ಒಂದ ವಾರದ ಹಿಂದ ಮುಂಜ ಮುಂಜಾನೆ ಎದ್ದೋಕಿನ ನನ್ನ ಹೆಂಡತಿ
“ರ್ರಿ, ಈ ಸಲಾ ಆಷಾಡ ಮಾಸದಾಗ ನಾ ಒಂದ ತಿಂಗಳ ತವರ ಮನಿಗೆ ಹೋಗೊಕಿ” ಅಂತ ಹೇಳಿದ್ಲು.
ಅಕಿ ’ನಾ ತವರ ಮನಿಗೆ ಹೋಗ್ತೇನಿ’ ಅಂತ ತನ್ನ ಡಿಸಿಜನ್ ಹೇಳಿದ್ಲ ಹೊರತು ಅದರಾಗ ಒಂದ ಅಕ್ಷರನು ’ರ್ರಿ ನಾ ತವರಮನಿಗೆ ಹೋಗಲೇನು?’ ಅಂತ ರಿಕ್ವೆಸ್ಟ, ಪರ್ಮಿಶನ್ ಕೇಳೋ ಟೋನ ಒಳಗ ಇರಲಿಲ್ಲಾ. ಅಲ್ಲಾ ಲಗ್ನ ಆಗಿ ಹದಿನೈದ ವರ್ಷ ದಾಟಿ ಹೋತ ಇನ್ನೇನ ತಲಿ ಗಂಡಗ ರಿಕ್ವೆಸ್ಟ, ಪರ್ಮಿಶನ್ ಕೇಳ್ತಾಳ ಬಿಡ್ರಿ, ಕೇಳೋ ಟೈಮ ಒಳಗ ಕೇಳಿಲ್ಲಾ. ಆದ್ರೂ ಇಕಿ ಹಿಂಗ ಮಕ್ಕಳನ ನನ್ನ ಕೊಳ್ಳಿಗೆ ಕಟ್ಟಿ ತಿಂಗಳ ಗಟ್ಟಲೇ ತವರ ಮನಿಗೆ ಹೋಗ್ತೇನಿ ಅಂದ ಕೂಡಲೇ ನಂಗ ಖರೇನ ಭಾಳ ಆಶ್ಚರ್ಯ ಆತ.
ಲಗ್ನಾದ ಹೊಸ್ತಾಗಿ ಅಂತು ಒಂದ ವರ್ಷ ಅಕಿ ತವರಮನ್ಯಾಗ ಇದ್ದಷ್ಟ ಗಂಡನ ಮನ್ಯಾಗ ಇದ್ದಿದ್ದಿಲ್ಲಾ. ಇಕಿ ಪುಷ್ಯಮಾಸ, ಅಧಿಕ ಮಾಸ, ಆಷಾಡ ಮಾಸ ಎಲ್ಲಾ ಮುಗಿಸಿ ಅತ್ತಿ ಮನ್ಯಾಗ ಸೆಟ್ಲ್ ಆಗಿ ಒಂದ ಹಡಿಲಿಕ್ಕೆ ಎರಡ ವರ್ಷ ತೊಗೊಂಡಿದ್ಲು. ಇನ್ನ ಆ ಆಷಾಡ ಮಾಸದಾಗ ಮಂಗಳಗೌರಿ, ದ್ವಾದಷಿ ಬಾಗಣ ಅಂತ ಏನೇನ ನಿಯಮ ಇದ್ವೊ ಎಲ್ಲಾ ಮಾಡಕೊಂಡ ಬಂದಿದ್ಲು, ಈಗ ಮತ್ತೇನ ಇಕಿಗೆ ನೆನಪಾತಪಾ ಅಂತ ನಾ ಸಿಟ್ಟಲೇ
“ಅಲ್ಲಲೇ, ಎಲ್ಲಾ ಬಿಟ್ಟ ಇಗ್ಯಾಕ ಆಷಾಡದಾಗ ತವರ ಮನಿಗೆ ಹೊಂಟಿ, ನಂಬದ ಮದುವಿ ಆಗಿ ಹನ್ನೇರಡ ವರ್ಷ ಆಗಿ ತಿರಗಿ ರಿನಿವಲಗೆ ಬಂತ, ನೀ ಏನ ಈಗ ಮತ್ತ ಆಷಾಡ ಮಾಸ, ಪುಷ್ಯಮಾಸ, ಅಧಿಕಮಾಸ ಮಾಡೋಕೇನ” ಅಂತ ಕೇಳಿದೆ.
“ಅಯ್ಯ, ನಮಗು ಆಸರಕಿ-ಬ್ಯಾಸರಕಿ ಇರತದೋ ಇಲ್ಲೊ. ಒಂದ ತಿಂಗಳ ನಮ್ಮವ್ವನ ಮನಿಗೆ ಹೋಗಿ ನಾ ಕಂಪ್ಲೀಟ್ ರೆಸ್ಟ ಮಾಡ್ತೇನಿ” ಅಂದ್ಲು.
ಹಕ್ಕ್…ರೆಸ್ಟ ಮಾಡತಾಳ ಅಂತ. ಅಲ್ಲಾ ಹಂತಾದ ಏನ ಇಕಿ ತಿಂಗಾಳನ ಗಟ್ಟಲೇ ರೆಸ್ಟ ತೊಗೊಳೊ ಅಷ್ಟ ಮೈಮುರದ ಅತ್ತಿ ಮನ್ಯಾಗ ದುಡದಾಳ ಅಂತೇನಿ.
ಇತ್ತಲಾಗ ನಾವಿಬ್ಬರು ಹಿಂಗ ಬೆಡರೂಮಿನಾಗ ಮಚ್ಛರದಾನಿ ಒಳಗ ಮಾತೊಡದ ಹೊರಗ ಸಾರಿಸಿ ರಂಗೋಲಿ ಹಾಕಲಿಕತ್ತಿದ್ದ ನಮ್ಮವ್ವನ ಕಿವಿಗೆ ಬಿತ್ತ ಕಾಣತದ ಆಮ್ಯಾಲೆ ಅಕಿ ನನ್ನ ಕಡೆ ಬಂದ
“ಯಾಕ, ನಿನ್ನ ಹೆಂಡತಿಗೆ ಡಾಕ್ಟರ ಮತ್ತ ಬೆಡ್ ರೆಸ್ಟ ಹೇಳ್ಯಾರಿನೂ, ಏನರ ವಿಶೇಷ ಅದ ಏನ, ತವರಮನಿಗೆ ಹೋಗಿ ಬೆಡ್ ರೆಸ್ಟ ತೊಗೊತೆನಿ ಅನ್ನಲಿಕತ್ತಾಳಲಾ?” ಅಂತ ಕೇಳಿದ್ಲು.
ನನ್ನ ಹೆಂಡತಿ ರೆಸ್ಟ ಅಂದ ಕೂಡಲೇ ನಮ್ಮವ್ವ ಎಲ್ಲೋ ನನ್ನ ಹೆಂಡತಿದ ವಿಶೇಷ ಅಂತ ತಿಳ್ಕೊಂಡಳ ಕಾಣ್ತದ.
“ಅಯ್ಯ, ನಂಗೇನ ಬ್ಯಾರೆ ಕೆಲಸ ಇಲ್ಲೇನ್ವಾ. ನೀ ಏನ ರೆಸ್ಟ ಅಂದರ ಸೀದಾ ಅಲ್ಲಿಗೆ ಹೋಗ್ತಿಯಲಾ” ಅಂತ ನಾ ನಮ್ಮವ್ವಗ ಜೋರ ಮಾಡಿದೆ.
ನಮ್ಮವ್ವ ಅಷ್ಟಕ್ಕ ಆ ವಿಷಯ ಅಲ್ಲಿಗೆ ಬಿಡಲಿಲ್ಲಾ, ನನಗ ಮತ್ತ
“ಅಲ್ಲಾ, ಈ ವರ್ಷ ಇನ್ನೊಂದ ಆದರ ಆಗಲಿ ಬಿಡಪಾ, ಹೆಣ್ಣಾದರೂ ಅಡ್ಡಿಯಿಲ್ಲಾ, ಹೆಂಗಿದ್ದರೂ ನಮ್ಮಂದ್ಯಾಗ ಹೆಣ್ಣಿಂದ ಶಾರ್ಟೇಜ ಭಾಳ ಅದ, ಮುಂದಿನ ಜನರೇಶನ್ ಗಂಡ ಹುಡಗರರs ನಿಮಗ ನೆನಸ್ತಾರ” ಅಂತ ಅಂದ್ಲು.
“ಏ, ಎಲ್ಲೀದ ಬಿಡ್ವಾ, ಒಂದ ಹೆಂಡ್ತಿ, ಎರಡ ಮಕ್ಕಳನ ಸಾಕೋದರಾಗ ರಗಡ ಆಗೇದ. ಅದರಾಗ ಬಾಣಂತನಾ ಮಾಡೋರ ಯಾರು? ನಮ್ಮತ್ತಿ ಅಂತು ಮಾತುಕತಿ ಒಳಗ ಮಾತ ಕೊಟ್ಟಂಗ ಎರಡ ಬಾಣಂತನ ಮಾಡ್ಯಾಳ ಇನ್ನ ನಿನಗಂತು ವಯಸ್ಸಾತು, ನಿನ್ನ ಕಡೆ ಮಗಳ ಬಾಣಂತನ ಮಾಡೋದ ರಗಡ ಆಗಿ ಹೋತು ಇನ್ನ ಸೊಸಿದೊಂದ ಎಲ್ಲೆ ಮಾಡ್ತಿ” ಅಂತ ನಾ ಅಂದೆ.
ನಾನೂ ನಮ್ಮವ್ವ ಇಬ್ಬರು ಸೇರಿ ಹಿಂಗ ಗುಸು-ಗುಸು ಮಾತಡಲಿಕತ್ತಿದ್ದ ಕೇಳಿ ನನ್ನ ಹೆಂಡತಿಗೆ ತಲಿಕೆಟ್ಟ ಸಿಟ್ಟ ಬಂದ
“ಎಷ್ಟ ಖಬರ ಗೇಡಿ ಇದ್ದೀರಿ ತಾಯಿ ಮಗಾ, ನಂದ ಆಪರೇಶನ್ ಮಾಡಿಸಿ ನಾಲ್ಕ ವರ್ಷ ಆಗಿದ್ದನ್ನೂ ಮರತ ಬಿಟ್ಟಿರೇನ, ಈಗ ಇನ್ನೊಂದ ಹಡಿಯೋದರ ಬಗ್ಗೆ ಪ್ಲ್ಯಾನ ಮಾಡಲಿಕತ್ತಿರಲಾ” ಅಂತ ಮಾರಿ ಮೂಗು ತಿರುವಿ ಕೊಂಡ ಹೋದ್ಲು.
ಅಲ್ಲಾ, ನಮ್ಮವ್ವಗ ಅರವತ್ತ ದಾಟಿದ ಮ್ಯಾಲೆ ಅರವು ಮರವು ಅಂತಾರಲಾ ಹಂಗ ಆಗಿ ನನ್ನ ಹೆಂಡತಿದ ಆಪರೇಶನ್ ಆಗಿದ್ದ ಸಹಿತ ಮರತ ಬಿಟ್ಟಾಳ ಖರೆ ಆದರ ಈ ಸುಡಗಾಡ ಆಷಾಡದ ಗದ್ಲದಾಗ ನಂಗು ಎಲ್ಲೆ ಅರವು-ಮರವು ಆತೋ ಏನೋ, ನಾನು ಹೆಂಡ್ತಿದ ಆಪರೇಶನ್ ಮಾಡಿಸಿದ್ದನ್ನ ಮರತs ಬಿಟ್ಟಿದ್ದೆ.
ಇತ್ತಲಾಗ ನಮ್ಮವ್ವಗ ನನ್ನ ಹೆಂಡತಿ ’ತಾಯಿ-ಮಗಾ ಎಷ್ಟ ಖಬರಗೇಡಿ ಇದ್ದೀರಿ’ ಅಂದದ್ದಕ್ಕ ಸಿಟ್ಟ ಬಂತೊ ಇಲ್ಲಾ ಖರೇನ ತನ್ನ ಮರಗೂಳಿ ತನಕ್ಕ ಸಿಟ್ಟ ಬಂತೊ ಗೊತ್ತಿಲ್ಲಾ, ಭಡಾ ಭಡಾ ಅಕಿ ನನ್ನ ಹೆಂಡತಿಗೆ ಒದರಿ
“ಏ, ಇಲ್ಲ ನೋಡಿಲ್ಲೆ, ಆಪರೇಶನ್ ಅಗಿದ್ದ ನಿಂದ, ನನ್ನ ಮಗಂದಲ್ಲಾ. ನಿಂಗ ಮಕ್ಕಳ ಆಗದೇ ಇರಬಹುದು, ಅವಂಗಲ್ಲಾ. ಹಂಗ ನಾ ಇನ್ನೊಂದ ಮೊಮ್ಮಗಳ ಬೇಕಂದರ ನನ್ನ ಮಗಾ ಇನ್ನೊಂದ ಕಟಗೊಂಡರು ಅಡ್ಡಿಯಿಲ್ಲಾ ಹಡದ ಹಡಿತಾನ ತೊಗೊ, ಅದಕ್ಕ ನೀನ ಬೇಕಂತೇನಿಲ್ಲಾ” ಅಂದ ಬಿಟ್ಟಳು.
ಮುಂದ?………………..
ಮುಂದೇನ, ನನ್ನ ಹೆಂಡತಿ ಇದನ್ನ ಒಂದ ದೊಡ್ಡ ಇಶ್ಯು ಮಾಡಿ ಒಂದ ವಾರ ನನ್ನ ಜೊತಿ ನಮ್ಮವ್ವನ ಜೊತಿ ಮಾತು-ಕತಿ ಎಲ್ಲಾ ಬಿಟ್ಟ ಆಷಾಡದ ನೆವಾ ಮಾಡ್ಕೊಂಡ ಈಗ ತವರಮನಿಗೆ ಹೋಗ್ಯಾಳ. ಇನ್ನ ಹಿಂಗ ಶಟಗೊಂಡ ಹೋಗ್ಯಾಳ ಅಂದರ ವಾಪಸರ ಬರತಾಳೊ ಇಲ್ಲೊ ಅಂತ ನಂಗ ಖರೇನ ಚಿಂತಿ ಹತ್ತೇದ.
ಅಲ್ಲಾ, ಹೆಂತಾ ಛಂದ ಜಿಟಿ-ಜಿಟಿ ಮಳಿ ಶುರು ಆಗೇದ, ತಂಪ ವಾತವರಣ, ಸಂಜಿ ಆರುವರಿ ಅಂದರ ಗಂಡ ಮನ್ಯಾಗ ಇರ್ತಾನ, ಬೆಚ್ಚಗ ಅವನ ಜೊತಿ ಇರೋದ ಬಿಟ್ಟ ಇಕಿ ತವರಮನಿಗೆ ಹೋಗ್ಯಾಳ. ಏನ್ಮಾಡ್ತೀರಿ?
ಸರ್ವಜ್ಞ ಏನೋ ’ಇಚ್ಛೆಯನರಿತು ನಡಿಯುವ ಸತಿ ಇರಲು, ಸ್ವರ್ಗಕ್ಕೆ ಕಿಚ್ಚು ಹೆಚ್ಚೆಂದ’ ಅಂತ ಹೇಳಿದಾ ಖರೆ ಆದರ ಇಲ್ಲೆ ನೋಡಿದರ ’ಗಂಡಂದರ ತಮ್ಮ ಇಚ್ಛಾ ಹೇಳಿದರ ಹೆಂಡಂದರ ಗಂಡsಗ ಕಿಚ್ಚ ಹಚ್ಚತಾರ’ ಅನಸಲಿಕತ್ತದ.