ಒಂದ ಐದ ವರ್ಷದ ಹಿಂದಿನ ಮಾತ, ನಮ್ಮ ದೋಸ್ತ ಒಬ್ಬಂವ ಒಂದ ಹುಡುಗಿ ಲವ್ ಮಾಡ್ತಿದ್ದಾ. ಇಂವಾ ನಮ್ಮ ಪೈಕಿ ಧಾರವಾಡಿ. ಅಗದಿ eligible bachelor…ಹುಡುಗಿನೂ made for each other ಅನ್ನೊಂಗ ಇದ್ದಳು ಆದರ ಅಕಿ ಮಾರವಾಡಿ.
ಪಾಪ ನಮ್ಮ ದೋಸ್ತ ತಾ ಎಷ್ಟ ಪ್ಯೂರ್ ವೆಜಿಟೇರಿಯನ್, ನೆಗಡಿ ಆದಾಗಿಷ್ಟ ಎಗಟೆರಿಯನ್ ಅಂತ ಅಂದರೂ ಹುಡುಗಿ ಮನಿಯವರ ಒಪ್ಪಲಿಲ್ಲಾ. ಇನ್ನ ಹುಡುಗನ ಮನ್ಯಾಗ ಪ್ರಾಬ್ಲೇಮ್ ಇದ್ದಿದ್ದಿಲ್ಲಾ. ಅವರ ಕನ್ಯಾ ಹುಡ್ಕೋದ ತಪ್ಪತ ಬಿಡ, ಮದ್ಲ ಕನ್ಯಾಕ್ಕ ಬರಗಾಲ ಅಂತ ಖುಶ್ ಆದರು.
ಅದರಾಗ ಇತ್ತಿತ್ತಲಾಗ ನಮ್ಮ ಹುಡುಗರು ಯಾರನರ ಲವ್ ಮಾಡ್ಲಿಕತ್ತರ ಮಂದಿ ಡೌಟಲೇ ನೋಡಲಿಕತ್ತಾರ, ಅವರಿಗೆ ಇದ ಖರೇನ ಲವ್ವೋ, ಇಲ್ಲಾ ಅವರ ಕಡೆ ಕನ್ಯಾ ಖಾಲಿ ಆಗ್ಯಾವ ಅಂತ ನಮ್ಮ ಹುಡಗ್ಯಾರಿಗೆ ಬೆನ್ನ ಹತ್ಯಾರೊ ಅಂತ ಡೌಟ. ಅಲ್ಲಾ ಹಂಗ ಅದ ಹಕಿಕತ…ಅದರಾಗ ಅವರದೇನ ತಪ್ಪ ಇಲ್ಲ ಬಿಡ್ರಿ.
ಆದರ ನಮ್ಮ ಹುಡುಗಂದ ಪ್ಯೂರ ವೆಜಿಟೆರಿಯನಕಿಂತಾ ಪ್ಯೂರ ಲವ್ ಇತ್ತ ಆದರು ಹುಡುಗಿ ಮನೆಯವರ ಒಪ್ಪಲಿಲ್ಲಾ.
ನಮ್ಮ ದೋಸ್ತ ಮನಿತನಕ ನಾಲ್ಕ ಮಂದಿ ಹಿರೇಮನಷ್ಯಾರನ ಕರಕೊಂಡ ಹೋಗಿ ಬಂದರೂ ಅವರ ಸ್ವಚ್ಛ ಇಲ್ಲಾ ಅಂದ ಕಳಸಿದರು. ಇತ್ತಲಾಗ ಹುಡುಗಾ-ಹುಡುಗಿ ಅಂತು ’ಏಕ ದು ಜೇ ಕೇಲಿಯೇ ’ಲೇವಲಗೆ ಹೋಗಿದ್ದರು. ಅಂದರ ಇಬ್ಬರು ಕೂಡೆ ಸಮುದ್ರ ಹಾರೋದಲ್ಲಾ ಮತ್ತ.
ಮ್ಯಾಲೆ ಇವರದ blind love ಇದಿದ್ದಿಲ್ಲಾ, ಇವರ loveಗೆ vision ಇತ್ತ
(ಮುಂದ ನಮ್ಮಂಗ ಒಂದಿಪ್ಪತ್ತ ವರ್ಷ ಸಂಸಾರ ಮಾಡೋದರಾಗ ಇದ್ದ-ಬಿದ್ದ vision ಬ್ಲರ್ ಆಗಿ ಬ್ಯಾರೆ ಏನೂ ಪ್ರೋಗ್ರೆಸ್ಸಿವ್ ಆಗದಿದ್ದರು lens progressive ಆಗ್ತಾವ ಆ ಮಾತ ಬ್ಯಾರೆ)
ಕಡಿಕೆ ಅವರಿಬ್ಬರು ಓಡಿ ಹೋಗಿ ಮದ್ವಿ ಮಾಡ್ಕೊಳೊದಂತ ಡಿಸೈಡ ಮಾಡಿದರು.
ಹಿಂಗ ಹುಡಗಿನ್ನ ಓಡಿಸಿಕೊಂಡ ಹೋಗೊದಕ್ಕ ಹುಡಗನ ಮನ್ಯಾಗ
’ಏ…ನಮ್ಮ ಮನ್ಯಾಗ ಹುಡಗಿ ಓಡಿಸ್ಗೊಂಡ ಹೋಗೊ ಪದ್ಧತಿ ಇಲ್ಲಾ, ಅವರ ಮನಿಯವರನ ಒಪ್ಪಿಸಿಸಿನ ಮದ್ವಿ ಮಾಡ್ಕೋಳೊದ’ ಅಂತ ನಿಂತರು.
ನಮ್ಮ ದೋಸ್ತಗರ ಹುಡಗಿನ ಲವ್ ಮಾಡಿಲಿಕ್ಕೆ ಒಪ್ಪಸಿಸಿ, ಮದ್ವಿಗೆ ಒಪ್ಪಸೊದರಾಗ ರಗಡ ಆಗಿತ್ತ ಇನ್ನ ಮತ್ತೆಲ್ಲೇ ಅಕಿ ಪೇರೆಂಟ್ಸನ್ನ ಒಪ್ಪಸೋದ ಅಂತ ಅಂವಾ ಸೀದಾ ಎಬಿಸಿಗೊಂಡ ಬರಲಿಕ್ಕೆ ರೆಡಿ ಆಗಿದ್ದಾ.
ಇನ್ನ ಹುಡುಗಿ ಓಡಿಸಿಕೊಂಡ ಬರೋದ ಅಂದ ಮ್ಯಾಲೆ ಅಂವಾ ಅದಕ್ಕೊಂದ ದೋಸ್ತರದ ಮಾಡಿ ಅದರಾಗ ನನ್ನೂ ಹಾಕಿದಾ. ಹಂಗ ನನಗೇನ past experience ಇದ್ದಿದ್ದಿಲ್ಲ ಬಿಡ್ರಿ, ಅಲ್ಲಾ ಓಡಿಸಿಗೊಂಡ ಹೋಗೊ ಕ್ಯಾಪ್ಯಾಸಿಟಿ ಇದ್ದರ ನಾ ಯಾಕ ಕನ್ಯಾ-ಕುಲಾ-ಕುಂಡ್ಲಿ ನೋಡಿ ಲಗ್ನಾ ಮಾಡ್ಕೊತಿದ್ದೆ.
ಸರಿ..ಇನ್ನ ದೋಸ್ತ…ಮ್ಯಾಲೆ ನನಗಂತೂ ಕನ್ಯಾ ಹುಡಕಿ ಕೊಡ್ಲಿಕ್ಕೆ ಆಗಲಿಲ್ಲಾ. ಪಾಪ ಅಂವಾ ಹುಡಕಿದ್ದ ಕನ್ಯಾನರ ಓಡಿಸ್ಗೊಂಡ ಬಂದರಾತು ಅಂತ ಹೂಂ ಅಂದೆ.
ಮೂರ-ನಾಲ್ಕ ಮಂದಿ ದೋಸ್ತರ ಕೂಡಿ ಅಗದಿ ಸರ್ಜಿಕಲ್ ಸ್ಟ್ರೈಕ್ ಗತೆ ಪ್ಲ್ಯಾನ ಮಾಡಿದ್ವಿ, ಲಗ್ನಕ್ಕ ಸೀರಿ, ಜಂಪರ್, ಕಾಲುಂಗರಾ, ಮಂಗಳಸೂತ್ರ ಎಲ್ಲಾ ವ್ಯವಸ್ಥಾ ಮಾಡಿದ್ವಿ.
ಕಡಿಕೆ ಒಂದ ದಿವಸ ಮುಂಜಾನೆ ಹುಡಗಿ ಓಡಿಸ್ಗೊಂಡ ಬರಲಿಕ್ಕೆ ಹೋದ್ವಿ.
ಹುಡುಗಿಗೆ ನಾಳೆ ಮುಂಜಾನೆ ಬರ್ತೇವಿ ಅಂತ ಮೆಸೆಜ್ ಕೊಟ್ಟಿದ್ವಿ. ಅಕಿ ’ನಾ ಮುಂಜಾನೆ ೮.೩೦ಕ್ಕ ಕರೆಕ್ಟ ಮನಿಯಿಂದ ಕಸಾ ಚೆಲ್ಲಲಿಕ್ಕ ಹೊರಗ ಬರ್ತೇನಿ’ಅಂತ ಹೇಳಿದ್ಲು. ಏನೋ ನಮ್ಮ ದೋಸ್ತನ ಪುಣ್ಯಾ ಆವಾಗಿನ್ನೂ ’ಸ್ವಚ್ಛ ಭಾರತ’ ಇದ್ದಿದ್ದಿಲ್ಲಾ. ಹಿಂಗಾಗಿ ಮನಿ-ಮನಿಗೆ ಬಂದ ಕಸಾ ಒಯ್ತಿದ್ದಿಲ್ಲಾ, ನಾವ ತಿಪ್ಪಿಗುಂಡಿಗೆ ಹೋಗಿ ಕಸಾ ಹಾಕ ಬೇಕಾಗ್ತಿತ್ತ. ಅದಕ್ಕ ಆ ಹುಡಗಿ ಕಸಾ ಹಾಕೊ ನೆಪದಾಗ ಬರ್ತೇನಿ ಅಂತ ಹೇಳಿದ್ಲು.
ಮುಂದ ನಾವ ಕಾರ ತೊಗೊಂಡ ತಿಪ್ಪಿಗುಂಡಿ ಬಾಜೂಕ ಕಾಯ್ಕೋತ ಕೂತ್ವಿ, ಹುಡುಗಿ ಹವಾಯಿ ಚಪ್ಪಲ ಮ್ಯಾಲೆ ಕಸಾ ಹಾಕಲಿಕ್ಕೆ ಬಂದ್ಲು, ಅಕಿನ್ನ ಗಾಡ್ಯಾಗ ಕರಕೊಂಡ ಸೀದಾ ಇನ್ನೊಬ್ಬ ದೋಸ್ತನ ಮನಿಗೆ ಹೋದ್ವಿ. ಪಾಪ ಅವನ ಹೆಂಡ್ತಿ ಅಂತೂ ನಾವ ಹುಡಗಿ ಓಡಿಸ್ಗೊಂಡ ಮನಿಗೆ ಹೋದ ಕೂಡ್ಲೆ ಗಾಬರಿ ಆದ್ಲು.
ಮುಂದ ಹುಡಗಿನ್ನ ತಯಾರ ಮಾಡಿ ಈಶ್ವರ ದೇವರ ಗುಡಿಗೆ ಕರಕೊಂಡ ಬರೋ ಜವಾಬ್ದಾರಿ ಅಕಿಗೆ ಕೊಟ್ಟ ನಾವು ಮುಂದಿನ ವ್ಯವಸ್ಥಾ ಮಾಡಲಿಕ್ಕೆ ಹೋದ್ವಿ. ಇತ್ತಲಾಗ ನಾವ ತಂದದ್ದ ಸೀರಿ ಸಾತರೂ ಜಂಪರ್ ತೋಳ ಹಿಡಿಯೋ ಪ್ರಸಂಗ ಬಂದಿತ್ತ. ಪಾಪ ಆ ಹುಡಗಿ ಓಡಿ ಬರೋ ಟೇನ್ಶನದಾಗ ’ಏಕ ದೂ ಜೆ ಕೇಲಿಯೇ’ ಒಳಗಿನ ರತಿ ಅಗ್ನಿಹೋತ್ರಿ ಇದ್ದಂಗ ಇದ್ದೋಕಿ ’ಬಾಬಿ’ಪಿಕ್ಚರನಾಗಿನ ಡಿಂಪಲಕಿಂತಾ ತೆಳ್ಳಗ ಆಗಿದ್ಲು. ಕಡಿಕೆ ನಮ್ಮ ದೋಸ್ತನ ಹೆಂಡ್ತಿ ಕ್ರಾಫ್ಟ ಟೀಚರ್ ಇದ್ಲು ಭಡಾ ಭಡಾ ಆ ಹುಡಗಿ ಸೈಜ್ ಬ್ಲೌಸ ಹಿಡದ ಅಕಿಗೆ ರೇಡಿ ಮಾಡಿ ಕರಕೊಂಡ ಬಂದ್ಲು.
ಇನ್ನ ಮದ್ವಿ ಸಂಕ್ಷಿಪ್ತ ಮಾಡೋಣ ಅಂದರ ಇನ್ನೊಬ್ಬ ದೋಸ್ತ ಸಂಕ್ಷಿಪ್ತ ಯಾಕ ಅಗದಿ ಪದ್ಧತಿ ಪ್ರಕಾರನ ಆಗಲಿ, ಜೀವನದಾಗ ಒಮ್ಮೆ ಆಗೋದ, ಯಾರ ಬರ್ತಾರ ನೋಡೋಣ, ಹುಡಗ ಮ್ಯಾಚುರ್ ಇದ್ದಾನ ಹುಡಗಿ ಮೇಜರ್ ಇದ್ದಾಳ, ಯಾರಿಗ್ಯಾಕ ಹೆದರಬೇಕ ಅಂತ ಹೋಮಾ-ಹವನ ಎಲ್ಲಾ ಸ್ಟಾರ್ಟ ಮಾಡಿಸಿಸಿದಾ.
ಪಾಪ ಆ ಹುಡುಗಾ-ಹುಡುಗಿಗೆರ ಟೇನ್ಶನ್, ಎಲ್ಲೇ ಹುಡಗಿ ಮನಿಯವರ ಹುಡ್ಕೋತ ಇಲ್ಲಿತನಕಾ ಬರತಾರೊ ಅಂತ.
ಅತ್ತಲಾಗ ಆಗಲೇ ಆ ಹುಡುಗಿ ಕಡೆದವರ ಒಂದ ನಾಲ್ಕ ಗಾಡಿ ತೊಗೊಂಡ ಊರೇಲ್ಲಾ ಹುಡಕಲಿಕತ್ತಿದ್ದರು, ಅವರಿಗೆ ಹೆಂಗ ಗೊತ್ತಾತೋ ಏನೂ ಹುಡುಗನ ಮನಿಗೂ ಹೋಗಿದ್ದರು. ಆದರ ಏನ ಮಾಡೊದ ಪಾಪ ಹುಡುಗನ ಅಪ್ಪಗ ಅವರ ಮಗಾ ಹುಡುಗಿನ್ನ ಓಡಿಸಿಗೊಂಡ ಹೋಗ್ಯಾನ ಅಂತ ಗೊತ್ತಿದ್ದಿದ್ದಿಲ್ಲಾ. ಅವರ ಹುಡುಗಿ ಹುಡ್ಕೊಂಡ ಬಂದೋರಿಗೆ
’ನಿಮ್ಮ ಹುಡುಗಿ ಜೊತಿ ನಮ್ಮ ಹುಡುಗೇನರ ಸಿಕ್ಕರ ನಮಗೂ ತಿಳಸರಿ’ ಅಂತ ಹೇಳಿ ಕಳಸಿದರು.
ಇತ್ತಲಾಗ ಲಗ್ನ ಪದ್ಧತಸೀರ ಮುಗಿತ, ನಾನ ಫೋಟೊಗ್ರಾಫರ್…ನಾನ ಅರಳ ಹಾಕೊಂವಾ. ಹಂಗ ನಾರ್ಮಲ್ ಲಗ್ನದಾಗ ಅರಳ ಹಾಕಿದರ ಗಂಡಿನವರ ಶರ್ಟ ಪೀಸರ ಕೊಡ್ತಾರ ಆದರ ಇಲ್ಲೇನೂ ಸಿಗಲಿಲ್ಲಾ.
ಅಂತು ಇಂತು ಮದ್ವಿ ಮುಗಿಸಿ ಸೀದಾ ಪೋಲಿಸ ಸ್ಟೇಶನಗೆ ಹೋಗಿ ಇದ್ದದ್ದ ಹಕಿಕತ್ ಎಲ್ಲಾ ಹೇಳಿ ಮದ್ವಿ ಆಗಿದ್ದರ ಪ್ರೂಫ್ ಕೊಟ್ಟವಿ. ಹುಡಗಿ ಕ್ಲೀಯರ್ ಆಗಿ ನಾ ನನ್ನ ಮರ್ಜಿಲೇ ಲಗ್ನಾ ಮಾಡ್ಕೊಂಡೇನಿ ಅಂತ ಬರದ ಕೊಟ್ಟಳು. ಹುಡುಗನ ಮರ್ಜಿ ಅವರೇನ ಕೇಳಲಿಲ್ಲಾ…ಅಲ್ಲಿಗೆ ಇಶ್ಯು ಮುಗಿತ
ಈ ಐದ ವರ್ಷದ ಹಿಂದಿನ ಇಶ್ಯು ಇವತ್ತ್ಯಾಕ ನೆನಪಾತು ಅಂದರ ನಿನ್ನಿಗೆ ಅವರ ಲಗ್ನಾಗಿ ಐದ ವರ್ಷ ಆತ, ಅವರಿಗೆ ಈಗ ಸದ್ಯೇಕ ಎರಡ ಇಶ್ಯೂ ಆಗ್ಯಾವ. ಗಂಡಾ-ಹೆಂಡತಿ, ಎರಡು ಬೀಗರು ಅಗದಿ ಪ್ರೀತಿಯಿಂದ ಇದ್ದಾರ. ಹಂಗ ಕೆಟ್ಟ ಆದಂವ ನಾನ, ನಂಗ ಇವತ್ತೂ ’ಹುಡ್ಗಿ ಓಡಿಸ್ಗೊಂಡ ಬರಲಿಕ್ಕೆ ಹೊದೊಂವಾ’ ಅಂತ ಮಂದಿ ಮಾತಾಡ್ತಾರ.
ಅನ್ನಂಗ ಇನ್ನೊಂದ ಹೇಳೋದ ಮರತೆ. ಅವತ್ತೇನ ನಾವು ಹುಡಗಿ ಓಡಿಸಿಗೊಂಡ ಬರಲಿಕ್ಕೆ ಹೋಗಿದ್ದವಿ ಅಲಾ, ಅವತ್ತ ನಾ ಹೋಗಬೇಕಾರ ಎಲ್ಲೇರ ನನ್ನ ಹೆಂಡ್ತಿ ಅಡ್ಡ ಬಾಯಿ ಹಾಕಿ ’ಎಲ್ಲಿ ಹೊಂಟೀರಿ’ ಅಂತ ಕೇಳಿ-ಗೀಳ್ಯಾಳ ಅಂತ ಅಕಿಗೆ ಸೂಕ್ಷ್ಮ ’ನಾವ ಹಿಂಗ..ಹುಡುಗಿ ಓಡಿಸ್ಗೊಂಡ ಬರಲಿಕ್ಕೆ ಹೊಂಟೇವಿ’ ಅಂತ ಹೇಳಿದ್ದೆ. ’ರ್ರಿ..ಇವತ್ತ ನನ್ನ ಬರ್ಥಡೇ ಎಲ್ಲಾ ಬಿಟ್ಟ ಇವತ್ಯಾಕ ಹುಡ್ಗಿ ಓಡಿಸ್ಗೊಂಡ ಬರ್ತಿರಿ’ ಅಂತ ಗಾಬರಿ ಆಗಿ ಕೇಳಿದ್ಲು…’ಏ..ನಮ್ಮ ದೋಸ್ತಗಲೆ…’ ಅಂತ ಹೇಳಿ ಡಿಟೇಲ್ಸ ಹೇಳಿ ಹೋಗಿದ್ದೆ. ಇಕಿ ಮುಂದ ಅಕಿಗೆ ಬರ್ಥಡೇ ವಿಶ್ ಮಾಡಲಿಕ್ಕೆ ಫೋನ ಮಾಡಿದವರಿಗೇಲ್ಲಾ ’ನಮ್ಮ ಮನೆಯವರು ಹುಡುಗಿ ಓಡಿಸ್ಗೊಂಡ ಬರಲಿಕ್ಕೆ ಹೋಗ್ಯಾರ’ ಅಂತ ಹೇಳಿದ್ಲು. ಇತ್ತಲಾಗ ಆ ಹುಡುಗಿ ಮನಿಯವರು ನಾ ಹುಡುಗನ ದೋಸ್ತ ಅಂತ ನಮ್ಮನಿಗೆ ಫೋನ ಮಾಡಿದಾಗ ಅವರಿಗೂ ’ನಮ್ಮ ಮನಿಯವರ ಹುಡ್ಗಿ ಓಡಿಸ್ಗೊಂಡ ಬರಲಿಕ್ಕೆ ಹೋಗ್ಯಾರ’ ಅಂತ ಹೇಳಿ ಬಿಟ್ಟಿದ್ಲು.
ಏನ್ಮಾಡ್ತೀರಿ ಹಿಂತಾಕಿಗೆ?….ಇನ್ನೇನ ಮಾಡೋದ….ಅಷ್ಟರಾಗ ಎಲ್ಲಾ ಮುಗದ ಹೋಗಿತ್ತ….
ನಂಗಂತು ಹುಡುಗಿ ಓಡಿಸ್ಗೊಂಡ ಲಗ್ನಾ ಮಾಡಿಸಿದ್ದಕ್ಕೂ ಸಾರ್ಥಕ ಆತು ಅನಸ್ತು, ಅಲ್ಲಾ ಹಂಗ ಆ ಹುಡಗಿ ಇಷ್ಟ ದಿವಸ ಸಂಸಾರ ಮಾಡಿದ್ದ ನೋಡಿದ್ರ ನಮ್ಮ ಮಂದಿವೂ ಅಂವಾ ಮೂರ ಕನ್ಯಾ ಮಾಡ್ಕೊಂಡಿದ್ದರು ಹಂತಾ ಹುಡುಗಿ ಸಿಗ್ತಿದ್ದಿಲ್ಲ ಬಿಡ್ರಿ, ಅಷ್ಟ ಸಂಸ್ಕಾರವಂತಿ ಇದ್ದಾಳ ಸುಳ್ಳಾಕ ಹೇಳ್ಬೇಕ.
ಅವರಿಬ್ಬರಿಗೂ ನಮ್ಮ-ನಿಮ್ಮೇಲ್ಲರ ಪರವಾಗಿ ’ಅವಿಛಿನ್ನಾ ಪ್ರೀತಿರಸ್ತು.’
ಮಾರವಾಡಿ ಒಳಗ ’ದೂಧೋ ನಹಾವೋ…ಪೂತೋ ಫಲೋ’