ರ್ರಿ..ನಂಗ ಈ ಧ್ವನಿ ಎಲ್ಲೋ ಕೇಳಿದಂಗ ಅದ

ಒಂದ ಎರಡ ತಿಂಗಳದ ಹಿಂದ ಫ್ರೀ ಎಂಟ್ರಿ ಅದ ಅಂತ ಒಂದ ಸಂಗೀತ ಕಾರ್ಯಕ್ರಮಕ್ಕ ಹೆಂಡ್ತಿನ್ನೂ ಕರಕೊಂಡ ಹೋಗಿದ್ದೆ.
ಇನ್ನೇನ ಕಾರ್ಯಕ್ರಮ ಶುರು ಆಗಬೇಕು, ನಿರೂಪಕಿ ಬಂದ ಸ್ವಾಗತ ಮಾಡೋದಕ್ಕ ನನ್ನ ಹೆಂಡ್ತಿ ಸಟಕ್ಕನ್
“ರ್ರಿ…ನಾ ಇವರ ಧ್ವನಿ ಎಲ್ಲೋ ಕೇಳೇನ್ರಿ” ಅಂತ ಅಂದ್ಲು. ಅಲ್ಲಾ ಹಂಗ ಇಕಿ ಜೀವನದಾಗ ಮ್ಯೂಸಿಕ್ ಕನ್ಸರ್ಟಗೆ ಬಂದಿದ್ದ ಮೊದ್ಲನೇ ಸಲಾ, ಅಕಿ ಹೆಂಗ ಈ ಧ್ವನಿ ಕೇಳಲಿಕ್ಕೆ ಸಾದ್ಯ ಅಂತೇನಿ. ಅದರಾಗ ಇಕಿಗೆ ಯಾರದರ ಧ್ವನಿ ಕೇಳಿದ್ಲು ಅಂದರ “ರ್ರಿ…ನಾ ಈ ಧ್ವನಿ ಎಲ್ಲೋ ಕೇಳಿನಿ” ಅಂತ ಅನ್ನೋ ಚಟಾ ಮೊದ್ಲಿಂದ ಅದ, ಹಿಂಗಾಗಿ ನಾ ಅಕಿ ಹೇಳಿದ್ದನ್ನ ಭಾಳ ತಲಿಕೆಡಸಿಗೊಳ್ಳಲಾರದ
’ನೀ ಸುಮ್ಮನ ಬಾಯಿ ಮುಚಗೊಂಡ ಸಂಗೀತ ಕೇಳ, ನಿರೂಪಕಿದ ಧ್ವನಿ ತೊಗೊಂಡ ಏನ ಮಾಡ್ತಿ, ಈಗ ಜಯತೀರ್ಥ ಮೇವೂಂಡಿಯವರದ ವೋಕಲ್ ಅದ ಅದನ್ನ ಕೇಳ…ಮತ್ತ ಅದಕ್ಕೂ ’ಈ ಧ್ವನಿ ಎಲ್ಲೋ ಕೇಳೇನಿ ಅನಬ್ಯಾಡ’ ಅದ ಜಯತೀರ್ಥ ಮೇವೂಂಡಿಯವರದ ಧ್ವನಿ’ ಅಂತ ಅಕಿ ಬಾಯಿ ಮುಚ್ಚಸಿದೆ.
ಮುಂದ ಜಯತೀರ್ಥ ಅವರದ ಒಂದನೇ ಕಾರ್ಯಕ್ರಮ ಮುಗಿಯೋದಕ್ಕ ಮತ್ತ ನಿರೂಪಕಿ
’ನಮ್ಮನ್ನೇಲ್ಲಾ, ತಮ್ಮ ಮಧುರ ಸಂಗೀತದಿಂದ ಸ್ವರ ಲೋಕದಲ್ಲಿ ತೇಲಿ ಹೋಗುವಂತೆ ಗಾಯನ ಮಾಡಿದ ಜಯತೀರ್ಥ ಅವರಿಗೆ ಅನಂತ ಅಭಿನಂದನೆಗಳು’ ಅಂತ ಅನ್ನೊದಕ್ಕ ಇಕಿ ಮತ್ತ
“ರ್ರಿ..ನಾ ಖರೇ ಹೇಳ್ತೇನಿ…ಇವರ ಧ್ವನಿ ನಾ ಎಲ್ಲೋ ಕೇಳೇನಿ..ಮತ್ತ ಭಾಳ ಸಲಾ ಕೇಳೇನಿ’ ಅಂತ ಗಂಟ ಬಿದ್ಲು.
“ಯಪ್ಪಾ, ಕೇಳಿದ್ದರ ಕೇಳಿರಬಹುದು ತೊಗೊ…ನಾ ಇಲ್ಲೇ ಸಂಗೀತ ಕೇಳಲಿಕ್ಕೆ ಬಂದೇನಿ…ನಿಂದೂ ಅಲ್ಲಾ ನಿರೂಪಕಿದು ಅಲ್ಲಾ’ ಅಂತ ಸುಮ್ಮನ ಕೂಡಸಿದೆ.
ಅಲ್ಲಾ ಹಂಗ ನನ್ನ ಹೆಂಡ್ತಿಗೆ ಹಿಂಗ ಯಾವದರ ಧ್ವನಿ ಎಲ್ಲೋ ಕೇಳಿನಿ ಅಂತ ಅನಿಸಿ ಬಿಟ್ಟರ ಅದನ್ನ ಅಕಿ ಪತ್ತೆ ಹಚ್ಚೋತನಕ ಬಿಡಂಗಿಲ್ಲ.
ಹಿಂತಾ ಅನುಭವ ನನಗ ಭಾಳ ಆಗ್ಯಾವ. ಅಕಿದ voice recognition ಹೆಂತಾ ಖತರನಾಕ ಅದ ಅಂದರ ಒಂದ ಸರತೆ ನಮ್ಮ ಕಸೀನ್ ನಾಲ್ಕೈದ ವರ್ಷದ ಮ್ಯಾಲೆ ಅದು ಹೊಸಾ ನಂಬರಲೇ ಫೋನ ಮಾಡಿ
’ನಾ ಯಾರ ಗೊತ್ತಾತಿಲ್ಲೋ’ ಅಂತ ಕೇಳಿದರ
’ಅಯ್ಯ ಸಂಗೀತಕ್ಕ.. ನಿಮ್ಮನ್ನ ಗೊತ್ತ ಹಿಡಿಲಿಲ್ಲಾ ಅಂದರ ಹೆಂಗರಿ…ಯಾಕ ಧ್ವನಿ ಗಡಸ ಆಗೇದಲಾ throat infection ಆಗೇದಿನ’ ಅಂತ ಕೇಳಿದ್ಲು.
ಏನ್ಮಾಡ್ತೀರಿ? ಅಕಿ ಫೋನ ಮಾಡಿದ್ದ ನಾಲ್ಕೈದ ವರ್ಷದ ಮ್ಯಾಲೆ. ಹಂತಾದರಾಗ ಅಕಿಗೆ ಗಂಟ್ಲದ ಇನ್ಫೇಕ್ಷನ್ ಆಗಿ ಅಕಿ ಸ್ವಂತ ಗಂಡನ ಫೋನನಾಗ ಗೊರ್ತ ಹಿಡಿತಿದ್ದನೋ ಇಲ್ಲೊ ಆದರ ನನ್ನ ಹೆಂಡತಿ ಕರೆಕ್ಟ ಗೊತ್ತ ಹಿಡದ್ಲು.
ಹಂಗ ನನಗೇನರ ಫೋನ ಬಂದಾಗ ಇಕಿ ಮುಂದ ಇದ್ಲಂತ ತಿಳ್ಕೋರಿ, ನಾ ಎಷ್ಟ ಕಿವ್ಯಾಗ ಇಟಗೊಂಡ ಮಾತಾಡಿದರು ಇಕಿ ಪಟ್ಟ ಅಂತ ನನ್ನ ಜೊತಿ ಯಾರ ಮಾತಾಡಲಿಕತ್ತಾರ ಅಂತ ಗೊರ್ತ ಹಿಡಿತಾಳ, ನಾ ಎದ್ದ ಹೊರಗ ಹೋಗಿ ಮಾತಾಡಿದರಂತೂ
“ಯಾಕ, ಆ ಮೇಡಮಂದ ಫೋನ ಭಾಳ ಬರಲಿಕತ್ತಾವಲಾ, ರಾತ್ರಿ ಮಾತಾಡೊಂತಾದೇನ ಇರ್ತದ ಅರ್ಜೆಂಟ ಕೆಲಸಾ..” ಅಂತ ಅಂದ ಬಿಡ್ತಾಳ. ಅಲ್ಲಾ ಹಂಗ ನಾ ಮನ್ಯಾಗ ಸಿಗ್ನಲ್ ಸರಿ ಬರಂಗಿಲ್ಲಾ, ಕರೆಕ್ಟ ಕೇಳಸಂಗಿಲ್ಲಾ ಅಂತ ಎದ್ದ ಹೋದರ ಇಕಿ ಅಷ್ಟರಾಗ ಆ ಧ್ವನಿ ಗೊತ್ತ ಹಿಡದ ಇಷ್ಟ ಮಾತಾಡ್ತಾಳ.
ಇನ್ನೊಂದ ಮಜಾ ಕೇಳ್ರಿಲ್ಲೇ. ಒಂದ ಎರಡ ವರ್ಷದ ಹಿಂದ ನಮ್ಮ ರೆಗೂಲರ್ ಅಷ್ಟಮಿ ಮುತ್ತೈದಿ ಕೈ ಕೊಟ್ಟಳು ಅಂತ ಒಟ್ಟ ಪರಿಚಯ ಇರಲಾರದ ಒಂದ ಮುತ್ತೈದಿ ಹುಡಕಿ ತಂದಿದ್ದೆ, ಮುಂದ ಆರತಿ ಮಾಡಬೇಕಾರ ಇಕಿ ಆ ಮುತ್ತೈದಿಗೆ
’ನೀವ ಒಂದ ಆರತಿ ಹಾಡ ಹೇಳಿ ಬಿಡ್ರಿ ಹೆಂಗಿದ್ದರೂ ದಕ್ಷಿಣಿ ಕೊಟ್ಟ ಕೋಡ್ತೇವಿ…’ ಅಂತ ಅಕಿ ಕಡೆನ ಆರತಿ ಹಾಡ ಹೇಳಸಿದ್ಲು. ಅವರು ಆರತಿ ಹಾಡ ಹೇಳಿ ಮುಗಸೋ ಪುರಸತ್ತ ಇಲ್ಲದ
“ನನಗ ನಿಮ್ಮ ಧ್ವನಿ ಎಲ್ಲೋ ಕೇಳಿನಿ ಅಂತ ಅನಸಲಿಕತ್ತದ ಆದರ ಎಲ್ಲೇ ಅಂತ ನೆನಪಾಗವಲ್ತು” ಅಂದ್ಲು.
ಪಾಪ ಆ ಮುತ್ತೈದಿ ನಾ ಅಂತೂ ನಿಮ್ಮನ್ನ ಮೊದ್ಲ ನೋಡಿದಂಗಿಲ್ಲಾ ಅಂದರೂ ಇಕಿಗೆ ಸಮಾಧಾನ ಆಗಲಿಲ್ಲಾ. ಕಡಿಕೆ ಅಕಿ ಊಟಾ ಮಾಡಿ ಇನ್ನೇನ ದಕ್ಷಿಣಿ ತೊಗೊಂಡ ಹೋಗಬೇಕಾರ ಇಕಿ ಒಮ್ಮಿಕ್ಕಲೇ
“ಹಾಂ….ಮೂರ ವರ್ಷದ ಹಿಂದ ಬನಶಂಕರಿ ನವರಾತ್ರಿಗೆ ನೀವ ಮುತ್ತೈದಿ ಅಂತ ಪೂಜಾ ಕುಲಕರ್ಣಿಯವರ ಮನಿಗೆ ಬಂದಾಗ ಇದ ಆರತಿ ಹಾಡ ಹೇಳಿದ್ದರಿ ಹೌದಲ್ಲ?” ಅಂದ್ಲು.
ಆ ಮುತ್ತೈದಿ ಇಕಿ ಮಾತ ಕೇಳಿ ಅವಕ್ಕ್ ಆದ್ಲು. ಯಾಕಂದರ ಇಕಿ ಹೇಳಿದ್ದ ಕರೆಕ್ಟ ಇತ್ತ, ಅಕಿ ಹೋಗಬೇಕಾರ ನನ್ನ ಹೆಂಡ್ತಿಗೆ “ಮುಂದಿನ ವರ್ಷ ಮತ್ತ ನನಗ ಕರೀರಿ ವೈನಿ ಆವಾಗ ಬ್ಯಾರೆ ಆರತಿ ಹಾಡ ಹೇಳ್ತೇನಿ” ಅಂತ ಅಂದ ಹೋದ್ಲು. ಬರೇ ಒಂದ ನವರಾತ್ರಿ ಆರತಿ ಹಾಡಿನ ಮ್ಯಾಲೆ ಧ್ವನಿ ಗೊತ್ತ ಹಿಡದ್ಲು ಅಂದರ ವಿಚಾರ ಮಾಡ್ರಿ ಎಷ್ಟ ಶಾಣ್ಯಾಕ ಇರಬೇಕ ನಮ್ಮ ಮನಿ ಮುತ್ತೈದಿ ಅಂತ.
ಇವನ್ನೇಲ್ಲಾ ಬಿಡ್ರಿ. ಇಕಿ this line is busy kindly call after sometime ಅಂತ, ’this telephone number does not exist’ ಅಂತ ದ್ವನಿ ಬರ್ತದಲಾ ಅವಕ್ಕೂ ಒಂದೊಂದ ಸರತೆ ’ರ್ರಿ..ಈ ಧ್ವನಿ ಎಲ್ಲೋ ಕೇಳೇನಿ” ಅಂತ ಗಂಟ ಬಿಳ್ತಾಳ, ಏನ್ ಮಾಡ್ತೀರಿ?
ಇನ್ನ ಇತ್ತಲಾಗ ಪ್ರೊಗ್ರಾಮ್ ಮುಗಿತಂತ ನಿರೂಪಕಿ ಎಲ್ಲಾರಿಗೂ ವಂದಾನರ್ಪಣೆ ಮಾಡೋದಕ್ಕ ಇಕಿ ಸಡನ್ ಆಗಿ
“ರ್ರಿ…ನಾ ಹೇಳಲಿಲ್ಲಾ, ನಿಮಗ ಈ ಧ್ವನಿ ಎಲ್ಲೋ ಕೇಳೇನಿ ಅಂತ…ಈಗ ಗೊತ್ತಾತ ನೋಡ್ರಿ” ಅಂದ್ಲು.
ನಂಗೊತ್ತಿತ್ತ ಅಕಿ ಹಂಗ ಸರಳ ಬಿಡೋಕಿ ಅಲ್ಲಾ ಪತ್ತೇ ಹಚ್ಚೇ ತೀರ್ತಾಳ ಅಂತ.
“ರ್ರಿ…ಮುಂಜಾನೆ ಆ ಕಸದ ಗಾಡಿ ಒಳಗ ಅನೌನ್ಸ ಮಾಡ್ತಾರಲಾ ’ನಿಮ್ಮ ಕಸವನ್ನು ನಮಗೆ ಕೊಟ್ಟು ಸಹಕರಿಸಿ’ ಅಂತ ಅದ ಇದ ಧ್ವನಿ ನೋಡ್ರಿ” ಅಂದ್ಲು. ನಾ ಇಕಿ ಮಾತ ಕೇಳಿ ಗಾಬರಿ ಆದೆ. ಅಷ್ಟರಾಗ ಕಾರ್ಯಕ್ರಮ ಮುಗದಿತ್ತ, ಪಾಪ ಆ ನಿರೂಪಕಿ ಎದರಿಗೆ ಬಂದ ಬಿಟ್ಟರ. ಇಕಿ ಭಡಾ ಭಡಾ ಅವರನ ಕಂಡೋಕಿನ ಪರಿಚಯ ಮಾಡ್ಕೊಂಡ
“ನಾ ನಿಮ್ಮ ಧ್ವನಿ ದಿವಸಾ ಕೇಳ್ತೇನ್ರಿ..ನಾ ನಮ್ಮ ಮನಿಯವರಿಗೆ ನೀವು ಸ್ಟಾರ್ಟಿಂಗಗೇ ಮಾತಾಡಿದಾಗ ಅಂದೆ, ಈ ಧ್ವನಿ ಎಲ್ಲೋ ಕೇಳಿನ ಅಂತ, ನಮ್ಮ ಮನಿಯವರ ನನ್ನ ಮಾತ ಕೇಳಲಿಲ್ಲಾ…..ಈಗ ಗೊತ್ತಾತ, ಆ ಕಸದ ಗಾಡ್ಯಾಗ ಅನೌನ್ಸ ಮಾಡೋರ ನೀವ ಹೌದಲ್ಲ” ಅಂತ ಅಂದ ಬಿಟ್ಟಳು. ಅದು ನಾಲ್ಕೈದ ಮಂದಿ ಮುಂದ, ನಂಗರ ಹಿಂತಾ ಅಸಂಯ್ಯ ಆತು, ಪಾಪ ಇನ್ನ ಅವರಿಗೆ ಹೆಂಗ ಅನಸಿರಬಾರದು ಅಂತೇನಿ. ಅವರ ಒಂದ ಸರತೆ ಡೀಪ್ ಬ್ರೀಥ್ ತೊಗೊಂಡ
“ಇಲ್ಲರಿ ಅದ ನನ್ನ ಧ್ವನಿ ಅಲ್ಲಾ, ನಾ ಟ್ರಾಫಿಕ್ ಪೋಲಿಸರಿಗೆ ಇಷ್ಟ ನನ್ನ ಧ್ವನಿ ಕೊಟ್ಟೇನಿ. ಚೆನ್ನಮ್ಮಾ ಸರ್ಕಲದಾಗ, ಅಲ್ಲೇ ಇಲ್ಲೇ ಟ್ರಾಫಿಕ ಸರ್ಕಲನಾಗ್ ಅನೌನ್ಸ ಮಾಡ್ತಾರಲಾ ಅದ ನನ್ನ ಆವಾಜ” ಅಂತ ಅಗದಿ ಸೂಕ್ಷ್ಮ ಹೇಳಿದರು.
ಇಕಿ ಪಟಕ್ಕನ
“ರ್ರಿ…ನಾ ಹೇಳಲಿಲ್ಲಾ ನಿಮಗ ಈ ಧ್ವನಿ ಎಲ್ಲೋ ಕೇಳಿನಿ ಅಂತ ಈಗ ನೆನಪಾತ, ನಮ್ಮ ಅಕ್ಷಯ ಪಾರ್ಕ ಸರ್ಕಲನಾಗ ಟ್ರಾಫಿಕ್ ಅನೌನ್ಸಮೆಂಟ್ ಇವರ ಮಾಡ್ತಾರ” ಅಂತ ಅಂದ್ಲು. ನಾ ಏನೂ ಮಾತಾಡ್ಲಿಲ್ಲಾ, ಭಾಳ ಶಾಣ್ಯಾಕಿ ಇದ್ದಿ ಮನಿಗೆ ನಡಿ ಅಂತ ದರಾ ದರಾ ಕೈಹಿಡದ ಮನಿಗೆ ಕರಕೊಂಡ ಬಂದೆ.
ದಾರಿ ಒಳಗ ಬರಬೇಕಾರ
“ಅಲ್ಲರಿ… ಹಂಗರ ಆ ಮುಂಜಾನೆ ಆ ಕಸದ ಗಾಡ್ಯಾಗ ಅನೌನ್ಸ ಮಾಡೋಕಿ ಯಾರ?” ಅಂತ ಮತ್ತ ಗಂಟ ಬಿದ್ಲು
“ಏ, ನಮ್ಮವ್ವಾ. ನಮ್ಮ ಮೇಯರ ಇದ್ದರಲಾ ಸುಧೀರ ಸರಾಫ ಅವರ ನಂಬರ ಕೊಡ್ತೇನಿ, ಅವರಿಗೆ ಫೋನ್ ಮಾಡಿ ಕೇಳ..ನೀ ಇನ್ನ ಮತ್ತ ಯಾರಿಗೂ ಕಸದ ಗಾಡ್ಯಾಗ ಅನೌನ್ಸ ಮಾಡೋರ ನೀವ ಅಂತ ಕೇಳಿ ಗೀಳಿ” ಅಂತ ಜೋರ ಮಾಡಿದೆ.
ಅಲ್ಲಾ ಹಂಗ ನಾ ಹೇಳಿದ್ದ ನಿಮಗ ಮಸ್ಕೀರಿ ಅನಸಬಹುದು ಆದರ ಒಂದ ಸರತೆ ಬೇಕಾರ ನೀವು ನಮ್ಮಕಿ ಜೊತಿ ಮಾತಾಡಿ ನೋಡ್ರಿ…ನೆಕ್ಸ್ಟ ಟೈಮ ಮತ್ತೊಮ್ಮೆ ನೀವು ಬರೇ ಫೋನನಾಗ ಕೆಮ್ಮಿದರ ಸಾಕ ಅಕಿ ನೀವ ಅಂತ ಕರೆಕ್ಟ ಹೇಳಲಿಲ್ಲಾ ಅಂದರ ಹೇಳ್ರಿ.

One thought on “ರ್ರಿ..ನಂಗ ಈ ಧ್ವನಿ ಎಲ್ಲೋ ಕೇಳಿದಂಗ ಅದ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

About Me

ಹುಟ್ಟಿದ್ದು 1973, ಅಕ್ಟೋಬರ 13ಕ್ಕ. ಹೆಸರಿಗೆ ಹುಟ್ಟಿದ್ದ ಶಿವಮೊಗ್ಗಾ ಆದರು, ಬೆಳದಿದ್ದು-ಬಲತಿದ್ದು-ಕಲತಿದ್ದು- ಕಳತಿದ್ದು (ಪಕ್ವವಾಗಿದ್ದು) ಎಲ್ಲಾ ಹುಬ್ಬಳ್ಳಿ ಒಳಗ, ಕಲತಿದ್ದು ಬಿ.ಏಸ್ಸಿ, ಕೋತಂಬರಿ ಕಾಲೇಜ ಹುಬ್ಬಳ್ಳಿ ಒಳಗ ಮುಂದ ಎಮ್.ಬಿ.ಎ (ಸಿಂಬಾಯ್ಸಿಸ್- ಪೂಣೆ). ಸದ್ಯೇಕ...

Follow me on Facebook

ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ