ಇದ ಒಂದ ತಿಂಗಳ ಹಿಂದಿನ ಮಾತ ಇರಬೇಕ, ನನ್ನ ಹೆಂಡ್ತಿ ಕಸಾ ಹೊಡಿಲಿಕ್ಕತ್ತೋಕಿ ಒಮ್ಮಿಂದೊಮ್ಮಿಲೇ
“ರ್ರಿ…ಈ ಪಾಲಿಸಿ ಲೆಟರ್ ಕಸ್ದಾಗ ಬಿದ್ದಿತ್ತ…ಬ್ಯಾಡೇನ್?” ಅಂತ ಕೇಳಿದ್ಲು. ನಾ ಅದೇನ ಅಂತ ನೋಡಿ
“ಏ, ಬ್ಯಾಡ ತೊಗೊ ಒಗಿ” ಅಂತ ಸುಮ್ಮನಾದೆ.
ಅಕಿ ಅಷ್ಟಕ್ಕ ಬಿಡಲಿಲ್ಲಾ, ಅದನ್ನ ಓಪನ್ ಮಾಡಿ ಓದಿ
“ರ್ರಿ…ನಿಮ್ಮ ಟರ್ಮ್ ಇನ್ಸುರೇನ್ಸ್ ಲ್ಯಾಪ್ಸ್ ಆಗೇದ ಅಂತ ಲೆಟರ್ ಕಳಸ್ಯಾರ ಅಲ್ಲರಿ…ಯಾಕ ರೊಕ್ಕಾ ತುಂಬಿಲ್ಲಾ” ಅಂತ ಕೇಳಿದ್ಲು.
“ಏ, ಎಲ್ಲಿದಲೇ..ಇಲ್ಲೆ ಬದಕಲಿಕ್ಕೆ ರೊಕ್ಕ ಸಾಲವಲ್ತು ಇನ್ನ ಸತ್ತ ಮ್ಯಾಲೆ ಫಾಯದೇ ಕೊಡೊ ಇನ್ಸುರೆನ್ಸಕ್ಕ ರೊಕ್ಕಾ ಎಲ್ಲಿಂದ ಕೊಡ್ಲಿ ” ಅಂತ ಜೋರ ಮಾಡಿ ಸುಮ್ಮನಾಗಿದ್ದೆ.
ಆದರ ನನ್ನ ಹೆಂಡ್ತಿಗೆ ಸಮಾಧಾನನ ಇರಲಿಲ್ಲಾ, ಒಂದ ವಾರದಿಂದ ಅಂತೂ ಅಕಿದ ಮೂಡ ಕೆಟ್ಟ ಹೋಗಿತ್ತ. ಯಾಕ ಅಂತ ಕೇಳಿದರ ಗೊತ್ತಾತು, ಅಕಿ ನನ್ನ ಟರ್ಮ ಇನ್ಸುರೇನ್ಸ್ ಲ್ಯಾಪ್ಸ ಆಗಿದ್ದಕ್ಕ ಪಾಪ ಹೊಟಿಬ್ಯಾನಿ ಹಚಗೊಂಡಿದ್ಲು. ಅಲ್ಲಾ ಅದರಾಗ ಏನ ಅಷ್ಟ ತಲಿ ಕೆಡಸಿಗೊಳ್ಳದರಿಪಾ, ತಿಂದಂಗಲ್ಲಾ ಉಂಡಂಗ ಅಲ್ಲಾ ವರ್ಷಾ ಹದಿನೈದ ಸಾವಿರ ರೂಪಾಯಿ ಬಡಿ ಅಂದರ ನಮ್ಮಂತಾ ಬಡವರಿಗೆ ಎಲ್ಲಿಂದ ಬರಬೇಕ? ಅದು ನಾನ್ ರಿಟರ್ನೇಬಲ್, ದೇವರ ಹುಂಡ್ಯಾಗ ಹಾಕಿದಂಗ. ವಾಪಸ ಅಂತೂ ಬರಂಗೇಲಾ….ಅಲ್ಲಾ ಅಕಿ ನಾಮಿನೀ ಇದ್ದ ಪಾಲಿಸಿ ಲ್ಯಾಪ್ಸ್ ಆತು ಅಂತ ಎಲ್ಲರ ಈ ಪರಿ ಮನಸಿಗೆ ಹಚಗೊಳೊದ?
ಅಲ್ಲಾ ಹಂಗ ನಾ ಡೆಡ್ ಇನ್ವೆಸ್ಟಮೆಂಟ್ ಒಟ್ಟ ಜೀವನದಾಗ ಮಾಡೊವನ ಅಲ್ಲಾ. ಆದರ ಒಂದ ಐದ ವರ್ಷದ ಹಿಂದ ನಂಗ ನಲವತ್ತ ದಾಟತಲಾ ಆವಾಗ ನನ್ನ ಹೆಂಡ್ತಿಗೆ ಅವರ ಮಾಮಿ ಈ ಸುಡಗಾಡ ಟರ್ಮ್ ಇನ್ಸುರೇನ್ಸ್ ಬಗ್ಗೆ ಹೇಳಿ ತಲಿ ಕೆಡಸಿದ್ಲು.
“ಇಲ್ಲ ನೋಡಿಲ್ಲೇ..ನಿಮ್ಮ ಮನೆಯವರಿಗೆ ಒಂದ ಟರ್ಮ್ ಇನ್ಸುರೇನ್ಸ್ ತೊಗೊ ಅಂತ ಹೇಳ..ಎಮರ್ಜನ್ಸಿ ಇರವಲ್ತಾಕ …ಕಾಲ ಮಾನ ಹೇಳಲಿಕ್ಕೆ ಬರಂಗಿಲ್ಲಾ…ನಾಳೆ ಏನರ ಹೆಚ್ಚು ಕಡಿಮೆ ಆದರ ಏನ ಮಾಡೋಕಿ, ಮಕ್ಕಳ ಇನ್ನೂ ಸಣ್ಣವ ಅವ” ಅಂತ ಎಮೋಶನಲಿ ಹೆದರಿಸಿ ಬಿಟ್ಟಿದ್ಲು.
ತೊಗೊ ಅವತ್ತಿನಿಂದ ನನ್ನ ಹೆಂಡ್ತಿ ’ ಒಂದ ಟರ್ಮ್ ಇನ್ಸುರೇನ್ಸ್ ತೊಗೊರ್ರಿ’ ಅಂತ ಗಂಟ ಬಿದ್ದಿದ್ಲು. ನಾ
’ರೊಕ್ಕ ಎಲ್ಲೆ ಅದಲೇ.. ಅದರಾಗ ಅದ ನಾ ಜೀವಂತ ಉಳದರ ರಿಟರ್ನ್ ಬ್ಯಾರೆ ಬರಂಗಿಲ್ಲಾ, ಅದರ ಬದ್ಲಿ ಬೇಕಾರ ಒಂದ ಬಿಟ್ಟ ಎರಡ ಮನಿ ಬ್ಯಾಕ್ ಪಾಲಿಸಿ ಮಾಡ್ಸೋಣ’ ಅಂದರೂ ಕೇಳಲಿಲ್ಲಾ, ಕಡಿಕೆ ತನ್ನ ಮೂವತ್ತೈದನೇ ಬರ್ಥಡೇ ಕ್ಕ ಗಿಫ್ಟ ಏನ ಬೇಕ ಅಂತ ಕೇಳಿದಾಗ
” ಐವತ್ತ ಲಕ್ಷದ್ದ ನಿಮ್ಮ ಹೆಸರಿಲೇ ಟರ್ಮ್ ಇನ್ಸುರೇನ್ಸ್ ಬೇಕ” ಅಂತ ಪಾಲಿಸಿ ಮಾಡಿಸ್ಗೊಂಡ್ಲು.
ಏನ್ಮಾಡ್ತೀರಿ? ಜಗತ್ತಿನಾಗ ಯಾರದರ ಹೆಂಡ್ತಿ ತನ್ನ ಬರ್ಥಡೇ ಕ್ಕ ಗಂಡಂದ ಐವತ್ತ ಲಕ್ಷದ್ದ ಟರ್ಮ್ ಇನ್ಸುರೇನ್ಸಗೆ ನಾಮಿನಿ ಅಂತ ಗಿಫ್ಟ ಇಸ್ಗೊಂಡಿದ್ದ ನೋಡಿರೇನ್?
“ಲೇ…ನಾ ಖರೇ ಹೇಳ್ತೇನಿ…ಹಿಂಗ ಟರ್ಮ್ ಇನ್ಸುರೇನ್ಸಗೆ ಗಂಟ ಬೀಳತಿ ಅಂತ ಮೊದ್ಲ ಗೊತ್ತಿದ್ದರ ನಾ ಸುಮ್ಮನ ಮಾತುಕತಿ ಒಳಗ ವರದಕ್ಷೀಣಿ ಬದ್ಲಿ ಟರ್ಮ್ ಇನ್ಸುರೇನ್ಸ್ ಪಾಲಿಸಿ ಪ್ರೀಮಿಯಮ್ ನೀವು ತುಂಬ ಬೇಕ ಅಂತ ನಿಮ್ಮಪ್ಪಗ ಹೇಳ್ತಿದ್ದೆ” ಅಂತ ಅಂದರ
“ಯಾಕ..ನಮ್ಮಪ್ಪ ಯಾಕ ನಿಮ್ಮ ಇನ್ಸುರೇನ್ಸ್ ಪ್ರಿಮಿಯಮ್ ತುಂಬಬೇಕ…ಪಾಪ ಏನೋ ಮಾತುಕತಿ ಒಳಗ ಹೂಂ ಅಂದಿದ್ದಾ ಅಂತ ಒಂದ ಬಿಟ್ಟ ಎರಡ ಬಾಣಂತನಾ ಮಾಡ್ಯಾನ…ಇನ್ನ ಇದೊಂದ ಬಾಕಿ ಇತ್ತ ಬರ್ರಿ ನಿಮಗ” ಅಂತ ನಂಗ ಜೋರ ಮಾಡಿದ್ಲು.
ಅಲ್ಲಾ ಈ ಹೆಂಡಂದರಿಗೆ ’ಪಾಪ ನಮ್ಮ ಗಂಡಾ, ಹಂಗ ಏನರ ಹೆಚ್ಚು ಕಡಮಿ ಆದರ ಫಾಯದೇ ಹೆಂಡ್ತಿಗೆ ಆಗೋದ ಅಂತ ಗೊತ್ತಿದ್ದರೂ ನಿಸ್ವಾರ್ಥ ಜೀವನ ಪರ್ಯಂತ ಕಷ್ಟ ಪಟ್ಟ ದುಡದ ಪ್ರೀಮಿಯಮ್ ತುಂಬತಾನ’ ಅಂತ ಕನಿಕರನ ಇರಂಗಿಲ್ಲರಿ.
ಅಲ್ಲಾ ನಾಲ್ಕ ಮಂದಿ ಹೆಂಡಂದರ ಸೇರಿದರ ಹೆಂಗ ಮಾತಾಡ್ತಾರ ಗೊತ್ತ..
’ನಮ್ಮ ಮನಿಯವರ ಐವತ್ತ ಲಕ್ಷದ್ದ ತೊಗೊಂಡಾರ’ ಅಂತ ಒಬ್ಬೋಕಿ ಅಂದರ, ಇನ್ನೊಬ್ಬಕಿ
’ಅಯ್ಯ…ನಮ್ಮ ಮನಿಯವರ ಒಂದ ಕೋಟಿದ ತೊಗೊಂಡಾರವಾ’ ಅನ್ನೋಕಿ….ಇನ್ನ ಅವರದೇಲ್ಲಾ ಕೇಳಿ ನಮ್ಮೋಕಿ
’ನೀವು ಇನ್ನೊಂದ ಐವತ್ತರದ ತೊಗೊಂಡ ಬಿಡ್ರಿ’ ಅಂತ ನನ್ನ ಜೀಂವಾ ತಿನ್ನೋಕಿ
ಅಲ್ಲಾ ’ಗಂಡ ಇರತ ನಾವ ಅಂತೂ ಕೋಟ್ಯಾಧೀಶರ ಆಗಂಗಿಲ್ಲಾ ಮುಂದರ ಆಗೋಣ’ ಅಂತ ವಿಚಾರೋ ಏನೋ ಇವರದು ಅಂತೇನಿ.. ಒಂದ ಸ್ವಲ್ಪರ ಕಾಮನ್ ಸೆನ್ಸ್ ಬೇಕ್ರಿಪಾ.
ಹಂಗ ಈಗ ನಮಗ ಹೊಸಾ ಪಾಲಿಸಿ ತೊಗೊಬೇಕಂದರ ಮೆಡಿಕಲ್ ಕಂಪಲ್ಸರಿ ಅದ ಅಂತ ನಾ ಅಂದರ
“ಭಾಳ ಛಲೋ ಆತ ಪುಕ್ಕಟ್ಟ ಮೆಡಿಕಲ್ ಟೆಸ್ಟರ ಆಗ್ತಾವ. ಇಲ್ಲಾಂದರ ನೀವೇಲ್ಲೆ ರೊಕ್ಕಾ ಕೊಟ್ಟ ECG, Treadmill test ಮಾಡಿಸ್ಗೊಬೇಕು” ಅಂತ ಅಂದ್ಲು. ಅಲ್ಲಾ ಡಾಕ್ಟರಗೆ “ಇವರದ ಲೀವರದ್ದ ಒಂದ ಚೆಕ್ ಮಾಡಿ ಬಿಡ್ರಿ…ವಾರಕ್ಕ ಮೂರ ಸರತೆ ಥರ್ಟಿ ಥರ್ಟಿ ಅಂತಿರ್ತಾರ, ಮ್ಯಾಲೆ ಸ್ವೀಟ್ ಕಿಮಾಮ್ ಪಾನ್ ಬ್ಯಾರೆ ಹಾಕೋತಾರ, ಅದಕ್ಕೂ ಒಂದ ಏನರ ಇದ್ದರ ಅದನ್ನು ಮಾಡ್ರಿ” ಅಂತ ಹೇಳಿದ್ರು ಹೇಳಿದ್ಲ. ಇಲ್ಲೇ ನಾವ ನೋಡಿದರ ಇನ್ಸುರೇನ್ಸ ಫಾರ್ಮ್ ಒಳಗ drinks- no, tobacco- no, smoking- no ಅಂತ ಕ್ಲಿಕ್ ಮಾಡಿರ್ತೇವಿ ಇವರ ಇದ್ದದ್ದ ಇಲ್ಲದ್ದ ಎಲ್ಲಾ ಆ ಡಾಕ್ಟರಗೆ ಹೇಳಿ, ಒಂದ ಪಾಲಿಸಿನರ ರಿಜೆಕ್ಟ್ ಮಾಡಸ್ತಾರ, ಇಲ್ಲಾ ಪ್ರಿಮಿಯಮ್ ಅಮೌಂಟರ ಜಾಸ್ತಿ ಮಾಡಸ್ತಾರ..ಏನ ಮಾಡ್ತೀರಿ ಹಿಂತಾ ಹೆಂಡಂದರಿಗೆ?
ಹಂಗ ಬ್ಲಡ್ ಟೆಸ್ಟ ಒಳಗ HIV ಮಾಡಿರ್ತಾರ ಅಂತ ಸುಮ್ಮನ ಇರ್ತಾರ. ಇಲ್ಲಾಂದರ ಹೆಂಗಿದ್ದರೂ ಫ್ರೀ ಅಂತ ಅದನ್ನೂ ಮಾಡ್ಸೋರ. ಅಲ್ಲರಿ.. ಒಂದ ಸ್ವಲ್ಪರ ಗಂಡನ ಮ್ಯಾಲೆ ವಿಶ್ವಾಸ ಇಡಬೇಕರಿ.
ಅಲ್ಲಾ ನಮ್ಮ ಪುಣ್ಯಾ ಲಗ್ನಕಿಂತ ಮೊದ್ಲ ಕುಂಡ್ಲಿ ಜೋತಿ ಇವೇಲ್ಲಾ ಟೆಸ್ಟ ಮಾಡಿಸ್ಗೊಂಡಿದ್ದ ರಿಪೋರ್ಟ ಹಚ್ಚರಿ ಅಂತ ಅಂದಿಲ್ಲಾ ಅಂತ ನಮ್ಮ ಲಗ್ನ ಆಗೇದ.
ಮದ್ವಿ ಮಾಡ್ಕೋಬೇಕಾರ ಏಳೇಳ ಜನ್ಮಕ್ಕೂ ನೀನ ನನ್ನ ಗಂಡ ಅಂತ ಕಟಗೊಂಡ ಬಂದ, ಒಂದ ವರ್ಷ ಟರ್ಮ ಇನ್ಸೂರೆನ್ಸ್ ಪಾಲಿಸಿ ಲ್ಯಾಪ್ಸ್ ಆದರ ಎಷ್ಟ ಮನಸಿಗೆ ಹಚಗೋತಾರ ಅಂತೇನಿ.
ಕಡಿಕೆ ನಮ್ಮಕಿ ಪಾಲಿಸಿ ಲ್ಯಾಪ್ಸ್ ಆಗಿದ್ದ ಮನಸ್ಸಿಗೆ ಹಚಗೊಂಡಿದ್ದ ನೋಡಿ ಹೋದವಾರ ಹದಿನೈದ ಸಾವಿರ ಬಡದ, ಏನೇನ ಮೆಡಿಕಲ್ ಟೆಸ್ಟ ಇದ್ವು ಎಲ್ಲಾ ಮಾಡಿಸಿಸಿ ಅಕಿ ಸಮಾಧಾನಕ್ಕ ಒಂದ ಟರ್ಮ್ ಇನ್ಸುರೇನ್ಸ್ ಮಾಡಿಸಿಸಿ ಬಂದೆ.
ಇನ್ನ ನಾ ಇರೋತನಕ ವರ್ಷಾ ಹದಿನೈದ ಸಾವಿರ ಬಡಿಬೇಕ..ಇದ ನನ್ನ ಹಣೇ ಬರಹ.
ಅಲ್ಲಾ ಆದರೂ ಹಂಗ ಒಂದ ಮಾತ ಕೇಳ್ತೇನಿ, ನೀವ ಯಾರದರ ಹೆಂಡತಿ ತನ್ನ ಪಗಾರದಾಗ ಪ್ರಿಮಿಯಮ್ ತುಂಬಿ ಟಾರ್ಮ್ ಇನ್ಸುರೆನ್ಸ್ ಮಾಡಿಸಿಸಿ ಗಂಡನ್ನ ನಾಮೀನೀ ಮಾಡಿದ್ದ ಎಲ್ಲೇರ ಕೇಳಿರೇನ? ಹೋಗ್ಲಿ ಅಕಿ ಪಗಾರ ಬ್ಯಾಡ, ನಮ್ಮ ಪಗಾರದಾಗ ಪ್ರೀಮಿಯಮ್ ಕಟ್ಟಿ ಹೆಂಡ್ತಿದ ಟರ್ಮ್ ಇನ್ಸುರೇನ್ಸ್ ಮಾಡಿಸಿ ನಾವ ಎಂದರ ನಾಮಿನಿ ಆಗೇವೇನ ಹೇಳ್ರಿ?
ಹಂಗೇನರ ಗಂಡಂದರ ಮಾಡಿದರ
“ಯಾಕ, ಏನ ವಿಚಾರ ಅದ, ನನ್ನ ಹೆಸರಿಲೇ ಪಾಲಿಸಿ ಮಾಡಿಸಿ ನನ್ನ ಮುಗಸೋ ವಿಚಾರದ ಏನ ಮತ್ತ…ಎಲ್ಲೇರ ಮತ್ತೊಂದ ಸೆಟ್ಟಿಂಗ್ ಮಾಡಿ ಇಟ್ಟಿರೇನ?” ಅಂತ ಅನ್ನಲಿಲ್ಲಾ ಅಂದರ ಹೇಳ್ರಿ.
ಹಂಗ ’ನಾಳೆ ನೀವ ಇಲ್ಲಾಂದರ ಮನಿ ಹೆಂಗ ನಡಿಬೇಕು, ಮಕ್ಕಳದ ಹೆಂಗ ಮುಂದ’ ಅಂತ ಹೆಂಡತಿ ತನ್ನ ನಾಮೀನೀ ಮಾಡ್ಕೊಂಡರ ತಪ್ಪ ಅಲ್ಲಾ. ನಾಳೆ ಹೆಂಡ್ತಿ ಇಲ್ಲಾಂದರ ಗಂಡಾ ಅನಾಥ ಆಗ್ತಾನ, ಮಕ್ಕಳ ಅನಾಥ ಆಗ್ತಾವ, ಗಂಡಾ ಇನ್ನೊಂದ ಲಗ್ನಾ ಮಾಡ್ಕೋಬೇಕಾಗ್ತದ ಅದಕ್ಕೇಲ್ಲಾ ರೊಕ್ಕ ಬೇಕಾಗ್ತದ ಅಂತ ಗಂಡ ಹೆಂಡ್ತಿನ್ನ ಏನರ ನಾಮೀನೀ ಮಾಡಿದರ ತಪ್ಪ.
ಅಲ್ಲಾ ಹಂಗ ಸಹಜ ವಿಚಾರ ಬಂತ ಕೇಳಿದೆ ಇಷ್ಟ, ಮತ್ತ ನೀವೇಲ್ಲರ ನಾ ಹೇಳಿದ್ದ ಸಿರಿಯಸ್ ತೊಗೊಂಡ ಹೆಂಡ್ತಿಗೆ ಇನ್ಸೂರೆನ್ಸ ತೊಗೊಂಡ ನನಗ ನಾಮಿನೀ ಮಾಡ ಅಂತ ಗಂಟ ಬೀಳಬ್ಯಾಡರಿ.
ಹೋಗ್ಲಿ ಬಿಡ್ರಿ ಯಾರ ಹಣೇಬರಹದಾಗ ದುಡದ ಪ್ರಿಮಿಯಮ್ ತುಂಬೋದ ಬರದಿರತದ ಅವರ ತುಂಬತಾರ ಯಾರ ಹಣೇಬರಹದಾಗ ಕ್ಲೇಮ್ ಅನುಭವಸೋದ ಇರತದ ಅವರ ಅನುಭವಸ್ತಾರ.
ನೋಡ್ರಿ ಮತ್ತ ಮಾರ್ಚ ಮುಗಿಲಿಕ್ಕೆ ಬಂತ, ನಿಂಬದ ಯಾವದರ ಪಾಲಿಸಿ ಲ್ಯಾಪ್ಸ್ ಆಗತಿತ್ತ ಅಂದರ ಪ್ರೀಮಿಯಮ್ ತುಂಬಿ ಬಿಡ್ರಿ…ಅಲ್ಲಾ ಹಂಗ ಕ್ಲೇಮ್…ನಾಮಿನೀ ಎಲ್ಲಾ ಸೆಕಂಡರಿ…at least ಇನಕಮ್ ಟ್ಯಾಕ್ಸ್ ಉಳಸಲಿಕ್ಕರ ತುಂಬರಿ.