ಫೇಸ್ ಬುಕ್ ಅಕೌಂಟಿಗೆ ಎರಡು ನಿಮಿಷದ ಮೌನ!

ಇದ ಮೊನ್ನೆ ಒಂದ ಹದಿನೈದ ದಿವಸದ ಹಿಂದಿನ ಮಾತ ಇರಬೇಕ, ನಮ್ಮ ಬೆಂಗಳೂರ ದೋಸ್ತ ಒಬ್ಬಂವಾ ಫೇಸಬುಕ್ಕಿನಾಗ capital ಅಕ್ಷರದಲೇ I QUIT ಅಂತ ಬರದ ಒಂದ status message ಹಾಕಿದ್ದಾ. ನಾ ಅದನ್ನ ನೋಡಿದವನ ಖರೇನ ಗಾಬರಿ ಆಗಿಬಿಟ್ಟೆ. ನಂಗ ಅದನ್ನ ನೋಡಿದ್ದ ತಕ್ಷಣ ಆ 3 idiots ಪಿಕ್ಚರನಾಗ್ ಒಬ್ಬಂವಾ I QUIT ಅಂತ ಗೊಡಿ ಮ್ಯಾಲೆ ಬರದ ಆತ್ಮಹತ್ಯೆ ಮಾಡ್ಕೊತಾನಲಾ ಅದ ನೆನಪಾತ. ಅದರಾಗ ಇತ್ತೀಚಿಗೆ ಒಂದಿಷ್ಟ ಮಂದಿ ಫೇಸಬುಕ್ಕಿನಾಗ suicide note ಬರದ ಸತ್ತದ್ದ, ಸಾಯಿಲಿಕ್ಕೆ ಪ್ರಯತ್ನ ಪಟ್ಟಿದ್ದ ಬ್ಯಾರೆ ಕೇಳಿದ್ದೆ, ಹಿಂಗಾಗೆ ನಂಗ ಖರೇನ ಹೆದರಕಿ ಹತ್ತ.
’ಅರ್ರೇ, ಬಾಪರೇ ಇವಂಗೇನಾತ, ಇನ್ನು ಸಣ್ಣ ವಯಸ್ಸ, ಛಲೊ ನೌಕರಿ, ಹಂಗ ಕನ್ಯಾ ಇನ್ನೂ ಸಿಕ್ಕಿಲ್ಲಾಂದರು ಏನಾತ ಇವತ್ತಿಲ್ಲಾ ನಾಳೆ ಸಿಕ್ಕ ಸಿಗತಿದ್ವು, ಇಂವಾ ಯಾಕ ಅಷ್ಟಕ್ಕ ಇಷ್ಟ ಬೇಜಾರ ಮಾಡ್ಕೊಂಡಾ. ಇಲ್ಲೆ ನಾವ ಕನ್ಯಾ ಸಿಕ್ಕ ಬೇಜಾರ ಮಾಡ್ಕೊಂಡವರ ಇನ್ನು ಜೀವಂತ ಇರಬೇಕಾರ’ ಅಂತ ನಾ ಸೀದಾ ಅವಂಗ ಫೊನ ಹೊಡದೆ, ಆ ನನ್ನ ಮಗಾ ಫೊನ ಎತ್ತಲಿಲ್ಲಾ. ನಂಗ ಇನ್ನೂ ಗಾಬರಿ ಆತ. ಅಷ್ಟರಾಗ ಅವನ status messageಗೆ ಒಂದ ಇಪ್ಪತ್ತ ಮಂದಿ ಲೈಕ ಮಾಡಿದ್ದರು.
ಫೇಸಬುಕ್ಕಿನಾಗ ಏನ ಜನಾನೋ ಏನೋ ಯಾವದು ಸಿರಿಯಸ್ ತೊಗೊಳಂಗಿಲ್ಲಾ, ಅಂವಾ I QUIT ಅಂತ ಬರದರು ಏನ ಬಿಟ್ಟಿ, ಯಾಕ ಬಿಟ್ಟಿ, ಇಷ್ಟ ಲಗೂ ಯಾಕ ಬಿಟ್ಟಿ ಅಂತನೂ ಕೇಳದ ಒಟ್ಟ ಎಲ್ಲಾ ಮೆಸೆಜಗೂ ಲೈಕ ಮಾಡತಾರ, there is no feeling in facebook, though everybody feels about it ಅಂತ ಅನಸಲಿಕತ್ತ.
ಕಡಿಕೆ ಅವನ friends list ಹುಡಕ್ಯಾಡಿ ಅದರಾಗ ನಂಗ ಯಾರ mutual friend ಇದ್ದಾರ, ಅದು ಅವರ ಊರಾಗ ಯಾರ ಇದ್ದಾರ ಅಂತ ಹುಡಕಿ ಒಬ್ಬಂವಂಗ ping ಮಾಡಿದೆ . ಅಂವಾ ನಾ ಇಷ್ಟ ಗಾಬರಿ ಆಗಿದ್ದ ಕೇಳಿ
“ಏ, ನನಗ ಗೊತ್ತಿಲ್ಲೊ ಮಾರಾಯಾ, ಒಂದ್ಯಾರಡ ಸರತೆ poke ಮಾಡಿ ನೋಡ ಇಲ್ಲಾ ಒಂದ ಹತ್ತ ಮಂದಿಗೆ ಹೇಳಿ ಅವನ postಗೆ comments ಮಾಡಸಿ ನೋಡ, ನೋಟಿಫಿಕೇಶನ ನೋಡಿ ತಾನ ಎದ್ದ ಬರತಾನ” ಅಂದಾ. ನಂಗ ಅದು ಖರೇನ ಅನಸ್ತ. ಈ ಫೇಸಬುಕ್ಕ ನೋಟಿಫಿಕೇಶನ ಅಂದರ ಏನಂತಿಳ್ಕೊಂಡಿರ್ರಿ, ’ಸತ್ತಂತಿರುವರನು ಬಡಿದೆಬ್ಬಿಸುವದು’ ಅಂತಾರಲಾ ಹಂಗ. ಫೇಸಬುಕ್ಕಿನಾಗ ಮನಷ್ಯಾಂದ ಕ್ರೆಡಿಬಿಲಿಟಿ ಇರೋದ ಅವಂಗ ಬರೋ ನೋಟಿಫಿಕೇಶನ ಮ್ಯಾಲೆ.
ಅದರಾಗ ಅಂವಾ ಇತ್ತೀಚಿಗೆ ಫೇಸಬುಕ್ಕಿನಾಗ ಸಣ್ಣ-ಸಣ್ಣ ಕವಿತಾ ಬರೇಯೊಂವಾ ಯಾರರ ’ಏನು ಭಾವನೆಗಳು, ಏನು ಶಬ್ದಗಳು’ ಅಂದ್ರ ಸಾಕ ಅಗದಿ ಇವರಜ್ಜ ಮತ್ತ ಬೇಂದ್ರೆಯವರ ಇಬ್ಬರು ಕೂಡೆ ಹಿಂದಕ ಸಾಧನಕೇರಿ ದಂಡಿ ಮ್ಯಾಲೆ ವಾಕಿಂಗ ಹೋಗ್ತಿದ್ದರು ಅನ್ನೋರಗತೆ ಮಾಡೊಂವಾ. ಇವಂದ ಯಾವದರ ತಿಳಿಲಾರದ ಕವಿತಾಕ್ಕ ಲೈಕ ಮಾಡಿ ’ವ್ಹಾ.ವ್ಹಾ…’ ಅಂತ ಕಮೆಂಟ ಮಾಡಿದಾರತ ತಾನ ಎಲ್ಲೆ ಇದ್ದರು ಅದನ್ನ ಲೈಕ ಮಾಡಲಿಕ್ಕೆ ಎದ್ದ ಬರತಾನ ಅಂತ ಅದನ್ನು ಮಾಡಿದೆ, ಹೂಂ..ಹೂಂ..ಅದಕ್ಕು ಉತ್ತರ ಬರಲಿಲ್ಲಾ. ಏ ಇವಂದೇಲ್ಲೊ ಸಿರಿಯಸ್ ಪ್ರಾಬ್ಲೇಮ ಆಗೇದ ಅಂತ ಗ್ಯಾರಂಟಿ ಆತ. ಬಹುಶಃ ಎಲ್ಲೆರ ಊರ ಪಾರಿಗೆ ಹೋಗಿರಬೇಕು ಒಂದ ದಿವಸ ಬಿಟ್ಟ ನೋಡಣ ತಡಿ ಅಂತ ನಾನ ಸಮಾಧಾನ ಮಾಡ್ಕೊಂಡ ಸುಮ್ಮನಾದೆ.
ಮರದಿವಸ ಮುಂಜಾನೆ ಎದ್ದ ಕೂಡಲೇನ ಫೇಸಬುಕ್ಕ ಒಪನ್ ಮಾಡಿ ನೋಡಿದರ ಅವನ ಪ್ರೊಫೈಲ ನಾಪತ್ತೆ. ಅರ್ರೇ, ಏನ ಇಷ್ಟ ಲಗೂ ಅವಂದೇಲ್ಲಾ ಅಂತ್ಯಕ್ರಿಯೆ ಮಾಡಿ ಮುಗಿಸಿ ಅವನ ಅಕೌಂಟ ಡಿಲಿಟ್ ಮಾಡಿ ಬಿಟ್ಟರೇನಪಾ ಅಂತ ನಾ ತಲಿಕೆಡಸಿಗೊಳ್ಳಿಕತ್ತೆ. ಅದರಾಗ ಇತ್ತೀಚಿಗೆ ಫೇಸಬುಕ್ಕ adminದವರ ಯಾರದರ ಬಗ್ಗೆ RIP ( rest in peace) ಅಂತ ಬರದಿದ್ದ ಗೊತ್ತಾತ ಅಂದರ ಸಾಕ ಅವರ ಫೇಸಬುಕ್ಕ ಅಕೌಂಟ ಡಿಲಿಟ್ ಮಾಡ್ತಾರ ಅಂತ ಕೇಳಿದ್ದೆ, ಇಲ್ಲಾಂದರ ಪಾಪ ಆ ಮನಷ್ಯಾ ಅತ್ತಲಾಗ ಹೋಗಿ ಬಿಟ್ಟರತಾನ, ಇತ್ತಲಾಗ ಫೇಸಬುಕ್ಕಿನಾಗಿನ ಮಂದಿಗೆ ಗೊತ್ತ ಇರಂಗಿಲ್ಲಾ, ಅವರ ಸುಮ್ಮನ ಅವಂಗ ಏನೇನರ ಹುಚ್ಚುಚಾಕಾರ tag ಮಾಡ್ಕೊತ ಕೂಡತಾರ. ಅಲ್ಲಾ, ಹಿಂಗಾದರ ಆ ಮ್ಯಾಲೆ ಹೋದವರ ಆತ್ಮಕ್ಕರ ಶಾಂತಿ ಹೆಂಗ ಸಿಗಬೇಕ ಹೇಳ್ರಿ, ಹಂತಾವರ ಮುಂದ ಫೇಸಬುಕ್ಕಿನಾಗ spam ಆಗ್ತಾರಂತ.
ಆತ ಹಂಗರ ನಾ ಒಂದ ಇವನ ಹೆಸರಿಗೆ ಛಂದಾಗಿ RIP ಮೆಸೆಜ ಹಾಕಿ ನಾಲ್ಕ ಮಂದಿಗೆ ತಿಳಿಸಿದರಾತು ಅಂತ ಡಿಸೈಡ ಮಾಡಿ ಇನ್ನೊಂದ ಸರತೆ ಲಾಸ್ಟ ಅವಂಗ ಫೋನ ಮಾಡಿದರಾತು ಅಂತ ಫೋನ ಮಾಡಿದೆ. ಒಂದ ನಾಲ್ಕ ರಿಂಗಿಗೆ ಅವರಕ್ಕ ಫೋನ ಎತ್ತಿದ್ಲು. ನಾ ನಮ್ಮ ದೋಸ್ತನ ಬಗ್ಗೆ ಕೇಳಲೊ ಬ್ಯಾಡೊ ಅನ್ಕೋತ ಕೇಳಿದೆ, ನನ್ನ ಮಾತ ಕೇಳಿ ಅವರಕ್ಕ
“ಅಯ್ಯ, ನನ್ನ ಹಣೇಬಾರ, ಇಂವಾ ಏನ ಸಾಯೋವನ, ಎಲ್ಲರ ಯಾರನರ ಕೊಲ್ಲೊಂವಾ. ನೀವು ಫೇಸಬುಕ್ಕ ದೋಸ್ತರ ಭಾಳ ಶಾಣ್ಯಾರ ಇದ್ದೀರಿ ತೊಗೊ. ಅವಂಗೇನ ಧಾಡಿನೂ ಆಗಿಲ್ಲಾ. ಆ ಸುಡಗಾಡ ಫೇಸಬುಕ್ಕ ಅಕೌಂಟ ಅವನ fiance’ ಹೇಳಿದ್ಲು ಅಂತ ಬಂದ ಮಾಡ್ಯಾನ ಇಷ್ಟ” ಅಂತ ನಂಗ ಜೋರ ಮಾಡಿ ಫೋನ ಇಟ್ಟಳು.
ಹಕ್ಕ…ನಾ ಇಂವಾ I QUIT ಅಂತ ಬರದಿದ್ದನ್ನ ಜೀವನಾ ಬಿಡಲಿಕತ್ತಾನ ಅಂತ ತಿಳ್ಕೊಂಡಿದ್ದೆ ಆದರ ಇಂವಾ ಫೇಸಬುಕ್ಕ ಬಿಡಲಿಕತ್ತಾನ ಅಂತ ನನಗ ಅನಿಸಿದ್ದೇಲಾ, ಅಲ್ಲಾ ಹಂಗ ಅವಂದ ಮದುವಿ ಫಿಕ್ಸ್ ಆಗೇದ ಅಂದರ ಜೀವನಾನು ಬಿಟ್ಟಂಗ ಆ ಮಾತ ಬ್ಯಾರೆ.
ಅಲ್ಲಾ, ಹಂಗ ಇವತ್ತ ಜೀವನಾ ಬಿಡೊದ ಭಾಳ ಸರಳ ಆದರ ಫೇಸಬುಕ್ಕ ಬಿಡಲಿಕ್ಕೆ ಸಾಧ್ಯ ಇಲ್ಲಾ, ಹಂತಾವ ಯಾಕ ಫೇಸಬುಕ್ಕ ಬಿಟ್ಟಾ ಅನ್ನೋದ ತಿಳಿಲಿಲ್ಲಾ. ಅದರಾಗ ಅಂವಾ ಫೇಸಬುಕ್ಕಿನಾಗ ಎಷ್ಟ ಫೇಮಸ ಇದ್ದಾ ಏನತಾನ, ಅಂವಾ ಏನ ಸುಡಗಾಡ ಬರದರು ಒಂದ ೫೦-೬೦ಲೈಕ ಬರೋವು, ಮಂದಿ ಅವನ ಫಾಲೊವರ್ಸ್ ನೋಡಿ ಹೊಟ್ಟಿಕಿಚ್ಚ ಪಡಬೇಕ ಹಂತಾ ಅಕೌಂಟ ಇತ್ತ ಯಾಕ ಹಿಂಗ fiance’ ಮಾತ ಕೇಳಿ ಮಾಡಿದ್ನೊ ಗೊತ್ತಿಲ್ಲಾ.
ಇನ್ನ ಅಂವಾ ಫೇಸಬುಕ್ಕಿನಾಗ ಇಲ್ಲಾಂದರ ನನ್ನ ಪಾಲಿಗೆ ಅಂವಾ ಹಂಗ ಜೀವಂತ ಇದ್ದರು ಸತ್ತಂಗ, ಯಾಕಂದರ ನಂದು ಅವಂದು ಏನ ಸಂಬಂಧ ಇದ್ದರು ಫೇಸಬುಕ್ಕಿನಾಗ ಇಷ್ಟ. ನಾ ಕಡಿಕೆ ಒಂದ ಸರತೆ ಅವನ ಫೇಸಬುಕ್ಕ್ ಅಕೌಂಟಿಗೆ ಎರಡ ನಿಮಿಷ ಮೌನ ಆಚರಿಸಿ ಫೇಸಬುಕ್ಕ್ logout ಮಾಡಿದೆ. ಹಂಗ ಅಂವಾ ಬಿಟ್ಟಾ ಅಂತ ನಮಗೂ ಫೇಸಬುಕ್ಕ ಬಿಡಲಿಕ್ಕೆ ಆಗ್ತದಾ? ಇಲ್ಲಾ…
ಅದ ಹೆಂಗ ಸಾಧ್ಯ ಒಬ್ಬರ ಸತ್ತರಂತ ಉಳದವರು ಸಾಯಿಲಿಕ್ಕೆ ಆಗ್ತದಾ? ಇಲ್ಲಾ.
ಮರದಿವಸ ಮುಂಜಾನೆ ಎದ್ದ ಕ್ಯಾಮಾರಿಲೆ ಫೇಸಬುಕ್ಕ ಒಪನ್ ಮಾಡೋದ ತಡಾ ಈ ಮಗಾ ಮತ್ತ ಹಾಜರ.
ನಂಗ ಅಂವಾ ಎಲ್ಲೆ ಫೇಸಬುಕ್ಕ ಸಂಬಂಧ engagement break ಮಾಡ್ಕೊಂಡನೋ ಇಲ್ಲಾ ಅವನ fiance’ನ ಫೇಸಬುಕ್ಕಿನಾಗ ಬಂದ್ಲೊ ಗೊತ್ತಾಗಲಿಲ್ಲಾ. ಆದರ ನಾ ಅದನ್ನ ತಲಿಗೆಡಸಿಕೊಳ್ಳಲಾರದ welcome back ಅಂತ comment ಮಾಡಿ ಸಂಡಾಸಕ್ಕ ಹೋದೆ. ಮನಸ್ಸ ಅಗದಿ ಹಗರ ಆತ. ಅಂವಾ ಫೇಸಬುಕ್ಕಿಗೆ ವಾಪಸ ಬಂದಿದ್ದಕ್ಕ ಮತ್ತ.
ನಾ ಹೇಳಿದ್ದಿಲ್ಲಾ ಹಂಗ ಫೇಸಬುಕ್ಕ್ ಬಿಡೋದ ಅಷ್ಟ ಸರಳ ಇಲ್ಲಾ ಅಂತ. ಜೀವನ ಬಿಡಬೇಕಾರ ವಿಚಾರ ಮಾಡದಿದ್ರು, ಫೇಸಬುಕ್ಕ ಬಿಡಬೇಕಾರ ವಿಚಾರ ಮಾಡಬೇಕರಿ, ಯಾಕಂದರ ಈ ಫೇಸಬುಕ್ಕ ಇವತ್ತ ಜೀವನ ಆಗೇದ.
ಇನ್ನೊಂದ ವಿಷಯ ಹೇಳೋದ ಮರತೆ ಹಂಗ ಯಾರಿಗರ ಖರೇನ ಜೀವನಾ ಮತ್ತ ಫೇಸಬುಕ್ಕ ಎರಡು ಬ್ಯಾಸರ ಆಗಿದ್ದರ ಫೇಸಬುಕ್ಕಿ ಬಿಡರಿ, ಜೀವನಾ ಅಲ್ಲಾ. ಬರೋ ಮೇ ೩೧ quit facebook day ಅದ, ಫೇಸಬುಕ್ಕ ಖರೇನ ಅಷ್ಟ ಬ್ಯಾಸರ ಆಗಿದ್ದರ account delete ಮಾಡಿ ಒಗಿರಿ.
ಇನ್ನ ಜೀವನ ಇಷ್ಟ ಬ್ಯಾಸರಾಗಿ ಫೇಸಬುಕ್ಕ addiction ಇತ್ತಂದರ ಏನ ಪ್ರಾಬ್ಲೆಮ್ ಇಲ್ಲಾ. ಯಾಕಂದರ ನೀವು at least ಆ ಸುಡಗಾಡ ಫೇಸಬುಕ್ಕ ಸಂಬಂಧ ಆದರು ಜೀವಾ ಬಿಡಂಗಿಲ್ಲಾ ಅನ್ನೋ ಗ್ಯಾರಂಟೀ ನಂಗ ಅದ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ