ವಾಟ್ಸಪ್ ಪಂಚಾಂಗ್…………..

ಈ ಸುಡಗಡ ವಾಟ್ಸಪ್ ಒಂದ ಯಾರ ಕಂಡ ಹಿಡದರೋ ಏನೋ ಇದರ ಸಂಬಂಧ ಜೀವನ ಸಾಕ ಸಾಕಾಗಿ ಹೋಗೆದ. ಅದರಾಗ ಅರ್ಧಾ ಫೇಸಬುಕನಿಂದ ಹಳ್ಳಾ ಹಿಡದಿದ್ವಿ ಇನ್ನ ಅರ್ಧಾ ಈ ವಾಟ್ಸಪ್ ನಿಂದ ಹಳ್ಳಾ ಹಿಡದ ಬಿಟ್ಟೇವಿ. ಇನ್ನೊಂದ ಮಜಾ ಅಂದರ ವಾಟ್ಸಪ್ ನೀವ ಕಂಪನಿ ಒಳಗ ಉಪಯೋಗ ಮಾಡಬಹುದು. ಅಲ್ಲಾ, ಉಪಯೋಗ ಮಾಡಬಹುದು ಏನ ಕಂಪನಿ ಒಳಗ ಅದನ್ನ ಕಂಪಲ್ಸರಿ ಮಾಡಿ ಬಿಟ್ಟಾರ, ಯಾಕಂದರ ಅರ್ಧಾ ಕಂಪನಿ ಕೆಲಸ ಇವತ್ತ ವಾಟ್ಸಪ್ ನಾಗ ನಡಿತದ. ಹಿಂಗಾಗಿ ನನ್ನ ಕಡೆ ಸ್ಮಾರ್ಟ ಫೋನ ಇಲ್ಲಾ ಅಂತ ನಾ ಇಷ್ಟ ದಿವಸ ಈ ವಾಟ್ಸಪ್ ನಿಂದ ದೂರ ಇದ್ದೆ ಆದರ ಕಂಪನಿಯವರ ತಮ್ಮ ರೊಕ್ಕದಲೆ ನಂಗ ಒಂದ ಸ್ಮಾರ್ಟ ಫೋನ ಕೊಡಸಿ ವಾಟ್ಸಪ್ ಹಾಕಸಿಸಿ ಕೆಲಸಾ ತೊಗೊಳಿ ಕತ್ತಾರ. ಏನ್ಮಾಡ್ತೀರಿ?
ಅದರಾಗ ಈ ವಾಟ್ಸಪ್ ಗ್ರುಪ್ ಅಂತ ಮಾಡಿ ಮಾರ್ಕೆಟಿಂಗ್, ಪ್ರಡಕ್ಶನ್, ಪರ್ಚೇಸ್ ಎಲ್ಲಾ ಡಿಪಾರ್ಟಮೆಂಟಗೆ ಒಂದೊಂದ ಗ್ರುಪ್ ಮಾಡಿ ಮ್ಯಾಲೆ ಟಾಪ್ ಮ್ಯಾನೆಜಮೆಂಟ್ ಅಂತ ಮತ್ತೊಂದ ಗ್ರುಪ್ ಮಾಡಿ ನಮ್ಮ ಜೀವಾ ತಿನ್ನಲಿಕತ್ತಾರ.
ಹಂಗ ಒಮ್ಮೆ ವಾಟ್ಸಪ್ ಅದ ಅಂದ ಮ್ಯಾಲೆ ದೋಸ್ತರ ಸುಮ್ಮನ ಕೂಡ್ತಾರ? ಅವರ ನಮಗ ಕೇಳಂಗಿಲ್ಲಾ ಹೇಳಂಗಿಲ್ಲಾ ನೂರಾ ಎಂಟ ಗ್ರುಪ್ ಒಳಗ ಹಾಕಿ ಉಸಿರಾಡಸಲಿಕ್ಕೂ ಟೈಮ ಸಿಗಲಾರದಂಗ ಮಾಡಿ ಬಿಟ್ಟಾರ. ಮ್ಯಾಲೆ ರಿಲೇಟಿವ್ಸ್ ಗ್ರುಪ್ ಬ್ಯಾರೆ, ಅದ ಹೆಂಡ್ತಿ ಕಡೆ ಸಂಬಂಧದ್ದ ಒಂದ ಗ್ರುಪ್ ನಮ್ಮ ಕಡೆದ ಒಂದ ಗ್ರುಪ್, ಮತ್ತ ಅದರಾಗ ಬರೇ ನಮ್ಮ ಗೋತ್ರದವರದ ಒಂದ ಗ್ರುಪ್, ನಮ್ಮ ಮಠದ್ದ ಒಂದ ಗ್ರುಪ್, ಓಣ್ಯಾಗಿನ ಸಂಘದ್ದ ಒಂದ ಗ್ರುಪ್. ಇವತ್ತ ಒಂದಿಷ್ಟ ಮಂದಿಗಂತೂ ಲೈಫ ಅಂದರ ವಾಟ್ಸಪ್, ಅದಿಲ್ಲಾ ಅಂದರ ನಡೆಯಂಗೇಲಾ. ಇಪ್ಪತ್ತನಾಲ್ಕ ತಾಸು ಅದರಾಗ ಇರ್ತಾರ. ಅದ ಏನೇನ ಕಳಸ್ತಾರ ಇದರಾಗ ಅಂತೇನಿ, ಯಾವದ ಇಂಪಾರ್ಟೆಂಟ್ ಯಾವದಲ್ಲಾ ಅಂತ ಒಬ್ಬರೂ ಅರ್ಥ ಮಾಡ್ಕೋಳಂಗಿಲ್ಲಾ. ಅದರಾಗ ಒಂದಿಷ್ಟ ಅಂತ ಒಬ್ಬರ ಕಳಸಿದ್ದನ್ನ ಮತ್ತೊಬ್ಬರ ಕಳಸ್ತಿರ್ತಾರ.
ಹಂತಾದರಾಗ ನಮ್ಮ ದೋಸ್ತ ಒಬ್ಬೊಂವ ಮೊನ್ನೆ ಯುಗಾದಿ ಆದಾಗಿಂದ ದಿವಸಾ ಮುಂಜಾನೆ ’ಇಂದಿನ ಪಂಚಾಂಗ’ ಅಂತ ಅವತ್ತಿಂದ ತಿಥಿ, ರಾಹು ಕಾಲ, ಗೂಳಿ ಕಾಲ, ಎಲ್ಲಾ ವಾಟ್ಸಪನಾಗ ಕಳಸಲಿಕತ್ತಾನ. ಅಗದಿ ಛಂದಾಗಿ
’ನಮಸ್ಕಾರ, ಶುಭೋದಯ, ಇಂದು ಸೋಮವಾರ, ಅಗಸ್ಟ ೧೭,೨೦೧೫, ಶ್ರೀ ಮನ್ಮಥನಾಮ ಸಂವತ್ಸರ, ದಕ್ಷಿಣಾಯಣಾ, ವರ್ಷ ಋತು,ಶ್ರಾವಣ ಮಾಸೆ, ಶುಕ್ಲಪಕ್ಷೆ, ತದಿಗೆ ತಿಥಿ, ಉತ್ತರಾ ನಕ್ಷತ್ರಾ, ರಾಹುಕಾಲ ೭.೩೦ ಇಂದ ೯ರ ವರೆಗೆ’ಅಂತ ಬರದ ಕಳಸ್ತಿದ್ದಾ. ಅವಂದ ವಾಟ್ಸಪ್ ಒಳಗ ಮೆಸೆಜ್ ಬಂತ ಅಂದರ ಸಾಕ ಅದ ನಮಗ ಗ್ಯಾರಂಟೀ ರಾಹು ಕಾಲ ಇದ್ದಂಗ ಆ ಮಾತ ಬ್ಯಾರೆ.
ಅಲ್ಲಾ ಇಂವಾ ಯಾವಾಗಿಂದ ಇಷ್ಟ ಸುಸಂಸ್ಕೃತ ಆದಾ, ತಾ ನೋಡಿದರ ವಾರದಾಗ ಮೂರ ದಿವಸ ಪಬ್ ನಾಗ ಇರ್ತಾನ ಅಂತ ನಾ ವಿಚಾರ ಮಾಡಿ ಅವಂಗ ಕೇಳಿದರ ಅಂವಾ ಯಾರೋ ಕಳಸಿದ್ದನ್ನ ಹಿಂದ ಮುಂದ ನೋಡಲಾರದ ದಿವಸಾ ಫಾರ್ವರ್ಡ ಮಾಡ್ತಾನ ಅಂತ ಗೊತ್ತಾತ. ಅಲ್ಲಾ ಈ ಫಾರ್ವರ್ಡ್ ಮಾಡೋದು ಒಂದ ವಾಟ್ಸಪ್ ಒಳಗ ದೊಡ್ಡ ಚಟಾನ ಬಿಡ್ರಿ.
ಒಂದ ಸರತೆ ಅಂವಾ ತನ್ನ ರಿಲೇಟಿವ್ಸ್ ಗ್ರುಪಗೆ ಕಳಸೊ ಮೆಸೆಜ ತಪ್ಪಿ ನನಗ ಬಂದ ಬಿಡ್ತ. ಅದರಾಗ ಅಂವಾ ತನ್ನ ಕಸೀನನ್ ಮದ್ವಿ ಸೆಡ್ಯುಲ್ ಬರದ ಕಳಸಿದ್ದಾ.
ಗುರುವಾರ ಸಜ್ಜಿಗೆ ಮುಹೂರ್ತ್, ಶುಕ್ರವಾರ ದೇವರ ಊಟ, ಶನಿವಾರ ಸೋಡ ಮುಂಜವಿ, ಸೋಮವಾರ ಬೀಗರ ಊರಿಗೆ ಪ್ರಯಾಣ, ಮಂಗಳವಾರ ಮದುವಿ. ಬುಧವಾರ ರೆಸ್ಟ, ಗುರುವಾರ ರಿಸೆಪ್ಷನ್, ಶುಕ್ರವಾರ ಗೊಂದ್ಲ, ಶನಿವಾರ ಸತ್ಯನಾರಾಯಣ ಪೂಜಾ ಫಾಲೊವ್ಡ ಬೈ ಪ್ರಸ್ಥ…ರವಿವಾರ ಬೀಗರ ಮನಿ ಒಳಗ ಸತ್ಯನಾರಾಯಣ ಪೂಜಾ ಕಮ್ ರಿಸೆಪ್ಶನ್..ಹಿಂಗ ಒಂದ ಕಥಿನ ಬರದ ಕಳಸಿದ್ದಾ. ನನಗ ತಲಿಕೆಟ್ಟ ಸಂಬಂಧ ಇಲ್ಲಾ ಸಾಟಿ ಇಲ್ಲಾ ನನಗ ಯಾಕ ಕಳಸ್ಯಾನ ಅಂತ ಅದಕ್ಕ ನಾ ನಂದೊಂದ ಕಥಿ ಸೇರಿಸಿ ಬರದ ಕಳಸಿದೆ. ನಾ ಅವನ ಮೆಸೆಜ್ ಮುಂದ
’ಶನಿವಾರ ಸತ್ಯನಾರಾಯಣ ಪೂಜಾ ಫಾಲೊವ್ಡ ಬೈ ಪ್ರಸ್ಥ…ಮುಂದ ಎರಡುವರಿ ತಿಂಗಳ ಬಿಟ್ಟ ಕಳ್ಳ ಕುಬಸ… ಐದರಾಗ ತವರಮನಿ ಕುಬಸಾ…ಎಂಟರಾಗ ಅತ್ತಿಮನಿ ಕುಬಸಾ…ನಡಬರಕ ಮೂರ ತಿಂಗಳ ಸಾರ್ವಜನಿಕ ಕುಬಸ..ಎಂಟರಾಗ ಹಡಿಲಿಕ್ಕೆ ತವರ ಮನಿಗೆ ಒಂಬತ್ತರಾಗ ಡಿಲೇವರಿ..ಕೂಸಿಗೆ ಒಂದ ತಿಂಗಳಾದ ಮ್ಯಾಲೆ ನಾಮಕರಣ ಹುಡಗಿ ತವರಮನಿ ಒಳಗ, ಐದರಾಗ ಹೆತ್ತಿಬಣಾ…..ಅಂತ ಬರದ ವಾಪಸ ಕಳಸಿ ಲಾಸ್ಟಿಗೆ please send this message to 11 people and you will get good luck by night ಅಂತ ಬರದಿದ್ದೆ.
ಮುಂದ ಒಂದ ತಾಸಿಗೆ ಆ ಮೆಸೆಜ್ ಮತ್ತ ನನಗ ಬಂತ.
ಆ ಮಗಾ ನಾ ಏನ ಬರದಿದ್ದೆ ಅನ್ನೋದನ್ನೂ ನೋಡಲಾರದ ಲಾಸ್ಟ ಲೈನ ಒಂದ ನೋಡಿ ಓದಿ ಭಡಾ ಭಡಾ ಆಡ್ಯಾ ಬರದಾನ ಅಂದರ ಇಂಪಾರ್ಟೆಂಟ್ ಮೆಸೆಜ್ ಇರ್ತದ ತೊಗೊ ಅಂತ ಹನ್ನೊಂದ ಮಂದಿಗೇನ ಹನ್ನೊಂದ ಗ್ರುಪಿಗೆ ಫಾರ್ವರ್ಡ್ ಮಾಡಿ ಬಿಟ್ಟಿದ್ದಾ. ಏನ್ಮಾಡ್ತೀರಿ ಹಿಂತಾವರಿಗೆ. ಯಾರ ಕಂಡ ಹಿಡದರೋ ಏನೊ ಈ ಸುಡಗಾಡ ವಾಟ್ಸಪ್ ಅಂತ ಖರೇನ ಒಮ್ಮೊಮ್ಮೆ ತಲಿ ಆ ಸುಡಗಾಡ ಮೊಬೈಲ್ ತೊಗೊಂಡ ಜಜ್ಜಕೊ ಬೇಕು ಅನಸ್ತದ.
ನಾವ ಇವತ್ತ technology ಹೆಸರಿಲೆ ನಮ್ಮ ಜೀವನ miserable ಮಾಡ್ಕೋಳಿಕತ್ತೇವಿ ಅಂತ ನನಗಂತೂ ಅನಸಲಿಕತ್ತದ. ನಿಮಗ ಹೆಂಗ ಅನಸ್ತದ ನೋಡ್ರಿ, ಹಂಗ ನೀವು ವಾಟ್ಸಪ್ ಹುಳಾನ ಇದ್ದರ ನನ್ನ ಆರ್ಟಿಕಲ್ ಒಂದ ಹತ್ತ ಮಂದಿಗೆ ಫಾರ್ವರ್ಡರ ಮಾಡ್ರಿ, ಹೋಗ್ಲಿ ಇದನ್ನರ ನಾಲ್ಕ ಮಂದಿ ಓದ್ಲಿ.
eom/-

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ