ಕಿರ್ಲೋಸ್ಕರದಾಗ ಕೆಲಸ ಸಿಕ್ಕತ

ಹಂಗ ನಾ ದುಡಿಲಿಕ್ಕೆ ಚಾಲು ಮಾಡಿದ್ದ B.Sc ಫಸ್ಟ ಇಯರ ಇದ್ದಾಗಿಂದ. ಯಾವಾಗ ನಮ್ಮ ಮನ್ಯಾಗ ನಂಗ ಮೆರಿಟ್ ಮ್ಯಾಲೆ ಸೀಟ ಸಿಕ್ಕರು ವರ್ಷಕ್ಕ ಹತ್ತ ಸಾವಿರ ರೂಪಾಯಿ ಖರ್ಚ ಮಾಡಿ B.E ಕಲಸಲಿಕ್ಕೆ ಆಗಂಗಿಲ್ಲಾಂತ ಖಾತರಿ ಆತ ಆವಾಗ ನನಗ ಬಿ.ಎಸ್.ಸಿ ನ ಗತಿ ಅಂತ ಗ್ಯಾರಂಟೀ ಅನಸ್ತ. ಇನ್ನ ಈ B.Sc. ಕಲಿಬೇಕಂದರು ಸೈಡಗೆ ಏನರ ಮಾಡಬೇಕ ಇಲ್ಲಾಂದರ ಕಾಲೇಜ ಕಲಿಯೋದ ವಜ್ಜ ಆಗ್ತದ ಅಂತ ತಲ್ಯಾಗ ಹೊಕ್ಕತು.

ಇನ್ನ ನನ್ನ ಲೇವೆಲ್ ಪಾರ್ಟ ಟೈಮ ಕೆಲಸಾ ಹುಡಕೋದ ಒಂದ ದೊಡ್ಡ ತ್ರಾಸ ಇತ್ತ. ಯಾಕಂದರ ನಾ ಹುಟ್ಟಾ ಭಾಳ ಸೂಕ್ಷ್ಮ ಮನಷ್ಯಾ. ಅಪ್ಪಿ ತಪ್ಪಿ ಎಂದರ ಮೂರ ಕೊಡಾ ನೀರಿಗೆ ಬೋರ್ ಹೊಡದರ ಮುಗದ ಹೋತ ಅವತ್ತ ಊಟಾ ಮಾಡಬೇಕಾರ ಕೈಎತ್ತಿ ಬಾಯಿ ಮಟಾ ಒಯ್ಯಲಿಕ್ಕು ಬರತಿದ್ದಿಲ್ಲಾ, ಕಡಿಕೆ ನಮ್ಮವ್ವನ ‘ಪಾಪ ಕೂಸ ಉಣ್ಣಲಾರದ ಮಲ್ಕೋತದ’ ಅಂತ ಬಾಯಿತುತ್ತ ಹಾಕತಿದ್ಲು. ನಾ ಮೊದ್ಲಿಂದ brain is mightier than brawn ಅಂತಾರಲಾ ಅದರಾಗ ನಂಬಕಿ ಇಟ್ಟ brawn (ಶಕ್ತಿ) ಬಗ್ಗೆ ಭಾಳ ತಲಿಕೆಡಸಿಗೊಳ್ಳಿಕೆ ಹೋಗಿದ್ದಿಲ್ಲಾ. ಇನ್ನ ನನ್ನ ಕ್ಯಾಪ್ಯಾಸಿಟಿ ತಕ್ಕ ಕೆಲಸಾ ಅಂದ್ರ ಪ್ರೈವೇಟ ಟ್ಯೂಶನ್ ಹೇಳೋದ ಒಂದ, ಇದರಾಗ ಭಾಳ ವಜ್ಜಾ ಅಂದರ ಡಸ್ಟರ ಎತ್ತೋದು ಇಲ್ಲಾ ಚಾಕ್ ಬಾಕ್ಸ್ ಎತ್ತೋದು ಅಂತ ಅದನ್ನ ಡಿಸೈಡ ಮಾಡಿದೆ.

ಹಂಗ ಹಿಂದಕ S.S.L.C ಸುಟಿ ಒಳಗ ನಮ್ಮವ್ವ ತನ್ನ ಜೊತಿ ನನ್ನೂ ಪ್ರೆಸ್ಸಿಗೆ ಕರಕೊಂಡ ಹೋಗಿ ಮಗಗು ಕಂಪೋಸಿಂಗ ಕಲಸಿದರಾತು, ಇವನು ಇವತ್ತಿಲ್ಲಾ ನಾಳೆ ಅವ್ವಾ-ಅಪ್ಪನ ಹಂಗ ಯಾವದರ ಒಂದ ಪ್ರೆಸ್ಸಿನಾಗ ಕಂಪೊಸಿಂಗ ಮಾಡೊಂವಾ ಅಂತ ಅನ್ಕೊಂಡಿದ್ಲು. ಆದರ ನಂಗ ಆ ಖಾಲಿ ಕಂಪೋಸಿಂಗ ಸ್ಟಿಕ್ ಎತ್ತೊದರಾಗ ರಗಡ ಆಗತಿತ್ತ. ಇನ್ನ ಕನ್ನಡದಾಗ ಐವತ್ಯಾರಡ ಅಕ್ಷರ, ಮ್ಯಾಲೆ ಒತ್ತಕ್ಷರ ಬ್ಯಾರೆ, ಕಂಪೊಸಿಂಗ ಸ್ಟಿಕ್ ಇನ್ನೂ ಒಜ್ಜಾ ಆಗ್ತದ ಅಂತ ಬರೇ ಇಂಗ್ಲೀಷ ಕಂಪೋಸಿಂಗ ಇಷ್ಟ ಕಲತಿದ್ದೆ. ಆದರ ನಂಗ ಮುಂದ PUC II ಸೈನ್ಸ ಫಸ್ಟ ಕ್ಲಾಸಿನಾಗ ಪಾಸಾಗಿ ಕಂಪೋಸಿಂಗ ಮಾಡೋದ ಇಂಟರೆಸ್ಟ ಇರಲಿಲ್ಲಾ. ಹಿಂಗಾಗಿ ಟ್ಯೂಶನ್ ಹೇಳೋದ ಭಾಳ ಛಲೋ ಅನಸ್ತು.

ನಾ ಒಂದ್ಯಾರಡ ಮಾರವಾಡಿ ಹುಡಗರನ ಸೇರಿಸಿ ನನ್ನ ಟ್ಯೂಶನ್ ಸ್ಟಾರ್ಟ ಮಾಡಿದೆ. ನಂಗ ಒಟ್ಟ ನನ್ನ ಕಾಲೇಜ ಖರ್ಚ ಹೋದರ ಸಾಕಾಗಿತ್ತ. ಮುಂದ ನಾ ಬಿ.ಎಸ್.ಸಿ ಮುಗಸೊ ತನಕಾ ಟ್ಯೂಶನ್ ಕಂಟಿನ್ಯು ಇಟ್ಟಿದ್ದೆ, ಲಾಸ್ಟ-ಲಾಸ್ಟಿಗೆ ಅಂತೂ ನಾ ಅದರಾಗ ಎಷ್ಟ ಗಳಸತಿದ್ದೆ ಅಂದರ ಮನ್ಯಾಗ ಸುಳ್ಳ ಹೇಳಿ ಬರೆ ಅರ್ಧಾ ರೊಕ್ಕಾ ಕೊಟ್ಟ ಉಳದ ರೊಕ್ಕದಾಗ ಚೈನಿ ಹೊಡಿತಿದ್ದೆ. ಆವಾಗೇನ ಹಂತಾ ದೊಡ್ಡ ಚಟಾ ಇರಲಿಲ್ಲಾ. ವಾರಕ್ಕ ಒಂದ ಇಲ್ಲಾ ಎರಡ ಪಿಕ್ಚರ ನೋಡಿ ಬ್ರಾಡವೇದಾಗ ಸೇವ ಪುರಿ, ಗಿರಮಿಟ್ಟ ತಿಂದ ಕಡಿಕೆ ಒಂದ ಐಸ ಕ್ರೀಮ ತಿಂದರ ಅದ ದೊಡ್ಡ ಮಜಾ.

ಮುಂದ ನಂದ ಡಿಗ್ರೀನೂ ಮುಗಿತ. ನಮ್ಮವ್ವಗ ಅಷ್ಟರಾಗ ವಯಸ್ಸಾಗಿ ಅಕಿಗೂ ಕಂಪೋಸಿಂಗ ಸ್ಟಿಕ್ ವಜ್ಜ ಆಗಲಿತ್ತ, ಹಂಗ ನಮ್ಮಪ್ಪ ಇನ್ನು ಗಟ್ಟಿ ಇದ್ದಾ ಆದರ ಅವಂದ ಒಂದs ಪಗಾರದ ಮ್ಯಾಲೆ ಮನಿ ನಡೇಯಂಗಿಲ್ಲಾ ಅದರಾಗ ನಾ ಹಿಂಗ ಉದ್ದಕ ಕಲಕೋತ ಕೂಡೋದ ಉಪಯೋಗ ಇಲ್ಲಾ, ಎಲ್ಲರ ಫುಲ್ ಟೈಮ ಕೆಲಸ ನೋಡಬೇಕು ಅಂತ ಡಿಸೈಡ ಮಾಡೊ ಪುರಸತ್ತ ಇಲ್ಲದ ಒಂದ ಫಿನೈಲ್ ಫ್ಯಾಕ್ಟರಿ ಒಳಗ ಪ್ರೊಡಕ್ಷನ್ ಇನ್ ಚಾರ್ಜ ಅಂತ ಕೆಲಸ ಸಿಕ್ಕ ಬಿಟ್ಟತ. ಹಂಗ ಪಗಾರ ಏನ ಅಲ್ಲೆ ಭಾಳ ಇದ್ದಿದ್ದಿಲ್ಲಾ, ಆದರ ನಾ ಮ್ಯಾಲೆ ಟ್ಯೂಶನ್ ಬ್ಯಾರೆ ಹೇಳ್ತಿದ್ದೆ ಹಿಂಗಾಗಿ ನಡಿತಿತ್ತ. ನಾ ಸದ್ಯೇಕ ಫಿನೈಲ ಫ್ಯಾಕ್ಟರಿ ಇರಲಿ, ಅಲ್ಲೆ ಕೆಲಸಾ ಮಾಡ್ಕೋತ ಬ್ಯಾರೆ ಛಲೊ ನೌಕರಿ ನೋಡಿದ್ರಾತು ಅಂತ ಡಿಸೈಡ ಮಾಡಿದೆ. ಮುಂದ ಒಂದ ತಿಂಗಳಿಗೆ sun pharma ದವರದ medical rep ಜಾಬಿಗೆ walk-in-interview ಕರದಿದ್ದರು. ಆಗಿನ ಕಾಲದಾಗ ಬರೇ B.Sc ಮಾಡಿದವಂಗ ಭಾಳ ಸರಳ ನೌಕರಿ ಸಿಗೋದಂದರ ಅದ ಒಂದ. ನಾನು ಇಂಟರ್ವಿವಗೆ ಹೋದೆ. ಹಂಗ ನಾ ಅಳ್ಳ ಹುರದಂಗ ಮಾತೋಡ ಸ್ಟೈಲ್, ನನ್ನ ಇಂಗ್ಲೀಷ ಕಮ್ಯುನಿಕೇಶನ್ ಎಲ್ಲಾ ನೋಡಿದ್ರ ನಂಗ ಜಾಬ ಸಿಗಬೇಕಾಗಿತ್ತ ಆದರ ಅವರ ನನಗ ನನ್ನ personality ನೋಡಿ, put on some weight and then come ಅಂತ ಹೇಳಿ ಕಳಸಿ ಬಿಟ್ಟರು. ಆ field ಒಳಗ brawn is mightier than brain ಅಂತ ನಂಗ ಅವತ್ತs ಗೊತ್ತಾತ. ಇವತ್ತ ಆ field ಒಳಗ ಇರೋ ಒಂದಿಷ್ಟ ಮಂದಿ ನಮ್ಮ ದೋಸ್ತರ ಗಳಸೋ ಪಗಾರ ನೋಡಿದ್ರ ನಂಗ ಇವತ್ತೂ ಹಂಗ ಅನಸ್ತದ.

ಹಂಗ ಅವರ ನನಗ put on some weight ಅಂತ ಹೇಳಿ reject ಮಾಡಿದ್ದರಾಗ ತಪ್ಪೇನ ಇದ್ದಿದ್ದಿಲ್ಲಾ, ಯಾಕಂದರ ನಂಗ ಆ medical rep ಬ್ಯಾಗ ಎತ್ತಲಿಕ್ಕೆ ಆಗ್ತಿದ್ದಿಲ್ಲಾ. ಅದರಾಗ ನಮ್ಮ ದೋಸ್ತರೆಲ್ಲಾ ನಂಗ reynold refill ಇದ್ದಂಗ ಇದ್ದಿ, 7UP ಕಾರ್ಟೂನ ಕಂಡಂಗ ಕಾಣತಿ ಅಂತಿದ್ರು. ನಾ ಆ 7UP ಲೊಗೊದಾಗ ಒಬ್ಬ ಖಡ್ಡಿ ಪೈಲವಾನ ಇದ್ದನಲಾ ಹಂಗ ಇದ್ದನಂತ. ಒಟ್ಟ ನಾ ಒಂದನೇ interviewಕ್ಕ ಈ medical rep fieldಗೆ ನೀರ ಬಿಟ್ಟ ಬಿಟ್ಟೆ.

ಮುಂದ ನಂದ ಫಿನೈಲ ಫ್ಯಾಕ್ಟರಿ, ಪ್ರೈವೇಟ ಟ್ಯೂಶನ್ ಚಲೂನ ಇತ್ತ. ಮುಂದ ಒಂದ ಏಳ ತಿಂಗಳಕ್ಕ ನಮ್ಮ ಮನಿಗೆ ಒಂದ interview letter ಬಂತ, ಅದು kirloskar company ಇಂದ. ನಮ್ಮ ಹುಬ್ಬಳ್ಳಿ ಒಳಗ ಆವಾಗ ಅದ ಅಗದಿ ದೊಡ್ಡ ಕಂಪನಿ, ನಮ್ಮ ನಾಲ್ಕೈದ ಮಂದಿ ದೋಸ್ತರಿಗೂ ಬಂದಿತ್ತ. ಕಿರ್ಲೋಸ್ಕರದವರು ಎಲ್ಲಾ ಕಾಲೇಜಿಗೆ ಹೋಗಿ ನಾಲ್ಕೈದ chemistry ಒಳಗ ಶಾಣ್ಯಾ ಇದ್ದ ಹುಡಗರದ ಹೆಸರ ಇಸಗೊಂಡ ಎಲ್ಲಾರಿಗೂ ಲೆಟರ್ ಕಳಸಿದ್ದರು. ಅದರಾಗ ನಂದ chemistry top subject, B.Sc.final yearದಾಗ chemistry theory ಒಳಗ ಹುಬ್ಬಳ್ಳಿಗೆ ಹೈಯೆಸ್ಟ ಮಾರ್ಕ್ಸ ತೊಗೊಂಡಂವಾ, ಹಿಂಗಾಗಿ ನಂಗು ಕಳಸಿದ್ದರು. ಹಂಗ ನಂದ practical chemistryನು ಛಲೋ ಅದ ಅಂತ ಗೊತ್ತಾಗಿದ್ದ ಲಗ್ನಾ ಮಾಡ್ಕೊಂಡ ಕರೆಕ್ಟ ಒಂದ ಗಂಡು ಒಂದ ಹೆಣ್ಣ ಹಡದ ಮ್ಯಾಲೆ.

ಅಷ್ಟರಾಗ ನಮ್ಮ ದೋಸ್ತ ಒಬ್ಬಂವಾ
“ಲೇ, ಈ ದೊಡ್ಡ ಕಂಪನಿಯವರ ಹಂಗ ಫಾರ್ಮಾಲಿಟಿಗೆ interview ಕರಿತಾರಲೇ, ಎಲ್ಲಾ ಒಳಗಿಂದ ಒಳಗ ಕ್ಯಾಂಡಿಡೇಟ ಫಿಕ್ಸ್ ಮಾಡ್ಕೊಂಡಿರತಾರ ತೊಗೊ” ಅಂತ ಇನ್ನು interviewಗೆ ಹೋಗೊಕಿಂತ ಮೊದ್ಲ ನಂದ ಹವಾ ಠುಸ್ಸ ಅನಿಸಿಬಿಟ್ಟಾ. ಇರಲಿ ಹೋಗಿ ಬಂದರಾತ, ಅಲ್ಲೇ ಏನ ಕೇಳ್ತಾರ ಅಂತರ ನೋಡಿದ್ರಾತು ಅಂತ ನಾ ಡಿಸೈಡ ಮಾಡಿದೆ.

ಅಲ್ಲೆ interview ಒಳಗ B.E.in electrical and mechanical ಮಾಡಿದವರು ಮತ್ತ H.R.Departmentನವರು ಕೂಡಿ ನನ್ನ chemistry interview ತೊಗೊಂಡ, ಮೊದ್ಲ ಎಲ್ಲೆ ಕೆಲಸಾ ಮಾಡ್ತಿದ್ದಿ? ಎಷ್ಟ ಕೊಡತಿದ್ದರು? ಈಗ ನಿಂದ expectation ಎಷ್ಟು? ಅಂತ ಕೇಳಿ ಆತ ಮುಂದ ತಿಳಸ್ತೇವಿ ಅಂತ ಮನಿಗೆ ಕಳಸಿದರು. ನನಗೆಲ್ಲೋ ನಮ್ಮ ದೋಸ್ತ ಹೇಳಿದಂಗ ಅವರ formalityಗೆ interview ತೊಗೊಂಡಂಗ ಅನಸ್ತು.

ಮುಂದ ಒಂದ ನಾಲ್ಕ ತಿಂಗಳ ಅದರದ ಏನ ಸುದ್ದಿನ ಇದ್ದಿದ್ದಿಲ್ಲಾ, ಆಮ್ಯಾಲೆ ಮಾರ್ಚ ಒಳಗ ಮತ್ತೊಂದ interview ಲೆಟರ್ ಬಂತ, ಎರಡನೇ ರೌಂಡ interviewಗೆ ಬರ್ರಿ ಅಂತ. ಈ ಸರತೆ ಅಗದಿ ಎರೆಡೆರಡ ರೌಂಡ interview, first round ಒಬ್ಬ scientist (in paints) ತೊಗೊಂಡ್ರು. ಅವರ ತೊಗೊಂಡಿದ್ದ pure chemistry interview, ನಂದ chemistry ಛಲೋ ಇತ್ತ, ನಾ ಅಗದಿ ಭಾರಿ detailed interview ಕೊಟ್ಟೆ. ಮುಂದ ಎರಡನೇ ರೌಂಡ interviewಗೆ ಕರದರು. ಈ ಸರತೆ ಆ scientist ಜೊತಿ ಕಂಪನಿ CEO, HOD’S ಎಲ್ಲಾ ಇದ್ದರು. ಅವರ ನನ್ನ ಫ್ಯಾಮಿಲಿ background, ನಾ ಏನ ಮಾಡ್ತೇನಿ ಎಲ್ಲಾ ಕೇಳಿ ಲಾಸ್ಟಿಗೆ ಕಂಪನಿ CEO ಒಂದ ಸರತೆ ನನ್ನ ಮಾರಿ ನೋಡಿ

“congratulations, you are selected. ನಾಳೆ ಬಂದ ನಿಂಬದ ಮೆಡಿಕಲ್ ಮಾಡಸಸರಿ. ಅನ್ನಂಗ ನೀವು ಯಾವಾಗ join ಆಗ್ತೀರಿ” ಅಂತ ಕೇಳಿದರು. ನಾ ಅವರಿಗೆ ಪ್ರೈವೇಟ ಟ್ಯೂಶನ್ಸ ಹೇಳೊದರ ಬಗ್ಗೆ ಹೇಳಿದ್ದೆ, ಹಿಂಗಾಗಿ ಸ್ವಲ್ಪ ಧೈರ್ಯಾ ಮಾಡಿ

“ಸರ್, ಈಗ exams ಹತ್ತರ ಅವ, ಟ್ಯುಶನ್ಸ ಬಿಡೋದ ತ್ರಾಸ ಆಗ್ತದ. ನಾ ಎಪ್ರೀಲ ನಾಗ join ಆಗ್ತೇನಿ?” ಅಂತ ಕೇಳಿದೆ.

“yes,yes.. no issues, you can join in april..congrats once again” ಅಂತ ಕೈ ಕೊಟ್ಟರು. ಅಷ್ಟರಾಗ factory manager
“ಸರ ಈ ಹುಡಗಂದ ವೇಟ ಬರೇ ೩೮ kg, factory act ಪ್ರಕಾರ ಮಿನಿಮಮ ೪೫ ಕೆಜಿ ಇರಬೇಕ” ಅಂದ ಬಿಟ್ಟಾ. ನನ್ನ ಎದಿ ಧಸಕ್ಕಂತ, ಖರೇ ಅಂದ್ರ ನನ್ನ ವೇಟ ೩೬.೫ ಕೆಜಿ ಇತ್ತ, ಅವರೇನ ವೇಟ ಚೆಕ್ ಮಾಡಲಿಕ್ಕಿಲ್ಲಾ ಅಂತ ನಾ ವೇಟ ೩೮ ಅಂತ ಅವರ ಕೊಟ್ಟ ಫಾರ್ಮ ಒಳಗ ಬರದಿದ್ದೆ. ನಂಗ ಜೀವನದಾಗ ಮತ್ತೊಮ್ಮೆ brawn is mightier than brain ಅಂತ ಅನಸಲಿಕತ್ತ.

“ಇರವಲ್ತಾಕ ತೊಗೊಳ್ರಿ, ಇನ್ನ ಮುಂದ ನಮ್ಮ ಕ್ಯಾಂಟೀನ ಊಟಾ ಉಂಡ ಧಪ್ಪ ಆಗ್ತಾನ, ಹುಡಗ ಶಾಣ್ಯಾ ಇದ್ದಾನ” ಅಂತ ಕಂಪನಿ CEO ಫ್ಯಾಕ್ಟರಿ ಮ್ಯಾನೆಜರದ ಬಾಯಿ ಮುಚ್ಚಿಸಿ ನನಗ
“your service will be confirmed only after you cross 45 kgs” ಅಂತ ನಕ್ಕೋತ ಅಂದರು. ನಂಗ ಅಗದಿ ಹೋಗಿದ್ದ ಜೀವ ಬಂದಂಗ ಆತ. ಆದರ ಮರುದಿವಸ ಮೆಡಿಕಲಗೆ ಬಾ ಅಂತ ಬ್ಯಾರೆ ಹೇಳಿದ್ದರು, ಅಲ್ಲೇ ಮತ್ತ ನಂದ ಏನೇನ ಕಡಿಮೆ ಅದ ಅಂತಾರ ಅಂತ ಟೇನ್ಶನ ಹತ್ತಿತ್ತ.

ನಾ ಅವರಿಗೆಲ್ಲಾ thanks ಹೇಳಿ ಮನಿಗೆ ಬಂದೆ, ಆದರೂ ಯಾಕೋ ನಂಗ ಒಂದ ದೊಡ್ಡ ನೌಕರಿ ಸಿಕ್ಕದ್ದ ಖುಶಿ ಇರಲಿಲ್ಲಾ, ಎಲ್ಲೊ ಎನೋ ಗದ್ಲ ಆಗೋ ಹಂಗ ಕಾಣಲಿಕತ್ತಿತ್ತ. ಹಿಂಗಾಗಿ ನಾ ನನಗ ನೌಕರಿ ಸಿಕ್ಕದ್ದ ಊರ ತುಂಬ ಡಂಗರಾ ಹೊಡಿಲಿಕ್ಕೆ ಹೋಗಲಿಲ್ಲಾ.

ಮರದಿವಸ ಮೆಡಿಕಲಗೆ ಹೋದೆ. ಒಬ್ಬ ರಿಟೈರಮೆಂಟ ವಯಸ್ಸಿಗೆ ಬಂದಿದ್ದ ಡಾಕ್ಟರ ನಂದ ಎಲ್ಲಾ ಚೆಕ್ ಮಾಡಲಿಕತ್ತರು, ನನ್ನ ಇರೋ ಒಂದ ಗೇಣ ಚೆಸ್ಟ, ಇದ್ದದ್ದರಾಗ ಬೆಸ್ಟ ಇದ್ದ ಹೈಟ, ಫ್ಯಾಕ್ಟರಿ ಯಾಕ್ಟ ಕಿಂತಾ ಕಡಿಮಿ ಇದ್ದ ವೇಟ್ ಎಲ್ಲಾ ಬರಕೊಂಡ, ಒಮ್ಮೆ ಮಲಗಿಸಿ, ಒಮ್ಮೆ ಎಬಿಸಿ ಎಲ್ಲಾ ಚೆಕ್ ಮಾಡಿ ಲಾಸ್ಟಿಗೆ ತಮ್ಮಾ ಅಂಗಿ ಚೆಡ್ಡಿ ಎಲ್ಲಾ ತಗಿ ಅಂದರು. ನಾ ಇದೇನ ಬಂತಪಾ ಅನ್ಕೊಂಡೆ. ಏ ಎಲ್ಲಾ ತಗಿಬೇಕ ಅದಕ್ಯಾಕ ನಾಚಗೋತಿ ಅಂತ ಗಂಟ ಬಿದ್ದರು. ಹಂಗ ಸಣ್ಣಂವ ಇದ್ದಾಗ ಬರೆಬತ್ತಲೆ ಮಡಿನೀರ ತುಂಬಿ ರೂಡಿ ಇತ್ತ ಭಡಾ ಭಡಾ ಎಲ್ಲಾ ತಗದ ಗೊಮಟೇಶ್ವರನ ಗತೆ ನಿಂತೆ. ನಾ ಅಷ್ಟ ತಿಳವಳಕಿ ಬಂದ ಮ್ಯಾಲೆ ಮಂದಿ ಮುಂದ ಹಂಗ ನಿಂತಿದ್ದ ಒಂದನೇ ಸಲಾ. ಡಾಕ್ಟರ ಒಮ್ಮೆ ನನ್ನ ಮಾರಿ ನೋಡಿ, ಹಿಂದ ಮುಂದ ಎಲ್ಲಾ ನೋಡಿ, ಜೋರಾಗಿ ಕೆಮ್ಮ ಅಂದಾ, ನಾ ಕೆಮ್ಮಿದೆ. ಇನ್ನೊಮ್ಮೆ ಕೆಮ್ಮ ಅಂದಾ ನಾ ಮತ್ತ ಕೆಮ್ಮಿದೆ. ನಾ ಕೆಮ್ಮಿದಾಗ ಒಮ್ಮೆ ಇಡಿ ದೇಹದ ಪಾರ್ಟ್ಸ ಎಲ್ಲಾ ಅಳಗ್ಯಾಡತಿದ್ವು. ಕಡಿಕೆ ಎದ್ದ ನನ್ನ ಹತ್ತರ ಬಂದ
“ನಿನ್ನ ತೊಡಿ ಆಪರೇಶನ್ ಆಗೇದೇನ” ಅಂದಾ.

“ಇಲ್ಲಾ, ನಂದ ಯಾವದು ಆಪರೇಶನ್ ಆಗಿಲ್ಲಾ” ಅಂದೆ.

“ಏ, ಖರೇ ಹೇಳ್, ಇದೇನಿದ” ಅಂತ ನನ್ನ ತೊಡಿ ಕಡೆ ತೋರಿಸಿದರು. ನನ್ನ ತೊಡಿಗೆ ಒಂದ ಕಡೆ ಗೂಳಿ (ತೆಗ್ಗು) ಬಂದಂಗ ಆಗಿತ್ತ. ಅದ ಹುಟ್ಟಾ ಹಂಗ ಇತ್ತ, ಒಂಥರಾ ಹೆಣ್ಣಮಕ್ಕಳಿಗೆ ಗಲ್ಲಕ್ಕ ಗೂಳಿ ಅಂದರ ಡಿಂಪಲ್ಸ್ ಬಿಳ್ತದ ಅಲಾ ಹಂಗ ನಂಗ ತೊಡಿಗೆ ಬಿಳ್ತಿತ್ತ. ಅಲ್ಲಾ ಇನ್ನೂ ಬೀಳ್ತದ ಆ ಮಾತ ಬ್ಯಾರೆ.

“ಇಲ್ಲರಿ ಇದ ಹುಟ್ಟಾ ಹಿಂಗ ಅದ, ಇದ manufacturing defect” ಅಂತ ನಾ ಹೇಳಿದರು ಕೇಳಲಿಲ್ಲಾ. ಇಲ್ಲಾ ನಿಂಗ ತೊಡಿಗೆ ಆಪರೇಶನ್ ಆಗಿರಲಿಕ್ಕೆ ಬೇಕು ಅಂತ ಡಾಕ್ಟರ ಗಂಟ ಬಿದ್ದರು. ನಾ ಆಗಿಲ್ಲಾ ಅಂತ ಎಷ್ಟ ಹೇಳಿದರು ಕೇಳಲಿಲ್ಲಾ.

ನಾ ಹಿಂಗ ಪ್ಯಾಂಟ ಏರಿಸಿಗೊಳೊದಕ್ಕು ನಿನ್ನೆ ನನ್ನ ಜೊತಿ ಬಂದಿದ್ದ ಇನ್ನೊಂದ interview ಕ್ಯಾಂಡಿಡೇಟ ‘ಪಾಟೀಲ’ ಅನ್ನೋಂವಾ ಮೆಡಿಕಲಗೆ ಬಂದಾ, ಅಲ್ಲಿ ತನಕ ನಾ ನಂದ ಫೈನಲ ಆಗೇದ ಹಂಗs formalityಗೆ ನನ್ನ medical ತೊಗೊಳಿಕತ್ತಾರ ಅಂತ ತಿಳ್ಕೊಂಡಿದ್ದೆ. ಅವನ್ನ ನೋಡಿದ ಮ್ಯಾಲೆ ನಂದೇನ ನೌಕರಿ ಗ್ಯಾರಂಟೀ ಇಲ್ಲಾ ಅನಸಲಿಕತ್ತ.

ನಾ ಮುಂದ eye testಗೆ ಹೋದೆ. ಅಲ್ಲೇ ನೋಡಿದ್ರ ಇನ್ನೊಂದ ಪ್ರಾಬ್ಲೆಮ್ ಹುಟ್ಟತ ನಂಗ ದೂರ ದೃಷ್ಟಿನ ಇದ್ದಿದ್ದಿಲ್ಲಾ. ಅಂದರ ದೂರ ಇದ್ದದ್ದ ಕ್ಲೀಯರ್ ಕಾಣತಿದ್ದಿಲ್ಲಾ, ನಾ ಇಷ್ಟ ದಿವಸ ಎಲ್ಲಾ ಹತ್ತರಿಂದ ನೋಡಿದಂವಾ, ಹಂಗ ದೂರ ದೃಷ್ಟಿ ಬಗ್ಗೆ ತಲಿಕೆಡಸಿಗೊಂಡಿದ್ದಿಲ್ಲಾ. ಒಟ್ಟ ನನ್ನ ದುರಾದೃಷ್ಟಾ eye test ಒಳಗೂ ಫೇಲ ಮಾಡಿದರು. ಆತ ತೊಗೊ ನಂಗ ಕಿರ್ಲೋಸ್ಕರ ಕೆಲಸ ಸಿಕ್ಕಂಗ ಆತು ಅನ್ಕೊಂಡೆ. ಅಷ್ಟರಾಗ

“ಏ, ಇದಕ್ಯಾಕ ತಲಿ ಕೆಡಸಿಗೋತಿರಿ, ಒಂದ ಚಾಳಿಸ ತೊಗೊಳ್ರಿ, ಎಲ್ಲಾ ಕರೆಕ್ಟ ಆಗ್ತದ” ಅಂತ ಧೈರ್ಯಾ ಹೇಳಿ ಟೆಸ್ಟ ಮಾಡಿದವರು ಚಸ್ಮಾ ನಂಬರ ಬರದ ಕೊಟ್ಟರು. ನಾ ಆತ ಆಗಿದ್ದ ಆಗಲಿ ಅಂತ ಮನಿ ಹಾದಿ ಹಿಡದೆ.

ಎರಡ ದಿವಸ ಆದರು ಅವರದೇನ ಫೋನ ಬರಲಿಲ್ಲಾ, ನಾನ ಮತ್ತ ಅಲ್ಲೇ ಹೋಗಿ ಕೇಳಿದರ ನಂದ ಮೆಡಿಕಲ್ ಒಳಗ ಹೋತ ಅಂತ personal departmentನವರ ಹೇಳಿದರು. ನನ್ನ ಮೆಡಿಕಲ್ ರಿಪೋರ್ಟ ರಿಮಾರ್ಕ್ಸ ಒಳಗ he has undergone thigh operation and his weight is less than the required weight as per the factory act ಅಂತ ಬರದ hence failed to pass medical examination ಅಂತ ಬರದ ಬಿಟ್ಟಿದ್ದರು.
ನಂಗ ಖರೇನ ಭಾಳ ತಲಿಕೆಟ್ಟತ, ಒಂದು, ನಂದ ಅವತ್ತಲ್ಲಾ, ಇವತ್ತಿನ ತನಕ ಒಂದ ಆಪರೇಶನ ಆಗಿಲ್ಲಾ. ನಾಲ್ಕ ವರ್ಷದ ಹಿಂದ ಮಕ್ಕಳಾಗಲಾರದ ಆಪರೇಶನ್ ಮಾಡಿಸಿಗೊಳೊ ಪ್ರಸಂಗ ಬಂದಾಗ ಸಹಿತ ನಾ ಮಾಡಿಸಿಗೊಳ್ಳಲಾರದ ನನ್ನ ಹೆಂಡತಿದ ಮಾಡಸಿದ ಮಗಾ ನಾ. ಇನ್ನ ಆವಾಗಂತೂ ದಣೇಯಿನ ೨೦.೫ ವರ್ಷ ಆಪರೇಶನ ಮಾಡಿಸಿಗೊಳೊ ಪ್ರಶ್ನೆನ ಇದ್ದಿದ್ದಿಲ್ಲಾ, ಅದು ಎಲ್ಲಾ ಬಿಟ್ಟ ತೊಡಿ ಆಪರೇಶನ್ ಯಾಕ ಮಾಡಿಸಿಗೊಳ್ಳಲಿ?ಇನ್ನ ವೇಟ ಕಡಿಮಿ ಇದ್ದಿದ್ದಕ್ಕ ಕಂಪನಿ CEOನ no issues, you have to put on some weight ಅಂತ ಹೇಳಿದ ಮ್ಯಾಲೆ ಈ ಫ್ಯಾಕ್ಟರಿ ಮ್ಯಾನೆಜರಂದ ಏನ ಅಂತ ಸಿಟ್ಟಬಂತ. ನಾ ಇದನ್ನ ಇಲ್ಲಿಗೆ ಬಿಡಬಾರದು ಈ ವಿಷಯ ಕಂಪನಿ CEO ತನಕ ಒಯ್ಯಬೇಕ ಅಂತ ಡಿಸೈಡ ಮಾಡಿದೆ.

ಅದ ಏನ ಆಗಿತ್ತಂದರ ಆ ಫ್ಯಾಕ್ಟರಿ ಮ್ಯಾನೆಜರ ವೈಷ್ಣರೊಂವ ಇದ್ದಾ, ಆ ಪಾಟೀಲ ಅಂತ ಒಂದ ಕ್ಯಾಂಡಿಡೇಟ ಇತ್ತಲಾ ಅವನು ವೈಷ್ಣರೊಂವಾ, ಅಂವಾ ಆ ಮ್ಯಾನೆಜರನ ಕ್ಯಾಂಡಿಡೇಟ. ಹಿಂಗಾಗಿ ನಂಗ ಮೆಡಿಕಲ್ ಒಳಗ ಡಮಕ್ಕ ಅನಿಸಿ ಅವನ ಹೆಸರ ಫೈನಲ್ ಮಾಡಿದ್ದರು. ಇದು ಕಂಪನಿ CEOಗ ಗೊತ್ತ ಇದ್ದಿದ್ದಿಲ್ಲಾ.
ನಾ ನನ್ನ interview ತೊಗೊಳಿಕ್ಕೆ ಬಂದಿದ್ದ scientistಗೂ ಹೋಗಿ ಭೆಟ್ಟಿ ಆಗಿ ಬಂದೆ. ಅವರು

“sorry i cant help in this matter, No doubt your chemistry is good but physique seems to be in bad shape and more over I am just outside consultant for kirloskar, ನಾ ಅವರ ಇಂಟರ್ನಲ್ ಫ್ಯಾಕ್ಟರಿ ವಿಷಯದಾಗ ತಲಿ ಹಾಕಲಿಕ್ಕೆ ಬರಂಗಿಲ್ಲಾ” ಅಂದರು. ನಾ ಇನ್ನ ಈ ವಿಷಯ CEOಗ ಹೆಂಗ ಮುಟ್ಟಸಬೇಕು ಅಂತ ವಿಚಾರ ಮಾಡಿ ಕಡಿಕೆ ನಮ್ಮ ಮಾರವಾಡಿ ದೋಸ್ತಂದ ಒಂದ ಕಾಪರ್ ಫ್ಯಾಕ್ಟರಿ ಇತ್ತ, ಅವರದ ಸಪ್ಲೈ ಕಿರ್ಲೋಸ್ಕರಕ್ಕ ಇತ್ತ. ನಾ ಸೀದಾ ಅವರ ಫ್ಯಾಕ್ಟರಿಗೆ ಹೋಗಿ ಎಲ್ಲಾ ವಿಷಯ ಅವರಿಗೆ ಹೇಳಿದೆ. ಅವರ “ದೇಖೆಂಗೆ, ಕಲ್ ಮೈ ಉನಸೆ ಬಾತ ಕರತಾ ಹೂಂ” ( ನಾಳೆ ನಾ ಮಾತಾಡಿ ನೋಡ್ತೇನಿ) ಅಂತ ಹೇಳಿದ್ರು. ಪಾಪ ಅವರಿಗೆ ನನ್ನ ಎಲ್ಲಾ ಪರಿಸ್ಥಿತಿ ಗೊತ್ತ ಇತ್ತ, ಮರುದಿವಸ ಅವರ ಕಿರ್ಲೋಸ್ಕರಕ್ಕ ಹೋಗಿ CEOಗ ಭೆಟ್ಟಿ ಆಗಿ ನಮ್ಮ ಪೈಕಿ ಒಬ್ಬ ಹುಡಗ ನಿಮ್ಮ ಕಂಪನಿ ಒಳಗ ಸೆಲೆಕ್ಟ ಆಗಿದ್ದಾ, ಅವಂದ ಮೆಡಿಕಲ್ ಒಳಗ ಹಿಂಗ ಆತ ಅಂತ, ಪಾಪ ಅವಂಗ ಕೆಲಸದ್ದ ಭಾಳ ಜರೂರತ ಇತ್ತು ಅಂತ ವಿಷಯ ತಿಳಸಿದರು.

CEOಗ ಆವಾಗ ಗೊತ್ತಾಗಿದ್ದ ನಂದ ಹಿಂಗ ಆಗೇದ ಅಂತ, ಅವರ ಸೀದಾ ಫ್ಯಾಕ್ಟರಿ ಮ್ಯಾನೆಜರಗ ಫೋನ ಹಚ್ಚಿ
“ರ್ರಿ, ನಂದ ತಲಿ ಒಂದ ಬಿಟ್ಟ ಉಳದದ್ದ ಎಲ್ಲಾ ಒಂದ ಸಲಾ ಬಿಟ್ಟ ಎರಡ ಸಲಾ ಮುರದಾವ, ಮ್ಯಾಲೆ ಮೂರ ಮೇಜರ್ ಆಪರೇಶನ ಆಗ್ಯಾವ, ಹಂತಾವ ಕಂಪನಿ ಹೆಡ್ ಇದ್ದೇನಿ. ಆ ಹುಡಗಂದ ಏನ ದೊಡ್ಡ ವಿಷಯ, get all the papers to me” ಅಂತ ಒದರಾಡಿ ನನ್ನ ಪರವಾಗಿ ಹೋದವರಿಗೆ I will look into the matter and come back to you ಅಂತ ಹೇಳಿ ಕಳಸಿದರು.

ಮುಂದ ಮೂರ ದಿವಸಕ್ಕ ನನ್ನ ಫಿನೈಲ್ ಫ್ಯಾಕ್ಟರಿಗೆ kec ಇಂದ immediate ಆಗಿ ಬಂದ ಫ್ಯಾಕ್ಟರಿ ಮ್ಯಾನೆಜರಗೆ ಭೆಟ್ಟಿ ಆಗರಿ ಅಂತ ಫೋನ ಬಂತ. ನಾ ಮಧ್ಯಾಹ್ನ ಅನ್ನೊದರಾಗ ಅಲ್ಲೆ ಹಾಜರ್ ಇದ್ದೆ. ನಂಗ ಫ್ಯಾಕ್ಟರಿ ಮ್ಯಾನೆಜರ ಒಂದ ಸರತೆ ದಿಟ್ಟಿಸಿ ನೋಡಿ ಇನ್ನೊಮ್ಮೆ medical ಮಾಡಿಸಿಗೊಂಡ ಬಾ ಅಂತ ಕಳಸಿದಾ. ಅಲ್ಲೇ ಡಾಕ್ಟರ ಮತ್ತ ನನ್ನ ಮಾರಿ ನೋಡಿ
“ಏನಪಾ, ಮತ್ತ ನಿಂದ ಅಂಗಿ ಚಡ್ಡಿ ಕಳಸಿಸಿ ಕೆಮ್ಮಿಸ ಬೇಕಾ” ಅಂತ ಅಂದ
“ಇಲ್ಲೆ ಸಹಿ ಮಾಡ” ಅಂತ ಖಾಲಿ ಮೆಡಿಕಲ್ ರಿಪೋರ್ಟ ಮ್ಯಾಲೆ ಸಹಿ ತೊಗೊಂಡ ಮತ್ತ personal departmentಗೆ ಕಳಸಿದರು.

ಅಲ್ಲೇ ಆ ಫ್ಯಾಕ್ಟರಿ ಮ್ಯಾನೆಜರ ಸೀದಾ ನನ್ನ ಕೈಯಾಗ appointment letter ಕೊಟ್ಟ
“ನಾಳಿಂದ ಕೆಲಸಕ್ಕ ಬಾ, ಮುಂಜಾನೆ ೭.೧೫ಕ್ಕ ಇಲ್ಲೇ ಇರಬೇಕ, ಹಂಗ ಟ್ಯೂಶನ್ ಗಿಶನ್ ಅನ್ಕೋತ ಕೂತಿ ನಾವ ಬ್ಯಾರೆಯವರನ ತೊಗೊತೇವಿ ಇಷ್ಟ” ಅಂತ ಸಿಟ್ಟಲೇ ಹೇಳಿದರು. ನಾ ಅಲ್ಲೆ ಏನು ಮಾತೊಡಹಂಗ ಇರಲಿಲ್ಲಾ, ಸೀದಾ appointment letter ತೊಗೊಂಡ ಮನಿ ಹಾದಿ ಹಿಡದೆ.

ಮುಂದ ಮರುದಿವಸ ಮುಂಜಾನೆ ೭ ಗಂಟೆಕ್ಕ kec ಒಳಗ ಹಾಜರ, ನಂದ ಕಿರ್ಲೋಸ್ಕರದಾಗ ಎರಡ ಪಂಚ, ಒಂದ ಲಂಚ ಶುರು ಆತ. ಮುಂದ ನಾ ಬರೇ ಎರಡ ರೂಪಾಯಿ ಕೊಟ್ಟ ಮನಿ ಅಡಗಿಗಿಂತಾ ಛಲೋ ಊಟಾ ಮಾಡಿದರು ನಂದೇನ ಆರ ತಿಂಗಳದಾಗ ವೇಟ ಏರಲಿಲ್ಲಾ, ಆದರೂ ನನ್ನ ಸರ್ವೀಸ ಒಂದ ವರ್ಷ ಬಿಟ್ಟ ಕನ್ಫರ್ಮ್ ಆತ. ಅಲ್ಲಾ ಒಂದ ವರ್ಷದಾಗ ಅವರಿಗೆ ನನ್ನ brain is mightier than brawn ಅಂತ ನಾ ತೊರಸಿದ್ದೆ ಆ ಮಾತ ಬ್ಯಾರೆ.

ಅಲ್ಲಾ ಹಂಗ ನಂಗ ಜೀವನದಾಗ ಮುಂದ ಒಮ್ಮೇನೂ ನಂದ ವೇಟ ಕಡಿಮೆ ಅದ ಅಂತ ಎಲ್ಲೂ ಯಾರೂ ತಕರಾರ ಮಾಡಲಿಲ್ಲಾ. ನನ್ನ ಹೆಂಡತಿ ಅಂತೂ ನನ್ನ ಒಂದನೇ ಸರತೆ ನೋಡಿದಾಗ ‘ಭಾರ ಕಡಿಮೆ ಅದ ತೊಗೊ’ ಅಂತ ಅಗದಿ ಖುಶೀಲೇ ಲಗ್ನಕ್ಕ ಹೂಂ ಅಂದಿದ್ಲು. ಖರೇ ಹೇಳ್ಬೇಕಂದರ ನಂದ ತೂಕ ನಲವತ್ತೈದ ಕೆ.ಜಿ ಆಗಿದ್ದ ನಾ ಒಂದ ಹಡದ ಮ್ಯಾಲೆ ಅಂದರ ನನ್ನ ಹೆಂಡತಿ ಒಂದ ಹಡದ ಮ್ಯಾಲೆ, ಮುಂದ ಐವತ್ತ ದಾಟಿದ್ದ ಎರಡನೇದ ಹಡದ ಮ್ಯಾಲೆ. ನಾ ಮುಂದ ಹಿಂಗ ನನ್ನ ಹೆಂಡತಿ ಹಡದಾಗ ಒಮ್ಮೆ(ಆರ ವರ್ಷಕ್ಕೊಮ್ಮೆ) ಐದ-ಐದ ಕೆ.ಜಿ ಏರಸೋದ ನೋಡಿ ನನ್ನ ಹೆಂಡತಿ ತಲಿಕೆಟ್ಟ ಆಪರೇಶನ ಮಾಡಿಸಿಗೊಂಡ ಬಿಟ್ಟಳು. ಆವಾಗಿಂದ ಇವತ್ತೀನ ತನಕ ನಾ ೫೨ + or – ೨ ಕೆ.ಜಿ ಇದ್ದೇನಿ.

ಇವತ್ತೀಗೂ ಜೀವನದಾಗ ಯಾರಿಗೂ ಭಾರ ಆಗಲಾರದ ಬದುಕಲಿಕತ್ತೇನಿ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ