“ರ್ರಿ, ನಳಾ ಬಂತ ಲಗೂನ ಸ್ನಾನ ಮಾಡ್ರಿ, ಆ ಹುಡಗರದ ಅರಬಿ ತಗದ ಅವಕ್ಕೊಂದ ಎರಡ ತಂಬಗಿ ನೀರ ಹಾಕಿ ನೀವ ಸ್ನಾನ ಮಾಡಿಸಿ ಬಿಡ್ರಿ” ಅಂತ ನಮ್ಮವ್ವ ಹೊರಗ ರಸ್ತೇದಾಗ ನಿಂತ ನಮ್ಮಪ್ಪಗ ಒದರೋಕಿ, ಇಡಿ ಚಾಳ ಮಂದಿ ಅದನ್ನ ಕೇಳಿಸಿಗೊಂಡ ನಗೋರ. ನಮ್ಮವ್ವ ಒದರೋದ ನೋಡಿದ್ರ ಮಂದಿ ‘ಇವರ ಮನ್ಯಾಗ ನಳಾ ಬಂದಾಗ ಇಷ್ಟ ಸ್ನಾನ ಮಾಡತಾರ’ ಅನ್ಕೋಬೇಕ ಹಂಗ ಮಾಡತಿದ್ಲು.
ಅಲ್ಲಾ ಒಮ್ಮೊಮ್ಮೆ ಮೂರ ದಿವಸಕ್ಕೊಮ್ಮೆ ಬರಬೇಕಾಗಿದ್ದ ನಳಾ ಹಂಗ ಐದ ದಿವಸ ಆದರು ಬರಲಿಲ್ಲಾ ಅಂದರ ನಮ್ಮವ್ವ ನಂಗ
“ಸುಮ್ಮನ ಕೈಕಾಲ ಮಾರಿ ಇಷ್ಟ ತೊಕ್ಕೊಂಡ ಸಾಲಿಗೆ ಹೋಗ್ತಿ ಏನ ನೋಡ ಇವತ್ತ, ನೆಗಡಿ ಬ್ಯಾರೆ ಬರೋ ಹಂಗ ಕಾಣಲಿಕತ್ತದ.ಸ್ನಾನ ಬಿಟ್ಟ ಬಿಡs” ಅಂತ ನನಗ ಸ್ನಾನ ಬಿಡಸೇ ಬಿಡ್ತಿದ್ಲು ಆ ಮಾತ ಬ್ಯಾರೆ. ಆವಾಗ ನಾ ಸಣ್ಣಂವ ಇದ್ದೆ ಹಂಗ ವಾರದಾಗ ಒಂದ್ಯಾರಡ ಸರತೆ ಸ್ನಾನ ಬಿಟ್ಟರ ನಡಿತಿತ್ತ. ಅದರಾಗ ಮಳೆಗಾಲದಾಗ ಅಂತೂ ನಳಾ ಬರಲಿ ಬಿಡಲಿ ವಾರಕ್ಕ ಎರಡ ಸರತೆ ಸ್ನಾನ, ಯಾಕಂದರ ನಾವ ಮಳ್ಯಾಗ ಅಡ್ಡಾಡಿರ್ತೇವಿ ಮತ್ತೇಲ್ಲರ ನೆಗಡಿ-ಪಗಡಿ ಆದರ ಅಂತ ನಮ್ಮವ್ವಗ ನನ್ನ ಆರೋಗ್ಯದ ಬಗ್ಗೆ ಭಾಳ ಕಾಳಜಿ ಇರ್ತಿತ್ತ.
ಮುಂದ ಮುಂಜವಿ ಆದ ಮ್ಯಾಲೆ ಹಂಗ ನಡಿತಿದ್ದಿಲ್ಲಾ, ನಳಾ ಬರಲಿ ಬಿಡಲಿ ಸ್ನಾನ ಮಾಡಿ ಸಂಧ್ಯಾವಂದನಿ ಮಾಡಬೇಕ. ಹಿಂಗಾಗಿ ನಂದ ಸಂಧ್ಯಾವಂದನಿ ಸಂಬಂಧ ಒಂದಿಷ್ಟ ನೀರ ಹೆಚ್ಚಗಿ ಖರ್ಚ ಆಗಲಿಕತ್ವು. ಕಡಿಕೆ ನಾ ಈ ನೀರಿನ ಪರಿಸ್ಥಿತಿ ನೋಡಿ ಬರಬರತ ಸಂದ್ಯಾವಂದನಿ ಮಾಡೋದನ್ನ ಬಿಟ್ಟ ಬಿಟ್ಟೆ. ಆದರ ನಮ್ಮ ಜನಾ ‘ಹಿಂತಾ ದೊಡ್ಡ ವೈದಿಕರ ಮನ್ಯಾಗ ಹುಟ್ಟಿ ಎರಡ ಹೊತ್ತ ಸಂಧ್ಯಾವಂದನಿ ಮಾಡಲಿಕ್ಕೆ ಏನ ಧಾಡಿ ಇವಂಗ’ ಹಂಗ-ಹಿಂಗ ಅಂತ ತಾವ ಏನ ದಿವಸಾ ಸ್ನಾನ ಸಂಧ್ಯಾವಂದನಿ ಮಾಡೋರಗತೆ ನಂಗ ಬೈಲಿಕತ್ತರು. ಆದರ ನಾ ಯಾರದು ತಲಿ ಕೆಡಸಿಗೊಳ್ಳಿಕ್ಕೆ ಹೋಗಲಿಲ್ಲಾ. ನಮ್ಮ ಪ್ರಾಬ್ಲೆಮ್ ನಮಗ, ಅನ್ನೋರಗೇನರಿ ಹೆಂಗಾದರು ಅಂತಾರ ಅಂತ ಸುಮ್ಮನಾದೆ.
“ಅಲ್ಲಾ ಈ ಮಗ್ಗ ಸಂಧ್ಯಾವಂದನಿ ಮಾಡಲಿಕ್ಕೆ ಎಷ್ಟ ನೀರ ಖರ್ಚ ಆಗತಿದ್ದಿತ ಅಂತೇನಿ? ಒಟ್ಟ ಈಗಿನ ಹುಡಗರಿಗೆ ಸಂಧ್ಯಾವಂದನಿ ಬಿಡಲಿಕ್ಕೆ ಏನರ ಒಂದ ನೇವಾ ಬೇಕ” ಅಂತ ಒಂದಿಷ್ಟ ಮಂದಿ ಅಂದರು. ಹಂಗ ಅವರ ಅಂದಿದ್ದ ಖರೆ ಅನಸಬಹುದು ಆದರ ನಾ ಖರೆ ಹೇಳ್ತೇನಿ ಆವಾಗ ನೀರಿಂದ ಭಾಳ ತ್ರಾಸ ಇತ್ತ. ನಮ್ಮವ್ವಾ ನಳಾ ಬಂದಾಗ ಮನ್ಯಾಗಿನ ಎಲ್ಲಾ ಡಬ್ಬಿ, ಕೊಳಗ, ತಂಬಗಿ, ವಾಟಗ ಸಹಿತ ತುಂಬಿ ಇಟಕೊತಿದ್ಲು. ಇನ್ನ ಹಂಗ ಅಕಿ ಅಷ್ಟ ಕಷ್ಟ ಪಟ್ಟ ತುಂಬಿ ಇಟ್ಟದ್ದ ವಾಟಗದಾಗಿನ ನೀರ ತೊಗೊಂಡ ನಾ ಸಂಧ್ಯಾವಂದನಿ ಹೆಂಗ ಮಾಡಬೇಕ ಅಂತ ನಾ ಸಂಧ್ಯಾವಂದನಿನ ಬಿಟ್ಟ ಬಿಟ್ಟೆ. ಆವಾಗ ನಮ್ಮವ್ವ ನಳಾ ಬಂದ ದಿವಸನ ಅರಬಿ ಒಗೇಯೋಕಿ, ಅವತ್ತ ಯರಕೋಳೊದು, ಅವತ್ತ ಮನಿ ಒರಸೋದು, ಅವತ್ತ ಅಂಗಳಕ್ಕ ಥಳಿ ಹೊಡೇಯೋದು, ಒಂದs ಎರಡs, ನಳಾ ಬಂದರ ನಮಗ ಹಬ್ಬ ಇದ್ದಂಗ ಇತ್ತ. ಹಿಂಗಾಗಿ ಅಕಿ ನಳಾ ಹೋಗೊದರಾಗ ಎಲ್ಲಾರಿಗೂ ಬಡ್ಕೊಂಡ ಲಗೂನ ಸ್ನಾನ ಮಾಡಿ ಬಿಡರಿ ಅಂತ ಗಂಟ ಬಿಳೋಕಿ. ಖರ್ಚ್ ಆದಷ್ಟ ನೀರ ಮತ್ತ ತುಂಬಿ ಇಟಗೊಳಿಕ್ಕೆ ಬರತದ ಅಂತ ಪಾಪ ಅಕಿ ಸಂಕಟಾ.
ನಾ ಸರ್ಕಾರಿ ನಳದ ಮ್ಯಾಲೆ ಆಣಿ ಮಾಡಿ ಹೇಳ್ತೇನಿ ನಮ್ಮ ಹುಬ್ಬಳ್ಳಿ ಧಾರವಾಡದಾಗ ಆವಾಗ ನೀರಿಂದ ಭಾಳ ಕೆಟ್ಟ ಪರಿಸ್ಥಿತಿ ಇತ್ತ. ನಮಗ ಮನಿ ನಳದ್ದ ನೀರ ಸಾಕಗತಿದ್ದಿಲ್ಲಾ, ಹಿಂಗಾಗಿ ನಾಳೆ ನಳಾ ಬರತದ ಅಂದ್ರ ಒಂದ ದಿವಸ ಮೊದ್ಲ ಸರ್ಕಾರಿ ನಳದ ಮುಂದ ಕೊಡಾ, ಬಕೇಟ, ತಂಬಗಿ ಲೈನನಾಗ ಇಟ್ಟ ಪಾಳೆ ಹಚ್ಚತಿದ್ವಿ. ಅಷ್ಟ ಆದರೂ ನಳಾ ಬಂದ ಮ್ಯಾಲೆ ನೀರಿಗೆ ಹೊಡದಾಟ ಬಡದಾಟ, ಒಬ್ಬರ ಮನ್ಯಾಗೂ ನೆಗ್ಗಲಾರದ ಕೊಡ ಇರತಿದ್ದಿಲ್ಲಾ. ಅದರಾಗ ನಾವ ಸೂಕ್ಷ್ಮ ಮಂದಿ ಹೊಡದಾಡಲಿಕ್ಕೆ ಬಡದಾಡಲಿಕ್ಕೆ ದಮ್ಮ ಇರತಿದ್ದಿಲ್ಲಾ ಹಿಂಗಾಗಿ ನಸೀಕಲೆ ನಾಲ್ಕ ಗಂಟೇಕ್ಕ ಎದ್ದ ಉರ ಮಂದಿ ಏಳೋಕಿಂತ ಮುಂಚೆ ನೀರ ತುಂಬಲಿಕ್ಕೆ ಹೋಗ್ತಿದ್ವಿ. ಇನ್ನ ಮಡಿನೀರ ತುಂಬಲಿಕ್ಕೆ ಊರಮಂದಿ ಮುಟ್ಟ ಬಾರದಂತ ಮೂರಗಂಟೆಕ್ಕ ಏಳತಿದ್ವಿ ಆ ಮಾತ ಬ್ಯಾರೆ.
ಇತ್ತಲಾಗ ಬರಬರತ ಮನಿ ಮುಂದಿನ ನಳದಾಗ ಗ್ರೌಂಡ ಲೆವೆಲಗೆ ನೀರ ಬರೋದ ನಿಂತ, ಕಡಿಕೆ ಎರಡ ಫೂಟ ಮನಿ ಮುಂದ ಗುಂಡಿ ತೋಡಿ ಅದರಾಗ ಇಳದ ಪೈಪ ಕಟ್ ಮಾಡಿ ನೀರ ತುಂಬಲಿಕತ್ವಿ. ಬಾಜುಕ ಗಟರ ಹರಿತಿತ್ತ, ನಾವ ಅದರ ಲೇವೇಲಕಿಂತ ಕೆಳಗ ಹೋಗಿ ಮಡಿನೀರ ತುಂಬತಿದ್ವಿ. ಬ್ಯಾರೆ ಊರ ಮಂದಿಗೆ ಹುಬ್ಬಳ್ಳಿ-ಧಾರವಾಡ ಮಂದಿ ನೀರ ತುಂಬೊದನ್ನ ನೋಡೋದs ಒಂದ ಮಜಾ ಆಗಿಬಿಟ್ಟಿತ್ತ. ಆ ನೀರ ತುಂಬೊ ಗುಂಡಿ ಒಂದೊಂದ ಏರಿಯಾದಾಗಂತೂ ನಾಲ್ಕ ಫೂಟ ತನಕ ಡೀಪ ಹೋಗಿರತಿದ್ವು. ಅಷ್ಟ ಮಾಡಿದರನು ಮೂರ ದಿವಸದ ನೀರ ಸಿಗತಾವ ಅಂತ ಗ್ಯಾರಂಟೀ ಇದ್ದಿದ್ದಿಲ್ಲಾ.
ನಾ ಹೇಳಲಿಕತ್ತಿದ್ದ ಹಳೇ ಮಾತ ಆದರೂ ಇವತ್ತು ಅಷ್ಟೇನ ಪರಿಸ್ಥಿತಿ ಬದಲಾಗಿಲ್ಲಾ. ಇವತ್ತು ನಮ್ಮ ಮನ್ಯಾಗ ಐದ ದಿವಸಕ್ಕೊಮ್ಮೆ ನೀರ ಬರತದ ಆದರ ಸ್ನಾನ ಮಾತ್ರ ದಿವಸಾ ಮಾಡ್ತೇವಿ ಮತ್ತ. ಈಗ ನಳಾ ಬರಲಿ ಬಿಡಲಿ ನೀರ ಖಾಲಿ ಆದರ ಸಾಕ ರೊಕ್ಕಾ ಕೊಟ್ಟರ ನೀರ ಟ್ಯಾಂಕರ ಗಟ್ಟಲೇ ಮನಿ ಬಾಗಲಕ್ಕ ಬಂದ ಬೀಳ್ತದ. ಆವಾಗಿನ ಕಾಲದಾಗ ಹಂಗ ಇದ್ದೀದ್ದಿಲ್ಲಾ, ಹಿಂಗಾಗೇ ನಂಗ ಸಣ್ಣ ವಯಸ್ಸಿನಾಗ ಸಂಧ್ಯಾವಂದನಿ ಬಿಡಬೇಕಾತ.
“ಈಗ ನೀರಿಂದ ಪ್ರಾಬ್ಲೇಮ ಇಲ್ಲಲಾ, ಈಗರ ದಿವಸಾ ಸಂಧ್ಯಾವಂದನಿ ಮಾಡ ಮಗನ” ಅಂತ ಅನಬ್ಯಾಡರಿ ಮತ್ತ.
ಈಗ ಮದುವಿ ಆಗಿ ಹೋಗೇದ, ಸಂಸಾರದ ಗದ್ಲದಾಗ ಇನ್ನ ಎಲ್ಲೆ ಸಂಧ್ಯಾವಂದನಿ ಅಂತೇನಿ. ಅದರಾಗ ದಿವಸಾ ಮುಂಜಾನೆ ಎದ್ದ ಜನಿವಾರ ಹಾಸಿಗ್ಯಾಗ ಹುಡಕಿ ಹಾಕ್ಕೊಳ್ಳೊದ ಒಂದ ಕೆಲಸ ಆಗಿರತದ. ಒಮ್ಮೊಮ್ಮೆ ಅಂತು ಜನಿವಾರ ಮೈಮ್ಯಾಲೆ ಇರಲಾರದ್ದ ಗೊತ್ತಾಗೋದ ಯಾವದರ ಮಠದಾಗ ಅಂಗಿ ಕಳದರ ಇಷ್ಟ ಊಟಕ್ಕ ಹಾಗ್ತೇವಿ ಅಂದಾಗ.
ಇರಲಿ ಈಗ ಎಲ್ಲಾ ಬಿಟ್ಟ ನಳದ್ದ, ನೀರಿಂದ ಯಾಕ ನೆನಪಾತು ಅಂದರ ಮೊನ್ನೆ ಮಾರ್ಚ ೨೨ಕ್ಕ ವರ್ಲ್ಡ ವಾಟರ್ ಡೇ ಇತ್ತ. ಅಂದರ ವಿಶ್ವ ಜಲ ದಿವಸ. ನಾವ ಹಿಂಗ ನೀರಿಗೆ ಹಪಾ-ಹಪಿ ಮಾಡ್ತೇವಿ ಅಂತೇನ ಇದನ್ನ ವರ್ಷಕ್ಕೊಮ್ಮೆ ಆಚರಿಸಂಗಿಲ್ಲ ಮತ್ತ, ವಿಶ್ವ ಸಂಸ್ಥೆಯವರು ವರ್ಷಕ್ಕೊಂದ ಸರತೆ freshwater importance and sustainable management of fresh water resources ಸಂಬಂಧ ವರ್ಲ್ಡ ವಾಟರ್ ಡೇ ಆಚರಸ್ತಾರ.
ಹಂಗ ಈ ವರ್ಷದ ವರ್ಲ್ಡ ವಾಟರ್ ಡೇ ದ ಥೀಮ್ water cooperation.
ನಾ ಹೇಳಿದ್ದ water cooperation ಮತ್ತ corporation water ಅಲ್ಲಾ. ಅದ ಏನೋ ಅಂತಾರಲಾ ಸದಾಶಿವಗ ಒಂದ ಧ್ಯಾನ ಅಂತ ಹಂಗ ನಮ್ಮ ಹುಬ್ಬಳ್ಳಿ ಧಾರವಾಡ ಮಂದಿಗೆ ಯಾವಗಲು corporation ನೀರಿಂದ ಧ್ಯಾನ ಇರತದ.
ಇನ್ನ ಈ water cooperationದ ಅರ್ಥ ನಮ್ಮ ಪಾಲಿ ನೀರ ಮಂದಿಗೆ ಬಿಟ್ಟ ನಾವು ಬಾಯಿ ತಕ್ಕೊಂಡ ಕೂಡೋದ ಅಲ್ಲಾ, ಮೊನ್ನೆ ಸರ್ಕಾರದವರ ಕಾವೇರಿ ನೀರ ಬಿಟ್ಟ ನಮ್ಮ ಮಂದಿಗೆ ನೀರಿಲ್ಲದಂಗ ಮಾಡಿದರಲಾ ಹಂಗ ಅಲ್ಲ ಮತ್ತ, ಇದರ ಅರ್ಥ ಇದ್ದ ನೀರ ಎಲ್ಲಾರೂ ಸರಿಯಾಗಿ ಬಳಕಿ ಮಾಡ್ಕೊಂಡು, ಹಂಚಗೊಂಡ ಬಳಸಿಗೊಳ್ಳೊದು ಅಂತ.
ಅಲ್ಲಾ ಮಾರ್ಚ ೨೨ಕ್ಕ ಆಗಿದ್ದ ವರ್ಲ್ಡ ವಾಟರ್ ಡೇ ದ ಬಗ್ಗೆ ಈಗ ಯಾಕ ಬರದಿಪಾ ಅಂತ ಕೇಳ ಬ್ಯಾಡರಿ. ಹೋದ ವರ್ಷ ವರ್ಲ್ಡ ವಾಟರ್ ಡೇ ದಿವಸನೂ ನಮ್ಮ ಏರಿಯಾದಾಗ ನಳಾ ಬರಲಿಲ್ಲಾ. ನಳಾ ಬಿಡೋಂಗ ನಾ ಎಷ್ಟ ರಿಕ್ವೆಸ್ಟ ಮಾಡ್ಕೊಂಡೆ ‘ ಇವತ್ತ ವರ್ಲ್ಡ ವಾಟರ್ ಡೇ ಅದ ಇವತ್ತರ ನೀರ ಬಿಡೋ’ ಅಂದರ ಅಂವಾ ‘ಇವತ್ತ ವಾಟರ್ ಡೇ ಅದ ನಳದ ಡೇ ಏನ ಅಲ್ಲಾ, ನಿಮ್ಮ ಪಾಳಿ ಇನ್ನು ಎರಡ ದಿವಸಾದ ಮ್ಯಾಲೆ ಅದ’ ಅಂತ ಹೇಳಿದಾ. ಹಿಂಗಾಗಿ ನಾ ಮರದಿವಸ ನಳಾ ಬಂದಮ್ಯಾಲೆ ಸ್ವಚ್ಛ ಸ್ನಾನ ಮಾಡಿ ಬರದಿದ್ದ ಇದ.
ಆದರೂ ಏನ ಅನ್ನರಿ ದಿವಸಾ ನಳಾ ಬರಂಗಿಲ್ಲಾಂತ ನಾ ಸಂಧ್ಯಾವಂದನಿ ಮಾಡೋದ ಬಿಡಬೇಕಾತು ಅಂದರ ಹೆಂತಾ ಪರಿಸ್ಥಿತಿ ಇತ್ತ ಆವಾಗ ನೀವ ವಿಚಾರ ಮಾಡ್ರಿ.
ನಂಗ ಇನ್ನೂ ನೆನಪದ ಆಗಿನ ಕಾಲದಾಗ ನಾ ಒಂದ ಸಲಾ ಬಿಟ್ಟ ಎರಡ ಸಲಾ ತಂಬಗಿ ತೊಗೊಂಡ ಹೋದರ ನಮ್ಮವ್ವ ಬೈತಿದ್ಲು. ಹಂಗ ಅದರಾಗ ಮನಿ ಮಂದಿಗೆ ಎಲ್ಲರ ಡಿಸೆಂಟ್ರಿ ಹತ್ತಿ ಬಿಟ್ಟರ ಮುಗದ ಹೋತ, ಹೇಳೊಹಂಗಿಲ್ಲಾ ಅದರ ಕಥಿ.
“ಮೊದ್ಲ ಮನ್ಯಾಗ ನೀರಿಲ್ಲಾ, ಇನ್ನು ಎರಡ ದಿವಸ ಬೇಕ ನಳಾ ಬರಲಿಕ್ಕೆ, ಮನ್ಯಾಗಿನವರಿಗರ ಇವತ್ತ ತಂಬಗಿ ತೊಗೊಂಡ ಹತ್ತಬೇಕ” ಅಂತಿದ್ಲು. ಆವಾಗ ನಮಗ ಇವತ್ತೀನ ಗತೆ tissue paper use ಮಾಡೋದ ಬ್ಯಾರೆ ಗೊತ್ತ ಇರಲಿಲ್ಲಾ. ಏನ್ಮಾಡ್ತೀರಿ ತುಸು ತ್ರಾಸಿತ್ತs ನೀರಿಂದ ಆವಾಗ. ನೀರಿಗೆ ಭಾಳ ತ್ರಾಸ ಪಟ್ಟೆವರೆಪ್ಪಾ ಆವಾಗ, ಅದರ ಬಗ್ಗೆ ಎಷ್ಟ ಹೇಳಿದರು ಎಷ್ಟ ಬರದರು ಕಡಿಮಿನ ಬಿಡ್ರಿ. ಏನೋ world water day ಅಂತ ಹಳೇ ನೆನಪೆಲ್ಲಾ ಮೆಲಕ ಹಾಕಬೇಕಾತ ಇಷ್ಟ.
ಅನ್ನಂಗ ಇನ್ನೊಂದ ಹೇಳೊದ ಮರತೆ ನಿನ್ನೆ ನಮ್ಮ ಊರಾಗ ರೋಟರಿ ಕ್ಲಬನವರ ಈ ವರ್ಲ್ಡ ವಾಟರ್ ಡೇ ಸಂಬಂಧ ರನ್ ಫಾರ್ ವಾಟರ್ ಅಂತ ಮ್ಯಾರಾಥಾನ್ ಇಟ್ಟಿದ್ದರು. ನಾನು ಹೋಗಿದ್ದೆ. ಏನಿಲ್ಲದ ಹುಬ್ಬಳ್ಳಿ ಮಂದಿಗೆ ವಾಟರ್ ಸಂಬಂಧ ಓಡಾಡಿ ರೂಡಾ ಇನ್ನ specific ಆಗಿ run for water ಅಂದ ಬಿಡ್ತೇವಾ, ತೊಗೊ ಅರ್ಧಾ ಹುಬ್ಬಳ್ಳಿ ಮಂದಿ ಬಂದಿದ್ದರು. ಒಂದಿಷ್ಟ ಮಂದಿ ಪಾಪ, ಮ್ಯಾರಾಥಾನದಾಗ ಓಡಿದರ ನೀರ ಕೊಡ್ತಾರ ಅಂತ ಕೊಡಾನು ಹಿಡ್ಕೊಂಡ ಬಂದಿದ್ದರು. ಹಿಂಗ ಮ್ಯಾರಾಥಾನ್ ಸ್ಟಾರ್ಟ ಆಗಿ ನಾ ಒಂದ ಕಿ.ಮಿ. ಓಡಿದ್ದೆ ಅಷ್ಟರಾಗ ನಂಗ ಮನಿಯಿಂದ ಫೋನ ಬಂತ. ನಾ ಫೋನ ಎತ್ತೋ ಪುರಸತ್ತ ಇಲ್ಲದ ನನ್ನ ಹೆಂಡತಿ ಒಂದ ಉಸಿರನಾಗ
“ರ್ರೀ, ಲಗೂನ ಮನಿಗೆ ಬರ್ರಿ, ನಳಾ ಬಂದದ” ಅಂದ್ಲು
“ಏ, ನೀವೇಲ್ಲಾ ಸ್ನಾನ ಮಾಡಿರ್ರಿ ನಾ ಇನ್ನೊಂದ ಎಂಟ ಕಿ.ಮಿ. ಓಡಿ ಬಂದ ಸ್ನಾನ ಮಾಡ್ತೇನಿ” ಅಂದೆ
“ರ್ರಿ, ನಿಮ್ಮನ್ನ ಸ್ನಾನ ಮಾಡಲಿಕ್ಕೆ ಯಾರ ಕರದಾರ, ನಳಾ ಸಣ್ಣ ಅದ ನೀರ ಮ್ಯಾಲೆ ಏರವಲ್ತು, ನೀರ ತುಂಬಲಿಕ್ಕೆ ಬರ್ರಿ” ಅಂತ ಜೋರ ಮಾಡಿದ್ಲು. ನಾ ನನ್ನ ಮ್ಯಾರಾಥಾನಕ್ಕ ಆಟಾ-ಗುಟಾ ಜೈ ಅಂದ ಸೀದಾ ಗಾಡಿ ತೊಗೊಂಡ ನೀರ ತುಂಬಲಿಕ್ಕೆ ಮನಿಗೆ ವಾಪಸ ಹೋದೆ.
ಅಲ್ಲಾ ವಾರಕ್ಕೊಮ್ಮೆ ನಳಾ ಬರತದ ಹಂತದರಾಗ ನಾ ನಳಾ ಬಂದ ದಿವಸ ನೀರ ತುಂಬೋದ ಬಿಟ್ಟ run for water ಅಂತ world water day ಮ್ಯಾರಾಥಾನಕ್ಕ ಹೋದರ ಜನಾ ನಗಂಗಿಲ್ಲs?