ಈಗ ಒಂದ ತಿಂಗಳ ಹಿಂದ ಪೇಪರನಾಗ ಒಂದ ಸುದ್ದಿ ಬಂದಿತ್ತ, ಅದೇನಪಾ ಅಂದರ
’ಸತ್ತ ಇಲಿ ವಾಸನಿ ಬಂದಿದ್ದಕ್ಕ ಸನ್ಮಾನ್ಯ ಮುಖ್ಯಮಂತ್ರಿಗಳ ಸಭೆ ನಡೆಯೋ ಜಾಗಾ ಶಿಫ್ಟ ಆತಂತ, ಮುಖ್ಯಮಂತ್ರಿಗಳ ಸ್ವತಃ ಸಿಟ್ಟಿಗೆದ್ದ ಸತ್ತದ್ದ ಇಲಿನರ ಹಿಡದ ಹೊರಗ ಹಾಕರಿಪಾ’ ಅಂತ ಅಧಿಕಾರಿಗಳಿಗೆ ಬೈದ ಹೊದರಂತ. ಅಲ್ಲಾ ಹಂಗ ವಿಧಾನಸೌಧದಾಗ ಇಲಿ ಏನ ಕಡಮಿ ಇಲ್ಲ ಬಿಡ್ರಿ. ಇಡಿ ರಾಜ್ಯದ್ದ ಅರ್ಧಕ್ಕ ಅರ್ಧಾ ಫೈಲ ಇರೋದ ಅಲ್ಲೇ ಹಿಂಗಾಗಿ ಅಲ್ಲೇ ಇಲಿ ಇರಲಾರದ ಇನ್ನೇಲ್ಲೆ ಇರಬೇಕ? ಹಂಗ ೨೦೧೩ ರಾಗ ಇಲಿ ಹಿಡಿಲಿಕ್ಕೂ ಒಂದ ಸಪರೇಟ್ ಫೈಲ ಮಾಡಿ ಇವತ್ತಿನ ತನಕಾ ೨೨ ಲಕ್ಷ ಖರ್ಚ ಮಾಡ್ಯಾರಂತ, ಆದರ ಎಷ್ಟ ಇಲಿ ಹಿಡದಾರ ಅನ್ನೋದ ವಿಧಾನಸೌಧದೊಳಗ ಇರೋ ಬೆಕ್ಕಿಗೆ ಗೊತ್ತ…ಇದು ಒಂದ ಸುದ್ದಿ.
ಇನ್ನ ಇನ್ನೊಂದ ಹಳೇ ಸುದ್ದಿ ಏನಪಾ ಅಂದರ ೨೦೧೪ ಅಕ್ಟೋಬರ ಒಳಗ ಈ ಇಲಿ ಕಾಟ ತಾಳಲಾರದ ಸರಕಾರ ಒಂದ ಸ್ಕೀಂ ಮಾಡಿ ಇಲಿ ಹಿಡಿಲಿಕ್ಕೆ ಮಾಸ್ಟರ ಪ್ಲಾನ ಮಾಡಿತ್ತಂತ. ಅದರ ಸಂಬಂಧ ಮುರುವರಿ ಲಕ್ಷ ಫಂಡ ರಿಲೀಸ್ ಬ್ಯಾರೆ ಮಾಡಿತ್ತ…ಇನ್ನ ಇಲಿ ಹಿಡಿಲಿಕ್ಕೆ ಒಂದ e-ಟೆಂಡರನೂ ಕರದ ಕೊಟ್ಟರು, ಆದರ ಅವರೇಷ್ಟ ಇಲಿ ಹಿಡದರು ಅದು ಯಾರಿಗೂ ಗೊತ್ತಿಲ್ಲಾ. ಹಂಗ ಆವಾಗ ಎಲ್ಲಾ ಇಲಿ ಹಿಡದಿದ್ದರ, ಈಗ ೨೦೧೯ರಾಗ ಮತ್ತ ಇಲಿ ಹೆಂಗ ಬಂದ್ವು, ಅದರಾಗ ಪಾಪ ಒಂದ ಇಲಿ ಸತ್ತ ಹೆಂಗ? ಅದು ವಿಧಾನಸೌಧದೊಳಗ?
ಇತ್ತಲಾಗ ಮತ್ತೊಂದ ಮಜಾ ಅಂದರ ೨೦೧೪ರಾಗನ ಬಿ.ಬಿ.ಎಂ.ಪಿ ಯವರು ಇಲಿ ಹಿಡಿಲಿಕ್ಕೆ ಒಂದ ಪ್ರೋಜೆಕ್ಟ ಮಾಡಿ ಫಂಡ ರಿಲೀಸ್ ಮಾಡಿ ಒಂದಿಷ್ಟ ಇಲಿ ಹಿಡಿದಿದ್ದರಂತ. ಆತ ಬಿಡ ಇಲಿ ಕಾಟನರ ತಪ್ಪತು ಅಂತ ಅನ್ನೋದರಾಗ, ಹಂಗರ ಎಷ್ಟ ಖರ್ಚ ಮಾಡಿ ಎಷ್ಟ ಇಲಿ ಹಿಡದರಿ ಅಂತ ಯಾರೋ RTI ಹಾಕೇ ಬಿಟ್ಟರು, ಉತ್ತರನು ಬಂತು. ಉತ್ತರ ಏನ ಬಂತಪಾ ಅಂದರ ’2 ಲಕ್ಷ ಖರ್ಚ ಮಾಡಿ 20 ಇಲಿ ಹಿಡಿದೇವಿ’ಅಂತ ಪಾಲಿಕೆ ಅಧಿಕಾರಿಗಳು ರೈಟಿಂಗ ಒಳಗ ಉತ್ತರಾ ಕೊಟ್ಟರಂತ. ತೊಗೊ ಅದ ಒಂದ ಮುಂದ ದೊಡ್ಡ ಪಾಲಿಟಿಕಲ್ ಇಶ್ಯು ಆಗಿ, ಇಲಿ ಹಿಡಿಯೊದರಾಗ ಸಹಿತ ಇವರ ಅಕ್ರಮ ಮಾಡ್ಯಾರ ಅಂತ ವಿರೋಧಿ ಪಕ್ಷದವರ ಗದ್ದಲಾ ಮಾಡಿ ದೊಡ್ಡ ರಾಮಾಯಣ ಆತ. ಅಲ್ಲಾ ಅವೇಲ್ಲಾ ಪಾಲಿಟಿಕಲಿ ಮೋಟಿವೇಟೇಡ್ ಇರ್ತಾವ ಬಿಡ್ರಿ, ನಮಗ್ಯಾಕ ಅದರ ಉಸಾಬರಿ ಆದರು ಎರಡ ಲಕ್ಷಕ್ಕ ಇಪ್ಪತ್ತ ಇಲಿ ಅಂದರ ಒಂದ ಇಲಿಗೆ ಎಷ್ಟ ಬಿದ್ದಂಗ ಆತು? ಬರೋಬ್ಬರಿ ಹತ್ತ ಸಾವಿರಕ್ಕ ಒಂದ ಇಲಿ ಸಿಕ್ಕತು ಅಂದಂಗ ಆತ. ಇಲ್ಲಿಗೆ ಬಿ.ಬಿ.ಎಂ.ಪಿ ಯವರದ ಇಶ್ಯು ಮುಗಿಲಿಲ್ಲ…..ಇದ ಬಿ.ಬಿ.ಎಂ.ಪಿ ಯವರು ಮೊನ್ನೆ ೨೦೧೯ ಮಾರ್ಚದೊಳಗ ರಾಜ ಭವನದಾಗ ಬೆಕ್ಕಿನ ಕಾಟ ಜಾಸ್ತಿ ಆಗೇದ ಅಂತ ಬಿಡ್ಡಿಂಗ ಮಾಡಿ ಒಂದ ಲಕ್ಷ ರೂಪಾಯಕ್ಕ ಮುವತ್ತ ಬೆಕ್ ಹಿಡಿಲಿಕ್ಕೆ ಕೊಟ್ಟಾರಂತ. ಅಂದರ ಒಂದ ಬೆಕ್ಕಿಗೆ ಲಗ ಭಗ ಮೂರ ಸಾವಿರದಾ ಚಿಲ್ಲರ ಬಿತ್ತ ಅನ್ನರಿ.
ಅಲ್ಲಾ ಈ ಫಿಗರ್ ಏನರ ಬೆಕ್ಕಿಗೆ ಗೊತ್ತಾದರ ಅವು ತಮ್ಮಷ್ಟಕ್ಕ ತಾವ ಆತ್ಮಹತ್ಯೆ ಮಾಡ್ಕೊತಾವ. ಅಲ್ಲರಿ, ಒಂದ ಇಲಿ ಹಿಡಿಲಿಕ್ಕೆ ಹತ್ತ ಸಾವಿರ ಖರ್ಚ ಮಾಡ್ಯಾರ ಅದು ೨೦೧೪ರಾಗ, ಈಗ ಇಷ್ಟ inflation ಏರಿದ ಮ್ಯಾಲೆ ಒಂದ ಬೆಕ್ಕ ಹಿಡಿಲಿಕ್ಕೆ ಬರೇ ಮುರಸಾವಿರಕ್ಕ ಟೆಂಡರ್ ಕೊಟ್ಟರ ಬೆಕ್ಕಿಗೆ ಅಸಂಯ್ಯ ಮಾಡಿದಂಗ ಹೌದಲ್ಲ್?
ಬೆಕ್ಕಿಗೆ ಇಷ್ಟ ಏನ, ಇದ ಬೆಕ್ಕ ಸಾಕಿದವರಿಗೂ ದೊಡ್ಡ ಇನ್ಸಲ್ಟ. ಅಲ್ಲಾ, ಹಂಗ ನಾ ಏನ ಬೆಕ್ಕಿನ ಪಾರ್ಟಿನೂ ಅಲ್ಲಾ ಇಲಿ ಪಾರ್ಟಿನೂ ಅಲ್ಲಾ ಆದರೂ ಈ ಪರಿ ಬೆಕ್ಕಿಗೆ ಅನ್ಯಾಯ ಮಾಡಬಾರದಿತ್ತ ಬಿಡ್ರಿ.
ಇನ್ನ ರಾಜ ಭವನದಾಗ ಇದ್ದ ಬೆಕ್ಕಿನ ತಪ್ಪ ಏನಪಾ ಅಂದರ ಒಂದು ಅವು ಅಲ್ಲೇ ಒಟ್ಟ ಇಲಿ ಇರಲಾರದಂಗ ನೋಡ್ಕೊಂಡಿದ್ದು, ಇನ್ನೊಂದ ರಾಜಭವನದಾಗ ಅವ ನಾಯಿ ಕಂಡಕೊಡ್ಲೇ ಅವಕ್ಕ ತ್ರಾಸ ಕೊಡ್ತಾವ ಅಂತ. ಹಂಗ ನಂಬಲಹ್ರ ಮೂಲಗಳಿಂದ ತಿಳದ ಬಂದಿದ್ದ ಏನಪಾ ಅಂದರ ಒಂದಿಷ್ಟ ಬೆಕ್ಕ್ ನಾಯಿ ಕಂಡ ಕೂಡ್ಲೆ ’ಬೌ…ಬೌ.. sorry ಮಿಯಾಂವ್,,,ಮಿಯಾಂವ್’ ಅಂತಾವ ಅಂತ. ಇನ್ನ ಹಿಂಗ ನಾಯಿ ಜೀವಾ ತಿಂದರ ಬೆಕ್ಕಿಗೆ ಒಂದ ಟೆಂಡರ್ ಬಿಳಲಾರದ ಏನ? ಇರಲಿ ಏನೋ ಬೆಕ್ಕಿನ ಹಣೇಬರಹದಾಗ ರಾಜಯೋಗ ಬರದಿಲ್ಲ ಅಂತ ಕಾಣತದ.
ನನಗ ಈ ರಾಜಭವನದಾಗ ಬೆಕ್ಕಿನ ಹಾವಳಿ ಸುದ್ದಿ ಕೇಳಿದ ಮ್ಯಾಲೆ ಒಂದ ಡೌಟ ಬರಲಿಕ್ಕತ್ತ, ಏನ ೨೦೧೪ರಾಗ ವಿಧಾನಸೌಧದೊಳಗ ಮೂರುವರಿ ಲಕ್ಷದ್ದ ಇಲಿ ಹಿಡಿಲಿಕ್ಕೆ e- ಟೆಂಡರ್ ಕೊಟ್ಟಿದ್ದರಲಾ ಆವಾಗ ಆ ಇಲಿ ಹಿಡಿಯೋ ಟೆಂಡರ್ ತೊಗೊಂಡೊರ ಶಾಣ್ಯಾತನಾ ಮಾಡಿ ಒಂದಿಷ್ಟ ಬೆಕ್ಕಿಗೆ sub-contract ಕೊಟ್ಟ ಅವನ್ನ ವಿಧಾನಸೌದದಾಗ ಬಿಟ್ಟಿದ್ದರೋ ಏನೋ? ಅವ ಮುಂದ ವಿಧಾನಸೌಧದಿಂದ ರಾಜಭವನಕ್ಕ ಹೋದ್ವೇನೊ ಅಂತ? …ಅಲ್ಲಾ ಹಂಗ ’ಐಡಿಯಾ ಬುರಾ ನಹಿ’ ಇಲಿ ಹಿಡಿಯೋ ಟೆಂಡರ ತೊಗೊಂಡ ಬೆಕ್ಕಿನ ಬಿಡೋದ್ರಿಪಾ ಮತ್ತ ಬೆಕ್ಕ ಹಿಡಿಲಿಕ್ಕೆ ಟೆಂಡರ ಕರದಾಗ ಅದಕ್ಕೊಂದ ಟೆಂಡರ್ ಹಾಕೋದರಿಪಾ…..ಈ ಸೈಕಲ್ ಹಂಗ ಕಂಟಿನ್ಯು ಇರಬೇಕ. ಮತ್ತ ನಾವೇಲ್ಲಾ ಟ್ಯಾಕ್ಸ ಯಾಕ ತುಂಬತೇವಿ ಅಂತ ತಿಳ್ಕೊಂಡಿರಿ?
ಅನ್ನಂಗ ಈ ನಾಯಿ ವಿಷಯ ಬಂದ ಕೂಡ್ಲೇ ನೆನಪಾತ ಮೊನ್ನೆ ನಮ್ಮ ಮನಿ ಕಡೆ ನಾಯಿ ಹಿಡಿಯೋರ ಬಂದಿದ್ದರ. ಹಂಗ ಒಂದ ವಾರದ ಹಿಂದ ನಮ್ಮ ಓಣ್ಯಾಗ ಒಬ್ಬ ಮನಷ್ಯಾ ನಾಯಿ ಕಡಿಸಿಗೊಂಡ ಸತ್ತಿದ್ದಾ ಅಂತ ನಾನ ಕಂಪ್ಲೇಂಟ್ ಕೊಟ್ಟಿದ್ದೆ, ಹಿಂಗಾಗಿ ಅವರ dog squad ಕಳಿಸಿದ್ದರು. ನಾ ಹೊರಗ ಹೋಗಿ ನೋಡಿದರ ಅಲ್ಲೇ ಇಡಿ ಓಣ್ಯಾಗಿನ ಹೆಣ್ಣ ಮಕ್ಕಳೇಲ್ಲಾ ಆ ನಾಯಿ ಹಿಡಿಯೋದ ನೋಡಲಿಕ್ಕೆ ನಿಂತಿದ್ದರು. ನನ್ನ ನೋಡೋದ ತಡಾ ನನ್ನ ಹೆಂಡತಿ
’ರ್ರಿ…ಹೊರಗ ಬರಬ್ಯಾಡ್ರಿ…ನಾಯಿ ಹಿಡಿಯೋರ ಬಂದಾರ’ ಅಂತ ಒದರಿದ್ಲು….ಅದು ಎಲ್ಲಾರ ಮುಂದ..ಓಣಿ ಹೆಣ್ಣಮಕ್ಕಳೇಲ್ಲಾ ಗೊಳ್ಳನ ನಕ್ಕ ಬಿಟ್ಟರು…ಅಷ್ಟರಾಗ ನಮ್ಮ ಬಾಜು ಮನಿ ಉಮಾ ಅಂಟಿ
’ಏ..ಅವರ ನಾಯಿ ಹಿಡಿಲಿಕ್ಕೆ ಬಂದಾರ ತೊಗೊ ನಿನ್ನ ಗಂಡನ ಅಲ್ಲಾ…’ಅಂತ ಚಾಷ್ಟಿ ಮಾಡಿದರು.
ಅಲ್ಲಾ ಹಂಗ ನಾ ನಾಯಿ ಕಂಡರ ಭಾಳ ಹೆದರತೇನಿ ಅಂತ ನನ್ನ ಹೆಂಡತಿಗೆ ಗೊತ್ತ, ಅದಕ್ಕ ಅಕಿ ಎಲ್ಲೇರ ಯಾವದರ ಹೆಣ್ಣ ನಾಯಿ ಆ dog squad ಕೈಯಾಗ ತಪ್ಪಿಸಿಗೊಂಡ ಬಂದ ನಂಗ ಕಡದ ಗಿಡದಿತ್ತ ಅಂತ ಅಕಿ ಕಾಳಜಿ ಇಷ್ಟ. ಅಲ್ಲಾ ಹಿಂಗಾಗೆ ನಾ ಮನ್ಯಾಗ ನಾಯಿ ಸಾಕಿಲ್ಲ, ಯಾರರ ನಾಯಿ ಸಾಕಬೇಕಿಲ್ಲ ಅಂತ ಕೇಳಿದರ ನಾ ಕ್ಲೀಯರ್ ಆಗಿ ಹೇಳಿ ಬಿಡ್ತೇನಿ ’ಒಂದ ಹೆಂಡ್ತಿ ಎರಡ ಮಕ್ಕಳನ ಸಾಕೋದ ರಗಡ ಆಗೇದ…ಇನ್ನ ಮತ್ತೇಲ್ಲೆ ನಾಯಿ ಸಾಕೋದ’ ಅಂತ.
ನಾ ಆ ನಾಯಿ ಹಿಡಿಯೋರಿಗೆ ಟೆಂಡರ್ ಎಷ್ಟಕ್ಕ ತೊಗೊಂಡಿಪಾ ಅಂತ ಕೇಳಿದೆ. ಅವರ ’ಏ ನಾವ ನಾಯಿ ಹಿಡದ ’ನಸಭಂದಿ’ ( ಸಂತಾನ ಹರಣ ಶಸ್ತ್ರ ಚಿಕಿತ್ಸೆ) ಮಾಡ್ಲಿಕ್ಕೆ ಟೆಂಡರ್ ತೊಗೊಂಡೇವಿ’ ಅಂದರು, ಎಷ್ಟಕ್ಕ ಅಂತ ಕೇಳಿದರ ಒಂದ ನಾಯಿ ಆಪರೇಶನಗೆ 980 Rs ಅಂದರು. ತಿಂಗಳಿಗೆ ನಾಲ್ಕನೂರ ನಾಯಿ ಆಪರೇಶನ್ ಮಾಡ್ತಾರಂತ…ಅಂದರ ವರ್ಷಕ್ಕ ಐವತ್ತ ಲಕ್ಷದ್ದ ಟೆಂಡರ್ ಅನ್ನರಿ. ಅಡ್ಡಿಯಿಲ್ಲಾ, ನಮ್ಮ HDMC ಅವರು BBMP ಅವರಗಿಂತಾ ಶಾಣ್ಯಾರ ಇದ್ದಾರ, ಡೈರೆಕ್ಟ ಆಪರೇಶನ್ ಮಾಡಿಸಿ ಬಿಟ್ಟರ ನಾಯಿ ಸಂತತಿನ ಮುಂದ ಬೆಳೆಯಂಗಿಲ್ಲಾ ಅಂತ ಅನಸ್ತ. ಅಲ್ಲಾ ಇಲಿ ಆತ, ಬೆಕ್ಕ ಆತ, ನಾಯಿ ಆತ ಆದರ ಈ ವಿಧಾನ ಸೌಧದೊಳಗಿನ ’ಹೆಗ್ಗಣಾ’ ಹಿಡಿಯೋದರ ಬಗ್ಗೆ ಯಾರರ ವಿಚಾರ ಮಾಡಿರೇನ? ಹೋಗ್ಲಿ ಬಿಡ್ರಿ ಇನ್ನ ಮತ್ತ ಅದಕ್ಕೊಂದ ಟೆಂಡರ್ ಕರೆಯೋದ, ಯಾರೋ RTI ಹಾಕೋದು ಆಮ್ಯಾಲೆ ಅದೊಂದ ಹಗರಣ ಆಗಿ ಮತ್ತೊಂದ ಪಾಲಿಟಿಕಲ್ ಇಶ್ಯೂ ಆಗೋದ ಬ್ಯಾಡ.
ಇರಲಿ…ಒಂದ disclaimer ಏನಪಾ ಅಂದರ ಈ ಪ್ರಹಸನದಾಗ ಎಲ್ಲೇರ ಇಲಿ, ಬೆಕ್ಕು, ನಾಯಿ ಯಾವದನ್ನರ actually ಹಿಡದಿದ್ದರ ಅವಕ್ಕ ಏನೂ ತ್ರಾಸ ಕೊಡದ ಅವನ್ನ ಪುನರ್ವಸತಿಗಾಗಿ ಪಶು ವಿಭಾಗಕ್ಕೆ ಕೊಡಲಾಗಿದೆ.
ಹಂಗ ಅವ ಮತ್ತ ವಾಪಸ ಬರ್ತಾವ, ನಮ್ಮ ಸರ್ಕಾರ ಮತ್ತ tax payers ರೊಕ್ಕದಲೇ e-ಟೆಂಡರ್, ಬಿಡ್ಡಿಂಗ್ ಮಾಡಿ ಅವನ್ನ ಹಿಡಿತಾರ.