ಎರಡ ದಿವಸದಿಂದ ನನ್ನ ಹೆಂಡ್ತಿ ಒಂದ ಸಮನ ಫೋನ ಮಾಡಿ ಮಾಡಿ ತನ್ನ ಫ್ರೇಂಡ್ಸಗೇಲ್ಲಾ
’ಸಂಡೇ…ನಮ್ಮನಿಗೆ ಅರಿಷಣ-ಕುಂಕುಮಕ್ಕ ಬಂದ ಹೋಗ’ಅಂತ ಹೇಳಿದ್ದ ಹೇಳಿದ್ದ.
ನಾನು ಒಂದ ನಾಲ್ಕೈದ ಮಂದಿಗೆ ಕರಿಯೋತನಕಾ ಸುಮ್ಮನ ಇದ್ದೆ. ಆಮ್ಯಾಲೆ
’ಸಂಡೇ ಏನ ಅದಲೇ… ಯಾಕ ಎಲ್ಲಾರನೂ ಅರಿಷಣ ಕುಂಕುಮಕ್ಕ ಕರಿಲಿಕತ್ತಿ….ಮತ್ತ ಯಾವದರ ಹೊಸ ವೃತದ್ದ inauguration ಇಟಗೊಂಡಿ ಏನ?’ ಅಂತ ಕೇಳಿದರ.
’ಇನ್ನ ಯಾವ ವೃತಾರಿ….ನಿಮ್ಮನ್ನ ಕಟಗೊಂಡಿದ್ದಕ್ಕ ರಿಷಿ-ಪಂಚಮಿ ಹಿಡಿಯೊದೊಂದ ಬಾಕಿ ಅದ’ ಅಂತ ಅಂದ ಮತ್ತ ಫೋನ ಮಾಡಿ ಕರಿಲಿಕ್ಕೆ ಶುರು ಮಾಡಿದ್ಲು.
ನಾ ಇಕಿ ಯಾಕ ಹಿಂಗ ಹುಚ್ಚುಚಾಕಾರ ಕಾರಣ ಇಲ್ಲಾ ಕಂತಿಲ್ಲಾ ಊರ ಮಂದಿನ್ನ ಕರದ ಉಡಿ ತುಂಬಲಿಕತ್ತಾಳ ಅಂತ ವಿಚಾರ ಮಾಡ್ಲಿಕತ್ತೆ.
ಒಂದು ಮನ್ಯಾಗ ಮಂದಿ ಕೊಟ್ಟಿದ್ದ ಜಂಪರ್ ಪೀಸ್ ಜಾಸ್ತಿ ಆಗಿ ಇಡ್ಲಿಕ್ಕೆ ಜಾಗಾ ಇಲ್ಲದಂಗ ಆಗಿರಬಹುದು, ಇಲ್ಲಾ ಅವಕ್ಕ ಬೂಳಸ ಹತ್ತಿ ಲಡ್ಡ ಆಗಿ ಪಿಸಿಲಿಕತ್ತಿರಬೇಕ ಅದಕ್ಕ ಅವನ್ನ ದಾಟಸಲಿಕ್ಕೆ ಇಕಿ ಎಲ್ಲಾರನೂ ಉಡಿ ತುಂಬಿಸಿಗೊಳ್ಳಿಕ್ಕೆ ಕರಿತಿರಬಹುದು. ಇಲ್ಲಾ ಎರಡ ಮೂರ ತಿಂಗಳದಿಂದ ಅವರಪ್ಪನ ಮನಿ ರೇಶನ್ ಅಕ್ಕಿನೂ ನಮ್ಮ ಮನಿಗೆ ಬರಲಿಕತ್ತಿತ್ತ ಹಿಂಗಾಗಿ ದಾನಾ ಮಾಡೋ ವಿಚಾರ ಬಂದಿರಬಹುದು ಅಂತ ನಾ ಲೆಕ್ಕಾ ಹಾಕಲಿಕತ್ತಿದ್ದೆ. ಅಲ್ಲಾ ಹಂಗ ನಮ್ಮನಿಗೆ ಯಾರ ಬರಲಿ, ಯಾ ಹೊತ್ತಿಗೆರ ಬರಲಿ, ದಿನಕ್ಕ ಎಷ್ಟ ಸರತೆ ಬಂದರೂ ಅರಿಷಣ ಕುಂಕುಮಾ ಕೊಟ್ಟ ಒಂದ ಮುಷ್ಟಿ ರೇಶನ್ ಅಕ್ಕಿ ಉಡಿತುಂಬಿ, ಒಂದ ಜಂಪರ್ ಪೀಸ ಕೊಟ್ಟ ಕಳಸೊ ಸಂಪ್ರದಾಯ ಅದರಿಪಾ. ಅದನ್ನ ಹುಟ್ಟ ಹಾಕಿದೋಕಿ ನಮ್ಮವ್ವಾ. ಇಕಿ ಅದನ್ನ ಇನ್ನೂ ಕಂಟಿನ್ಯೂ ಮಾಡ್ಕೊತ ಹೊಂಟಾಳ. ಹಂಗ ಇಕಿ ಕೊಡೊ ಜಂಪರ್ ಪೀಸ ಒಂದು ಇಕಿಗೆ ಸಾಲತಿರಂಗಿಲ್ಲಾ ಇಲ್ಲಾ ಸೇರತಿರಂಗಿಲ್ಲಾ. ಹಂತಾವೇಲ್ಲಾ ಆರಿಸಿ ಆರಿಸಿ ಇಟ್ಟ ಮಂದಿಗೆ ಉಡಿ ತುಂಬಿ ಪುಣ್ಯಾ ಕಟ್ಗೊತಾಳ. ಇನ್ನ ಅವು ಹೆಂಗ ಇರ್ತಾವ ಅಂದರ ಕೆಲವೊಬ್ಬರಿಗೆ ಫುಲ್ ಸ್ಲೀವ್ ಆಗ್ತಾವ, ಕೆಲವೊಬ್ಬರಿಗೆ ಹಾಫ್ ಆಗ್ತಾವ, ಕೆಲವೊಬ್ಬರಿಗೆ ಸ್ಲೀವಲೇಸ್ ಆಗ್ತಾವ. ಇನ್ನ ಕೆಲವಬ್ಬರಿಗೆ ಡೀಪ ನೆಕ್ ಆದರ ಮತ್ತ ಕೆಲವೊಬ್ಬರಿಗೆ ಬ್ಯಾಕ್ ಲೆಸ್ ಆಗ್ತಾವ ಆ ಮಾತ ಬ್ಯಾರೆ. ನಾ ’ದಾನ ಕೊಡೊದ ಕೊಡ್ತಿ ಮಂದಿ ಉಡೊ ಹಂತಾವ ಕೊಡಬೇಕಲೇ’ ಅಂತ ಅಂದರ
’ಅಯ್ಯ ದಾನಕ್ಕ ಕೊಟ್ಟಿದ್ದ ಆಕಳ ಹಲ್ಲ ಎಣಸಬಾರದು….ಉಡಿ ತುಂಬಿದ್ದ ಜಂಪರ್ ಪೀಸ ಪನ್ನಾ ಅಳಿಬಾರದು ಅಂತಾರ, ನೀವು ಸುಮ್ಮನ ಕೂಡ್ರಿ…ನಿಮಗ್ಯಾಕ ಬೇಕ ಹೆಣ್ಣಮಕ್ಕಳ ಜಂಪರ್ ಉಸಾಬರಿ’ ಅಂತ ನಂಗ ಜೋರ ಮಾಡಿ ಬಾಯಿ ಮುಚ್ಚಿಸ ಬಿಡೋಕಿ. ಹಿಂಗಾಗಿ ನಾ ಅವತ್ತಿನಿಂದ ಅಕಿ ಜಂಪರ್ ಉಸಾಬರಿನ ಬಿಟ್ಟ ಬಿಟ್ಟೇನಿ. ಆದರೂ ಇಕಿ ಈಗ ಕಾರಣ ಇಲ್ಲಾ ಕಂತಿಲ್ಲಾ ಯಾಕ ಎಲ್ಲಾರಿಗೂ ಮನಿ ಕರಿಲಿಕತ್ತಾಳ ಅಂತ ನಮ್ಮವ್ವನ ಕೇಳಿದರ
“ಏ..ಪ್ರೇರಣಾ ಈ ಸರತೆ ಕಾಮಣ್ಣನ ಹೆಂಗ ಸುಡಬೇಕ ಅಂತ ಪ್ಲ್ಯಾನ ಮಾಡ್ಲಿಕ್ಕೆ ತನ್ನ ಗೆಳತ್ಯಾರನ್ನ ಕರಿಲಿಕತ್ತಾಳ, ನೀ ಹುಷಾರ ಇರಪಾ …ಮತ್ತೆಲ್ಲರ” ಅಂತ ನಂಗ ಕಾಡಸಿದ್ಲು.
ಕಡಿಕೆ ರಾತ್ರಿ ಅಕಿನ್ನ ಜೋರ ಮಾಡಿ ’ನೀ ಏನ ನಡಿಸಿ, ಯಾಕ ಸುಮ್ಮ ಸುಮ್ಮನ ಮುತ್ತೈದಿಯರನ್ನ ಮನಿಗೆ ಕರಿಲಿಕತ್ತಿ, ಸಂಡೇ ಏನದ’ ಅಂತ ಕೇಳಿದರ
’ನಂಗೊತ್ತಿತ್ತ…ನಿಮಗ ಖಬರ ಇರಂಗಿಲ್ಲಾ ಅಂತ….ನೀವೇಲ್ಲಾ ಬೀಯರ್ ಡೇ, ವ್ಯಾಲೇಂಟನ್ಸ್ ಡೇ, ಕಿಸ್ ಡೇ. ಹಗ್ ಡೇ ಅಂತ ಬೇಕಾಗಿದ್ದ ಬ್ಯಾಡಗಿದ್ದ ಡೇ ಎಲ್ಲಾ ಮಾಡ್ತೀರಿ ನಮ್ಮ ಹೆಣ್ಣಮಕ್ಕಳದ್ದ ವರ್ಷಕ್ಕೊಂದ international women’s day ಬರತದ ಅದ ನಿಮಗೇಲ್ಲೆ ನೆನಪ ಇರ್ತದ’ ಅಂತ ಶುರು ಮಾಡಿದ್ಲು.
ಹಕ್ಕ್…ವುಮೆನ್ಸ್ ಡೇ ಕ್ಕ ನಿನಗ ಏನ ಸಂಬಂಧ ಅಂತ ಅನ್ನೋವ ಇದ್ದೆ ಆದರ ಹಂಗ ಅನ್ನಲಿಕ್ಕೆ ಬರಂಗಿಲ್ಲಾ. ಅಕಿ ಬರೇ ವುಮೆನ್ ಅಲ್ಲಾ ವೈಫ್ ಬ್ಯಾರೆ. ಅದರಾಗ ಮದ್ವಿ ಆದಮ್ಯಾಲೆ ಅಂತೂ ನಮ್ಮ ಮನ್ಯಾಗ ಅಕಿ ಒಬ್ಬೊಕಿನ ವುಮೆನ್ ನಾ ಬರೇ ಹ್ಯೂಮನ್.
’ಲೇ… ಎಲ್ಲಾ ಬಿಟ್ಟ ನೀ ಯಾಕ ಅದನ್ನ ಸೆಲೆಬ್ರೇಟ ಮಾಡ್ಲಿಕತ್ತಿ, ಅದ internation women day, ಅಂತರಾಷ್ಟ್ರೀಯ ಮಹಿಳೆಯರಿಗೆ ಸಂಬಂಧ ಪಟ್ಟಿದ್ದ, ನೀ ಅಗದಿ indigenous, ಸ್ವದೇಶಿ ಇದ್ದಿ’ ಅಂದರ
’ಯಾಕ ಹೆಂಡ್ತಿ indigenous ಇದ್ದರ international women’s day ಮಾಡಬಾರದೇನ?’..ನಾವ ಹೆಣ್ಣ ಮಕ್ಕಳೇಲ್ಲಾ ಈಗ universal women ಆಗೇವಿ…’ ಅಂತ ಭಾಷಣಾ ಶುರು ಮಾಡಿದ್ಲು. ನಾ ಮುಂದ ಅಕಿ ಬಾಯಿ ಹತ್ತಲಿಕ್ಕೆ ಹೋಗಲಿಲ್ಲಾ. ಇನ್ನ ನಾ ಒಂದ ಅನ್ನೋದ ಅಕಿ women enterpreneurship ನಿಂದ ಹಿಡದ gender equaility, women rights, equal opportunity…ಅದು ಇದು ಅಂತ ಕೊರಿತಾಳ ಅಂತ ಗ್ಯಾರಂಟೀ ಆತ.
’ಅಲ್ಲಾ, ಹಂಗಿದ್ದರ ಎಲ್ಲಾರಿಗೂ ಡೈರೆಕ್ಟ ವುಮೆನ್ಸ್ ಡೇ ಸೆಲೆಬ್ರೇಶನಗ ಬಾ ಅಂತ ಹೇಳಬೇಕಿತ್ತಿಲ್ಲ’ ಅಂತ ನಾ ಅಂದರ.
’ಏ…ಹಂತಾವೇಲ್ಲಾ ಮಾಡ್ಲಿಕತ್ತರ ನಿಮ್ಮವ್ವ ಎಲ್ಲೇ ಸುಮ್ಮನ ಕೂಡ್ತಾರ. ಹೇಳಿ ಕೇಳಿ ನಿಮ್ಮವ್ವಾ, ನಮ್ಮ ಮನ್ಯಾಗ ಅವೇಲ್ಲಾ ಪದ್ದತಿ ಇಲ್ಲಾ, ನಮ್ಮ ಸಂಪ್ರದಾಯನ ಅಲ್ಲಾ ಅಂತ ರಾಗ ತಗಿತಾರ’ ಅಂದ್ಲು..
Actually ಇಕಿ ನಮ್ಮ ಮನ್ಯಾಗ ತನ್ನ ಫ್ರೇಂಡ್ಸಗೆಲ್ಲಾ women’s day ಸಂಬಂಧ ಕಿಟ್ಟಿ ಪಾರ್ಟಿ ಇಟಗೊಂಡಾಳ. ಇನ್ನ ನಮ್ಮವ್ವಗ ಮಗನ ಥರ್ಟಿ ಪಾರ್ಟಿಗೂ ಸೊಸಿದ ಕಿಟ್ಟಿ ಪಾರ್ಟಿಗೂ ಇರೊ ಡಿಫರೆನ್ಸ ಗೊತ್ತಿಲ್ಲಾ, ಹಿಂಗಾಗಿ ನನ್ನ ಹೆಂಡ್ತಿಗೆ ಅಕಿ ’ನೀ ಹಿಂತಾವೇಲ್ಲಾ ಹುಚ್ಚುಚಾಕಾರ ನಮ್ಮ ಮನ್ಯಾಗ ಮಾಡಬ್ಯಾಡಾ’ ಅಂತ ಮಾಡಿಸಿಕೊಡಂಗಿಲ್ಲಾ ಅಂತ ಗ್ಯಾರಂಟೀ ಆಗಿ ಇಕಿ ನಮ್ಮವ್ವಗ
’ಅತ್ಯಾ ಸಂಡೆ ನಮ್ಮ ಫ್ರೇಂಡ್ಸಗೇಲ್ಲಾ ಅರಿಷಣ ಕುಂಕುಮಕ್ಕ ಕರದ ಉಡಿ ತುಂಬಿಸಿ ಕಳಸ್ತೇನಿ, ಹೆಂಗಿದ್ದರೂ ಮರದಿವಸ ಹೋಳಿ ಹುಣ್ಣಮಿ ಅದ’ ಅಂತ ಒಂದ ರಿಲಿಜಿಯಸ್ ಡೈಲಾಗ ಹೊಡದ ಅಕಿನ್ನ ಪಟಾಯಿಸಿದ್ಲು. ಇನ್ನ ಅಕಿ ಹೂಂ ಅಂದ ಮ್ಯಾಲೆ ಮುಗಿತಲಾ..ನಂದೇನ ನಡಿತದ ಮನ್ಯಾಗ, ನಾ ಇರೋದ ನಾಮಕೇ ವಾಸ್ತೆ. ಅದರಾಗ ಮ್ಯಾಲೆ international women’s day ಅಂದರ ಯಾರ ನನ್ನ ಮಾತ ಕೇಳ್ತಾರ? ಏನರ ಹಾಳ ಗುಂಡಿ ಬೀಳಲಿ ಬಿಡ ಅಂತ ಸುಮ್ಮನಾಗೇನಿ.
ಮತ್ತ ನಾ ಒಂದ ಏನರ ಅನ್ನೋದ, ಅದ ಕಂಟ್ರೋವರ್ಸಿ ಆಗಿ ಅಕಿ ನನಗ ’ನೀವು sexist ಇದ್ದಿರಿ, ಹೆಣ್ಣಮಕ್ಕಳ ವಿರೋಧಿ ಇದ್ದಿರಿ’ ಅಂತ ಇಶ್ಯೂ ಮಾಡಿದರ ಏನ ಮಾಡೋದ. ಅಲ್ಲಾ, ಹಿಂದಕ ಕಜಕಸ್ಥಾನದ ಮಾಜಿ ಅಧ್ಯಕ್ಷ ನುರಸುಲ್ತಾನ ವುಮೆನ್ಸ್ ಡೇ ಕ್ಕ ‘ men invented kissing to shut women up’ ಅಂತ ಸ್ಟೇಟಮೆಂಟ್ ಕೊಟ್ಟ ದೊಡ್ಡ ಗದ್ಲಾ ಮಾಡ್ಕೊಂಡಿದ್ದಾ. ಹಿಂಗಾಗಿ ನಾ ಯಾಕ ಬೇಕ controversy ಅಂತ ಬಾಯಿ ಮುಚಗೊಂಡ ಇದ್ದೆನಿ. ಅದರಾಗ ಏನಿಲ್ಲದ ನಾ ಅಕಿ ಬಗ್ಗೆನ ಬರಿತಿರತೇನಿ, ಇನ್ನ ಅಕಿದ ವುಮೆನ್ಸ್ ಡೇ ಸೆಲೆಬ್ರೇಶನ್ ಹಳ್ಳಾ ಹಿಡಿಸಿದರ ಮುಗದ ಹೋತ. ಕಡಿಕೆ ತಲಿ ಕೆಟ್ಟ ಇನ್ನ ನನ್ನ ಬಗ್ಗೆ ಒಟ್ಟ ಬರಿಬ್ಯಾಡರಿ ಅಂತ court injuction ತಂದ ನನ್ನ ಗಿರಮಿಟ್ ಕಾಲಮ್ ಬಂದ ಮಾಡಿಸಿದರು ಮಾಡಿಸಿದ್ಲ, ಅಕಿದೇನ ಹೇಳಲಿಕ್ಕೆ ಬರಂಗಿಲ್ಲಾ. ನಾ ಹೇಳಲಿಕತ್ತಿದ್ದ ಲಿಗಲ್ ಇಂಜಕ್ಶನ್ ಮತ್ತ…ಮೆಡಿಕಲ್ ಇಂಜೆಕ್ಶನ್ ಅಲ್ಲಾ.
ಹಂಗ ನಾ ಎಲ್ಲಾ ಬಿಟ್ಟ ಕಜಕಸ್ಥಾನದ ಅಧ್ಯಕ್ಷನ್ನ ಯಾಕ quote ಮಾಡಿದೆ ಅಂದರ ಇತ್ತೀಚಿಗೆ ನಮ್ಮ ದೋಸ್ತರ ಒಂದಿಷ್ಟ ಮಂದಿ ಕಜಕಸ್ಥಾನಕ್ಕ ಹೋಗಿ ಬಂದು ಮಾಡ್ತಿರ್ತಾರ…ಅದೇನೋ ಟೂರಿಸ್ಟ ಕಂಟ್ರಿ ಅಂತರಿಪಾ…ಒಂಥರಾ ಬ್ಯಾಂಕಾಕ್ ಇದ್ದಂಗ ಅಂತ ಹೋಗಿ ಬಂದೋರ ಹೇಳ್ತಾರ…ಅದೇಲ್ಲಾ ನಮ್ಮಂತಾವರಿಗೆ ಗೊತ್ತಾಗಂಗಿಲ್ಲ ಬಿಡ್ರಿ. ನಾವ ಇಲ್ಲೆ ಹುಬ್ಬಳ್ಳಿ ಜನತಾ ಬಜಾರ ದಾಟಿದವರಲ್ಲಾ. ಅದರಾಗ ಮನ್ಯಾಗ international ಮುತ್ತೈದಿ ಇರಬೇಕಾರ ಯಾಕ ಬ್ಯಾಂಕಾಕ್, ಕಜಕಸ್ಥಾನ ಅಂತೇನಿ. ನೀವ ಏನ ಅನ್ನರಿ ಲಗ್ನಾ ಮಾಡ್ಕೊಂಡ ಹೆಂಡ್ತಿ ಮಾತ ಕೇಳೊ ನನ್ನಂತ ಗಂಡಂದರಿಗೆ everyday is women’s dayನ.
ಇರಲಿ now jokes apart,
ನನ್ನ ಬಹಳಷ್ಟು ಗಿರಮಿಟ್ ಅಂಕಣಗಳಿಗೆ ಪ್ರೇರಣೆಯಾಗಿರೊರು ಮಹಿಳೆಯರ, ಅವರ ನಮ್ಮವ್ವಾ, ಪ್ರೇರಣಾನ ಯಾಕ ಆಗಿರ್ವಲ್ಲರಾಕ (#SheInspiresUs) ಹಿಂಗಾಗಿ ಅವರಿಗೆ ಹಾಗೂ ಜಗತ್ತಿನ ಎಲ್ಲ ಮಹಿಳೆಯರಿಗೆ ’ವಿಶ್ವ ಮಹಿಳಾ ದಿನದ’ ಗೌರವ ಪೂರ್ವಕ ಶುಭಾಶಯಗಳು. ಹಂಗ ನಾಳೆ ನಮ್ಮ ಮನಿ ಕಡೆ ಬಂದರ ಅರಿಷಣ-ಕುಂಕುಮ ತೊಗೊಂಡ, ಜಂಪರ ಪೀಸ್ ಉಡಿ ತುಂಬಿಸಿಗೊಂಡ ಹೋಗರಿ.
Good one