ಆಷಾಡ ಮಾಸ, ಶುಕ್ಲ ಪಕ್ಷ, ದಶಮಿ ತಿಥಿ ದಿವಸ ನಮ್ಮಪ್ಪನ ಶ್ರಾದ್ಧ. ನಮ್ಮವ್ವ ಶ್ರಾದ್ಧ ಇನ್ನೂ ಒಂದ ತಿಂಗಳ ಇರತ ಮಠಕ್ಕ ಹೋಗಿ ಮಾಡಿ ಬುಕ್ ಮಾಡ ಅಂತ ಗಂಟ ಬಿದ್ದಿದ್ಲು. ನಾ ಮಳೆ ಇತ್ತ ಅಂತ ಆಚಾರ್ಯರಿಗೆ ಫೋನ ಮಾಡಿ ’ ಹಿಂತಾ ತಾರೀಕಿಗೆ ನಮ್ಮಪ್ಪನ ಶ್ರಾದ್ಧ’ ಬರಕೊಂಡ ಬಿಡ್ರಿ ಅಂತ ಹೇಳಿ, ನಾ ಏನೇನ ಸಾಮಾನ ತರಬೇಕು ಅಂತ ಕೇಳಿದೆ
’ನಿಮ್ಮಪ್ಪ ಹೋಗಿ ಎಷ್ಟ ವರ್ಷ ಆತ, ಏನ ಪ್ರತಿ ಸಲಾ ಶ್ರಾದ್ಧಕ್ಕ ಏನೇನ ತರಬೇಕಂತ ಕೇಳ್ತಿ…. ವರ್ಷಾ ಏನೇನ ತರ್ತೀ ಅದನ್ನ ತೊಗೊಂಡ ಬಾ…ನಿಮ್ಮಪ್ಪ, ಅವರಪ್ಪಾ..ಅವರಪ್ಪಾ ಮೂರು ಮಂದಿದೂ ಹೆಸರು – ಗೋತ್ರ ಬರಕೊಂಡ ಬಾ…ಮತ್ತ ಹೋದ ವರ್ಷದಗತೆ ಯಾರ-ಯಾರಿಗರ ನೀರ ಬಿಟ್ಟ ಗಿಟ್ಟಿ’ ಅಂದರು..
’ಏ ಮೂರು ಮಂದಿ ಹೆಸರ- ಗೋತ್ರಾ ಸಪರೇಟ್ ಬರದ ಇಟ್ಟೇನಿ ತೊಗೊರಿ’ ಅಂದೆ.
’ಗೋತ್ರಾ ಯಾಕ ಸಪರೇಟ್ ಬರದಿ…ನಿನ್ನ ಮಗನಿಂದ ಹಿಡದ ನಿಮ್ಮ ಮುತ್ತಜ್ಜನ ಮುತ್ತಜ್ಜನ ತನಕಾ ನೀಮ್ಮ ಗೋತ್ರ ಒಂದ ಇರ್ತದ…ಅಪ್ಪಿ ತಪ್ಪಿ ವೈದಿಕರ ಮನ್ಯಾಗ ಹುಟ್ಟಿ ನೋಡ’ ಅಂತ ಜೋರ ಮಾಡಿದರು.
ಏನೋ ಬ್ರಾಹ್ಮಣ ಸಂಘದವರ ಹಗಲೇಲ್ಲಾ
’ಬ್ರಾಹ್ಮರೇಲ್ಲಾ ಒಗ್ಗಟ್ಟಾಗಬೇಕ, ತ್ರಿಮತಸ್ತರೇಲ್ಲಾ ತಮ್ಮ-ತಮ್ಮ ಒಳಗ ಜಗಳಾಡಬಾರದು ಅಂತ ಹೇಳಿದ್ದಕ್ಕ ನಾ ವೈದಿಕ ಭಟ್ಟರಂವಾ ಆಗಿನೂ ವೈಷ್ಣವರ ಮಠದಾಗ ಶ್ರಾದ್ಧಾ ಮಾಡಸಲಿಕ್ಕೆ ಬಂದೇನಲಾ ನಂದ ತಪ್ಪ ಅಂತ ಸುಮ್ಮನಾದೆ.
ಇನ್ನೇನ ಎರಡ ದಿವಸಕ್ಕ ಶ್ರಾದ್ಧ ಅದ ಅಂತರ್ಕಿಲೇ ಮೊದ್ಲ ಮಳೆಗಾಲ ಧೋತ್ರ ಒಣಗಲಿಲ್ಲಾ ಅಂದರ ಎಲ್ಲೇರ ನನ್ನ ದೇಹ ಶಲತ ಹೋಗಬಾರದಂತ ಧೋತ್ರಾ ತೊಗೊಂಡ ಮಠಕ್ಕ ಹೋಗಿ ’ನಾಡದ ನಮ್ಮಪ್ಪನ ಶ್ರಾದ್ಧ ಅದಕ್ಕ ಧೋತ್ರಾ ಕೊಡಲಿಕ್ಕೆ ಬಂದಿದ್ದೆ’ ಅಂತ ಅಲ್ಲಿದ್ದವರಿಗೆ ಹೇಳಿದೆ. ಅವರ
’ಹೆಸರ ಮೊದ್ಲ ಬರಿಸಿದ್ದರೀ ಏನ?’
’ಆಚಾರ್ಯ ಅವರಿಗೆ ಫೋನ ಮಾಡಿ ಹೇಳಿದ್ದೆ’
ಅವರ ಯಾ ತಾರೀಕು ಅಂತ ನನಗ ಕೇಳಿ ಡೈರಿ ತಗದ ನೋಡಿದರು. ಅದರಾಗ ನಮ್ಮಪ್ಪನ ಹೆಸರ ಇರಲಿಲ್ಲಾ.
’..ಕರೆಕ್ಟ ನೋಡ್ರಿ ಜೂಲೈ 30ನೆ ತಾರೀಕಿಗೆ ಬರಕೊರಿ ಅಂತ ಹೇಳಿದ್ದೆ’
’ನಿಮ್ಮ ಅಪ್ಪಾರ ಹೆಸರ ಹೇಳ್ರಿ’
’ಕೃಷ್ಣಮೂರ್ತಿ’
’ನೋಡ್ರಿಲ್ಲೇ 30 ನೇ ತಾರೀಕಿಗೆ ಎಂಟ್ರಿನ ಇಲ್ಲಾ’ ಅಂತ ಡೈರಿ ನನ್ನ ಮಾರಿಗೆ ಹಿಡದ್ರು…
ಅದರಾಗ 30ನೇ ತಾರೀಕಿಗೆ ’ ಪ್ರಶಾಂತ ಆಡೂರ- ಶ್ರಾದ್ಧ’ ಅಂತ ಬರದಿದ್ದರು.
ನಂಗ ತಲಿ ಗರಮ್ ಆತ…
’ಏ..ಇದ ನನ್ನ ಹೆಸರ..ಶ್ರಾದ್ಧ ನಮ್ಮಪ್ಪಂದ’ ಅಂತ ಜೋರ ಮಾಡೋದಕ್ಕ ಆಚಾರ್ಯರ ಬಂದರು.
ಅವರ ಒಂದ ಸರತೆ ನನ್ನ ಮಾರಿ, ಇನ್ನೊಂದ ಸರತೆ ಆ ಡೈರಿ ನೋಟ್ ಮಾಡಿದವನ ಮಾರಿ ನೋಡಿ
’ಪ್ರಶಾಂತ ಆಡೂರಂದ ಅಲ್ಲಪಾ ಅವರಪ್ಪಂದ ಶ್ರಾದ್ಧ ಅಂತ ಬರಕೊ ಅಂತ ಹೇಳಿದ್ದೆ ನಿನಗ’ ಅಂತ ಜೋರ ಮಾಡಿದರು…
’ಏ..ಅವರಪ್ಪನ ಹೆಸರ ಗೊತ್ತ ಇದ್ದಿದ್ದಿಲ್ಲಾ, ಹಿಂಗಾಗಿ ಪ್ರಶಾಂತ ಆಡೂರ ಅಂತ ಇಷ್ಟ ಬರದ ಮುಂದ ’ ಅವರಪ್ಪಂದ’ ಅಂತ ಬರೆಯೋದ ಮರತ ಬಿಟ್ಟಿದ್ದೆ’ ಅಂದರು.
ಆಚಾರ್ಯರ ’ನೀ ಏನ ಕಾಳಜಿ ಮಾಡಬ್ಯಾಡಾ, ಶ್ರಾದ್ಧಾ ನಿಮ್ಮಪ್ಪಂದ ಮಾಡ್ತೇವಿ, ಬರಬೇಕಾರ ಅಪ್ಪಂದ, ಅಜ್ಜಂದ, ಮುತ್ತಜ್ಜಂದ ಮೂರು ಹೆಸರು, ಮೂರು ಗೋತ್ರ ಭಾಯಿಪಟ ಮಾಡ್ಕೊಂಡ ಬಾ ಮತ್ತ’ ಅಂತ ನನ್ನ ಮಾರಿ ನೋಡಿ ನಕ್ಕರ.
ಈ ಹಳೇ ಸುದ್ದಿ ಇವತ್ತ ಯಾಕ ನೆನಪಾತ ಅಂದರ ಪಕ್ಷ ಮಾಸ ಅಂತ ನಿನ್ನೆ ನಮ್ಮಪ್ಪನ ಪಕ್ಷದ ಹೆಸರ ಬರಸಿ ಬಂದೆ…ಈ ಸರತೆ ನಮ್ಮಪ್ಪನ ಹೆಸರ ಬರಸಿ- ಇಂವಾ ಪಿತೃ…ನಾ ಕರ್ತೃ ಅಂತ ಕ್ಲೀಯರ್ ಆಗಿ ಹೇಳಬಂದೀನಿ.
eom/- 330 words
A very practical write up