ಮೊನ್ನೆ ಸಂಡೇ ಮಾರ್ಚ್ ೩ಕ್ಕ ನಮ್ಮಜ್ಜಿ ಜನ್ಮಶತಮಾನೋತ್ಸವ ಸಂಬಂಧ ಹುಬ್ಬಳ್ಳಿ ಒಳಗ ಚಿತ್ರಸಂತೆ ಇತ್ತ. ಏನ ಇವರಜ್ಜಿ ಅಷ್ಟ ಫೇಮಸ್ ಇದ್ಲೋ ಇಲ್ಲಾ ರವಿ ವರ್ಮನ ಅಬಚಿನೋ ಅಕಿ ಸಂಬಂಧ ಚಿತ್ರಸಂತೆ ಮಾಡಲಿಕ್ಕೆ ಅಂತ ಅನಬ್ಯಾಡರಿ. ನಮ್ಮಜ್ಜಿ ನಂಗಿಷ್ಟ ಅಜ್ಜಿ ಅಲ್ಲಾ, ಅಕಿ ಇಡಿ ಹುಬ್ಬಳ್ಳಿ ಮಂದಿಗೆ ಅಜ್ಜಿ. ನಮ್ಮಜ್ಜಿ – ಗಂಗುಬಾಯಿ ಹಾನಗಲ್. ಇನ್ನ ನಮ್ಮಜ್ಜಿ ಸಂಬಂಧ ಈ ಚಿತ್ರಸಂತೆ ಅಂತ ನಾನು ಇದರಾಗ ಭಾಗವಹಿಸಿದ್ದೆ.
ಹಂಗ ನಾ ಒಂದ ಎಂಟ-ಹತ್ತ ವರ್ಷದಿಂದ ಆವಾಗ ಇವಾಗ ತಲ್ಯಾಗ ಬಂದಾಗೊಮ್ಮೆ, ಹೆಂಡತಿ ತವರ ಮನಿಗೆ ಹೋದಾಗೊಮ್ಮೆ ಪೇಂಟಿಂಗ ಮಾಡಲಿಕ್ಕೆ ಹತ್ತಿದ್ದೆ. ಅವಂದ ೫೦-೬೦ ಪೇಂಟಿಂಗ ಆದಿದ್ದವು. ಅಲ್ಲಾ ೫೦-೬೦ ಪೇಂಟಿಂಗ ಅಂದರ ನನ್ನ ಹೆಂಡತಿ ಹನ್ನೇರಡ ವರ್ಷದಾಗ ಅಷ್ಟs ಸಲಾ ತವರ ಮನಿಗೆ ಹೋಗಿದ್ಲು ಅಂತೇನಲ್ಲಾ, ಅಕಿ ಪ್ರತಿ ಸಲಾ ತವರಮನಿಗೆ ಹೋದಾಗೊಮ್ಮೆ ನನಗ ಪೇಂಟಿಂಗ ಮಾಡಲಿಕ್ಕೆ ಆಗಿಲ್ಲಾ.
ನಾ ಮೊದ್ಲನೇ ಸಲಾ ಪೇಂಟಿಂಗ ಮಾಡಲಿಕ್ಕೆ ಬ್ರಶ್ ಹಿಡದದ್ದ ನನ್ನ ಹೆಂಡತಿ ಒಂದನೇದ ಕನ್ಸೀವ ಆದಮ್ಯಾಲೆ. ಹಂಗ ಅಕಿ ಕನ್ಸೀವ ಆದಮ್ಯಾಲೆ ನನ್ನ ತಲ್ಯಾಗ ಆರ್ಟ ಏನ ಕನ್ಸೀವ ಆಗಿದ್ದಿಲ್ಲಾ. ಸಣ್ಣಂವ ಇದ್ದಾಗ ಸಾಲ್ಯಾಗ ಛಂದ ಚಿತ್ರಾ ತಗಿತಿದ್ದೆ ಆದರ ಮುಂದ ಅದನ್ನ ಎಂದೂ ಸಿರಿಯಸ ತೊಗಂಡಿದ್ದಿಲ್ಲಾ. ಆಮ್ಯಾಲೆ ಸಂಸಾರದ ಗದ್ಲದಾಗ ಹಿಂತಾವಕ್ಕೇಲ್ಲಾ ಟೈಮರ ಎಲ್ಲೆ ಇರತದ ಹೇಳ್ರಿ.
ಯಾವಾಗ ಡಾಕ್ಟರ ನನ್ನ ಹೆಂಡತಿಗೆ ಒಂದ ಎರಡ ತಿಂಗಳ ಬೆಡ್ ರೆಸ್ಟ ಕೊಡರಿ ಅಂತ ಅಂದರು ಆವಾಗ ನಂಗ ಹೊತ್ತ ಹೋಗಲಾರದಂಗ ಆಗಿ ಸೈಡಿಗೆ ಪೇಂಟಿಂಗ ಶುರು ಹಚಗೊಂಡೆ. ಹಿಂಗ ಒಂದ್ಯಾರಡ ಪೇಂಟಿಂಗ ಮಾಡೋದರಾಗ ಹಿಡತ ಸಿಕ್ಕಂಗ ಆತ. ನಾ ‘when you got it, flaunt it’ ಅಂತ ನನ್ನ ಹೆಂಡತಿ ಸೀಮಂತದ ದಿವಸ ಮನ್ಯಾಗ ಸಣ್ಣ ಪೇಂಟಿಂಗ್ ಪ್ರದರ್ಶನಿ ಮಾಡೇ ಬಿಟ್ಟೆ. ಅಲ್ಲಿ ತನಕ ನಾ ಪೇಂಟಿಂಗ ಮಾಡ್ತೇನಿ ಅಂತ ಮಂದಿಗೆ ಗೊತ್ತ ಇದ್ದಿದ್ದಿಲ್ಲಾ ಹಿಂಗಾಗಿ ಎಲ್ಲಾರಿಗೂ ಆಶ್ಚರ್ಯ ಆತ.
ಬಂದೋರೆಲ್ಲಾ
“ಅಲಾ, ಮಗನ ಕದ್ದು ಮುಚ್ಚಿ ಭಾಳ ಕಲಾಕಾರ ಇದ್ದೀ ನೋಡ, ನಮಗ ಗೊತ್ತ ಇಲ್ಲಾ. ಆ ಕಲಾ ಏನೋ ಮುಚಗೊಳ್ಳಿಕ್ಕೆ ಬರಂಗಿಲ್ಲಾ ಎಲ್ಲಾರಿಗು ಗೊತ್ತಾತ ಇದ ನಮಗ ಗೊತ್ತ ಇದ್ದಿದ್ದಿಲ್ಲಾ” ಅಂತ ನನ್ನ ಹೆಂಡತಿ ಹೊಟ್ಟಿ ತೊರಿಸಿ ಅಂದರ.
ಮತ್ತೊಂದಿಬ್ಬರು “ಏ.. ಏನಲೇ ನೋಡಾಕ ಎರಡ ನಂಬರ ಫ್ಲ್ಯಾಟ ಪೇಂಟಿಂಗ ಬ್ರಶ್ ಇದ್ದಂಗ ಅದಿ, ಆದ್ರು ಭಾರಿ ಮಾಡಿ ಬಿಡ ಮಗನ” ಅಂದರು.ನಾ ಎಷ್ಟ amateur painter ಇದ್ದೇನೋ ಅಷ್ಟ amateur ಜನಾ, ಪಾಪ ಪೇಂಟಿಂಗ ಬಗ್ಗೆ ಭಾಳ ತಿಳ್ಕೊಂಡವರಲ್ಲಾ ಏನಲ್ಲಾ.
ನಾ ಹಂಗ ಆವಾಗ ಪೇಂಟಿಂಗ ಶುರು ಮಾಡಿದಂವಾ ವರ್ಷಕ್ಕ ಒಂದ ಹತ್ತ-ಇಪ್ಪತ್ತ ಪೇಂಟಿಂಗ ಮಾಡ್ಕೋತಿದ್ದೆ. ಇತ್ತೀಚಿಗೆ ಬರೇಯೋದ ಶುರು ಆದ ಮ್ಯಾಲೆ ಸ್ವಲ್ಪ ಪೇಂಟಿಂಗ ಕಡಿಮೆ ಆಗೇದ. ಅದರಾಗ ನಾ professional ಕಲಾಕಾರ ಅಲ್ಲಾ, ನಾ ಮಾಡೋದ ಪೊಸ್ಟರ ಕಲರ ಆನ್ ಪೇಪರ,ಅದು ನಿಸರ್ಗದ ಪೇಂಟಿಂಗ ಮಾತ್ರ. ಒಂಥರಾ amateur nature painter ಇದ್ದಂಗ. ಹಂಗ ನಂಗ ಛಲೋ ಅನಿಸಿದ್ದ ಪೇಂಟಿಂಗ್ಸ್ ನಾ ರೊಕ್ಕಾ ಬಡದ ಫ್ರೇಮ ಹಾಕಿಸಿ ಮನ್ಯಾಗ ಹಾಕತಿದ್ದೆ. ಆದರ ಇತ್ತೀಚಿಗೆ ಮನಿ ಮಾಲಕರ ಹಂಗ ಕಂಡ ಕಂಡಲ್ಲೆ ಮಳಿ ಹೊಡಿಬ್ಯಾಡರಿ ಅಂದ ಮ್ಯಾಲೆ ಬಿಟ್ಟೇನಿ. ಇನ್ನ ನಾ ಮಾಡಿದ್ದ ಪೇಂಟಿಂಗ ನಾ ಎಂದು ಮಾರಿಲ್ಲಾ. ಅಲ್ಲಾ ಯಾರು ತೊಗೊಂಡಿಲ್ಲಾ, ಯಾರು ಕೇಳಿಲ್ಲಾ ಅಂದರು ತಪ್ಪೇನಿಲ್ಲ ಬಿಡ್ರಿ. ಒಂದಿಷ್ಟ ಗಿಫ್ಟ ಕೊಟ್ಟದ್ದ ಬಿಟ್ಟರ ಉಳದಿದ್ವು ಅಲ್ಲೇ rackನಾಗ ಮನಿ clean ಮಾಡಬೇಕಾರ ಒಮ್ಮೆ ನನ್ನ ಹೆಂಡತಿ ಕಡೆ ಬಯಸ್ಗೋತಾವ.
ಹಂಗ ಹೋದ ಸರತೆ ಹುಬ್ಬಳ್ಳಿ ಚಿತ್ರಸಂತೆ ಇದ್ದಾಗ ನಾ ಭಾಗವಹಿಸಿದ್ದಿಲ್ಲಾ, ಬರೇ ನೋಡಲಿಕ್ಕೆ ಹೋಗಿದ್ದೆ. ಅವನ್ನ ನೋಡಿದ ಮ್ಯಾಲೆ ನಾನು ಭಾಗವಹಿಸಬೇಕಿತ್ತ ಅನಸಿತ್ತು. ಅಲ್ಲೆ professional paintersದ painting ನೋಡಿದರ ಅವರ ಮುಂದ ನನ್ನವು ಏನು ಅಲ್ಲ ಖರೆ, ಆದರು ನನ್ನ ಪೇಂಟಿಂಗ ನನ್ನವ. ನಾ ಹೆಂಗ ಮಾಡವಲ್ನಾಕ, ಹೆಂಡತಿ ತವರ ಮನಿಗೆ ಹೋದಾಗರ ಮಾಡವಲ್ನಾಕ. ಅದರ ಬಗ್ಗೆ ನನಗ ಹೆಮ್ಮೆ ಇದ್ದ ಅದ. ಅದಕ್ಕ ಈ ಸರತೆ ತಪ್ಪಸಲಾರದ ನಂದೊಂದ ಐವತ್ತ ಪೇಂಟಿಂಗ ತೊಗೊಂಡ ಹಿಂದಿನ ದಿವಸ ರಾತ್ರಿನ ಪುಟಪಾತ ಮ್ಯಾಲೆ ಟಾವೇಲ ಒಗದ ಜಗಾ ಹಿಡದಿದ್ದೆ. ಸಂಡೆ ಮುಂಜಾನೆ ಎದ್ದ ಅಲ್ಲೇ ಹೋಗಿ ಟೆಂಟ ಹೊಡದ ಬಿಟ್ಟೆ.
ಏನಿಲ್ಲದ ನಮ್ಮಂದಿ ಒಂದ ಸ್ವಲ್ಪ ಮುಗ್ಗಲಗೇಡಿ, ಅದರಾಗ ಸಂಡೆ ಬ್ಯಾರೆ, ಮ್ಯಾಲೆ ಪೇಂಟಿಂಗ ಪ್ರದರ್ಶನ ಹಿಂಗಾಗಿ ಮಂದಿ ಎದ್ದ ತಯಾರಾಗಿ ಬರೋದ ಲೇಟ ಆಗಲಿಕತ್ತ. ಮಂದಿ ಹೋಗಲಿ ಕಲಾವಿದರ ಸಹಿತ ಹನ್ನೊಂದ ಹೊಡದರು ೭-೮ ಮಂದಿ ಇದ್ದರು. ನಾ ಇದೇನಪಾ, ‘ನಾ ಪೇಂಟಿಂಗ ಇಟ್ಟೇನಿ’ ಅಂತ ಬ್ಯಾರೆ ಕಲಾವಿದರ ತಮ್ಮ ಪೇಂಟಿಂಗ ತರಲಿಲ್ಲೊ ಇಲ್ಲಾ ನಾ ಇಟ್ಟದ್ದಕ್ಕ ‘ಇದ ನಮ್ಮ ಲೇವೆಲ್ exhibition ಅಲ್ಲಾ’ ಅಂತ ಬರವಲ್ಲರೋ ಗೊತ್ತಾಗವಲ್ತಾಗಿತ್ತ.
ಹಂಗ ಲೇಟಾಗಿ ಎದ್ದ ಹಾಲು/ಮೊಸರು ತರಲಿಕ್ಕೆ ಬಂದವರು ಒಂದ ರೌಂಡ ನೋಡಿ ಆಮ್ಯಾಲೆ ಹಲ್ಲು ಮಾರಿ ತೊಳ್ಕೊಂಡ ನಮ್ಮ ಮನೆಯವರನ ಕರಕೊಂಡ ಬರತೇವಿ ಅಂತ ಅಂದ ಹೋದರು.
ಅದರಾಗ ಇನ್ನೊಂದ ಮಜಾ ಅಂದರ ಚಿತ್ರಸಂತೆ ಉದ್ಘಾಟನೆ ಗೆಸ್ಟ ಲಿಸ್ಟ ಒಳಗ ನಂದು ಹೆಸರಿತ್ತ, ಅದ ‘ಕುಟ್ಟವಲಕ್ಕಿ’ ಪ್ರಭಾವ. ಚಿತ್ರಸಂತೆಗೆ ನಂಗ ಸಾಹಿತಿ ಅಂತ ಗೆಸ್ಟ ಮಾಡಿದ್ದರು, ನಾ ನೋಡಿದರ ಅಲ್ಲೇ ರಸ್ತೆ ಮ್ಯಾಲೆ ನನ್ನ ಚಿತ್ರಕಲಾ ಪ್ರದರ್ಶನಕ್ಕ ಇಟ್ಟಿದ್ದೆ. ಇನ್ನ ಇರೋ ( ಬಂದಿರೋ) ೭-೮ ಮಂದಿ ಆರ್ಟಿಸ್ಟದ್ದ ಚಿತ್ರಸಂತೆ ಉದ್ಘಾಟನೆಗೆ ನನ್ನ ಹಿಡದ ಹನ್ನೇರಡ ಮಂದಿ ಗೆಸ್ಟ ಇದ್ದರು. ಒಟ್ಟ ಅಂತೂ ಇಂತು ಚಿತ್ರಸಂತೆ ಶುರು ಆತ. ಮುಂದ ಹಗರಕ ಪೇಂಟರ್ಸ್ ಬರಲಿಕತ್ತರು ನಂಗು ಸ್ವಲ್ಪ ಸಮಾಧಾನ ಆತ.
ಇತ್ತಲಾಗ ಸವಕಾಶ ಜನಾನು ಬರಲಿಕತ್ತರು. ಒಂದಿಷ್ಟ ಛಲೊ ಛಲೋ ಆರ್ಟಿಸ್ಟ ಬಂದರು. ಅವರ ವರ್ಕ ನೋಡಿದರ ನಾ ಅವರ ಮುಂದ ಇನ್ನು ಬಚ್ಚಾ ಅನಬೇಕ ಹಂಗ ಅವರದ ವರ್ಕ್ಸ ಇದ್ದವು. ಆದರ ನಮ್ಮ ಮಂದಿಗೆ ಪೇಂಟಿಂಗ ಅಂದರ ಫ್ರೆಂಚ್ & ಗ್ರೀಕ್ ಇದ್ದಂಗ ಬರೆ ನೋಡೊರು ‘ಭಾರಿ ಅದ’, ‘ಎಷ್ಟ ಇದಕ್ಕ’ ಅಂತ ಕೇಳಿ ರೈಟ ಅನ್ನೊರು. ಇದ ಹಂಗ ನಡದಿತ್ತ.
ನನ್ನ ಬಾಜುದವಂದ oil works ನೋಡಿ ಒಬ್ಬರ “ಎಷ್ಟಕ್ಕ ಕೊಡ್ತಿ” ಅಂತ ಕೇಳಿದರು. ಅವರು ಹದಿನೈದ ಸಾವಿರ ರೂಪಾಯಿ ಅಂದರ
“ಏ, ಎಲ್ಲಾ ಸೇರಿಸಿ ಅಲ್ಲಾ, ಇದ ಒಂದರದ ರೇಟ ಹೇಳ” ಅಂದರು. ಏನ್ಮಾಡ್ತೀರಿ?
ನನ್ನ ಕಡೆನು ಒಂದ ನಾಲ್ಕೈದ ಮಂದಿ ಬಂದರು, ನೋಡಿ ಅಡ್ಡಿಯಿಲ್ಲಾ ಅಂತ ಗೋಣ ಹಾಕಿ ಹೋದರು. ಮುಂದ ಒಂದ ಸ್ವಲ್ಪ ಹೊತ್ತಿಗೆ ಒಬ್ಬ ಯಜಮಾನ ಬಂದ ಮ್ಯಾಲೆ ಕೈಮಾಡಿ ಹಸಿರ ಕಾಡಿನ ಪೇಂಟಿಂಗ ತೊರಿಸಿ
“ಅದನ್ನ ಹೆಂಗ ಕೊಟ್ಟಿ ತಮ್ಮಾ” ಅಂದಾ. ಬಹುಶಃ ಅಂವಾ ಶನಿವಾರದ ಕೇಶ್ವಾಪುರ ಸಂತಿ ಅಂತ ರವಿವಾರ ಇತ್ತಲಾಗ ತಪ್ಪಿ ಬಂದಿದ್ದ ಕಾಣತದ, ನಾ
“ಸಾವಿರ ರೂಪಾಯಿ” ಅಂದೆ, ಅಂವಾ ನನ್ನ ಮಾರಿ ನೋಡಿ
“ಕೋಡೊದ ಹೇಳೊ ತಮ್ಮಾ” ಅಂದಾ
“ದಿಡ ಸಾವಿರಕ್ಕ ಎರಡ ತೊಗೊರಿ” ಅಂದೆ.
ಏ ಭಾಳ ತುಟ್ಟಿ ಆತ ಅಂತಾ ವಟಾ-ವಟಾ ಅನ್ಕೋತ ಮುಂದ ಹೊಂಟಾ, ನಾ ಮತ್ತ ಕರದ “ಏನ ಕೋಡ್ತೀರಿ” ಅಂದರು ಅಂವಾ “ನಿ ಭಾಳ ತುಟ್ಟಿ ಆದಿ ಬಿಡ” ಅಂತ ಹೋಗೆ ಬಿಟ್ಟಾ.
ಮುಂದ ಒಂದಿಬ್ಬರ ಎಜುಕೇಟಡ್ ಹಂಗ ಕಾಣೋ ಹೆಣ್ಣಮಕ್ಕಳ ಬಂದರು
“how much for that sunset?” ಅಂದರು, ನಾ ಸಾವಿರ ರೂಪಾಯಿ ಅಂದೆ.
“Oh! sunset is very costly, you dont have sunrise” ಅಂತ ಕೇಳಿ ಕಡಿಕೆ ಬ್ರಾಡ ವೇ ದಾಗ ನೂರ ರೂಪಾಯಕ್ಕ ಇದರಕಿಂತ ದೊಡ್ಡದ ಪೊಸ್ಟರ ಸಿಗತಾವ ಅಂತ ಗೊಣಗಿ ಹೋದರು.
‘ನಮ್ಮವ್ವಾ, ಭಾಳ ಶಾಣ್ಯಾಕಿ ಇದ್ದ ನೀ ದಾರಿ ಹಿಡಿ’ ಅಂತ ಕಳಸಿದೆ.
ಈಗ ಗೊತ್ತಾತಲ ನಮ್ಮ ಹುಬ್ಬಳ್ಳಿ ಜನಾ, ಅವರ ಲೇವೆಲ್, ಅವರ ಟೇಸ್ಟ ಹೆಂತಾದ ಹಂತ. ಹಿಂಗಾಗೆ ನಮ್ಮಂತಾ ಕಲಾವಿದರಿಗೆ ಹುಬ್ಬಳ್ಳ್ಯಾಗ survive ಆಗೋದ ಭಾಳ ತ್ರಾಸ ಆಗಿದ್ದ. paintingsದ್ದ, postersದ್ದ ಡಿಫರೆನ್ಸ್ ಗೊತ್ತಿರಲಾರದ ಜನಾ ಇದ್ದಾರ. ಏನ್ಮಾಡ್ತೀರಿ?
ಆದರು ಮಧ್ಯಾಹ್ನ ತನಕಾ ಮೂರ ಬಾಟಲಿ ಬಿಸ್ಲೇರಿ ಖಾಲಿ ಆದರೂ ಒಂದ ಬೋಣಗಿನೂ ಆಗಲಿಲ್ಲಾ.
ಇನ್ನ ನಮ್ಮ ದೋಸ್ತರ ಯಾರರ ಪಾಪ ಆಡ್ಯಾಂದ ಒಂದು ಪೇಂಟಿಂಗ ಮಾರಾಟ ಆಗಿಲ್ಲಾಂತ ಮರಗಿ ತೊಗೊತಾರ ಅಂದ್ರ ಯಾ ನನ್ನ ಮಗನೂ ಆ ಕಡೆ ಹಾಯಲಿಲ್ಲಾ. ಇನ್ನ ಫೇಸಬುಕ್ಕ್ ಫ್ರೇಂಡ್ಸ ಅಂತು ಫೇಸಬುಕ್ಕನಾಗ ಇಷ್ಟ. ಅಲ್ಲೇ ನನ್ನ paintings albumಗೆ ಲೈಕ ಆದಷ್ಟ ಮಂದಿ ನನ್ನ ಪೇಂಟಿಂಗ ತೊಗೊಳೊದ ಹೋತ ನೋಡಲಿಕ್ಕೂ ಬರಲಿಲ್ಲಾ. ಅದರಾಗ ಹುಬ್ಬಳ್ಳಿ facebook friends ಎಲ್ಲೆ ಫೇಸಬುಕ್ಕಿನಾಗ like ಮಾಡಿದರ ತೊಗೊಬೇಕಾಗ್ತದ ಅಂತ ಲೈಕ ಮಾಡಲಿಕ್ಕೂ ಹೋಗಲಿಲ್ಲಾ. ಏನ್ಮಾಡ್ತೀರಿ ಹಿಂತಾ ದೋಸ್ತರ ಇದ್ದರ. ಕುಡಿಲಿಕ್ಕೆ, ಪಾರ್ಟೀ ಮಾಡಲಿಕ್ಕೆ ಕೇಳರಿ ಅವನೌನ every weekendಗೆ ಎರೆಡೆರಡ ಸಾವಿರ ಖರ್ಚ ಮಾಡ್ತಾರ, ಹಿಂತಾ ಪುಣ್ಯಾದ ಕೆಲಸಕ್ಕ ಕೇಳ ಬ್ಯಾಡರಿ.
ಮುಂದ ಮತ್ತ ಅದ ಹಣೇಬರಹ ಮಂದಿ ಬರೋರು ”ಭಾಳ ಛಂದ್ ಮಾಡಿ, ಯದರಾಗ ಮಾಡಿ, ದೊಡ್ಡವು ಯಾಕ ಮಾಡಿಲ್ಲಾ” ಅಂತ ತಲಿ ತಿಂದ ಮುಂದ ಹೋಗೊರು. ಹಂತದರಾಗ ಒಬ್ಬಂವ ಶಿವಾನೋ/ಕೃಷ್ಣನೊ/ನಾರದನೋ ಗೊತ್ತ ಇಲ್ಲಾ ಒಟ್ಟ ದೇವಲೋಕದಿಂದ ಚಿತ್ರ ಸಂತೆ ನೋಡಲಿಕ್ಕೆ ಬಂದಾ. ಸೀದಾ ಪೇನಪಟ್ಟಿಗೆ ಬಾರಿಸಿಗೋತ ನನ್ನ ಕಡೆನ ಬಂದಾ. ನಂಗ ಮೊದ್ಲ ತಲಿಕೆಟ್ಟಿತ್ತ ಅದರಾಗ ಇಂವಾ ಹಾಡ ಹಾಡಿ ರೊಕ್ಕಾ ಕೇಳಿದಾ. ತೊಗೊ ಮಂದಿ ಮ್ಯಾಲಿನ ಸಿಟ್ಟ ತಗದ ಆ ದೇವರ ಮ್ಯಾಲೆ ಹಾಕಿ ‘ಏ, ನಂದ ಇಲ್ಲೆ ಬೋಣಗಿ ಆಗಿಲ್ಲಾ ನಿಂದೆಲ್ಲಿದ ಹಚ್ಚಿ ನಡಿ, ಮುಂದ ಹೋಗ’ ಅಂತ ಬೈದ ಕಳಸಿದೆ.
ನಾ ಬೈದದ್ದ ಖರೇನ ಖರೆ-ಖರೆ ದೇವರಿಗೆ ಕೇಳಸ್ತ ಕಾಣತದ ಒಬ್ಬ ಪುಣ್ಯಾತ್ಮರ ಬಂದ ಕಡಿಕೂ ಒಂದ ಪೇಂಟಿಂಗ ಖರೀದಿ ಮಾಡಿದರು. ಅದು ನಾ ಹೇಳಿದ್ದ ರೇಟಿಗೆ. ಒಟ್ಟ ಬೋಣಗಿ ಅಂತು ಆದಂಗ ಆತ.
ಅಷ್ಟರಾಗ ನನ್ನ ಹೆಂಡತಿ ಮಧ್ಯಾಹ್ನ ಮ್ಯಾಲೆ ಒಂದ ದೊಡ್ಡ ಕ್ಯಾರಿ ಬ್ಯಾಗ ಹಿಡಕೊಂಡ ಬಂದ್ಲು. ನಾ ಬುತ್ತಿ-ಗಿತ್ತಿ ಕಟಗೊಂಡ ಬಂದಿ ಏನಲೇ ಅಂತ ಕೇಳಿದರ.
“ನೀವೇನ ಇಲ್ಲಿ ಹೊಲದಾಗ ದುಡಿಲಿಕ್ಕೆ ಬಂದೀರ? ಇವು ಉಳದದ್ದ ಕುಟ್ಟವಲಕ್ಕಿ ಬುಕ್ಕ ಇಲ್ಲೇರ ಖರ್ಚ ಆದರ ಮನಿ ಸ್ವಚ್ಛ ಆಗತದ ಅಂತ ತಂದೇನಿ” ಅಂದ್ಲು. ಏನ್ಮಾಡ್ತೀರಿ? ಇಕಿ ಚಿತ್ರಸಂತೆ ಒಳಗ ಕುಟ್ಟವಲಕ್ಕಿ ಮಾರೊಕಿ.
‘ಲೇ, ಇದ ಕಿರಾಣಿ ಸಂತಿ ಅಲ್ಲಲೇ’ ಅಂತ ಹೇಳಿದರ ‘ಒಂದ ಪೇಂಟಿಂಗ ಜೊತಿ ಒಂದ ಬುಕ್ಕ ಕೊಟ್ಟ ಖಾಲಿ ಮಾಡರಿ, ಮನ್ಯಾಗ ಮುಗ್ಗ ವಾಸನಿ ಬರಲಿಕತ್ತಾವ’ ಅಂದ್ಲು.
ಆಮ್ಯಾಲೆ ಅಕಿಗೆ ನನ್ನ ಪೇಂಟಿಂಗ ಮಾರಾಟದ್ದ ಹೆಣೇಬರಹ ಗೊತ್ತಾದ ಮ್ಯಾಲೆ, ನಾ ಎಲ್ಲೆ ಮತ್ತ ಪೇಂಟಿಂಗ್ಸ್ ಹೊತಗೊಂಡ ವಾಪಸ ಮನಿಗೆ ತರತೇನಿ ಅಂತ ಹೆದರಿ
“೧೦%,,೨೦ % ಡಿಸ್ಕೌಂಟ ಅಂತ ಒದರಿ ೫೦% ತನಕಾ ಕೊಟ್ಟರೂ ಅಡ್ಡಿಯಿಲ್ಲಾ ಮಾರಿ ಬಿಡರಿ, ಆಟೋ ಭಾಡಗಿ ಮಧ್ಯಾಹ್ನದ ಊಟದ ಖರ್ಚ ಹೋದರ ಸಾಕ” ಅಂದ್ಲು. ಅಕಿ ಏನ ಬಿಡರಿ, ಛಲೊ ಧಾರಣಿ ಬಂದರ ಗಂಡನ್ನ ಮಾರೊ ಪೈಕಿ ಆದರೂ ಅಕಿ ಹೇಳೋದ ಖರೇನ ಇತ್ತ. ಅದರಾಗ ಅಕಿಗೆ ಮನಿ ಸ್ವಚ್ಛ ಮಾಡಬೇಕಾರೊಮ್ಮೆ ‘ಸುಡಗಾಡ ಪೇಂಟಿಂಗ, ಕೆಲಸ ಇಲ್ಲಾ ಭೊಗಸಿ ಇಲ್ಲಾ’ ಅಂತ ಅವಕ್ಕ ನನಗ ಶಾಪ ಕೊಟ್ಟ ರಗಡ ಆಗಿತ್ತ. ಅವು ಅಕಿ ಶಾಪಕ್ಕರ ಸೇಲ ಆಗಬೇಕಾಗಿತ್ತ.
ಅಕಿ “ಸುಮ್ಮನ ಒಂದ ತೊಗೊಂಡರ ಒಂದ ಫ್ರೀ”
‘buy any five get six free’
ಅಂತೇನರ scheme ಮಾಡರಿ ಅಂದ್ಲು. ಅಷ್ಟರಾಗ ನಮ್ಮ real estate ದೋಸ್ತ ಒಬ್ಬಾಂವ
“ಲೇ sq.ft. ಲೆಕ್ಕದಾಗ ಮಾರ, ಖರ್ಚ ಆದರು ಆಗಬಹುದು” ಅಂದಾ.
ಏನ್ಮಾಡ್ತೀರಿ. ಆ ಕಲೆಯನ್ನ ಸಹಿತ ಈ ಕಮರ್ಶಿಯಲ್ ಮಂದಿ sq.feet ಲೆಕ್ಕಕ್ಕ ತೊಗೊಂಡ ಬಂದ್ರು, ಅವರಿಗೆ ಅದರಾಗಿನ ಕಲೆಯ ಮಹತ್ವ ತಿಳದೇಲಾ ಅಂತ ಕೆಟ್ಟ ಅನಸ್ತ.
ಅಲ್ಲಾ ಇದ ನನ್ನ ಪೇಂಟಿಂಗದ್ದ ಇಷ್ಟ ಹಣೇಬರಹನೊ ಇಲ್ಲಾ ಎಲ್ಲಾರದು ಇದ ಹಣೇಬರಹನೋ ಅಂತ ನೋಡಲಿಕ್ಕ ಹೋದರಾತ ಅಂತ ನನ್ನ ಹೆಂಡತಿಗೆ ನನ್ನ ಪೇಂಟಿಂಗ ಮುಂದ ನಿಲ್ಲಿಸಿ ‘ನೀ ಯಾ ರೇಟಿಗರ ಮಾರಕೊ’ ಅಂತ ಹೇಳಿ ಹೊಂಟೆ. ನನ್ನ ಪೇಂಟಿಂಗದ ಮುಂದ ನನ್ನ ಹೆಂಡತಿ ನಿಂತಾಗ ಅಗದಿ ಪೇಂಟಿಗಗೆ ದೃಷ್ಟಿ ಹತ್ತ ಬಾರದ ಅಂತ ಅಕಿನ್ನ ನಿಲ್ಲಿಸಿದಂಗ ಕಾಣಲಿಕತ್ತಿತ್ತ.
ನಾ ಒಂದಿಷ್ಟ professionalsದ works ನೋಡ್ಕೋತ ಹೊಂಟೆ. ಪಾಪ,ಅವರದು ಅದ ಹಣೇಬರಹ. ಅದರಾಗ ಅವರ ಪ್ರೊಫೆಶನಲ್ಸ್ ಬ್ಯಾರೆ, ಅವರ ರೇಟು ಹಂಗ ಇತ್ತ. ಇಲ್ಲೇ ನನ್ನ ನೂರರವ ಪೇಂಟಿಂಗ ಕೇಳೋರ ಇದ್ದಿದ್ದಿಲ್ಲಾ ಇನ್ನ ಇವರದ ಸಾವಿರದ್ವನ್ನ ಯಾರ ಕೇಳೋರ. ಅದರಾಗ ಅವರವ ಎಲ್ಲಾ oil & acrylic on canvas. ಒಂದೊಂದ canvas ಅಂತು life size. ಅಬ್ಬಾ ಪೇಂಟಿಂಗ ಅಂದರ ಅವಕ್ಕ ಅನಬೇಕ ಅನ್ನೋಹಂಗ ಇದ್ವು. ಆದರ ಏನ ಮಾಡೋದ ನಮ್ಮಂದಿಗೆ ಅದರ taste ಇಲ್ಲಾ ಅನಸ್ತು.
ಒಬ್ಬ ಬಳ್ಳಾರಿ ಪೇಂಟರ್ ಗಾಡಿ ಖರ್ಚ ಮೈಮ್ಯಾಲೆ ಹಾಕ್ಕೊಂಡ ಬಂದಂವಾ ತನ್ನ ಪೇಂಟಿಂಗ್ಸ ಜೊತಿ ಸಬಕಾರದ ಮ್ಯಾಲೆ ಒಂದ ಇಷ್ಟ ಕಲೆ ಕೆತಗೊಂಡ ಬಂದಿದ್ದಾ. ಅವಂಗೊತ್ತಿತ್ತ ಬರೇ ಪೇಂಟಿಂಗ ಮ್ಯಾಲೆ ಡಿಪೆಂಡ್ ಆದರ workout ಆಗಂಗಿಲ್ಲ ಅಂತ. ಇನ್ನ ಆ ಸಬಕಾರ ಹಚಗೊಂಡ ಸ್ನಾನ ಮಾಡಿದಂಗ ಮಾಡಿದಂಗ ಕಲೆ ಮಾಯ ಆಗೋದ ಗ್ಯಾರಂಟೀ ಇತ್ತ. ನಮ್ಮ ಮೈ ಮ್ಯಾಲಿನ ಕಲೆ ಅಲ್ಲಾ ಮತ್ತ ಸಬಕಾರದ ಮ್ಯಾಲೆ ಕೆತ್ತಿದ್ದ ಕಲೆ.
ನಾ ಹಿಂಗ ಇತ್ತಲಾಗ ಊರ ಆರ್ಟಿಸ್ಟಗೊಳದ ಹಿರೇತನ ಮಾಡ್ಕೋತ ಅಡ್ಡಾಡಕೋತ ನನ್ನ exhibition ಬಗ್ಗೆ ಮರತ ಬಿಟ್ಟಿದ್ದೆ. ಅದರಾಗ ಅಲ್ಲೆ ನನ್ನ ಹೆಂಡತಿನ ಬ್ಯಾರೆ ನಿಲ್ಲಿಸಿ ಬಂದಿದ್ದೆ, ಅಕಿ ಎಲ್ಲೆ ಪೇಂಟಿಂಗ ಸೇಲ ಆಗವಲ್ವ ಅಂತ ಕಿಲೋ ಗಟ್ಟಲೇ ತೂಕಾ ಮಾಡಿ ಕಾಟನ್ ಮಾರ್ಕೇಟನಾಗ್ ರದ್ದಿ ಹಾಕಿ ಅದ ರೊಕ್ಕದಲೇ ಆಟೋ ತೊಗೊಂಡ ಹೋದ್ಲೋ ಅಂತ ಹೆದರಿ ವಾಪಸ ನನ್ನ ಸ್ಟಾಲಗೆ ಬಂದ ನೋಡಿದ್ರ ನನ್ನ ಸ್ಟಾಲ್ ಮುಂದ ಜನಾ ಮುಕರಿದ್ದರು. ಮಂದಿ ಏನ ನನ್ನ ಪೇಂಟಿಂಗ ನೋಡಲಿಕ್ಕೆ ಬಂದಾರೋ ಇಲ್ಲಾ ನನ್ನ ಹೆಂಡತಿ ನೋಡಲಿಕ್ಕೆ ಬಂದಾರೋ ಅನ್ನೋದ ಡೌಟ ಬಂತ. ಮಂದಿನ್ನ ದುಗಿಸಿ, ಸರಿಸಿ ಮುಂದ ಹೋಗಿ ನೋಡಿದ್ರ ನನ್ನ ಹೆಂಡತಿ ಅಗದಿ ರಸ್ತೆದ ಕೂಟಿಗೆ ಗಿರಮಿಟ್ಟ-ಭಜಿ ಮಾರಿದಂಗ ನನ್ನ ಪೇಂಟಿಂಗ ಮಾರಲಿಕತ್ತಿದ್ಲು. ಅಯ್ಯ, ಇಕಿ ಎಲ್ಲರ ‘ಐವತ್ತ ರೂಪಾಯಕ್ಕ ಒಂದ, ಐವತ್ತ ರೂಪಾಯಕ್ಕ ಒಂದ’ ಅಂತ ಮಾರಲಿಕತ್ತಾಳೇನ ಅಂತ ನೋಡಿದರ ಪಾಪ ಅಕಿ ಅಗದಿ ನನ್ನಕಿಂತ ನೂರ ರೂಪಾಯಿ ಜಾಸ್ತಿಗೆ ಅದು ಬಾರ್ಗೇನ ಮಾಡಲಾರದ ಮಾರಲಿಕತ್ತಿದ್ಲು. ಅಷ್ಟರಾಗ ಒಂದ ಮೂರ ಸಾವಿರ ರೂಪಾಯಿದ್ದ ಪೇಂಟಿಂಗ ಮಾರಿದ್ಲು.
ಅಡ್ಡಿಯಿಲ್ಲಾ ನನ್ನ ಹೆಂಡತಿನರ ಇಷ್ಟ ಮಾರಿದ್ಲಲಾ, ಅಕಿ ಕಾಲ್ಗುಣಾ ಇಷ್ಟ ಅಲ್ಲಾ ಕೈಗುಣಾನು ಛಲೋ ಅದ ಅಂತ ಖರೇನ ಖುಷಿ ಆತ. ಅಷ್ಟರಾಗ ನಂದ ನಾಲ್ಕ ಪೇಂಟಿಂಗ ಸೇಲ್ ಆಗಿದ್ದ ಸುದ್ದಿ ಮಿಡಿಯಾದಾಗ ಬ್ರೇಕ್ಕಿಂಗ ನ್ಯೂಸ್ ಆಗಿತ್ತೋ ಏನೊ ಗೊತ್ತಿಲ್ಲಾ, ಒಂದಿಷ್ಟ ಮಂದಿ ಮಿಡಿಯಾದವರ ಬಂದ ನಂದ ತಮ್ಮ tv channelನಿಗೆ bite ತೊಗೊಂಡ ಹೋದರು.
ಮುಂದ ಕತ್ತಲಿ ಆಗಲಿಕತ್ತ. ಹಂಗ ಜನಾ ಬರಲಿಕತ್ತಿದ್ದರು ಆದರ ಬೆಳಕ ಇಲ್ಲದಂಗ ಆತ, ನನ್ನ ಸನಸೆಟ್ ಪೇಂಟಿಂಗ್ಸ್ ಅಂತು ಮಿಡನೈಟ ಪೇಂಟಿಂಗ್ಸ ಕಂಡಂಗ ಕಾಣಲಿಕತ್ವು. ನಾ ಇನ್ನ ಸಾಕ ಬಿಡ ಈ ಚಿತ್ರಸಂತೆ ಐದ ಪೇಂಟಿಂಗ ಮ್ಯಾರಿ ನಾಲ್ಕ ಸಾವಿರ ಬಂತಲಾ ಅಂತ ಗುಡಚಾಪಿ ಕಿತ್ತಿದೆ. ಇನ್ನೊಂದ ಮಜಾ ಅಂದರ ನನ್ನ ಹೆಂಡತಿ ತಂದಿದ್ದ ಕುಟ್ಟವಲಕ್ಕಿ ನನ್ನ ಪೇಂಟಿಂಗಕಿಂತಾ ಜಾಸ್ತಿ ಸೇಲ ಆಗಿದ್ವು.
ನನ್ನ ಬಾಜುದಂವಾ, ನನ್ನವು ನಾಲ್ಕ ಸಾವಿರ ರೂಪಾಯದ್ವು ಪೇಂಟಿಂಗ ಸೇಲ ಆದ್ವು ಅಂತ ಗೊತ್ತಾದ ಮ್ಯಾಲೆ
‘ನನ್ನವು ಯಾವು ಅಷ್ಟ cheap painting ಇಲ್ಲಾ, ಇಲ್ಲಾಂದರ ನಾ ಒಂದs ಪೇಂಟಿಂಗ ಐದ ಸಾವಿರಕ್ಕ ಮಾರತಿದ್ದೆ’ ಅಂದ ಹೋದಾ.
Orgnizers ಬಂದ ನಾವು ಪಾರ್ಟಿಸಿಪೇಟ್ ಮಾಡಿದ್ದಕ್ಕ ಸರ್ಟೀಫಿಕೇಟ ಕೊಟ್ಟ ಹೋದರು. ನಾವು ಗಂಡ ಹೆಂಡತಿ ಕೂಡೆ certificate ತೊಗೊಂಡಿದ್ದ ಇದ ಫಸ್ಟ. ಹಂಗ ಮೊದ್ಲ ಸರ್ಕಾರದವರು ಫ್ಯಾಮಿಲಿ ಪ್ಲ್ಯಾನಿಂಗ ಆಪರೇಶನ್ ಮಾಡಿಸಿಗೊಂಡರ ಸರ್ಟೀಫಿಕೇಟ ಕೊಡತಿದ್ದರಂತ ಆದರ ನನ್ನ ಟೈಮಿಗೆ ಅದ ಬಂದ ಆಗಿತ್ತ. ನಾ ಆರ್ಗನೈಸರ ಪೈಕಿ ಒಬ್ಬರಿಗೆ ಕರದ
“ನೀವು ಚಿತ್ರಸಂತೆ ಒಳಗ ಭಾಗವಹಿಸಿದವರಕಿಂತಾ ಪೇಂಟಿಂಗ ಖರೀದಿ ಮಾಡದವರಿಗೆ ಸರ್ಟೀಫಿಕೇಟ ಕೊಡ ಬೇಕಿತ್ತ, ಯಾಕಂದರ ಇಲ್ಲೇ ೧೮ ಮಂದಿ ಆರ್ಟಿಸ್ಟ ಇದ್ದಾರ ಅದರಾಗ ಎಲ್ಲಾರದೂ ಸೇರಿ ಆರ-ಏಳ ಪೇಂಟಿಂಗ ಸೇಲ್ ಆಗ್ಯಾವ, ಸರ್ಟೀಫಿಕೇಟರ ಸೇವ ಆಗ್ತಿದ್ವು” ಅಂತ ಹೇಳಿದರ ‘next time ಹಂಗ ಮಾಡ್ತೇವಿ’ ಅಂತ ಅಂದ ಹೋದರು.
ನಾ ನನ್ನ ಸರ್ಟೀಫಿಕೇಟ ಹಿಡಕೊಂಡ ಕಡಿಕೆ ಒಂದ ಆಟೊದಾಗ ಎಲ್ಲಾ ತುಂಬಕೊಂಡ ಹೆಂಡ್ತಿನ್ನ ಹತ್ತಿಸಿಗೊಂಡ ಮನಿ ಹಾದಿ ಹಿಡದೆ.
ಆದರ ಒಂದ ಮಾತ ಖರೆ, ನಮ್ಮ ಹುಬ್ಬಳ್ಳಿ ಒಳಗ ಹಿಂತಾ ಕಾರ್ಯಕ್ರಮ ಮ್ಯಾಲಿಂದ ಮ್ಯಾಲೆ ಆಕ್ಕೋತ ಇರಬೇಕು. ಅಂದ್ರ ಜನರಿಗೆ ಇದರ ಬಗ್ಗೆ ಅವೇರನೆಸ್ ಬರತದ, ಜನರ ಟೇಸ್ಟ್ ಚೆಂಜ್ ಆಗ್ತದ. ಜನರ ಒಳಗ ಕಲೆಯ ಬಗ್ಗೆ ಇಂಟರೇಸ್ಟ ಕ್ರಿಯೇಟ್ ಮಾಡೋದ ಒಂದ ಆರ್ಟ. ಅದನ್ನ ಕಲಾವಿದರು ತಮ್ಮ ಕರ್ತವ್ಯ ಮತ್ತ ಅನಿವಾರ್ಯತೆ ಅಂತ ತಿಳ್ಕೊಂಡರ ಮಾಡಬೇಕು.