ಒಂದ ಎರಡ ತಿಂಗಳದಿಂದ ನನ್ನ ಹೆಂಡತಿ “ರ್ರಿ, ನಂದು ಒಂದ facebook ಅಕೌಂಟ ಒಪನ್ ಮಾಡಿಕೊಡ್ರಿ ಅಂತ ಗಂಟ ಬಿದ್ದಿದ್ದಳು. ಅದರಾಗ ಹೋದಲ್ಲೆ ಬಂದಲ್ಲೆ ಒಂದಿಷ್ಟ ಮಂದಿ ಅಕಿಗೆ ’ನಿಮ್ಮ ಮನೆಯವರ ಫೇಸಬುಕ್ಕಿನಾಗ ನಿಮ್ಮ ಬಗ್ಗೆ ಭಾರಿ ಬರಿತಾರ, ನಿವ್ಯಾಕ ಫೇಸಬುಕ್ಕಿನಾಗ ಇಲ್ಲಾ’ ಅಂತ ಕೇಳಿ-ಕೇಳಿ ಅಕಿ ತಲ್ಯಾಗೂ ಫೇಸಬುಕ್ಕ ತುಂಬಿ ಬಿಟ್ಟಾರ. ಇನ್ನ ಇಕಿ ಏನರ ಫೇಸಬುಕ್ಕಿನಾಗ ಬಂದರ ನಾ ಸತ್ತಂಗ.. ನಾ ಅಕಿ ಬಗ್ಗೆ ಭಿಡೆ ಬಿಟ್ಟ ಏನಬೇಕ ಅದನ್ನ ಬರಿಲಿಕ್ಕೆ ಆಗಂಗಿಲ್ಲಾ ಅಂತ ನಾ ಅಕಿನ್ನ ಫೇಸಬುಕ್ಕ್ ಹತ್ತರ ಕರಕೊಂಡ ಬಂದಿದ್ದಿಲ್ಲಾ. ಅದರಾಗ ಹಂಗ ಅಕಿಗೂ ಏನರ ಫೇಸಬುಕ್ ಚಟಾ ಹತ್ತಿ ಬಿಡ್ತಂದರ ಮುಗದ ಹೋತ, ಏನಿಲ್ಲದ ಮೊದ್ಲ ಮನ್ಯಾಗ ಮಾಡೋದ ಮೂರ ಕೆಲಸ ಇನ್ನ ಅವನ್ನು ಪಾಪ ನಮ್ಮವ್ವನ ಮಾಡಬೇಕಾಗ್ತದ ಅಂತ ಅಕಿನ್ನ ನಾ ಫೇಸಬುಕ್ಕಿನಿಂದ ದೂರ ಇಟ್ಟ ಬಿಟ್ಟಿದ್ದೆ.
ಆದರ ಮೊನ್ನೆ ಸಂಜಿ ಮುಂದ ಅಕಿ ಹಟಾ ಮಾಡಿ ನನ್ನ ಲ್ಯಾಪ ಹಿಡಕೊಂಡ ಫೇಸಬುಕ್ ಅಕೌಂಟ ಒಪನ್ ಮಾಡ್ಕೊಳಿಕ್ಕೆ ಹೋದ್ಲು. ಹಿಂಗ ಒಂದ ಐದ ನಿಮಿಷ ಬಿಟ್ಟ ಒಮ್ಮಿಂದೊಮ್ಮಿಲೆ
“ರ್ರಿ facebookನಾಗ gender ಯಾವದ select ಮಾಡಲಿ?” ಅಂತ ಒದರಿದ್ಲು. ನಾ
“ಯಾರ ಜೆಂಡರ್, ನಿಂದೊ ಫೇಸಬುಕ್ಕಿಂದೋ?” ಅಂತ ಕೇಳಿದೆ.
“ರ್ರಿ, ನಂದs ಜೆಂಡರ್, ಫೇಸಬುಕ್ಕಿಂದಲ್ಲಾ?” ಅಂದ್ಲು
ಏನ ಮಾಡ್ತೀರಿ, ತಂದ ಜೆಂಡರ್ ಯಾವದ ಗೊತ್ತಿಲ್ಲಾ, ಫೇಸಬುಕ್ಕಿನಾಗ ಅಕೌಂಟ ಒಪನ್ ಮಾಡಲಿಕ್ಕೆ ಹೊಂಟಾಳ, ಹಿಂತಾ ಜನರಲ್ ನಾಲೇಜ್ ಇದ್ದೋಕಿಗೆ ಆ ಸುಡಗಾಡ ಫೇಸಬುಕ್ಕ ಅಕೌಂಟರ ಯಾಕ ಬೇಕಲೇ ಅಂತ
“ಯಾಕ, ನಿನ್ನ ಜೆಂಡರ್ ನೀನ ಮರತೇನ, ಅದಕ್ಕ ಹೇಳೋದ ಮನ್ಯಾಗ ಗಂಡಾ ಅನ್ನೋ ಪ್ರಾಣಿಗೆ ಕಿಮ್ಮತ್ ಕೊಡದ ಹೆಂಡತಿ ತಂದ ದರ್ಬಾರ ನಡಸಿದರ ಮುಂದ ಅಕಿಗೆ ತಾ ಗಂಡನೋ ಹೆಂಡ್ತಿನೋ ಅನ್ನೊದು ಸಹಿತ ಮರಿತದ ಅಂತ” ಅಂತ ನಾ ಅಂದೆ. ಅಕಿಗೆ ಸಿಟ್ಟ ಬಂತ
“ರ್ರಿ, ಇಲ್ಲೆ ಎದ್ದ ಬರ್ರಿ, ಇದರಾಗ ಮೂರ-ಮೂರ ಜೆಂಡರ ಅವ ನೋಡ ಬರ್ರಿ” ಅಂತ ನಂಗ ಕರದ್ಲು. ನಾ ಇದೆಲ್ಲಿ ಮೂರನೇ ಜೆಂಡರ್ ಹುಟ್ಟಿಸಿದಳಲೇ ಇಕಿ ಅಂತ ಗಾಬರಿ ಆಗಿ ಎದ್ದ ಹೋದೆ.
ಅಲ್ಲೆ ಫೇಸಬುಕ್ಕಿನಾಗ basic information heading ಒಳಗ gender ಮುಂದ ಖರೇನ ಮೂರ ಜೆಂಡರ್ ಇದ್ವು, ಅರೆ ನಾ ಅಕೌಂಟ ಒಪನ್ ಮಾಡಬೇಕಾರ ಎರಡ ಇದ್ವಲಾ ಈ ಮೂರನೇ ಜಂಡರ್ ಯಾವುದು ಅಂತ ನೋಡಿದರ ಮೇಲ್, ಫಿಮೇಲ್ ಆದಮ್ಯಾಲೆ ’ಕಸ್ಟಮ್’ಅಂತ ಇತ್ತ. ಇದೇಲ್ಲಿ ಹೊಸಾ ಜೆಂಡರ ಕಂಡ ಹಿಡದರಪಾ ಫೇಸಬುಕ್ಕಿನವರು ಅಂತ ವಿಚಾರ ಮಾಡಲಿಕತ್ತೆ. ಇನ್ನ ಇಕಿಗೇನ ತಿಳಿಸಿ ಹೇಳಬೇಕು ಅಂತ
“ನೀ ಕಸ್ಟಮ್ ಜೆಂಡರ್ ಸೆಲೆಕ್ಟ ಮಾಡ್ಕೊ, ಹೆಂಗಿದ್ದರು ನೀ ಬೇಕಾದಾಗ ಗಂಡ ಆಗ್ತಿ ಬ್ಯಾಡಾದಾಗ ಹೆಂಡ್ತಿ ಆಗ್ತಿ, ನಿಮ್ಮಂತಾವರ ಸಂಬಂಧ ಹೊಸಾ ’ಕಸ್ಟಮ್’ ಜೆಂಡರ್ ಕಂಡ ಹಿಡದಾರ” ಅಂದೆ.
ಪಾಪ ಅಕಿ ಬಹುಶಃ ನಾ ಹೇಳೊದ ಖರೇ ಅಂತ ತಿಳ್ಕೊಂಡ ’ಕಸ್ಟಮ’ ಸೆಲೆಕ್ಟ ಮಾಡ್ಕೊಂಡರ ಮುಂದ ಆ ಜೆಂಡರ್ ಡಿಫೈನ ಮಾಡ್ಬೇಕಾತ. ಅಕಿಗೆ ಏನ ಟೈಪ್ ಮಾಡಬೇಕ ತಿಳಿಲಿಲ್ಲಾ, ನಾ ಏನರ ಟೈಪ ಮಾಡಲೆ ಅಂದಿದ್ದಕ್ಕ ಅಕಿ a ಅಂತ ಟೈಪ್ ಮಾಡಿದರ agender (not belongin to any gender ) ಅಂತ ಬಂತ, b ಅಂತ ಟೈಪ್ ಮಾಡಿದರ bigender (belonging to both male and female) ಅಂತ ಬಂತ. ನಾ ಅಕಿಗೆ “ನಿನ್ನ ಜೆಂಡರ್ ಬಗ್ಗೆ ಫೇಸಬುಕ್ಕಿಗೂ ಕನ್ಫ್ಯೂಸ ಅದ ನೋಡ” ಅಂದೆ. ಅಕಿ ಸಿಟ್ಟ ಬಂದ ಇದೇನ ಸುಡಗಾಡ ಫೇಸಬುಕ್ಕ, ಹೆಂತಾ ಅಸಂಯ್ಯ ಅಸಂಯ್ಯ ಜೆಂಡರ್ ಆಪ್ಶನ್ಸ್ ಎಲ್ಲಾ ಕೊಡತದ ಅಂತ ಲ್ಯಾಪ ಟಾಪ್ ಡಬ್ಬ ಹಾಕಿ ಒಳಗ ಹೋಗಿ ಬಿಟ್ಟಳು. ಯಪ್ಪಾ ಒಟ್ಟ ಅಕಿ ತಲ್ಯಾಗಿನ ಫೇಸಬುಕ್ಕ್ ಸದ್ಯೇಕಂತೂ ಹೋತಲಾ ಅಂತ ನಾ ಸಮಾಧಾನ ಮಾಡ್ಕೊಂಡೆ.
ಆದರ ನಾ ಆಮ್ಯಾಲೆ ಈ ಪೇಸಬುಕ್ಕಿನಾಗ ಹೊಸಾ-ಹೊಸಾ ಜೆಂಡರ್ ಯಾವಾಗಿಂದ ಬಂದ್ವು ಅಂತ ತಲಿ ಕೆಡಸಿಗೊಂಡ ನೋಡಿದರ ಗೊತ್ತಾತು ಈಗ ಎರಡ ದಿವಸದಿಂದ ಫೇಸಬುಕ್ಕಿನವರು ಗಂಡು-ಹೆಣ್ಣು ಬಿಟ್ಟ ಮತ್ತ ಐವತ್ತಾರ ಹೊಸಾ-ಹೊಸಾ ಜೆಂಡರ್ ಹುಡಕಿ ಹಾಕ್ಯಾರಂತ. ಹೆಂಗ ನಾವ ವಾರದಾಗ ಮೂರ ಸರತೆ ನಮ್ಮ ಟೈಮ ಲೈನ ಕವರ ಪೇಜ ಚೇಂಜ್ ಮಾಡ್ತೇವಿ ಹಂಗ ಯಾವಾಗ ಬೇಕ ಆವಾಗ ಜೆಂಡರ ಚೇಂಜ್ ಮಾಡಬಹುದು. ಏನ ಬರೇ ಒಂದ ಕ್ಲಿಕ್ ಮಾಡಿದರ ಸಾಕ ನಿಮ್ಮ ಜೆಂಡರ್ ಚೇಂಜ್ ಆಗಿ ಬಿಡ್ತದ, ಡಾಕ್ಟರ ಕಡೆ ಹೋಗಬೇಕಂತಿಲ್ಲಾ ಏನಿಲ್ಲಾ. ’ಮೇಲ್ ಟು ಫಿಮೇಲ್’ ಅಂತರ ಮಾಡ್ಕೋರಿ, ’ಫಿಮೇಲ್ ಟು ಮೇಲ’ ಅಂತರ ಮಾಡ್ಕೋಳ್ರಿ, ಇಲ್ಲಾ pangender ( all genders in one) ಅಂತರ ಮಾಡ್ಕೊಳ್ರಿ, ಯಾರ ಹೇಳೊರಿಲ್ಲಾ ಕೇಳೊರಿಲ್ಲಾ, ಅಲ್ಲಾ ನಮ್ಮ ಪ್ರೋಫೈಲ್, ನಮ್ಮ ಜೆಂಡರ್ ನಾವ ಏನರ ಮಾಡ್ಕೋತೇವಿ.
ಹಂಗ ಇಷ್ಟೊತ್ತನಕ ನಾ ಹೇಳಿದ್ದ ಖರೇನ ಮತ್ತ, ಬೇಕಾರ ನೀವು ನಿಮ್ಮ ಫೇಸಬುಕ್ಕ ಅಕೌಂಟಿಗೆ ಹೋಗಿ language option ಒಳಗ ಅಮೇರಿಕನ ಇಂಗ್ಲೀಷ ಇಟಗೊಂಡ ಅಮ್ಯಾಲೆ basic information ಒಳಗ ಹೋಗಿ ನಿಮಗ ಯಾವದ ಬೇಕ ಆ ಜೆಂಡರ ಚೇಂಜ ಮಾಡ್ಕೊಳ್ರಿ, ಒಮ್ಮೆ ಹಂಗ ಮಾಡ್ಕೋಬೇಕಾರ ನಿಮ್ಮ ಮನೆಯವರನ್ನ ಒಂದ ಮಾತ ಕೇಳ್ರಿ ಮತ್ತ ಹಿಂದಾಗಡೆ ಅವರ ತಪ್ಪ ತಿಳ್ಕೊಂಡ, ಅವರು ಮತ್ತ ತಮ್ಮ ಜೆಂಡರ ಚೇಂಜ್ ಮಾಡ್ಕೊಳೊಹಂಗ ಆಗ ಬಾರದು.
ಹಂಗ ಒಮ್ಮೆ ನೀವ ನಿಮ್ಮ ಜೆಂಡರ್ ಚೇಂಜ್ ಮಾಡ್ಕೊಂಡ ಕೂಡಲೇ ನಮಗೇಲ್ಲಾ ’he has changed his gender to ——, now he has become she’ ಅಂತ ನೋಟಿಫಿಕೇಶನ್ ಬಂದ ಬರತದ ಆವಾಗ ನಾವು ನಿಮ್ಮ ಹೊಸಾ ಜೆಂಡರ್ ಲೈಕ ಮಾಡ್ತೇವಿ, ನೀವೇನ ಕಾಳಜಿ ಮಾಡಬ್ಯಾಡರಿ ಮತ್ತ. ಅಲ್ಲಾ, ಹಂಗ ನಿಮಗೇನರ ಈ ಹೊಸಾ ಜೆಂಡರ್ ಬ್ಯಾಡಾ ಅನಸ್ತಂದರ ಮತ್ತ ಚೇಂಜ್ ಮಾಡರಿ, ೫೬ ಜೆಂಡರ್ ಅವ, ನೀವೇನ ತಲಿಕೆಡಸಿಗೊಳ್ಳಬ್ಯಾಡರಿ.
ಒಟ್ಟ ಒಂದ ಮಾತನಾಗ ಹೇಳ್ಬೇಕಂದರ ಫೇಸಬುಕ್ಕಿನವರ ಕೊಟ್ಟಷ್ಟ ಪರ್ಸನಲೈಜಡ್ ಸರ್ವೀಸ್ ಮನ್ಯಾಗ ಹೆಂಡ್ತಿನೂ ಕೊಡಂಗಿಲ್ಲ ಬಿಡ್ರಿ. ಹೌದಲ್ಲ ಮತ್ತ….??
ಚಂದ ಬರೀತೀರಿ… ಮುಂದೆ ಕೂತು ಮಾತಾಡಿದ ಹಾಗಿದೆ!