ನಮ್ಮ ದೋಸ್ತ ಒಬ್ಬೊಂವ ಇತ್ತೀಚಿಗೆ ಟ್ವಿಟರ್ ಅಕೌಂಟ ಓಪನ್ ಮಾಡಿ ಭಾರಿ ಯಾಕ್ಟೀವ್ ಆಗ್ಯಾನ, ಅಗದಿ ಖತರನಾಕ ಟ್ವೀಟ್ ಮಾಡೊದ, ಸಂಬಂದ ಇದ್ದೋರಿಗೆ ಇಲ್ಲದವರಿಗೆ ಎಲ್ಲಾರಿಗೂ ಟ್ಯಾಗ ಮಾಡೋದ, ಮೆನ್ಶನ್ ಮಾಡೋದ ಎಲ್ಲಾ ಮಾಡ್ಲಿಕತ್ತಾನ. ಅವಂದ ಇಂಗ್ಲೀಷರ ಫ್ರೆಂಚ್ & ಗ್ರೀಕ್ ಇದ್ದಂಗ ಇತ್ತ ಆದರು ಹೆಂಗ ಈ ಪರಿ ಟ್ವೀಟ್ ಮಾಡ್ಲಿಕತ್ತಾನ ಅಂತ ನಮಗೇಲ್ಲಾ ಆಶ್ಚರ್ಯ ಆಗೋದ.
ಅಲ್ಲಾ ಅವನ ಟ್ವೀಟ್ ಹೆಂತಾ ಮಜಾ ಮಜಾ ಇರ್ತಿದ್ವ ಅಂದರ ಮನಿಗೆ ಗ್ಯಾಸ ಸಿಲೆಂಡರ ಬಂದರ
’Received LPG cylinder in time, thanks to @NarendraModi ji for #Ujjwala’ ಅಂತ ಟ್ವೀಟ್ ಮಾಡಿ ಅದನ್ನ @BPCLimited ಗೆ ಟ್ಯಾಗ ಮಾಡ್ತಿದ್ದಾ.
ಕಸದವರ ಬರೋದ ಸ್ವಲ್ಪ ಲೇಟ ಆದರೂ ’Nobody to collect house to house Dust today, No #SwachchaBharat in @HDMC @NarendraModi’ ಅಂತ ಮೋದಿಯವರಿನ ಮೆನ್ಶನ್ ಮಾಡೋದು, ನಳಾ ಬರೋ ಪಾಳೆ ಇದ್ದ ದಿವಸ ನಳಾ ಬರಲಿಲ್ಲಾ ಅಂದರ ಅದಕ್ಕೊಂದ ಟ್ವೀಟ್ ಮಾಡಿ ಲೋಕಲ್ MP, MLA ಕಡಿಕೆ ಜಲ ನಿರ್ವಹಣಾ ಮಂತ್ರಿಗೆ ಸಹಿತ ಟ್ವೀಟ್ ಮಾಡ್ತಿದ್ದಾ.
ಅದರಾಗ ಒಮ್ಮೊಮ್ಮೆ ಇವನ್ನ ಟ್ವೀಟ್ ಅಪ್ಪಿ ತಪ್ಪಿ ಕಾರ್ಪೋರೇಶನ್ನವರೋ ಇಲ್ಲಾ ಮಿನಿಸ್ಟರ ನೋಡಿ ರಿಪ್ಲೈ ಮಾಡಿ ಇವರ ಮನಿಗೆ ಒಂದ ಟ್ಯಾಂಕರ ನೀರ ಕಳಸಿ ಬಿಟ್ಟರ ಇಂವಾ ಫುಲ್ ಖುಶ್ ಆಗಿ ನಮಗೇಲ್ಲಾ
’ನಾ ಒಂದ ಟ್ವೀಟ್ ಮಾಡಿದರ ನಮ್ಮ ಮನಿಗೆ ನೀರ ಬರ್ತದ ಮಗನ’ ಅಂತ ಹೇಳೊಂವಾ.
ಒಂದ ಸರತೆ ಇಂವಾ ರಾಣಿ ಚೆನ್ನಮ್ಮಾದಾಗ ಬೆಂಗಳೂರಿಗೆ ಹೋಗಬೇಕಾರ toiletಗೆ ಹೋಗಿದ್ದನಂತ, toilet ಒಳಗ ನೀರ ಒಮ್ಮಿಂದೊಮ್ಮಿಲೇ ಖಾಲಿ ಆಗಿ ಮ್ಯಾಲೆ ಲೈಟ ಬ್ಯಾರೆ ಹೋದ್ವಂತ. ಇಂವಾ ತಲಿಕೆಟ್ಟ ಅಲ್ಲಿಂದ
’no water, no light in train no 16590 #IndianRailwaysProblems’ ಅಂತ ಟ್ವೀಟ್ ಮಾಡಿ ರೇಲ ಮಿನಿಸ್ಟರಗೆ, DGM, GM, @SWRRLY ಎಲ್ಲಾರಿಗೂ ಟ್ಯಾಗ ಮಾಡಿ ಬಿಟ್ಟನಂತ. ಅಲ್ಲಾ toilet ಒಳಗ ನೀರ ಇದ್ದಿದ್ದಿಲ್ಲಾ, ಮ್ಯಾಲೆ ಕರೆಂಟ ಇದ್ದಿದ್ದಿಲ್ಲಾ ಹಿಂಗಾಗಿ ಇವಂಗ ಬ್ಯಾರೆ ಕೆಲಸ ಇದ್ದಿದ್ದಿಲ್ಲಾ, ಇನ್ನ ಮೋಬೈಲ ಅಂತೂ ಎಲ್ಲಾ ಕಡೇ ಇರೋದ ಭಡಾ ಭಡಾ ಎಲ್ಲಾರಿಗೂ ಟ್ಯಾಗ ಮಾಡಿ ಟ್ವೀಟ್ ಮಾಡಿದಾ. ತೊಗೊ ಇವನ ನಸೀಬಕ್ಕ ಆ ಟ್ವೀಟ್ ಆವಾಗಿನ ರೇಲ್ವೆ ಮಿನಿಸ್ಟರ ನೋಡಿ ’take immediate action’ ಅಂತ ಅವರೊಂದ ಹತ್ತ concerned personsಗೆ ಟ್ಯಾಗ ಮಾಡಿ ರಿಪ್ಲೈ ಕೊಟ್ಟರಂತ. ಕಡಿಕೆ ಒಬ್ಬ DRM ’please provide your coach and seat No’ ಅಂತ ಕೇಳಿದರ ಅದಕ್ಕ ಈ ಶಾಣ್ಯಾ ನನ್ನ ಮಗಾ coach No. S 13, Western Toilet Seat, leftside of right door’ ಅಂತ ರಿಪ್ಲೈ ಮಾಡಿದನಂತ. ಮುಂದ ಏನಾತ ಅದನ್ನೇಲ್ಲಾ ಇಲ್ಲ ಬರಿಲಿಕ್ಕೆ ಬರಂಗಿಲ್ಲಾ ಒಟ್ಟ ಅವನ ಪ್ರಾಬ್ಲೇಮ್ ಬಗಿಹರಿತ. ಇದನ್ನ ಅಂತೂ ಅಂವಾ ನಮ್ಮ ಮುಂದ ಒಂದ ಹತ್ತ ಸರತೆ ’ನನ್ನ ಟ್ವೀಟಗೆ ರೇಲ್ವೆ ಮಿನಿಸ್ಟರ ರಿಸ್ಪಾಂಡ್ ಮಾಡಿದರು’ ಅಂತ ಹೇಳಿದ್ದ ಹೇಳಿದ್ದ.
ಅಲ್ಲಾ ಇವತ್ತ ಸೋಸಿಯಲ್ ಮೀಡಿಯಾ ಅದರಾಗು specifically twitter ಒಳಗ ಒಂದಿಷ್ಟ ಮಂದಿ ಇದ್ದಾರ. ಅವರದ ಬೆಳಿಗ್ಗೆ ಎದ್ದ ಕೂಡ್ಲೇ ಏನ ಕೆಲಸಪಾ ಅಂದರ ಒಂದ ಯಾವದರ ಸಮಸ್ಯೆ ಪೇಪರನಾಗ ಓದೋದು. ಅದನ್ನ ಸಂಬಂದ ಇದ್ದವರಿಗೆ ಇರಲಾರದವರಿಗೆ ಎಲ್ಲಾರಿಗೂ ಮೆನ್ಶನ್ ಮಾಡಿ ಟ್ವೀಟ್ ಮಾಡೊದು. ಇವರಿಗೆ ಯಾವ ಸಮಸ್ಯೆ ಕಾರ್ಪೋರೇಟರಗೆ ಕೇಳಬೇಕು, ಯಾವದು MPಗೆ ಕೇಳಬೇಕ ಗೊತ್ತಿರಂಗಿಲ್ಲಾ. ನಮ್ಮ ಓಣ್ಯಾಗಿನ ಗಟಾರ ನಮ್ಮಂತಾವರ ಕಸಾ ಹಾಕಿ ಹಾಕಿ ಬ್ಲಾಕ್ ಆದಾಗ ಮೋದಿಗೆ ಟ್ಯಾಗ ಮಾಡಿ look at #HubliDharwad #SmartCity ಅಂತ ಟ್ವೀಟ್ ಮಾಡಿದರ ಗಟಾರ ಸ್ವಚ್ಛ ಆಗ್ತದೇನ್ರಿ? ಇವರಿಗೆ ಪ್ರಾಬ್ಲೇಮ್ ಸಾಲ್ವ ಆಗೋದಕಿಂತಾ ತಮ್ಮ ಟ್ವೀಟ ಟ್ರೇಂಡ್ ಆಗಬೇಕ ಇಷ್ಟ.
ಹೋಗ್ಲಿ ಬಿಡ್ರಿ ಇದ ಟಾಪಿಕ ಪಾಲಿಟಿಕಲ್ ಆಗಲಿಕತ್ತ. ನಾ ವಾಪಸ ನಮ್ಮ ದೋಸ್ತನ ವಿಷಯಕ್ಕ ಬರ್ತೇನಿ.
ಹಿಂಗ ನಮ್ಮ ದೋಸ್ತ ಟ್ವಿಟರ್ ಒಳಗ ಯಾಕ್ಟಿವ ಆಗಿದ್ದ ನೋಡಿ ನಮಗೇಲ್ಲಾ ಭಾರಿ ಅಜೀಬ ಅನಸಿದರು ಡೌಟ ಅಂತು ಇತ್ತ. ಅಲ್ಲಾ ಈ ಮಗಾ, ಮೆನ್ಶನ್,ಹ್ಯಾಶ್ ಟ್ಯಾಗ,ಟ್ರೇಂಡ್,ಇಂಪ್ರೇಶನ್ಸ ಇವನ್ನೇಲ್ಲಾ ಹೆಂಗ ಅರ್ಥಾ ಮಾಡ್ಕೊಳೊಷ್ಟ ಶಾಣ್ಯಾ ಆದ ಅಂತ ಅನಸಲಿಕತ್ತ. ಅದ 3 idiots ಪಿಕ್ಚರ ಒಳಗ ಒಂದ ಡೈಲಾಗ ಅದ ಅಲಾ
’ದೋಸ್ತ ಫೇಲ ಆದರ ದುಃಖ ಆಗ್ತದ ಆದರ ದೋಸ್ತ ಶಾಣ್ಯಾ ಆಗಿ ಫಸ್ಟ ಬಂದರ ಇನ್ನೂ ಜಾಸ್ತಿ ದುಃಖ ಆಗ್ತದ’ಅಂತ ಹಂಗ ನಮಗೇಲ್ಲಾ ಆಗಿತ್ತ.
ಈಗ ರಿಯಲ್ ಕ್ಲೈಮ್ಯಾಕ್ಸ ಕೇಳ್ರಿ, ಒಂದ ಆರ ತಿಂಗಳ ಹಿಂದ ನಾನೂ ಅಂವಾ ಕೂಡಿ ಮಧ್ಯಾಹ್ನ ’ಚಿಚೋರೆ’ ಅಂತ ಹಿಂದಿ ಫಿಲ್ಮಗೆ ಹೋಗಿದ್ವಿ. ಪಿಕ್ಚರ ಸ್ಟಾರ್ಟ ಆಗಿ ಒಂದ ಹತ್ತ ನಿಮಿಷಕ್ಕ ನನಗ ಸಡನ್ ಆಗಿ ಟ್ವಿಟರ್ ನೋಟಿಫಿಕೇಶನ್ ಬಂತ, ನಾ ನೋಡಿದರ ಅಷ್ಟ ಟ್ವಿಟರ್ ಒಳಗ ಯಾಕ್ಟೀವ್ ಇಲ್ಲಾ, ಯಾರದ ಅಂತ ನೋಡಿದರ ಈ ಮಗಂದ ಟ್ವೀಟ್
‘Attending shri @Satyanarayan pooja at @VVani4U #Girmit columnist @prashantadur residence’ ಅಂತ ಇತ್ತ. ಅಲ್ಲಾ ಡೈರೆಕ್ಟ ಸತ್ಯನಾರಾಯಣಗ ಟ್ಯಾಗ ಮಾಡಿದ್ದಾ. ನಾ ಇವಂಗ ಹೆಂಗ ಗೊತ್ತಾತಪಾ ಸತ್ಯನಾರಾಯಣನ ಟ್ವಿಟರ್ ಹ್ಯಾಂಡಲ್ ಅಂತ ಗಾಬರಿ ಆದೆ. ಅದ ಇರಲಿ, ಇಂವಾ ನೋಡಿದರ ಇಲ್ಲೆ ಮೋಬೈಲ ಸ್ವಿಚ್ ಆಫ್ ಮಾಡಿ ಬಾಯಿ ತಕ್ಕೊಂಡ ಶ್ರದ್ಧಾ ಕಪೂರನ ನೋಡ್ಕೋತ ಕೂತಾನ, ಇಂವಾ ಹೆಂಗ ಟ್ವೀಟ್ ಮಾಡಿದಾ ಅಂತ ಆಶ್ಚರ್ಯ ಆತ. ನಾ ಪಿಕ್ಚರ ಮುಗಿಯೋದ ತಡಾ ಅವಂಗ ಹಿಡದ
’ಮಗನ ಈ ಟ್ವೀಟ್ ಯಾರ ಮಾಡಿದ್ದ’ ಅಂತ ಕೇಳಿದೆ. ಅಂವಾ ಭಾಳ ತಲಿಗೆಡಸಿಕೊಳ್ಳಿಲ್ಲಾ.
’ಏ, ನಾ ಪಿಕ್ಚರಗೆ ಹೋಗ್ತೇನಿ ಅಂದರ ನನ್ನ ಹೆಂಡ್ತಿ ಬಿಡ್ತಿದ್ದಿಲ್ಲಾ, ಅದಕ್ಕ ಸುಳ್ಳ ನಿಮ್ಮ ಮನ್ಯಾಗ ಸತ್ಯನಾರಾಯಣ ಪೂಜಾ ಅದ ಅಂತ ಹೇಳಿ ಬಂದೇನಿ ತೊಗೊ’ ಅಂದಾ.
’ಲೇ..ಮಗನ ಅದ ಇರಲಿ..ನೀ ಇಲ್ಲಿದ್ದಾಗ ನಿನ್ನ ಈ ಟ್ವೀಟ್ ಮಾಡಿದವರ ಯಾರ ಹೇಳ’ ಅಂದೆ.
’ದೋಸ್ತ…ನೀ ಯಾರ ಮುಂದು ಹೇಳಬ್ಯಾಡ ಮತ್ತ……ನನ್ನ ಟ್ವಿಟರ್ ಹ್ಯಾಂಡಲ್ ಮಾಡೊದ ನನ್ನ ಹೆಂಡ್ತಿಲೇಪಾ…ನನಗೇಲ್ಲೆ ಸುಡಗಾಡ ಆ ಪರಿ ಇಂಗ್ಲೀಷ್ ಬರ್ತೈತಿ’ ಅಂದ ಸೀದಾ ಗಾಡಿ ಕಿಕ್ ಹೊಡದ ತಮ್ಮ ಮನಿಗೆ ಹೋದಾ.
ನಾ ಇದನ್ನ ಯಾ ದೋಸ್ತರಿಗೂ ಇವತ್ತಿನ ತನಕ ಹೇಳಿಲ್ಲಾ, ನೀವು ಯಾರಿಗೂ ಹೇಳಬ್ಯಾಡ್ರಿ.
ನಾ ನಿಮಗ ಮೊದ್ಲ ಹೇಳಲಿಲ್ಲಾ, ನಮಗ್ಯಾಕೋ ಈ ಮಗಾ ಹೆಂಗ ಟ್ವೀಟ ಮಾಡೋ ಅಷ್ಟ ಒಮ್ಮಿಂದೊಮ್ಮಿಲೇ ಶಾಣ್ಯಾ ಆದಾ ಅಂತ ಡೌಟ ಬಂದಿತ್ತ ಅಂತ. ಈಗ ಎಲ್ಲಾ ಕ್ಲೀಯರ್ ಆತ. ಅವನ ಟ್ವೀಟರ್ ಹ್ಯಾಂಡಲ್ ಹ್ಯಾಂಡಲ್ ಮಾಡೋಕಿ ಅವನ ಹೆಂಡ್ತಿ ಅಂತ. ಅಲ್ಲಾ ಅದರಾಗ ಏನ ತಪ್ಪಿಲ್ಲ ಬಿಡ್ರಿ, ಹೆಂಗಿದ್ದರೂ ಅರ್ಧಾಂಗಿನಿ, ಸಂಸಾರದ ಹ್ಯಾಂಡಲನ್ ಅಕಿ ಕಡೆ ಇದ್ದ ಮ್ಯಾಲೆ ಟ್ವೀಟರ್ ಹ್ಯಾಂಡಲ್ ಏನ ದೊಡ್ಡದ ಅಂತೇನಿ.
ಅಲ್ಲಾ ಹಂಗ ಈ ಸೋಸಿಯಲ್ ಮೀಡಿಯಾದಾಗ ಯಾರದೋ ಟ್ವಿಟರ್ ಯಾರೋ ಹ್ಯಾಂಡಲ್ ಮಾಡ್ತಿರ್ತಾರ. ಇಲ್ಲೇ ನಾವ ನೋಡಿದರ ನಮ್ಮ ಟ್ವೀಟ ಅವರ ಲೈಕ ಮಾಡಿದರು, ಇವರ ರಿಟ್ವೀಟ್ ಮಾಡಿದ್ರು ಅಂತ ಹಾರಾಡ್ತಿರ್ತೇವಿ. ಹಂಗ ಅವನ್ನೇಲ್ಲಾ ಹ್ಯಾಂಡಲ್ ಮಾಡೊರ ಬ್ಯಾರೆನ ಇರ್ತಾರ.
ಅನ್ನಂಗ ಇನ್ನೊಂದ ಹೇಳೋದ ಮರತೆ ಇವತ್ತಿಗೆ ಕರೆಕ್ಟ ಹದಿನಾಲ್ಕ ವರ್ಷದ ಹಿಂದ ಜಗತ್ತಿನ ಮೊಟ್ಟ ಮೊದಲ ಟ್ವೀಟ್ ಜ್ಯಾಕ್ ಡೊರ್ಸೆ ಮಾಡಿದ್ದಾ. (On 21 March 2006, Jack Dorsey shared the first tweet ever – “just setting up my twttr”) ಹಂಗ ಅಂವಾ ಟ್ವಿಟರ್ ಸ್ವಂತ ತಾನ ಹ್ಯಾಂಡಲ್ ಮಾಡ್ತಿದ್ದನ ಮತ್ತ ಅವನ ಹೆಂಡ್ತಿ ಏನ ಅಲ್ಲಾ.
ಒಂದ ಸರತೆ ಟ್ವಿಟರ್ ಕಂಡ ಹಿಡದ ಆ ಪುಣ್ಯಾತ್ಮಗ ನೆನಸಿಕೊಂಡ ನನ್ನ @prashantadur ಟ್ವಿಟರ್ ಅಕೌಂಟ ಒಳಗ ಇರೋ ಇವತ್ತಿನ ಆರ್ಟಿಕಲ್ ರಿಟ್ವೀಟ್ ಮಾಡ್ರಿ ಮತ್ತ.
ಪ್ರತಿ ಸಲದಂಗ ಮಸ್ತ ಬರಿದೀರಿ ಟ್ವೀಟ್ ಬಗ್ಗೆ! ಬಿದ್ದು ಬಿದ್ದು ನಕ್ಕು ಸಾಕಾಯ್ತು! ಧನ್ಯವಾದಗಳು! 🙏