ನಿನ್ನೆ ಸಂಜಿ ಮುಂದ ನನ್ನ ಹೆಂಡತಿ ಮಗಳಿಗೆ ’ಮುಂದಿನ ಸಂಡೆ ನಿಮ್ಮಪ್ಪಂದ ದಿವಸ ಅದ, ಅವತ್ತ ಪಪ್ಪಾ ಪಾರ್ಟಿ ಕೊಡ್ತಾರ, ಊಟಕ್ಕ ಹೊರಗ ಹೋಗಣಂತ ಪುಟ್ಟಿ’ ಅಂತ ಹೇಳಿದ್ಲು. ಅಕಿ ಮಾತ ಕೇಳಿ ನನ್ನ ಮಗಳು ’ಹಂಗರ ಅವತ್ತ ಪಪ್ಪಾನ ಫೋಟಕ್ಕ ಮಾಲಿ ಹಾಕೋದು?’ ಅಂತ ಕೇಳಿದ್ಲು.
’ಛೆ, ಹುಚ್ಚಿ, ವಳತ ಅನ್ನ, ಏನೇನರ ಮಾತಡ್ತದ ಖೋಡಿ ಒಯ್ದಂದು. ಇನ್ನು ನಿಮ್ಮಪ್ಪ ಮನಿ ಕಟ್ಟಸಬೇಕು, ನಿಮಗ ಸಾಲಿ ಕಲಿಸಿ ದೊಡ್ಡವರನ ಮಾಡಿ ಮದುವಿ ಮಾಡಿ ಅಟ್ಟಬೇಕು’ ಅಂತ ಆ ಹುಡುಗಿಗೆ ಬೈದ ಬಾಯಿ ಮುಚ್ಚಿಸಿದ್ಲು.
ಪಾಪ, ನನ್ನ ಮಗಳ ಇಷ್ಟ ದಿವಸ ನನ್ನ ಹೆಂಡತಿ ನಮ್ಮಜ್ಜಾ, ನಮ್ಮಜ್ಜಿ ಶ್ರಾದ್ಧ ಇದ್ದಾಗ ‘ಇವತ್ತ ನಿಮ್ಮ ಮುತ್ತಜ್ಜನ ದಿವಸ, ಮುತ್ತಜ್ಜಿ ದಿವಸ’ ಅಂತ ಅವರ ಫೋಟಕ್ಕ ಮಾಲಿ ಹಾಕೋದನ್ನ ನೋಡ್ಯಾಳ. ಅದರಂಗ ಇದು ‘ಪಪ್ಪಾನ ದಿವಸ’ ಅಂತ ಅಕಿ ತಿಳ್ಕೊಂಡಿದ್ದರಾಗ ಅಕಿದ ತಪ್ಪsರ ಏನದ ಹೇಳ್ರಿ?
ಖರೆ ಹೇಳ್ಬೇಕಂದರ ನನ್ನ ಹೆಂಡತಿಗೆ ಬುದ್ಧಿ ಇಲ್ಲಾ. ಅಲ್ಲಾ, ಛಂದಾಗಿ ಮುಂದಿನ ಸಂಡೆ ‘ಫಾದರ್ಸ್ ಡೇ’ ಅಂತ ಹೇಳಿದ್ದರ ನನ್ನ ಮಗಳಿಗೆ ತಿಳದ ತಿಳಿತಿತ್ತು, ಅದನ್ನ ಬಿಟ್ಟ ಕನ್ನಡದಾಗ ಹೇಳಲಿಕ್ಕೆ ಹೋಗಿ ಫಾದರ್ಸ್ ಡೇ ದಿವಸ ಹೆಂಡತಿ ಮಕ್ಕಳು ಕೂಡಿ ನನಗ ನೀರ ಬಿಟ್ಟ, ಶ್ರಾದ್ಧ ಮಾಡೋರ ಇದ್ದರು. ಏನ್ಮಾಡ್ತೀರಿ? ಅದಕ್ಕ ಹೇಳೋದು ಕಲತೊಕ್ಕಿನ ಲಗ್ನಾ ಮಾಡ್ಕೋಬೇಕು ಅಂತ. ಹೋಗಲಿ ಬಿಡರಿ, ಈಗ ಆಗಿದ್ದ ಆಗಿ ಹೋತು. ಇನ್ಯಾರ ನನಗ ಎರಡನೇ ಸಂಬಂಧಕ್ಕ ಕನ್ಯಾ ಕೋಡ್ತಾರ, ಅದೂ ಒಂದನೇ ಹೆಂಡತಿ ಇನ್ನೂ ಜೀವಂತ ಇರಬೇಕಾರ.
ಹಿಂದಕ ವುಮೆನ್ಸ್ ಡೆ ಇದ್ದಾಗೂ ನನ್ನ ಹೆಂಡತಿ ಹಿಂಗ ಮಾಡಿದ್ಲು. ತಾ ಒಂದ ಸಾವಿರದ್ದ ಸೀರಿ ತೊಗೊಂಡ ಮತ್ತ ನನ್ನ ಕಡೆನ ಪಾರ್ಟಿ ವಸುಲ ಮಾಡಿದ್ಲು.
’ಲೇ, ನಮ್ಮ ಮನ್ಯಾಗ ನಡೆಯೋದ ದಿವಸಾ ನಿಂದ ದರ್ಬಾರ ಮತ್ತ ಯಾಕ ಸಪರೇಟಾಗಿ ವುಮೆನ್ಸ್ ಡೇ ಮಾಡ್ಕೋತಿ’ ಅಂದ್ರು ಕೇಳಲಿಲ್ಲಾ. ಊರ ಮಂದಿ ಮಾಡೋದ ನೋಡಿ ತಾನು ಮಾಡ್ಕೋಂಡಳು. ಮೊನ್ನೆ ಮದರ್ಸ್ ಡೇ ಇದ್ದಾಗ ನಾ ನಮ್ಮವ್ವಗ ಒಂದ ಕಾಟನ್ ಸೀರಿ ತಂದ ಕೊಟ್ಟಿದ್ದ ನೋಡಿ ’ಯಾಕ ನಮ್ಮವ್ವ ಮದರ ಅಲ್ಲೇನ್?’ ಅಂತ ನನ್ನ ರೊಕ್ಕದಾಗ ತಮ್ಮವ್ವಗೂ ಒಂದ ಕಾಟನ್ ಸೀರಿ ತಂದ ಕೊಟ್ಲು.
’ಲೇ, ಹುಚ್ಚಿ ಇದು ‘ಮದರ್- ಇನ್- ಲಾ ಡೇ’ ಅಲ್ಲಲೇ, ನನ್ನ ರೊಕ್ಕಾ ಯಾಕ ಹಾಳ ಮಾಡ್ತಿ’ ಅಂತ ಅಂದರೂ ಕೇಳಲಿಲ್ಲಾ. ಪುಣ್ಯಾಕ ನನ್ನ ಮಕ್ಕಳು ಇನ್ನು ಸಣ್ಣವ ಅವ, ದುಡಿಯಂಗಿಲ್ಲಾ ಅಂತ ಸುಮ್ಮನ ಬಿಟ್ಟಾಳ. ಆದ್ರು ನನ್ನ ಮಗಗ
’ನಾಳೆ ನೀ ದೊಡ್ಡಂವ ಆಗಿ ನೌಕರಿಗೆ ಹೊಂಟ ಮ್ಯಾಲೆ ಮದರ್ಸ್ ಡೇ ಕ್ಕ ನಂಗ ಸೀರಿ ಕೊಡಸ್ಬೇಕ ನೋಡ’ ಅಂತ ಈಗ ಹೇಳಿ ಇಟ್ಟಾಳ.
ಇನ್ನ ನಾ father’s day ಕ್ಕ ನಮ್ಮಪ್ಪಗ ಏನರ ತಂದ ಕೊಟ್ಟರ ಅಕಿ ತಮ್ಮಪ್ಪಗು ಕೊಡಸ ಅಂತಾಳ ಅಂತ ಹೇಳಿ ನಾ ತಲಿ ಕೆಟ್ಟ ಈ ಸರತೆ father’s day ಕ್ಕ ನಮ್ಮಪ್ಪನ ಕಣ್ಣಿಂದ ಆಪರೇಶನ್ ಮಾಡಿಸಿ ಪರಿ ತಗಿಸಿದರಾತು ಅಂತ ಡಿಸೈಡ ಮಾಡಿ ಮೊನ್ನೆ ನಮ್ಮಪ್ಪನ್ನ ಜೋಶಿ ಡಾಕ್ಟರ ಕಡೆ ಕರಕೊಂಡ ಹೋಗಿ ಅಪ್ಪಾಯಿಂಟಮೆಂಟ್ ತೊಗೊಂಡ ಬಂದೇನಿ. ನಮ್ಮಪ್ಪಗ
’ಇದು ನಿನಗ father’s day ಗಿಫ್ಟ ಅಪ್ಪಾ, ಮುಂದಿನ ವಾರದಿಂದ ನೀನೂ ನಾ ಬರದಿದ್ದ ಓದಬಹುದು. ಇನ್ನ ಇನ್ನೊಂದ ಕಣ್ಣಿಂದ ಪರಿ ಮುಂದಿನ ವರ್ಷ father’s dayಕ್ಕ ತಗಸ್ತೇನಿ’ ಅಂತ ಹೇಳೆನಿ.
ಯಾಕೋ ಪುಣ್ಯಾಕ್ಕ ನನ್ನ ಹೆಂಡತಿ ಸುಮ್ಮನ ಬಾಯಿ ಮುಚಗೊಂಡ ಕೂತ್ಲು, ‘ನಮ್ಮಪ್ಪನ ಕಣ್ಣಿಂದು ಆಪರೇಶನ್ ಮಾಡಿಸೇ ಬಿಡರಿ, ಇವತ್ತಿಲ್ಲಾ ನಾಳೇ ಅವರಿಗೂ ಪರಿ ಬಂದ ಬರತದಲಾ’ ಅಂತ ಅನ್ನಲಿಲ್ಲಾ.
ಇತ್ತಲಾಗ ನಮ್ಮವ್ವ ಫಾದರ್ಸ್ ಡೇ ಕ್ಕ ಮಗಾ ಹತ್ತ ಸಾವಿರ ರೂಪಾಯಿ ಖರ್ಚ ಮಾಡಿ ಅವರಪ್ಪಂದ ಕಣ್ಣಿನ ಆಪರೇಶನ್ ಮಾಡಸೊಂವ ಇದ್ದಾನ ಅಂತ ಮಂದಿ ಮುಂದ ಹೇಳ್ಕೋತ ಅಡ್ಡ್ಯಾಡಲಿಕತ್ತಾಳ.
‘ಮುಂದಿನ ಸರತೆ ಮದರ್ಸ್ ಡೇ ಕ್ಕ ನನ್ನ ಕಿವಿನು ಸ್ವಲ್ಪ್ ತೋರಸೋಣಪಾ, ಯಾಕೋ ಸರಿಯಾಗಿ ಕೇಳಸವಲ್ತು’ ಅಂತ ಈಗ ಹೇಳಿ ಇಟ್ಟಾಳ. ಏನ್ಮಾಡ್ತಿರಿ? ಇನ್ನ ನಮ್ಮವ್ವಂದ ’ಮದರ್ಸ್ ಡೇ’ ಕ್ಕ ನಾ ಏನರ ಕಿವಿ ಆಪರೇಶನ್ ಮಾಡಿಸಿಸಿದರ ನನ್ನ ಹೆಂಡತಿ ’ವೈಫ್ಸ್ ಡೇ’ ಕ್ಕ ತಂದ ಯಾ ಆಪರೇಶನ್ ಮಾಡಸಂತ ಗಂಟ ಬೀಳ್ತಾಳೊ ಆ ದೇವರಿಗೆ ಗೊತ್ತ.
ಒಟ್ಟ ಒಂದ ಮಾತನಾಗ ಹೇಳ್ಬೇಕಂದರ ನಂಗಂತೂ ಈ ಸಂಸಾರದಾಗ ಸಿಕ್ಕ ಮ್ಯಾಲೆ ಜೀವನದ ’ಎವರಿ ಡೇ’ ’ಕಂಡೊಲೆನ್ಸ್ ಡೇ’ ಆಗಿ ಹೋಗೆದ.