ಮೊನ್ನೆ ಒಂದ ಅನ್ನೌನ ನಂಬರನಿಂದ ವಾಟ್ಸಪ್ ಮೆಸೆಜ್ ಬಂತ, ನಾ ಪೇಪರಗಾನ ಬರಿಲಿಕ್ಕತ್ತಾಗಿಂದ ಹಿಂಗ ಮೆಸೆಜ್ ಬರ್ತಿರ್ತಾವ. ಎಲ್ಲಾನೂ ಓದ್ಕೋತಂತೂ ಕೂಡಲಿಕ್ಕಂತೂ ಆಗಂಗಿಲ್ಲಾ, ಆದರ ಯಾಕೋ ನಂಗ ಒಮ್ಮಿಕ್ಕಲೇ ಈ ಮೆಸೇಜ್ ನೋಡಿ ಶಾಕ್ ಆತ, ಆ ಮೆಸಜ್ ಏನಿತ್ತಪಾ ಅಂದರ
’ನಿಮಗೆ ಹೆಂಡ್ತಿ ಬಿಟ್ಟು ಬೇರೆ ಯಾರು ಇಲ್ವಾ dear?’ ಅಂತ ಅಗದಿ ಬೆಂಗಳೂರ ಭಾಷಾದಾಗ ಇತ್ತ.
ನಾ ಹಂಗ ಒಂದ ಸರತೆ ಸಿರಿಯಸ್ಸಾಗಿ ವಿಚಾರ ಮಾಡಿದೆ ’ನಂಗ ಹೆಂಡ್ತಿ ಬಿಟ್ಟರ ಅಕಿ ಜಾಗಾ ತುಂಬೋರ ಬ್ಯಾರೆ ಯಾರ ಇದ್ದಾರ’ಅಂತ, ಸಡನ್ ಆಗಿ ಯಾರೂ ನೆನಪಾಗಲಿಲ್ಲಾ. ಇನ್ನ ಆ ನಂಬರ ಕಂಟ್ಯಾಕ್ಟ ಲಿಸ್ಟನಾಗಿಂದಲ್ಲಾ, ಮ್ಯಾಲೆ ಡಿ.ಪಿ ನೋಡಿದ್ರ ಗುಲಾಬಿ ಹೂವಿನ ಚಿತ್ರ ಇತ್ತ. ಇನ್ನ ನಂಬರಗೆ, ಗುಲಾಬಿ ಹೂವಿಗೆ ಲಿಂಗ ಅಂತೂ ಇರಂಗಿಲ್ಲಾ, ಹಿಂಗಾಗಿ ಕಳಸಿದವರ ಗಂಡಸರೊ ಹೆಂಗಸರೋ ಅಂತ ಗೊತ್ತಾಗಲಿಲ್ಲಾ. ಟ್ರೂ ಕಾಲರ್ ಒಳಗ ಬೆಂಗಳೂರದ್ದ ಕಾಲ್ ಸೆಂಟರ್ ಅಂತ ಬ್ಯಾರೆ ತೋರಸ್ತ. ಕಡಿಕೆ ಗುಲಾಬಿ ಹೂವಿನ ಚಿತ್ರ ಡಿ.ಪಿ ಅದ ಅಂದರ ಇದ ಹುಡಗಿದ ಮೆಸೆಜ್ ಅಂತ ಡಿಸೈಡ ಮಾಡಿದೆ. ಆಮ್ಯಾಲೆ ಆ ನಂಬರಿಂದ ಮೊದ್ಲ ’ಬ್ಯಾಂಕಾಕ್’ ಆರ್ಟಿಕಲ್ ಬಂದ ದಿವಸ ’lovely dear..ಸಕತ್ತಾಗಿದೆ’ ಅಂತ ಬಂದಿತ್ತ…’The world is full of married ಕನ್ಯಾಗೋಳು’ ಅಂತ ಬರದಾಗ ’ತುಂಬಾ ಚೆನ್ನಾಗಿದೆ dear’ ಅಂತ ಮೆಸೆಜ್ ಬಂದಿತ್ತ, password ಬಗ್ಗೆ ಬರದಾಗ ’ha..ha..too good dear’ ಅಂತಿತ್ತ. ಹಿಂಗ ಇನ್ನ ಅಗದಿ ಹಾಟ್ ಟಾಪಿಕ್ ಇದ್ದಾಗ dear ಅಂತ ಮೆಸೆಜ್ ಬಂದಿದ್ದ ನೋಡಿ, ಈ ಮೆಸೆಜ ಹುಡಗಿದ ಅಂತ ಕನಫರ್ಮ ಆತ.
ಇನ್ನ ಇದಕ್ಕ ರಿಪ್ಲೈ ಏನ ಕೊಡಬೇಕು ಅಂತ ವಿಚಾರ ಮಾಡ್ಲಿಕತ್ತೆ.
’ಇಲ್ಲಾ ನಂಗ ಹೆಂಡ್ತಿ ಬಿಟ್ಟ ಬ್ಯಾರೇನೂ ಇದ್ದಾರಂತ’ ರಿಪ್ಲೈ ಕೊಟ್ಟರ ಒಂದ ಸಂಕಟಾ, ಅಕಿ ಎಲ್ಲರ ನಂದ already extra marital affair ಅದ ಅಂತ ತಿಳ್ಕೊಂಡ ಮುಂದ ಮೆಸೇಜ್ ಕಳಸೋದ ಬಿಟ್ಟ ಬಿಟ್ಟರ?
ಅಲ್ಲಾ ಒಬ್ಬ potential would be friend ಯಾಕ ಕಳ್ಕೋಬೇಕ? ಪಾಪ ಅಕಿ ನೋಡಿದ್ರ ಪ್ರತಿ ಮೆಸೆಜ್ ಒಳಗ ಎಷ್ಟ ಹಚಗೊಂಡ dear..dear ಅಂತ ಕಳಸ್ತಾಳ ಅಂತ ವಿಚಾರ ಬಂತ.
ಅದರಾಗ ಮೊನ್ನೆ ಕೋರ್ಟನವರ ’ವಿವಾಹೇತರ ಸಂಬಂಧ ಶಿಕ್ಷಾರ್ಹವಲ್ಲ’ ಅಂತ ಡಿಸಿಜನ್ ಕೊಟ್ಟ ಮ್ಯಾಲೆ ಅಂತೂ ನಮ್ಮಂತಾವರು ಮನಸ್ಸಿನಾಗ ಮಂಡಗಿ ತಿನ್ನಲಿಕತ್ತಾರ, ಹಿಂಗಾಗಿ ಹಿಂತಾ ಸಿಗೋ ಆಪ್ಶನ್ಸ್ ಓಪನ್ ಇಡಬೇಕಲಾ? ಅದರಾಗ ಕೋರ್ಟನವರಂತು ಕ್ಲೀಯರ ಆಗಿ ಹೆಂಡ್ತಿ ಗಂಡಗ ಬಾಸ್ ಅಲ್ಲಾ, ವಿವಾಹೇತರ ಸಂಬಂಧದಿಂದ ಮದುವಿ ಪಾವಿತ್ರತೆ ಏನ ಹಾಳ ಆಗಂಗಿಲ್ಲಾ, ಹಂಗ ನೋಡಿದರ ಹದಗೆಟ್ಟ ಮದುವಿಯಿಂದನ ವಿವಾಹೇತರ ಸಂಬಂಧ ಶುರು ಆಗ್ತಾವ ಅಂತ ಬ್ಯಾರೆ ಹೇಳ್ಯಾರ.
ಆದರ ಒಂದ ಮಾತ ನೆನಪ ಇಡ್ರಿ, ಕೋರ್ಟನವರು ವಿವಾಹೇತರ ಸಂಬಂಧ ನೈತಿಕವಾಗಿ ತಪ್ಪು ಅಂತ ಭಾಳ ಕ್ಲೀಯರ ಕಟ್ ಆಗಿ ಹೇಳ್ಯಾರ ಮತ್ತ.
ಅಲ್ಲಾ ಒಂದ ಕಡೇ ಕೋರ್ಟನವರ ನೋಡಿದರ ವಿವಾಹೇತರ ಸಂಬಂಧ illelegal ಅಲ್ಲಾ ಅಂತಾರ, ಇತ್ತಲಾಗ ನೋಡಿದ್ರ ಒಂದಿಷ್ಟ ಹೆಣ್ಮಕ್ಕಳು ನಮ್ಮನ್ನ ಗಂಡಸರ ಶೋಷಣೇ ಮಾಡ್ಯಾರ ಅಂತ me too ಅಂದೋಲನ ನಡಿಸ್ಯಾರ, ನನಗಂತೂ ಒಂದೂ ತಿಳಿಯವಲ್ತ ಬಿಡ್ರಿ. ಹಂಗ ನನ್ನ ಹಣೇಬರಹಕ್ಕ ನನ್ನ ವಿರುದ್ಧ ಬಟ್ಟ ಮಾಡಿ ತೋರಿಸಿ #metoo ಅಂತ ಟ್ವೀಟ್ ಮಾಡೋರ ಸಹಿತ ಇಲ್ಲಾ. ಅಲ್ಲಾ ನಾ ಏನ ದೊಡ್ಡ ಸೆಲೆಬ್ರಿಟಿ ಅಲ್ಲ ಬಿಡ್ರಿ ನನ್ನ ವಿರುದ್ಧ ಅಲಿಗೇಶನ್ ಮಾಡಲಿಕ್ಕೆ. ಹಂಗ ಅದಕ್ಕೂ ಪಡದ ಬರಬೇಕ ಅನ್ನರಿ.
ಮುಂದ ನಾ ಒಂದ ಹತ್ತ ಸರತೆ ವಿಚಾರ ಮಾಡಿ ಮೊದ್ಲ ಈ ಮೆಸೆಜ್ ಯಾರ ಕಳಸಿದವರು ತಿಳ್ಕೊಳೊದಕಿಂತಾ ಯಾಕ ಕಳಸಿದರು ತಿಳ್ಕೊಂಡರಾತು ಅಂತ
’ತಾವು ಯಾಕೇ ಹೀಗೇ ಕೇಳಿದಿರಿ dear’ ಅಂತ ಅಗದಿ ಪೊಲೈಟಾಗಿ ರಿಪ್ಲೈ ಕೊಟ್ಟೆ.
ಮುಂದ ಒಂದ ತಾಸಿಗೆ ರಿಪ್ಲೈ ಬಂತಲಾ
’ಲೇ…ಮಗನ…ಎಲ್ಲಾದರಾಗೂ ಬರೇ ಹೆಂಡ್ತಿ ಬಗ್ಗೆನ ಬರಿತಿ, ಅಕಿನ್ನ ಬಿಟ್ಟ ಬರಿಲಿಕ್ಕೆ ಬ್ಯಾರೆ ಯಾರ ಸಿಗಂಗಿಲ್ಲೇನ ನಿನಗ……ಅದಕ್ಕ ಕೇಳಿದ್ದ ಹೆಂಡ್ತಿ ಬಿಟ್ಟ ಬ್ಯಾರೆ ಯಾರರ ಇದ್ದಾರಿಲ್ಲ ನಿನಗ’ ಅಂತ ಅಗದಿ ಚೊಕ್ಕ ನಮ್ಮ ಹುಬ್ಬಳ್ಳಿ ಭಾಷಾದಾಗ ರಿಪ್ಲೈ ಬಂತ.
ಅದನ್ನ ಓದಿ ನಂದೇಲ್ಲಾ ಹವಾ ಠುಸ್ಸ ಅಂತ. ನಾ ಏನೋ ಆಪಾರ್ಚುನಿಟಿ ಅದ ಅಂತ ಕನಸ ಕಾಣಲಿಕತ್ತಿದ್ದೆ. ಇದ ನೋಡಿದರ ನಮ್ಮ ಪೈಕಿನ ಯಾರೋ ನಾ ಹೆಂಡ್ತಿ ಬಗ್ಗೆ ಜಾಸ್ತಿ ಬರೇಯೋದಕ್ಕ ಮೆಸೇಜ್ ಕಳಸ್ಯಾರ ತೊಗೊ ಅಂತ ಆ ಮೆಸೆಜ್ ಡಿಲಿಟ್ ಮಾಡಿ, ನಂಬರ್ ಬ್ಲಾಕ್ ಮಾಡಿದೆ. ನಂದ ಖರೇನ ಮೂಡ ಹಳ್ಳಾ ಹಿಡದ ಹೋತ.
ಅಲ್ಲಾ, ಹಂಗ ನಾ ಏನ ಸಿರಿಯಸ್ ಇದ್ದಿದ್ದಿಲ್ಲ ಬಿಡ್ರಿ, ಏನೋ ’ಚಾನ್ಸ ಸಿಕ್ಕರ’ ಅಂತ ಒಂದ ಕೆಟ್ಟ ವಿಚಾರ ಬಂದಿತ್ತ ಅನ್ನರಿ. ಇನ್ನ ಹಿಂಗ ನಾ ಮನಸ್ಸಿನಾಗ ಹಿಂತಾ ವಿಚಾರ ಮಾಡೇನಿ ಅಂತೇನರ ನನ್ನ ಹೆಂಡ್ತಿಗೆ ಗೊತ್ತಾದರ ಅಕಿ “ರ್ರೀ…ಯಾಕ…ಹೆಂಗ ಅನಸ್ತದ, ನಾನೂ ನಿಮ್ಮ ವಿರುದ್ಧ #metoo ಅಂತ ಟ್ವೀಟ್ ಮಾಡ್ಲೇನ?” ಅಂತ ಅಂದರ ಏನ್ಮಾಡ್ತೀರಿ?ಕಡಿಕೆ ಮತ್ತ ಅದೇಲ್ಲೇರ ಪಬ್ಲಿಕ್ ಆಗಿ ನಂಗ ಮೀಡಿಯಾದವರ ಗಂಡನ ಸ್ಥಾನದಿಂದ ರಾಜೀನಾಮೆ ಕೊಡ ಅಂತ ಗಂಟ ಬಿದ್ದರ ಏನ್ಮಾಡೋದ?
ಹೋಗ್ಲಿ ಬಿಡ್ರಿಪಾ, ನಂದ ಇರೋದ ಒಂದ ಸಂಸಾರ, ನಮಗ್ಯಾಕ ಬೇಕ ಈ #metoo, ಟ್ವೀಟು ಉಸಾಬರಿ, ನಂಬದೇನಿದ್ದರು we two…ours two ಸಂಸಾರ.
ಮ್ಯಾಲೆ ಮನ್ಯಾಗ ಹಿಂತಾ ಛಂದ ಪುರಾತನ ಹೆಂಡ್ತಿ ಇರಬೇಕಾರ ಮತ್ತೊಬ್ಬಕಿದ ಯಾಕ್ರಿ ಉಸಾಬರಿ. ಅದರಾಗ ನಮ್ಮಕಿ ಅಂತೂ ’ಎರಡ ಹಡದರು ಹೆಂಗ ಕಾಣ್ತಾಳ ನೋಡ’ ಅನ್ನಬೇಕ ಜನಾ ಹಂಗ ಇದ್ದಾಳ. ಹಂಗ ನನಗ ಪುರಾತನವಾದದ್ದೇಲ್ಲಾ ಛಂದ ಕಾಣ್ತದ ಆ ಮಾತ ಬ್ಯಾರೆ, ಇಷ್ಟ ಆವಾಗ ಇವಾಗ ಸ್ವಲ್ಪ ಹುಣಸಿಹಣ್ಣ, ರಂಗೋಲಿ ಹಚ್ಚಿ ತಿಕ್ಕಿ ತೊಳದರ ಸಾಕ ಮತ್ತ ಲಕಾ ಲಕಾ ಅಂತಾಳ.
ಇನ್ನ ..’ಇಂವಾ ಯಾಕ ಹೆಂಡ್ತಿ ಬಗ್ಗೇನ ಜಾಸ್ತಿ ಬರಿತಾನ’ ಅಂತ ಭಾಳ ಮಂದಿ ತಲ್ಯಾಗ ಅದ,
ಒಂದಿಷ್ಟ ಮಂದಿ ’ನೀ ಏನ ಸುಡಗಾಡ ಬರದರು ಅದರಾಗ ಹೆಂಡ್ತಿನ್ನ ತುರುಕ್ತಿ’ ಅಂತಾರ,
ಇನ್ನೊಂದಿಷ್ಟ ಮಂದಿ ’ಪಾಪ ಏನ ಜೀವಾ ತಿಂತಿಪಾ ಹೆಂಡ್ತಿದು’ ಅಂತಾರ.
ಅಲ್ಲಾ ನಂದ ಅಕಿ ಖರೆ ಖರೇನ ಜೀವಾ ತಿನ್ನೋದ ಯಾರಿಗರ ಕಾಣ್ತದ? ಹಂಗ ನೋಡಿದ್ರ ನಾನ ಅಕಿ ವಿರುದ್ಧ #metoo ಅನ್ನಬೇಕ…ಅಷ್ಟ ಅನುಭವಿಸಲಿಕತ್ತೇನಿ, ಆದ್ರ ನಂದ ಕೇಳೋರಿಲ್ಲಾ?
ಇನ್ನ ನಾ ಲೇಖನದಾಗ ನನ್ನ ಹೆಂಡ್ತಿ ಬಗ್ಗೆ ಬರಿಲಾರದ ಮತ್ತೊಬ್ಬರ ಹೆಂಡ್ತಿ ಬಗ್ಗೆ ಬರಿಲಿಕ್ಕಂತೂ ಬರಂಗಿಲ್ಲಾ. ಆಮ್ಯಾಲೆ ಎಲ್ಲಾ ಆರ್ಟಿಕಲ್ ಒಳಗ ನನ್ನ ಹೆಂಡ್ತಿ ಅನ್ನೋದ ಕಾಲ್ಪನಿಕ ಪಾತ್ರ, ಇನ್ನ ಪ್ರತಿ ಹದಿನೈದ ದಿವಸಕ್ಕೊಂದೊಂದ ಎಲ್ಲೇ ಹೊಸಾ ಹೊಸಾ ಹೆಂಡ್ತಿ ಕಲ್ಪನೆ ಮಾಡ್ಕೊಳೊದ ಅಂತ ಇದ್ದ ಒಂದ ಹೆಂಡ್ತಿನ್ನ ಎಲ್ಲಾ ಪ್ರಹಸನದಾಗ ಕಲ್ಪನೆ ಮಾಡ್ಕೊಂಡ ಬರೇಯೋದರಿಪಾ. ಅಲ್ಲಾ…. ನೋಡ್ರಿಲ್ಲೇ, ನಾ ಕಾಲ್ಪನಿಕ ಜಗತ್ತಿನೊಳಗೂ ಏಕ ಪತ್ನಿವೃತಸ್ಥ, ಅಗದಿ ಸಾಕ್ಷಾತ ಶ್ರೀರಾಮಚಂದ್ರ ಇದ್ದಂಗ ಇದ್ದೇನಿ. ಹಿಂತಾ ಗಂಡ ಸಿಗಬೇಕಂದರ ನನ್ನ ಹೆಂಡ್ತಿ ಪುಣ್ಯಾ ಮಾಡ್ಯಾಳ ತೊಗೊಳರಿ.
ಇನ್ನ ಹಂಗ ಜೀವಂತ ಇರೋ ಹೆಂಡ್ತಿನ್ನ ಕಾಲ್ಪನಿಕ ಅನ್ನೋದ ತಪ್ಪು, ಅನ್ನಲಿಕ್ಕೂ ಬರಂಗಿಲ್ಲಾ ಖರೇ, ಆದ್ರ ನನಗ actual ಹೆಂಡ್ತಿನ್ನ ಕಾಲ್ಪನಿಕ ಪ್ರಹಸನದಾಗ ಹಾಕ್ಕೊಂಡರ ಅದ ಅಗದಿ ಛಂದ ಬರಿಸ್ಗೊಂಡ ಹೋಗ್ತದ. ಹಿಂಗಾಗಿ ನಾ ಒಮ್ಮೆ ಅಕಿ ಬಗ್ಗೆ ಬರಿಲಿಕ್ಕೆ ಶುರು ಮಾಡಿದರ ಸಹಸ್ರಾರ ಶಬ್ದ ಬರಿತೇನಿ.
ಒಂದ ಮಾತನಾಗ ಹೇಳಬೇಕಂದರ ನನ್ನ ಪ್ರಹಸನಗಳಿಗೆ ನನ್ನ ಹೆಂಡ್ತಿನ ’ಉತ್ಸವ ಮೂರ್ತಿ’. ಅಕಿ ಇದ್ದರಿಷ್ಟ ನನ್ನ ಬರವಣಿಗೆ ರಥಾ ಮುಂದ ಹೋಗ್ತದ, ಅಕಿನ ಪ್ರಹಸನದ ಪಾತ್ರಧಾರಿ, ಜೀವ ಲಹರಿ ಮ್ಯಾಲೆ ಸದ್ಯೇಕ ಅಕಿ ಒಬ್ಬೋಕಿನ ಜೀವನದ ಸೂತ್ರಧಾರಿ.
ಇನ್ನ ಯಾವದ ಛಲೋ ಕೆಲಸಾ ಮಾಡಬೇಕಾರ ಮೊದ್ಲ ವಿಘ್ನ ನಿವಾರಕರ ಪೂಜಾ ಮಾಡಬೇಕಂತ ಅದಕ್ಕ ನಾ ನನ್ನ ಪ್ರಹಸನಕ್ಕ ಹೆಂಡ್ತಿ ವಿಘ್ನ ಆಗಬಾರದು ಅಂತ ಅಕಿನ್ನ ಹಾಕ್ಕೊಂಡ ಬರಿತೇನಿ.
ಸೊ ನನ್ನ ಪ್ರಹಸನದಾಗಿನ ಹೆಂಡ್ತಿ ಕಾಲ್ಪನಿಕ ಮತ್ತ ಸಾಂದರ್ಭಿಕ ಹೆಂಡ್ತಿ ಮಾತ್ರ ಅನ್ನೋದನ್ನ ನೆನಪಿಡ್ರಿ.
ಆಮ್ಯಾಲೆ ಈ ’ಹೆಂಡ್ತಿ’ ಅನ್ನೊ subject ಏನ ಅದಲಾ ಇದ eternal -ಶಾಶ್ವತ. ಮ್ಯಾಲೆ immortal-ಅಮರ ಬ್ಯಾರೆ. ಹಿಂಗಾಗಿ ಈ ಹೆಂಡ್ತಿ ಅನ್ನೋ ವಿಷಯದ ಮ್ಯಾಲೆ ಏನ ಬರದರು ಅದು eternal article ಆಗ್ತದ.
ಅಲ್ಲಾ, ಅಕಸ್ಮಾತ ಜಗತ್ತಿನಾಗ physicallyನೂ ಹೆಂಡ್ತೇನರ immortal ಇದ್ದಳು ಅಂದ್ರ ಈ ’ಗಂಡ’ ಅನ್ನೋ ಹೈಬ್ರಿಡ್ ತಳಿ ಆ ಡೈನೊಸರಸ್ ತಳಿಕಿಂತ ಮೊದ್ಲ ಶಾಶ್ವತವಾಗಿ ನಶಿಸಿ ಹೋಗಿರ್ತಿತ್ತ ಆ ಮಾತ ಬ್ಯಾರೆ.
“So” has come with great spontaneity. Loved it.
Super
ಛಲೋ ಅದ. ಆದರ ಯಾಕೊ ಆಳ ಕಡಿಮಿ ಅನಸ್ತು… ಹಳೇ ಬ್ಲಾಗಿನ ಸಾಲ ಭಾಳ ಹೊಳ್ಳಿ ಬಂದಾವ
Very Well Written.. I thoroughly enjoyed it