“ರ್ರಿ, ಮೊನ್ನೆ ಸಂಡೇ, ವರ್ಲ್ಡ ಮ್ಯಾರೇಜ್ ಡೇ ಇತ್ತಂತ, ನೀವೇನ ಹೇಳಲೇಲಾ ನನಗ” ಅಂತ ಇವತ್ತ ಎದ್ದ ಕೂಡಲೇನ ಕ್ಯಾಮಾರಿಲೆ ನನ್ನ ಹೆಂಡತಿ ರಾಗ ಶುರು ಮಾಡಿದ್ಲು. ಅವನೌನ ಇಕಿಗೆ ಯಾರ ’ವರ್ಲ್ಡ ಮ್ಯಾರೇಜ ಡೇ’ದ್ದ ಬ್ಯಾಟಾ ಹಚ್ಚಿಕೊಟ್ಟರಪಾ ಅಂತ ನಂಗ ತಲಿ ಕೆಟ್ಟತ. ಒಟ್ಟ ನನ್ನ ಹೆಂಡತಿಗೆ ಹಿಂತಾವ ಏನರ ನೆವಾ ಸಿಕ್ಕರ ಸಾಕ, ಕಾರಣ ಇಲ್ಲಾ ಕಂತ ಇಲ್ಲಾ ಗಿಫ್ಟ ವಸೂಲ ಮಾಡಲಿಕ್ಕೆ ನಿಂತ ಬಿಡ್ತಾಳ.
“ಏ, ಅದ ನಮಗ ಸಂಬಂಧ ಇಲ್ಲಲೇ, ಅಮೇರಿಕಾದವರಿಗೆ ಇಷ್ಟ, ನಂಬದ ಮೊನ್ನೆ ನವೆಂಬರದಾಗ ಅನಿವರ್ಸರಿ ಆಗೇದ ಅಲಾ, ಅದ ನಮ್ಮ ಮ್ಯಾರೇಜ ಡೇ” ಅಂದೆ.
“ಏ, ಅದ ಹೆಂಗರಿ? ನಮ್ಮ ಅನಿವರ್ಸರಿ ನಮ್ಮಿಬ್ಬರದ ಇಷ್ಟ. ‘ವರ್ಲ್ಡ ಮ್ಯಾರೇಜ್ ಡೇ’ ಅಂದರ ಜಗತ್ತಿನಾಗ ಲಗ್ನಾದವರಿಗೆ ಎಲ್ಲಾರಿಗೂ ಸಂಬಂಧ, ಅದರಾಗ ನಾವು ಬರತೇವಿ, ನಂಬದು ಸೆಲೆಬ್ರೇಟ್ ಮಾಡಬೇಕಿತ್ತ. ನೀವ ಗಿಫ್ಟ ಕೊಡಸಬೇಕಾಗತದ ಅಂತ ಹೇಳಿಲ್ಲ ಹೌದಲ್ಲ?” ಅಂತ ಅಂದ್ಲು. ಅಲ್ಲಾ,ಏನ ಮೊದ್ಲ ಗೊತ್ತ ಇದ್ದರ ಇಕಿ ಪುರಿ,ಶಾವಿಗಿ ಪಾಯಸಾ ಮಾಡೋರಗತೆನ ಕೇಳಿದ್ಲು.
” ಲೇ, ಹುಚ್ಚಿ. ಅಮೇರಿಕಾದಾಗ ಮಂದಿ ಒಂದ ಬಿಟ್ಟ ನಾಲ್ಕೈದ ಲಗ್ನಾ ಮಾಡ್ಕೋತಾರ ಹಿಂಗಾಗಿ ಅವರಿಗೆ ಎಲ್ಲಾ ಅನಿವರ್ಸರಿ ನೆನಪ ಇಟಗೋಳ್ಳಿಕ್ಕೆ. ಸೆಲೆಬ್ರೇಟ್ ಮಾಡ್ಕೋಳಿಕ್ಕೆ ಆಗಂಗಿಲ್ಲಾಂತ ವರ್ಷಕ್ಕ ಒಂದ ಸರತೆ ಜನರಲ್ಲಾಗಿ ಸಾರ್ವಜನಿಕ ‘ಮ್ಯಾರೇಜ್ ಡೇ’ ಮಾಡ್ಕೋತಾರ. ನಮ್ಮ ಹಣೇಬರಹದಾಗ ಹಂಗ ಇಲ್ಲಾ, ನಮಗ ನಾವ ಸಾಯೊ ತನಕ ಒಂದ ಹೆಂಡತಿ, ಒಂದ ಅನಿವರ್ಸರಿ, ಒಂದ ಮ್ಯಾರೇಜ್ ಡೇ” ಅಂತಾ ನಾ ತಿಳಿಸಿ ಹೇಳಿದೆ.
“ಅಯ್ಯ, ಮಾಡ್ಕೋರಿ ನಿಮಗ್ಯಾರ ಬ್ಯಾಡ ಅಂದಾರ. ನಿಮ್ಮ ಮಾರಿಗೆ ಯಾರರ ಕನ್ಯಾ ಕೊಟ್ಟರ, ನಿಮಗ ಸಾಕೋ ತಾಕತ್ತ ಇದ್ದರ, ಒಂದ ಯಾಕ ಹತ್ತ ಮಾಡ್ಕೋರಿ. ನಾನು ನನ್ನ ಮಕ್ಕಳು ಎಲ್ಲರ ನೀರಿಲ್ಲದ ಭಾವಿ ನೋಡ್ಕೋತೇವಿ” ಅಂತ ಒದರಲಿಕತ್ತಳು.
“ಏ, ಸವಕಾಶ ಮಾತಾಡ್ಲೇ, ಆಜು-ಬಾಜುದವರ ಎಲ್ಲರ ಇವರ ಮನ್ಯಾಗ ಡೊಮೆಸ್ಟಿಕ್ ವೈಲನ್ಸ್ ನಡದದ ಅಂತ ಪೋಲಿಸ್ ಕಂಪ್ಲೇಂಟ್ ಕೊಟ್ಟ ಗಿಟ್ಟಾರ. ನೋಡಿಲ್ಲೆ, ಮಂದಿ ‘ವರ್ಲ್ಡ ಮ್ಯಾರೇಜ್ ಡೇ’ ನರ ಮಾಡ್ಕೊವಲ್ಲರಾಕ ಇಲ್ಲಾ ‘ಶ್ರಾದ್ಧ’ನರ ಮಾಡ್ಕೋವಲ್ಲರಾಕ, ನಮಗ್ಯಾಕ ಅದರ ಉಸಾಬರಿ, ಸುಮ್ಮನ ನಾವೇಕ ಜಗಳಾಡಿ ಇದ್ದದ್ದರಾಗ ಛಂದ ಇದ್ದ ಸಂಸಾರ ಹಾಳ ಮಾಡ್ಕೋಬೇಕ?” ಅಂತ ನಾನ ಒಂದ ಸ್ವಲ್ಪ ಸಮಾಧಾನ ತೊಗೊಂಡ ಹೇಳಿದೆ.
“ಅಲ್ಲಾ, ಅದಿರಲಿ, ನಿನಗ ಯಾರ ಹೇಳಿದರಲೇ ಹೋದ ಸಂಡೇ ‘ವರ್ಲ್ಡ ಮ್ಯಾರೇಜ್ ಡೇ’ ಇತ್ತು ಅಂತ” ಅಂತ ನಾ ಕೇಳಿದರ ಮೊನ್ನೆ ಅಮೇರಿಕಾದಿಂದ ಅವರ ಮಾಮಾ ಫೊನ ಮಾಡಿದ್ನಂತ, ಅವಂಗ ಅವನ ಹೆಂಡತಿಗೆ ಅಲ್ಲಿ ಮಂದಿ ‘ವರ್ಲ್ಡ ಮ್ಯಾರೇಜ್ ಡೇ’ ದಿವಸ ಕರದ ಸನ್ಮಾನ ಮಾಡಿದರಂತ. ಯಾಕಪಾ ಅಂದರ ಅವರ ಊರಾಗ ಅವರದೊಂದ ಪೇರ್ (ಜೋಡಿ) ಒಟ್ಟ ಡೈವರ್ಸ ಮಾಡಲಾರದ ಇಪ್ಪತ್ತ ಮೂರ ವರ್ಷದಿಂದ ಸೇಮ ಪಾರ್ಟನರ ಜೊತಿ ಇದ್ದದ್ದಂತ.
ಏನ್ಮಾಡ್ತೀರಿ. ಇಲ್ಲೆ ನಮ್ಮಪ್ಪ ನಲವತ್ತ ವರ್ಷದಿಂದ ಒಬ್ಬಕಿ ಜೋಡಿನ ಇದ್ದಾನ ಅವಂಗ ಮಾತಾಡ್ಸೋರ ಇಲ್ಲಾ, ನಮ್ಮಜ್ಜ ಅರವತ್ತ ವರ್ಷ ನಮ್ಮಜ್ಜಿ ಜೊಡಿ ಸಂಸಾರ ಮಾಡಿ ಸಾಕ ಸಾಕಾಗಿ ಕಡಿಕೆ ಅವನ ತಲಿಕೆಟ್ಟ ಅಕಿನ್ನ ಬಿಟ್ಟ ಸ್ವರ್ಗಕ್ಕ ಹೋದಾ. ನಾನೂ ಹಂಗ ಹಿಂಗ ಗುದ್ಯಾಡ್ಕೋತ ಹದಿನೈದ ವರ್ಷ ಕಳದೇನಿ. ಇಲ್ಲೆ ನಮಗ ಯಾರು ಸನ್ಮಾನ ಮಾಡೋದ ಹೋತ ನಮ್ಮ ಬಗ್ಗೆ ಹೆಂಗ ಇದ್ದೇವಿ ಅಂತ ಕೇಳೋರ ಇಲ್ಲಾ. ಅಲ್ಲೆ ನೋಡಿದರ ಗಂಡಾ-ಹೆಂಡತಿ ಕೂಡಿ ಒಂದ ಇಪ್ಪತ್ತ ವರ್ಷ ಇದ್ದರ ಅದೊಂದ ದೊಡ್ಡ ಸಾಧನೆನ.
ಹಿಂಗಾಗಿ ಅವರ ವರ್ಷಕ್ಕೊಮ್ಮೆ ‘ವರ್ಲ್ಡ ಮ್ಯಾರೇಜ್ ಡೇ’ ಅಂತ ಸೆಲೆಬ್ರೇಟ ಮಾಡಿ, ಡೇಟ ಬಾರ ಆಗಿದ್ದ ದಂಪತ್ತ ಹುಡಕಿ ಸನ್ಮಾನ ಮಾಡ್ತಾರ. ಅದ ಗಂಡಗ ಸನ್ಮಾನನೋ ಇಲ್ಲಾ ನೀ ಹೆಂತಾ ಹುಚ್ಚ, ಎಷ್ಟ ವರ್ಷಗಟ್ಟಲೇ ಒಂದ ಕಟಗೊಂಡ ಒದ್ಯಾಡಲಿಕತ್ತಿ, ಅಕಿನ್ನ ಬಿಟ್ಟ ಇನ್ನೊಂದ ಮಾಡ್ಕೋಳಿಕ್ಕೆ ದಮ್ಮ ಇಲ್ಲೇನ ಅಂತ ಅಸಂಯ್ಯ ಮಾಡತಾರೊ ಆ ದೇವರಿಗೆ ಗೊತ್ತ.
ಹೋಗಲಿ ಬಿಡ್ರಿ ಅವರ ಏನರ ಹಾಳಗುಂಡಿ ಬಿಳವಲ್ಲರಾಕ, ಅನ್ನಂಗ ಇನ್ನೊಂದ ಹೇಳೋದ ಮರತೆ ಮೊನ್ನೆ ನಮ್ಮ ಬೆಂಗಳೂರಾಗೂ ಯಾವದೊ ಒಂದ ಸುಡಗಾಡ ರಿಸಾರ್ಟನಾಗ ‘ವರ್ಲ್ಡ ಮ್ಯಾರೇಜ್ ಡೇ’ ಪಾರ್ಟೀ ಇಟಗೊಂಡಿದ್ದರಂತ, ಅವರು ವಯಸ್ಸಾದ ಒಂದಿಷ್ಟ ಪೇರಗೊಳಿಗೆ ಸನ್ಮಾನ, ಒಂದಿಷ್ಟ ಗಂಡಾ-ಹೆಂಡತಿಗೊಳಿಗೆ ಜೋಡಿ-ಜೋಡಿ ಕಾಂಪಿಟೇಶನ್ ಇಟಗೊಂಡ ತಮ್ಮಷ್ಟಕ್ಕ ತಾವ ಎಂಜಾಯ ಮಾಡಲಿಕತ್ತಿದ್ದರಂತ, ಒಮ್ಮಿಂದೊಮ್ಮೇಲೆ ಗೇಟನಾಗ ಗದ್ಲಾ ಶುರು ಆದಂಗ ಆತಂತ. ಏನಪಾ ಅಂತ ನೋಡಿದರ ವಯಸ್ಸಿಗೆ ಬಂದರೂ ಕನ್ಯಾ ಸಿಗಲಾರದ ಹುಚ್ಚ ಹಿಡದಂಗ ಅಡ್ದ್ಯಾಡೊ ಒಂದ ಏಳ ಎಂಟ ಹುಡುಗುರು ಗೇಟನಾಗ ‘ವರ್ಲ್ಡ ಮ್ಯಾರೇಜ್ ಡೇ’ಗೆ ಧಿಕ್ಕಾರ ಅಂತ ಕರೆ ಮಸಿ ಅರಬಿ ಹಿಡ್ಕೊಂಡ ಒದರಲಿಕತ್ತಿದ್ದರಂತ. ಪಾಪ, ಆ ಹುಡಗರಿಗೆ ವಯಸ್ಸಾದರು ಕನ್ಯಾ ಸಿಗವಲ್ವು, ಇಲ್ಲೆ ಅವರ ಮುಂದ ಅವರಿಗೆ ಹೊಟ್ಟಿ ಕಿಚ್ಚ ಆಗೋಹಂಗ ಈ ಲಗ್ನಾದವರು ಮ್ಯಾರೇಜ್ ಡೇ ಮಾಡ್ಕೊಂಡರ ಅವರಿಗೆ ಹೆಂಗ ಅನಸಬೇಕ ನೀವ ಹೇಳರಿ.
ಆದರ ಒಂದ ಮಜಾ ನೋಡ್ರಿ ಇಲ್ಲೆ, ನನ್ನಂಗ ಲಗ್ನ ಆದೊಂಗ ಯಾಕರ ಮದುವಿ ಆದೇಪಾ, ಹೆಂತಾ ಛಲೊ ಒಬ್ಬವನ ಆರಾಮ ಇರಬಹುದಿತ್ತಲಾ ಅನಸಿರತದ, ಅತ್ಲಾಗ ಕನ್ಯಾ ಸಿಗಲಾರದಂವಾ, ಯಾವಾಗ ಕನ್ಯಾ ಸಿಗತದೋ ಯಾವಾಗ ಮದುವಿ ಆಗ್ತೇನೋ ಅಂತ ಅಗದಿ ಆತ್ಮಹತ್ಯೆ ಮಾಡ್ಕೋಳೋರು ಕೆರಿ ಕಟ್ಟಿಗೆ ತುದಿಗಾಲ ಮ್ಯಾಲೆ ನಿಂತಂಗ ನಿಂತಿರ್ತಾನ.
“ಲೇ, ಹಂಗ್ಯಾಕ ಹುಚ್ಚರಂಗ ಕನ್ಯಾ-ಕನ್ಯಾ ಅಂತ ಬಡ್ಕೋತಿ, ಲಗ್ನ ಮಾಡ್ಕೋಂಡ ನೀ ಸಾಧಸೋದು ಅಷ್ಟರಾಗ ಅದ, ನಾವ ಒಬ್ಬರ ಅನುಭವಸಲಿಕತ್ತೇವಿ ಕಾಣಂಗಿಲ್ಲಾ” ಅಂತ ಅಂದರ
“ಮಗನ ನಿಂದ ಲಗ್ನ ಆಗೇದ ಅದಕ್ಕ ಈಗ ಹಿಂಗ ಅಂತಿ, ಇದ ಮಾತ ಮದುವಿ ಮಾಡ್ಕೊಳೊಕಿಂತ ಮೊದ್ಲ ಹೇಳ್ಬೇಕಿತ್ತ” ಅಂತಾರ. ಅದು ಖರೇನ, ಕೆಟ್ಟ ಮ್ಯಾಲೆ ಬುದ್ಧಿ ಬರೋದ ಅಲಾ. ಇರಲಿ ಯಾರ ಹಣೇಬರಹದಾಗ ಅನುಭವಿಸೋದ ಬರದದ ಅವರಿಗೆ ಲಗೂನ ಕನ್ಯಾ ಸಿಕ್ಕ ಮದುವಿ ಆಗವಲ್ತಾಕ.
ಏನೋ ನನ್ನ ಹೆಂಡತಿ ಮುಂಜಾನೆ ಎದ್ದ ‘ವರ್ಲ್ಡ ಮ್ಯಾರೇಜ್ ಡೇ’ ವಿಷಯ ತಗದ್ಲು ಅಂತ ಇಷ್ಟ ಹೇಳಬೇಕಾತ. ಇಲ್ಲಾಂದರ ನಾ ಅಂತು ಕನಸಿನಾಗೂ ಈ ವಿಷಯ ತಗೆಂಗಿಲ್ಲಾ.
ಮತ್ತ ನಿಮಗೇಲ್ಲಾ ಅಂದರ ಲಗ್ನಾದೊರಿಗೆಲ್ಲಾ ‘ಹ್ಯಾಪಿ ಮ್ಯಾರೇಜ್ ಡೇ’. ವಿಶ್ ಮಾಡೋದ ಸ್ವಲ್ಪ ಲೇಟಾತು ಆದರು ಮರತಿಲ್ಲ, ಹಂಗ ನೋಡಿದ್ರ ಜಗತ್ತಿನಾಗ ಹ್ಯಾಪಿ ಮ್ಯಾರೇಜ ಅಂತ ಇರಂಗಿಲ್ಲಾ ಆದ್ರು ಹೆಂಡತಿನ್ನ ಹ್ಯಾಪಿ ಇಡಲಿಕ್ಕರ ಹಿಂತಾವೇಲ್ಲಾ ‘ಡೇ’ ಸೆಲೆಬ್ರೇಟ ಮಾಡ್ಕೋತ ಇರಬೇಕು ಇಲ್ಲಾಂದರ ಅಕಿ ನಂಬದ ಯಾವ ‘ಡೇ’ ಸೆಲೆಬ್ರೇಟ ಮಾಡ್ತಾಳ ಅಂತ ನಾ ಏನ ನಿಮಗ ಬಾಯಿಬಿಟ್ಟ ಹೇಳ ಬೇಕಾಗಿಲ್ಲಲಾ?