ಮೊನ್ನೆ ನಮ್ಮನಿಗೆ ಮುಂಜ ಮುಂಜಾನೆ ಬಂದ ನಮ್ಮ ಮೋನಪ್ಪ ಮಾಮಾ ನನ್ನ ಮಗಾ ಮುಂಜಾನೆ ಎದ್ದ ಸಂಧ್ಯಾವಂದನಿ ಮಾಡೋದ ನೋಡಿ ಗಾಬರಿ ಆಗಿ ಬಿಟ್ಟಾ. ನಂಗ ಕರದ
“ಲೇ, ಮಗನ ನೋಡ ನಿನ್ನ ಮಗನ್ನ, ಅವನ್ನ ನೋಡಿ ಕಲಿ, ನೀ ಏನರ ಮಾಡ್ತಿ ಏನಲೇ ಸಂಧ್ಯಾವಂದನಿ?” ಅಂತ ನನಗ ಜೋರ ಮಾಡಿದಾ. ನಾ ಮುಂಜ ಮುಂಜಾನೆ ಎದ್ದ ಇವಂದೇನೊ ಮಾರಾಯಾ ಅಂತ ತಿರಗಿ
“ಏ, ನಂದ ಲಗ್ನ ಆಗೇದೋ ಮಾರಾಯಾ, ಎಲ್ಲಿ ಸಂಧ್ಯಾವಂದನಿ…ಲಗ್ನ ಆದ ಮ್ಯಾಲೆ ಯಾರರ ಸಂಧ್ಯಾವಂದನಿ ಮಾಡ್ತೇರೇನ? ಈಗ ನಿನ್ನ ಮಗಾ ಏನ್ ಮಾಡ್ತಾನೇನ್?” ಅಂತ ಅವಂಗ ಉಲ್ಟಾ ಅಂದೆ. ಅಂವಾ ಅದಕ್ಕ
“ಅದನ್ನ ಹೇಳೋದ್ಲೇ, ನೀನು ಮಾಡಂಗಿಲ್ಲಾ, ನನ್ನ ಮಗನು ಮಾಡಂಗಿಲ್ಲಾ, ಲಗ್ನ ಆದ ಮ್ಯಾಲೆ ಸಂಧ್ಯಾವಂದನಿ ಮಾಡಬಾರದ ಅಂತ ಯಾರ ಹೇಳ್ಯಾರಲೇ ದನಾಕಾಯೋನ. ಆ ಹುಡಗನ್ನ ನೋಡಿ ಕಲಿರಿ, ಮುಂಜವಿ ಆಗಿ ಒಂಬತ್ತ ತಿಂಗಳಾದರು ಎಷ್ಟ ಛಂದ ಸಂಧ್ಯಾವಂದನಿ ಮಾಡ್ತದ ಹುಡಗಾ” ಅಂತ ನನ್ನ ಮಗನ್ನ ನನ್ನ ವಿರುದ್ಧ ಎತ್ತಿ ಕಟ್ಟಲಿಕತ್ತಾ.
ಖರೆ ಹೇಳ್ಬೇಕಂದರ ನನ್ನ ಮಗಗ ಅಂತೂ ಯಾರರ ಸಂಧ್ಯಾವಂದನಿ ಮಾಡ್ತಿ ಅಂದರ ಭಾಳ ಅಸಂಯ್ಯ ಆಗೋದ. ಅದರಾಗ ಅವನ ದೋಸ್ತರ ಒಂದಿಬ್ಬರಂತೂ
’ಲೇ, ಇಂವಾ ಇನ್ನೂ ಸಂಧ್ಯಾವಂದನಿ ಮಾಡ್ತಾನ’ ಅಂತ ಹೇಳಿ ಸಾಲ್ಯಾಗ ಕಾಡಸ್ತಿದ್ದರಂತ. ಅಂವಾ ನನಗ ಒಂದ ಸರತೆ ಬಂದ ಹೇಳಿದಾಗ ನಾ ಅವಂಗ ಒಂದ ಮಾತ ಹೇಳಿದ್ದೆ
“ಇಲ್ಲ ನೋಡಿಲ್ಲೆ, ನಾ ನಿಮ್ಮವ್ವನ ಮಾತ ಕೇಳಿ ಸಾಲಾ ಸೂಲಾ ಮಾಡಿ ಮೂರ ಲಕ್ಷ ಖರ್ಚ ಮಾಡಿ ಮುಂಜವಿ ಮಾಡೇನಿ ಮಗನ, ಆ ಸಾಲ ಮುಟ್ಟೊತನಕ ನೀ ಏನರ ಸಂಧ್ಯಾವಂದನಿ ಬಿಟ್ಟರ ನೋಡ” ಅಂತ ಧಮಕಿ ಕೊಟ್ಟಿದ್ದೆ, ಹಿಂಗಾಗಿ ಪಾಪ ಆ ಹುಡಗ ನಮ್ಮಪ್ಪನ ಸಾಲ ಲಗೂ ಮುಟ್ಟಲಿ ಅಂತ ದಿವಸಾ ಸಂಧ್ಯಾವಂದನಿ ಮಾಡ್ತಿತ್ತ.
ನಾ ಖರೇ ಇವತ್ತ ಸಿರಿಯಸ್ ಆಗಿ ವಿಚಾರ ಮಾಡಿದ್ರ ನಾ ಯಾಕ ಹೆಂಡ್ತಿ ಮಾತ ಕೇಳಿ ಅಷ್ಟ ಖರ್ಚ ಮಾಡಿ ಮಗನ ಮುಂಜವಿ ಮಾಡಿದೆ ಅಂತ ಅನಸಲಿಕತ್ತದ. ಅಲ್ಲಾ ನಾ ನಮ್ಮಪ್ಪನ ಅರವತ್ತ ವರ್ಷದ ಶಾಂತಿ ಇಂದ ಹಿಡದ ಎಪ್ಪತ್ತ ವರ್ಷದ ಶಾಂತಿ ತನಕ ನಡಕ ಏನೇನ ಫಂಕ್ಶನ್ ಬಂದವಲಾ, ಅಂದರ ನನ್ನ ಮದವಿ, ನನ್ನ ತಂಗಿ ಮದುವಿ ಎಲ್ಲಾ ಹಿಡದನೂ ಮೂರ ಲಕ್ಷ ಖರ್ಚ ಮಾಡಿದ್ದಿಲ್ಲಾ ಹಂತಾದ ಬರೇ ನನ್ನ ಮಗನ ಒಂದ ಮುಂಜವಿಗೆ ಇಷ್ಟ ಖರ್ಚ ಆತಲಾ ಅಂತ ಜೀವ ಇವತ್ತಿಗೂ ಮರಗತದ.
ಅದಕ್ಕ… ಮಂದಿ ಅಂತಿರ್ತಾರಲಾ ’ಆ ಹುಡಗ ಛಲೊ ಆದರ ಪಾಪ ಎನ ಮಾಡೋದ ಹೆಂಡ್ತಿ ಮಾತ ಕೇಳಿ ಹಾಳ ಆದಾ’ ಅಂತ, ಆ ಲಿಸ್ಟನಾಗ ಈಗ ನಾನು ಬಂದೇನಿ. ಅಲ್ಲಾ ನನ್ನ ಕಡೆ ಗ್ರ್ಯಾಂಡ ಆಗಿ ಮುಂಜವಿ ಮಾಡೊ ಅಷ್ಟ ರೊಕ್ಕ ಇಲ್ಲಾ, ನನ್ನ ಕ್ಯಾಪ್ಯಾಸಿಟಿನೂ ಅಷ್ಟ ಅಲ್ಲಾ ಅಂತ ಅಂದರೂ ನನ್ನ ಹೆಂಡತಿ ಕೇಳಲಿಲ್ಲಾ, ಸಾಲಾ ಸೂಲಾ ಮಾಡಿ ಆದರೂ ಅಡ್ಡಿಯಿಲ್ಲಾ ಬೇಕಾರ ನನ್ನ ಬಂಗಾರ ವತ್ತಿ ಇಟ್ಟರು ಅಡ್ಡಿಯಿಲ್ಲಾ ಅಂತ ಹವಾ ಹಾಕಿ ಮುಂಜವಿ ಮಾಡಿಸಿದ್ಲು. ಮುಂದ ಮುಂಜವಿ ಹೊತ್ತಿಗೆ ಅಕಿ ಬಂಗಾರ ವತ್ತಿ ಇಡೋದ ದೂರ ಉಳಿತ ಉಲ್ಟಾ ಮುಂಜವಿ ಒಳಗ ಕರಿಮಣಿ ಮಂಗಳ ಸೂತ್ರ ಸರಿ ಕಾಣಂಗಿಲ್ಲಾಂತ ಒಂದ ತೊಲಿ ಬಂಗಾರ ತೊಗೊಂಡ ಗಟಾಯಿಸಿದ ಮಂಗಳಸೂತ್ರ ಬ್ಯಾರೆ ಮಾಡಸಿದ್ಲು. ನಾ ಎಷ್ಟ ಬಡಕೊಂಡೆ
’ಲೇ ಮಂಗಳ ಸೂತ್ರ ಹೆಂಗ ಕಂಡರ ಏನಲೇ, ಗಂಡ ಛಂದ ಕಂಡರ ಸಾಕು’ ಅಂತ, ಆದರ ಅಕಿ ಏನ ನನ್ನ ಮಾತ ಕೇಳಲಿಲ್ಲ.
ನಂದ ಮಗನ ಮುಂಜವಿ ಆಗಿ ಒಂದ ತಿಂಗಳದಾಗ ಪರಿಸ್ಥಿತಿ ಹೆಂಗ ಆಗಿತ್ತಂದರ ಮುಂದ ಅವನ ಉಪಾಕರ್ಮ ( ಮುಂಜಾವಿ ಆದ ಮ್ಯಾಲೆ ಬರೋ ನೂಲ ಹುಣ್ಣಮಿಗೆ ಮಾಡ್ತಾರ, ಅದೊಂದ ನಮ್ಮ ಕರ್ಮ) ನಾ ಚಿದಂಬರೇಶ್ವರ ಗುಡಿ ಒಳಗ ಸಾರ್ವಜನಿಕ ಉಪಾಕರ್ಮದಾಗ ಮಾಡ್ಕೊಂಡ ಬಂದೆ. ಏನ ಮಾಡ್ತೀರಿ. ಸುಮ್ಮನ ಮುಂಜವಿನ ಸಾರ್ವಜನಿಕ ಮಾಡಿ ಬಿಟ್ಟಿದ್ದರ ಎಷ್ಟ ರೊಕ್ಕ ಉಳಿತಿತ್ತ, ಎಷ್ಟ ಸಾಲ ತಪ್ಪತಿತ್ತ, ಏನತಾನ. ಅಲ್ಲಾ ಈ ಹೆಣ್ಣ ಮಕ್ಕಳಿಗೆ ಬುದ್ಧಿನ ಇಲ್ಲಾ, ಅವರ ಮಾಡ್ತಾರ, ನಾವ ಮಾಡಬೇಕು, ಅವರ ಕೊಡ್ತಾರ ನಾವು ಕೊಡಬೇಕು, ಹ್ಯಾಂವ..ಎಲ್ಲಾದಕ್ಕೂ ಹ್ಯಾಂವ. ಇಲ್ಲೆ ಗಂಡದ್ದ ಬುಡಕ ಹರದ ಮೂರ ಹೊಲಿಗೆ ಬಿದ್ದರು ಅಡ್ಡಿಯಿಲ್ಲಾ.
ಅದಕ್ಕ ನಾ ನನ್ನ ಹೆಂಡ್ತಿ ಸಿಟ್ಟ ನನ್ನ ಮಗನ ಮ್ಯಾಲೆ ತಗಿಲಿಕತ್ತೇನಿ, ಅವಂದ ಪರೀಕ್ಷಾ ಇರಲಿ ಬಿಡಲಿ, ಒಟ್ಟ ದಿವಸಕ್ಕ ಎರಡ ಹೊತ್ತ ಸಂಧ್ಯಾವಂದನಿ ಬಿಡಂಗಿಲ್ಲಾಂತ ಬೇತಾಳ ಬೆನ್ನ ಹತ್ತಿದಂಗ ಬೆನ್ನ ಹತ್ತಿರ್ತೇನಿ. ಅಲ್ಲಾ ಹಂಗ ಅವಂದ ಮುಂಜವಿ ಮಾಡಲಿಕ್ಕೆ ಇನ್ನೊಂದ ಕಾರಣ ಅಂದರ ಅಂವಾ ಒಂದ ಸ್ವಲ್ಪ ಉಡಾಳ, ಅಭ್ಯಾಸ ಕಡೆ ಲಕ್ಷ ಅಷ್ಟಕ್ಕಷ್ಟ, ಯಾರೊ ಮುಂಜಾವಿ ಮಾಡರಿ ಸುಧಾರಸ್ತಾನ ಅಂದಿದ್ದರಂತ ಹಿಂಗಾಗಿ ನನ್ನ ಹೆಂಡ್ತಿ ಗ್ರ್ಯಾಂಡಾಗಿ ಮುಂಜವಿ ಮಾಡಿದರ ಇನ್ನು ಗ್ರ್ಯಾಂಡಾಗಿ ಸುಧಾರಸ್ತಾನ ಅಂತ ಹಿಂತಾಪರಿ ಮುಂಜವಿ ಮಾಡಿಸಿದ್ಲು. ಅಲ್ಲಾ ಹಂಗ ಒಮ್ಮೆ ಗಂಡಸರು ಮುಂಜವಿ ಆದಮ್ಯಾಲೆ ಅಪ್ಪಿ ತಪ್ಪಿ ಸುಧಾರಿಸಿದರು ಮುಂದ ಮದುವಿ ಆದಮ್ಯಾಲೆ ಹಳ್ಳಾ ಹಿಡಿಯೋರ ಆ ಮಾತ ಬ್ಯಾರೆ. ಆದರ ನನ್ನ ಮಗಾ ಅಂತೂ ಮುಂಜವಿ ಆದಮ್ಯಾಲೆ ಒಂದ ಎಳಿ ಜನಿವಾರದಷ್ಟು ಸುಧಾರಸಲಿಲ್ಲಾ, ದಿನಕ್ಕ ಎರಡ ಸರತೆ ಸಂಧ್ಯಾವಂದನಿ ಮಾಡ್ತಾನ ಅನ್ನೋದ ಬಿಟ್ಟರ ಏನು ಇಂಪ್ರೂವಮೆಂಟ ಇಲ್ಲಾ, ಹಂಗ ಇನ್ನು ಮಾರ್ಕ್ಸ ಕಡಿಮಿ ಬೀಳಲಿಕತ್ತಾವ. ಯಾಕಲೇ ಅಂತ ಕೇಳಿದರ ’ಅಭ್ಯಾಸ ಬಿಟ್ಟ ಮುಂಜ ಮುಂಜಾನೆ ಎದ್ದ ತಾಸ ಗಟ್ಟಲೇ ಹುಚ್ಚರಂಗ ಸಂಧ್ಯಾವಂದನಿ ಮಾಡಿದರ ಗಾಯತ್ರಿ ಮೇಡಮ್ ಏನ ಮಾರ್ಕ್ಸ ಹಾಗ್ತಾರಂತ ತಿಳ್ಕೊಂಡಿ ಏನ್’ ಅಂತ ನನಗ ಅಂತಾನ. ಏನ್ಮಾಡ್ತೀರಿ?
ನಾ ’ನೀ ಬೇಕಾರ ಮಗನ ಫೇಲ ಆಗ ಮಗನ, ಅದ ನನಗ ಸಂಬಂಧ ಇಲ್ಲಾ, ಆದರ ನನ್ನ ಸಾಲ ಮುಟ್ಟೊತನಕ ಸಂಧ್ಯಾವಂದನಿ ಬಿಡೋಹಂಗಿಲ್ಲಾ’ ಅಂತ ಹೇಳಿ ಬಿಟ್ಟೇನಿ. ಅಲ್ಲಾ ಹಂಗ ಅಂವಾ ಏನರ ಖರೇನ ಫೇಲ್ ಆಗಿ ಬಿಟ್ಟರ ಮುಂದ ಅಂವಾ ಜೀವನ ಪರ್ಯಂತ ’ನಾ ಆರನೇತ್ತಾ ಇದ್ದಾಗ ನಮ್ಮವ್ವ ಮುಂಜವಿ ಮಾಡಿದ್ದಕ್ಕ ಫೇಲ ಆಗಿದ್ದೆ’ ಅಂತ ನೆನಪ ಇಟ್ಟ ಅವರವ್ವನ ಬೈತಾನ, ಈಗ ನಾವ ಹೆಂಗ ’ನಮ್ಮವ್ವ ಲಗ್ನ ಮಾಡಿ ನಮ್ಮನ್ನ ಹಾಳ ಮಾಡಿದ್ಲು’ ಅಂತ ಅಂತೇವಿ ಅಲಾ ಹಂಗ.
ಅಲ್ಲಾ, ಅದ ಬೇಕಾದ್ದ ಆಗಲಿ ಅಂವಾ ಮಾತ್ರ ಮುಂಜವಿ ಸಾಲ ಮುಟ್ಟೋತನಕ ಸಂಧ್ಯಾವಂದನಿ ಮಾಡೋದ.