ಮೊನ್ನೆ ಆಫೀಸನಾಗ ಅಡಿಟ್ ಇತ್ತು, ಅಡಿಟರ್ ಕರೆಕ್ಟ ಆಫೀಸ ಶುರು ಆಗೋದಕ್ಕ ಬಂದರು. ಆದರ ನಮ್ಮ ಅಕೌಂಟೆಂಟದ ಇನ್ನೂ ಪತ್ತೆ ಇರಲಿಲ್ಲಾ. ನಾವ ದಾರಿ ಕಾಯ್ಕೋತ ಕೂತ್ವಿ, ಮುಂದ ಒಂದ ತಾಸ ಬಿಟ್ಟ ನಮ್ಮ ಅಕೌಂಟಂಟ್ ಬಂದ್ಲು. ಅಕಿ ಬರೋ ಪುರಸತ್ತ ಇಲ್ಲದ ನಾ ಸಿಟ್ಟಿಗೆದ್ದ
’ಯಾಕ ಲೇಟಾತ…ಇವತ್ತ ಅಡಿಟ್, ತಿಳಿಯಂಗಿಲ್ಲಾ’ ಅಂತ ಅಂದರ ಅಕಿ ಒಂದ ಮಾತನಾಗ
’ಮನ್ಯಾಗ ನಳಾ ಬಂದಿತ್ತರಿ ಸರ್…’. ಅಂದ್ಲು.
ಮುಗಿತ ಅಲ್ಲಿಗೆ ಕಥಿ..ಮುಂದ ನಾನೂ ಮಾತಾಡ್ಲಿಲಾ ಆ ಅಡಿಟರನೂ ಮಾತಾಡ್ಲಿಲ್ಲಾ. ಯಾಕಂದರ ನಳಾ ಬಂದ ದಿವಸ ಹುಬ್ಬಳ್ಳಿ ಧಾರವಾಡದಾಗಿನ ಆಫೀಸ, ಫ್ಯಾಕ್ಟರಿ ಒಳಗಿಂದ ಇದ ಕಾಮನ್ ಸ್ಟೋರಿ.
ಒಮ್ಮೆ ’ನಳಾ ಬಂದಿತ್ತ ಅದಕ್ಕ ಲೇಟಾತ’ ಅಂದ ಬಿಟ್ಟರ ಮುಗದ ಹೋತು ಮುಂದ ಯಾರೂ ಮಾತಾಡೊ ಹಂಗ ಇಲ್ಲಾ. ಹಂಗ ಒಂದ ಒಪ್ಪತ್ತ ’ ನಮ್ಮ ಪೈಕಿ ತಿರಕೊಂಡಿದ್ದರಿ’ ಅಂದರ…’ಬ್ಯಾರೆ ಯಾರನರ ಕಳಸ ಬೇಕಿಲ್ಲ, ನಿನಗ ಆಫೀಸ ಅದ ತಿಳಿಯಂಗಿಲ್ಲಾ’ ಅಂತ ಜೋರರ ಮಾಡಬಹುದು ಆದರ
’ನಳಾ ಬಂದಿದ್ದಕ್ಕ ಲೇಟಾತು’ ಅನ್ನೊದ universally accepted in hubballi-dharwad.
ಮೊದ್ಲ ನಳಾ ಬಂತು ಲೇಟಾತು ಅಂತ ಯಾರರ ಅಂದರ ’ಯಾಕ ನಳ ಬಂದ ದಿವಸಿಷ್ಟ ಸ್ನಾನ ಮಾಡಿ ಬರ್ತಿರೇನ್?’ ಅಂತಿದ್ದೆ ಆದರ ಯಾವಾಗ ನಮ್ಮ ಮನ್ಯಾಗನ ನಳಾ ಬಂದ ದಿವಸ ನಮ್ಮವ್ವ ’ಇವತ್ತ ನಳಾ ಬಂದದ ಸ್ವಚ್ಛಾಗಿ ಯರಕೊ’ಅಂತ ನನ್ನ ಹೆಂಡ್ತಿಗೆ ಅನ್ನೋದ ಕೇಳಿ ನಾ ಮಂದಿಗೆ ಅನ್ನೋದ ಬಿಟ್ಟ ಬಿಟ್ಟೆ.
ಅದರಾಗ ನಾವು ಗಂಡಸರಿಗೆ ಅಕೌಂಟಿಂಗ್ ನೆಟ್ಟಗ ಬರಂಗಿಲ್ಲಾಂತ ಹೆಂಗಸರನ ಇಟಗೊಂಡಿರತೇವಿ. ಪಾಪ ಅವರ ಮನ್ಯಾಗಿಂದ ಕೆಲಸಾ ಬೊಗಸಿ ಮುಗಿಸಿಕೊಂಡ ಆಫೀಸಗೆ ಬರಬೇಕಾರ ನಳಾ ಬಂದರ ಬಿಟ್ಟರ ಮುಗದ ಹೋತ. ಅವರ ಬಂದಾಗ ಖರೆ.
ಒಮ್ಮೊಮ್ಮೆ ಅಂತೂ “ಸರ್ ನಾಳೆ ನಳಾ ಬರ್ತದ ಒಂದ್ಯಾರಡ ತಾಸ ಲೇಟಾಗಿ ಬರ್ತೇನ್ರಿ” ಅಂತ
“ನಾ ಹಾಫ್ ಡೇ ಹೋಗ್ತೇನ್ರಿ?… ನಳಾ ಬರೋದೈತಿ” ಅಂತ ಪರ್ಮಿಶಿನ್ ತೊಗೊಂಡ ಹೋಗ್ತಾರ.
ಇದ ನಮ್ಮ ಊರಿನ ನಳದ ಪರಿಸ್ಥಿತಿ. ಹತ್ತ ಹದಿನೈದ ದಿವಸಕ್ಕೊಮ್ಮೆ ನಳಾ ಬಿಡ್ತಾರ, ಅದರಾಗ ಈಗ ಅಂತೂ ಬ್ಯಾಸಗಿ, ಕರೆಂಟ ಇರಂಗಿಲ್ಲಾ ಹಿಂಗಾಗಿ ಯಾವಾಗ ನಳಾ ಬರ್ತದ ಯಾವಾಗ ಇಲ್ಲಾ ಅನ್ನೋದ ಆ ನಳಾ ಬಿಡೋವಂಗ ಬಿಟ್ಟರ ದೇವರಿಗೂ ಗೊತ್ತಿರಂಗಿಲ್ಲಾ.
ನಳಾ ಬಂದರ…ಅಥವಾ ನಳಾ ಬರೋ ದಿವಸ ಹೆಂತಿಂತಾ ಕೆಲಸಾ ಬಿಡ್ತೇವಿ ಅಂದರ ಕೇಳೊಹಂಗಿಲ್ಲಾ. ಹೇಳಿದ್ರ ನಿಮಗ ಅಜೀಬ ಅನಸ್ತದ.
ಹಿಂದಕ ನಾ ರೇಣುಕಾನಗರದಾಗ ಇದ್ದಾಗ ನಮ್ಮ ಲೈನ ಒಳಗ ಒಬ್ಬರ ತೀರ್ಕೊಂಡಿದ್ದರು, ಅವರ ನಾವ ಸಂಜಿಗೆ ನಾಲ್ಕಕ್ಕ ಎತ್ತತೇವಿ ಅಂತ ಹೇಳಿದ್ದರು. ಈಡಿ ಓಣಿ ಮಂದಿ ಅವರ ಮನಿ ಮುಂದ ಸೇರಿದ್ದಿವಿ. ಇನ್ನೇನ ಮೂರುವರಿ ಪೊಣೆ ನಾಲ್ಕ ಆಗಿತ್ತ ಸಡನ್ ಆಗಿ ನಳಾ ಬಂದ ಬಿಡ್ತ. ಅಲ್ಲಾ ಹಂಗ ನಳಾ ಬರೋ ಪಾಳಿ ಮರದಿವಸ ಇತ್ತ ಆದರ ಅಚಾನಕ ಆಗಿ ನಳಾ ಬಂತ. ನಮಗೇಲ್ಲಾ ಏನ ಮಾಡಬೇಕ ತಿಳಿಲಿಲ್ಲಾ, ಈ ಕಡೆ ನೀರ ತುಂಬಬೇಕೊ ಇಲ್ಲೊ ಸತ್ತವರನ ಎತ್ತ ಬೇಕೊ ಅನ್ನೋ ಕನ್ಫ್ಯೂಸನ್ ಸ್ಟಾರ್ಟ ಆತ. ಹಂಗ ಸತ್ತವರ ಮನಿಗೂ ನೀರ ಬೇಕ ಅಲಾ, ಅವರ ಕಡಿಕೆ ಒಂದ ತಾಸ ಬಿಟ್ಟ ಎತ್ತಿದರಾತು, ಸತ್ತವರಂತು ವಾಪಸ ಬರಂಗಿಲ್ಲಾ ಆದರ ನಳಾ ಇವತ್ತ ಹೋದರ ಮುಂದ ಹತ್ತ ದಿವಸ ಬರಂಗಿಲ್ಲಾ ಅಂತ ಮನಿ ಮುಂದ ಹೆಣಾ ಕಟ್ಟಿ ಕೂಡಿಸಿ ಎಲ್ಲಾರಿಗೂ ನೀರ ತುಂಬಲಿಕ್ಕೆ ಅವಕಾಶ ಕೊಟ್ಟರ ಅನ್ನರಿ.
ಕರೆಕ್ಟ ನಳಾ ಬರೋ ದಿವಸ ನಳಾ ಬರಂಗಿಲ್ಲಾ, ಹಂತಾದ ಒಂದ ದಿವಸ ಮೊದ್ಲ ಹೆಂಗ ನಳಾ ಬಿಟ್ಟಾ ಅಂತ ನಾ ನಳಾ ಬಿಡೋಂವಂಗ ಫೊನ ಮಾಡಿ ಕೇಳಿದ್ರ
’ಏ..ನಮ್ಮ ಚಿಗವ್ವಾ ತೀರ್ಕೊಂಡಾಳ, ನಾ ರಾಮಾಪುರಕ್ಕ ಹೋಗಬೇಕ, ಮಣ್ಣ ನಾಳೇ ಐತಿ, ಮತ್ತ ಹಂಗ ನಾಳೆ ನಾ ನಳಾ ಬಿಡಲಾರದ ಹೋದರ ನೀವ ಹೋಯ್ಕೋತಿರಿ ಅಂತ ಇವತ್ತ ಬಿಟ್ಟೇನಿ..ಬಡಾನ ನೀರ ತುಂಬ್ಕೋರಿ, ನಾ ಐದುವರಿ ಪ್ಯಾಸೆಂಜರಗೆ ಹೋಗೊಂವಾ’ ಅಂತ ಹೇಳಿ ಫೋನ ಇಟ್ಟಾ.
ಅದಕ್ಕ ನಾ ಹೇಳಿದ್ದ ನಳಾ ಯಾವಾಗ ಬರ್ತದ ಅಂತ ದೇವರಿಗೆ ಗೊತ್ತಿರಲಿಲ್ಲಾ ಅಂದರೂ ನಳಾ ಬಿಡೊಂವಂಗ ಗೊತ್ತಿರ್ತದ ಅಂತ.
ಮುಂದ ಹದಿನೈದ ದಿವಸ ಬಿಟ್ಟ ಹಿಂದಿನ ಓಣ್ಯಾಗ ಮತ್ತೊಬ್ಬರ ಹೋಗಿದ್ದರು. ಅವತ್ತ ನಳಾ ಬರೋ ಪಾಳೆ ಇತ್ತ, ಅವರಂತು ಅಗದಿ ಸ್ವಚ್ಛ ’ಏ, ಏನ ಕಾಳಜಿ ಮಾಡಬ್ಯಾಡ್ರಿ, ನಾವ ನಳಾ ಬಂದ ಹೋದ ಮ್ಯಾಲೆ ಎತ್ತತೇವಿ’ ಅಂತ ಕ್ಲೀಯರ್ ಆಗಿ ಹೇಳಿ ಬಿಟ್ಟರು.
ಇನ್ನ ನಳಾ ಬರೋದಿವಸ ಯಾರ ಮನಿ ಕಾರ್ಯಕ್ರಮಕ್ಕೂ ಹೋಗಂಗಿಲ್ಲಾ, ಸಂತಿ ಇಲ್ಲಾ, ಗಿರಣಿ ಇಲ್ಲಾ.
ಇದ ಇವತ್ತಿಂದ ಅಲ್ಲ ಮತ್ತ…ಮೂವತ್ತ ವರ್ಷದ ಹಿಂದನೂ ಹಿಂಗ ಇತ್ತ.
ನಾ ಘಂಟಿಕೇರಿ ಐದ ನಂಬರ ಸಾಲ್ಯಾಗ ಕಲಿತಿದ್ದೆ, ನಳಾ ಬರೋದಿವಸ ನಮ್ಮವ್ವ ಸಾಲಿಗೆ ಹಾಫ್ ಡೇ ಹಾಕಿಸಿಸಿ ಸರ್ಕಾರಿ ನಳದ ಮುಂದ ಪಾಳೆ ಹಚ್ಚಲಿಕ್ಕೆ ನಿಲ್ಲಸ್ತಿದ್ದಳು. ನಾ ಸಾಲಿಗೆ ಮಧ್ಯಾಹ್ನ ಹೋಗ್ತಿದ್ದೆ, ಆವಾಗ ನಮ್ಮ ಸಾಲ್ಯಾಗ ಗೀತ್ತೇ ಟೀಚರ್ ಅಂತ ಒಬ್ಬರ ಇದ್ದರು ಅವರ ನಾ ಹಾಫ್ ಡೇ ಹೋದ ಕೂಡಲೇ
’ಮಗನ ಸಾಲಿಗೆ ಕಲಿಲಿಕ್ಕೆ ಬಾ ಅಂದರ ಮಧ್ಯಾಹ್ನ ಉಪ್ಪಿಟ್ಟ ತಿನ್ನಲಿಕ್ಕೆ ಬಂದಿ ಏನ’ ಅಂತಿದ್ದರು. ಆವಾಗ ಸಾಲ್ಯಾಗ ಮಧ್ಯಾಹ್ನ ಗೊಂಜಾಳ ಉಪ್ಪಿಟ್ಟ ಕೊಡ್ತಿದ್ದರು, ಹಂಗ ನಮ್ಮ ದೋಸ್ತರ ಹೊಟ್ಟಿ ತುಂಬ ತಿಂದ ಮತ್ತ ಮನಿಗೆ ಕಟಗೊಂಡ ಹೋಗ್ತಿದ್ದರು ಆದರ ನಾ ಏನ ತಿಂತಿದ್ದಿಲ್ಲ ಬಿಡ್ರಿ…ಅಲ್ಲಾ ಮನ್ಯಾಗ ನಮ್ಮವ್ವ ಮಾಡಿದ್ದ ಸಣ್ಣನಿ ಕೇಸರಿ ರವಾದ್ದ ಉಪ್ಪಿಟ್ಟ ಜೀರ್ಣ ಆಗ್ತಿದ್ದಿಲ್ಲಾ ಇನ್ನ ಗೊಂಜಾಳ ಉಪ್ಪಿಟ್ಟ ಎಲ್ಲೇ ಜೀರ್ಣ ಆಗಬೇಕ..ಅದರಾಗ ನಮ್ಮವ್ವಂತೂ
’ನೀ ಸಾಲ್ಯಾಗಿನ ಉಪ್ಪಿಟ್ಟ ಒಟ್ಟ ತಿನಬ್ಯಾಡಪಾ, ಮೊದ್ಲ ನಳಾ ಹತ್ತ ದಿವಸಕ್ಕೊಮ್ಮೆ ಬರತದ…ನಿಂಗೇಲ್ಲೇ ಮತ್ತ extra ನೀರ ತರೋಣ’ ಅಂತ ನಂಗ ಆ ಉಪ್ಪಿಟ್ಟ ಮುಟ್ಟಿಸಿ ಕೊಡ್ತಿದ್ದಿಲ್ಲಾ.
ನಾ ಮುಂದ ನ್ಯಾಶನಲ್ ಹೈಸ್ಕೂಲಿಗೆ ಹೊಂಟ ಮ್ಯಾಲೆ ಅಲ್ಲೇನೂ ಹಿಂಗ ನೀರ ಬಂದಾಗ ಪಿರಿಡ್ ತಪ್ಪಿಸ್ತಿದ್ದೆ ಆದರ ಅಲ್ಲೇ ಶಿವಮಠ ಸರ್ ಭಾಳ ಬೈತಿದ್ದಿಲ್ಲಾ
’ಸರ್..ನಳಾ ಬಂದಿತ್ತರಿ, ಹಿಂಗಾಗಿ ಬರಲಿಲ್ಲಾ’ ಅಂತ ಹೇಳಿ ಬಿಟ್ಟರ ಒಂಥರಾ ’ಬಾರಾ ಖೂನ್ ಮಾಫ್’ ಇದ್ದಂಗ ಇತ್ತ. ಯಾಕಂದರ ನಳಾ ಬಂದ ದಿವಸ ಅವರು ಪಿರಿಡ ತಪ್ಪಿಸಿ ಮನಿಗೆ ಹೋಗಿ ನೀರ ತುಂಬಿ ಬರ್ತಿದ್ದರು.
ಹಿಂತಾ ಪರಿಸ್ಥಿತಿ ಒಳಗ ಬೆಳದ ಬಂದೇವಿ ನಾವು, ನಮ್ಮ ಪರಿಸ್ಥಿತಿ ನಮಗ ಗೊತ್ತ.
ಒಂದ ಸರತೆ ಬಿಟ್ಟ ಎರಡ ಸರತೆ ತಂಬಗಿ ತೊಗೊಂಡ ಹೋದ್ರ ನಮ್ಮವಗ ಹುಡಗನ ಆರೋಗ್ಯ ಕೆಟ್ಟದ ಅನ್ನೋದಕಿಂತಾ ನೀರ ಖಾಲಿ ಆಗ್ತಾವ ಅಂತ ಸಂಕಟ ಆಗ್ತಿತ್ತ.
ಆದರೂ ಏನ ಅನ್ನರಿ ಹುಬ್ಬಳ್ಳಿ ಧಾರವಾಡದಾಗ ನಳಾ ಬಂದದ ಅಥವಾ ಬರತದ ಅಂದರ ಅದರ ರೌನಕ್ ಬ್ಯಾರೆ ಇರ್ತದ..
ಮೊನ್ನೆ ಮಠದಾಗ ಪ್ರವಚನ ಇತ್ತಂತ, ನಮ್ಮ ಮನಿ ಬಾಜುಕಿನ ದಮಯಂತಿ ಅಂಟಿ ನನ್ನ ಹೆಂಡ್ತಿಗೆ
’ಅಯ್ಯ ನರಸಿಂಹ ದೇವರ ಗುಡಿಗೆ ಪುರಾಣ ಕೇಳಲಿಕ್ಕೆ ಹೊಂಟಿದ್ದೇವಾ, ನಳಾ ಬಂತ ಹಿಂಗಾಗಿ ಹೋಗಲಿಲ್ಲಾ’ಅಂದ್ಲಂತ.
ಅಲ್ಲಾ ಹಂಗ ಇಡಿ ಓಣಿ ಮಂದಿ ನಳಾ ಬಂತಂತ ಗುಡಿಗೆ ಹೋಗಲಿಲ್ಲಾ ಅಂದರ ರವಿ ಆಚಾರ್ಯರ ’ಭಾಗ್ವತ ಪುರಾಣ’ ಬಿಟ್ಟ ’ನಳ-ದಮಯಂತಿ’ ಕಥಿ ಹೇಳ್ಬೇಕ ಇಷ್ಟ.
ಇದ ನಮ್ಮ ಹುಬ್ಬಳ್ಳಿ ಧಾರವಾಡ ಜನರ ನಳದ ಪುರಾಣ.
ನಾ ಸಣ್ಣಂವ ಇದ್ದಾಗ ನಮ್ಮವ್ವ ನನಗ ನೀರ ತುಂಬಲಿಕ್ಕೆ ಹಚ್ಚೊದಕ್ಕ ನಾ ಒಂದ ಕವನಾ ಕಟ್ಟಿದ್ದೆ.
ನಳಾ ಬಂತ ನಳಾ..
ಯಾ ಓಣಿ ನಳಾ..
ಜೋಳದ ಓಣಿ ನಳಾ..
ಇವತ್ತs ಯಾಕ ಬಂತ್…
ಪಾಳಿ ತಪ್ಪಿ… ನಮ್ಮ ಹೇಣಾ ಎತ್ತಲಿಕ್ಕೆ ಬಂತ್..
ಅಂತ ಹಾಡ್ಕೋತ ನೀರ ತುಂಬತಿದ್ದೆ.
ಇರಲಿ ಸದ್ಯೇಕ ಇಷ್ಟ ಸಾಕ, ಬರಕೋತ ಕೂತರ ನಳದ ಕಥಿ ಎಷ್ಟ ಬರದರೂ ಕಡಮಿನ. ಅದರಾಗ ಇವತ್ತ ನಳಾ ಬ್ಯಾರೆ ಬರೋದ ಅದ.
ನೋಡ್ರಿ ನಿಂಬದ್ಯಾರದರ ಮನ್ಯಾಗ ನಳಾ ಬರೋದಿತ್ತಂದರ ಎದ್ದ ನೀರ ತುಂಬರಿಪಾ, ನನ್ನ ಆರ್ಟಿಕಲ್ ಏನ್ ಆಮ್ಯಾಲೇನೂ ಓದಬಹುದು, ನಳಾ ಹೋದ್ರ ಏನ್ಮಾಡ್ತೀರಿ?
ಭಾಳ್ ಚಲೋ ಬರದೀಯಾ
ಯಾವತ್ತೂ ಮುಗಿಯದ ಸಮಸ್ಯೆ
ಹುಬ್ಬಳ್ಳಿ ಯಲ್ಲಿ ಭಾಳ್ ಟೈಮ್ ನೀರು ತುಂಬೋದ್ರಾಗೆ ಹೋಗ್ತದೆ