ನಾ ಹೇಳ್ತೇನಿ ಇದ ನನ್ನ ವಯಸ್ಸಿನ ಗಂಡ ಹುಡುಗರಿಗೆ ಅದರಾಗೂ ಗಂಡಂದರಿಗೆ ಇರೋ ಯುನಿವರ್ಸಲ ಪ್ರಾಬ್ಲೇಮ್. ಈಗ ನಾವು ಒಂದ ಹದಿನೈದ-ಇಪ್ಪತ್ತ ವರ್ಷದಿಂದ ಸಂಸಾರ ನಡಸಿಗೊತ ಹೊಂಟಿರ್ತೇವಿ, ಇತ್ತಲಾಗ ನಮಗ ಒಂದ- ಎರಡ ಮಕ್ಕಳಾಗಿ ಅವು ನಮ್ಮ ಭುಜದ ಲೇವಲಗೆ ಬೆಳದಿರ್ತಾವ, ಅವನ್ನ ನೋಡಿದಾಗೊಮ್ಮೆ ಅವುಕರ ತಾಯಿಗೊಳಿಗೆ ಮಕ್ಕಳ ಎದಿ ಉದ್ದ ಬೆಳದಾವ ಅಂತ ಹೆಮ್ಮೆ ಅನಸ್ತದ, ನಮ್ಮಂತಾ ಅಪ್ಪಂದರಿಗೆ ’ಯಪ್ಪಾ ಮಗಾ ಎಷ್ಟ ಎತ್ತರಾದ, ಅವನ ಚಪ್ಪಲ್ಲ್ ನಮ್ಮ ಚಪ್ಪಲ್ ಸೇಮ್ ಸೈಜ್, ಅವಂದು ನಂಬದು ೮೦-೮೫ ಅಂಡರವೇರ್ ಸೈಜ್’ಅಂತ ನಮಗರ ಸಂಕಟ ಆಗ್ತಿರ್ತದ. ಅಂದರ ನಮಗ ಎದಿ ಉದ್ದ ಮಗನ ನೋಡಿದಾಗೊಮ್ಮೆ ಸೈಕಾಲಾಜಿಕಲಿ ವಯಸ್ಸಾಗಲಿಕತ್ತದ ಅಂತ ರಿಮೈಂಡ ಮಾಡಿದಂಗ ಆಗ್ತದ, ಅಲ್ಲಾ ಹಂಗ ಇದರ ಬಗ್ಗೆ ಡೀಪ್ ವಿಚಾರ ಮಾಡಿದರ ಡಿಪ್ರೇಶನ್ನೂ ಆಗ್ತದ ಆ ಮಾತ ಬ್ಯಾರೆ.
ನಾವು ನೋಡಿದರ ನಮ್ಮಷ್ಟಕ್ಕ ನಾವ ಮನಸ್ಸಿನಾಗ ಇನ್ನೂ young and energitic ಇದ್ದೇವಿ ಅಂತ ತಿಳ್ಕೊಂಡಿರ್ತೇವಿ, ಅಲ್ಲಾ ಹಂಗ ಇದ್ದೇವಿನೂ ಬಿಡ್ರಿ. ಇವತ್ತೂ ಯಾವದರ ಹುಡಗಿ ಎದರಿಗೆ ಬಂದರ ನಾವ ಹೆಂಡ್ತಿ ಜೊತಿ ಇದ್ದರು ಕಣ್ಣ ತಪ್ಪಿಸಿ ಆ ಹುಡಗಿ ಮ್ಯಾಲೆ ಒಂದ ಸರತೆ ಕಣ್ಣ ಹಾಯಿಸ್ತೇವಿ. ಹಂಗ ಆ ಹುಡಗಿ ಭಾಳ ಟ್ರೇಂಡಿ ಇದ್ದ ಮ್ಯಾಲೆ ಸ್ಲಿವ್ ಲೆಸ್, ಕೆಳಗ ಶಾರ್ಟ್ ಹಾಕೊಂಡಿದ್ಲು, ನಾವ ಅಕಿನ್ನ ಕಣ್ಣ ಕಿಸದ ನೋಡಿದ್ದನ್ನ ನಮ್ಮ ಹೆಂಡ್ತಿನೂ ನೋಡಿದ್ಲು ಅಂತ ನಮಗ ಗೊತ್ತಾದರ
“ಏನ ಕಾಲ ಬಂತವಾ, ಏನ ಡ್ರೇಸ್ಸಿಂಗ ಮಾಡ್ತಾರ ಈಗೀನ ಹುಡಿಗ್ಯಾರು ಏನ್ತಾನ” ಅಂತ ಅಗದಿ ಏನ ಬರೇ ಕಾಲ ಇಷ್ಟ ಕೆಟ್ಟಹೋಗೆದ ನಾವೇನ ಕೆಟ್ಟಿಲ್ಲಾ ಅನ್ನೋರಗತೆ ಹೆಂಡ್ತಿ ಮುಂದ ಅಂದ ಕಡಿಕೆ ಅಕಿ ಕಡೆ
“ಅಯ್ಯ..ನೀವೇನ ಭಾಳ ಸುಂಸ್ಕೃತರು, ಅಗದಿ ಸಾಕ್ಷಾತ ರಾಮಚಂದ್ರನ್ನ ವಂಶಸ್ಥರ ನೋಡರಿ…..ಅವಕ್ಕ ಬುದ್ಧಿ ಇಲ್ಲಾ ಅಂದರ ನಿಮಗೇನ ಧಾಡಿ, ನಿಮ್ಮಷ್ಟಕ್ಕ ನೀವ ಮುಂದ ನೋಡಿ ಗಾಡಿ ಹೋಡಿರಿ, ಮೊದ್ಲ ಸೋಡಾ ಗ್ಲಾಸ್ ಬಂದದ” ಅಂತ ಬೈಸ್ಗೋತೇವಿ.
ಅಲ್ಲಾ ಇದ ನಲವತ್ತೈದರ ಆಸ ಪಾಸಿನ ಎಲ್ಲಾ ಗಂಡಂದರ ಹಣೇಬರಹ. ಇತ್ತಲಾಗ ಯುವಕರು ಅಲ್ಲಾ ಮುದಕರು ಅಲ್ಲಾ. ಕನಸ ಬೀಳೊದ ಬಿಡಂಗಿಲ್ಲಾ ಆದರ ಅದ ನನಸ ಆಗಂಗಿಲ್ಲಾ, ಹಂಗ ನನಸ ಆಗೊ ಹಂಗ ಇದ್ದರು ಅದಕ್ಕ ಹೆಂಡ್ತಿ ಬಿಡಂಗಿಲ್ಲಾ ಆ ಮಾತ ಬ್ಯಾರೆ.
ಈಗ ನಾ ಹೇಳಲಿಕತ್ತಿದ ವಿಷಯನೂ ಈ ವಯಸ್ಸಿಗೆ ಸಂಬಂಧ ಪಟ್ಟಿದ್ದ.
ಅದೇನಂದರ ನಮ್ಮ ಮನಿ ಆಜು ಬಾಜು ಒಂದ ಮೂರ ನಾಲ್ಕ ಮಂದಿ ಹುಡಿಗ್ಯಾರ ಇದ್ದಾರ, ಅಗದಿ ೨೦-೨೨ ವಯಸ್ಸಿನವರ ಅನ್ರಿ. ಅಲ್ಲಾ ಪಾಪ ಅಗದಿ ಛಲೋ ಸಂಪ್ರದಾಯಸ್ಥ ಮನೆತನದ್ವ ಬಿಡ್ರಿ, ತಾವ ಮದರಂಗಿ ಹಚ್ಚಬೇಕಾರ ನನ್ನ ಮಗಳನ ಕರದ ಮದರಂಗಿ ಹಚ್ಚತಾವ, ತಾವ ಪಾನಿ ಪುರಿ ತಿನ್ನಬೇಕಾರ ನನ್ನ ಮಗಳಿಗೂ ಕೊಡಸ್ತಾವ….ನನ್ನ ಮಗಳು ಅವರಿಗೆ ಭಾಳ ಹಚಗೊಂಡಾಳ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ. ಇಲ್ಲಿ ತನಕಾ ಏನ ಸಮಸ್ಯೆ ಇಲ್ಲಾ ಅನ್ನರಿ…ಆದರ ಮುಂದಿನ ಕಥಿ ಕೇಳ್ರಿ ಇಲ್ಲೆ…
ಈ ಹುಡಿಗ್ಯಾರು ನನ್ನ ಹೆಂಡ್ತಿ ಕಂಡರ ಅಕಿಗೆ
’ಅಕ್ಕಾ ಹೆಂಗ ಇದ್ದಿ, ಅಕ್ಕಾ ಇವತ್ತ ತಿಂಡಿ ಏನ ಮಾಡಿದ್ದಿ…’ ಅಂತೇಲ್ಲಾ ಮಾತಾಡಸ್ತಾರ..ಹೋಗಲಿ ನಂಗ ಇದಕ್ಕು ಆಬ್ಜೇಕ್ಶನ್ ಇಲ್ಲಾ, ಪಾಪ ಅವರಿಗೆ ನನ್ನ ಹೆಂಡ್ತಿ ’ಆಂಟಿ’ ಹಂಗ ಕಂಡರೂ ಅಕ್ಕ ಅನಬೇಕ ಅನಸ್ತದ ಅನ್ನಲಿ. ಫೈನ್….ಅದು ಅವರ ಚ್ವೈಸ.. ಆದರ ಅಕಸ್ಮಾತ ನಾ ಯಾವಾಗರ ಕಂಡರ
’ಆರಾಮ್ ಇದ್ದಿ ಅಣ್ಣಾ….ಡ್ಯೂಟಿ ಮುಗಿತ್ ಅಣ್ಣಾ’ ಅಂತಾರ…
ಸಮಸ್ಯೆ ಸ್ಟಾರ್ಟ ಆಗೋದ ಇಲ್ಲಿಂದ.
ನಾ ಸಂಬಂಧಗಳಿಗೆ ಭಾಳ ಕಿಮ್ಮತ್ತ ಕೊಡೊ ಮನಷ್ಯಾ ಮತ್ತ ನಾ ಅದರ ಬಗ್ಗೆ ಭಾಳ ಕ್ಲೀಯರ್ ಇದ್ದೊಂವಾ. ಒಮ್ಮೆ ನಾ ಒಬ್ಬರನ ’ಹಿಂಗ’ ಅಂತ ಹಚಗೊಂಡರ ಜೀವನ ಪರ್ಯಂತ ಅದನ್ನ ಮೆಂಟೇನ್ ಮಾಡೋಂವಾ, ಅಲ್ಲಾ ನೀವು ಕೇಳ್ರಿ ಬೇಕಾರ ನನ್ನ ಹೆಂಡ್ತಿಗೆ ಹದಿನೆಂಟ ವರ್ಷದಿಂದ ಅಕಿನ್ನ ’ಹೆಂಡ್ತಿ’ ಅಂತ ಹಚಗೊಂಡೇನಿ ಇವತ್ತೀಗೂ ’ಹೆಂಡ್ತಿಗತೆ’ ಮೆಂಟೇನ್ ಮಾಡ್ಕೊತ ಹೊಂಟೆನಿ..despite of all odds.
ಇನ್ನ ಹಂತದರಾಗ ಈ ಹುಡಿಗ್ಯಾರ ನಂಗ ಅಣ್ಣಾ ಅಂತ ಕರದರ ನಂಗ ಭಾಳ ಸಿಟ್ಟ ಬರ್ತದ.
ಅಲ್ಲಾ, ನನ್ನ ಹೆಂಡ್ತಿಗೆ ಅಕ್ಕಾ ಅಂತ ಕರಿತಾರ…ok..no problem
ಇನ್ನ ನನ್ನ ಹೆಂಡ್ತಿಗೆ ಅಕ್ಕಾ ಅಂತ ಕರದ ಮ್ಯಾಲೆ ನಂಗ ಯಾಕ ಅಣ್ಣಾ ಅಂತ ಕರಿತೀರಿ..ಮಾಮಾ ಅಂತ ಕರದರ ಏನ ಗಂಟ ಹೋಗ್ತದ?
ಹಂಗ ನನ್ನ ಹೆಂಡ್ತಿಗೆ ತಂಗೆಂದರಿಲ್ಲಾ, ಹಿಂಗಾಗಿ ನನಗ ಸಾಲಿಗಳ ಇಲ್ಲಾ, ಅದಕ್ಕ ಅವರ ನನ್ನ ಹೆಂಡ್ತಿಗೆ ಅಕ್ಕಾ ಅಂತ ಕರದರ ನಾನು ಒಂದ ಸ್ವಲ್ಪ ಖುಷ್ ಆಗ್ತೇನಿ ಇಷ್ಟ..ಅದರಾಗ ತಪ್ಪೇನ್? ಅಲ್ಲಾ ನಾ ಹೇಳೋದೇನ ಅಂದರ
’ be clear, ಒಂದು ನನ್ನ ಹೆಂಡ್ತಿಗೆ ಅಕ್ಕಾ ಅಂತರ ಕರೀರಿ ಇಲ್ಲಾ ಹೋಗಲಿ ನನಗ ಅಣ್ಣಾ ಅಂತರ ಕರಿರಿ’.
ಇನ್ನ ಹಿಂತಾ ಕನ್ಫ್ಯೂಸನ ಒಳಗ ನನ್ನ ಮಗಳ ಆ ಹುಡಿಗ್ಯಾರಿಗೆ ಅಕ್ಕಾ ಅಂತ ಕರೀತಾಳ, ಮ್ಯಾಲೆ ಆ ಹುಡಗ್ಯಾರ ನಮ್ಮವ್ವಗ ಅಜ್ಜಿ ಅಂತ ಕರಿತಾವ. ಏನ್ಮಾಡ್ತೀರಿ? ಇನ್ನ ಇದರಾಗ ಯಾರು ಯಾರಿಗೆ ಏನ ಆಗಬೇಕು ಆ ತಾಯಿ ಬನಶಂಕರಿಗೆ ಗೊತ್ತ.
ಇನ್ನೊಂದ ಮಜಾ ಅಂದರ ಇತ್ತಿತ್ತಲಾಗ ಫೇಸಬುಕ್ಕಿನಾಗ ಒಂದ ಹೊಸಾ ’ಅಕ್ಕಾ’ ಅಂತ ಟ್ರೆಂಡ ನಡದದ. ನನ್ನ ವಾರಗಿದವರು ಅಥವಾ ನನ್ನಕಿಂತ ಸಣ್ಣೋರು ತಮ್ಮಕಿಂತ ಸ್ವಲ್ಪ ದೊಡ್ಡ ವಯಸ್ಸಿನ ಹೆಣ್ಣಮಕ್ಕಳ ಜೊತಿ ಫೇಸಬುಕ್ಕಿನಾಗ ಫ್ರೇಂಡ್ ಇದ್ದರ ಅವರಿಗೆ ’ಅಕ್ಕಾ..ಅಕ್ಕಾ..’ ಅಂತ ಕಮೆಂಟ್ ಮಾಡ್ತಿರ್ತಾರ..ಅಲ್ಲಾ ಹಂಗ ನಾನೂ ಒಂದಿಷ್ಟ ಮಂದಿಗೆ ಆತ್ಮೀಯತೆಯಿಂದ ಅಕ್ಕಾ ಅಂತಿರ್ತೇನಿ ಆ ಮಾತ ಬ್ಯಾರೆ.. ಆದರ ಈ ಅಕ್ಕಾ ಅಂತ ಅನ್ನೋದರಾಗ ಏನರ ಲಾಜಿಕ್ ಇರಬೇಕ ತಡಿ ಅಂತ ಮೊನ್ನೆ ರಿಸರ್ಚ್ ಮಾಡಿದರ ಗೊತ್ತಾತ ಈ ಅಕ್ಕಾ ಅಂತ ಟ್ರೇಂಡ್ ಆಗಲಿಕತ್ತ ಅಕ್ಕಂದರಿಗೇಲ್ಲಾ ೧೮-೨೦ ವರ್ಷದ ಛಂದನ ಹೆಣ್ಣ ಮಕ್ಕಳ ಇದ್ದಾರ ಅಂತ. ಏನ್ಮಾಡ್ತೀರಿ? ಅಲ್ಲಾ, ನಮ್ಮ ಹುಡುಗರ ಹಂಗ ಸುಮ್ಮಮ್ಮನ ಯಾರಿಗರ ಅಕ್ಕಾ ಅನ್ನೋರ?
ಇಲ್ಲೇ ಅಕ್ಕಂದರ ನೋಡಿದರ ಹುಡಗ ಎಷ್ಟ ಛಲೋ ಅದ, ಗೊರ್ತಿಲ್ಲಾ ಖೂನ ಇಲ್ಲಾ, ಅಗದಿ ಹಚಕೊಂಡ ಅಕ್ಕಾ ಅಕ್ಕಾ ಅಂತ ಕರಿತದ ಅಂತ ಅನ್ಕೊಂಡಿರ್ತಾರ ಆದರ ಈ ಮಕ್ಕಳ ಆ ಅಕ್ಕನ ಮಗಳ ಮ್ಯಾಲೆ ಕಣ್ಣ ಇಟ್ಟಿರ್ತಾರ. ಅಲ್ಲಾ ಅದ ಸೋಸಿಯಲ್ ಮೀಡಿಯಾ ಕ್ರಶ್ ಬಿಡ್ರಿ. ಹಂಗ ನಂಗ ವಾರಕ್ಕ ಹತ್ತ ಹದಿನೈದ ಆಗ್ತಾವ. ಮತ್ತೊಬ್ಬಕಿ ಹೊಸಾ ಅಕ್ಕ ಸಿಕ್ಕಳಂದರ ಹಳೇ ಅಕ್ಕ ಮಾಯ ಆಗ್ತಾಳ ಆ ಮಾತ ಬ್ಯಾರೆ.
ಆದರೂ ನೀವ ಏನ ಅನ್ನರಿ ನಾವು ಈ ರಕ್ತ ಸಂಬಂಧ ಇಲ್ಲದವರಿಗೆ ಸಂಬಂಧ ಹುಡಕಿ ಏನೇನರ ಹೆಸರ ಇಟ್ಟ ಕರಿತೇವಿ ಅಲಾ ಅದ ವಿಚಿತ್ರ ಅನಸ್ತದ.
ಅಲ್ಲಾ, ಹಿಂಗ ನಾವ ಕರೇಯೋ ವಿಷಯ ಬರೇ ಅಕ್ಕ – ಅಣ್ಣಕ್ಕ ಇಷ್ಟ ಸೀಮಿತ ಇಲ್ಲಾ
ನೀವ ಯಾರರ ನಿಮ್ಮ ಫ್ರೇಂಡ್ ಮನಿಗೆ ಹೋದಾಗ ಆ ದೋಸ್ತ ತಮ್ಮ ಮಕ್ಕಳಿಗೆ ಪರಿಚಯ ಮಾಡಿ ಕೊಡ್ಬೇಕಾರ
’ಅಲ್ಲೇ..ನೋಡ ಮಾಮಾ ಬಂದಾನ…’ ಅಂತ ನಿಮಗ ಮಾಮಾ ಮಾಡ್ತಾನ. ಮಾಮಾನ ಯಾಕ ಕಾಕಾ ಯಾಕ ಅಲ್ಲಾ? ಯಾಕ ‘ಕಾಕಾ’ ಅಂದರ ಕೆಟ್ಟ, ‘ಮಾಮಾ’ ಅಂದರ ಛೋಲೊ ಏನ? ‘ಕಾಕಾ’ ಅಂತ ಆ ಮಕ್ಕಳ ಕಡೆ ಕರಿಸಿ ಅಂವಾ ನಮ್ಮ ತಮ್ಮ ಆಗೋದ ಬಿಟ್ಟ ಯಾಕ ಜಬರದಸ್ತಿ ಮಾಮಾ ಅನಿಸಿಸಿ ಅವನ ಹೆಂಡತಿಗೆ ಅಣ್ಣನ ಮಾಡಿದಾ ಅಂತ ವಿಚಾರ ಮಾಡಿರೇನ್? ಅಲ್ಲಾ ನಾ ಈ ವಿಷಯದ ಮ್ಯಾಲೆ ಒಂದ ಲೇಖನ ಕುಟ್ಟವಲಕ್ಕಿ ಬುಕ್ ಒಳಗ ಬರದೇನಿ ಬಿಡ್ರಿ..ಮತ್ತ ಅದರ ಬಗ್ಗೆ ಏನ ಹೇಳಂಗಿಲ್ಲಾ.
ಆದರ ಒಂದ ಮಾತ ನೆನಪ ಇಡ್ರಿ ನಮ್ಮ ಹಿಂದು ಸಂಸ್ಕ್ರತಿ ಪ್ರಕಾರ ನಾವ ಅಂತೂ ‘ನಮ್ಮ ಹೆಂಡತಿ ಒಬ್ಬಾಕಿನ ಬಿಟ್ಟರ ಉಳದ ಎಲ್ಲಾ ಹೆಣ್ಣ ಮಕ್ಕಳನ್ನ ತಾಯಿ ಸ್ಥಾನದಾಗ ನೋಡತೇವಿ’ ಅಂತ ಗೊತ್ತಿದ್ದ ಮ್ಯಾಲೂ ‘ಅಣ್ಣನ ಯಾಕ ಮಾಮಾ ಯಾಕ ಅಲ್ಲಾ?’ ಅಲ್ಲಾ. ಇತ್ತಿಚಿಗಂತೂ ನಾವು ಬ್ಯಾರೆಯವರನ ದೂರ ಉಳಿತು, ನಮ್ಮ ಹೆಂಡತಿನ್ನ ನಾವ ‘ಹೆಂಡತಿ ಅನ್ನೊ ದೃಷ್ಟಿ’ ಯಿಂದ ನೋಡೊದ ವಾರಕ್ಕೊಮ್ಮೆ ಇಲ್ಲಾ ಎರಡ ಸಲ.
ಇರಲಿ ನಾ ಹೇಳಿದ್ದರಾಗ ಲಾಜಿಕ್ ಅದ, ಒಂದ ಸ್ವಲ್ಪ ಡೀಪ ವಿಚಾರ ಮಾಡಿ ಯಾರಿಗರ ಕರಿಬೇಕಾರ ಹತ್ತ ಸರತೆ ವಿಚಾರ ಮಾಡಿ ಕರೀರಿ.
ಈಗ ನೋಡ್ರಿ…ನನ್ನ ಈ ಆರ್ಟಿಕಲಗೆ ಕನಿಷ್ಟ ಒಂದ ನೂರ ಹುಡಿಗ್ಯಾರರ ’ಏನ ಬರದಿ ಅಣ್ಣಾ’ ಅಂತಾರ ಹೊರತು ’ಏನ ಬರದಿ ಮಾಮಾ’ಅನ್ನಂಗಿಲ್ಲಾ. ಅಲ್ಲಾ ಮಾಮಾ ಅಂದರ ಏನ ಗಂಟ ಹೋಗ್ತದ?
Middle age blues !
Very nice sir