ಮೊನ್ನೆ ಸೆಪ್ಟೆಂಬರದ್ದ ಪಗಾರ ಆಗೋದ ತಡಾ ನನ್ನ ಹೆಂಡ್ತಿ
“ರ್ರಿ…ಈ ತಿಂಗಳ ರೊಕ್ಕ ಜಾಸ್ತಿ ಬೇಕ, ಅಧಿಕ ಮಾಸ ಅದ” ಅಂದ್ಲು.
ಇಕಿ ಎಲ್ಲಿ ಅಧಿಕ ಮಾಸ ತಂದ್ಲಲೇ, ಮೊದ್ಲ ಕರೊನಾ, ಗ್ಲೋಬಲ್ ರಿಸೆಶನ ಒಳಗ ಎಕಾನಮಿ ಹಳ್ಳಾ ಹಿಡದ ಕರೆಕ್ಟ ಪಗಾರ ಬರವಲ್ತ ಹಂತಾದರಾಗ ಎಲ್ಲೆ ಅಧಿಕ ಮಾಸ ಅಂದರೂ ಕೇಳಲಿಲ್ಲಾ.
“ಹಂಗೆಂಗ ಅಧಿಕ ಮಾಸ ಬಿಡಲಿಕ್ಕೆ ಆಗ್ತದ, ಯಾವಾಗರ ಒಮ್ಮೆ ಬರ್ತದ..ನಮ್ಮಪ್ಪಗ, ನಮ್ಮ ತಮ್ಮಗ ಅಧಿಕ ಬಾಗಣ ಕೊಡಲಿಲ್ಲಂದರ ಹೆಂಗ” ಅಂದ್ಲು. ಅಷ್ಟರಾಗ ದೇವರ ಮನಿಯಿಂದ ನಮ್ಮವ್ವ ’ನಾನು ನನ್ನ ತಮ್ಮ, ನನ್ನ ಅಳಿಯಾಗ ಬಾಗಣಾ ಕೊಡಬೇಕಪಾ ಮತ್ತ…ಅದಕ್ಕೂ ಫೈನಾನ್ಸಿಯಲ್ ಪ್ರೂವಿಜನ್ ಇಟ್ಗೋ ಎಲಾ ಹೆಂಡ್ತಿಗೆ ಕಮಿಟ್ ಆಗಬ್ಯಾಡಾ” ಅಂತ ಒದರಿದ್ಲು.
ಖರೇ ಹೇಳ್ತೇನಿ ’ಬರಗಾಲದಾಗ ಅಧಿಕ ಮಾಸ’ ಅಂತಾರಲಾ ಹಂಗ ನಮಗ ಫೈನಾನ್ಸಿಯಲ್ ಪ್ರಾಬ್ಲೆಮ್ ಇದ್ದಾಗ ಈ ಅಧಿಕ ಬಂದಿರ್ತದ. ನಾ ಅವರಿಬ್ಬರಿಗು
’ಎಲ್ಲಾರಿಗೂ ಒಂದೊಂದ ರೂಪಾಯಿದ್ದ ಮೂವತ್ತ ಮೂರ ಕ್ವೈನ್ಸ ಕೊಟ್ಟ ಮುಗಸರಿ…ಇಲ್ಲಾ ಮೂವತ್ತಮೂರ ಉತ್ತತ್ತಿ ಕೊಡ್ರಿ’ಅಂತ ಅಂದರ
’ಏ.. ಅದೇಲ್ಲಾ ಬಗಿಹರಿಯಂಗಿಲ್ಲಾ….ಹಂಗ ಖರೇ ಕೇಳಿದ್ರ ಅಧಿಕ ಮಾಸನ ಎಕ್ಸ್ಟ್ರಾ ಅಂದರ ನೀವು ಒಂದ ತಿಂಗಳದ ಖರ್ಚಿನ ರೊಕ್ಕಾನ ಎಕ್ಸ್ಟ್ರಾ ಕೊಡಬೇಕ’ ಅಂತ ನಮ್ಮಕಿ ಹೊಸಾ ಲಾಜಿಕ ತಗದ್ಲು.
’ಲೇ..ಹುಚ್ಚ ಹಿಡದದ ಏನ ನಿಂಗ. ಅಧಿಕ ಮಾಸ ಅಂತ ನಮಗೇನ ಕಂಪನ್ಯಾಗ ಒಂದ ತಿಂಗಳ ಪಗಾರ ಎಕ್ಸ್ಟ್ರಾ ಕೊಡ್ತಾರೇನ್?.. ಮೊದ್ಲ ಕರೋನ ಸಂಬಂಧ ಒಂದ ತಿಂಗಳದ್ದ ಪಗಾರ ಕಟ್ ಮಾಡ್ಯಾರ…ನೀ ಇದ್ದಿದ್ದರಾಗ ಹೆಂಗರ ಮಾಡ್ಕೊಂಡ ಹೋಗ’ ಅಂತ ನಾ ಜೋರ ಮಾಡಿದೆ.
ನಮ್ಮವ್ವ ನಮ್ಮ ಮಾಮಾಗ ಅನಾರಸ ಸೇರತದ ಅಂತ ೩೩ ಅನಾರಸ, ಅಳಿಯಾಗ ೩೩ ಮೂರ ಅಂಟಿನ ಉಂಡಿ ಸ್ಕೇಚ್ ಹಾಕಿದ್ದರ, ನನ್ನ ಹೆಂಡತಿ ಅಕಿ ತಮ್ಮ ಬೆಂಗಳೂರಾಗ ಇರ್ತಾನ ಅಂತ ೩೩ ಮಿಶ್ರಾ ಪೇಢಾ ಪಾರ್ಸೆಲ್ ಮಾಡೋಕಿ ಇದ್ಲು. ಮ್ಯಾಲೆ ಅವರಪ್ಪಗ ಸಿಹಿ ಜಾಸ್ತಿ ಆಗಂಗಿಲ್ಲಾ ಅಂತ ೩೩ ಸಪ್ಪೇನ ಶಂಕರಪಾಳಿ ಪ್ಲ್ಯಾನ ಮಾಡಿದ್ಲು.
ಅಲ್ಲಾ, ಒಟ್ಟ ಮಂದಿ ಮಾಡ್ತಾರ ಅಂತ ನನ್ನ ಹೆಂಡ್ತಿನೂ ಮಾಡೋಕಿ ಬಿಡ್ರಿ.
ಹಂಗ ಇಕಿಗೆ ಅಧಿಕ ಮಾಸ ಅಂದರೇನು, ಅದನ್ನ ಯಾಕ ಮಾಡ್ಬೇಕು ಒಂದೂ ಗೊತ್ತ ಇದ್ದಿದ್ದಿಲ್ಲಾ. ಈ ಅಧಿಕ ಮಾಸ ನಮ್ಮ ಮದ್ವಿ ಆದ ನೆಕ್ಸ್ಟ ಇಯರ ಬಂದಿತ್ತ, ನಮ್ಮವ್ವ ’ಈ ವರ್ಷ ಅಧಿಕ ಮಾಸ ಬಂದದ’ಅನ್ನೋದ ತಡಾ ನನ್ನ ಹೆಂಡ್ತಿ ಗಾಬರಿ ಆಗಿ ’ಅಯ್ಯ ಮೊನ್ನೇರ ಬಂದಿತ್ತಲ್ಲರಿ, ನಾ ಒಂದ ತಿಂಗಳ ತವರಮನಿಗೆ ಹೋಗಿದ್ನೇಲಾ, ಈಗ ಮತ್ತ ಹೋಗಬೇಕ?’ ಅಂತ ಕೇಳಿದ್ಲು
’ಏ..ಹುಚ್ಚಿ ಅದ ಆಷಾಡ ಮಾಸ, ಈಗ ಬರೋದ ಅಧಿಕ ಮಾಸ, ಈ ಅಧಿಕ ಮಾಸ ಬರೋದ ೩೩ ತಿಂಗಳಿಗೊಮ್ಮೆ….’ ಅಂತ ಅಧಿಕ ಮಾಸದ ಡಿಟೇಲ್ಸ ಎಲ್ಲಾ ಹೇಳಿ ಲಾಸ್ಟಿಗೆ ’ಹಂಗ ಅಧಿಕ ಮಾಸದಾಗ ಗಂಡನ್ನ ಬಿಟ್ಟ ಇದ್ದರ ತಪ್ಪಿಲ್ಲ ತೊಗೊ, ಸ್ವಲ್ಪ ದೇವರ ಕಡೆ ಲಕ್ಷ ಜಾಸ್ತಿ ಹೋಗ್ತದ, ಪುಣ್ಯಾ ಬರ್ತದ, ಮುಂದ ಸ್ವರ್ಗಕ್ಕ ಹೋಗ್ತಿ’ ಅಂತ ಅಂದ ಬಿಟ್ಲು.
ಅಲ್ಲಾ ಪಾಪ, ದಣೇಯಿನ ಕೂಸ ಲಗ್ನಾ ಮಾಡ್ಕೊಂಡ ಗಂಡನ ಮನಿಗೆ ಬಂದದ ಇಕಿ ಸೀದಾ ಸ್ವರ್ಗಕ್ಕ ಕಳಸೋ ಮಾತ ಮಾತಾಡ್ತಾಳಲಾ ಅಂತ ನನಗ ಸಿಟ್ಟ ಬಂತ. ಅದ ಇರಲಿ ಲಗ್ನಾಗಿ ಒಂದ ವರ್ಷ ಆಗಿಲ್ಲಾ ಅಷ್ಟರಾಗ ಆಷಾಡಾ, ಜೇಷ್ಟ ಅಂತ ಒಂದಿಲ್ಲಾ ಒಂದ ನೆಪಾ ಮಾಡಿ ಸೊಸಿನ್ನ ತವರಮನಿಗೆ ಕಳಸ್ಯಾಳ ಈಗ ಮತ್ತ ಅಧಿಕ ಮಾಸದಾಗೂ ಅಟ್ಟೋ ಪ್ಲ್ಯಾನ ಅದ ಏನ ಇಕಿದ ಅಂತ
’ಏ…ಅಧಿಕ ಮಾಸದಾಗ ಗಂಡಾ ಹೆಂಡ್ತಿ ಕೂಡಿ ಇರಬಾರದ ಅಂತ ಯಾ ಶಾಸ್ತ್ರದಾಗೂ ಬರದಿಲ್ಲಾ..ನೀ ಸುಮ್ಮನ ಏನೇನರ ರೂಲ್ಸ ಹುಟ್ಟಸ ಬ್ಯಾಡಾ… ನಿಂಗ ಯಾರ ಯಾರಿಗೆ ಏನೇನ ದಾನ ಮಾಡೋದ ಅದನ್ನ ಮಾಡ್ಕೊ’ ಅಂತ ಜೋರ ಮಾಡಿದೆ.
ಇನ್ನ ನಮ್ಮವ್ವ ದಾನಾ ಕೊಡೋಕಿ ಅಂದ ಮ್ಯಾಲೆ ನನ್ನ ಹೆಂಡ್ತಿನೂ ದಾನಾ ಕೊಡ್ತೇನಿ ಅಂದ್ಲು. ಅದರಾಗ ನಮ್ಮವ್ವ ಅಪೂಪ ದಾನ ( ಅನಾರಸ ) ಶ್ರೇಷ್ಟ ದಾನ, ಅನಾರಸ ಒಳಗ ಎಷ್ಟ ತೂತ ಇರ್ತಾವ ಅಷ್ಟ ವರ್ಷ ನಮಗ ಸ್ವರ್ಗದೊಳಗ ಜಾಗ ಸಿಗ್ತದ (೩೩ ಕೋಟಿ ತೂತ ಇರಬೇಕು) ಅಂತ ನಮ್ಮವ್ವ ಹೇಳಿದ್ಲು. ಇಕಿ ಮಾತ ಕೇಳಿ ಇಕಿ ಜೀವನದಾಗ ಫಸ್ಟ ಟೈಮ ಅನಾರಸ ಮಾಡಿದ್ಲು. ಅದ ಅಗದಿ ತಳಾ ಹತ್ತಿದ್ದ ಕಟಲೇಟ್ ಆದಂಗ ಆಗಿತ್ತ, ದುರ್ಬಿನ ಹಚ್ಚಿ ಹುಡಕಿದರು ಒಂದ ತೂತ ಇದ್ದಿದ್ದಿಲ್ಲಾ. ಹಂಗ ಆರ್ಟಿಫಿಸಿಯಲಿ ತೂತ ಮಾಡಬೇಕಂದರ 0.5 mm ಡ್ರಿಲ್ ಮಾಡೊ ಪ್ರಸಂಗ ಬಂದಿತ್ತ, ಅಂದರ ಅಷ್ಟ ಹಗರ ಆಗಿದ್ವು. ಹೋಗ್ಲಿ ಬಿಡ ಪಾಪ ಅಷ್ಟ ಭಕ್ತಿಲೆ ಮಾಡ್ಯಾಳ ಹೆಂಗಿದ್ದರೂ ಅವರ ತಮ್ಮಗ ದಾನ ಕೊಡೋಕಿ ಅಂತ ನಾ ಸುಮ್ಮನಾಗಿದ್ದೆ.
ಆವಾಗಿಂದ ನಮ್ಮ ಮನ್ಯಾಗ ಮೂರ-ನಾಲ್ಕ ವರ್ಷಕ್ಕೊಮ್ಮೆ ಅಧಿಕ ಮಾಸದ ಸಡಗರ ಇದ್ದ ಇರ್ತದ ಅನ್ನರಿ. ನಮ್ಮವ್ವ ದಾನಾ ಕೊಟ್ಟಳು ಇಂತ ಇಕಿ ಕೋಡೊಕಿ, ಇಕಿ ಕೊಟ್ಟಳು ಅಂತ ಅಕಿ ಕೊಡೋಕಿ…ಹಂಗ ಜಾಸ್ತಿ ಪುಣ್ಯಾ ಬರ್ತದ ಅಂದರ ನಮ್ಮಕಿ ಅಂತೂ ಅಧಿಕ ಮಾಸದಾಗ ಗಂಡನ್ನೂ ದಾನ ಕೊಡೋಕಿನ ಬಿಡ್ರಿ, ಅಲ್ಲಾ ಅದಕ್ಕ ದಾನಾ ತೊಗೊಳೊರ ಪಡದ ಬರಬೇಕ ಆ ಮಾತ ಬ್ಯಾರೆ.
ಇರಲಿ ಪ್ರೆಸೆಂಟ್ ಡೇ ಕ್ಕ ಬರೋಣ….ನಾ ನನ್ನ ಹೆಂಡ್ತಿಗೆ
’ಏ…ದಾನ ಕೊಡೊದಿಷ್ಟ ಅಲ್ಲಾ ಅಧಿಕ ಮಾಸದಾಗ ಏನ ಮಾಡಿದರು ಪುಣ್ಯಾ ಬರ್ತದ, ೩೩ ಉಪವಾಸ ಮಾಡ, ಇಲ್ಲ ಒಪ್ಪತ್ತ ಮಾಡ, ೩೩ ಪ್ರದಕ್ಷಿಣಿ ಹಾಕ…ದೇವರಿಗೆ, ಗಂಡಗ ಅಲ್ಲ ಮತ್ತ…ಹೋಗಲಿ ಗಂಡಗ ೩೩ ಸರತೆ ರಿಸ್ಪೆಕ್ಟಲೇ ’ರ್ರಿ…’ ಅಂತ ಕರಿ ಸಾಕ, ತುಟ್ಟಿ ಕಾಲದಾಗ ಬರೇ ದಾನ ಕೊಡಬೇಕ ಅಂತೇನ ಇಲ್ಲಾ’ ಅಂತ ನಾ ಅಂದರ
’ರ್ರಿ..ಭಾಳ ಶಾಣ್ಯಾರಾಗ ಬ್ಯಾಡ್ರಿ…ಸುಮ್ಮನ ಕೂಡ್ರಿ’ ಅಂತ ನಂಗ ಜೋರ ಮಾಡಿದ್ಲು.
ನಾ ಅಕಿಗೆ ಮತ್ತ ತಲಿ ತಿನ್ನಲಿಕ್ಕೆ
’ಲೇ..ಖರೆಲೇ. ಇದಕ್ಕ ಪುರಷೋತ್ತಮ ಮಾಸ ಅಂತನೂ ಕರಿತಾರ..ಭಗವಂತನ ಸೇವೆಗೆ ಸಮರ್ಪಣೆ ಮಾಡ್ಬೇಕ…ಪತಿನ ಪರಮೇಶ್ವರ ಅಂತಾರ, at least ಈ ತಿಂಗಳರ ನೀ ಗಂಡನ ಸೇವಾ ಮಾಡಿ ಪುಣ್ಯಾ ಕಟ್ಗೊ’ ಅಂತ ನಾ ಅಂದರ
’ದೇವರು..ದಿಂಡ್ರು ನಾವ ಮಾಡೇ ಮಾಡ್ತೇವಿ..ಅದನ್ನೇನ ನೀವು ಹೇಳೊದ ಬ್ಯಾಡ’ ಅಂತ ಜೋರ ಮಾಡ್ಲಿಕತ್ಲು. ನಾ ಇನ್ನೇನ ಅಕಿ ಜೊತಿ ವರಟ ಹರಿಯೋದ ಬಿಡ, ಹಂಗ ಹೆಂಡ್ತಿಗೆ ಪುಣ್ಯಾ ಬಂದರ ತಪ್ಪೇನಿಲ್ಲಾ ಅಂತ ನಾ ಸುಮ್ಮನಾಗಿ ಅಕಿ ಕೇಳಿದಷ್ಟ ಕೊಟ್ಟ ಯಾರಿಗೆ ಎನೇನ ದಾನಾ ಕೊಟ್ಟಿ ಅಂತ ಕೇಳಲಿಕ್ಕೂ ಹೋಗಲಿಲ್ಲಾ.
ಆದರ ಮೊನ್ನೆ ಅಕ್ಟೋಬರದ್ದ ಪಗಾರ ಬರೋದಕ್ಕ ಮತ್ತ ’ಎಕ್ಸ್ಟ್ರಾ ರೊಕ್ಕಾ’ ಅಂದ್ಲು, ನಂಗ ತಲಿ ಕೆಡ್ತ ’ಯಾಕ?’ ಅಂತ ಕೇಳಿದರ ’ಈ ವಾರ ನನ್ನ ಹುಟ್ಟಿದ ಹಬ್ಬ’ ಅಂದ್ಲು. ನಾ ಅಕಿಗೆ ’ಲೇ..ಇನ್ನೂ ಅಧಿಕ ಮಾಸ ಮುಗದಿಲ್ಲಾ, ಅಧಿಕ ಮಾಸಕ್ಕ ’ಮಲ ಮಾಸ’ ಅಂತನೂ ಕರಿತಾರ, ಯಾವದು ಛಲೋ ಕಾರ್ಯ ಮಾಡಬಾರದ ಹಿಂಗಾಗಿ ಈ ವರ್ಷ ನಿನ್ನ ಹುಟ್ಟಿದ ಹಬ್ಬ ಕ್ಯಾನ್ಸೆಲ್’ ಅಂದೆ.
’ರ್ರಿ..ಲಗ್ನಾ, ಮುಂಜವಿ ಹಿಂತಾವಿಷ್ಟ ಮಾಡಬಾರದ, ಯಾರರ ಅಧಿಕ ಮಾಸ ಅಂತ ಹಡಿಯೋದ ಬಿಡ್ತಾರೇನ….ಮತ್ತ ಇನ್ನ ಹಡಿಲಿಕ್ಕೆ ಅಭ್ಯಂತರ ಇಲ್ಲಾ ಅಂದರ ಹುಟ್ಟಿದ ಹಬ್ಬಾ ಸೆಲೆಬ್ರೇಟ ಮಾಡ್ಕೊಳಿಕ್ಕೆ ಏನ ಪ್ರಾಬ್ಲೇಮ’ ಅಂತ ಗಂಟ ಬಿದ್ಲು. ನಾ ಮುಂದ ಜಾಸ್ತಿ ಮಾತಾಡ್ಲಿಕ್ಕೆ ಹೋಗಲಿಲ್ಲಾ ಯಾಕಂದರ ಅಕಿದ ಹುಟ್ಟಿದ್ದ ಹಬ್ಬ ಮಲ ಮಾಸದಾಗ ಬರತದ ಅಂದರ ಮುಂದ ನಂದೂ ಅದ ಮಾಸದಾಗ ಬರೋದ. ಅಕ್ಟೋಬರ ನಾಲ್ಕಕ್ಕ ಅಕಿ ಹುಟ್ಟಿದರ ಮುಂದ ಹದಿಮೂರಕ್ಕ ನಾ ಹುಟ್ಟೇನಿ..ಹಂಗ ತಿಥಿ ಪ್ರಕಾರ ಇಬ್ಬರೂ ಶೀಗಿ ಹುಣ್ಣಮಿಗೆ ಹುಟ್ಟೇವಿ..ಹಿಂಗಾಗೇ ಆ ಭಗವಂತ ನಮ್ಮಿಬ್ಬರನೂ ಹುಡಕಿ ಗಂಟ ಹಾಕಿರಬೇಕ.
ಹಂಗ ಈ ಸರತೆ ಅಧಿಕ ಮಾಸದಾಗ ನಮ್ಮಿಬ್ಬರದು ಹುಟ್ಟಿದ ಹಬ್ಬ ಬಂದದ, ನೀವ ಏನರ ಗಿಫ್ಟ ಕೊಡೊದಿತ್ತಂದರ ಕೊಟ್ಟ ಬಿಡ್ರಿ…ಆದರ ೩೩ ಕೊಡ್ರಿ…ದಂಪತ್ತಗೆ ಅಧಿಕ ಬಾಗಣಾನೂ ಕೊಟ್ಟಂಗ ಆಗ್ತದ, ಬರ್ಥಡೇ ಗಿಫ್ಟೂ ಕೊಟ್ಟಂಗ ಆಗ್ತದ. ಹಂಗ ಅಧಿಕ ಮಾಸದಾಗ ಏನ ಕೊಟ್ಟರು ಪುಣ್ಯಾ ಬರತದ ಅಂತಾರ.
ಅಕಸ್ಮಾತ ಏನೂ ಆಗಲಿಲ್ಲಾ ಅಂದರ atleast ನೀವು ಈ ಆರ್ಟಿಕಲ್ ಓದಿದ ಮ್ಯಾಲೆ ಮುವತ್ತ ಮೂರ ಮಂದಿಗೆ ಓದರಿ ಅಂತ ಓರಲ್ಲಿ ಹೇಳಿದರು ಸಾಕ ನಿಮಗ ಅಧಿಕ ಮಾಸದ ಪುಣ್ಯಾ ಬರ್ತದ. ನೋಡ್ರಿ ಏನ ಮಾಡ್ತೀರಿ.
👌article Sir. Wish you Happy Birthday to your Wife Sir. 💐💐
Hapie birthday dear sir hanag medum avrigu helri 33 nimdu medum avrdu 33 totally 66 kade share madtevi 😂 chinti bidri and it’s great time nimm kathi odu ❤️ mund nang mast feel barutt TQ sir….