ಅಲ್ಲಾ, ನಾ ಕೇಳಲಿಕತ್ತಿದ್ದ ಹೆಂಡ್ತಿ ಬೆಕ್ಕಿಗೆ ಅಡ್ಡ ಹೋದರ ಬೆಕ್ಕಿಗೆ ಛಲೋನೋ ಕೆಟ್ಟೋ ಅಂತ ಮತ್ತ, ಹೆಂಡ್ತಿಗೆ ಅಲ್ಲಾ.
ಹಂಗ ಹೆಂಡ್ತಿಗೆ ಗಂಡನ್ನ ಒಬ್ಬೊವನ ಬಿಟ್ಟ ಯಾರ ಅಡ್ಡ ಹೋದರು ಛಲೋನ ಆ ಮಾತ ಬ್ಯಾರೆ.
ಜನಾ ಬೆಕ್ಕ ಅಡ್ಡ ಹೋದರ ’ಛೆ…ಬೆಕ್ಕ ಅಡ್ಡ ಹೋತ’ ಅಂತ ಲೊಚ್ಚ್ ಲೊಚ್ಚ್ ಮಾಡ್ತಾರ.
ಒಂದಿಷ್ಟ ಮಂದಿ ಬೆಕ್ಕ ಎಡದಿಂದ ಬಲಕ್ಕ ಹೋದರ ಛಲೋ ಅಂತಾರ, ಕೆಲವೊಬ್ಬರು ಬಲದಿಂದ ಎಡಕ್ಕ ಹೋದರ ಛಲೋ ಅಂತಾರ. ಮತ್ತೊಬ್ಬರು ಗಂಡಂದರಿಗೆ ಎಡದಿಂದ ಬಲಕ್ಕ ಹೋದರ ಛಲೋ, ಹೆಂಡಂದರಿಗೆ ಬಲದಿಂದ ಎಡಕ್ಕ ಹೋದರ ಛಲೋ ಅಂತಾರ. ಇನ್ನ ಗಂಡಾ ಹೆಂಡತಿ ಇಬ್ಬರೂ ಹೊಂಟಾಗ ಬೆಕ್ಕ ಹೆಂಗ ಅಡ್ಡ ಹೋದರು ಅದ ಗಂಡಂದರಿಗೆ ಕೆಟ್ಟ.
ಹಂಗ ನಾ ಇದರ ಬಗ್ಗೆ ಭಾಳ ತಲಿಕೆಡಸಿಕೊಂಡಂವ ಅಲ್ಲಾ. ನಮ್ಮ ಮನ್ಯಾಗ ಮೊದ್ಲ ಒಂದ ಬೆಕ್ಕ ಇತ್ತ, ಮುಂದ ನನ್ನ ಲಗ್ನ ಆದಮ್ಯಾಲೆ ನಮ್ಮವ್ವ
’ಸಾಕ ಬಿಡ ಇನ್ನ ಬೆಕ್ಕ ಸಾಕೋದ, ಹೆಂಗಿದ್ದರೂ ಲಗ್ನಾ ಮಾಡ್ಕೊಂಡಿ, ಮೊದ್ಲ ಮನಿ ಸಣ್ಣದ’ ಅಂತ ಗಂಟ ಬಿದ್ಲು.
ನಾ ’ಇರಲಿ ಬಿಡವಾ ಮೂಕ ಪ್ರಾಣಿ ಮನ್ಯಾಗ ಒಂದರ ಇರಲಿ’ ಅಂತ ಇಟಗೊಂಡಿದ್ದೆ.
ಆದರ ನನ್ನ ಹೆಂಡತಿಗೆ ಬೆಕ್ಕ ಕಂಡರ ಆಗತಿದ್ದಿಲ್ಲಾ. ಅಲ್ಲಾ, ನಮ್ಮ ಮನಿ ಇಲಿ ಸಹಿತ ಬೆಕ್ಕಿಗೆ ಹೆದರತಿದ್ದಿಲ್ಲಾ ಆದರ ಇಕಿ ಹೆದರತಿದ್ದಳು. ಹಂಗ ಅಕಿ ಗಂಡಾ ಅನ್ನೊ ಒಂದ ಪ್ರಾಣಿ ಬಿಟ್ಟ ಇಲಿ, ಹಲ್ಲಿ, ಜೊಂಡಿಗ್ಯಾ, ಜಾಡಾ ಎಲ್ಲಾಕ್ಕೂ ಹೆದರತಿದ್ಲು ಆ ಮಾತ ಬ್ಯಾರೆ.
ಇನ್ನ ನಮ್ಮ ಮನ್ಯಾಗ ಬೆಕ್ಕ ನೋಡಿ ಅಕಿ
“ನೋಡ್ರಿ… ಒಂದ ಮನ್ಯಾಗ ನಾನರ ಇರಬೇಕ..ಇಲ್ಲಾ ಈ ಸುಡಗಾಡ ಬೆಕ್ಕರ ಇರಬೇಕು, ನಿಮಗ ಯಾರ ಬೇಕ ಡಿಸೈಡ ಮಾಡ್ರಿ” ಅಂತ ಹೇಳಿದ್ಲು.
ಅದರಾಗ ಆವಾಗಿನ್ನೂ ನಮ್ಮ ತಂಗಿ ಬ್ಯಾರೆ ಮನ್ಯಾಗ ಇದ್ಲು, ಅಕಿ
“ದಾದಾ, ನನಗ ಬೆಕ್ಕ ಬೇಕಪಾ, ಪಾಪ ಅದ ನಾಲ್ಕೈದ ವರ್ಷದಿಂದ ಅದ…. ನಿಂಗ ಏನ ಬೇಕ ಡಿಸೈಡ ಮಾಡ”
ಅಂತ ಕ್ಲೀಯರ್ ಆಗಿ ಹೇಳಿದ್ಲು.
ನಮ್ಮ ತಂಗಿಗೆ ಮೊದ್ಲಿಂದ ಬೆಕ್ಕ ಕಂಡರ ಭಾಳ ಪ್ರೀತಿ. ಅದಕ್ಕ ತನ್ನ ಪಾಲಿಂದ ಬೋರ್ಮಿಟಾ ಹಾಕಿ ಹಾಕಿ ಬೆಳಸಿದ್ಲು. ಇನ್ನ ಹಂತಾಕಿ ನಾ ಏನರ ಹೆಂಡ್ತಿ ಮಾತ ಕೇಳಿ ಬೆಕ್ಕ ಹೊರಗ ಹಾಕಿದರ
’ನೋಡ ಹೆಂಡ್ತಿ ಬಂದ ಕೂಡ್ಲೆ ಬೆಕ್ಕ ಹೊರಗ ಹಾಕಿದಾ, ಇನ್ನ ನನ್ನೂ ಅಟ್ಟತಾನ ತೊಗೊ’ ಅಂತ ಅಂದ ಅಂತಾಳಂತ ಗ್ಯಾರಂಟಿ ಇತ್ತ.
ಅಲ್ಲಾ ಅದ ಹಂಗ ಆತ. ನನ್ನ ಹೆಂಡ್ತಿ ನನ್ನ ತಂಗಿಗೆ ದಿವಸಕ್ಕ ಒಂದ ಹತ್ತ ಸರತೆ ಕಾಲಕಾಲಾಗ ಅಡ್ಡ ಹೋಗಿ ಹೋಗಿ ಅಕಿದ ಮುಂದ ಒಂದ ವರ್ಷಕ್ಕ ಅಕಿದ ಲಗ್ನ ಆಗೆ ಬಿಡ್ತು.
ಇನ್ನ ನನ್ನ ಹೆಂಡ್ತಿ ಒಂದ್ಯಾರಡ ತಿಂಗಳ ಹೆಂಗೊ ನನ್ನ ಜೊತಿ ಬೆಕ್ಕು ಸಂಬಾಳಿಸಿದ್ಲು, ಆದರ ಅಕಿದ ಬೆಕ್ಕ ಬಿಟ್ಟ ಬರ್ರಿ ಅಂತ ವಟಾ, ವಟಾ ಕಂಟಿನ್ಯೂ ಇತ್ತ, ಕಡಿಕೆ ಆಷಾಡ ಮಾಸದಾಗ ತವರಮನಿಗೆ ಹೋದೊಕಿ
’ನೀವು ಬೆಕ್ಕ ಹೊರಗ ಹಾಕಿದ ಮ್ಯಾಲೆ ನಾ ಮನಿಗೆ ಬರೋದ’ ಅಂತ ಹೇಳಿ ಬಿಟ್ಟಳು. ತೊಗೊ ಇನ್ನ ಕಟಗೊಂಡ ಹೆಂಡ್ತಿನ್ನ ಬಿಟ್ಟ ಬೆಕ್ಕಿನ ಜೊತಿ ಸಂಸಾರ ಮಾಡಲಿಕ್ಕೆ ಆಗ್ತದೇನರಿ? ಅದರಾಗ ನಮ್ಮವ್ವನೂ ಬೆಕ್ಕ್ ಹೊರಗ ಹಾಕ ಅಂತ ಗಂಟ ಬಿದ್ದಿದ್ಲು, ಅಲ್ಲಾ ನನ್ನ ಲಗ್ನ ಆದಾಗಿಂದ ಅರ್ಧಾ ಲಿಟರ್ ಹಾಲ ಜಾಸ್ತಿ ತರಬೇಕಾಗಿತ್ತ ಹಿಂಗಾಗಿ ಬೆಕ್ಕರ ಮನಿ ಬಿಟ್ಟ ಹೋಗಬೇಕ ಇಲ್ಲಾ ಸೊಸಿನರ ಹೋಗಬೇಕ. ಇನ್ನ ಹೊಸಾ ಸೋಸಿ ಮನಿ ಬಿಟ್ಟ ಹೋದರ ಜನಾ ತಪ್ಪ ತಿಳ್ಕೋತಾರ ಅಂತ ಅಕಿ ಬೆಕ್ಕ ಬಿಟ್ಟ ಬಾ ಅಂದಿದ್ಲು.
ಕಡಿಕೆ ಒಂದ ದಿವಸ ಮುಂಜಾನೆ ನಸಿಕಲೇ ನಮ್ಮ ತಂಗಿ ಇನ್ನೂ ಮಲ್ಕೊಂಡಾಗ ಭಡಾ ಭಡಾ ಬೆಕ್ಕ ತೊಗೊಂಡ ಹೋಗಿ ಬಿಟ್ಟ ಬಂದ ಬಿಟ್ಟೆ. ನಮ್ಮ ತಂಗಿ ಅಂತು ಅಕಿ ಲಗ್ನಾ ಮಾಡ್ಕೊಂಡ ಹೋಗೊತನಕ ಬೆಕ್ಕ ಬಿಟ್ಟ ಬಂದಿದ್ದಕ್ಕ
’ಕಟಗೊಂಡ ಹೆಂಡ್ತಿ ಮಾತ ಕೇಳಿ ಸಾಕಿದ್ದ ಬೆಕ್ಕ ಬಿಟ್ಟ ಬಂದಾ’ ಅಂತ ಬೈತಿದ್ಲು.
ಹಂಗ ಮುಂದ ಲಗ್ನಾಗಿ ಒಂದ ಎರಡ-ಮೂರ ವರ್ಷಕ್ಕ ನನಗೂ ಅನಸಲಿಕತ್ತ, ನಾ ಸುಮ್ಮನ ಆವಾಗ ಬೆಕ್ಕಿನ ಬದ್ಲಿ ಹೆಂಡ್ತಿನ್ನ ಬಿಟ್ಟ ಬಂದಿದ್ದರ ಭಾಳ ಛಲೋ ಇತ್ತ ಅಂತ ಆದರ ಆವಾಗ ಭಾಳ ಲೇಟಾಗಿತ್ತ ಬಿಡ್ರಿ. ಅಲ್ಲಾ ಮಾತ ಹೇಳಿದೆ ಇಷ್ಟ.
ಅಲ್ಲಿಗೆ ಬೆಕ್ಕನ ಪುರಾಣ ಮುಗಿತ. ಮುಂದ ಎಂದೂ ನಾ ಜೀವನದಾಗ ಬೆಕ್ಕ ಸಾಕಲಿಲ್ಲಾ. ಅಲ್ಲಾ ಹೆಂಡ್ರು ಮಕ್ಕಳನ್ನ ಸಾಕೋದ ರಗಡ ಆಗ್ತಿತ್ತ ಇನ್ನ ಬೆಕ್ಕ ಎಲ್ಲಿದ ಬಿಡ್ರಿ.
ಹಂಗ ಕೇಳಿದರ ನಮ್ಮ ಹಳೇ ಮನ್ಯಾಗ ಒಂದ ಸರತೆ ನಮ್ಮ ದಿಂದಾಗ ಅಂದರ ಬಸರ ಇದ್ದಿದ್ದ ಬೆಕ್ಕ ರಾತ್ರಿ ಮಲ್ಕೊಂಡಾಗ ನನ್ನ ಕಾಲ ಸಂದ್ಯಾಗ ಮುಂಜಾನೆ ಏಳೊದರಾಗ ಹಡದಿತ್ತ, ಅಲ್ಲಾ ಆ ಬೆಕ್ಕ ದಿವಸಾ ನನ್ನ ಜೊತಿನ ಮಲ್ಕೊತಿತ್ತ, ದಿಂದಾಗ ಇತ್ತು, ಹಡದಿತ್ತು. ಆವಾಗ ನಮ್ಮ ದೋಸ್ತರೇಲ್ಲಾ ನಂಗ ’ಆಡ್ಯಾ ಮೂರ ಬೆಕ್ಕ ಹಡದಾನ’ ಅಂತ ಕಾಡಸ್ತಿದ್ದರು. ಅಷ್ಟ ಹಚಗೊಂಡಿದ್ದೆ ನಾ ಬೆಕ್ಕಿನ್ನ. ಹಂತಾವ ಹೆಂಡ್ತಿ ಮಾತ ಕೇಳಿ ಬೆಕ್ಕ ಬಿಟ್ಟ ಬಂದಿದ್ದೆ.
ಏನ ಮಾಡೋದ ಜನಾ ಲಗ್ನ ಆದ ಮ್ಯಾಲೆ ಹಡದ ಅವ್ವಾ ಅಪ್ಪನ್ನ ಬಿಟ್ಟ ಬರತಾರಂತ ಇನ್ನ ನಾ ಸಾಕಿದ್ದ ಬೆಕ್ಕ ಬಿಟ್ಟ ಬರೋದ ಏನ ದೊಡ್ಡದ ಬಿಡ್ರಿ.
ಇನ್ನ ನನ್ನ ಹೆಂಡ್ತಿ ಏನ ಒಂದಿಷ್ಟ ತಿಂಗಳ ನಮ್ಮ ಮನ್ಯಾಗ ಬೆಕ್ಕಿನ ಜೊತಿ ಸಂಸಾರ ಮಾಡಿದ್ಲಲಾ ಆವಾಗ ದಿವಸಕ್ಕ ಒಂದ ಹತ್ತ ಸರತೆ ಬೆಕ್ಕ ಹಂಗ ಮಾಡ್ತು, ಹಿಂಗ ಮಾಡ್ತು, ಅಲ್ಲೇ ಮಾಡ್ತು, ಇಲ್ಲೇ ಹೋಯ್ತು, ಅದರಾಗ ಬಾಯಿ ಹಾಕ್ತು, ಇದರಾಗ ಬಾಯಿ ಹಾಕ್ತು ಅಂತ ಅಂತಿದ್ಲು, ಮಾತ ಮಾತಿಗೆ ಬೆಕ್ಕ ಕಾಲ ಕಾಲಾಗ ಬರತದ ಅಂತ ಒದರತಿದ್ಲು. ಆವಾಗ ನಂಗ ಹಂಗ ವಿಚಾರ ಬಂತ
’ಈ ಜನಾ ಬೆಕ್ಕ ಅಡ್ಡ ಹೋದರ ಹಂಗ ಆಗ್ತದ ಹಿಂಗ ಆಗ್ತದ’ ಅಂತ ಅಂತಾರಲಾ, ಹಂಗ ಹೆಂಡ್ತಿ ಏನರ ಬೆಕ್ಕಿಗೆ ಅಡ್ಡ ಹೋದರ ಅದ ಬೆಕ್ಕಿಗೆ ಛಲೋನೋ ಕೆಟ್ಟೊ ಅಂತ. ಅಲ್ಲಾ ಅದನ್ನ ಯಾರಿಗೆ ಕೇಳ ಬೇಕ? ಎಲ್ಲಾರೂ ಬೆಕ್ಕ ಅಡ್ಡ ಹೋದರ ದೊಡ್ಡ ದೊಡ್ಡ ಶಾಸ್ತ್ರಾ ಹೇಳ್ತಾರ ಆದರ ಹೆಂಡ್ತಿ ಬೆಕ್ಕಿಗೆ ಅಡ್ಡ ಹೋದರ ಶಾಸ್ತ್ರಾ ಹೇಳೊರ ಯಾರ?
ಹಂಗ ಯಾವಾಗ ನಮ್ಮ ಮನ್ಯಾಗ ನನ್ನ ಹೆಂಡ್ತಿ ಹಗಲಗಲಾ ಪಾಪ ಆ ಬೆಕ್ಕಿಗೆ ಅಡ್ಡ ಹೋಗಿ ಹೋಗಿ ಬೆಕ್ಕ ನಮ್ಮ ಮನಿ ಬಿಟ್ಟ ಹೋಗೊ ಪರಿಸ್ಥಿತಿ ಬಂತ, ಆವಾಗ ನಂಗ
’ಕಟಗೊಂಡ ಹೆಂಡ್ತಿ ಸಾಕಿದ ಬೆಕ್ಕಿಗೆ ಅಡ್ಡ ಹೋದರ ಅದ ಬೆಕ್ಕಿಗೆ ಕೆಟ್ಟ, ಇಕಿ ಎಡದಿಂದ ಬಲಕ್ಕರ ಹೋಗ್ಲಿ, ಇಲ್ಲಾ ಬಲದಿಂದ ಎಡಕ್ಕರ ಹೋಗ್ಲಿ’ ಅನ್ನೋದ ಕ್ಲೀಯರ್ ಆತ. ಹಂಗ ನೀವ್ಯಾರರ ಮನ್ಯಾಗ ಬೆಕ್ಕ ಸಾಕಿದ್ದರ ನಿಮಗೂ ಗೊತ್ತಿರಲಿ ಅಂತ ಇಷ್ಟ ಬರಿಬೇಕಾತ.
ಹಂಗ ನನ್ನ ಹೆಂಡ್ತಿ ಬೆಕ್ಕ ಕಂಡರ ಯಾಕ ಹಿಂಗ ಮಾಡ್ತಿದ್ಲು ಅಂದರ ಅಕಿಗೆ ಯಾರೊ ’ಬೆಕ್ಕಿಗೆ ಏನರ ಹೆಚ್ಚು ಕಡಮಿ ಆದರ ದೊಡ್ಡ ಪಾಪ ಹತ್ತದ, ಬಂಗಾರದ ಬೆಕ್ಕ ಮಾಡಿಸಿಕೊಟ್ಟರು ಆ ಪಾಪ ಹೋಗಂಗಿಲ್ಲಾ’ ಅಂತ ಹೆದರಸಿದ್ದರು. ಅದಕ್ಕ ಅಕಿ ’ಗಂಡಗ ನೋಡಿದರ ಬಿಲವಾರ-ಪಾಟಲಿ ಮಾಡಸೋ ಕ್ಯಾಪ್ಯಾಸಿಟಿ ಇಲ್ಲಾ, ಇನ್ನ ಇಂವಾ ಬಂಗಾರದ ಬೆಕ್ಕ ಎಲ್ಲೇ ಮಾಡಸಬೇಕು..ಸುಳ್ಳ ಏನರ ಹೆಚ್ಚು ಕಡಮಿ ಆಗಿ ಪಾಪ ಹತ್ತಿದರ ಏನ ಮಾಡ್ಬೇಕು’ ಅಂತ ಬೆಕ್ಕಿನ್ನ ಹೊರಗ ಅಟ್ಟಿಸಿಸಿದ್ಲು ಇಷ್ಟ.
ಇಲ್ಲಾಂದರ ಅಕಿಗೆ ಏನ ಪ್ರಾಬ್ಲೇಮ್ ಇರಲಿಲ್ಲಾ, ಅಲ್ಲಾ ನನ್ನ ಸಾಕಲಿಕತ್ತಿದ್ಲು ಇನ್ನ ಬೆಕ್ಕ ಏನರಿ, ಆರಾಮ ಸಾಕ್ತಿದ್ಲು.
ಅಲ್ಲಾ “ನೀ ಏನ ಹುಲಿ ಏನಲೇ ಮಗನ ..ನಿನ್ನ ಸಾಕ್ತಿದ್ಲು ಅನ್ನಲಿಕ್ಕೆ” ಅಂತ ಅನಬ್ಯಾಡರಿ…..ಹಂಗ ಮಾತ ಹೇಳಿದೆ ಇಷ್ಟ.
ಅಲ್ಲಾ ಅಕಸ್ಮಾತ ಯಾರದರ ಮನ್ಯಾಗ ಗಂಡಗ ಬೆಕ್ಕ ಕಂಡರ ಆಗ್ತಿರಂಗಿಲ್ಲಾ ಆದರ ಹೆಂಡ್ತಿನ ಬೆಕ್ಕ ಸಾಕಿದ್ದರ
ನೆನಪ ಇಟಗೊರಿ ಹಂತಾ ಗಂಡಗ ಯಾರ ಹೆಂಗ ಅಡ್ಡ ಹೋದರು ಅಪಶಕುನ ಗ್ಯಾರಂಟಿ.
Super sir