ಇದ ಒಂದ ಮೂರ ವರ್ಷದ ಹಿಂದಿನ ಮಾತ ಇರಬೇಕ, ಇನ್ನೇನ ಒಂದ ವಾರಕ್ಕ ಸಾಲಿ ಶುರು ಆಗೋದಿತ್ತ, ನನ್ನ ಮಗಳ ಗಂಟ ಮಾರಿ ಮಾಡ್ಕೊಂಡ ಅಡ್ಡಾಡ್ಲಿಕತ್ತಿದ್ಲು.
ಅಕಿಗೆ ಅವರವ್ವ
’ಈ ವರ್ಷದಿಂದ ಕನ್ನಡ ಶುರು ಆಗ್ತದ, ಎಷ್ಟ ಬಡಕೊಂಡೆ ಸುಟ್ಯಾಗ ಅಂಕಲ್ಪಿ ತೊಗೊಂಡ ಬಂದ ಅ..ಆ..ಇ..ಈ.. ಕಲಿ ಅಂತ, ನನ್ನ ಮಾತ ಎಲ್ಲೆ ಕೇಳ್ತಿ…. ನೀ ಏಷ್ಟ ಅಂದರು ನಿಮ್ಮಪ್ಪನ ಮಗಳ….’ಅಂತ ಬೈದಿದ್ಲು.
ಅಕಿಗೆ ಈ ವರ್ಷ ಐದನೇತ್ತಾ, ಕನ್ನಡ ಶುರು ಆಗ್ತದ ಅನ್ನೋದ ಒಂಥರಾ ಅಕಿನ್ನ ನಾವಳ್ಳಿ ಒಳಗ ನಾಲ್ಕ ಎಕರೆ ನೀರಾವರಿ ಜಮೀನ ಇದ್ದ ಕಮತಾ ಮಾಡೋ ಹುಡುಗನ್ನ ಹುಡಕಿ ಮದ್ವಿ ಫಿಕ್ಸ ಮಾಡಿದಂಗ ಆಗಿತ್ತ.
ನಾ ಮಗಳಿಗೆ
’ನೀ ಏನ ಕಾಳಜಿ ಮಾಡಬ್ಯಾಡ.. ನಿಮ್ಮವ್ವಗ ಬರೋದ ಕನ್ನಡ ಒಂದ. ಅಕಿ ಹೇಳಿ ಕೊಡ್ತಾಳ ತೊಗೊ’ ಅಂತ ಸಮಾಧಾನ ಮಾಡಿದ್ದೆ.
ಇನ್ನ ನನ್ನ ಹೆಂಡ್ತಿಗೆ ಅಕಿಗೆ ಕನ್ನಡ ಹೇಳಿ ಕೊಡೊದು ಅಂದ ಕೂಡಲೇ ವಜ್ಜ ಆತ, ಫಸ್ಟ ಅಕಿ ಹೋಗಿ ಅಂಕಲ್ಪಿ ತಂದ ರಾತ್ರಿ ಹತ್ತರತನಕ ಓದ್ಲಿ ಕತ್ಲ. ಅಲ್ಲಾ ಹಂಗ ಅಕಿ ಕಲತದ್ದ ಹೆಣ್ಣು ಮಕ್ಕಳ ಸರ್ಕಾರಿ ಕನ್ನಡ ಶಾಲೆ, ನೇಕಾರನಗರದಾಗ ಖರೆ ಆದರ ವಾಟ್ಸಪ್, ಫೇಸಬುಕ್ ಬಂದ ಮ್ಯಾಲೆ ಕನ್ನಡ ಸಹಿತ ಇಂಗ್ಲೀಷನಾಗ ಟೈಪ ಮಾಡಿ ಮಾಡಿ ಅಕಿದ ಎರಡು ಭಾಷಾ ಹಳ್ಳಾ ಹಿಡದ ಬಿಟ್ಟಾವ ಬಿಡ್ರಿ ಸುಳ್ಳ ಯಾಕ ಹೇಳ್ಬೇಕ.
ಆದರ ಇವತ್ತ ಸಾಲ್ಯಾಗ ಕನ್ನಡ ಕಲಿಬೇಕು ಅನ್ನೋದ ಮಕ್ಕಳಿಗೆ ಹೊಟಿಬ್ಯಾನಿ ಹಚಗೋಳೊ ವಿಷಯ ಅಂದರ ನಾವ ಯಾ ಮಟ್ಟಕ್ಕ ಇಳದೇವಿ ಅಂತೇನಿ.
ನಾವೇಲ್ಲಾ ಅ – ಅಮ್ಮ, ಆ – ಆನೆ ಅಂತ ಸಾಲಿ ಕಲತವರ ಹೋರತು A for apple, B for bat ಮಂದಿ ಅಲ್ಲಾ. ಹುಟ್ಟಾ ಅತ್ತರು ಕನ್ನಡದಾಗ ಅತ್ತೋರ….ನಮ್ಮವ್ವ ನಾವ ’ಕ ಕಾ ಕಿ ಕೀ ಕೆ ಕೇ…’ಅನ್ನೋದರಾಗ ಒಂಚೂರ ತಪ್ಪಿದರ ’ಕೈ’ ಎತ್ತಿ ರಪ್ಪ ಅಂತ ಬಿಗದಾಗ ಸಹಿತ ಅವ್ವಾ ಅಂತ ಅಳತಿದ್ವಿ ಹೊರತು Mummyyyyyyyy…. ಅಂದಿಲ್ಲಾ. ಹಂಗ ಅಂದರ ಇನ್ನೊಂದ ಬಿಗಿತಿದ್ಲು ಆ ಮಾತ ಬ್ಯಾರೆ.
ಇನ್ನೂ ಸಾಲಿ ಮೆಟ್ಟಲಾ ಹತ್ತೊಕಿಂತ ಮೊದ್ಲ ಸ್ವರ, ವ್ಯಂಜನ ಕಲತಿದ್ವಿ. ಇವತ್ತು ಸಹಿತ ಕನಸಿನಾಗ
’ಪ್ರಥಮಾ- ಉ, ದ್ವೀತಿಯಾ-ಅನ್ನು…..ದಿಂದ ಹಿಡದ ಸಂಬೋಧನ ಆ,ಏ,ಇರಾ,ಈ…’ ವಿಭಕ್ತಿ ಪ್ರತ್ಯಯ ಬಡಬಡಸ್ತೇವಿ. ನಮ್ಮ ಹುಡುಗರಿಗೆ ಇದೇಲ್ಲಾ ಫ್ರೆಂಚ್ & ಗ್ರೀಕ್ ಇದ್ದಂಗ, ಅವರಿಗೆ ಕನ್ನಡನೂ ಒಂದ ಪರೀಕ್ಷಾ ಒಳಗ ಪಾಸ ಆಗೋ ವಿಷಯ ಇಷ್ಟ.
ಅದರಾಗ ನನ್ನ ಮಗನ ಕನ್ನಡ ಎಷ್ಟ ತುಟ್ಟಿ ಅದ ಅಂದರ…ಏ, ಅಗದಿ ಹೇಳೊಹಂಗ ಇಲ್ಲಾ.
ಒಂದ ಸರತೆ ಮದ್ವಿ ಕಾರ್ಡ ಪೋಸ್ಟನಾಗ ಬಂತ ನಮ್ಮವ್ವ ಯಾರದ ಅಂತ ಕೇಳಿದ್ಲು, ಇಂವಾ ಗೊತ್ತಿಲ್ಲಾ ಕನ್ನಡದಾಗ ಅದ ಅಂದಾ. ನಮ್ಮವ್ವ ತಲಿ ಕೆಟ್ಟ
’ಎಷ್ಟ ಸರತೆ ಹೇಳಬೇಕ ನಿನಗ ಕನ್ನಡದಾಗಿನ ಪೇಪರ, ಪತ್ರಾ ಇವನ್ನರ ಓದ್ಲಿಕ್ಕೆ ಕಲಿ, ಸಾಲಿ ಬುಕ್ ಓದ್ಲಿಲ್ಲಾಂದರೂ ಎಷ್ಟ ಹೋತು’ ಅಂತ ರಾಗಾ ಶುರು ಮಾಡಿದ್ಲು. ಇನ್ನ ಅಕಿ ಅಷ್ಟ ಸರಳ ಮುಗಸಂಗಿಲ್ಲಾ ಅಂತ ನನ್ನ ಮಗಾ ಭಡಾ ಭಡಾ ಗೂಗಲ್ ಒಳಗ ಟೈಪ ಮಾಡಿ ನೋಡಿ
’ಮಮತಾಂದ ಲಗ್ನಾ’ ಅಂದಾ..
’ಯಾ ಮಮತಾನ ಲಗ್ನಲೇ….. ನಿಮ್ಮ ಮೌಶಿ ಮಗಳ ಮಮತಾಂದ ಮನ್ನೇರ ಲಾಕ್ ಡೌನ ಒಳಗ ಕಳ್ಳ ಕುಬಸ ಆಗೇದ’ ಅಂತ ನಮ್ಮವ್ವ ಅಡಗಿ ಮನಿಯಿಂದ ಬಂದ ಕಾರ್ಡ ಇಸ್ಗೊಂಡ ನೋಡಿದ್ಲು.
ಅಕಿ ಬಿ.ಪಿ ನೆತ್ತಿಗೇರತ,
’ಲೇ..ಮಗನ ಬಾ ಇಲ್ಲೆ…ಇದರಾಗ ಮಮತಾನ ಲಗ್ನ ಅಂತ ಎಲ್ಲೇ ಬರದಾರ ತೋರಸ’ ಅಂದ್ಲು.
ನನ್ನ ಮಗಾ ಸೀದಾ ಕವರ ಮ್ಯಾಲೆ ’ಮದುವೆಯ ಮಮತೆಯ ಕರೆಯೋಲೆ’ ಅಂತ ಬರದಿದ್ದನ್ನ ತೋರಿಸಿದಾ. ನಮ್ಮವ್ವ ಸಿಟ್ಟಿಗೆದ್ದ ಎಡಗೈಲೆ ಒಂದ ಇಟ್ಟ ಬಿಡೋಕಿ ಆದರ ಕೈ ಮುಸರಿ ಆಗಿತ್ತಂತ ಸುಮ್ಮನ ಬಿಟ್ಟಳು.
ನನ್ನ ಶಾಣ್ಯಾ ಮಗಾ ’ಮದುವೆಯ ಮಮತೆಯ ಕರೆಯೋಲೆ’ ಗೂಗಲನಾಗ ಹಾಕಿದ್ದಾ ಅದ
marriage of mamata ಅಂತ ತೋರಿಸಿತ್ತ….
ಅದರಾಗ ಅವಂಗ ನಿಂಗ ಏನರ ತಿಳಿಲಿಲ್ಲಾ ಅಂದರ ನೀ ಗೂಗಲ್ ನೋಡಿ ಓದ್ಕೋಪಾ, ನನ್ನ ಜೀವಾ ತಿನಬ್ಯಾಡ ಅಂತ ನಾ ಅಂದಿದ್ದ ತಪ್ಪಾಗೇದ, ಅಂವಾ ಕನ್ನಡ ಸಹಿತ ಗೂಗಲ್ ನೋಡಿ ನೋಡಿ ಓದತಾನ. ಏನ್ಮಾಡ್ತೀರಿ ಹಿಂತಾ ಮಕ್ಕಳನ ತೊಗೊಂಡ.
ಒಂದ ಸರತೆ house warming ceremony ಕಾರ್ಡ ಬಂದಾಗ ಅದನ್ನ ಗೂಗಲ ಟ್ರಾನ್ಸಲೇಟ್ ಮಾಡಿ ’ಮನಿ ತಾಪಮಾನ ಏರಿಕೆ ಸಮಾರಂಭ’ ಅಂತ ಅಂದ ಅವರವ್ವನ ತಾಪಮಾನ ಏರಿಸಿದ್ದಾ. ಹಿಂತಾ ಮನಷ್ಯಾ.
ಅದ ಬಿಡ್ರಿ. ಹೋದ ವರ್ಷ ನನ್ನ ಮಗಳ ಸಾಲ್ಯಾಗ ’ನಮ್ಮ ಅಮ್ಮ’ ಅನ್ನೊ ವಿಷಯದ ಮ್ಯಾಲೆ ಒಂದ ನಾಲ್ಕ ಲೈನಿಂದ ನಿಬಂಧ ಬರಕೊಂಡ ಬಾ ಅಂತ ಹೇಳಿದ್ದರು, ಅಕಿ ಬಂದ ಅವರಮ್ಮಗ ನೀ ಬರದ ಕೊಡ ಅಂದರ ನಮ್ಮಕ್ಕಿ ಅಗದಿ ನಾಚಗೊಂಡ
’ನನ್ನ ಬಗ್ಗೆ ನಾನ ಹೆಂಗ ಬರದ ಕೊಡಬೇಕ…ನಿಮ್ಮಪ್ಪನ ಕಡೆ ಬರಿಸ್ಗೊ’ ಅಂತ ಅಂದ್ಲು.
ನಾ ’ಲೇ ..ಅಕಿ ಬಗ್ಗೆ ಏನ ಬರಿತಿ ಬಿಡ.. ನಿಬಂಧ ಬರೇಯೋ ಅಷ್ಟ ದೊಡ್ದೊಕಿ ಆದ್ಲೇನ ನಿಮ್ಮವ್ವ…ನಿಮ್ಮಣ್ಣನ ಕಡೆ ಬರಿಸ್ಗೊ’ ಅಂತ ಜಾರಕೊಂಡೆ.
ಮುಂದ ಅಕಿ ಅವರಣ್ಣನ ಕಡೆ ನಿಬಂಧ ಬರಿಸ್ಗೊಂಡ ಹೋದ್ಲು. ಸಾಲ್ಯಾಗ ಟೀಚರ್ ಅದನ್ನ ಓದಿ
’ನಿಮ್ಮ ಅಮ್ಮನ ಮ್ಯಾಲಿನ ನಿಬಂಧಕ್ಕ ನಿಮ್ಮಪ್ಪಂದ ಸಹಿ ತೊಗೊಂಡ ಬಾ’ ಅಂತ ಹೇಳಿ ಕಳಸಿದರಂತ ಅಕಿ ತಂದ ನನಗ ತೋರಿಸಿದ್ಲು.
ಅಕಿ ಬರದಿದ್ದ ಪೂರ್ತಿ ನಿಬಂಧ ಅಂತು ಇಲ್ಲೆ ಬರಿಲಿಕ್ಕೆ ಬರಂಗಿಲ್ಲಾ ಒಂದ ನಾಲ್ಕ ಲೈನ ಹೇಳ್ತೇನಿ ಕೇಳ್ರಿ.
’ನನ್ನ ಅಮ್ಮ – ನನ್ನ ಅಮ್ಮ ಮನೆ ಹೆಂಡತಿ. ನನ್ನ ಅಮ್ಮ ತುಂಬಾ ಬೆಚ್ಚಗಿನ ಮಹಿಳೆ ಆದರೆ ಕಡಿಮೆ ಸ್ವಭಾವದವಳು.
ನನ್ನ ಅಮ್ಮ ನನ್ನ ಅಪ್ಪನಿಗೆ ತುಂಬಾ ಕಟ್ಟುನಿಟ್ಟಾಗಿರುತ್ತಾಳೆ. ಅವನು ತುಂಬಾ ಮೂಕ ಮನುಷ್ಯ ……………’ ನಾ ಮುಂದಿಂದ ಓದ್ಲಿಲ್ಲಾ.
ಇದ ಇವತ್ತ ನಮ್ಮ ಮಕ್ಕಳ ಮಾತೃಭಾಷೆ ಒಳಗ ಸ್ವಂತ ಮಾತೃನ ಬಗ್ಗೆ ಬರೆದ ನಾಲ್ಕ ನುಡಿ ಮುತ್ತ.
’ಇದನ್ನ ಯಾರ ಬರದ ಕೊಟ್ಟರ ನಿಂಗ’ ಅಂತ ಮಗಳಿಗೆ ಜೋರ ಮಾಡಿದೆ, ಅಕಿ ಅವರಣ್ಣನ ಕಡೆ ಕೈ ಮಾಡಿದ್ಲು.
ಅಂವಾ ’ಪಪ್ಪಾ, ಅಕಿ ಇಂಗ್ಲೀಷನಾಗ ಬರದ ಕೊಟ್ಟಿದ್ದನ್ನ ನಾ ಬರೇ ಗೂಗಲ್ ಟ್ರಾನ್ಸಲೇಟ್ ಮಾಡಿ ಕೊಟ್ಟೇನಿ ನಂದೇನ ತಪ್ಪಿಲ್ಲಾ ಅಂತ ಅಕಿ ಬರದಿದ್ದ ಈ ಇಂಗ್ಲೀಷ ಎಸ್ಸೆ ಮುಂದ ಹಿಡದಾ.
my mother, my mother is house wife. my mother is very warm woman but short tempered.
my mother is very strict to my father. he is very silent man……………
ನಾ ಮುಂದ ಏನೂ ಮಾತಾಡ್ಲಿಲ್ಲಾ. ಯಾಕಂದರ ಏನರ ತಿಳಿಲಿಲ್ಲಾ ಅಂದರ ಗೂಗಲ್ ನೋಡಿ ತಿಳ್ಕೊ ಅಂತ ಹೇಳಿದ ಮಹಾಷಯ ನಾನ ಅಲಾ.
ಕಡಿಕೆ ಇಬ್ಬರು ಮಕ್ಕಳನು ಕೂಡಿಸ್ಗೊಂಡ ಸಮಾಧಾನದ್ಲೆ, ಅಗದಿ ಫಿಲ್ಮಿ ಸ್ಟೈಲ ಒಳಗ
’ನೋಡಿಲ್ಲೇ ನಾವೇಲ್ಲಾ
ಅ.. ಆ …ಇ… ಈ… ಕನ್ನಡದ ಅಕ್ಷರಮಾಲೆ
ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ
ಆಟ ಊಟ ಓಟ ಕನ್ನಡ ಒಂದನೆ ಪಾಠ
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ………… ಅಂತ ಹಾಡ್ಕೋತ ಕನ್ನಡ ಕಲತೋರಪಾ, ಕನ್ನಡ ನಮ್ಮ ಮಾತೃಭಾಷೆ ಅದನ್ನ ಚಂದಾಗಿ ಕಲಿಬೇಕು, ಮಾರ್ಕ್ಸ ಸಂಬಂದ ಅಲ್ಲಾ’ ಅಂತ ತಿಳಿಸಿ ಹೇಳಿದೆ.
ಮುಂದ ಒಂದ ತಾಸ ಬಿಟ್ಟ ನನ್ನ ಮಗಾ
ಪಪ್ಪಾ….’ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ’ ಅಂದರ Amma is a gastrointestinal tract’ ಅಂತ ಗೂಗಲನಾಗ ತೊರಸಲಿಕತ್ತದ ಇದ ಕರೆಕ್ಟಾ? ಅಂತ ಕೇಳಿದಾ.
ನಂಗ ಪಿತ್ತ ನೆತ್ತಿಗೇರತ…
’ಲೇ…ನೀ ಕನ್ನಡ ಓದಿ ಕಲಿ ಮಗನ…ಗೂಗಲ್ ನೋಡಿ ಅಲ್ಲಾ’ ಅಂತ ಬೈದ ಕಳಸಿದೆ.
ಇರಲಿ ಇದ ನನ್ನ ಮನಿದ ಒಂದ ಕಥಿ ಅಲ್ಲಾ, ಭಾಳ ಮನಿ ಒಳಗ ಇದ ಕಥಿ ಅದ.
ಕನ್ನಡ ನಮ್ಮ ಮಾತೃಭಾಷೆ ಅಷ್ಟ ಅಲ್ಲಾ ಮನಿ ಭಾಷೆ ಆಗೋತನಕ ಹಿಂಗ ನಮ್ಮ ಹಣೇಬರಹ.
ನಿಮಗೇಲ್ಲಾ ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.
baala sarala aada ri ododu
ಆತ್ಮೀಯ ಪ್ರಶಾಂತ ಇವತ್ತಿನ ಅಂಕಣದ ಬರವಣಿಗೆ ಭಾಳ ಹಾಸ್ಯಮಯ ಅದ ಮತ್ತ ಅದರಾಗ ಸಮಾಜಕ್ಕ ಒಂದು ಕಿವಿಮಾತನೂ ಅದ 💐💐👌👌👍
ಇವತ್ತಿನ ಕನ್ನಡ ದ ಬಗ್ಗೆ ನಿಮ್ಮ್ ಮಾತು ಮಸ್ತ್ ಹೇಳಿರಿ ನಾ ಅಂತೂ ಪೇಪರ್ ಒಡ್ಕೊಂತ್ ಬಹಳ ಕುಶಿ ಪಟ್ಟೇನಿ….
ಒಂದ ಒಂದ ಸಲಾ ನಮ್ ಅಕ್ಕಾನ್ ಮಕ್ಕಳು ಹಿಂಗ ಮಾದತಾವ ರೀ ಅಣ್ಣಾ ಜಿ 😁😄😄🤣
Super