ನಾ ಮದುವಿ ಮಾಡ್ಕೊಂಡ ಹೊಸ್ತಾಗಿ ಗಾಂಧಿನಗರದಾಗಿನ ಡಬಲ್ ಬೆಡ್ ರೂಮ್ ಮನಿಗೆ ಶಿಫ್ಟ ಆಗಿದ್ದೆ. ಹಂಗ ಮನಿ ಎಲ್ಲಾ ಛಲೋ ಇತ್ತ ಆದರ ಆ ಮನ್ಯಾಗ ಜೊಂಡಿಗ್ಯಾ, ಹಲ್ಲಿ, ಇಲಿ, ಕಪ್ಪಿ ಸಿಕ್ಕಾ ಪಟ್ಟೆ ಇದ್ವು.
ನನ್ನ ಹೆಂಡತಿಗೆ ಹಲ್ಲಿ ಒಂದ ಬಿಟ್ಟ ಬ್ಯಾರೆ ಯಾವದ ಹುಳಾ-ಹುಪ್ಪಡಿ ಕಂಡರ ಸಾಕ ಚಿಟ್ಟನ ಚೀರಿ ಹೆದರಿ ಸಾಯಿತಿದ್ದಳು. ಹಂಗ ಅಕಿ ಗಂಡನ ಮನ್ಯಾಗ ಹೆದರಲಾರದ್ದ ಅಂದರ ನಂಗೊದ್ದ. ಅಲ್ಲಾ ನನ್ನ ಹೆಂಡತಿ ನಂಗ ಹೆದರತಿದ್ದಿಲ್ಲಾ ಬರೇ ಹುಳಾ-ಹುಪ್ಪಡಿಗಿಷ್ಟ ಹೆದರತಿದ್ದಳು ಅಂದರ ಅದರ ಅರ್ಥ ನಾ ಆ ಹುಳಾ-ಹುಪ್ಪಡಿಕಿಂತ ಕಡಿ ಅಂತೇನ ಅಲ್ಲಾ ಮತ್ತ.
ಆದರ ಅಷ್ಟರಾಗ ನನ್ನ ಹೆಂಡತಿಗೆ ಹಲ್ಲಿ ಬಗ್ಗೆ ಭಾಳ ಗೌರವ ಇತ್ತ. ಹಂಗ ಅದಕ್ಕೂ ಹೆದರತಿದ್ಲು ಆದರ ಭಾಳ ರಿಸ್ಪೆಕ್ಟಫುಲಿ ಹೆದರತಿದ್ಲು. ಅದ್ಯಾಕ ಅಂತ ಕೇಳಿದರ ಅಕಿಗೆ ಯಾರೋ ಹಲ್ಲಿ ಶಾಸ್ತ್ರ ಹೇಳಿ ಕೊಟ್ಟ ಅಕಿ ತಲ್ಯಾಗ ಹಲ್ಲಿ ಬಗ್ಗೆ ಒಂದ ಫೋಬಿಯಾ ಕ್ರೀಯೆಟ್ ಮಾಡಿ ಬಿಟ್ಟಿದ್ದರು. ಹಿಂಗಾಗಿ ಅಕಿ ಹಲ್ಲಿಗೆ ಅತ್ತಿ ಮಾವನಕಿಂತಾ ಜಾಸ್ತಿ ರಿಸ್ಪೆಕ್ಟ ಕೊಡ್ತಿದ್ದಿಳು. ಅದರಾಗ ನಮ್ಮ ಮನ್ಯಾಗ ಒಂದ ಹತ್ತ ಹಲ್ಲಿ ಸಂಸಾರ ಹುಡಿದ್ವು.
ನಾ ಹಿಂಗ ಮನಿ ತುಂಬ ಹಲ್ಲಿ ಅವ ಅಂದ ಕೂಡಲೆ ಸುಮ್ಮನ ಒಂದ ಬೆಕ್ಕ ಸಾಕಿದರ ಆತು, ಹಲ್ಲಿ ತನ್ನ ತಾನ ಕಡಿಮಿ ಆಗ್ತಾವ ಅಂದರ
’ಏ, ಹಂಗೇಲ್ಲಾ ಹಲ್ಲಿ ಕೊಲ್ಲ ಬಾರದು, ಹಲ್ಲಿ ಕೊಂದ ಪಾಪ, ಬಂಗಾರದ ಹಲ್ಲಿ ಮಾಡಿಸಿ ಕೊಟ್ಟರು ಹೊಗಂಗಿಲ್ಲಾ’ ಅಂದ್ಲು. ನಾ ಅದನ್ನ ಕೇಳಿ ಅಷ್ಟಕ್ಕ ಸುಮ್ಮನಾದೆ, ಮೊದ್ಲ ಹೊಸ್ತಾಗಿ ಲಗ್ನ ಆಗಿತ್ತು, ಪಾಪ ಅಕಿಗೆ ಇನ್ನು ಗಟಾಯಿಸಿದ್ದ ಮಂಗಳಸೂತ್ರ, ಬಿಲವಾರ, ಪಾಟಲಿ ಮಾಡಸೋದ ಬಾಕಿ ಇತ್ತ ಇನ್ನ ಅದರ ಜೋತಿ ಹಲ್ಲಿ ಒಂದ ಎಲ್ಲೆ ಮಾಡಸಲಿ ಬಿಡ ಅಂತ ಅಂತ ಬೆಕ್ಕ ಸಾಕೊ ಉಸಾಬರಿ ಬಿಟ್ಟ ಬಿಟ್ಟಿದ್ದೆ.
ಮುಂದ ನಂಬದ ಹಂಗ ಹಲ್ಲಿ ಜೊತಿ ಸಂಸಾರ ಶುರು ಆತ. ಇನ್ನ್ ಮನ್ಯಾಗ ಡಜನ್ ಗಟ್ಟಲೇ ಹಲ್ಲಿ ಅಂದಮ್ಯಾಲೆ, ಅವು ಕಾಲಾಗ ಬರೊದ ಮೈ ಮ್ಯಾಲೆ ಬೀಳೋದ ಸಹಜ ಶುರು ಆತ. ನಾ ಹಂಗ ಹಲ್ಲಿ ಬಿದ್ದರ ಜಾಡಿಸಿಗೊಂಡ ಹೋಗಿ ಬಿಡ್ತಿದ್ದೆ. ಆದರ ಅದ ಏನರ ನನ್ನ ಹೆಂಡತಿಗೆ ಗೊತ್ತಾದರ ಸಾಕ ಎಲ್ಲೆ ಬಿತ್ತು, ಹೆಂಗ ಬಿತ್ತು, ಯಾವಾಗ ಬಿತ್ತು ಅಂತ ಜೀವಾ ತಿಂದ ನಂಗ ಬಚ್ಚಲಕ್ಕ ಅಟ್ಟಿ ಕೈಕಾಲ ತೊಳಿಸಿ, ದೇವರ ಮುಂದ ದೀಪಾ ಹಚ್ಚಿಸಿಸಿನ ಅಕಿದ ಮುಂದಿನ ಕೆಲಸ. ಹಂಗ ದಿವಸಕ್ಕ ಎಷ್ಟ ಸರತೆ ಹಲ್ಲಿ ಮೈ ಮ್ಯಾಲೆ ಬಿದ್ದರು ದೀಪಾ ಹಚ್ಚಬೇಕ.
ಅಕಿದ ಹಲ್ಲಿ ಶಾಸ್ತ್ರ ಭಾರಿ ಮಜಾ ಇತ್ತ. ಹಲ್ಲಿ ಎಲ್ಲೇಲ್ಲ ಬಿದ್ದರ ಏನೇನ ಆಗ್ತದ ಅಂತ ಭಾರಿ ಛಂದ ಹೇಳ್ತಿದ್ದಳು. ಒಂದ ಸರತೆ ಟಿ.ವಿ. ನೋಡ್ಕೋತ ಕೂತಾಗ ನನ್ನ ನೆತ್ತಿ ಮ್ಯಾಲೆ ಹಲ್ಲಿ ಬಿತ್ತ, ನಾ ಜಾಡಿಸಿಗೊಂಡ ಸುಮ್ಮನ ಕೂತಿದ್ದೆ ಆದರ ಅಕಿ ಅದನ್ನ ನೋಡಿದೋಕಿನ
’ರ್ರಿ, ನೆತ್ತಿ ಮ್ಯಾಲೆ ಹಲ್ಲಿ ಬಿತ್ತರಿ..ಏಳ್ರಿ, ಲಗೂನ ಕೈಕಾಲ ತೊಳ್ಕೊಂಡ ದೀಪಾ ಹಚ್ಚರಿ’ ಅಂತ ಗಂಟ ಬಿದ್ಲು. ನಾ
’ಏ ಸುಮ್ಮನ ಕೂಡಲೇ, ಏನಾಗಂಗಿಲ್ಲಾ’ ಅಂದರ
’ರ್ರಿ..ಹಲ್ಲಿ ನೆತ್ತಿ ಮ್ಯಾಲೆ ಬಿದ್ದರ ನಾಲ್ಕ ತಿಂಗಳದಾಗ ತಾಯಿ- ತಂದಿಗೆ ತ್ರಾಸ ಗ್ಯಾರಂಟಿ, ನಾ ಹೇಳಿದ್ದ ಕೇಳ್ರಿ, ದೀಪಾ ಹಚ್ಚರಿ’ ಅಂತ ಅಂದ್ಲು.
’ಏ ನಾ ನಿನ್ನ ಲಗ್ನ ಆದಾಗಿಂದ ನಮ್ಮ ಅವ್ವಾ-ಅಪ್ಪಗ ತ್ರಾಸ ಆಗಲಿಕತ್ತದ ತೊಗೊ’ಅಂತ ಅನ್ನೋವ ಇದ್ದೆ ಅಷ್ಟರಾಗ ನಮ್ಮವ್ವ ತನಗ ತ್ರಾಸ ಆಗ್ತದ ಅಂದದ್ದಕ್ಕ ಕೇಳಿಸಿಗೊಂಡ
’ಪ್ರಶಾಂತ, ಏನ ಆಗಲಿ, ಒಂದ ಚಮಚೆ ಎಣ್ಣಿ ಹೋದರ ಹೋಗಲಿ, ಹೆಂಗಿದ್ದರೂ ರೇಶನ್ ಎಣ್ಣಿ, ದೀಪಾ ಹಚ್ಚಿ ಬಿಡಪಾ’ ಅಂತ ಗಂಟ ಬಿದ್ಲು. ನಾ
’ಏ, ನೆತ್ತಿ ಮ್ಯಾಲೆ ಬಿದ್ದಿಲ್ಲ ತೊಗೊ, ತಲಿಗೆ ಬಡಕೊಂಡ ಬಿದ್ದದ’ ಅಂದರ ನನ್ನ ಹೆಂಡತಿ
’ತಲಿ ಮ್ಯಾಲೆ ಬಿದ್ದರ ಹನ್ನೊಂದ ದಿವಸದಾಗ ಗ್ಯಾರಂಟಿ ಏನರ ಲುಕ್ಸಾನ ಆಗ್ತದ, ನೀವು ಅದಕ್ಕಾದರೂ ದೀಪಾ ಹಚ್ಚಬೇಕು’ ಅಂದ್ಲು. ಏನ್ಮಾಡ್ತೀರಿ?
ಅಷ್ಟರಾಗ ಅಕಸ್ಮಾತ ಹಲ್ಲಿ ಹಣಿ ಮ್ಯಾಲೆ ಬಿದ್ದರ ಮೂರ ತಿಂಗಳದಾಗ ಲಾಭ ಆಗ್ತದ ಅಂತ, ಏನಂತರಿ ಇದ್ದಕ್ಕ?
ನೆತ್ತಿ ಮ್ಯಾಲೆ ಬಿದ್ದರ ಲುಕ್ಸಾನ, ತಲಿ ಮ್ಯಾಲೆ ಬಿದ್ದರ ಲುಕ್ಸಾನ, ಹಣಿ ಮ್ಯಾಲೆ ಬಿದ್ದರ ಫಾಯದೆ, ಇನ್ನ ಹಲ್ಲಿ ಬೀಳಬೇಕಾರ ಅದರ ಬುಡಕ ಹೋಗಿ ಹಣಿ ಹಿಡದ ನಿಲ್ಲಬೇಕ ಇಷ್ಟ. ಇನ್ನು ಡಿಟೇಲ್ಸ್ ಕೇಳ್ರಿ ಅಕಿ ಹಲ್ಲಿ ಪುರಾಣದ್ದ
ತುರುಬಿನ ಮ್ಯಾಲೆ ಬಿದ್ದರ ಒಂದ ವರ್ಷದಾಗ ಅನಿಷ್ಟ ಆಗ್ತದ ಅಂತ. ಎಡಗಣ್ಣಿನ ಮ್ಯಾಲೆ ಲುಕ್ಸಾನ, ಬಲಗಣ್ಣಿನ ಮ್ಯಾಲೆ ಬಿದ್ದರ ಫಾಯದೆ, ಎಡಗಿವಿ ಮ್ಯಾಲೆ ಬಿದ್ದರ ಹಾನಿ, ಬಾಯಿ ಮ್ಯಾಲೆ ಬಿದ್ದರ ಒಂದ ವರ್ಷದಾಗ ದೇಹಾರಿಷ್ಟವಾಗುವದು.ಅಂದರ ಗೊಟಕ ಅಂತಾರಂತ. ಹೆಗಲ ಹಿಂಭಾಗದಾಗ ಬಿದ್ದರ ಒಂದ ವರ್ಷದಾಗ ಧನ ಲಾಭ, ಬಲಗಲ್ಲದ ಮ್ಯಾಲೆ ಬಿದ್ದರ ಒಂಬತ್ತ ತಿಂಗಳದಾಗ ಲುಕ್ಸಾನ, ಎಡಗಲ್ಲದ ಮ್ಯಾಲೆ ಬಿದ್ದರ ಒಂದ ವರ್ಷದಾಗ ಧನಲಾಭ.
ಮೂಗಿನ ಮ್ಯಾಲೆ ಬಿದ್ದರ ಇಪ್ಪೊಂದ ದಿವಸ ಹಾನಿ ಆಗ್ತದಂತ.
ಎಡ ಮುಂಗೈ ಮ್ಯಾಲೆ ಬಿದ್ದರ ಸಂತೋಷ ಅಂತ, ಬಲ ಹೆಗಲ ಮ್ಯಾಲೆ ಬಿದ್ದರ ಗಿಫ್ಟ ಸಿಗ್ತಾವ ಅಂತ. ಬಲ ಪಕ್ಕೆ ಮ್ಯಾಲೆ ಬಿದ್ದರ ಫ್ರೇಂಡ್ಸ್ ಬರತಾರ ಅಂತ, ಎಡ ಪಕ್ಕೆ ಮ್ಯಾಲೆ ಬಿದ್ದರ ಸರ್ಕಾರದವರಿಂದ ಭಯ. ಬಲತೊಡಿ ಮ್ಯಾಲೆ ಬಿದ್ದರ ಪುತ್ರ ಪೀಡೆ, ಬಲ ಕುಂಡಿಯ ತಿಗದ ಮ್ಯಾಲೆ ಬಿದ್ದರ ಧನ ಪ್ರಾಪ್ತಿ ಅಂತ. ಅಷ್ಟರಾಗ ಎಡ ಕುಂಡಿ ತಿಗದ ಮ್ಯಾಲೆ ಬಿದ್ದರ ಧನಹಾನಿ ಅಂತ. ಎಡ ಮೊಳಕಾಲ ಮ್ಯಾಲೆ ಬಿದ್ದರ ಸ್ತ್ರೀ ಮುಖಾಂತರ ಹಾನಿ. ಸಾಕೇನ ಇಷ್ಟ ಡಿಟೇಲ್ಸ?
ಮತ್ತ ಯಾವದರ ದೇಹದ ಭಾಗ ಬಿಟ್ಟಿದ್ದರ ಹೇಳ್ರಿ, ಆ ಭಾಗದ ಮ್ಯಾಲೆ ಹಲ್ಲಿ ಬಿದ್ದರ ಏನ ಆಗ್ತದ ಅಂತ ನನ್ನ ಹೆಂಡತಿನ್ನ ಕೇಳಿ ಹೇಳ್ತೇನಿ ಮತ್ತ.
ಆದರ ಒಂದ ನೆನಪ ಇಡ್ರಿ, ಹಲ್ಲಿ ಎಲ್ಲೆರ ಬೀಳಲಿ ಅದರಿಂದ ಛಲೋನರ ಆಗಲಿ ಕೆಟ್ಟರ ಆಗಲಿ, ಅದ ಸೆಕಂಡರಿ.
ಪ್ರೈಮರಿ ಏನಪಾ ಅಂದರ ಹಲ್ಲಿ ಬಿದ್ದ ಮ್ಯಾಲೆ ಕೈಕಾಲ ತೊಳ್ಕೊಂಡ ದೇವರ ಮುಂದ ದೀಪಾ ಹಚ್ಚsಬೇಕ ಮತ್ತ.
ಹೆಂಗದ ನನ್ನ ಹೆಂಡ್ತಿ ಹೇಳಿದ ಹಲ್ಲಿ ಶಾಸ್ತ್ರ? ಅಲ್ಲಾ, ಎಲ್ಲಾ ಬಿಟ್ಟ ಇಗ್ಯಾಕ ಈದ ನೆನಪಾತ ಅಂದರ ಮೊನ್ನೆ ಯುಗಾದಿ ದಿವಸ ಹೊಸಾ ಪಂಚಾಂಗ ಬಂದಿತ್ತಲಾ ಅದನ್ನ ತಿರುವಿ ಹಾಕಬೇಕಾರ ಅದರಾಗು ಎಲ್ಲೆ ಹಲ್ಲಿ ಬಿದ್ದರ ಏನೇನ ಆಗ್ತದ ಅದಕ್ಕ ಪರಿಹಾರ ಏನೂ ಅಂತ ಒಂದ ಪೇಜ ತುಂಬ ಬರದಿದ್ದರು ಅದಕ್ಕ ಇಷ್ಟೇಲ್ಲಾ ಹೇಳ್ಬೇಕಾತ ಇಷ್ಟ.
ಅಲ್ಲಾ ಹಂಗ ಈ ಪೂರ್ತಿ ಆರ್ಟಿಕಲ್ ಓದಿದ ಮ್ಯಾಲೆ ಮೈಮ್ಯಾಲೆ ಹಲ್ಲಿ ಬಿದ್ದಂಗ ಅನಿಸಿದರ ಎದ್ದ ಕೈಕಾಲ ತೊಳ್ಕೊಂಡ ದೇವರ ಮುಂದ ದೀಪಾ ಹಚ್ಚರಿ.