ಇದ ಒಂದ ಹದಿನೈದ ವರ್ಷದ ಹಿಂದಿನ ಮಾತ, ನಮ್ಮ ದೋಸ್ತ ಶಿವನಗೌಡ ಪಾಟೀಲ ಅನ್ನೋವಂದ ಲಗ್ನ ಇತ್ತ. ಹಂಗ ಅವಂಗ ಒಬ್ಬೊಂವ ತಮ್ಮ ಬ್ಯಾರೆ ಇದ್ದಾ, ಅದರಾಗ ಇವರ ಗೌಡಕಿ ಮನೆತನದವರು ಹಿಂಗಾಗಿ ಅಣ್ಣಾ-ತಮ್ಮ ಇಬ್ಬರದೂ ಒಮ್ಮೆ ಲಗ್ನಾ ಹೂಡಿದರು. ಅಣ್ಣಗ ಒಂದ ಬೊಮ್ಮನಳ್ಳಿ ಹುಡಗಿ, ತಮ್ಮಗ ಧಾರವಾಡದ ಪಾಟೀಲ ಅನ್ನೋ ಜಮಿನ್ದಾರ ಹುಡಗಿ ಫಿಕ್ಸ ಮಾಡಿದರು.
ಸರಿ.. ಇಬ್ಬರದು ಮದುವಿ ಫಿಕ್ಸ್ ಆತು. ಇನ್ನ ಅಣ್ಣಾ ತಮ್ಮ ಇಬ್ಬರದೂ ಲಗ್ನಾ, ಎಲ್ಲಾರಿಗೂ ಅನಕೂಲ ಆಗ್ಲಿ ಅಂತ ಹುಬ್ಬಳ್ಳ್ಯಾಗ ಮದುವಿ ಇಟಗೊಂಡರು. ಲಗ್ನದ ಜವಾಬ್ದಾರಿ ಎಲ್ಲಾ ನಮ್ಮ ದೋಸ್ತನ ಮ್ಯಾಲೆ ಬಿತ್ತ.
ಇನ್ನ ಹುಬ್ಬಳ್ಳ್ಯಾಗ ಲಗ್ನಾ ಅಂದ ಮ್ಯಾಲೆ ಇಂವಾ ದೋಸ್ತರ ಮ್ಯಾಲೆ ಭಾರಾ ಹಾಕಿ
“ದೋಸ್ತ… ನಮ್ಮೂರಾಗ ಆಗಿದ್ದರ ಹಳ್ಳಿಗೆ ಹಳ್ಳಿನ ನಿಂತ ಮದ್ವಿ ಮಾಡ್ತಿತ್ತು, ಆದರ ಹುಬ್ಬಳ್ಳ್ಯಾಗ ಮದ್ವಿ ಐತಿ, ನೀವೇಲ್ಲಾ ಹೆಲ್ಪ ಮಾಡಬೇಕಲೇ” ಅಂತ ಅಂದಾ.
ನಾವು ಆತ ತೊಗೊ ದೋಸ್ತಂದ ಒಂದನೇ ಮದ್ವಿ, ನಿಂತ ಮಾಡಿದರಾತ ಅಂತ ’ರೈಟ’ ಅಂದ್ವಿ.
ಇನ್ನ ಗೌಡರ ಪೈಕಿ ಮದ್ವಿ, ಬರೋ ಜನಕ್ಕ ಏನ ಕಡಮಿ ಇರಲಿಲ್ಲಾ. ಅದರಾಗ ಇವನ ತಮ್ಮನ ಬೀಗರಂತೂ ಜಮಿನ್ದಾರ ಮನೆತನದವರ ಹಿಂಗಾಗಿ ಮದ್ವಿಗೆ ಒಂದ ೩೦೦೦ ಜನಾ ಆಗೋದ ಗ್ಯಾರಂಟೀ ಆತ. ಹಳ್ಳಿಯಿಂದ ಹತ್ತ ಇಪ್ಪತ್ತ ಟ್ರ್ಯಾಕ್ಟರ ಬರೋವ ಇದ್ವು. ಹಂಗ ನಾವೇಲ್ಲಾ ವ್ಯವಸ್ಥಾ ಪದ್ಧತ ಸೀರ ಮಾಡಿದ್ದವಿ ಬಿಡ್ರಿ.
ಕಡಿಕೆ ಮದ್ವಿ ದಿವಸ ಬಂತು ನಮ್ಮ ದೋಸ್ತ ಸೈಡಿಗೆ ಒಂದಿಬ್ಬರ ದೋಸ್ತರನ ಕರದ
’ಒಂದ ನೂರ ಪೇಜಿನ ನೋಟ ಬುಕ್ ತೊಗೊಂಡ ನಮ್ಮ ಪೈಕಿ ಆಹೇರ (cash gift) ಬರ್ಕೊಳ್ಳಿಕ್ಕೆ ಕೂಡ್ರಿ’ ಅಂತ ಹೇಳಿದಾ. ಹಂಗ ಇವನ ಪೈಕಿ ಇಬ್ಬರ ಕೂಡ ಬೇಕಿತ್ತ ಯಾಕಂದರ ಅಣ್ಣಾ ತಮ್ಮ ಇಬ್ಬರದು ಮದ್ವಿ ಆದರ ಇಂವಾ
’ಏ, ಅದೇಲ್ಲಾ ಬ್ಯಾಡ ನಾವ ಅಣ್ಣಾ ತಮ್ಮಾ ಏನ ಇನ್ನೂ ಹಿಸೆ ಆಗಿಲ್ಲಾ, ಮ್ಯಾಲೆ ತಮ್ಮನ ಲಗ್ನದ ಖರ್ಚ ನಾನ ಮಾಡಾಕ್ಕತ್ತೇನಿ, ಒಂದ ಕಡೆ ಚೇರ ಹಾಕ್ಕೊಂಡ ಕೌಂಟರ ಮಾಡ್ರಿ. ಮತ್ತ ನಮ್ಮ ಹಳ್ಳಿ ಮಂದಿಗೆ ಕೂಡಸಾಕ ಹೋಗ್ಬ್ಯಾಡ್ರಿ ಅವರೇಲ್ಲರ ಒಂದಿಷ್ಟ ರೊಕ್ಕ ಜಮಾ ಆದರ ಹುಬ್ಬಳ್ಳ್ಯಾಗ ಪಿಕ್ಚರ ನೋಡಲಿಕ್ಕೆ ಹೋಗಿ, ಎಣ್ಣಿ ಪಣ್ಣಿ ಹೊಡದ ಬರೋ ಪೈಕಿ ಅದಕ್ಕ ನೀವ ಯಾರರ ಕೂಡ್ರಿ’ ಅಂದಾ.
ನಂಗ ಈ ಟೇಬಲ ಕುರ್ಚಿ ಹಾಕ್ಕೊಂಡ ಕೌಂಟರ ತಗದ ಆಹೇರ ಬರಿಸ್ಗೊಳ್ಳೊದ ಮಜಾ ಅನಸ್ತಿತ್ತ, ಅದರಾಗ ಅಗದಿ ಬಾಯಿ ಬಿಟ್ಟ ಒದರೋರ ’ ಪಾಟೀಲರ ಪೈಕಿಯವರ ಇಲ್ಲೇ ಆಹೇರ ಬರಸರಿ’ ’ ಗೌಡರ ಪೈಕಿಯವರ ಇಲ್ಲೇ ಬರಸರಿ’ ಅಂತ ಅಗದಿ ಭಿಡೆ ಬಿಟ್ಟ ಕೇಳೋರ. ಹಂಗ ಮಂದಿನೂ ’ಪಾಟೀಲರ ಪೈಕಿ ಯಾರ ಬರ್ಕೊಳಾಕತ್ತೀರಿ’ ಅಂತ ಕೇಳಿ ಅಲ್ಲೇ ಹೋಗಿ ಆಹೇರ ಬರಿಸ್ತಿದ್ದರ ಬಿಡ್ರಿ.
ಇನ್ನ ನಮ್ಮ ದೋಸ್ತ ಹೇಳ್ಯಾನ ಅಂತ ನಾವ ಕೌಂಟರ ಓಪನ್ ಮಾಡಿ ನಮ್ಮ ಬಸ್ಯಾಗ ಅದರ ಇನಚಾರ್ಜ ಮಾಡಿ ಕೂಡಸಿದ್ವಿ, ಅತ್ತಲಾಗ ನಮ್ಮ ದೋಸ್ತನ ಬೀಗರ ಬೊಮ್ಮನಳ್ಳಿಯವರ ಒಂದ ಕೌಂಟರ, ಅವನ ತಮ್ಮನ ಪೈಕಿ ಧಾರವಾಡ ಬೀಗರ ಇದ್ದರಲಾ ಅವರ ಮಂದಿ ಜಾಸ್ತಿ ಇದ್ದಾರಂತ ನಾಲ್ಕ ಕೌಂಟರ ತಗದ ಮ್ಯಾಲೆ ಒಂದ ರಟ್ಟ ಮ್ಯಾಲೆ ’ಪಾಟೀಲರ ಆಹೇರ ಇಲ್ಲೇ ಬರಸರಿ’ ಅಂತ ಬೋರ್ಡ ಹಾಕ್ಕೊಂಡ ಕೂತರು.
ಮದ್ವಿ ಆತ, ಇನ್ನೇನ ನಮ್ಮ ದೋಸ್ತ ಊರಿಗೆ ಹೋಗಾಕ ರೆಡಿ ಆದ. ಅವರಲ್ಲೇ ನಮ್ಮಂಗ ಲಗ್ನ ಆಗೋ ಪುರಸತ್ತ ಇಲ್ಲದ ಕಂಡೇನೋ ಇಲ್ಲೊ ಅನ್ನೊಹಂಗ ಪ್ರಸ್ಥದ್ದ ವ್ಯವಸ್ಥಾ ಇರಂಗಿಲ್ಲಾ. ಊರಾಗ ದೇವರ, ದಿಂಡ್ರು ಅಂತ ವಾರ ಗಟ್ಟಲೇ ಕಾಯಸ್ತಾರ ಹಿಂಗಾಗಿ ಅಂವಾ ಅವನ ತಮ್ಮಾ ಹಳ್ಳಿಗೆ ಹೊಂಟರು.
ಒಮ್ಮಿಕ್ಕೆಲೇ ನಮ್ಮ ದೋಸ್ತ ’ಏ, ಬಸ್ಯಾ ಎಲ್ಲಿ ಇದ್ದಾನ?’ ಅಂತ ಕೇಳಿದ, ನಾವ ಆ ಬಸ್ಯಾನ ಹುಡಕ್ಯಾಡಿದರ ಅಂವಾ ಲಗೂನ ಸಿಗಲಿಲ್ಲಾ. ನಮ್ಮ ದೋಸ್ತಗ ಟೆನ್ಶನ್ ಆತ, ಯಾಕಲೆ ಅಂವಾ ಯಾಕ ಅಂತ ಕೇಳಿದರ.
’ಅಲ್ಲಲೇ ಆಹೇರ ಎಲ್ಲಾ ಅವನ ಬರಕೊಂಡಾನ, ಆ ಬುಕ್ ಬೇಕ, ರೊಕ್ಕ ಬೇಕ ಮಗನ…ಎಲ್ಲರ ಹಾಕ್ಕೊಂಡ ಹೋದನೇನ ನೋಡ’ ಅಂತ ಅಂದಾ.
’ಏ, ಬಸ್ಯಾ ಹಂತಾ ಮನಷ್ಯಾ ಅಲ್ಲಲೇ..ಇಲ್ಲೇ ಇರಬೇಕ ತಡಿ’ ಅಂತ ಹುಡಕ್ಯಾಡೋದರಾಗ ಬಸ್ಯಾ ಬಂದಾ. ಕಡಿಕೆ ಅವನ ಕಡೇದ್ದ ಆಹೇರ ಬುಕ್ ಇಸ್ಗೊಂಡ ನೋಡಿದ್ರ ನಮ್ಮ ಪಾಟೀಲ ಅಣ್ಣ ತಮ್ಮಂದರ ಹಣೇಬರಹಕ್ಕ ಕಲೇಕ್ಶನ್ ಆಗಿದ್ದ 8650.00 Rs ಒನ್ಲಿ. ಅದನ್ನ ನೋಡಿ ನಮ್ಮ ದೋಸ್ತಗ ಗಾಬರಿ ಆತ, ಅದು ಅಣ್ಣಾ ತಮ್ಮನ್ನ ನಡಕ. ಅದರಾಗ ಒಂದ ದೀಡ ಸಾವಿರ ಮಂದಿ ಇವರ ಕಡೇದವರ, ಒಬ್ಬೊಬ್ಬರ ಹತ್ತ ರೂಪಾಯಿ ಒಬ್ಬೊಬ್ಬೊಂಗ ಕೊಟ್ಟಾರಂತ ಹಿಡದರು ಕನಿಷ್ಟ 25-30 ಸಾವಿರ ರೂಪಾಯಿ ಆಗಬೇಕಿತ್ತ. ಅಲ್ಲಾ ಹಂಗ ಹತ್ತ ರೂಪಾಯಿ ಯಾರ ಗಿಫ್ಟ ಕೊಡ್ತಾರ್ರಿ, ಹೆಂತಾ ಹಳ್ಳಿ ಮಂದಿ ಅಂದರೂ ಒಂದ ಇಪ್ಪತ್ತರ ನೋಟರ ಕೊಟ್ಟಿರ್ತಾರ, ಹಂಗ ನನ್ನಂಗ ಐವತ್ತ-ನೂರು ಕೊಟ್ಟೋರು ಇರ್ತಾರ, ಆದರ ಕಲೇಕ್ಷನ ನೋಡಿದರ ಬರೇ ಎಂಟ ಸಾವಿರದ ಚಿಲ್ಲರ್ ಆಗಿತ್ತ.
ನಮ್ಮ ದೋಸ್ತಗ ಬಸ್ಯಾನ ಮ್ಯಾಲೆ ಡೌಟ ಬರಲಿಕತ್ತ.
ಅಲ್ಲಾ ಅದಕ್ಕ ಕಾರಣನೂ ಇತ್ತ ಅನ್ನರಿ ಹಿಂದಕ ನಮ್ಮ ದೋಸ್ತಂದರ ಪೈಕಿ ಲಗ್ನ ಇದ್ದಾಗೇಲ್ಲಾ ಈ ಶಿವ್ಯಾ ಮತ್ತ ಬಸ್ಯಾನ ಆಹೇರ ಬರಕೋಳಿಕ್ಕೆ ಕೂಡ್ತಿದ್ದರು. ಆವಾಗ ಈ ಮಕ್ಕಳ ಅಗದಿ ಎಂಟ್ರನ್ಸಗೆ ಟೇಬಲ್ ಹಾಕ್ಕೊಂಡ ಕೂತ ಪದ್ದತ ಸೀರ ಕಲೇಕ್ಷನ ಮಾಡಿ, ಮ್ಯಾಲೆ ಹೆಣ್ಣಿನವರ ಪೈಕಿನೂ ನಾವ ಅಂತ ಅವರ ಕಡೆದು ಆಹೇರ ತೊಗೊಂಡ ಇನ್ನೇನ ಲಗ್ನ ಮುಗಿತ ಅನ್ನೋ ಹೊತ್ತಿಗೆ ಇಬ್ಬರೂ ಕೂಡಿ ಮತ್ತೊಂದಿಷ್ಟ ದೋಸ್ತರನ ಕಟಗೊಂಡ ಹುಬ್ಬಳ್ಳಿ ಅಮೃತ ಟಾಕೀಸನಾಗ ಪಿಕ್ಚರ ನೋಡಿ ಅಲ್ಲೇ ಎದರಿಗೆ ಅಭಿಮಾನ ಬಾರ್/ರೆಸ್ಟೋರೆಂಟ್ ಒಳಗ ಊಟಾ ಹೊಡದ ಲಾಸ್ಟಿಗೆ ಬಂದ ಉಳದದ್ದ ರೊಕ್ಕಾ ಕೊಡೋರು.
“ದೋಸ್ತ ಮಸ್ತ ಕಲೇಕ್ಷನ್ ಆಗಿತ್ತ, ನೀ ಹೆಂಗಿದ್ದರು ಬ್ಯಾಚೆಲರ್ ಪಾರ್ಟಿ ಕೊಟ್ಟಿದ್ದಿಲ್ಲಾ, ನಾವ ನಿನ್ನ ರೊಕ್ಕದಾಗ ಪಾರ್ಟಿ ಮಾಡಿ ಬಂದೇವಿ” ಅಂತ ಅಗದಿ ನಿಯತ್ತಿಲೇ ಬಾಕಿ ರೊಕ್ಕಾ ಕೊಟ್ಟ ಬರ್ತಿದ್ದರು.
ಹಿಂಗ ಒಂದಲ್ಲಾ,ಎರಡಲ್ಲಾ ನಾಲ್ಕೈದ ಮದ್ವಿ ಒಳಗ ಮಾಡಿದ್ದರು.
ಹಿಂಗಾಗಿ ನಮ್ಮ ಶಿವ್ಯಾಗ ಬಸ್ಯಾನ ಮ್ಯಾಲೆ ಡೌಟ ಬಂದಿತ್ತ. ಆದರ ಪಾಪ ನಮ್ಮ ಬಸ್ಯಾ ನಿಯತ್ತಿಲೇ ರೊಕ್ಕ ಲೆಕ್ಕಾ ಇಟ್ಟಿದ್ದಾ ಆದರ ಖರೇನ ಗೌಡನ ಹಣೇಬರಹಕ್ಕ ಕಲೇಕ್ಷನ್ ಆಗಿದ್ದಿಲ್ಲಾ. ಇಂವಾ ನೋಡಿದರ ಲಕ್ಷಾನ ಗಟ್ಟಲೇ ಸಾಲಾ ಮಾಡ್ಕೊಂಡ ಲಗ್ನಾ ಮಾಡ್ಕೊಂಡಿದ್ದಾ ಒಂದ ಹತ್ತ ಪರ್ಸೆಂಟೂ ಕ್ಯಾಶ ಬರಲಿಲ್ಲಾ.
ಮುಂದ ಅವಂದ ದೇವರು ದಿಂಡ್ರು, ಪ್ರಸ್ಥಾ, ಹನಿಮೂನ ಎಲ್ಲಾ ಮುಗಿಸಿಕೊಂಡ ಒಂದ ಹದಿನೈದ ದಿವಸ ಬಿಟ್ಟ ಬಂದಾ. ನಾವ ದೋಸ್ತ ಹೊಸ್ತಾಗಿ ಹನಿಮೂನ ಮುಗಿಸಿಕೊಂಡ ಬಂದಾನ ಅವನ ಎಕ್ಸಪಿರಿಯನ್ಸ್ ಕೇಳೋಣ ತಡಿ ಅಂತ ಅವನ ಕರಸಿದ್ವಿ, ಅಂವಾ ಅದು ಇದು ಆಗಿದ್ದು ಆಗಲಾರದ್ದು ಎಲ್ಲಾ ಕಥಿ ಹೇಳಿ ಕಡಿಕೆ
’ದೋಸ್ತ ಅನ್ನಂಗ ಅವತ್ತ ನಮ್ಮ ಲಗ್ನದ ದಿವಸ ನನಗ ಆಹೇರ ಕಡಮಿ ಬಂದೈತಿ ಅಂತ ಬಸ್ಯಾನ ಮ್ಯಾಲೆ ಡೌಟ ಪಟ್ಟಿದ್ನೇಲ್ಲಾ, ಅದೇನ ಆಗೈತಿ ಅಂದರ ನನ್ನ ತಮ್ಮನ ಬೀಗರ.. ಅವರು ಪಾಟೀಲರಲಾ… ಅವರ ನಾಲ್ಕ ಕೌಂಟರ ತಗದ ನಮ್ಮ ಪೈಕಿ ಆಹೇರನೂ ’ನಾವ ಪಾಟೀಲರ ಪೈಕಿ’ ಅಂತ ಎಲ್ಲಾ ಹೊಡ್ಕೊಂಡ ಬಿಟ್ಟಾರಲೇ, ಏನಿಲ್ಲಾಂದರು ಐವತ್ತ ಅರವತ್ತ ಸಾವಿರ ಹೋತ ನೋಡ, ಹನಿಮೂನ ಖರ್ಚರ ಬರ್ತಿತ್ತ’ ಅಂತ ಮತ್ತ ಆ ಸುದ್ದಿ ತಗದ ಮರಗಿದಾ.
ನಾನ ’ಆಗಿದ್ದ ಆತ ಬಿಡ ಮಗನ ಬೀಗರ ಮನಿಗೆ ಹೋದರ ತಪ್ಪೇನಿಲ್ಲಾ, ಹೆಂಗಿದ್ದರೂ ಜಮಿನ್ದಾರ ಅದಾರ ಇವತ್ತೀಲ್ಲಾ ನಾಳೆ ಒಂದ ನಾಲ್ಕ ಎಕರೆ ನಿಮ್ಮ ತಮ್ಮಗ ಕೊಟ್ಟ ಕೊಡ್ತಾರ’ ಅಂತ ಸಮಾಧಾನ ಮಾಡಿದೆ.
ನೋಡ್ರಿ ಮತ್ತ ನಾಳೆ ನೀವೇಲ್ಲರ ಯಾರದರ ಮದ್ವಿಗೆ ಹೋದಾಗ ಕರೆಕ್ಟ ಕೇಳಿ ಆಹೇರ ಬರಸರಿ, ಇಲ್ಲಾ ಪಾಳೆ ಹಚ್ಚಿ ಹುಡಗಾ ಇಲ್ಲಾ ಹುಡಗಿ ಕೈಯಾಗ ಆಹೇರ ಕೊಟ್ಟ ಬರ್ರಿ, ಈ ನಡಕಿನವರನ ನಂಬಲಿಕ್ಕೆ ಹೋಗಬ್ಯಾಡ್ರಿ. ಯಾರ ಹೆಂಗ ಇರ್ತಾರ ಹೇಳಲಿಕ್ಕೆ ಬರಂಗಿಲ್ಲಾ.