ನಿನ್ನೆ ನಮ್ಮ ದೀಪ್ಯಾ ಭೆಟ್ಟಿ ಆಗಿದ್ದಾ,
“ಮತ್ತೇನಲೇ…ಎಲ್ಲೇ ಕಾಣವಲ್ಲಿ, ನಮ್ಮ ಏರಿಯಾ ಬಿಟ್ಟ ಹೋದಮ್ಯಾಲೆ ನಮನ್ನೇಲ್ಲಾ ಮರತ ಬಿಟ್ಟಿ” ಅಂತ ನಾ ಅಂದರ
“ಏ….ನಿಮ್ಮ ಏರಿಯಾದ್ದ ಹೆಸರ ಕೇಳಿದರ ನನ್ನ ಹೆಂಡ್ತಿ ಮೂಗ ಮುಚಗೋತಾಳ ಮಾರಾಯ, ಹಿಂಗಾಗಿ ನಾವ ಅತ್ತಲಾಗ ಹಾಯಂಗೇಲಾ” ಅಂದಾ.
ಅಲ್ಲಾ, ಅಂವಾ ಅಂದದ್ದ ಕೇಳಿದರ ನಾವೇನ ತಿಪ್ಪಿಗುಂಡ್ಯಾಗ ಇದ್ದೊರಗತೆ ಮಾತಾಡ್ತಾನ.
ಹಂಗ ಅವನ ಹೆಂಡ್ತಿ ಅನ್ನಲಿಕ್ಕೆ ಕಾರಣ ಇತ್ತ, ಅಕಿ ಮೊದ್ಲಿಂದ ವಿಚಿತ್ರ ಗಿರಾಕಿ, ಅಕಿಗೆ ಏನೋ ಸಿಕ್ಸ್ಥ ಸೆನ್ಸ್ ಭಾರಿ ಅದ ಅಂತ ಹಿಂಗಾಗಿ ಈ ಮಗಾ
” ಏ..ನನ್ನ ಹೆಂಡ್ತಿದ sixth sense ಭಾರಿ ಅದ..” ಅಂತ ಹಗಲಗಲಾ ಅಂತಿದ್ದಾ
” ಲೇ..ಹುಚ್ಚಾ ಯಾ ಹೆಂಡಂದರಿಗೂ ಸಿಕ್ಸ್ಥ ಸೆನ್ಸ್ ಇರಂಗಿಲ್ಲಾ ಅದೇಲ್ಲಾ ನಾನ್ಸೆನ್ಸ್” ಅಂತ ಅಂದರ
“ಏ ಅಕಿ ಹೇಳಿದ್ದ ನಾನ್ಸೆನ್ಸ್ ಇರವಲ್ತಾಕಪಾ ಆದರ ಅದು ಒಂದ ಸೆನ್ಸ್ ಹೌದಲ್ಲ” ಅಂತಿದ್ದಾ.
ಇನ್ನ ಅಕಿ ನಮ್ಮ ಏರಿಯಾದಾಗಿನ ಮನಿ ಕಿತಗೊಂಡ ಹೋಗಲಿಕ್ಕೂ ಅಕಿ ಸಿಕ್ಸ್ಥ ಸೆನ್ಸ್ ಕಾರಣ..ಅದರ ಕಥಿ ಕೇಳ್ರಿಲ್ಲೆ.
ಅಂವಾ ನಮ್ಮ ಏರಿಯಾದಾಗ ಒಂದ ಮನಿ ನೋಡ ಅಂದಾ ನಾ ತಲಿಕೆಡಸಿಕೊಂಡ ಒಂದ ಹೊಸಾ ಮನಿ ಹುಡಕಿ ಕೊಟ್ಟಿದ್ದೆ. ಆದರ ಅಕಿ ತಲ್ಯಾಗ ಏನೋ ಕೊರಿಲಿಕತ್ತಿತ್ತ. ಎಲ್ಲಾರೂ ಮನಿ ಭಾರಿ ಅದ ಅಂದರ ಅಕಿ ನಂಗ
“ಅಣ್ಣಾ…ನಂಗ್ಯಾಕೋ ಈ ಮನ್ಯಾಗ ಏನೋ ಸಮಸ್ಯೆ ಅದ ಅಂತ ಸಿಕ್ಸ್ಥ ಸೆನ್ಸ್ ಹೇಳ್ತದ…ಏನಂತ ಗೊತ್ತಾಗವಲ್ತ” ಅಂತ ಶುರು ಹಚ್ಚಿದ್ಲು. ನಾ ತಲಿ ಕೆಟ್ಟ
“ಏ, ನಮ್ಮವ್ವ, ನಾ ಕೆಲಸಾ-ಬೊಗಸಿ ಬಿಟ್ಟ ಮನಿ ಹುಡಕಿ ಕೊಟ್ಟೇನಿ…ನೀ ನಿನ್ನ ಸಿಕ್ಸ್ಥ ಸೆನ್ಸ ನಿನ್ನ ಕಡೇನ ಇಟ್ಗೊ…” ಅಂತ ಬೈದಿದ್ದೆ. ಅದರ ಅಕಿ ತಲ್ಯಾಗಿನ ಸಿಕ್ಸ್ಥ ಸೆನ್ಸ್ ಒಳಗ ಈ ಮನಿಗೆ ಏನೋ ಪ್ರಾಬ್ಲೇಮ ಅದ ಅಂತ ಕಾಡತಿತ್ತ. ಮುಂದ ಮಳೆಗಾಲದಾಗ ಒಮ್ಮಿಂದೊಮ್ಮಿಲೇ ಅವರ ಮನಿ ಮುಂದ ಕೆಟ್ಟ ನೀರ ಹರದ ಗಬ್ಬ ವಾಸನಿ ಬರಲಿಕತ್ತ. ಅದೇನ ಆಗಿತ್ತಂದರ ಅವರ ಮನಿ ಮುಂದಿಂದ ಚೇಂಬರ್ ಲೈನ ಎಲ್ಲೋ ಬ್ಲಾಕ್ ಆಗಿ ಲೀಕ ಆಗಿ ಹರಿಲಿಕತ್ತಿತ್ತ. ಅವರ ಮನಿ ಲೈನೇಲ್ಲಾ ನಾರಲಿಕತ್ತ. ಕಡಿಕೆ ಕಾರ್ಪೋರೇಶನ್ನವರಿಗೆ ಕಂಪ್ಲೇಂಟ್ ಕೊಟ್ಟ ಅವರ ಚೆಂಬರ್ ಬ್ಲಾಕ್ ಎಲ್ಲೇ ಆಗೇದ ಅಂತ ಹುಡಕಲಿಕತ್ತರು. ಹಂಗ ನದಿ ಮೂಲ, ಹೆಣ್ಣಿನ ಮೂಲ ಹುಡಕಬಹುದು ಆದರ ಈ ಸುಡಗಾಡ ಡ್ರೇನೇಜ್ ಲೀಕೇಜದ ಮೂಲ ಹುಡ್ಕೋದ ಅಷ್ಟ ಸರಳ ಇಲ್ಲಾ. ಕಡಿಕೆ ಆ ಬ್ಲಾಕ್ ಆಗಿದ್ದ ಕರೆಕ್ಟ ಇಕಿ ಬೆಡ ರೂಮ ಬುಡಕ ಎರಡ ಫೂಟ ನೆಲದಾಗ ಸಿಕ್ಕತು. ಆ ಮನಿ ಕಟ್ಟ ಬೇಕಾರ ಇಂಜೀನಿಯರ ಇವರ ಮನಿನ ಡ್ರೇನೇಜ ಚೇಂಬರ ಮ್ಯಾಲೆ ಕಟ್ಟಿಬಿಟ್ಟಿದ್ದಾ. ಅದ ಇವರ ಶ್ರಾವಣಮಾಸದಾಗ ನಾಲ್ಕ ಮಂದಿ ಕರಿಸಿ ಪಡ್ಲಗಿ ತುಂಬಿಸಿ ಕಡ್ಲಿಬ್ಯಾಳಿ ಕಡಬ ಮಾಡಿ ತಿಂದಿದ್ದ ದಿವಸ ಚೇಂಬರ್ ಬ್ಲಾಕ್ ಆಗಿ ಮನಿ ಬುಡಕ ಡ್ತೇನೇಜ ನೀರಿಂದ ಸೆಲಿ ಹತ್ತಿ ಘಮಾ ಘಾಮಾ ನೀರ ಹೊರಗ ಬರಲಿಕತ್ತ.
ಇದ ನಮ್ಮ ಪ್ರಾಬ್ಲೇಮ್ ಅಲ್ಲಾ ಮನಿನ ಚೇಂಬರ್ ಮ್ಯಾಲೆ ಕಟ್ಟಿರಿ, ನೀವ ರಿಪೇರಿ ಮಾಡಿಸ್ಗೋರಿ, ಲಕ್ಷ ಗಟ್ಟಲೇ ಖರ್ಚ ಆಗ್ತದ ಅಂತ ಕಾರ್ಪೋರೇಶನ್ನವರ ಕೈ ಎತ್ತಿದರು. ಮಾಲಕ ತಲಿ ಹಿಡ್ಕೊಂಡ ಕೂತಾ. ಇತ್ತಲಾಗ ಇಕಿ ತಲಿ ಕೆಟ್ಟ ನಂಗ
’ನಾ ಹೇಳಿದ್ನಿಲ್ಲ ಅಣ್ಣಾ, ನನ್ನ ಸಿಕ್ಸ್ಥ ಸೆನ್ಸ್ ಹೇಳ್ತದ ಈ ಮನ್ಯಾಗ ಏನೋ ಪ್ರಾಬ್ಲೇಮ್ ಅದ ಅಂತ’ ಅಂತ ಬೈದ ಮನಿ ಚೇಂಜ್ ಮಾಡಿ ಹೋದ್ಲು.
ಚೇಂಬರ್ ತುಂಬಿದ್ದರಾಗ ಅಕಿದ ಸಿಕ್ಸ್ಥ ಸೆನ್ಸ್ ಎಲ್ಲಿದ ಬಂತ ಅಂತೇನಿ, ಸಿಕ್ಸ್ಥ ಸೆನ್ಸಲೇ ಎಂದರ ಚೇಂಬರ ತುಂಬತದ?
ಅಕಿ ಸಿಕ್ಸ್ಥ ಸೆನ್ಸದ್ದ ಇನ್ನೊಂದಿಷ್ಟ ಕಥಿ ಕೇಳ್ರಿ ಇಲ್ಲೇ …..
ಒಂದ ಸರತೆ ಅವರತ್ತಿ ಕುಕ್ಕರ್ ಇಟ್ಟಿದ್ದರು, ಕುಕ್ಕರ ಒಂದನೇ ಸೀಟಿ ಹೊಡಿತ ಇಕಿ ಅದರ ಆವಾಜ ಕೇಳಿ
’ಯಾಕೋ ಕುಕ್ಕರ ಸೀಟಿ ಆವಾಜ ಬ್ಯಾರೆ ಬರಲಿಕತ್ತದ, ನನ್ನ ಸಿಕ್ಸ್ಥ ಸೆನ್ಸ್ ಹೇಳ್ತದ ನೀವು ಏನೋ ಕುಕ್ಕರ ಇಡಬೇಕಾರ ಗದ್ಲಾ ಮಾಡಿರಿ” ಅಂತ ಅಂದ್ಲು. ಅವರತ್ತಿ ’ನೀನು ನಿನ್ನ ಸಿಕ್ಸ್ಥ ಸೆನ್ಸ್ ಎಲ್ಲರ ಹಾಳ ಗುಂಡಿ ಬೀಳರಿ’ ಅಂತ ಅಕಿನ್ನ ಸಿರಿಯಸ ತೊಗೊಳಿಲ್ಲಾ. ಆದರ ಅಕಿ ಸುಮ್ಮನ ಕೂಡಲಿಲ್ಲಾ ಅವರತ್ತಿಗೆ, ನೀವು ಕುಕ್ಕರನಾಗ ತಳದಾಗ ನೀರ ಹಾಕಿರೋ ಇಲ್ಲೋ? ರಬ್ಬರ ಗಾಸ್ಕೇಟ್ ಕರೆಕ್ಟ ಹಾಕಿರೋ ಇಲ್ಲೋ? ಅಂತೇಲ್ಲಾ ಕೇಳಲಿಕತ್ಲು. ಅವರತ್ತಿ ತಲಿ ಕೆಟ್ಟ
“ಏ ನಾ ಕುಕ್ಕರ ಹುಟ್ಟೊಕಿಂತ ಮೊದ್ಲ ಹುಟ್ಟಿದೋಕಿ, ನನಗ ಕುಕ್ಕರ ಇಡೋದ ಹೇಳ್ತಿ ಏನ್, ಬಾಯಿ ಮುಚಗೊಂಡ ಹೋಗ” ಅಂತ ಜೋರ ಮಾಡೋದಕ್ಕ ಅವರ ಮನಿ ಕುಕ್ಕರ್ ಢಬ್ಬ್ ಅಂತ ಬ್ಲಾಸ್ಟ್ ಆಗಿ ಅರ್ಧಾ ಮರ್ಧಾ ಆಗಿದ್ದ ಅನ್ನಾ ಮನಿ ತುಂಬ ಚೆಲ್ಲಿ ಕುಕ್ಕರ ಮುಚ್ಚಳ ಒಂದ ದಿಕ್ಕ, ಸೀಟಿ ಒಂದ ದಿಕ್ಕ, ಕುಕ್ಕರನಾಗಿನ ಡಬ್ಬಿ ಒಂದ ದಿಕ್ಕ….ಕಡಿಕೆ ಅವರತ್ತಿ ಒಂದ ದಿಕ್ಕ… ಇಕಿ ಒಂದ ದಿಕ್ಕ…. ಪುಣ್ಯಾ ಯಾರಿಗೆ ಏನೂ ಆಗಲಿಲ್ಲಾ.
“ನಾ ಹೇಳಿದ್ನಿಲ್ಲ..ನನ್ನ ಸಿಕ್ಸ್ಥ ಸೆನ್ಸ್ ಹೇಳಲಿಕತ್ತದ ನೀವ ಏನೋ ಗಡಬಡ ಮಾಡಿರಿ” ಅಂತ ಇಕಿ ಅವರತ್ತಿಗೆ ಶುರು ಮಾಡಿದ್ಲು. ಪಾಪ ಅವರತ್ತಿ ಕುಕ್ಕರ್ ಬ್ಲಾಸ್ಟ ಆಗಿದ್ದ ಸಪ್ಪಳಕ್ಕ ಹೆದರಿ ಕುಸದ ಕೂತ ಬಿಟ್ಟಿದ್ದರು. ಅದೇನ ಆಗಿತ್ತಂದರ, ಮ್ಯಾಲಿನ ಡಬ್ಯಾಗಿನ ಅನ್ನ ಅಕ್ಕಿ ಜಾಸ್ತಿ ಆಗಿದ್ದಕ್ಕ ಒಂದನೇ ಸೀಟಿಗೆ ಉಕ್ಕಿ ಒಂದ ಎರಡ ಅಗಳ ಕುಕ್ಕರ ಸೀಟಿ ಒಳಗ ಸಿಕ್ಕೊಂಡಿದ್ವು, ಮುಂದ ಸೀಟಿ ಬ್ಲಾಕ್ ಆಗಿ ಪ್ರೇಶರ್ ಹೊಗಲಿಕ್ಕೆ ದಾರಿ ಸಿಗದ ಇಡಿ ಕುಕ್ಕರ್ ಬ್ಲಾಸ್ಟ ಆಗಿತ್ತ.
ಹಿಂತಾವೇಲ್ಲಾ ಇಕಿ ಸಿಕ್ಸ್ಥ ಸೆನ್ಸ್ ಹೇಳ್ತಿದ್ದವು.
ಅಲ್ಲಾ ಸಿಕ್ಸ್ಥ ಸೆನ್ಸ್ ಅಂದರ perception, intuition…ಏನೋ ಆಗ್ತದ ಅಂತ ಅನಸೋದ ಆದರ ಏನಾಗ್ತದ ಅಂತ ಗೊತ್ತಾಗಂಗಿಲ್ಲಾ. ಹಿಂಗಾಗಿ ನಮ್ಮ ದೀಪ್ಯಾ ಹೇಳೊಂವಾ ’ಏ ನನ್ನ ಹೆಂಡ್ತಿಗೆ ಸಿಕ್ಸ್ಥ ಸೆನ್ಸ್ ಭಾರಿ ಅದ’ ಅಂತ.
ಅಂವಾ ಹೇಳಿದ್ದ ಇನ್ನೊಂದಿ sixth sense examples ಕೇಳ್ರಿ …
ಇಕಿ ಲಗ್ನಾಗಿ ಒಂದ ತಿಂಗಳಕ್ಕ “ರ್ರಿ…ನಂಗ ಯಾಕೊ ನಮಗ ಒಂದನೇದ ಗಂಡ ಆಗ್ತದ ಅಂತ ಸಿಕ್ಸ್ಥ ಸೆನ್ಸ್ ಹೇಳಲಿಕತ್ತದ” ಅಂತ ಹೇಳಿದ್ಲಂತ ಮುಂದ ಒಂಬತ್ತ ತಿಂಗಳ ಬಿಟ್ಟ ಗಂಡ ಹುಟ್ಟತಂತ, ಅಲ್ಲಾ ಡಾಕ್ಟರಗೆ ಗಂಡೋ ಹೆಣ್ಣೊ ಚೆಕ್ ಮಾಡಲಿಕ್ಕೆ ಮಿನಿಮಮ್ ಎರಡ ತಿಂಗಳರ ಆಗಿರಬೇಕ ಆದರ ಇಕಿ ಬರೇ ವೈಕ ಅನಸೋ ಪುರಸತ್ತಿಲ್ಲದ ಅದು even without confirmation by doctor ನಂಗ ಗಂಡ ಹುಟ್ಟತದ ಅಂತ ಹೇಳಿದ್ಲಂತ. ನಾ
’ಲೇ carrying ಇದ್ದೇನಿ ಅನ್ನೋದು ಒಂದ ಅಕಿದ sixth sense ಏನ ನೋಡ’ ಅಂತ ಕಾಡಸಿದ್ದೆ.
ಅದ ಬಿಡ್ರಿ…ಎಂಟ ವರ್ಷದ ಹಿಂದ ಇಂವಾ ಒಂದ ಆಫೀಸಗೆ ಕೆಲಸಕ್ಕ ಹೊಂಟಾ, ಅಲ್ಲೇ ಇಕಿ ಆಲರೆಡಿ ಅಕೌಂಟೆಂಟ್ ಇದ್ಲು, ಇವನ್ನ ನೋಡಿದೊಕಿನ ತನ್ನ ಫ್ರೇಂಡಗೆ ಹೇಳಿದ್ಲಂತ…
“ನಂಗ ಯಾಕೋ ಸಿಕ್ಸ್ಥ ಸೆನ್ಸ್ ಹೇಳ್ತದ ಇಂವಾ ನಂಗ ಪ್ರಪೋಸ್ ಮಾಡ್ತಾನ ನೋಡ ನೀ’ ಅಂತ.
ಅದ ಹಂಗ ಆತ..ಹಂಗ ಅಕಿ ಅಂದಾಗ ಇಂವಾ ಯಾರು, ಇವನ ಕುಲಾ, ಗೋತ್ರ ಏನೂ ಅಕಿಗೆ ಗೊತ್ತಿದ್ದಿದ್ದಿಲ್ಲಾ ಆದ್ರ ಅಕಿಗೆ ಏನೋ ಅನಿಸಿತ್ತು, ಅದು ಮುಂದ ಮೂರ ವರ್ಷ ಬಿಟ್ಟ ಕರೆಕ್ಟ ಆತ, ಇಂವಾ ಅಕಿಗೆ ಪ್ರಪೋಸ್ ಮಾಡಿದಾ, ಅಕಿ ಒಪಗೊಂಡ್ಲು, ಮದುವಿ ಆತ ಆಮ್ಯಾಲೆ ಒಂದನೇದ ಗಂಡ ಆತು…ಹಿಂತಾ ಖತರನಾಕ sixth sense ಅಕಿದು.
“ಅಲ್ಲಲೇ..ಅಕಿದ sixth sense ಹೇಳ್ತು ಅಂತ ಅಕಿನ್ನ ಲಗ್ನಾ ಮಾಡ್ಕೊಂಡಿ ನಿಂಗ ಕಾಮನ ಸೆನ್ಸರ ಬ್ಯಾಡಾ?…ಈಗ ಅನುಭವಸಲಿಕತ್ತೋರ ಯಾರ ಮಗನ?” ಅಂದರ
“ಏ..ಏನ ಮಾಡಬೇಕ ಅಣ್ಣಾ ಕಟಗೊಂಡೇನಿ, enjoy ಮಾಡಬೇಕು…ಆದರೂ ನೀ ಏನ ಹೇಳ ಅಣ್ಣಾ ಅಕಿದ ಸಿಕ್ಸ್ಥ ಸೆನ್ಸ್ ಭಾರಿ ಅದ ಬಿಡ” ಅಂತ ಮತ್ತ ಅಂದಾ.
ನನ್ನ ಸಿಕ್ಸ್ಥ ಸೆನ್ಸಿಗೆ ಅಂವಾ ಹೇಳಿದ್ದ ಖರೇ ಅನಸ್ತ. ಹಂಗ ನಮ್ಮಂಥಾ ಗಂಡಂದರಿಗೂ ದೇವರ ಕಾಮನ್ ಸೆನ್ಸ ಬದ್ಲಿ ಸಿಕ್ಸ್ಥ ಸೆನ್ಸ ಕೊಟ್ಟಿದ್ದರ ಎಷ್ಟ ಛಲೋ ಇತ್ತಲಾ ಅಂತ ನಾ ಸುಮ್ಮನಾದೆ.
ತುಂಬಾ ಒಳ್ಳೆಯ ಬರಹ ,ಮನಸ್ಸು ಗಳನ್ನು ಕಟ್ಟಿ ದಿನ ನಿತ್ಯದ ಬದುಕಿನ ನಡೆಯುವ ಖಾಸಗಿ ಜೀವನ ಶೈಲಿ