ಇದ ಏನ್ ಪ್ರಹಸನ ಅಲ್ಲ ಮತ್ತ, ಇದು ನಾ ಈ ಪುಸ್ತಕದಾಗ ಬರದದ್ದ ಪ್ರಹಸನಗಳ ಪ್ರಸವ ವೇದನೆಯ ಅನುಭವಗಳ ಒಂದ ಲೇಖನ.
ನನ್ನ ಜೀವನದಾಗ ನಾ ಕನ್ನಡದಾಗ ಬರಿತೇನಿ ಅಂತ ಎಂದೂ ಅನ್ಕೋಂಡಿದ್ದಿಲ್ಲ ಆದರೂ ಇವತ್ತ ಒಂದ ಮಾಟನ ಛಂದನ ಪುಸ್ತಕಾ ಆಗೋ ಅಷ್ಟ ಲೇಖನ ಕನ್ನಡದಾಗ ಬರದೆ, ನೀವು ಓದಿದಿರಿ, ಬರದದ್ದ ಅಂತೂ ನನಗ ಖುಷಿ ಕೊಟ್ಟದ, ಓದಿದವರು ನೀವು ಖುಷಿ ಪಟ್ಟಿರಿ ಅಂತ ಅಂದ್ಕೊಂಡೇನಿ. ಹಂಗ ನೋಡಿದ್ರ ನಾ ಬರಿಲಿಕ್ಕೆ ಶುರುಮಾಡಿದ್ದ ಭಾರಿ ಆಕಸ್ಮಿಕ. ನನಗ ನಮ್ಮ ದೋಸ್ತರ ಯಾರರ ಕನ್ನಡದಾಗ ಬರದರು ಸಂಕಟಾಗಿ ನಾನೂ ಬರಿಬೇಕು, ನಾನೂ ಬರಿಬಹುದು ಅಂತೇಲ್ಲಾ ಅನಸ್ತಿತ್ತು. ಆದರ ಇಷ್ಟ ವರ್ಷಗಟ್ಟಲೇ ಬರೆ ಸಂಕಟಾನ ಪಟ್ಟನೆ ಹೊರತು ಬರಿಲಿಕ್ಕೆ ಪ್ರಯತ್ನ ಮಾಡಿರಲಿಲ್ಲಾ.
ಒಂದ ದಿವಸ ಮಧ್ಯಾಹ್ನ ನಾನೂ ಏನರ ಇವತ್ತ ಬರದ ಬಿಡಬೇಕು ಅಂತ ನನ್ನ ಹಿಂದಿನ ದಿವಸದ್ದ ಗ್ರಹಣದ ಅನುಭವವನ್ನ ಒಂದ ರಫ್ ಪೇಪರ ಮ್ಯಾಲೇ ಪೆನ್ಸಿಲನಿಂದ ನಾಲ್ಕ ಅಕ್ಷರದಾಗ ಗೀಚಿಲಿಕತ್ತೆ. ಬರಿತಾ-ಬರಿತಾ ಎರಡ ಪೇಜ್ ತುಂಬಿ ಬಿಟ್ಟತು. ಅರೇ ಇಷ್ಟ ಬರದನೇಲಾ ಅಂತ ನನಗ ಆಶ್ಚರ್ಯ ಆತ , ಒಂದ ಎರಡ ಸರತೆ ನಾ ಬರದಿದ್ದನ್ನ ಓದಿ ನೋಡಿದೆ. ಏ, ಎನ್ ಅಡ್ಡಿ ಇಲ್ಲಾ ಅನಸ್ತು. ಇರಲಿ ಯಾರರ ಶಾಣ್ಯಾರಿಗ ತೊರಸೋಣ ಅಂತ ಹಾಳಿ ಹರಿಲಾರದ ಹಂಗ ಇಟಗೊಂಡೆ. ನಾ ಬರದಿದ್ದ ನನಗ ಭಾಳ ದೊಡ್ಡ ವಿಷಯ ಇರಬಹುದು ಆದರ ಓದೊರಿಗೆ ಅದನ್ನ ಓದಲಿಕ್ಕ ಇಂಟರೇಸ್ಟ ಇರಬೇಕಲಾ ? ಕಡಿಕೆ ನಮ್ಮ ಗ್ರೂಪ್ ನಾಗ ಇದ್ದಿದ್ದಾರಾಗ ಒಂದ ಸ್ವಲ್ಪ ಭಾಳ ಶಾಣ್ಯಾ, ಅದು ಇದು ಓದ್ಕೊಂಡಾಂವ, ಸುಟ್ಟ ಸುಡಗಾಡ ತಿಳ್ಕೊಂಡೊಂವಾ ಅಂದರ ನಮ್ಮ ಬೀದರದ ಋಷಿಕೇಶ ಬಹಾದ್ದೂರ ದೇಸಾಯಿ ಒಬ್ಬನ ಅಂತ ಅವಂಗ ಫೋನ್ ಮಾಡಿ
“ಮಗನ, ನಾನು ಕನ್ನಡದಾಗ ಒಂದ ಲೇಖನಾ ಬರದೇನಲೆ ” ಅಂತ ಹೇಳಿದೆ.
“ಹೌದ , ಭಾಳ ಛಲೋ ಆತ ನನಗ ಮೇಲ್ ಮಾಡ ” ಅಂದಾ.
“ಲೇ, ನಾ ಕೈಲೇ ಬರದೇನಲೇ ” ಅಂದೆ
“ಹಂಗರ ಸ್ಕ್ಯಾನ ಮಾಡಿ ಕಳಿಸು ” ಅಂದಾ.
“ಯಪ್ಪಾ ದೇವರ ಪೆನ್ಸಿಲ್ಲೇ ಬರದೇನಿ, ಕಚ್ಚಾ ಹಾಳ್ಯಗ, ಸ್ಕ್ಯಾನ ಮಾಡಲಿಕ್ಕೆ ಬರಂಗಿಲ್ಲಾ” ಅಂದೆ.
“ಭಾಳ ಶಾಣ್ಯಾ ಇದ್ದಿ , ಈಗ ಮತ್ತ ಏನ ಮಾಡೋಂವಾ ” ಅಂದಾ.
“ನೀ ಫ್ರಿ ಇದ್ದರ ಓದಿ ಹೇಳ್ತೇನಿ” ಅಂದೆ
“ನಾ ಫ್ರಿ ಇಲ್ಲಾ ,ಈಗ ನಾ ಪ್ರೆಸ್ ಕ್ಲಬಗೆ ಊಟಕ್ಕ ಹೊಂಟೇನಿ. ನೀ ರಾತ್ರಿ ಫೊನ್ ಮಾಡ ” ಅಂತ ಇಟ್ಟಾ.
ಸರಿ , ರಾತ್ರಿ ಹನ್ನೊಂದುವರಿ ಸುಮಾರ ಫೊನ್ ಮಾಡಿ, ಪಾಪ ಮಲ್ಕೋಂಡಿದ್ದ ದೇಸಾಯರನ ಎಬಿಸಿ ” ಗ್ರಹಣ ಭೂಮಿಮ್ಯಾಲೇ, ಅದರ ಫಲಾ ನನ್ನ ರಾಶಿ ಮ್ಯಾಲೆ ” ಲೇಖನಾ ಓದಿ ಹೇಳಿದೆ. ನಾ ಬರದಿದ್ದ ಕ್ಯಾಸೂವಲ ಆದ್ರೂ ಸಿರಿಯಸ್ ಆಗಿ ಓದಿದೆ. ಅಂವಾ ಕಾಟಚಾರಕ್ಕ ಕೇಳಿದ್ನೋ ಇಲ್ಲಾ ಶಿಷ್ಟಾಚಾರಕ್ಕ ಕೇಳಿದ್ನೋ ಗೊತ್ತಿಲ್ಲಾ, ಆದರ ನಾ ಓದಿದ್ದಕ್ಕ ಎಲ್ಲಾ ನಿದ್ದಿ ಗಣ್ಣಾಗ ಫುಲ್ ಸ್ಟಾಪ್ ಇರಲಿ ಬಿಡಲಿ ಹೂಂ..ಹೂಂ ಅನಕೋತ ಇದ್ದಾ. ನಾ ಪೂರ್ತಿ ಲೇಖನಾ ಓದಿದ ಮ್ಯಾಲೆ ಅಂವಾ ಎದ್ದ ಎಚ್ಚರ ಆಗಿ ಒಂದ ಮಾತ ಹೇಳಿದಾ
“ದೋಸ್ತ, ದಿಸ್ ಆರ್ಟಿಕಲ್ ಇಸ ವರ್ಥ್ ಟೇಕಿಂಗ್ ಟ್ರಬಲ್ ಆಪ್ ಟೈಪಿಂಗ ” ಅಂತ ತನ್ನ ವ್ಯವಸಾಯಿಕ ಭಾಷಾದಾಗ ಹೇಳಿ ಮುಸಕ ಹಾಕ್ಕೋಂಡ ಮಲ್ಕೋಂಡ ಬಿಟ್ಟಾ. ಅಕಸ್ಮಾತ ಅವತ್ತ ಅವನೌನ ಅಂವಾ ಏನರ ” ದೋಸ್ತ, ದಿಸ್ ಆರ್ಟಿಕಲ್ ಇಸ ನಾಟ್ ವರ್ಥ್, ಡೊಂಟ ಟೇಕ ಟ್ರಬಲ್ ಆಪ್ ರೈಟಿಂಗ್ ” ಅಂತ ಅಂದ ಬಿಟ್ಟಿದ್ದರ ನಾ ಇವತ್ತ ಇಷ್ಟ ಲೇಖನಾ ಬರಿತಿದ್ದಿದ್ದಿಲ್ಲಾ, ನಿಮಗೂ ಈ ಪುಸ್ತಕ ಓದೊ ಕಷ್ಟ ಇರತಿದ್ದಿಲ್ಲಾ. ನನ್ನ ಪ್ರಹಸನಗಳ ಗರ್ಭಪಾತ ಆಗಿ, ಲೇಖಕನ ಪಾತ್ರ ಹುಟ್ಟೊಕಿಂತ ಮೊದ್ಲ ಸತ್ತ ಹೋಗಿರತಿತ್ತ. ಆದರ ಅಂವಾ ಹಂಗ ಹೇಳಲಿಲ್ಲಾ. ಬಹುಶಃ ಅವಂಗ ನಡ ರಾತ್ರ್ಯಾಗ ಖರೆ ಹೇಳೊ ಚಟಾ ಇತ್ತ ಕಾಣಸ್ತದ, ಲೇಖನಾ ಅಡ್ಡಿಯಿಲ್ಲಾ ಅಂದಾ. ನಾನೂ ಫುಲ್ ಖುಶ್ ಆಗಿ ’ಬರಹಗಾರ’ ಆಗೋ ಕನಸ ಕಾಣಲಿಕ್ಕೆ ತುಂಬ ಹೊಚಗೊಂಡ ಮಲ್ಕೋಂಡೆ. ಮುಂದ ೭೫೦ ಶಬ್ದದ ಲೇಖನಾ ಕನ್ನಡದಾಗ ಟೈಪ ಮಾಡಲಿಕ್ಕ ಒಂದ ವಾರ ಹಿಡಿತ. “ಇನ್ನ ಮುಂದ ಏನ ಮಾಡ್ಲಿಲೇ ” ಅಂತ ಮತ್ತ ದೇಸಾಯಿನ್ ಕೇಳಿದೆ. ಅಂವಾ ಒಂದ ವಾರದ ಹಿಂದ ನಿದ್ದಿ ಗಣ್ಣಾಗ ನನ್ನ ಲೇಖನಾ ಕೇಳಿದ್ದ ಮರುದಿವಸ ಎದ್ದ ಮ್ಯಾಲೆ ಮರತ ಬಿಟ್ಟಿದ್ದಾ ಕಾಣಸ್ತದ ” ಯಾಕ, ಹಿಂದ ಏನ್ ಮಾಡಿದ್ದಿ ?” ಅಂದಾ. ನಾ ಮತ್ತ ನನ್ನ ಲೇಖನದ ಬಗ್ಗೆ ನೆನಪ ಮಾಡಿದ ಮ್ಯಾಲೆ ಅಂವಾ “ನೀ ಒಂದ ಕೆಲಸಾಮಾಡ , ಈ ಲೇಖನಾ ಕೆಂಡಸಂಪಿಗೆ ಸಂಪಾದಕರಿಗೆ ಕಳಸು ಅವರು ಹಾಕ್ಕೊಂಡರು ಹಾಕ್ಕೋಬಹುದು ” ಅಂದಾ, ಈ ಕೆಂಡಸಂಪಿಗೆ ಒಳಗ ಎಲ್ಲಾ ದೊಡ್ಡ-ದೊಡ್ಡ ಹೆಸರಿನ ಲೇಖಕರು, ಅದರಾಗ ಭಾಳಷ್ಟ ಮಂದಿ ಹೆಸರು ನಾ ಕೇಳಿದ್ದಿಲ್ಲಾ, ಎಷ್ಟೋ ಮಂದಿ ಬಗ್ಗೆ ನಂಗ ಇವತ್ತೂ ಗೊತ್ತಿಲ್ಲಾ, ಆ ದೊಡ್ಡ-ದೊಡ್ಡ ಹೆಸರಿನ ಲೇಖಕರಿಗೂ ನಾ ಯಾರಂತ ಗೊತ್ತಿಲ್ಲಾ ಆ ಮಾತ ಬ್ಯಾರೆ.
ಸರಿ ಲೇಖನಾ ಕೆಂಡಸಂಪಿಗೆ ಸಂಪಾದಕರಿಗೆ ತಲುಪತು. ಒಂದ ಎರಡ ದಿವಸ ತನಕಾ ಅಲ್ಲಿಂದ ಏನ ಮೇಲ್ ಬರಲಿಲ್ಲ , ನನಗೂ ಒಂದ ಸ್ವಲ್ಪ ಕ್ಯುರಿಯಾಸೀಟಿ/ ಆಂಕ್ಸಿಟಿ ಇತ್ತ ಅನ್ರಿ. ನಾ ಜೀವನದಾಗ ಒಂದನೇ ಸರತೆ ಬರದಿದ್ದ, ಮತ್ತ ಅದರಾಗ ನೋಡ್ಕೋಳಾರದ, ಸ್ವಂತ ತಿಳವಳಿಕೆಲೆ ಬರದಿದ್ದ ಬ್ಯಾರೆ. ಸರಿ, ಮೂರ ದಿವಸ ಬಿಟ್ಟ ಕೆಂಡಸಂಪಿಗೆ ಸಂಪಾದಕ ಅಬ್ದುಲ್ ರಶಿದ್ ಪೊನ್ ಮಾಡಿದರು ” ನಿಮ್ಮ ಲೇಖನ ಚೆನ್ನಾಗಿದೆ ಪ್ರಶಾಂತ , ಪ್ರಕಟಿಸೋಣ. ನಿಮ್ಮದೊಂದು ಚೆನ್ನಾಗಿರೊ ಭಾವಚಿತ್ರ ಕಳಿಸಿ ” ಅಂತ ಅಗ್ದಿ ಶುದ್ಧ ಮೈಸೂರ ಕನ್ನಡದಾಗ ಹೇಳಿದರು. ಅವರ ಜೊತಿ ಮಾತಾಡಿದ ಮ್ಯಾಲೇ ನನಗ ಅನಸ್ತು ‘ಇವರಿಗೆ ನಾ ಬರದಿದ್ದ ತಿಳದದೊ ಇಲ್ಲೋ ಅಂತ’, ಪಾಪಾ ಇವರ ಮಾತಾಡೋದ ಕೇಳಿದ್ರ ಪುಸ್ತಕ ಓದದಂಗ ಆಗತದ. ಅವರ ಭಾಷಾದ ಮುಂದ ನನ್ನ ಭಾಷಾ ಬೈಗಳ ಇದ್ದಂಗ ಯಾಕಂದರ ನಾ ಬರದದ್ದ ಅಗದಿ ಉತ್ತರ ಕರ್ನಾಟಕದ ಖಡಕ ಆಡು ಭಾಷೆ ಒಳಗ (ಅದಕ್ಕ ಇತ್ತಿಚಿಗೆ ನಮ್ಮ ದೋಸ್ತರ ‘ಆಡ್ಯಾನ’ ಭಾಷೆ ಅಂತಾರ ). ಇವರು ನನ್ನ ಕನ್ನಡ ಓದಿ ತಿಳ್ಕೊಂಡ ಪಬ್ಲಿಶ್ ಮಾಡಿದರೊ ಏನ ಋಷಿಕೇಶ ಬಹಾದ್ದೂರ ದೇಸಾಯಿ ಭಿಡೆಕ್ಕ ಮಾಡಿದರೊ ಗೊತ್ತಿಲ್ಲಾ, ಒಟ್ಟ ಲೇಖನ ಅಂತೂ ಬಂತು. ನಂಗ ಅಗದಿ ‘ಜ್ಞಾನಪೀಠ’ ಸಿಕ್ಕಂಗ ಆತು, ಒಂದ ಹತ್ತ ಮಂದಿಗೆ ಫೋನ್ ಮಾಡಿ , ಇಪ್ಪತ್ತ ಮಂದಿಗೆ ಮೇಲ್ ಕಳಸಿ ,ಮೂವತ್ತ ಮಂದಿಗೆ ಎಸ್. ಎಮ್. ಎಸ್. ಮಾಡಿದೆ. ಅವತ್ತ ‘ನನಗ ಕನ್ನಡದಾಗ ಬರಿಲಿಕ್ಕೆ ಬರಂಗಿಲ್ಲಾ’ ಅನ್ನೊ ಗ್ರಹಣ ಬಿಟ್ಟತ ನೋಡ್ರಿ, ನಾ ಅನ್ಕೊಂಡೆ ಇದಕ್ಕ ಜನಾ ಬರೆಯೋದ ಅಂತಾರಿನ ಅಂತ,
” ಇದಕ್ಕ ಬರೆಯೋದ ಅಂತಾರ ಅಂದರ, ನಾ ಹಿಂತಾವ ದುನಿಯಾ ಬರಿಬಹುದಲೇ ದೇಸಾಯಿ ” ಅಂದೆ.
“ಲೇ ಮಗನ, ಮದ್ಲ ಒಂದ ನಾಲ್ಕ ಲೇಖನಾ ಬರಿ ಆಮೇಲೆ ಈ ಮಾತ ಹೇಳ ” ಅಂದಾ
ಅಷ್ಟರಾಗ ” ಲೇಖನಕ್ಕೆ ಪ್ರತಿಕ್ರಿಯೆ ಚೆನ್ನಾಗಿ ಬಂದಿದೆ, ಪರ್ವಾಗಿಲ್ಲಾ, ಮತ್ತೆ ಬರಿತಾ ಇರಿ ಪ್ರಶಾಂತ ” ಅಂತ ಮಡಿಕೇರಿಯಿಂದ ಅಬ್ದುಲ್ ರಶಿದ್ ಅವರ ಆಕಾಶವಾಣಿನೂ ಆತ. ನನಗೂ ಭಾರಿ ಉಮೇದಿ ಬಂತ, ಮುಂದ ನಾ ವಾರಾ ಬರದಿದ್ದ – ಬರದಿದ್ದ , ಮಂದಿ ಓದಿದ್ದ – ಓದಿದ್ದ. ಈಗ ಅವೆಲ್ಲಾ ಪ್ರಹಸನಗಳು ಪುಸ್ತಕ ಆಗಿ ನಿಮ್ಮ ಕೈಯಾಗ ಬಂದಾವ.
ಇರಲಿ, ಇಷ್ಟ ಮಂದಿ ಛಲೋ ಬರದಿ ಅಂದರು ಅಂತ ಮುಂದ ‘ಇಲ್ಲಾ ಅಕಿ ಬರೊಹಂಗ ಇದ್ದಿದ್ದಿಲ್ಲಾ’ ಅಂತ ಬರದ ಮನಿ ಮಂದಿ ಕಡೆ ಬಯಸ್ಗೊಂಡೆ. ಮೂರ ದಿವಸ ಮನಿ ಮಂದಿ ನನಗ ಮುಟ್ಟೋದ ದೂರ ಉಳಿತ ಮಾತು ಆಡಸಲಿಲ್ಲಾ. ನನಗ್ಯಾಕ ಬೇಕಾಗಿತ್ತಪಾ ಹೆಣ್ಣ ಮಕ್ಕಳ ಉಸಾಬರಿ ಅನ್ನೊ ಹಂಗ ಆಗಿ ಹೋತ. ಮುಂದ ‘ಬ್ರಾಹ್ಮಣರಾಗ ಕನ್ಯಾ ತೀರಿ ಹೋಗ್ಯಾವ’ ಅಂತ ಏನ ಅಗದಿ ಎಲ್ಲಾ ಬ್ರಾಹ್ಮಣರ ವರದ ಜವಾಬ್ದಾರಿ ನನ್ನ ಹೆಗಲ ಮ್ಯಾಲೇ ಇದ್ದೋರಗತೆ ಬರದೆ, ಲೇಖನದಾಗ ಸಾಫ್ಟವೇರ್ ವರಗಳ ಬಗ್ಗೆ ಬರದೆ, ಹೊಸ್ತಾಗಿ ಲಗ್ನ ಆದೋರಿಗೆ ‘ಸುಖ ಸಂಸಾರಕ್ಕ ಒಂದು ಸೂತ್ರ’ಅಂತ ಲೇಖನಾ ಬರದ ಸಂಸಾರದಾಗ ಹೆಂಗ ಮುಕ್ತಿ ಕಾಣಬೇಕು ಅಂತ ದಾರಿ ತೋರಿಸಿದೆ. ಉಳದ ಸಾದಾ ಬ್ರಾಹ್ಮಣ ವರಗಳ ಪರಿಸ್ಥಿತಿ ನೋಡಿ ಕೆಟ್ಟ ಅನಿಸಿಕೊಂಡ ನಡಕ ಒಂದ ಸರತೆ ಕುಡದ ‘ಬಾರನಾಗ ಬರೇ ನಮ್ಮ ಮಂದಿ’ ಅಂತ ಬರದ ನನಗ ಭೆಟ್ಟಿ ಆದವರೆಲ್ಲಾ ‘ಏನಪಾ ನೀನೂ ತೊಗೊತಿ ಏನ ?’ ಅಂತ ಕೇಳೋ ಹಂಗ ಮಾಡ್ಕೊಂಡೆ. ನಾ ಜೀವನದಾಗ ಸಾಫ್ಟವೇರ್ ಇಂಜಿನೀಯರ ಆಗಲಿಲ್ಲಲಾ ಅನ್ನೊ ಸಂಕಟದಾಗ ಸಾಫ್ಟವೇರ್ ಇಂಜಿನೀಯರಕ್ಕಿಂತಾ ‘ಮೆಡಿಕಲ್ ರೆಪ್’ಆಗೋದ ಛಲೋ ಅಂತ ‘ಇರೊಂವ ಒಬ್ಬ ಮಗಾ ಅವನು ಮೆಡಿಕಲ್ ರೆಪ್’ ಅಂತ ಲೇಖನಾ ಬರದೆ. ಸಾಫ್ಟವೇರ್ ಮಂದಿ ತಲಿ ಕೆಟ್ಟ ನನಗ ಹಾರ್ಡವೇರ್ ತೊಗೊಂಡ ಹೊಡಿಯೋ ಹಂಗ ಮಾಡ್ಕೊಂಡೆ.
ಮುಂದ ಪಂಚಮಿ ಉಂಡಿ ಕೊಡ್ಲಿಕ್ಕೆ ಬಂದ ನಮ್ಮ ತಮ್ಮನ ಹೆಂಡತಿಗೆ ‘ನೀ, ಇನ್ನೊಂದ ಯಾವಾಗ ಹಡಿತಿವಾ?’ ಅಂತ ಕೇಳಿ, ಅಕಿ ಕಡೆಯಿಂದ ‘ನೀವು ಬಾಣೇಂತನ ಮಾಡ್ತೇನಿ ಅಂದ್ರ ನಾ ಇನ್ನೊಂದ ಹಡಿತೇನಿ’ ಅಂತ ಅನಿಸಿಗೊಂಡ ಅದರ ಬಗ್ಗೆ ಒಂದ ಲೇಖನಾ ಬರದೆ. ಅಷ್ಟರಾಗ ಶ್ರಾವಣಮಾಸ ಬಂತ. ಈ ಸರತೆ ‘ನಳಾ ಬಂದರ ಗೌರಿ ಕುಡಸೋದು’ ಅಂತ ಮಡಿ -ಮೈಲಿಗೆ ಬಗ್ಗೆ ಬರದ ಎಲ್ಲಾ ಕಡೆ ಏಕಾಕಾರ ಮಾಡಿದೆ. ಹಿಂತಾದರಾಗ ನಮ್ಮ ತಿಪ್ಪಕ್ಕಜ್ಜಿ ಕಾಟಾ ತಾಳಲಾರದ ‘ತಾಯಿ ಬನಶಂಕರೀ… ಸಾಕಾತವಾ ಜೀವಾ… ಲಗೂನ ಕರಕೋಳವಾ’ ಅಂತ ಅಕಿನ್ನ ಒಯ್ದ ‘ಬನಶಂಕರಿ ವಾನ ಪ್ರಸ್ಠದಾಗ’ ಬಿಟ್ಟ ಬಂದೆ. ನಮ್ಮ ಕಾಶಕ್ಕ ಅಜ್ಜಿ ‘ ಗಂಡಾ ಅನ್ನೋ ರಂಡೆ ಗಂಡ’ ನ ಬಗ್ಗೆ ಬರದ ಮಂದಿ ಕಡೆ ‘ರಂಡೆ ಗಂಡಾ’ ಏನ ಅಸಂಯ್ಯ ಬರಿತಿ ಅಂತ ಬೈಸಿಕೊಂಡೆ. ಇಷ್ಟೇಲ್ಲಾ ಬರೆಯೋದರಾಗ ಮತ್ತ ನನ್ನ ಹೆಂಡತಿದ ಡೇಟ್ ಬಂತು. ಅಕಿ ನಾ ಎಲ್ಲೆ ಕರದರು ‘ನಂದ ‘ಡೇಟ್’ ಅದ, ನಾ ಬರೋದ ‘ಡೌಟ” ಅಂತಾಳಂತ ಅದರ ಬಗ್ಗೆ ಬರದು ಒಂದಿಷ್ಟ ಹೆಣ್ಣ ಮಕ್ಕಳ ಕಡೆಯಿಂದ ಕಸಬರಗಿಲೆ “ವ್ಹಾ…ವ್ಹಾ”..ಅನಿಸಿಕೊಂಡೆ. ಜನಾ ” ಅವನೌನ, ಏನ ಬರಿತಾನಲೇ , ಅವನ ಟಾಪಿಕದ ಹೆಡ್ಡಿಂಗ್ ಹೆಂಗ ಇರತಾವ ನೋಡ ” ಅಂತ ಅನ್ನಲಿಕತ್ತರು, ಒಂದಿಷ್ಟ ಮಂದಿ ” ಅವಂಗ ‘ಅವರವ್ವಾ, ಅವರ ಅಬಚಿ ಇಲ್ಲಾಂದರ ಅವನ ಹೆಂಡತಿ ‘ ಇಷ್ಟ ಬಿಟ್ಟರ ಬ್ಯಾರೆ ಏನರ ಗೊತ್ತ ಅದನೋ ಇಲ್ಲೊ, ಬರೆ ಅವರ ಬಗ್ಗೆನ ಬರಿತಾನಲಾ ” ಅನ್ಲಿಕತ್ತರು. ಅಲ್ಲರಿ, ಇನ್ನ ನಾ ‘ನಿಮ್ಮವ್ವಾ , ನಿಮ್ಮ ಹೆಂಡತಿ ಬಗ್ಗೆ ಬರದರ ನೀವ ಸುಮ್ಮನ ಇರತೀರಿ ಏನ್, ನೀವ ಹೇಳ್ರಿ, ಹಿಂಗಾಗಿ ನಾ ಎಲ್ಲಾ ನಮ್ಮ ಮನೆಯವರ ಮ್ಯಾಲೆ ಬರದದ್ದು.
ಆದ್ರೂ ನಂಗ ಬ್ಯಾರೆನೂ ಬರಿಲಿಕ್ಕೆ ಬರತದ ಅಂತ ಕಿರಾಣಿ ಚೀಟಿ ಮ್ಯಾಲೆ ದೀಪಾವಳಿಗೆ ಒಂದ ‘ಕಿರಾಣಿ ವಿಶೇಷಾಂಕ’, ರಿಯಲ್ ಎಸ್ಟೆಟ್ ಧಂಧೆ ಬಗ್ಗೆ ‘ ಡಾ. ರಿಯಲ್ ಎಸ್ಟೇಟ್ ಪಾಚಾಪುರ’ ಮತ್ತ ನನಗ ವ್ಯವಹಾರಿಕ ಜ್ಞಾನನೂ ಅದ ಅಂತ ತೊರಸಲಿಕ್ಕೆ ‘ಸೆನ್ಸೆಕ್ಸ ಬಿತ್ತ , ಶುಗರ ಎತ್ತ’ ಅಂತ ಬ್ಯಾರ-ಬ್ಯಾರೆ ವಿಷಯದ ಮ್ಯಾಲೆ ಲೇಖನಾನೂ ಬರದೆ. ಇಷ್ಟೇಲ್ಲಾ ಬರದೇನಿ ಅಂದ್ರ ನಾನೂ ಸಾಹಿತಿ ಇದ್ದಂಗ ಅಂತ ದೊಡ್ಡಿಸ್ತನ ಮಾಡಲಿಕ್ಕೆ ಭಾಡಗಿ ಕಾರ ಮಾಡ್ಕೋಂಡ ಗಂಗಾವತಿ ಸಾಹಿತ್ಯ ಸಮ್ಮೇಳನಕ್ಕ ಹೋಗಿ ಬಂದ ‘ಗಂಗಾವತಿ ಗದ್ಲದಾಗ ಕನ್ನಡದ ಕರದಂಟ ‘ಅಂತ ಸಾಹಿತ್ಯ ಸಮ್ಮೇಳನಾನೂ ಒಂದ ಪ್ರಹಸನ ಮಾಡಿದೆ.
ಹೋದಲ್ಲೆ – ಬಂದಲ್ಲೆ ಜನಾ ತಮ್ಮ ಮಕ್ಕಳಿಗೆ ” ಪ್ರಶಾಂತ ಮಾಮಾ ಎಷ್ಟ ಛಂದ ಬರಿತಾನ ನೋಡು” ಅಂತ ಅನ್ನೊ ಹಂಗ ಆತ. ಕಡಿಕೆ ನಾ ‘ಮಾಮಾನ ಯಾಕ , ಕಾಕಾ ಯಾಕ ಅಲ್ಲಾ’ ಅಂತ ತಲಿ ಕೆಡಿಸಿಕೊಂಡ ಅದರ ಬಗ್ಗೆ ಒಂದ ಲೇಖನಾನೂ ಬರದ ಜನಾ ನನ್ನ ನಿಯತ್ತ ಡೌಟ ಮಾಡೋಹಂಗ ಆತ. ಅದರಾಗ ನನ್ನ ರಸಿಕತನ ತೊರಸಲಿಕ್ಕೆ ‘ ಒಂದು ಅಪ್ರಸ್ಥುತ ಪ್ರಸ್ಥದ ಪ್ರಸ್ತಾವನೆ’ ಅಂತ ಬ್ಯಾರೆ ಬರದ ಬಿಟ್ಟೆ. ಈಗ ನೋಡ್ರಿ, ಜನಾ ನನಗ ತಮ್ಮ ಮಕ್ಕಳಕಡೆ ಮಾಮಾ ಅನಸೋದ ದೂರ ಹೋತ, ಅವರ ಹೆಂಡತಿ ಜೊತಿ ಇದ್ದಾಗ ನನ್ನ ಕಂಡ್ರು ಕಾಣಲಾರದಂಗ ಹೋಗಿಬಿಡ್ತಾರ.
ಹಿಂಗ ಇವತ್ತ ನಾ ತಲ್ಯಾಗ ಬಂದಿದ್ದ ಭಿಡೆ ಬಿಟ್ಟ ಒಂದ ಹದಿನೆಂಟ – ಇಪ್ಪತ್ತ ಲೇಖನಾ ಬರದೇನಿ. ನಾ ಏನ ಭಾಳ ಕನ್ನಡದಾಗ ಓದಿದಂವಾ ಅಲ್ಲಾ. ನನ್ನ ಅನುಭವವನ್ನ, ಕಲ್ಪನೆಗಳನ್ನ, ಒಂದ ಹಿಂಡಾಲಿಯಮ್ ಪಾತ್ರೆ ಒಳಗ ಹಾಕಿ ಒಂದ ಸ್ವಲ್ಪ ಹಾಸ್ಯ ಅನ್ನೊ ಒಗ್ಗರಣಿ ಕೊಟ್ಟ ಗಿರಮಿಟ್ಟ ಮಾಡಿ ನಿಮ್ಮ ಮುಂದ ಇಟ್ಟೆ ಇಷ್ಟ. ಒಂದ ಮಾತ ಹೇಳ್ತೇನೆ “ಅವನೌನ, ನನ್ನಂತಾವ ಕನ್ನಡ ವ್ಯಾಕರಣದ ಗಂಧ ಗಾಳಿ ಗೊತ್ತಿಲ್ದಾಂವ, ಸಾಹಿತ್ಯದ ಪರಿಜ್ಞಾನ ಇಲ್ಲದಾಂವ, ಇಷ್ಟ ಬರದೇನಿ. ನಮ್ಮ ಖಾಂದಾನದಾಗ ಯಾರ ಜೀನ್ಸ್ ಒಳಗೂ ಸಾಹಿತ್ಯದ ಅಂಶ ಇಲ್ಲಾ, ನಾ ಒಂಥರಾ ‘ಟೆಸ್ಟ ಟ್ಯುಬ್ ‘ಲೇಖಕ ಇದ್ದಂಗ. ನಾ ಇಷ್ಟ ಬರಿಬಹುದು ಅಂದರ, ನೀವು ಓದೋರು, ವಿಮರ್ಶಕರು, ನನಗಿಂತ ಜಾಸ್ತಿ ತಿಳ್ಕೊಂಡೂರು, ನಾ ಬರದಿದ್ದ ಛಲೋ -ಕೆಟ್ಟ ಅನ್ನೋ ಶಾಣ್ಯಾರು ಏನ ಬೇಕಾದ ಬರಿಬಹುದರೀ”. ಯಾರ ಬೇಕಾದವರು ಭಿಡೆ ಬಿಟ್ಟ, ಮನಸ ಬಿಚ್ಚಿ, ತಲಿ ಉಪಯೊಗಿಸಿ ಎನ ಬೇಕಾದ್ದ ಬರಿ ಬಹುದು ಅನ್ನಲಿಕ್ಕೆ ‘ನಾ ಮತ್ತ ನನ್ನ ಲೇಖನಗಳು’ ಒಂದ ಜೀವಂತ ಉದಾಹರಣೆ.
ನಾವ ಬರಿಬೇಕಂದರ ಭಾಳ ದೊಡ್ಡ ಮಂದೀನ ಆದರ್ಶ ಇಟಗೊಂಡ ಅವರಂಗ ಬರಿಬೇಕು, ಇವರಂಗ ಬರಿಬೇಕು ಅಂತ ತಲಿಕೇಡಿಸಿಕೊಳ್ಳೊ ಅವಶ್ಯಕತೆ ಇಲ್ಲರಿ. ’ ನೂರು ಓದೂಗರ ಚಿಂತಿ ನಿನಗ್ಯಾಕ, ಬರೆಯುವ ಚಿಂತೆ ಒಂದು ನಿನಗಿರಲಿ’ ಅಂತ ತಿಳದವರ ( ಅಂದರ ನಾನ ) ಹೇಳ್ಯಾರ. ನಾ ಏನೋ ಭಾಳ ದೊಡ್ದ ಲೇಖಕ ಅಂತ ಈ ಮಾತ ಹೇಳಲಿಕತ್ತಿಲ್ಲಾ, ಆಮೇಲೆ ನನಗ ಭಾಳಾ ದೊಡ್ಡ ಲೇಖಕ ಆಗೋ ತಾಕತ್ತೂ ಇಲ್ಲಾ ಅನ್ನರೀ, ಆದರ ನಾ ಬರದೆ. ನನಗ ಖುಶಿ ಆತ , ಓದಿದವರಿಗೂ ಒಂದಿಷ್ಟ ಮಂದಿಗೆ ಖುಶಿ ಆಗತದ ಅಂತ ನಾ ಅನ್ಕೊಂಡೇನಿ. ನನಗೇನ ಇಷ್ಟ ವಯಸ್ಸಾದ ಮ್ಯಾಲೇ ಹೆಸರಗಳಿಸಬೇಕು, ಅವಾರ್ಡ್ ತೊಗೊಬೇಕು ಅಂತ ಏನ ಇಲ್ಲಾ. ಸುಮ್ಮನ ನಮ್ಮ ಖುಶಿಗೆ ನಾವ ಬರೆಯೋದ್ರಿಪಾ, ನೀವು ಖುಶಿಲೇ ಓದಿ ಛಲೋ ಇದ್ರ ಛಲೋ ಇಲ್ಲಾಂದರ ಇಲ್ಲಾ ಅಂತ ಭಿಡೆ ಬಿಟ್ಟ ಹೇಳಿ ಬಿಟ್ಟರ ಮಾತ ಮುಗದ ಹೋತ.