ಇದ ಏನಿಲ್ಲಾ ಅಂದ್ರು ಒಂದ ಐದ ವರ್ಷದ ಹಿಂದಿನ ಮಾತ ಇರಬೇಕ ಒಂದ ದಿವಸ ಸುಮ್ಮನ ಪೇಪರ ಓದ್ಕೊತ ಕೂತಾಗ ನನ್ನ ಹೆಂಡ್ತಿ ಸಟಕ್ಕನ್ನ
“ರ್ರೀ.. ನೀವ ಯಾವಾಗ ಬ್ಯಾಂಕಾಕಗೆ ಹೋಗ್ತೀರಿ?” ಅಂತ ಕೇಳಿದ್ಲು.
ನಂಗ ಒಮ್ಮಿಕ್ಕಲೇ ಗಾಬರಿ ಆತ, ಅಲ್ಲಾ ಅಕಿ ಬರೇ ’ನೀವ ಯಾವಾಗ ಫಾರೇನ್ ಹೋಗ್ತಿರಿ’ ಅಂತ ಅಂದಿದ್ರ ಮಾತ ಬ್ಯಾರೆ ಇತ್ತ, ಇಕಿ ಎಲ್ಲಾ ಬಿಟ್ಟ ಬ್ಯಾಂಕಾಕಗೆ ಯಾವಾಗ ಹೋಗ್ತೀರಿ ಅಂತ ಕೇಳಿದ್ದಕ್ಕ ಶಾಕ್ ಆತ.
ಹಂಗ ಅಕಿ ಒಂದ ಎರಡ-ಮೂರ ವರ್ಷದಿಂದ ನಮ್ಮವ್ವಾ ಅಪ್ಪಗ ನೀವು ಯಾವಾಗ ಕಾಶೀಗೆ ಹೋಕ್ತಿರಿ ಅಂತ ಕೇಳಿ ಕೇಳಿ ಜೀವಾ ತಿಂತಿದ್ಲು ಆವಾಗ ನಮ್ಮವ್ವ ನನ್ನ ಮಾರಿ ನೋಡ್ಕೋತ
“ಅಯ್ಯ..ನಮ್ಮ ಹಣೇಬರಹದಾಗ ಎಲ್ಲೆ ಬರದದ್ವಾ ಕಾಶೀ, ಬದರಿ, ನಮಗ್ಯಾರ ಕರಕೊಂಡ ಹೋಗೊರು? ಧಾರವಾಡದಾಗ ಹುಟ್ಟಿ ಹುಬ್ಬಳ್ಳ್ಯಾಗ ಸಾಯೋದ ಇಷ್ಟ ಬರಿಸಿಗೊಂಡ ಬಂದೇವಿ, ಎಮರ್ಜನ್ಸಿ ಇರಲಿ ಅಂತ ಕಾಶಿಗೆ ಹೊದ ಹೋದೊರ ಕಡೆ ಒಂದೊಂದ ಗಂಗಾ ಗಿಂಡಿ ತರಿಸಿಗೊಂಡ ಇಟಗೊಂಡೇನಿ’ಅಂತ ತನ್ನ ಕಥಿ ಚಲೂ ಮಾಡ್ತಿದ್ಲು.
ಅಲ್ಲಾ ಹಂಗ ನಮ್ಮವ್ವಗ ನನ್ನ ಕ್ಯಾಪ್ಯಾಸಿಟಿ ಗೊತ್ತಿತ್ತ ಬಿಡ್ರಿ ಹಿಂಗಾಗಿ ಅಕಿ ತನ್ನ ಕಾಶಿ ಯಾತ್ರಾ ಕನಸಿಗೆ ಎಂದೋ ಇಲ್ಲಿಂದ ನೀರ ಬಿಟ್ಟ ಬಿಟ್ಟಿದ್ಲು.
ಇನ್ನ ಹಂತಾದರಾಗ ನನ್ನ ಹೆಂಡತಿ ನನಗ ಎಲ್ಲಾ ಬಿಟ್ಟ ಬ್ಯಾಂಕಾಕಗೆ ಯಾವಾಗ ಹೋಗ್ತೀರಿ ಅಂತ ಕೇಳಿದ್ದ ನನಗ ಆಶ್ಚರ್ಯ ಆತ. ಅಲ್ಲಾ, ಅವ್ವಾ-ಅಪ್ಪಗ ಕಾಶಿ ಯಾತ್ರಾ ಮಾಡಸಲಿಕ್ಕೆ ಆಗಲಾರದಂವಾ ತಾ ಬ್ಯಾಂಕಾಕಗೆ ಹೋಗ್ತಾನ ಅಂದರ ಜನಾ ಏನ ಅಂತಾರ ಹೇಳ್ರಿ?
ಹಂಗ…ಪಾಪ ನನ್ನ ಹೆಂಡತಿಗೆ ಏನ ಗೊತ್ತ ಬಿಡ್ರಿ ಬ್ಯಾಂಕಾಕಿಗೆ ಯಾರ, ಯಾಕ ಹೋಗ್ತಾರ ಅಂತ. ಮಂದಿ ಹೋಗೊದ ನೋಡಿ -ಕೇಳಿ, ಏನೊ ತನ್ನ ಗಂಡನೂ ಹೋಗಬೇಕು ಅಂತ ಆಶಾದ್ಲೆ ಕೇಳಿರಬೇಕು ಅಂತ
“ಲೇ..ಹುಚ್ಚಿ ಎಲ್ಲಾ ಬಿಟ್ಟ ನನ್ನ ಯಾಕ ಬ್ಯಾಂಕಾಕ ಕಳಸಲಿಕತ್ತೀಲೇ..ನೀ ಇದ್ದಿ ಅಲಾ ಮನ್ಯಾಗ ಸಾಕ” ಅಂತ ಅಂದೆ.
“ಹಂಗಲ್ಲರಿ ನಮ್ಮ ಕಾಕಾನ ಮಗಳ ಜ್ಯೋತಿ ಇದ್ದಾಳಲಾ, ಅಕಿ ಗಂಡ ನಾಡದ ಬ್ಯಾಂಕಾಕಗೆ ಹೊಂಟಾನ ಅದಕ್ಕ ನಮ್ಮ ಮನೆತನದವರ ಎಲ್ಲಾ ಸಾವಿರ ಸಾವಿರ ರೂಪಾಯಿ ಪಟ್ಟಿ ಹಾಕಿ ಪೇಪರನಾಗ ’ವಿದೇಶ ಪ್ರಯಾಣ ಸುಖಕರವಾಗಲಿ’ ಅಂತ ಅಡ್ವರ್ಟೈಸಮೆಂಟ್ ಕೊಟ್ಟಾರ ಅದಕ್ಕ ನೀವು ಯಾವಾಗ ಹೋಗ್ತೀರಿ ಅಂತ ಕೇಳಿದೆ ಇಷ್ಟ” ಅಂತ ಅಂದ್ಲು.
ನನ್ನ ಹೆಂಡತಿದ ಮೊದ್ಲಿಂದ ಆ ಕಾಕಾನ ಮಗಳ ಜೊತಿ ಕಂಪೇರ ಮಾಡ್ಕೊಳೊ ಚಟಾ ಅದರಿಪಾ, ಅಕಿ ಲಗ್ನ ಆದ್ಲು ಅಂತ ತಾನೂ ಲಗ್ನಾ ಮಾಡ್ಕೊಂಡ್ಳು, ಮುಂದ ಲಗ್ನ ಆದ ಮ್ಯಾಲೆನೂ ಪ್ರತಿಯೊಂದಕ್ಕೂ ಅಕಿ ಜೊತಿ, ಅಕಿ ಗಂಡನ ಜೊತಿ ಕಂಪೇರ ಮಾಡಲಿಕ್ಕೆ ಶುರು ಮಾಡಿದ್ಲು
ಒಂದ ದಿವಸ
“ರ್ರೀ..ಜ್ಯೋತಿ ಗಂಡ ರಾಯಲ್ ಎನಫಿಲ್ಡ ತೊಗೊಂಡಾನ, ನೀವ ಯಾವಗ ತೊಗೊತೀರಿ?” ಅಂತ ಗಂಟ ಬಿದ್ಲು….ಅಲ್ಲಾ, ನಂಗ ಇಲ್ಲೆ ಗಾಡಿ ಹೊಡಿಲಿಕತ್ತ ಇಪ್ಪತ್ತ ವರ್ಷಾದರು ಸ್ಪ್ಲೆಂಡರದ್ದ ಸೆಂಟರ್ ಸ್ಟ್ಯಾಂಡ ಹಚ್ಚಲಿಕ್ಕೆ ಬರವಲ್ತು..ರಾಯಲ್ ಎನಫೀಲ್ಡ ಅಂತ.
“ಲೇ..ಹುಚ್ಚಿ ದಿವಸಾ ಅದಕ್ಕ ಕಿಕ್ ಯಾರ ಜ್ಯೋತಿ ಗಂಡ ಹೋಡಿತಾನೇನ?” ಅಂತ ಬೈದ ಬಾಯಿ ಮುಚ್ಚಸಿದ್ದೆ…
ಮತ್ತೊಂದ ಸರತೆ “ರ್ರೀ ಅಕಿ ಗಂಡಾ ಹೊಸಾ ವಾಶಿಂಗ ಮಶೀನ ತೊಗೊಂಡಾನ ನೀವ ಯಾವಾಗ ತೊಗೊತಿರಿ” ಅಂತ ಗಂಟ ಬಿದ್ಲು…” ವಾಶಿಂಗ್ ಮಶೀನ್ ಯಾಕ ನೀ ಇದ್ದಿ ಅಲಾ” ಅಂತ ಅಂದ್ರು ಕೇಳಲಿಲ್ಲಾ. ಕಡಿಕೆ ನಮ್ಮ ಮಾವನ ಭಡಾ ಭಡಾ ನಮ್ಮ ಅನಿವರ್ಸರಿಗೆ ಒಂದ ಸೆಮಿ ಆಟೋಮೇಟಿಕ್ ವಾಶಿಂಗ ಮಶೀನ ಕೊಡಿಸಿ ಪುಣ್ಯಾ ಕಟ್ಕೊಂಡಾ….ಹಿಂಗ ನನ್ನ ಹೆಂಡತಿಗೆ ಯಾವಾಗಲೂ ಆ ಜ್ಯೋತಿನ್ನ, ಅಕಿ ಗಂಡನ್ನ ಕಂಪೇರ ಮಾಡ್ಕೊಳೊ ಚಟಾ ಅದರಿಪಾ.
ಅದಕ್ಕ ಈಗ ಅಕಿ ಗಂಡಾ ಬ್ಯಾಂಕಾಕಕ್ಕ ಹೊಂಟಾನ ಅಂತ ನನಗ ಇಕಿ ನೀವು ಯಾವಾಗ ಹೋಗ್ತೀರಿ ಅಂತ ಕೇಳಿದ್ಲು.
ಅಲ್ಲಾ, ಅಂವಾ ಮೆಡಿಕಲ್ ರೆಪ್ ಕೆಲಸಾ ಮಾಡ್ತಾನ, ಅವಂಗ ಕಂಪನಿಯವರ ವರ್ಷಕ್ಕ ಇಷ್ಟ ಸೇಲ್ಸ್ ಮಾಡಿದರ ಹಿಂತಿಂತಾ ಗಿಫ್ಟ, ಫಾರೇನ್ ಟೂರ ಅಂತ ಆಶಾ ಹಚ್ಚಿ ಹಚ್ಚಿ ಕೆಲಸಾ ತೊಗೊತಿರ್ತಾರ, ಹಿಂಗಾಗಿ ಅಂವಾ ಟಾರ್ಗೇಟ್ ರೀಚ್ ಮಾಡಿದ್ದಕ್ಕ ಅವರ ಕಂಪನಿಯವರು ಅವಂಗ three nights and two days Bangkok trip ಕರಕೊಂಡ ಹೊಂಟಿದ್ದರು. ಆ ಮಗಾ ಅದನ್ನ ದೊಡ್ಡದ ಮಾಡಿ ಏನ ದುಡದ ತನ್ನ ರೊಕ್ಕದಲೇ ಹೊಂಟೊರಗತೆ ಎಲ್ಲಾರ ಮುಂದ ’ನಾ ಬ್ಯಾಂಕಾಕ್ ಹೊಂಟೇನಿ’ ಅಂತ ಡಂಗರಾ ಸಾರಿದ್ದಾ. ಅದರಾಗ ಅವನ ಮಾವನ ಮನಿ ಕಡೆದವರು ಅಂದರ ನಮ್ಮ ಬೀಗರು ಇಂವಾ ಏನೋ ಬ್ಯಾಂಕಾಕಗೆ Ph.D ಮಾಡ್ಲಿಕ್ಕೆ ಹೊಂಟಾನ ಅನ್ನೋರಗತೆ ’ನಮ್ಮ ಅಳಿಯಾ ಬ್ಯಾಂಕಾಕ್ ಹೊಂಟಾನ’ ‘ಪಟಾಯಾ ಹೊಂಟಾನ್’ಅಂತ ಹೇಳಿದ್ದ ಹೇಳಿದ್ದ. ಆದರ ನಂಗ ಒಂದ ತಿಳಿಲಾರದ್ದಂದ್ರ ಇವರ ಎಲ್ಲಾ ಬಿಟ್ಟ ಅಂವಾ ಬ್ಯಾಂಕಕ ಹೋಗೊದನ್ನ ’ವಿದೇಶ ಪ್ರಯಾಣ’ ಅಂತ ಪೇಪರನಾಗ ಅಡ್ವರ್ಟೈಸಮೆಂಟ ಕೊಟ್ಟದ್ದ…..ಅಲ್ಲಾ ಹಿಂಗ ಪೇಪರನಾಗ ಬ್ಯಾಂಕಾಕ, ಪಟಾಯಾಕ್ಕ ಹೋಗೊದನ್ನ ’ವಿದೇಶ ಪ್ರಯಾಣ’ ಅಂತ ಯಾರರ ಹಾಕಸೋದ ನೋಡಿರೇನ ನೀವೇನರ?
ನಾ ಅಷ್ಟಕ್ಕ ಸುಮ್ಮನ ಕೂಡಬೇಕೊ ಇಲ್ಲೋ, ಸುಳ್ಳ ಕಾಲ ಕೆದರಿ ನನ್ನ ಹೆಂಡತಿಗೆ
“ಅಲ್ಲಲೇ, ಆ ಅಡ್ವರ್ಟೈಸಮೆಂಟ್ ಕೆಳಗ ಏನರ ’ಯಾತ್ರಿಗಳು’ಓರ್ವ ಪತಿವೃತೆ ಪತ್ನಿ, ಮಗಳು ಮತ್ತು ಸಂಪ್ರದಾಯ, ಸೌಂಸ್ಕೃತಿಯನ್ನು ಅಗಲಿ ಹೊಂಟಿದ್ದಾರೆ ಅಂತ ಏನರ ಬರದಾರೇನ ನೋಡ” ಅಂದೆ..ಅಕಿಗೆ ತಿಳಿಲಿಲ್ಲಾ, ನಾ ಅಕಿಗೆ ತಿಳಿಸಿ ಹೇಳಲಿಲ್ಲಾ.
ಅಲ್ಲಾ ಇದರಾಗ ಅಕಿದು, ಅವರ ಪೈಕಿಯವರದು ಯಾರದು ತಪ್ಪ ಇಲ್ಲರಿ. ನನ್ನ ಹೆಂಡತಿ, ನನ್ನ ಬೀಗರು ಎಲ್ಲಾ ಪಾಪ ಅಗ್ದಿ ಮುಗ್ದ ಮನೆತನದವರು, ಪಾಪ ಅವರಿಗೇನ ಗೊತ್ತ ಬ್ಯಾಂಕಾಕ್, ಪಟಾಯಾಕ್ಕ ಜನಾ ಕೆಲಸದಕಿಂತಾ ಜಾಸ್ತಿ ಮಸಾಜ್ ಮಾಡಿಸ್ಗೊಳ್ಳಿಕ್ಕೆ ಹೋಗ್ತಾರ, ಚೈನಿ ಹೊಡಿಲಿಕ್ಕೆ ಹೋಗ್ತಾರ, ಅಲ್ಲೇ ಹೋಗೊದರಿಂದ ಸಮಾಜದಾಗ ರೆಪ್ಯೂಟೇಶನ್ ಹಳ್ಳಾ ಹಿಡಿತದ ಅಂತ. ಹಿಂಗಾಗಿ ಅವರ ಅಳಿಯಾ ಬ್ಯಾಂಕಾಕ್ ಹೋಗೊದನ್ನ foreign tour ಅಂತ ಹೆಮ್ಮೆಯಿಂದ ಪೇಪರನಾಗ ad ಹಾಕ್ಸಿದ್ದರು. ಇನ್ನ ಜನಾ ಅಂದರ ನಮ್ಮ ನಿಮ್ಮಂತಾವರ ’ಮಗಾ ಬ್ಯಾಂಕಾಕ್ ಹೊಂಟಾನ..ಮಜಾ ಮಾಡಿ ಬರ್ತಾನ ತೊಗೊ’ ಅಂತ ಅನ್ನೋದ ಸಹಜ ಅದ, ಅದರಾಗ ಇಂವಾ ಅಂತೂ ಊರೇಲ್ಲಾ ಡಂಗರಾ ಸಾರಿನ ಹೊಂಟಿದ್ದಾ..ಇನ್ನ ಕೇಳ್ತಿರೇನ.
ಕಡಿಕೆ ನನ್ನ ಹೆಂಡ್ತಿಗೆ ನಾ ಸೂಕ್ಷ್ಮ ಜನಾ ಯಾಕ ಹಗಲಗಲಾ ಬ್ಯಾಂಕಾಕ್ ಹೋಗ್ತಾರ, ಹೆಂತಾವರ ಹೋಗ್ತಾರ ಅಂತ ತಿಳಿಸಿ ಹೇಳಿದೆ. ಅಲ್ಲಾ, ಹಂಗ ಅಲ್ಲೆ ಮಸಾಜ್ ಹೆಣ್ಣಮಕ್ಕಳ ಮಾಡ್ತಾರ ಅಂತ ಹೇಳಿದರ ನನ್ನ ಹೆಣಾ ಹೊರತಾಳ ಅಂತ ಮೊದ್ಲ ಹೇಳಿದ್ದಿಲ್ಲಾ..ಆಮ್ಯಾಲೆ ಬಿಡಿಸಿ ಹೇಳಿದೆ ನೋಡ್ರಿ ತೊಗೊ ನಂಗ ಅವತ್ತಿನಿಂದ southeast asia ಕಡೆ ತಲಿ ಮಾಡಿ ಮಲ್ಕೊಳಿಕ್ಕೆ ಸಹಿತ ಬಿಡವಳ್ಳು.
ಇರಲಿ ಪಾಪ ಜ್ಯೋತಿ ಗಂಡಾ ಹಂತಾವ ಅಲ್ಲಾ, ಭೋಳೆ ಮನಷ್ಯಾ, ತಾ ಆತು ತನ್ನ ಕೆಲಸ ಆತು.. ಏನೋ ಕಂಪನಿಯವರ ಪುಕ್ಕಟ್ಟ ಕಳಸ್ಯಾರ ಅಂತ ಹೊಂಟಾನ ಹೋಗಿ ಬರಲಿ.
ಆದರ ಈಗ ನನ್ನ ಹೆಂಡತಿ ’ರ್ರೀ ನೀವು ಯಾವಾಗ ಹೋಗೊರು ಬ್ಯಾಂಕಾಕ್ ಗೇ’ ಅಂತ ಕೇಳ್ತಿದ್ದಳಲಾ ಅಕಿ ಅದರ ಉಸಾಬರಿ ಎತ್ತವಳ್ಳು. ನಾ ಖರೆನ ಅಲ್ಲೆ ಫ್ಯಾಕ್ಟರಿ ಕೆಲಸ ಅದ ಹೋಗಿ ಬರ್ತೇನಿ ಅಂದರ ಯಾ ಫ್ಯಾಕ್ಟರಿ, ಹೆಂತಾ ಫ್ಯಾಕ್ಟರಿ..ನೀವೇನರ ಬ್ಯಾಂಕಾಕ್ ಹೆಸರ ಎತ್ತಿದರ ನಿಮ್ಮ ಫ್ಯಾಕ್ಟರಿನ ಬಂದ ಮಾಡ್ತೇನಿ ಅಂತಾಳ. ಹೋಗಲಿ ಬಿಡ್ರಿ, ಅವರವರ ಹಣೇಬರಹದಾಗ ಏನ ಬರದಿರತದ ಅದನ್ನ ಅವರ ಅನಭವಸ್ತಾರ.
ನಮ್ಮವ್ವಾ ಅಪ್ಪನ ಹಣೇಬರಹದಾಗ ಕಾಶಿ ಯಾತ್ರಿ ಬರದಿಲ್ಲಾ, ನನ್ನ ಹಣೇಬರಹದಾಗ ಬ್ಯಾಂಕಾಕ್ ಬರದಿಲ್ಲಾ. ಹಿಂಗ ಮಂದಿ ಹೋಗಿ ಬಂದಿದ್ದನ್ನ ಸುದ್ದಿ ಮಾಡ್ಕೋತ ಇಲ್ಲೇ ಹುಬ್ಬಳ್ಳ್ಯಾಗ ಸಾಯೋದ ಬರದದೋ ಏನೋ.
ಅನ್ನಂಗ ಇನ್ನೊಂದ ಹೇಳೋದ ಮರತೆ ಆ ಜ್ಯೋತಿ ಗಂಡಾ ಒಂದ ಸರತೆ ಬ್ಯಾಂಕಾಕ್ ಹೋಗಿ ಬಂದನಲಾ ಮುಂದಿನ ವರ್ಷ ಮತ್ತ ತಮ್ಮ ಕಂಪನಿ ಟಾರ್ಗೇಟ್ ರೀಚ್ ಮಾಡಿ, ಒಂದ 30 % extraನ achieve ಮಾಡಿ ಮತ್ತ ಬ್ಯಾಂಕಾಕ್, ಪಟಾಯಾಕ್ಕ ಈ ಸರತೆ ಹೆಂಡ್ತಿನ್ನೂ ಕಂಪನಿ ಖರ್ಚಿನಾಗ ಕರಕೊಂಡ ಹೋಗಿ ಬಂದಾ. ಏನ್ಮಾಡ್ತೀರಿ?…
ಹೆಂಡ್ತಿನ್ನ ಕರಕೊಂಡ ಯಾರರ ಬ್ಯಾಂಕಾಕ್ ಹೋಗ್ತಾರ…ನಾ ಮೊದ್ಲ ಹೇಳಿದ್ನೆಲ್ಲಾ ಅಂವಾ ಭೋಳೆ ಮನಷ್ಯಾ ಅಂತ.
ನಂಗ ಯಾವಾಗ ಇಂವಾ ದಂಪತ್ತ್ ಬ್ಯಾಂಕಾಕಗೆ ಹೋಗ್ಯಾನ ಅಂತ ಗೊತ್ತಾತಲಾ ಅವಂಗ ಏನ ಹೇಳ್ಬೇಕ ತಿಳಿಲಿಲ್ಲಾ ಆದರೂ ತಡ್ಕೊಳಿಕ್ಕ ಆಗಲಾರದ ಫೋನ ಮಾಡಿ
“ಲೇ…ಹುಚ್ಚಾ…ಹೆಂಡ್ತಿನ್ನ ಕರಕೊಂಡ ಬ್ಯಾಂಕಾಕಗೆ ಹೋಗೊದ ಅಂದ್ರ ತಾಜ್ ಹೋಟೆಲಗೆ ಮನ್ಯಾಗಿನ ಕಲಸನ್ನಾ- ಬುತ್ತಿಗಂಟ ಕಟಗೊಂಡ ಹೋದಂಗಲೇ…ಬುದ್ಧಿ ಎಲ್ಲಿ ಇಟ್ಟಿ” ಅಂತ ಬೈದ ಫೋನ್ ಇಟ್ಟೆ. ಏನ ಜನಾನೋ ಏನೋ.
“ಅನ್ನಂಗ ನೀವು ಬ್ಯಾಂಕಾಕ್ ಯಾವಾಗ ಹೊಂಟೀರಿ?”