(mother-in-law day ನಿಮಿತ್ತ ಬರೆದ ಲೇಖನ)
ಅತ್ತಿಗೊಂದ ಕಾಲ,ಸೊಸಿಗೊಂದ ಕಾಲ ಅಂತಿದ್ದರಲಾ ಈಗ ಆ ಕಾಲ ಹೋತ. ಈಗೇನಿದ್ದರು ಅತ್ತಿಗೊಂದs ಕಾಲ. ಇನ್ನ ಅಕಿ ಮಗಳನ ಕಟಗೊಂಡ ಅಕಿ ಕೈಯಾಗ ಸಿಕ್ಕ ಸಾಯೋದ ಅಳಿಯಾಂದ ಕಾಲ. ಆ ಅಳಿಯಾ ಅನ್ನೋವಾ ಇವರಿಬ್ಬರ ಕೈಯಾಗ ಸಿಕ್ಕ ದುಡದ ದುಡದ ಕತ್ತೆ ಆಗ್ಯಾನ ಹಿಂಗಾಗಿ ಇವತ್ತ ‘ಅತ್ತೆ’ ಕಾಲ ಅಂದರ ಅಳಿಯಾಗ ‘ಕತ್ತೆ’ ಕಾಲ.
ಅಲ್ಲಾ, ಒಂದ ಕಾಲದಾಗ ಅಳಿಯಾ ಅಂದರ ದೇವರ ಇದ್ದಂಗ ಅಂತ ವರ್ಷಕ್ಕೊಮ್ಮೆ ಅತ್ತೆಂದರ ಅಳಿಯಾಂದ ಪಾದ ಪೂಜೆ ಮಾಡ್ತಿದ್ದರು. ಆದರ ಇತ್ತೀಚಿಗೆ ಅಳಿಯಾ ಅಂದರ ಏನೂ ಕಿಮ್ಮತ್ತಿಲ್ಲದಂಗ ಆಗಿ ಹೊಗೇದ, ಕಟಗೊಂಡ ಹೆಂಡತಿ ಇಷ್ಟ ಅಲ್ಲಾ ಅವರವ್ವನೂ ಅಳಿಯಾಗ ‘ಅಂವಾ- ಇಂವಾ’ ಅಂತ ಮಾತಡ್ತಾಳ. ಅಲ್ಲಾ ವಯಸ್ಸಿನಾಗ ಸಣ್ಣವ ಇದ್ದರು ಅಳಿಯಾ, ಅಳಿಯಾನ ಅಲಾ?
ಅದರಾಗ ಯಾವಾಗ ಕನ್ಯಾಕ್ಕ ಬರಗಾಲ ಬಂದ ವರಗಳು ಕಂಡೇನೋ ಇಲ್ಲೊ ಅನ್ನೊರಂಗ ಇದ್ದ ಬಿದ್ದ ಒಂದ್ಯಾರಡ ಕನ್ಯಾಕ್ಕ ಪಾಂಡವರಗತೆ ಐದ-ಐದ ಮಂದಿ ಮುಕರಲಿಕತ್ತರ ನೋಡ್ರಿ ಆವಾಗಿಂದ ಈ ಕನ್ಯಾಗೊಳಿಗೆ ಇಷ್ಟ ಅಲ್ಲಾ, ಆ ಕನ್ಯಾ ಹಡದೊಕಿಗೂ ಭಾಳ ಡಿಮಾಂಡ ಬಂದ ಬಿಟ್ಟದ. ಈಗ ಏನಿದ್ರು ಮೊದ್ಲ ವರಾ ಅತ್ತಿಗೆ ಪಾಸ ಆಗಬೇಕರಿಪಾ, ಅಕಿಗೆ ಪಾಸ ಆದರ ಅಕಿ ಮುಂದ ತನ್ನ ಮಗಳಿಗೆ
“ಹೆಂಗ? ಅಡ್ಡಿಯಿಲ್ಲೇನ ಆ ಹುಬ್ಬಳ್ಳಿ ಹುಡುಗಾ, ನೋಡ್ಲಿಕ್ಕೆ ದುಂಡ-ದುಂಡಗ, ಸೌಮ್ಯ ಇದ್ದಾನ. ಹೇಳಿದಂಗ ಕೇಳ್ಕೊಂಡ ಬಿದ್ದಿರತಾನ ಹೂಂ ಅಂತೀ ಏನ್ ನೋಡ” ಅಂತ ಹೇಳಿದ ಮ್ಯಾಲೆ ಮುಂದ ಮಗಳ ಹೂಂ ಅಂತಾಳ.
ಮೊದ್ಲ ಕನ್ಯಾದ ಜಾತಕದಾಗ ಅತ್ತಿ ಇಲ್ಲದ ಮನಿ, ಮಾವ ಇಲ್ಲದ ಮನಿ ಅಂತೇಲ್ಲಾ ಇರತಿದ್ದವು. ಹಂಗ ಗಂಡ ಹುಡುಗುರು ನಮ್ಮ ಕುಂಡ್ಲ್ಯಾಗ ಅತ್ತಿ ಇಲ್ಲದ ಮನಿ ಅದ ಅಂತ ಹೇಳಿ ಹಂತಾ ಹುಡಗಿ ಹುಡುಕಿ ಲಗ್ನಾ ಮಾಡ್ಕೋಳೊದ ಭಾಳ ಶ್ರೇಷ್ಠ ಖರೆ, ಆದರ ಇಲ್ಲೆ ಮೊದ್ಲ ಕನ್ಯಾ ಸಿಗೋದ ತ್ರಾಸ ಆಗೇದ, ಇನ್ನ ಹಿಂತಾದರಾಗ ಒಂದ ಕನ್ಯಾ ಅದ ಅಂತ ಗೊತ್ತಾದರ ಮುಗದ ಹೋತ, ಅವರವ್ವ ಇದ್ದರರ ಏನಾತ ತೊಗೊ ಅಂತ ಆ ಕನ್ಯಾ ಫಿಕ್ಸ್ ಮಾಡ್ಕೊಂಡ ಅಕಿನ್ನ, ಅಕಿ ಜೊತಿ ಅವರವ್ವನ್ನ ಇಬ್ಬರನು ತಲಿ ಮ್ಯಾಲೆ ಕೂಡಿಸಿಕೊಂಡ ಅಡ್ಯಾಡ ಬಿಡ್ತೇವಿ.
ಅಲ್ಲಾ ಈಗ ಎಲ್ಲಾ ಬಿಟ್ಟ ಒಮ್ಮಿಂದೊಮ್ಮಿಲೆ ಅತ್ತಿ ಮ್ಯಾಲೆ ಯಾಕ ಬಂತಪಾ ವಿಷಯ ಅಂದರ ಇವತ್ತ mother-in-law day, ಅಂದರ ‘ಅತ್ತೆ ದಿವಸ’. ಹಂಗ ಅಂತ ಹೇಳಿ ನೀವೇಲ್ಲರ ಜೀವಂತ ಇದ್ದ ಅತ್ತಿ ಫೋಟಕ್ಕ ಮಾಲಿ ಹಾಕಿ, ಎರಡ ಉದಿನ ಕಡ್ಡಿ ಹಚ್ಚಿ-ಗಿಚಿರಿ. ಈಗ ನಾ ಹೇಳ್ತಿರೋದ ಜೀವಂತ ಇರೋ ಅತ್ತೆ ದಿವಸಾ. ಹಂಗ ವರ್ಷಕ್ಕೊಮ್ಮೆರ ಹೆಣ್ಣ ಹಡದ ನಮ್ಮ ಕೊರಳಿಗೆ ಕಟ್ಟಿದ್ದ ಪುಣ್ಯಾತಗಿತ್ತೀನ್ನ ನೆನಸಬೇಕು ಅಂತ ಮಾಡಿರೋ ಸಂಪ್ರದಾಯ. ಅಲ್ಲಾ ಹಂಗ ನಮಗ ಅತ್ತಿನ್ನ ಅಷ್ಟ ಸರಳ ಮರಿಲಿಕ್ಕೆ ಆಗಂಗಿಲ್ಲಾ, ಅದಕ್ಕ ಅಕಿ ಮಗಳ ಅವಕಾಶನೂ ಕೊಡಂಗಿಲ್ಲಾ. ದಿವಸಾ ಹೆಂಡತಿ ಜೊತಿ ಜಗಳಾಡಬೇಕಾರರ ನಾವ ಅಕಿಗೆ ‘ಅವನೌನ, ಯಾರ ಹಡದಾರಲೇ ನಿನಗ’ ಅಂತ ಅಂದ ನಮ್ಮ ಅತ್ತಿನ್ನ ನೆನಸೆ-ನೆನಸ್ತೇವಿ.
ಒಂದ ಕಾಲದಾಗ ‘ಜಾಮಾತ ದಶಮಮ್ ಗ್ರಹಮ್!’ ಅಂತಿದ್ರು, ಅಂದರ ಅಳಿಯಾ ಹತ್ತನೇ ಗ್ರಹ ಇದ್ದಂಗ, ಒಂಬತ್ತ ಗ್ರಹಾನೂ ಸಂಭಾಳಸಬಹುದು ಆದರ ಈ ಹತ್ತನೆ ಗ್ರಹ ಹಿಡಿಯೋದ ತ್ರಾಸ ಅಂತ. ಆದರ ಅದು ಸುಳ್ಳ, ಯಾರೋ ಅತ್ತೆಂದರ ಅಳಿಯಾನ ಕಂಡರ ಆಗಲಾರದಕ್ಕ ಹೇಳಿದ್ದ. ನನಗಂತೂ ಈ ಹತ್ತನೇ ಗ್ರಹ ‘ಹೆಂಡತಿ’ ಇಲ್ಲಾ ‘ಅತ್ತಿ’ ಇಬ್ಬರಾಗ ಒಬ್ಬರು ಅಂತ ಗ್ಯಾರಂಟಿ ಅಗಿ ಬಿಟ್ಟದ.
ಈಗ ನೋಡ್ರಿ ಈ ಮದರ-ಇನ್-ಲಾ ಡೇ ಸಂಬಂಧ ನಮ್ಮ ಮನ್ಯಾಗ ಒಂದ ವಾರದಿಂದ ನನ್ನ ಹೆಂಡತಿ ಜೀವಾ ತಿಂದ ಒಂದ ಐದ ಸಾವಿರ ರೂಪಾಯಿ ಬಡದ ಅವರವ್ವಗ ರೇಶ್ಮಿ ಸೀರಿ ತಂದಾಳ,
” ಅಲ್ಲಲೇ ಮೊನ್ನೇರ ನಿಮ್ಮಪ್ಪನ ಅರವತ್ತ ವರ್ಷದ ಶಾಂತ್ಯಾಗ ಸೀರಿ ಉಡಸೇನಲಾ” ಅಂತ ನಾ ಅಂದರು ಕೇಳಲಿಲ್ಲಾ,
ಈಗ ಮದರ-ಇನ್-ಲಾ ಡೇ ಕ್ಕ ಏನರ ಕೊಡಬೇಕು ಅಂತ ಹಟಾ ಹಿಡದ ಸೀರಿ ತೊಗಂಡಾಳ.
“ಅಲ್ಲ, ಹಂಗರ ಮತ್ತ ನೀನೂ ನಿಮ್ಮ ಅತ್ತಿಗೆ ಏನರ ಕೊಡಬೇಕಲಾ” ಅಂತ ಕೇಳಿದರ
“ನಂದೇನ ದುಡಿಮಿಲ್ಲಾ, ದುಪ್ಪಡಿಲ್ಲಾ? ನೀವೇನ ನನಗ ಮನ್ಯಾಗ ಕೆಲಸಾ ಮಾಡಿದ್ದಕ್ಕ ಪಗಾರ ಕೊಡ್ತೀರೀನ?” ಅಂತಾಳ. ಏನ್ಮಾಡ್ತೀರಿ?
ಅದಕ ಹೇಳಿದ್ದ ಇನ್ನ ಮುಂದ ಲಗ್ನಾ ಮಾಡ್ಕೋಳೊರು ಅಕಸ್ಮಾತ ಅತ್ತಿ ಇದ್ದದ್ದ ಮನಿ ಹುಡಗಿ ಲಗ್ನಾ ಮಾಡ್ಕೊ ಪ್ರಸಂಗ ಬಂದರ ವಿಚಾರ ಮಾಡಿ ಮಾಡ್ಕೋರಿ. ಹಂಗ ಎಲ್ಲಾ ಅತ್ತೆಂದರು ಒಂದ ಥರಾ ಇರತಾರ ಅಂತೇನಿಲ್ಲಾ ಆದರ ಒಂದ ನೆನಪ ಇಡ್ರಿ ‘ಒಂದು ಅತ್ತೇರ ಛಲೋ ಇರತಾಳ ಇಲ್ಲಾ ಮಗಳರ ಛಲೋ ಇರತಾಳ’. ಹಂಗ ಅತ್ತೀ ಸ್ವಭಾವ ಛಲೋ ಅದ ಅಂತ ಅಕಿ ಮಗಳನ ಮಾಡ್ಕೋಂಡರ ಮಗಳ ಕೈಯಾಗ ಸಾಯಿತಿರಿ, ಇಲ್ಲಾ ಹುಡಗಿ ಛಲೋ ಇದ್ದಾಳ ಅವರವ್ವ ಹೆಂಗಿದ್ದರ ಏನ ಅಂತ ಮಾಡ್ಕೋಂಡರ ಮುಂದ ಅವರವ್ವನ ಕೈಯಾಗ ಸಿಕ್ಕೋತಿರಿ. ಒಟ್ಟ ಸಿಕ್ಕೋಳದ ಅಂತೂ ಖರೇನ. ಏನಮಾಡಲಿಕ್ಕೆ ಬರಂಗಿಲ್ಲಾ, ಕಾಲನ ಬದಲಾಗೇದ. ಅದಕ್ಕ ಮೊದ್ಲ್ ಹೇಳಿದೆ ಅಲ್ಲಾ ‘ಅತ್ತಿಗೊಂದ ಕಾಲ, ಅಕಿ ಮಗಳನ ಮಾಡ್ಕೊಂಡ ಅಳಿಯಾಗ ಕತ್ತಿ ಕಾಲ’ ಅಂತ, ಸುಮ್ಮನ ಅನುಭವಿಸಬೇಕು.
ಅಲ್ಲಾ, ಮತ್ತ ನಿಮ್ಮ ಅತ್ತೆಂದರಿಗೂ ‘ಮದರ-ಇನ್-ಲಾ ಡೇ’ದ್ದ ವಿಶ್ ಮಾಡಿಬಿಡರಿ, ಹಂಗ ಅತ್ತಿ ಖುಶ ಆದರ ಮಗಳು ಖುಶ ಆಗ್ತಾಳ.