ಮೊನ್ನೆ ಕನ್ನಡ ರಾಜ್ಯೋತ್ಸವ. ಎಲ್ಲಾರೂ ಅಗದಿ ವಿಜೃಂಭಣೆಯಿಂದ ಆಚರಿಸಿದ್ವಿ.
ಇನ್ನ ನಾವ ಅಂತೂ ಸರ್ಕಾರಿ ಕನ್ನಡ ಸಾಲ್ಯಾಗ ಕಲತೋರ, ಬಾಯಿ ತಗದರ ಅಗದಿ ಚೊಕ್ಕ ಹುಬ್ಬಳ್ಳಿ ಭಾಷಾದಾಗ ಮಾತಾಡೊರ. ಇನ್ನ ನಮಗ ರಾಜ್ಯೋತ್ಸವ ಇದ್ದಾಗಿಷ್ಟ ಕನ್ನಡ ನೆನಪಾಗಂಗಿಲ್ಲಾ, ಇದ ನಮಗ ದಿನಂ ಪ್ರತಿ ಇರೋ ’ನಿತ್ಯೋತ್ಸವ’….ಕನ್ನಡೋತ್ಸವ.
ಇನ್ನ ರಾಜ್ಯೋತ್ಸವ ಅಂದ ಮ್ಯಾಲೆ ಎಲ್ಲಾ ಕಡೆ ಒಂದಿಲ್ಲಾ ಒಂದ ಪ್ರೋಗ್ರಾಮ್ ಇದ್ದ ಇರ್ತಿದ್ದವು. ಒಬ್ಬರಿಲ್ಲಾ ಒಬ್ಬರ ಕನ್ನಡ ಪಂಡಿತರ ಕನ್ನಡದ ಬಗ್ಗೆ ಇದ ಚಾನ್ಸ್ ಅಂತ ಕೊರದದ್ದ ಕೊರದದ್ದ, ಒಂದಿಷ್ಟ ಮಂದಿ ಅಂತೂ happy karnataka rajyotsava ಅಂತ ಇಂಗ್ಲೀಷನಾಗ ವಾಟ್ಸಪ್ ಮಾಡಿದ್ದರು. ಹಿಂಗ ’ಬದ್ನಿಕಾಯಿ ತಿಂದ ಆಚಾರ ಹೇಳೋ’ ಮಂದಿ ಇರೋದರಿಂದ ಇವತ್ತ ನಮ್ಮ ಕನ್ನಡದ ಪರಿಸ್ಥಿತಿ ಹಿಂಗ ಆಗಿದ್ದ ಅನಸ್ತದ.
ಇನ್ನ ನಾ ಇತ್ತೀಚಿಗೆ ಪೇಪರನಾಗ ಬರಿಲಿಕತ್ತೇನಿ ಅಂತ ನಂಗೂ ಒಂದಿಷ್ಟ ಮಂದಿ ರಾಜ್ಯೋತ್ಸವಕ್ಕ ಭಾಷಣಕ್ಕ ಕರದರ ಖರೆ ಆದರ ನಾ
’ಏ, ನಂಗೇನ ಮಾತಾಡಲಿಕ್ಕೆ ಬರಂಗಿಲ್ಲಾ, ನಂದ ಏನಿದ್ದರು ಬರೇಯೋದ ಇಷ್ಟ’ ಅಂತ ಹೇಳಿ ಜಾರ್ಕೊಂಡಿದ್ದೆ.
ಆದರ ನನ್ನ ಹೆಂಡತಿ ದೊಡ್ಡಿಸ್ತನಾ ಮಾಡಿ ತಾ ಏನ ದೊಡ್ಡ ಸಾಹಿತಿ ಹೆಂಡ್ತಿ ಅನ್ನೊರಗತೆ ಓಣ್ಯಾಗ ಮಹಿಳಾ ಮಂಡಳದ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮಕ್ಕ ಗೆಸ್ಟ ಆಗಿ ಹೋಗಿ ಬಂದ್ಲು.
“ನಿಂಗ ಯಾರಲೇ ಗೆಸ್ಟ ಅಂತ ಕರದವರು…ಅವರಿಗೆ ತಲಿಗಿಲಿ ಕೆಟ್ಟಿತ್ತೇನ ನಿನ್ನ ಕರಿಲಿಕ್ಕೆ?” ಅಂತ ನಾ ಕೇಳಿದರ
“ಯಾಕ…ನಂಗೇನ ಕನ್ನಡ ಬರಂಗಿಲ್ಲೇನ… ನಿಮ್ಮಕಿಂತಾ ಜಾಸ್ತಿ ಅಭಿಮಾನದ ಕನ್ನಡದ ಮ್ಯಾಲೆ, ನಾ ಜೀವನದಾಗ ಹಿಂಗಾಗಿ ಕನ್ನಡ ಒಂದ ಕಲತದ್ದ” ಅಂತ ಜೋರ ಮಾಡಿದ್ಲು. ಅಲ್ಲಾ ಅಕಿಗೆ ಕನ್ನಡ ಬಿಟ್ಟ ಬ್ಯಾರೆ ಭಾಷೆ ಬರಂಗಿಲ್ಲಾ ಅದಕ್ಕ ಹಂಗ ಹೇಳ್ತಾಳ ಬಿಡ್ರಿ.
ಅಕಿ ಅಲ್ಲೇ ಹೋಗಿ ’ಕನ್ನಡದ ಗಾದೆ ಮಾತು’ ಅಂತ ಒಂದ ಅರ್ಧಾ ತಾಸ ಕೊರದ ಬಂದಿದ್ಲು.
ನಾ ಅಕಿಗೆ ’ಗಾದೆ ಮಾತು ಅಂದರ ಗಾದಿ ಮ್ಯಾಲೆ ಕೂತ ಮಾತಾಡಿದೇನ?’ಅಂತ ಕೇಳಿದ್ದಕ್ಕ
“ಸದಾಶಿವಗ ಅದ ಧ್ಯಾನ ಅನ್ನೋರಗತೆ ನಿಮಗ ಹಗಲಿಲ್ಲಾ, ರಾತ್ರಿಲ್ಲಾ ಬರೇ ಗಾದಿದ ಚಿಂತಿ ಇರ್ತದ…ನಾ ಹೇಳಿದ್ದ ’ಗಾದೆ ಮಾತ’….” ಅಂತ ಅಂದ್ಲು.
ಹಂಗ ನನ್ನ ಹೆಂಡ್ತಿಗೆ ಗಾದೆ ಮಾತ ಭಾಳ ಬರ್ತಾವರಿಪಾ. ಅದರಾಗ ಅಕಿ ಲಗ್ನಾದ ಹೊಸ್ದಾಗಿ ಅಂತು ಮಾತ ಮಾತಿಗೆ ಗಾದೆ ಮಾತ ಹೇಳ್ತಿದ್ಲು. ಯಾರರ ಒಗಟ ಹಚ್ಚಿ ಗಂಡನ ಹೆಸರ ಹೇಳ ಅಂದರ ಸಹಿತ ಗಾದೆ ಮಾತನಾಗ ಗಂಡನ ಹೆಸರ ಹೇಳ್ತಿದ್ಲು.
ಒಂದ್ಸಲಾ ನಾಲ್ಕ ಮಂದಿ ಸೇರಿದಾಗ
’ಆಡ ಮುಟ್ಟಲಾರದ ತೊಪ್ಪಲ ಇಲ್ಲಾ ನನ್ನ ಗಂಡ ’ಪ್ರಶಾಂತ ಆಡೂರ’ ಮಾಡಲಾರದ ಚಟಾ ಇಲ್ಲಾ’ ಅಂತ ಗಾದೆ ಮಾತ ಹಚ್ಚಿ ನನ್ನ ಹೆಸರ ಹೇಳಿ ನಮ್ಮವ್ವನ ಕಡೆ ಬೈಸ್ಗೊಂಡಿದ್ಲು.
ಇನ್ನ ಇಕಿದು ನಮ್ಮವ್ವಂದೂ ಮೊದ್ಲಿಂದ ಕುಂಡ್ಲಿ ಕೂಡಿ ಬರ್ತಿದ್ದಿಲ್ಲಾ, ಲಗ್ನಾದ ಹೊಸ್ದಾಗಿ ಅಂತೂ ಮಾತ ಮಾತಿಗೆ ಇಬ್ಬರು ಒಬ್ಬರಿಗೊಬ್ಬರ ಟಾಂಟ್ ಹೊಡದಿದ್ದ ಹೊಡದಿದ್ದ.
’ಹತ್ತ ಜನಿವಾರ ಕೂಡಿ ಇರಬಹುದು ಆದರ ಎರಡ ಜಡಿ ಒಟ್ಟಿಗಿರಂಗಿಲ್ಲಾ’ ಅಂತ ಹೇಳ್ತಾರಲಾ ಅದ ಖರೆ ಅನಸ್ತಿತ್ತ. ಇನ್ನ ನಾ ಇವರಿಬ್ಬರ ನಡಕ ಸಿಕ್ಕೊಂಡ ಸಾಯಿತಿದ್ದೆ.
ನಾ ಇಕಿಗೆ ಏನರ ಹೇಳಲಿಕತ್ತರ “ಅದ ಏನೋ ಅಂತಾರಲಾ ಒಲ್ಲದ ಗಂಡಗ ಮಸರಿನಾಗ ಕಲ್ಲ. ಅಂತ..ಹಂಗ..ನಿಮ್ಮ ಕಣ್ಣಿಗೆ ಬರೇ ನನ್ನ ತಪ್ಪ ಇಷ್ಟ ಕಾಣ್ತಾವ ತೊಗೊರಿ” ಅಂತ ಇಕಿ ಅನ್ನೋಕಿ,
ಇನ್ನ ನಮ್ಮವ್ವಗ ಏನರ ಹೇಳಲಿಕ್ಕೆ ಹೋದರ “ಹೆತ್ತವರಿಗೆ ಹೆಗ್ಗಣ ಮುದ್ದ..ಕಟಗೊಂಡವರಿಗೆ ಹೆಂಡ್ತಿ ಮುದ್ದ ಅಂತ, ನೀ ಅಕಿ ಒಪ್ಪಾ ಇಟಗೋಬ್ಯಾಡ ಬಾಯಿ ಮುಚಗೊಂಡ ಕೂಡ” ಅಂತ ಅಕಿ ಅನ್ನೋಕಿ.
’ಇರಲಿ, ಅತ್ತಿಗೊ೦ದು ಕಾಲ ಸೊಸಿಗೊ೦ದು ಕಾಲ’, ನಾನೂ ನೋಡ್ಕೋತೇನಿ.. ಎಷ್ಟ ದಿವಸ ಹಾರಾಡ್ತೀರಿ ಹಾರಾಡರಿ’ ಅಂತ ನನ್ನ ಹೆಂಡ್ತಿ ನಮ್ಮವ್ವಗ ಅಂತಿದ್ಲು. ಅದರಾಗ ಮಾತ ಮಾತಿಗೆ
’ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರು’ ಅಂತಾರಲಾ ಹಂಗ ನಮ್ಮಪ್ಪ ನನ್ನ ಗಿಳಿ ಹಂಗ ಸಾಕಿ ನಿಮ್ಮ ಮಗಗ ಕೊಟ್ಟ ತಪ್ಪ ಮಾಡಿದಾ’ ಅಂತ ಅನ್ನೋಕಿ, ಅದಕ್ಕ ನಮ್ಮವ್ವ ’ಕೊಟ್ಟಂವ ಕೋಡ೦ಗಿ, ಇಸ್ಕೊ೦ಡೋಂವ ಈರಭದ್ರ ತೊಗೊ..’ ಅಂತ ಅನ್ನೊಕಿ….ಮುಂದ ನಿಮ್ಮವ್ವ ಹಿಂಗ ಅಂದ್ಲು ನನ್ನ ಜೊತಿ ಅಕಿ ಜಗಳ ಶುರು.
ಹಂಗ ’ಹಳೆ ಚಪ್ಪಲಿ, ಹೊಸಾ ಹೆ೦ಡತಿ ಕಚ್ಚಂಗಿಲ್ಲಾ’ಅಂತ ಹೇಳ್ತಾರ ಆದರ ನನಗ ಅದ ಉಲ್ಟಾ ಆಗಿತ್ತ. ಅಲ್ಲಾ ನಾ ಹೇಳಲಿಕತ್ತಿದ್ದ ಹಗಲ ಹೊತ್ತಿನಾಗಿಷ್ಟನ ಮತ್ತ.
ಇನ್ನ ’ಮಾವ ಕೊಟ್ಟಿದ್ದ ಮನಿತನಕ..ದೇವರ ಕೊಟ್ಟಿದ್ದ ಕೊನೆತನಕ’ಅಂತಾರ ಖರೆ ಆದರ ಈ ಹೆಂಡ್ತಿನ್ನ ಕೊಟ್ಟಿದ್ದ ಮಾವನ ಅಂದಮ್ಯಾಲೆ ನಂಗ ಇದ ಕೊನೆತನಕ ಅಂತ ಗ್ಯಾರಂಟಿಯಾಗಿ ’ಪಾಲಿಗೆ ಬಂದಿದ್ದ ಪಂಚಾಮೃತ’ ಅದ ಪಂಚಗವ್ಯನರ ಯಾಕ ಆಗವಲ್ತಾಕ ಅಂತ ಸುಮ್ಮನಾಗ್ತಿದ್ದೆ.
ಇಕಿಗೇನರ ಪ್ರೀತಿಲೇ ’ಅದು, ಹಂಗಲ್ಲಾ ಹಿಂಗ’ ಅಂತ ಹೇಳಿದರ ಸಹಿತ ’ಸೂಜಿಗೆ ಮುದ್ದ ಕೊಟ್ಟಂಗ’ ಆಗ್ತಿತ್ತ. ಅದರಾಗ ನಾ ಎಂಗೇಜಮೆಂಟ್ ಮಾಡ್ಕೊಂಡ ಒಂಬತ್ತ ತಿಂಗಳ ಅಕಿ ಜೊತಿ ಅಡ್ಡಾಡಿ, ಮ್ಯಾಲೆ ಮತ್ತ ಹುಚ್ಚರಂಗ ಅಕಿನ್ನ ಮಾಡ್ಕೊಂಡೇ ಅಲಾ ಅದು ’ರಾತ್ರಿ ಕಂಡ ಭಾವ್ಯಾಗ ಹಗಲ ಬಿದ್ದಂಗ’ ಆಗಿತ್ತ ಅನ್ನರಿ.
ಪಾಪ ನಮ್ಮವ್ವಾ ’ಹುಚ್ಚ ಬಿಡದ ಮದ್ವಿ ಆಗಂಗಿಲ್ಲಾ..ಮದ್ವಿ ಆಗದ ಹುಚ್ಚ ಬಿಡಂಗಿಲ್ಲಾ’ ಅಂತ ನನ್ನ ಮದ್ವಿ ಮಾಡಿ ತಾನೂ ಹುಚ್ಚಿ ಆದ್ಲು, ನನ್ನೂ ಹುಚ್ಚನ್ನ ಮಾಡಿದ್ಲು.
ಇನ್ನ ನಡಕ ನಮ್ಮ ತಂಗಿದೊಂದ ಕಥಿ. ಅಕಿ ಹಂಗ ’ದಿನಾ ಸಾಯೋರಿಗೆ ಅಳೋರ ಯಾರ’ ಅಂತ ಯಾರ ಉಸಾಬರಿ ಮಾಡ್ತಿದ್ದಿಲ್ಲಾ ಆದರ ಒಮ್ಮೊಮ್ಮೆ ’ಆರ ಕೊಟ್ಟರ ಅತ್ತಿ ಕಡೆ ..ಮೂರ ಕೊಟ್ಟರ ಸೊಸಿ ಕಡೆ’ ಅಂತಾರಲಾ ಹಂಗ ಪಾರ್ಟಿ ಚೆಂಜ್ ಮಾಡ್ತಿದ್ದಳು.
ನನ್ನ ಹೆಂಡ್ತಿ ಕಡೆ ಹೋಗಿ
’ಏ, ನಮ್ಮವ್ವ ಹಂಗ ತೊಗೊ ’ಹಾಡಿದ್ದ ಹಾಡೋ ಕಿಸುಬಾಯಿ ದಾಸ’ಇದ್ದಂಗ. ಅಕಿ ಹೇಳಿದ್ದಕ್ಕೇಲ್ಲಾ ಹೂಂ..ಅಂದ ಈ ಕಿವಿಲೇ ಕೇಳಿ ಆ ಕಿವಿಲೇ ಬಿಡ’ ಅಂತ ಅನ್ನೋಕಿ
ಅತ್ತಲಾಗ ನಮ್ಮವಗ ’ಕತ್ತಿಗೇನ್ ಗೊತ್ತ ಕಸ್ತೂರಿ ವಾಸನಿ ಅವ್ವಾ…ನೀ ಯಾಕ ಅಕಿ ಬಾಯಿ ಹತ್ತಿ ಸುಮ್ಮನಿರ …ನಿನ್ನ ಮಗಗ ಅದೇನೋ ಅಂತಾರಲಾ ’ಕಿರಿ ಹೆಂಡ್ತಿ ಕಿವಿ ಕಿತ್ರೂ ಛಂದ’ಅಂತ.. ಹಂಗ ಅವಂಗ ಅಕಿ ಏನ ಮಾಡಿದರು ಛಂದನ ತೊಗೊ, ನಾವೇನರ ಹೇಳಿದರ ನಾವ ಕೆಟ್ಟ ಆಗ್ತೇವಿ’ ಅಂತ ನಮ್ಮವ್ವನ ಕಿವಿ ಉದೋಕಿ. ಅಲ್ಲಾ ಕಿರಿ ಹೆಂಡ್ತಿ ಅಂತ…ಇರೋಕಿ ಒಬ್ಬೋಕಿದ ಕಿರಿ, ಕಿರಿ ತಡ್ಕೊಳ್ಳಿಕ್ಕೆ ಆಗವಲ್ತ ಇನ್ನ ಮತ್ತೊಂದ ಎಲ್ಲಿಂದ ತರೋಣ.
ಮುಂದ ನನ್ನ ಕಡೆ ಬಂದ ’ದಾದಾ ಮನಿಗೆ ಹಿರೇ ಮಗಾ ಆಗಬಾರದು..ಹಿತ್ತಲ ಬಾಗಲ ಆಗಬಾರದು ಅಂತಾರ, ನಿನ್ನ ಹಣೇಬರಹ…ಅನುಭವಸ’ ಅಂತ ಡೈಲಾಗ್ ಹೊಡತಿದ್ಲು.
ಅದೇನೋ ಅಂತಾರಲಾ ಹುಟ್ಟಿಸಿದ್ದ ದೇವರ ಹುಲ್ಲ ಮೇಯಸಲಾರದ ಇರ್ತಾನೇನ ಅಂತ ಹಂಗ ಆ ಭಗವಂತ ನನ್ನ ಮೇಯಲಿಕ್ಕೂ ಒಂದ ಕಟ್ಟ್ಯಾನ ಅನುಭವಿಸಬೇಕ ಇಷ್ಟ. ಅಲ್ಲಾ ಇಲ್ಲೇ ನಾ ಹುಲ್ಲ ಮತ್ತ…ಇನ್ನ ಮೇಯೋರ ಯಾರ ಅಂತ ಗೊತ್ತಾತಲಾ?
ನಮ್ಮ ಸಂಸಾರದ್ದ ಹಣೇಬರಹ ನೋಡಿ ನಮ್ಮ ಪೈಕಿ ಒಬ್ಬೋಕಿ ಜಗಳಾ ಬಗಿಹರಸಲಿಕ್ಕೆ ಬಂದಿದ್ಲರಿಪಾ. ಅಕಿ ಬಂದ ನನ್ನ ಹೆಂಡ್ತಿಗೆ ’ಹೊತ್ತ ಬಂದಾಗ ಕತ್ತಿ ಕಾಲ ಹಿಡಿಬೇಕಂತ’ ನಿಂಗ ಗಂಡನ ಕಾಲ ಹಿಡಿಲಿಕ್ಕೆ ಏನ ಪ್ರಾಬ್ಲೇಮ್, ಅಲ್ಲಾ..ಅಂವಾ ಮನ್ಯಾಗಿಷ್ಟ ಹುಲಿ, ಬೀದ್ಯಾಗ ಇಲಿ’ ಇದ್ದಂಗ ಇದ್ದಾನ, ಸುಮ್ಮನ ಅಂವಾ ಹೇಳಿದಂಗ ಕೇಳಿ ಬಿಟ್ಟರ ಆತ್ವಾ, ಇನ್ನ ನಿಮ್ಮ ಅತ್ತಿ ಅಂತೂ ಕುಣಿಲಿಕ್ಕೆ ಬರಲಿಲ್ಲಾ ಅಂದರ ನೆಲಾ ಡೊಂಕ ಅನ್ನೋರ..ಅವರದ ಯಾಕ ನೀ ಸಿರಿಯಸ್ ತೊಗೊತಿ..ಅವರರ ಇನ್ನ ಎಷ್ಟ ದಿವಸ ಇರ್ತಾರ’ಅಂತ ಅದು ಇದು ಕಥಿ ಹೇಳಿದ್ಲು. ಈ ಜಗಳಾ ಬಗಿಹರಸಲಿಕ್ಕೆ ಬಂದೋಕಿದ ಹಕೀಕತ್ ಕೇಳಿದರ ’ಅಕಿನ ಗಂಡಗ ಡೈವರ್ಸ್ ಕೊಟ್ಟ ಆರ ವರ್ಷ ಆಗಿತ್ತಂತ, ಹಂತಾಕಿ ನಮಗ ಬುದ್ಧಿ ಹೇಳಲಿಕ್ಕೆ ಬಂದಿದ್ಲು. ಒಂಥರಾ ಮಸಿ ಇದ್ಲಿಗೆ ಬುದ್ಧಿ ಹೇಳಿತ್ತಂತ ಅಂತಾರಲಾ ಹಂಗ.
ಇರಲಿ ಗಂಡಾ-ಹೆಂಡತಿ ಅಂದರ ಇದ ಎಲ್ಲಾರ ಮನ್ಯಾಗೂ ಇರೋದ, ಏನೋ ನಾ ಹೇಳ್ಕೊಂಡೆ ನೀವ ಹೇಳ್ಕೊಳಂಗಿಲ್ಲಾ ಇಷ್ಟ ಫರಕ, ಅಲ್ಲಾ ಹಂಗ ’ಗ೦ಡ ಹೆ೦ಡಿರ ಜಗಳ ಉ೦ಡು ಮಲಗೋ ತನಕ’ ಅಂತ ಗೊತ್ತದಲಾ. ಹಿಂಗಾಗಿ ನಮ್ಮ ಸಂಸಾರ ಇವತ್ತಿಗೂ ಸುಖವಾಗಿ ನಡದದ.
ಇನ್ನ ನೀವ ಇಷ್ಟೋತನಕ ಏನ ನಮ್ಮ ಮನಿ ಪುರಾಣಾ ಕೇಳಿದರಲಾ ಇದರಾಗ ಇಪ್ಪತ್ತ-ಇಪ್ಪತ್ತೈದ ಗಾದೆ ಮಾತ ಇದ್ವು, ಎಲ್ಲಾ ಜೀವನದಾಗ ಉಪಯೋಗ ಆಗೋವ ಮತ್ತ. ಹಂಗ ಸಂದರ್ಭ ಸಹಿತ ಅವನ್ನ ಹೆಂಗ ಉಪಯೋಗಿಸಬೇಕು ಅಂತ ಅಗದಿ ಅಚ್ಚ ಕನ್ನಡದಾಗ ಬರದೇನಿ.
ನಿತ್ಯ ಜೀವನದಾಗ ಕನ್ನಡ, ಕನ್ನಡದ ಗಾದೆ ಮಾತ ಉಪಯೋಗ ಮಾಡ್ರಿ ಅಂದ್ರ ನಮ್ಮ ಕನ್ನಡ ರಾಜ್ಯೋತ್ಸವಕ್ಕ ಒಂದ ಕಳೆ ಬರತದ.
ಅಲ್ಲಾ..’ವೇದ ಸುಳ್ಳಾದರು ಗಾದೆ ಸುಳ್ಳ ಅಲ್ಲಾ ಅಂತಾರ’….ಮರಿ ಬ್ಯಾಡರಿ ಮತ್ತ.
ತಮ್ಮ ಕೃತಿ ಚನ್ನಾಗಿ ಮೂಡಿ ಬಂದಿದೆ ತಮ್ಮ ಗಾದಿ ಮಾತು ಸಂಪೂರ್ಣ ಕುಟುಂಬದ ವಿಷಯ ಚರ್ಚೆ ಚೆನ್ನಾಗಿ ಹೊರಹೊಮ್ಮಿದೆ ಸರ ತುಂಬಾ ಧನ್ಯವಾದಗಳು
ನಾ ಇಂಗ್ಲಿಷ್ ನ್ಯಾಗ it’s to good ಅಂತ ಕಮೆಂಟ್ಬ ಬರಿಬೇಕು ಅನಕೊಂಡಿದ್ದೆ. ಆದರ ನೀವು ಅದಕ್ಕೊಂದು ಗಾದೆಮಾತ “ರಾತ್ರೆಲ್ಲಾ ರಾಮಾಯಣ ಕೇಳಿ ಸೀತಾ ರಾಮಗ… ಗಾದಿ ಹಾಕಿರಿ ಅನ್ನೋದಕ್ಕ ಕನ್ನಡದಾಗ ಬರದೆ
“ನಾವ ಅಂತೂ ಸರ್ಕಾರಿ ಕನ್ನಡ ಸಾಲ್ಯಾಗ ಕಲತೋರ, ಬಾಯಿ ತಗದರ ಅಗದಿ ಚೊಕ್ಕ ಹುಬ್ಬಳ್ಳಿ ಭಾಷಾದಾಗ ಮಾತಾಡೊರ. ಇನ್ನ ನಮಗ ರಾಜ್ಯೋತ್ಸವ ಇದ್ದಾಗಿಷ್ಟ ಕನ್ನಡ ನೆನಪಾಗಂಗಿಲ್ಲಾ, ಇದ ನಮಗ ದಿನಂ ಪ್ರತಿ ಇರೋ ’ನಿತ್ಯೋತ್ಸವ’…
ಮ್ಯಾಲಿಂದ ಪ್ಯಾರಾ ನನಗೂ ಅನ್ವಯಸ್ತದ.
ಛಲೋ ಅನಸ್ತು…