಿಕತ್ತಾನಲಾ ಅಂತ ಅನಬ್ಯಾಡರಿ. ನಿನ್ನೆ ಸೆಪ್ಟೇಂಬರ್ 10ಕ್ಕ world suicide prevention day ಇತ್ತು, ಹಿಂಗಾಗಿ ವರ್ಷಕ್ಕೊಮ್ಮೆರ ಎಷ್ಟ ಮಂದಿ ಆತ್ಮಹತ್ಯೆ ಮಾಡ್ಕೋತಾರ, ಯಾಕ ಮಾಡ್ಕೋತಾರ ಅಂತ ವಿಚಾರ ಮಾಡಬೇಕು ಅಂತ ಈ ವಿಷಯ ತಗದೆ ಇಷ್ಟ. ಅಲ್ಲಾ ಸ್ಯುಸೈಡ ಪ್ರಿವೇನ್ಶನ್ ಡೇ ದಿವಸನೂ ಜಗತ್ತಿನಾಗ ಸಾವಿರಾರ ಮಂದಿ ಆತ್ಮಹತ್ಯೆ ಮಾಡ್ಕೊಂಡರಂತ ಏನ್ಮಾಡ್ತೀರಿ?
ನಮ್ಮ ಜಗತ್ತಿನಾಗ 40 ಸೆಕೆಂಡಗೆ ಒಬ್ಬರಂತ ದಿವಸಕ್ಕ ಮಿನಿಮಮ್ ಎರಡ-ಮೂರ ಸಾವಿರ ಮಂದಿ ಆತ್ಮಹತ್ಯೆ ಮಾಡ್ಕೋತಾರ. ವರ್ಷಕ್ಕ ಒಂದ ಮಿಲಿಯನ್ ಮಂದಿ ಮ್ಯಾಲೆ ಹೋಗೊದು ಹಿಂಗ. ಈ ಸ್ಟ್ಯಾಟಿಸ್ಟಿಕ್ಸ್ ನೋಡಿದರ ನಾವ ಗಾಬರಿ ಆಗಿ ಆತ್ಮಹತ್ಯೆ ಮಾಡ್ಕೋಬೇಕು ಹಂಗ ಅದ ಬಿಡ್ರಿ.
ಇದನ್ನೇಲ್ಲಾ ನೋಡಿ ಅಮೇರಿಕಾದವರು ಹೋದವಾರ National suicide prevention week ಅಂತ ಆಚರಿಸಿದರು.
ನಾ ಅವರಿಗೆ “ಅಲ್ಲಾ, ನೀವು ಈ ನ್ಯಾಶನಲ್ ಸ್ಯುಸೈಡ ಪ್ರಿವೆನ್ಶನ್ ವಾರ ಅಂತ ಆಚರಣೆ ಮಾಡಲಿಕತ್ತೀರಲಾ, ಈ ವಾರ ನೀವ ಯಾರು ಆತ್ಮಹತ್ಯೆ ಮಾಡ್ಕೋಳಂಗಿಲ್ಲೇನ?” ಅಂತ ಕೇಳಿದೆ.
“ಇಲ್ಲಾ ಹಂಗೇನಿಲ್ಲಾ, ಈ ವಾರ ನಾವು ಯಾರು ಮದುವಿನ ಮಾಡ್ಕೋಳಂಗಿಲ್ಲಾ, ಈ ವಾರ ಪೂರ್ತಿ ಗಂಡಂದರಿಗೆ ಆತ್ಮಹತ್ಯೆ ಬಗ್ಗೆ ಪ್ರಿಕಾಶನ್ ಕೊಡ್ತೇವಿ, ಡಿಪ್ರೆಶನ್ ಕ್ಯಾಂಪೇನ್ ಮಾಡಿ ಅವರಿಗೆ ಧೈರ್ಯ ತುಂಬತೇವಿ. ಹಂಗ ಇಷ್ಟೇಲ್ಲಾ ತಿಳಿಸಿ ಹೇಳಿದರೂ ‘ನಂಗ ಹೆಂಡತಿ ಕಾಟ ತಾಳಲಿಕ್ಕೆ ಆಗಂಗಿಲ್ಲಾ ನಾ ಆತ್ಮಹತ್ಯೆ ಮಾಡ್ಕೋಂಡ ತೀರತೇನಿ’ ಅನ್ನೋರಿಗೆ ಆತ್ಮಹತ್ಯೆ ಮಾಡ್ಕೋಳಿಕ್ಕೆ ಅಸಿಸ್ಟ್ ಮಾಡ್ತೇವಿ” ಅಂದರು.
ನಾ ಆತ್ಮಹತ್ಯೆ ಮಾಡ್ಕೋಳಿಕ್ಕೆ ಅಸಿಸ್ಟ್ ಮಾಡ್ತಾರ ಅಂದ ಕೂಡಲೇ ಗಾಬರಿ ಆದೆ. ಇವರೇನ ಅಮೇರಿಕಾದವರಪಾ, ಸ್ವಂತ ಆತ್ಮಹತ್ಯೆ ಮಾಡ್ಕೋಳಿಕ್ಕೂ ಬರಂಗಿಲ್ಲೇನ. ಅದಕ್ಕೂ ಅಸಿಸ್ಟನ್ಸ ತೊಗೊತಾರ ಅಂದ್ರ ಹೆಂಗ, ನಾಳೆ ಎಲ್ಲರ ಅದನ್ನೂ ನಮ್ಮ ದೇಶದವರಿಗೆ ಔಟಸೋರ್ಸ್ ಮಾಡಿ ಗಿಡ್ಯಾರ ಅಂತ ಹೆದರಿಕೆ ಬರಲಿಕತ್ತು.
ಇದು ಖರೇನ ಮತ್ತ, ಅಮೆರಿಕಾದ ಕೆಲವಂದ ರಾಜ್ಯದಾಗ physician assisted suicide ಲಿಗಲ್ ಅದ.
ಅಲ್ಲಾ ಹಂಗ ದಿವಸಾ ನಮಗು ನಮ್ಮ ಲಿಗಲ್ ಹೆಂಡತಿ ಕಾಟ ಕೊಟ್ಟ ಕೊಟ್ಟ ಆತ್ಮಹತ್ಯೆ ಮಾಡ್ಕೋಳಿಕ್ಕೆ ಅಸಿಸ್ಟ್ ಮಾಡತಿರತಾಳ ಬಿಡ್ರಿ. ಆದರ ಇದ ಹೊರಗಿನ ಮಂದಿಗೆ ಗೊತ್ತಾಗಂಗಿಲ್ಲಾ, ಗಂಡಂದರ ಜೀವಂತ ಇದ್ದಾಗ ಯಾರು ಇದರ ಬಗ್ಗೆ ಮಾತಡಂಗಿಲ್ಲರಿ. ಸತ್ತ ಮ್ಯಾಲೆ ಮಾತಾಡಸಲಿಕ್ಕೆ ಬಂದಾಗ ಅಂತಾರ “ಪಾಪ, ಹೆಂಡತಿ ಕಾಟಕ್ಕ ಊರಲ ಹಾಕ್ಕೊಂಡ ಸತ್ತಾ” ಅಂತ. ಆದರ ಅದು ಆತ್ಮಹತ್ಯೆ ಅಲ್ಲಾ ಮರ್ಡರ್, ಹೆಂಡ್ತೀನ್ ಮಾಡಸಿದ್ದ ಅಂತ ಯಾರಿಗೂ ಗೊತ್ತಾಗಂಗಿಲ್ಲಾ.
ಅದರಾಗ ನಮ್ಮ ಹಣೇಬಾರಕ್ಕ ನಮ್ಮ ದೇಶದಾಗ ಮರ್ಸಿ ಕಿಲ್ಲಿಂಗ್ ಬ್ಯಾರೆ ನಡಿಯಂಗಿಲ್ಲಾ. ಇಲ್ಲಾಂದರ ನಾವು ‘ಹೆಂಡತಿ ಕಾಟ ಜಾಸ್ತಿ ಆಗೇದ ನಮ್ಮನ್ನ ಕೊಂದ ಬಿಡರಿ’ ಅಂತ ಸರ್ಕಾರಕ್ಕ ಅರ್ಜಿನರ ಕೊಡಬಹುದಿತ್ತ. ಅದ ಏನೋ ಹೇಳ್ತಾರಲಾ ಎಲ್ಲಾದಕ್ಕೂ ಪಡದ ಬರಬೇಕರಿ.
ಅನ್ನಂಗ ಇನ್ನೊಂದ ಹೇಳೋದ ಮರತೆ ಮೊನ್ನೆ ಇಂಗ್ಲೆಂಡ ಒಳಗ ಒಂದ ಸಾಲ್ಯಾಗ ಟೀಚರ ಮಕ್ಕಳಿಗೆ ನೀವ suicide note ಬರಕೊಂಡ ಬರ್ರಿ ಅಂತ ಹೋಮ್ ವರ್ಕ ಕೊಟ್ಟಿದ್ದರಂತ,ಎನ್ಮಾಡ್ತೀರಿ?
ಅಲ್ಲಾ ನಾಳೆ ಯಾರರ ಸ್ಯುಸೈಡ್ ನೋಟ್ ಬರಿಲಿಕ್ಕೆ ಬರಂಗಿಲ್ಲಾಂತ ಆತ್ಮಹತ್ಯೆ ಮಾಡ್ಕೋಳೊದ ಬಿಟ್ಟ ಗಿಟ್ಟಾರಂತ ಸಣ್ಣ ಹುಡುಗರ ಇರತನ ಸಾಲ್ಯಾಗ ಆತ್ಮಹತ್ಯೆ ಚೀಟಿ ಹೆಂಗ ಬರೀಯೋದ ಅಂತ ಕಲಸೊ ವಿಚಾರ ಇತ್ತೋ ಏನೋ ಅವರದು.
ಇರಲಿ, ಏನೋ ಇದು ಸ್ಯುಸೈಡ ಪ್ರಿವೆನ್ಶನ್ ವೀಕ್ ಅಂತ ಇಷ್ಟೇಲ್ಲಾ ಪುರಾಣ ಹೇಳ್ಬೆಕಾತು. ನೀವೇನ ಬೇಜಾರ ಆಗಬ್ಯಾಡರಿ.
ಹಂಗ ಗಂಡಸರು, ಅದರಾಗ ಗಂಡಂದರು ಹೆಂಡತಿಗೆ ಹೆದರಿ ‘ಅವನೌನ ಸಾಕಾತಪಾ ಜೀವನಾ’ ಅಂತ ನಿರಾಶ ಆಗಬಾರದು. suicide is husband’s way of telling wife ” you cant kill me, I Quit” ಅನ್ನೋದು ತಪ್ಪು.
more than one soul dies in a suicide ನೆನಪಿಡ್ರಿ.
ಒಮ್ಮೆ ಲಗ್ನಾ ಮಾಡ್ಕೋಂಡೇವಿ ಅಂದ ಮ್ಯಾಲೆ “ಈಸಬೇಕು, ಇದ್ದು ಜಯಿಸಬೇಕು. ಹೆಂಡತಿ ಜೊತಿ ಸಂಸಾರದಾಗ ಇದ್ದು ಜಯಿಸಬೇಕು.”

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ