ಕಂಡ ಕಂಡಲ್ಲೆ ಹಲ್ಲ್ ಕಿಸಿ ಬ್ಯಾಡರೀ…….

ನನ್ನ ಹೆಂಡತಿ ಭಾಳ ಹಸನ್ಮುಖಿ ಯಾಕಂದರ ಅಕಿಗೆ ಮಾತ ಮಾತಿಗೆ ಹಲ್ಲ ಕಿಸಿಯೋದ ಒಂದ ಕೆಟ್ಟ ಚಟಾ, ಅದರಾಗ ಇತ್ತೀಚಿಗೆ ಮನ್ಯಾಗ ನಕ್ಕದ್ದ ಇಷ್ಟ ಸಾಲದು ಅಂತ ಮುಂಜಾನೆ ವಾಕಿಂಗ ಹೋದಾಗ ‘ಲಾಫಿಂಗ ಥೆರಪಿ ಕ್ಲಾಸಿಗೆ’ ಬ್ಯಾರೆ ಹೊಂಟಾಳ ಹಿಂಗಾಗಿ ತಡಕೋಳಿಕ್ಕೆ ಆಗಲಾರದಷ್ಟ ನಗತಾಳ. ಹಂಗ್ಯಾಕ ಎಲ್ಲಾದಕ್ಕೂ ನಗತಿ ಕಾರಣ ಇಲ್ಲಾ ಕಂತ ಇಲ್ಲಾ ಅಂದರ
“ರ್ರೀ, ನಕ್ಕಷ್ಟ ಆಯುಷ್ಯ ಜಾಸ್ತಿ ಆಗ್ತದಂತ, ನಿಮಗೇನ ತಲಿಗೊತ್ತ ಸುಮ್ಮನ ಕೂಡ್ರಿ” ಅಂತಾಳ.
ಅಲ್ಲಾ ಅಕಿ ಆಯುಷ್ಯ ಜಾಸ್ತಿ ಆದಷ್ಟ ನಂದ ಕಡಿಮೆ ಆಗ್ತದಂತ ಅಕಿಗೆ ಗೊತ್ತಿಲ್ಲಾ.
“ಲೇ, ಹುಚ್ಚಿ ಹಂಗ ಹುಚ್ಚುಚಾಕಾರ ನಕ್ಕರ ಹಿಡದ ಜೈಲಿಗೆ ಹಾಕ್ತಾರ” ಅಂತ ಹೇಳಿದ್ರು ಕೇಳವಳ್ಳು.
“ನಕ್ಕರ ಯಾರರ ಜೇಲಿಗೆ ಹಾಕ್ತಾರ, ಹುಚ್ಚರ ಆಸ್ಪತ್ರಿಗೆ ಹಾಕತಾರ, ಏನ ತಲಿನೋ ಏನೋ” ಅಂತ ಮತ್ತ ನಗತಾಳ.
ಅಲ್ಲಾ ಕೆಲವಬ್ಬರಿಗೆ ಹಿಂಗ ನಕ್ಕೋತ ಇರೋ ಕೆಟ್ಟ ಚಟಾ ಇರತದ, ಜನಾ ಅವರಿಗೆ ಹಸನ್ಮುಖಿ ಅಂತಾರ ಖರೆ ಆದರು ನಮ್ಮಂತಾ ಗಂಭೀರ ಜನರಿಗೆ ಇವರ ಯಾಕ ಮಾತ ಮಾತಿಗೆ ನಕ್ಕಾಗ ತಡಕೋಳಿಕ್ಕೆ ಆಗಂಗಿಲ್ಲಾ. ಹಿಂಗ ಕಾರಣ ಇಲ್ಲದ ನಗೋದರಿಂದ ಕೆಲವೊಮ್ಮೆ ಭಾರಿ ಪ್ರಾಬ್ಲೇಮ್ ಆಗ್ತಾವ. ನಾ ನಕ್ಕರ ಜೈಲಿಗೆ ಹಾಕ್ತಾರ ಅಂದರ ಅಕಿ ನಂಗೇಲ್ಲೋ ಹುಚ್ಚ ಹಿಡದದ ಅಂತ ತಿಳ್ಕೊಂಡಿರಬೇಕು ಆದರ ಮೊನ್ನೆ ಹಿಂಗ ಹುಚ್ಚುಚಾಕಾರ ನಗೋದರ ಸಂಬಂಧ ಏನ ಆತ ಕೇಳರಿ ಇಲ್ಲೆ.
ಈಗ ಒಂದ ಆರ-ಏಳ ತಿಂಗಳದ ಹಿಂದಿನ ಮಾತ ಇರಬೇಕು. ಮುಂಬಯಿದಾಗ ಒಂದ ಇಪ್ಪತ್ತ ಮೂವತ್ತ ರಿಟೈರ್ಡ ಮಂದಿ ಸೇರಿ ಒಂದ ಲಾಫ್ಟರ್ ಯೋಗಾ ಕ್ಲಬ್ ಅಂತ ಮಾಡ್ಕೋಂಡ ಅಲ್ಲೇ ಒಂದ ಶೆಡನಾಗ ದಿವಸಾ ಮುಂಜಾನೆ ಎದ್ದ ನನ್ನ ಹೆಂಡತಿಗತೆ ಜೋರ ಜೋರ ಹೊಟ್ಟಿ ಹುಣ್ಣಾಗೋ ಹಂಗ ನಗತಿದ್ದರಂತ. ನಗೋದ ಲಾಫ್ಟರ್ ಥೇರಪಿ, ಇದು ಒಂಥರಾ ಯೋಗಾ ಇದ್ದಂಗ ಅಂತ ರಾಮದೇವ ಬಾಬಾ ಹೇಳಿದಾಗಿಂದ ಹಿಂಗ ಮುಂಜ-ಮುಂಜಾನೆ ಎದ್ದ ಸುಮ್ಮ ಸುಮ್ಮನ ನಗೋರು.
ಹಿಂಗ ನಕ್ಕರ ಸ್ಟ್ರೆಸ್ ರಿಲೀಸ್ ಆಗ್ತದ, ಮನಸ್ಸ ಹಗರ ಆಗ್ತಾದ, ಆಯುಷ್ಯ ಜಾಸ್ತಿ ಆಗ್ತದ ಅಂತೇಲ್ಲಾ ಹೇಳ್ತಾರ ಖರೆ ಆದ್ರ ಇದನ್ನ ನಿಂತ ನೋಡೋರಿಗೆ, ಇಲ್ಲಾ ಅಲ್ಲೆ ಆಜು ಬಾಜು ಮನಿ ಮಾಡ್ಕೊಂಡ ಇದ್ದೋರಿಗೆ ಸಹಿಸಲಿಕ್ಕೆ ಆಗಂಗಿಲ್ಲಾ. ಅವರಿಗೆ ಇವರ ಹಿಂಗ ಹುಚ್ಚುಚಾಕರ ನಗೋದ ನೋಡಿ ಹುಚ್ಚ ಹಿಡಿಯೋದೊಂದ ಬಾಕಿ ಇರತದ.
ಅಲ್ಲೇ ಮುಂಬಯಿದಾಗು ಹಿಂಗ ಆತ, ಅಲ್ಲೇನ ಒಂದಿಷ್ಟ ಮಂದಿ ಲಾಫ್ಟರ್ ಯೋಗಾ ಕ್ಲಬ್ ಅಂತ ಮಾಡ್ಕೋಂಡ ದಿವಸಾ ಮುಂಜಾನೆ ಹೊಟ್ಟಿ ಹುಣ್ಣ ಆಗೊ ಹಂಗ ಶೆಡನಾಗ ನಗತಿದ್ದರಲಾ, ಅದನ್ನ ನೋಡಿ ಬಾಜು ಮನಿ ಮುದಕಗ ನಗಲಿಕ್ಕೂ ಆಗಲಿಲ್ಲಾ, ತಡಕೊಳ್ಳಿಕ್ಕೂ ಆಗಲಿಲ್ಲಾ. ಅಂವಾ ಕಡಿಕೆ ನೋಡಿ, ನೋಡಿ ತಲಿಕೆಟ್ಟ ‘ಹಿಂಗ ಮಂದಿ ದಿವಸಾ ನಮ್ಮ ಮನಿ ಬಾಜುಕ ನಕ್ಕರ ನಂಗ ಮೆಂಟಲಿ ಸ್ಟ್ರೇಸ್ ಆಗಿ ಹುಚ್ಚ ಹಿಡಿತದ, ಇದನ್ನ ಬಂದ ಮಾಡಸರಿ’ ಅಂತ ಸೀದಾ ಮುಂಬೈ ಹೈಕೋರ್ಟಗೆ ಹೋದನಂತ. ಜಡ್ಜ ಇವರದ ಹಕೀಕತ ಪೂರ್ತಿ ಕೇಳಿ ಲಾಫ್ಟರ್ ಕ್ಲಬನವರಿಗೆ
“ಹೌದು, ಈ ಅಜ್ಜಾ ಹೇಳೋದ ಕರೆಕ್ಟ ಅದ. ಇದ ನಿಮ್ಮ ಲಾಸ್ಟ ಲಾಫ್, ಇನ್ನ ಮುಂದ ಹಂಗ ಕಂಡ ಕಂಡಲ್ಲೆ ನಗೋದನ್ನ ಬಂದ ಮಾಡರಿ” ಅಂತ ಆರ್ಡರ ಕೊಟ್ಟ ಬಿಟ್ಟರಂತ.
ಈ ಸುದ್ದಿ ಕೇಳಿ ಪಾಪ, ಆ ಕ್ಲಬನವರು ಸಿಟ್ಟ ತಡಕೋಳ್ಳಿಕ್ಕೆ ಆಗಲಾರದ ಮತ್ತ ಜೋರ ಜೋರ ನಗಲಿಕತ್ತರಂತ. ಅದನ್ನ ನೋಡಿ ಜಡ್ಜ ಸಾಹೇಬರು
“ಇದು ನಗೋ ವಿಷಯಲ್ಲಾ, ನಗೋದ ಒಂದ ಸಾಂಕ್ರಾಮಿಕ ರೋಗ ಇದ್ದಂಗ. ಹಿಂಗ ಮಂದಿ ಮನಿ ಬಾಗಲದಾಗ, ಖಿಡಕ್ಯಾಗ ೨೦-೩೦ ಜನಾ ಸೇರಿ ಗೊಳೋ ಅಂತ ಮುಂಜ ಮುಂಜಾನೆ ಎದ್ದ ನಕ್ಕರ ಅವರಿಗೆ ಹುಚ್ಚ ಹಿಡಿತದ, ನೀವು ‘laugh through your belly! Laugh through your eyes! Laugh through your ears!’ ಅಂತ ದೇಹದಾಗಿನ ಎಲ್ಲಾ organs thru’ ನಕ್ಕರ ನಡಿಯಂಗಿಲ್ಲಾ. ಹಿಂಗ ನೀವು ಹಿಂಗ orally ನಕ್ಕರ ಆಜು-ಬಾಜುದವರಿಗೆ aural agression ಆಗ್ತದ” ಅಂತ ಹೇಳಿ ಬಿಟ್ಟರಂತ.
ಏನ್ಮಾಡ್ತೀರಿ. ಇನ್ನ ಮುಂದ ನೀವೆಲ್ಲರ ಸ್ಟ್ರೇಸ್ ರೀಲೀಫ್ ಅಂತ ಕಂಡ ಕಂಡಲ್ಲೆ ಹಲ್ಲ ಕಿಸದರ ಆಜು-ಬಾಜುದವರ ಸ್ಟ್ರೇಸ್ ಜಾಸ್ತಿ ಆಗತದ ಅಂತ, ಹುಷಾರಿರಿ ಮತ್ತ. ಅಲ್ಲಾ ನನಗಂತು ಅನಿವಾರ್ಯ, ನಾ ಅನುಭವಿಸಬೇಕ. ನನ್ನ ಹೆಂಡತಿ ತನ್ನ stress relief ಸಂಬಂಧ ನಕ್ಕರ ನಾ stress ಮಾಡ್ಕೋಳಬೇಕ ಆದರ ಆಜು-ಬಾಜುದವರ ಯಾಕ ಸುಮ್ಮನಿರ್ತಾರಿ?
ಇದು ವಯಸ್ಸಾದವರ ಹಲ್ಲ ಕಿಸಿಯೊ ಬಗ್ಗೆ ಆತ, ಇನ್ನ ನನ್ನಂಗ ವಯಸ್ಸ ಇದ್ದವರ ಹಲ್ಲ ಕಿಸಿಯೋದರ ಬಗ್ಗೆ ಒಂದ ಘಟನೆ ಹೇಳ್ತೇನಿ ಕೇಳ್ರಿ.
ಒಂದ ಮೂರ ತಿಂಗಳ ಹಿಂದ ಪೊಲಂಡನಾಗ ಒಬ್ಬಾಕಿ ಹಲ್-ಕಟ್ ಡಾಕ್ಟರ ಅಂದರ ಹಲ್ಲಿನ ಡಾಕ್ಟರ ತನ್ನ ಕಡೆ ಬಂದ ಪೇಶಂಟ ಒಬ್ಬವಂದ ಎಲ್ಲಾ ಹಲ್ಲು ಎಚ್ಚರ ತಪ್ಪಿಸಿ ತಗದ ಬಿಟ್ಟಳಂತ. ಪಾಪ, ಅವಂದು ಇನ್ನು ಕಡದ-ಜಗದ ತಿನ್ನೋ ವಯಸ್ಸಿತ್ತು, ಏನೋ ಒಂದ ಹಲ್ಲ ನೋಯಿಸ್ತಿತ್ತು, ಈ ಡಾಕ್ಟರ ಪರಿಚಯದೋಕಿ ಅಂತ ಹೋದರ ಅಕಿ ಅವಂದ ಅಷ್ಟು ಹಲ್ಲ ಉದರಿಸಿ ಕಳಿಸಿದ್ಲು. ಆಕಿ ಎಲ್ಲಾ ಬಿಟ್ಟ ಅವನ ಹಲ್ಲ ಯಾಕ ಉದರಿಸದ್ಲು ಅಂದರ ಆ ಪೇಶಂಟಗೆ ಕಂಡ ಕಂಡ ಹುಡುಗ್ಯಾರನ ನೋಡಿ ಹಲ್ಲ ಕಿಸಿಯೋ ಚಟಾ ಇತ್ತಂತ. ಹಂಗ ಎದರಗಿನ ಹುಡುಗಿನೂ ಇವನ ನೋಡಿ ಹಲ್ಲ ಕಿಸದರ ಅಕಿ ಹಿಂದ ಹೋಗಿ ಬಿಡೋಂವಾ. ಮುಂದ ಮತ್ತೊಬ್ಬಕ್ಕಿ ಯಾರರ ಹಲ್ಲ ಕಿಸದರ ಈಕಿನ್ನ ಬಿಡೊಂವಾ ಅಕಿನ್ನ ಬೆನ್ನ ಹತ್ತಿ ಹೋಗಿ ಬಿಡೊಂವಾ. ಇದನ್ನ ನೋಡಿ ತಲಿ ಕೆಟ್ಟ ಆ ಡಾಕ್ಟರ, ಈಗ ಇಂವಾ ಬರೊಬ್ಬರಿ ಸಿಕ್ಕಾನ ತಡಿ ಮಗಾ, ಇನ್ನೊಮ್ಮೆ ಹಲ್ಲ ಕಿಸಿಲಾರದಂಗ ಮಾಡಬೇಕ ಅಂತ extra doze anesthesia ಕೊಟ್ಟ ಅಷ್ಟು ಹಲ್ಲು ಉದರಿಸಿಬಿಟ್ಟಳಂತ.
ಅಲ್ಲಾ, ಅಂವಾ ಹಲ್ಲ್ ಕಿಸಿದರ ಈಕಿ ವಸಡಿದ ಏನ ಹೋತ ಗಂಟು ಅಂತೀರೇನ? ಮಜಾ ಕೇಳರಿ ಇಲ್ಲೆ, ಆ ಡಾಕ್ಟರ ಇವನ ex-girl friend, ಈ ಮಗಾ ಅಕಿಗೆ ಕೈಕೊಟ್ಟ ಬ್ಯಾರೆಕಿ ಜೋತಿಗೆ ಹಲ್ಲ ಕಿಸಗೊಂಡ ಹೋಗಿದ್ದಾ. ಆ ಸಂಕಟ ತಾಳಲಾರದ ಈಕಿ ಅವನ ಹಲ್ಲ ಅಷ್ಟು ಇತಿಶ್ರೀ ಮಾಡಿ ಅವಂಗ ಬಚ್ಚ ಬಾಯಿ ಮಾಡಿ ಬಾಯಾಗ ಬಟ್ಟ ಇಟ್ಟ ಕಳಸಿದಳು. ಈಗ ಅಕಿಗೆ medical malpractice ಕೇಸ ಒಳಗ ಜೇಲನಾಗ ಹಾಕ್ಯಾರ ಆ ಮಾತ ಬ್ಯಾರೆ. ಆದ್ರು, ಪಾಪ ಅವನ ಹಣೇಬರಹ ನೋಡ್ರಿ ಹಲ್ಲಂತೂ ಹೋದವು, ಅವನ present ಗೆಳತಿ ” ಈ ಬಚ್ಚ್ ಬಾಯಿ ತೊಗೊಂಡ ಏನ್ಮಾಡಬೇಕು, ಇನ್ನಮುಂದ ಇವಂಗ ಕಡಿಲಿಕ್ಕೆ ಬರಂಗಿಲ್ಲಾ” ಅಂತ ಇವಂಗ ಹಲ್ಲ ಕಿಸದ ಕೈ ಕೊಟ್ಟ ಹೋಗಿ ಬಿಟ್ಟಳಂತ.
ಏನ್ಮಾಡ್ತೀರಿ, ಇನ್ನ ಅಂವಾ ಯಾವದರ ಹುಡಗಿ ನೋಡಿ ಹಲ್ಲ ಕಿಸಿ ಬೇಕಂದರು ಹಲ್ಲ್ ಸೆಟ್ ಹಾಕೋಬೇಕು.
ಅದಕ ಹೇಳೊದು ಡಾಕ್ಟರಗೊಳ ಜೊತಿ ಛಲೋ ಇರಬೇಕು ಅಂತ.
ಅಲ್ಲಾ ಎಲ್ಲಾ ಬಿಟ್ಟ ಈಗ ಯಾಕ ಈ ವಿಷಯ ಬಂತು ಅಂದರ ಮಾರ್ಚ ೬ ಕ್ಕ ಇಂಟರ್ನ್ಯಾಶನಲ್ ಡೆಂಟಿಸ್ಟ ಡೇ ಅದಕ್ಕ ನೆನಪಾತ ಇಷ್ಟ. ಹಂಗ ನೀವು ನಿಮ್ಮ ಡೆಂಟಿಸ್ಟಗೆ ಅವತ್ತ ವಿಶ್ ಮಾಡಿ ಬಿಡರಿ. ಮತ್ತೇಲ್ಲರ ಅವರ ಸಿಟ್ಟಾಗಿ….. ಕಡಿಕೆ ಇರೋ ಒಂದಿಷ್ಟ ಹಲ್ಲು ಎಲ್ಲರ ಉದರಸಿ-ಗಿದರಸ್ಯಾರ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ