ನನಗ ಚಸ್ಮಾ(ಕನ್ನಡಕ) ಬಂದ ಇಪ್ಪತ್ತ ವರ್ಷ ಆಗಲಿಕ್ಕೆ ಬಂತ. ನಾ ಕೆ.ಇ.ಸಿ ಇಂಟರ್ವಿವಗೆ ಹೋದಾಗ ಡಾಕ್ಟರ ಚೆಕ್ ಮಾಡಿ ಹೇಳಿದ್ದರು ’ತಮ್ಮಾ, ನಿಂದ ದೂರ ದೃಷ್ಟಿ ಸರಿ ಇಲ್ಲಾ’ ಅಂತ. ಹಂಗ ನಂಗ ಹತ್ತರಿಂದ ಎಲ್ಲಾ ಕರೆಕ್ಟ ಕಂಡರೂ ದೂರಿಂದ ಕರೆಕ್ಟ ಕಾಣ್ತಿದ್ದಿಲ್ಲಾ. ಬಸ್ಸಿನ ಬೋರ್ಡ ಓದಲಿಕ್ಕೆ ತ್ರಾಸ ಆಗ್ತಿತ್ತ. ಬ್ರಾಡ ವೇ ಒಳಗ ಯಾವದರ ಹಳೇ ಕ್ಲಾಸಮೇಟ್ ಭೇಟ್ಟಿ ಆದರ ಅಕಿ ಹತ್ತರ ಬಂದ ಹಾಯೋತನಕ ಗೊತ್ತ ಆಗ್ತಿದ್ದಿಲ್ಲಾ, ಒಟ್ಟ ಒಂದ ಮಾತಿನಾಗ ಹೇಳಬೇಕಂದರ ದೂರಿಂದ ಯಾ ಹುಡಿಗ್ಯಾರು ಛಂದ ಕಾಣ್ತಿದ್ದಿಲ್ಲಾ.
ಇದ ಹಿಂಗ ಆದರ ಬಗಿಹರಿಯಂಗಿಲ್ಲ ನಡಿ ಅಂತ ಒಂದ ದಿವಸ ತಲಿ ಕೆಟ್ಟ ಕಣ್ಣಿನ ಡಾಕ್ಟರ ಕಡೆ ತೋರಿಸಿದರ ನಂಗ -೦.೫ ನಂಬರ ಅದ ಅಂತ ಗೊತ್ತಾತು. ಮುಂದ ನಾ ಒಂದ ಸ್ಟೈಲ ಆಗಿ ಚಸ್ಮಾ ಮಾಡಿಸಿ ಹಾಕ್ಕೊಂಡ ಅಡ್ಡಾಡಲಿಕತ್ತೆ. ಹಂಗ ನಂಗ ಎಲ್ಲೆ ಚಸ್ಮಾ ಬಂದರ ಕನ್ಯಾ ಸಿಗೊಂಗಿಲ್ಲೊ ಅಂತ ಹೆದರಕಿ ಇತ್ತ ಆದರ ಚಸ್ಮಾ ಬಂದರ ಜನಾ ಶಾಣ್ಯಾ ಹುಡಗ ಅಂತನೂ ಅಂತಾರ ಅಂತ ಚಸ್ಮಾ ಹಾಕ್ಕೊಂಡ ಅಡ್ಡಾಡಲಿಕತ್ತೆ.
ಮುಂದ ನಾ ಆ ಚಸ್ಮಾಕ್ಕ ಎಷ್ಟ ಅಡಿಕ್ಟ ಆದೇನಲಾ, ಕೆಲವೊಮ್ಮೆ ರಾತ್ರಿನು ಹಾಕ್ಕೊಂಡ ಮಲ್ಕೋತಿದ್ದೆ. ನಮ್ಮ ತಂಗಿ ಅದನ್ನ ನೋಡಿ ’ಏನ ರಾತ್ರಿ ಕನಸಿನಾಗ ಶ್ರೀದೇವಿ ಬರ್ತಾಳೇನ ಚಸ್ಮಾ ಹಾಕ್ಕೊಂಡ ಮಲ್ಕೋತಿಯಲಾ ?’ ಅಂತ ಚಾಷ್ಟಿ ಮಾಡತಿದ್ದಳು. ಇನ್ನ ಹಿಂಗ ಕಾಯಮ್ ಹಾಕೋಳದ ಖರೆ ಅಂದರ ಒಂದ ಸ್ಪೇರ್ ಇರಲಿ ಅಂತ ಮತ್ತೊಂದ ಚಸ್ಮಾ ಮಾಡಿಸಿದೆ, ಕಿಸ್ದಾಗ ಸ್ವಂತ ರೊಕ್ಕ ಆಡತಿತ್ತ ನಮ್ಮಪ್ಪಂದ ಏನ ಗಂಟ ಹೋಗೊದ ಅಂತ ಒಂದ ಆಕೇಸನಲ್ ಇನ್ನೊಂದ ರೆಗ್ಯುಲರ್ ಅಂತ ಎರೆಡೆರಡ ಇಟಗೊಂಡೆ. ಮುಂದ ಒಂದ ಎರಡ ವರ್ಷಕ್ಕ ಕನ್ಯಾ ಫಿಕ್ಸ್ ಆತ. ಹಂಗ ನಾ ಚಸ್ಮಾ ಇದ್ದದ್ದಕ್ಕ ಎಲ್ಲೆ ಕನ್ಯಾ ರಿಜೆಕ್ಟ್ ಮಾಡ್ತಾಳೊ ಅಂತ ಅನ್ಕೊಂಡಿದ್ದೆ ಆದರ ನಮ್ಮ ದೋಸ್ತರೇಲ್ಲಾ ನಿನ್ನ ಮಾರಿಗೆ ದೃಷ್ಟಿ ಬಟ್ಟ ಇದ್ದಂಗ ಅದ ತೊಗೊ ಚಸ್ಮಾ ಅಂತ ಸಮಾಧಾನ ಮಾಡಿ ಕನ್ಯಾದ ಮುಂದ ಕುಡಸಿದ್ದರು.
ಮುಂದ ಕನ್ಯಾಗ ನಾ ಪಾಸ ಆಗಿ ಮದುವಿ ಹತ್ತರ ಬಂದಂಗ ನಾ ಮತ್ತೊಂದ ಥ್ರೀ ಪೀಸ್ ಚಸ್ಮಾ ಮಾಡಿಸಿದೆ. ಅಲ್ಲಾ ಹಂಗ ನಾನ ತೆಳ್ಳಗ ಥ್ರೀ ಪೀಸ್ ಚಸ್ಮಾದ್ದ ಫ್ರೇಮ್ ಇದ್ದಂಗ ಇದ್ದೆ ಆ ಮಾತ ಬ್ಯಾರೆ ಆದರೂ ಒಂದನೇ ಮದುವಿ ಅಂತ ಹುರಪಿನಾಗ ಮತ್ತೊಂದ ಚಸ್ಮಾ ತೊಗೊಂಡೆ.
ಮುಂದ ಮದುವಿ ಆದಮ್ಯಾಲೆ ಒಂದ ಹೆಂಡತಿ ಮೂರ ಚಸ್ಮಾ ಜೊತಿ ಸಂಸಾರ ನಡಿತ. ಹಿಂಗ ಒಂದ್ಯಾರಡ ವರ್ಷ ಹೋಗೊದರಾಗ ಬರೇ ಸಂಸಾರ ಇಷ್ಟ ಬೆಳಿಲಿಲ್ಲಾ ಅದರ ಜೊತಿ ಚಸ್ಮಾ ನಂಬರ ಸಹಿತ ಬೆಳಿತ. ಹಿಂಗಾಗಿ ಇದ್ದ ಮೂರು ಚಸ್ಮಾ ಸ್ಕ್ರ್ಯಾಪ ಮಾಡಿ ಹೊಸ ಚಸ್ಮಾ ಮಾಡಿಸಿದೆ. ಈಗಾಗಲೇ ಮೂರ ಮೂರ ಚಸ್ಮಾದ್ದ ಚಟಾ ಹತ್ತಿ ಬಿಟ್ಟಿತ್ತ ಹಿಂಗಾಗಿ ಒಂದ್ಯಾರಡ ಎಕ್ಸ್ಟ್ರಾ ಸ್ಟೆಪಣಿ ಇರಲಿ ಅಂತ ಒಂದ ಫೈಬರದ್ದ ಇನ್ನೊಂದ ಥ್ರೀ ಪೀಸ್ ಆಕೇಜನಲ್ ಮಾಡಿಸಿದೆ. ಹಂಗ ಸಂಸಾರ ಶುರು ಆದ ಮ್ಯಾಲೆ ನನ್ನ ಮತ್ತ ನನ್ನ ಹೆಂಡತಿ ನಡಕ ರಾತ್ರಿ ಮಲ್ಕೊಂಡಾಗ ಸಿಕ್ಕೊಂಡ ಒಂದ್ಯಾರಡ ಚಸ್ಮಾ ಅಕಾಲಿಕ ನಿಧನ ಹೊಂದಿದಾಗ ಒಂದಿಷ್ಟ ಹೊಸಾವು ಮಾಡಸಿದ್ದ ಬ್ಯಾರೆ ಮತ್ತ.
ನನ್ನ ಬುಡಕ ಚಸ್ಮಾ ಸಿಕ್ಕರ ಬರೇ ಗ್ಲಾಸ್ ಒಡಿತಿದ್ವು ಆದರ ನನ್ನ ಹೆಂಡತಿ ಬುಡಕ ಸಿಕ್ಕರ ಮೆಟಲ್ ಫೇಮ್ ಸಹಿತ ಬೆಂಡ್ ಆಗಿ ಚಸ್ಮಾ ಅನ್ನೋದ ಹೇರಪಿನ್ ಆಗಿರ್ತಿತ್ತ. ಹಂಗ ಆದೋಗೊಮ್ಮೆ ಅಕಿ ’ರ್ರಿ, ಮಲ್ಕೊಬೇಕಾರ ಕಳದ ಮಲ್ಕೋರಿ’ ಅಂತ ಬೈಯೋಕಿ. ಅಲ್ಲಾ ತಪ್ಪ ನಂದ ಬಿಡ್ರಿ, ನಾ ರಾತ್ರಿನೂ ಹೆಂಡತಿ ಛಂದ ಕಾಣಲಿ ಅಂತ ಚಸ್ಮಾ ಹಾಕ್ಕೊಂಡ ಮಲ್ಕೋಳೊದ ನಂದ ತಪ್ಪ.
ಮೊನ್ನೆ ಮೂರ ವರ್ಷದ ಹಿಂದ ಯಾಕೊ ಕಣ್ಣ ಒಂಥರಾ ಆಗಲಿಕತ್ವು, ಹಂಗ ನಾ ಕಣ್ಣ ತೋರಸಲಾರದ ಎಂಟ ವರ್ಷ ಆಗಲಿಕ್ಕೆ ಬಂದಿತ್ತು ಹಿಂಗಾಗಿ ಒಮ್ಮೆ ಚೆಕ್ ಮಾಡಿಸಿದರ ನಂಬರ ಮತ್ತ ಜಾಸ್ತಿ ಆಗಿತ್ತ. ತೊಗೊ ಮತ್ತ ಮೂರು ಚಸ್ಮಾ ಬದಲಾಯಿಸಿದೆ. ಹಂಗ ಹೆಂಡ್ತಿ ’ನಿಮಗ ರೊಕ್ಕ ಜಾಸ್ತಿ ಆಗೇದ, ಮೂರ ಮೂರ ಯಾಕ ಮಾಡಸ್ತಿರಿ’ ಅಂದರು ನಾ ಏನ ಕೇಳಲಿಲ್ಲಾ. ಅದರಾಗ ಈ ಸರತೆ ಮೂರ ಅಡ್ನಾಡಿ ಆಗ್ತದ ಅಂತ ಒಂದ ’ನಂಬರಿನ ಗಾಗಲ್’ ಬ್ಯಾರೆ ಮಾಡಸಿದೆ. ಒಟ್ಟ ನಾಲ್ಕ ಚಸ್ಮಾ ಇಟಗೊಂಡ ಸಂಸಾರ ನಡಸಿದ್ದೆ.
ಈಗ ಒಂದ ತಿಂಗಳದಿಂದ ಯಾಕೊ ಒಮ್ಮಿಂದೊಮ್ಮಿಲೆ ನಾ ಓದಬೇಕಾರ ಸರಿ ಕಾಣಲಾರದಂಗ ಆತ, ಹಂಗ ಚಸ್ಮಾ ತಗದರ ಕರೆಕ್ಟ ಕಾಣಲಿಕತ್ತ. ನಾ ’ಏ ನಲವತ್ತ ದಾಟಿದ ಮ್ಯಾಲೆ ಕಣ್ಣ ಚಿಗರಿದ್ವು ಕಾಣ್ತದ’ ಅಂತ ಖುಶ್ ಆಗಿದ್ದೆ ಆದರ ಬರಬರತ ತಲಿ ದಿಮ್ಮ್ ಅನ್ನಲಿಕತ್ತ. ಇದೇನೋ ಲಫಡಾ ಆಗೇದ ಅಂತ ಒಂದ ವಾರದ ಹಿಂದ ಮತ್ತ ಕಣ್ಣಿನ ಡಾಕ್ಟರ ಕಡೆ ಹೋದರ ’ನಿಮಗ ನಲವತ್ತ ದಾಟತ, ಈಗ ರೀಡಿಂಗ್ ಗ್ಲಾಸ್ ಬಂದದ…ಬಟ್ ಆಲರೆಡಿ ಲಾಂಗ್ ಡಿಸ್ಟನ್ಸ ವಿಜನ್ ಪ್ರಾಬ್ಲೇಮ್ ಬ್ಯಾರೆ ಅದ, ಹಿಂಗಾಗಿ ನೀವು ಈಗ ಪ್ರೋಗ್ರೆಸ್ಸಿವ್ ಗ್ಲಾಸ್ ತೊಗೊಬೇಕು’ ಅಂತ ಹೊಸಾ ನಂಬರ ಬರದ ಕೊಟ್ಟರು. ಏನ್ಮಾಡ್ತೀರಿ ಕಿಮ್ಮತ್ತಿನ್ವು ಮನ್ಯಾಗ ನಾಲ್ಕ ಚಸ್ಮಾ ಅವ ಈಗ ಮತ್ತ ಹೊಸಾ ನಂಬರ.
ನನ್ನ ಹೆಂಡತಿಗೆ ಈ ಸುದ್ದಿ ಗೊತ್ತಾತ ನೋಡ್ರಿ ಅಕಿ ತಲಿಕೆಟ್ಟ ’ಈ ಸರತೆ ಏನರ ಮೂರ ನಾಲ್ಕ ಚಸ್ಮಾ ಮಾಡಿಸಿದರ ನೋಡ್ರಿ’ ಅಂತ ಬೈದ ನಿನ್ನೆ ಒಂದs ಚಸ್ಮಾ ಮಾಡಿಸಿಗೊಂಡ ಬಂದ್ಲು. ಅದರಾಗ ನಾ ಪ್ರತಿ ಸರತೆ ಚಸ್ಮಾ ನಂಬರ ಚೇಂಜ್ ಆದಾಗೊಮ್ಮೆ ಹೊಸಾ ಫ್ರೇಮ ತೊಗೊಳೊಂವಾ, ಹಿಂಗಾಗಿ ಈಗ ಮತ್ತೊಂದ ಹೊಸಾ ಫ್ರೇಮ್ ಬಂತ
ಈಗ ಮನಿ ಒಳಗ ಏನಿಲ್ಲಾ ಅಂದರು ಒಂದ ೮-೧೦ ಚಸ್ಮಾ ಅವ, ಅವೇಲ್ಲಾ ಇನ್ಮುಂದ ಕಣ್ಮರೆ ಆಗ್ತಾವ. ಎನ್ಮಾಡ್ತೀರಿ? ಹಳೆ ಚಸ್ಮಾ ಸೆಕೆಂಡ ಹ್ಯಾಂಡ ಯಾರರ ತೊಗೊತಾರ ಏನ ಕೇಳ್ರಿ ಅಂತ ನನ್ನ ಹೆಂಡತಿ ಹೇಳ್ಯಾಳ, ಯಾರಿಗರ ಬೇಕಾರ ಹೇಳ್ರಿ..ಎಲ್ಲಾ ದೂರ ದೃಷ್ಟಿ ಇದ್ದದ್ವ ಮತ್ತ. ಹಂಗ ಗ್ಲಾಸ್ ನಂಬರ ಸೆಟ್ ಆಗಲಿಲ್ಲಾ ಅಂದರೂ ಫ್ರೇಮ್ ತೊಗೊರಿ..ಅಲ್ಲಾ, ನೋಡಿ ಕೊಡ್ರಿ, ಅಕೇನ ಇಷ್ಟ ಕೊಡ ಅಂತ ಗಂಟ ಬಿಳೋಕಿ ಅಲ್ಲಾ
ಅನ್ನಂಗ ಇನ್ನೊಂದ ಹೇಳೋದ ಮರತೆ ನಾ ಚಸ್ಮಾಕ್ಕ ಬಡದಷ್ಟ ರೊಕ್ಕಾ ಫ್ಯಾಮಿಲಿ ಪ್ಲ್ಯಾನಿಂಗ ಮಾಡಲಿಕ್ಕೂ ಬಡದಿಲ್ಲಾ, ಆದರೂ ಮಕ್ಕಳ ಮಾತ್ರ ಇವತ್ತಿಗೂ ಬರೇ ಎರಡ ಅವ. ಆದರ ಈ ಸುಡಗಾಡ ಚಸ್ಮಾ ಹನ್ನೇರಡ ಆದ್ವು.