ಹಿಂಗ ಮದ್ವಿ ಆಗಿ ಐದ ತಿಂಗಳ ತುಂಬಿ ಆರರಾಗ ಬಿದ್ದಿತ್ತ
’ರ್ರಿ ಅಕ್ಷಯ ತ್ರಿತೀಯಾಕ್ಕ ಬಂಗಾರದ ಏನ ಮಾಡಸ್ತೀರಿ?’ ಅಂತ ಕೇಳಿದ್ಲು.
’ಏ ನಾ ಏನ್ಮಾಡಸಬೇಕ ತಲಿ, ನಿಂಗ ಏನೇನ ಬಂಗಾರ ಬೇಕ ಅದನ್ನೇಲ್ಲಾ ವರದಕ್ಷೀಣಿ ಒಳಗ ತೊಗೊಂಡ ಬಾ ಅಂತ ಹೇಳಿದ್ನಿಲ್ಲ. ನಾ ಈಗ ಮತ್ತ ನಿಮ್ಮಪ್ಪನ ಕೇಳಲೇನ?’ ಅಂತ ಅಂದೆ.
ನನ್ನ ಮಾತ ಕೇಳಿ
’ಹೂಂ….ಅಕ್ಷಯ ತ್ರಿತೀಯಾಕ್ಕೂ ವರದಕ್ಷೀಣಿ ಕೊಡ್ತಾರ ಅಂತ್ ತಿಳ್ಕೊಂಡಿರೇನ. ಒಮ್ಮೆ ಲಗ್ನಾ ಮಾಡಿ ಕೊಟ್ಟ ಮ್ಯಾಲೆ ಮುಗಿತ. ಮುಂದ ಹೆಂಡ್ತಿಗೆ ಹಬ್ಬಾ- ಹುಣ್ಣಮಿಗೆ ಬಂಗಾರ ಮಾಡ್ಸೊದ ಕಟಗೊಂಡ ಗಂಡನ ಧರ್ಮ’ ಅಂದ್ಲು.
’ಏ ನಂಬದ ಬನಶಂಕರಿ ವಕ್ಕಲಾ, ನಮ್ಮಲ್ಲೇ ಸ್ವಂತ ಹೆಂಡ್ತಿಗೆ ಬಂಗಾರ ಮಾಡಸೋ ಪದ್ದತಿ ಇಲ್ಲಾ. ಬ್ಯಾರೆವರ ಮಾಡಸಬೇಕ ಅದಕ್ಕ ನಿಮ್ಮಪ್ಪಗ ಕೇಳ’ ಅಂತ ಅಂದದ್ದು ಅಂದೆ. ಅಕಿ ಅದ ಖರೇ ಅಂತ ತಿಳ್ಕೊಂಡಿದ್ಲು ಆದರ ಅಷ್ಟರಾಗ ನಮ್ಮವ್ವ ಅಡ್ಡ ಬಾಯಿ ಹಾಕಿ
’ಅಯ್ಯ..ಹಂಗ ಏನ ಪದ್ದತಿ ಇಲ್ಲವಾ, ಬರೇ ಗೆಜ್ಜಿ ಒಂದ ಸ್ವಂತ ತೊಗೊಬಾರದ. ನೀ ನಿನ್ನ ಗಂಡ ಏನ ಬಂಗಾರದ ವಸ್ತಾ ಮಾಡಸಿದ್ರು ಮಾಡಿಸ್ಗೊ ಯಾರ ಬ್ಯಾಡ ಅಂದಾರ’ ಅಂದ ಬಿಟ್ಲು.
ತೊಗೊ ಅಕಿ ಅಷ್ಟ ಹೇಳಿದ್ದ ತಡಾ ನಮ್ಮಕಿ ಅದ ಬೇಕ ಇದ ಬೇಕ ಅಂತ ಗಂಟ ಬಿದ್ಲು.
ಹಂಗ ಅಕಿ ಏನ ಭಾಳ ತುಟ್ಟಿವ ಕೇಳಿರಲಿಲ್ಲಾ, ಆದರ ಅದನ್ನೂ ನನಗ ಕೊಡಸೊ ಕ್ಯಾಪ್ಯಾಸಿಟಿ ಇರಲಿಲ್ಲ. ‘ ಬಂಗಾರದಂತ ಗಂಡನ ಇರಬೇಕಾರ ಮತ್ತ ಯಾಕ ಬಂಗಾರ’ ಅಂತ ನಾ ಅಂದರ
’ಏ….ಅದೇಲ್ಲಾ ಕಥಿ ಹೇಳಬ್ಯಾಡ್ರಿ…ಕಡಿಕೆ ಏನಿಲ್ಲಾ ಅಂದರು ಗಟಾಯಿಸಿದ್ದ ಮಂಗಳಸೂತ್ರಾನರ ಮಾಡಸರಿ, ಈ ದಾರದಾಗ ಪೋಣಸಿದ್ದ ತಿಂಗಳಕ್ಕ ಮೂರ ಸರತೆ ಕಟಗರಸತದ’ ಅಂದ್ಲು.
ಅದರಾಗೂ ನಮ್ಮವ್ವ ನಡಕ ಬಾಯಿ ಹಾಕಿ
’ಕಟಗೊಂಡ ಗಂಡ ಕಟಗರಸಿದ ಮಂಗಳಸೂತ್ರಾನೂ ಮಾಡಸಲಿಲ್ಲಾ ಅಂದರ ನಮ್ಮ ಮನಿ ಮರ್ಯಾದಿ ಹೊಗ್ತದಪಾ, ಪಾಪ ಆ ಹುಡಗಿ ಇಷ್ಟ ಕೇಳ್ತದ ಮಾಡಸ’ ಅಂದ್ಲು.
ಹಂಗ ಮಂಗಳಸೂತ್ರ ಕಟಗರಸೋದರಾಗ ನಂದೂ ಕಂಟ್ರಿಬ್ಯೂಶನ್ನೂ ಇತ್ತ ಅಂತ ಮಾಡಿಸಿ ಕೊಟ್ಟ ಮುಂದ ಅಕಿಗೆ
’ನಮ್ಮ ಮನ್ಯಾಗ ಯಾರಿಗೂ ಹಿಂಗ ಬಂಗಾರದ ಹುಚ್ಚ ಇಲ್ಲಾ. ನೀ ವರ್ಷಾ ಅಕ್ಷಯ ತ್ರಿತೀಯಾಕ್ಕ ಅದನ್ನ ಮಾಡಸ ಇದನ್ನ ಮಾಡಸ ಅಂತ ಗಂಟ ಬೀಳಬ್ಯಾಡ’ ಅಂತ ಸ್ಪಷ್ಟ ಹೇಳಿದೆ.
ಮುಂದಿನ ಸರತೆ ಅಕ್ಷಯ ತ್ರಿತೀಯಾಕ್ಕ ನಮ್ಮಜ್ಜಿ ನಮ್ಮ ಮನ್ಯಾಗ ಇದ್ಲು ಆವಾಗ ಮತ್ತ ಹಿಂಗ ಬಂಗಾರದ ವಸ್ತಾ-ವಡವಿ ಬಗ್ಗೆ ಸುದ್ದಿ ಬಂತ ನಮ್ಮಜ್ಜಿ ಸಹಜ ಮಾತಾಡ್ಕೋತ
’ನಮ್ಮ ಅಬಚಿ ಒಬ್ಬೋಕಿ ಬಂಗಾರದ ಭಾಗಕ್ಕ ಅಂತ ಇದ್ಲವಾ ಪ್ರೇರಣಾ, ಅಕಿ ಕಡೆ ಏನ ವಸ್ತಾ- ವಡವಿ ಇರ್ತಿದ್ದವ ಅಂತಿ….’ ಅಂತ ಶುರು ಹಚಗೊಂಡ್ಲು.
ಈ ಬಂಗಾರದ ಭಾಗಕ್ಕ ಹಾನಗಲ ಒಳಗ ಇರ್ತಿದ್ಲು. ಅಕಿ ಕಡೆ ಒಬ್ಬ ಸುಸಂಸ್ಕೃತ, ಸಮೃದ್ಧ ಕುಟುಂಬದ ಸುಗೃಹಿಣಿ ಏನೇನ ಬಂಗಾರದ ವಸ್ತಾ- ಒಡವಿ ಹಾಕೋಬೇಕ ಅದೇಲ್ಲಾ ಇದ್ದವ ಅಂತ. ಹಿಂಗಾಗೇ ಅಕಿಗೆ ಬಂಗಾರದ ಭಾಗಕ್ಕ ಅಂತ ಕರಿತಿದ್ದರ.
’ಆ ಭಾಗಕ್ಕ ನನ್ನ ಲಗ್ನದಾಗ ಒಂದ ಅವಲಕ್ಕಿ ಸರಾ ಹಾಕಿದ್ಲು…ಪ್ರಶಾಂತ ನೀನು ನಿನ್ನ ಹೆಂಡ್ತಿಗೆ ಈ ಸರತೆ ಅಕ್ಷಯ ತ್ರಿತೀಯಾಕ್ಕ ಒಂದ ಅವಲಕ್ಕಿ ಸರಾ ಮಾಡಸ’ ಅಂತ ನಮ್ಮಜ್ಜಿ ಬೆಂಕಿ ಹಚ್ಚಿದ್ಲು.
ಅವಲಕ್ಕಿ ಸರಾ ಅನ್ನೋದು ಒಂದ ಆಭರಣ, ಬಂಗಾರದ್ದ ಮಾಡಸ್ತಾರ ಅಂತ ನಮ್ಮಕಿಗೆ ಗೊತ್ತ ಆಗೋದ ತಡಾ
’ರ್ರಿ…. ಹಂಗರ ನಂಗ ಈ ಸರತೆ ಅಕ್ಷಯ ತ್ರಿತೀಯಾಕ್ಕ ಅವಲಕ್ಕಿ ಸರಾನ ಮಾಡಸರಿ ಆದರ ನಂಗ ದಪ್ಪವಲಕ್ಕಿದ ಇರಲಿ ಈ ಪೇಪರ್ ಅವಲಕ್ಕಿ ಸರಾ ಚುಚ್ಚದ’ ಅಂದ್ಲು…
ನಾ ಸಿಟ್ಟಿಗೆದ್ದ ’ಯಾಕ ತೊಯಿಸಿದ ಅವಲಕ್ಕಿದ ಬ್ಯಾಡ ಏನ, ಅದ ಇನ್ನೂ ವಜ್ಜಾ ಇರ್ತದ’ ಅಂದೆ. ನನ್ನ ಪುಣ್ಯಾಕ್ಕ ಇಕಿ ಗೊಂಜಾಳ ನೆಕ್ಲೇಸ್ ಮಾಡಸರಿ ಅನ್ನಲಿಲ್ಲಾ.
ಇತ್ತಲಾಗ ನಮ್ಮಜ್ಜಿ ಬಂಗಾರದ ಭಾಗಕ್ಕನ ದಾಗೀನ್ ದ ದಾಸ್ತಾ ಶುರು ಹಚಗೊಂಡ್ಲು, ನಮ್ಮಕಿ ಅಕಿ ಮುಂದ ಕಿವಿ ದೊಡ್ಡದ ಮಾಡ್ಕೊಂಡ ಕೂತ ಬಿಟ್ಟಳು.
’ಸರದಿಂದನ ಶುರು ಮಾಡ್ರಿ ಅಜ್ಜಿ’ ಅಂದ್ಲು.
ಅಕಿ ’ಕೊಳ್ಳಾಗ ಹಾಕೊಳೊವ ನೋಡ್ವಾ ಅವಲಕ್ಕಿ ಸರಾ,ಚಂದ್ರಹಾರ, ಸಂಪಗಿ ಹಾರ, ಮೋಹನಮಾಲಿ,ಇತ್ತೀಚಿಗೆ ನೆಕಲೆಸ್ ಅಂತಿರಲಾ ಅದು ಮ್ಯಾಲೆ ಇನ್ನೊಂದ ಬೋರಮಳಾ ಅಂತ ಒಂದ ಇರತದ ಅದನ್ನ ಹಳ್ಳಿಮಂದಿ ಜಾಸ್ತಿ ಹಾಕೋತಾರ’ ಅಂದ್ಲು.
’ಬೋರಮಳಾ ಅಂದರ’ ಅಂದರ ಅರಗಿಂದ ಇರ್ತದ ಅದಕ್ಕ ಬಂಗಾರದ ಗಿಲಿಟ್ ಹಾಕಸ್ತಾರ. ಅದ ಭಾಳ ಸೋವಿ, ನೋಡ ನೀ ಹೆಂಗಿದ್ದರೂ ಹಳ್ಳಿಕಿ ಇದ್ದಂಗ ಇದ್ದಿ ಅದನ್ನರ ಮಾಡಸನ್ನ ನಿನ್ನ ಗಂಡಗ ಅಂದ್ಲು.
’ಅಯ್ಯ…ಅವರೇನ ಬಿಡ್ರಿ ಅರಗಿನ ಗುಂಡಿಗೆ ಹಿತ್ತಾಳಿ ಗಿಲಿಟ್ ಹೊಡಿಸಿ ಇದ ಬಂಗಾರದ್ದ ಅಂತ ಹೇಳಿದ್ರೂ ಹೇಳಿದರ’ ಅಂತ ನಮ್ಮಕಿ ಟಾಂಟ್ ಹೊಡದ್ಲು.
ಮುಂದ ಬಾಜು ಬಂದ, ವಂಕಿ ಇವೇಲ್ಲಾ ರಟ್ಟಿಗೆ ಅಂದರ ತೋಳಿಗೆ ಹಾಕೊಳೊವು. ಇನ್ನ ಪಾಟ್ಲಿ, ಬಿಲ್ವಾರಾ, ಗೋಟ, ತೋಡೆ…. ತೋಡೆ ಅಂದರ ತೊಡಿಗೆ ಹಾಕೊಳೊದಲ್ಲ ಮತ್ತ.. ನೀ ಏನ ಹೇಳಲಿಕ್ಕೆ ಬರಂಗಿಲ್ಲಾ ಏನೇನರ ತಿಳ್ಕೋತಿ, ಇವೇಲ್ಲಾ ಮುಂಗೈಗೇ ಹಾಕೊಳೊದ ಅಂತ ಹೇಳಿದ್ಲು.
ಮುಂದ ಮೂಗಿನಾಗಿನ ಓಲೆ, ನತ್ತ, ಗಾಡೆ, ಮೂಗಬಟ್ಟ, ಗುಲಾಖು…ಅಂತೇಲ್ಲಾ ಇರ್ತಾವ ಅಂದ್ಲು.
ಈ ಗುಲಾಖು ಅಂದರ ಇದನ್ನ ಮೂಗಿನ ಎಡಗಡೆನೂ ಅಲ್ಲಾ ಬಲಗಡೆನೂ ಅಲ್ಲಾ ಸೆಂಟರ ಪಾರ್ಟಿಗೆ ಚುಚಗೊಳೊದ ಅಂದರ ಪಾಲಿಟಿಕಲಿ ಹೇಳ್ಬೇಕಂದರ leftist ಅಲ್ಲಾ rightist ಅಲ್ಲಾ centerist…opportunist ಇದ್ದಂಗ ಅನ್ನರಿ….
‘ರ್ರಿ ಅನ್ನಂಗ ನನಗೊಂದ ನತ್ತ ಮಾಡಸ್ರಿ’ ಅಂತ ನಮ್ಮಕಿ ಮತ್ತ ಬಾಯಿ ತಗದ್ಲು
’ಏ ಮೂಗಿನಾಗಿನ ಮೂಗಬಟ್ಟ ಜಾಮ್ ಆಗೇದ ತಗಿಲಿಕ್ಕೆ ಬರವಲ್ತ ಅಂತಿ ಇನ್ನ ನತ್ತ್ ಎಲ್ಲೇ ಹಾಕೋತಿ’ ಅಂದರ
’ನೀವ ನತ್ತ ಕೊಡಸ್ತೇನಿ ಅಂದರ ಇನ್ನೊಂದ ಕಡೆನೂ ಮೂಗ ಚುಚ್ಚಿಸ್ಗೊತೇನಿ’ ಅಂದ್ಲು. ಇಕಿ ಏನ ನಾ ಬಂಗಾರದ ನಾಲ ಕೊಡಸ್ತೇನಿ ಅಂದರ ಕಾಲಿಗೆ ನಾಲ ಬಡಿಸ್ಗೊಳಿಕ್ಕೂ ಸೈ ಬಿಡ ಅಂತ ಸುಮ್ಮನಾದೆ. ಅಲ್ಲಾ ಯಾರಿಗೆ ನಾಲ ಅಂದರ ಗೊತ್ತಿಲ್ಲಾ ಅವರಿಗೆ ಹೇಳ್ಬೇಕಂದರ ಕುದರಿಗೆ, ದನಕ್ಕ ನಮ್ಮಲ್ಲೇ ಕಾಲಿಗೆ ಅವು ಭಾಳ ಓಡಾಡ್ತಾವ ಅಂತ ನಾಲ ಅಂತ ಮೆಟಲ್ ಪೀಸದ್ದ U ಆಕಾರದಾಗ ಬಡಸ್ತಾರ.
ಇತ್ತಲಾಗ ನಮ್ಮಜ್ಜಿ ಮೈಯಾಗ ಸಾಕ್ಷಾತ ಅವರ ಅಬಚಿ ಬಂಗಾರದ ಭಾಗಕ್ಕನ ಬಂದಿದ್ಲ. ಅಕಿ ಮತ್ತ
’ಮಗ್ಗಿ ಮಾಲಿ- ಗೊರಟಗಿ ಹೂವಿನ ಮೊಗ್ಗಿನ ಗತೆ ಇರ್ತದ, ನಾಗರಾ, ಕ್ಯಾದಗಿ, ಶ್ಯಾವಂತಗಿ, ಗುಲಾಬಿ, ಬೈತಲ್ ಮುತ್ತ, ಚಂದ್ರಾ, ಸೂರ್ಯಾ, ರಾಗಟಿ ಬಟ್ಟ….ಮತ್ತ ಅವಕ್ಕ ಗೊಂಡೆ ಬ್ಯಾರೆ ಇರ್ತಾವ ಅವು ಎಲ್ಲಾ ಹೆರಳಿಗೆ ಸಂಬಂಧ ಪಟ್ಟದ್ದ, ಇವೇಲ್ಲಾ ಹೆರಳ ಬಂಗಾರ….ತಲ್ಯಾಗ ತುರಬ ಕಟಗೊಂಡ ತುರಕೋಳೊವು. ಹಂಗ ಉದ್ದನೀ ಕೂದ್ಲ ಇರಲಿಲ್ಲಾ ಅಂದರ ಚವರಿ ಹಾಕ್ಕೊಂಡ ಬಂಗಾರ ತುರಕೊಳೊದ. ಮತ್ತ ಇವಕರ ಮ್ಯಾಲೆ ಕಳಸ ಅಂತ ಬ್ಯಾರೆ ಇರ್ತದ.
ಅಲ್ಲಾ ಇವನ್ನೇಲ್ಲಾ ನಿನ್ನ ಗಂಡ ಕೊಡಸ್ತಾನ ಅಂದರ ನೀ ಏನ ಬಂಗಾರದ ಆಶಾಕ್ಕ ಮಾರಗಟ್ಲೇ ಚವರಿ ಹಾಕೊಳಿಕ್ಕೂ ರೆಡಿ ತೊಗೊ ಅಂತ ಬ್ಯಾರೆ ಅಂದ್ಲು.
ಇನ್ನ ಡಾಬು, ಗೆಜ್ಜಿ ಪಟ್ಟಿ, ಟೊಂಕದ ಪಟ್ಟಿ ಇವೇಲ್ಲಾ ಟೊಂಕಕ್ಕ ಹಾಕೊಳೊದ ಅಂದ್ಲು. ನಾ ನಡಕ ಬಾಯಿ ಹಾಕಿ
’ಯಾಕ ಗಂಡಸರಿಗೆ ಲಂಗೋಟಿ ಇಳಿಬಾರದಂತ ಟೊಂಕಕ್ಕ ಉಡದಾರ ಹಾಕ್ಕೊಂಡಿರತರಲಾ ಅದ ಹೆಣ್ಣಮಕ್ಕಳಿಗೆ ಇರಂಗಿಲ್ಲೇನ’ ಅಂತ ಅನ್ನೋವ ಇದ್ದೆ ಆದರ ಹೋಗ್ಲಿ ಬಿಡ ಅಂತ ಸುಮ್ಮನಾದೆ.
ಝುಮಕಿ, ಬೆಂಡ್ವಾಲಿ, ಬುಗಡಿ…ಕೆನ್ನಿ ಸರಪಳಿ ಇವೇಲ್ಲಾ ಕಿವ್ಯಾಗಿನ್ವು…. ಅಂತ ನಮ್ಮಜ್ಜಿ ಬಂಗಾರದ ಭಾಷಣ ನಡದಿತ್ತ ಇಕಿ ನಡಕ ಸಡನ್ ಆಗಿ ಮತ್ತ ಈ ಕಾಪರ್ ಟೀ ಅಂತಾರಲಾ ಅದು ಅಂದ್ಲು. ’ ಏ..ನಮ್ಮವ್ವಾ ಅದ ಬ್ಯಾರೆ, ಅದ ಮಕ್ಕಳ ಆಗಲಾರದಕ್ಕ ಹಾಕ್ತಾರ,ಅದನ್ಯಾರ ಬಂಗಾರದ ಮಾಡಸ್ತಾರ’ ಅಂತ ನಮ್ಮಜ್ಜಿ ಹಣಿ-ಹಣಿ ಬಡ್ಕೊಂಡ ಮುಂದ
ಕಾಲಾಗ ಹಾಕ್ಕೊಳ್ಳೊವು ಗೆಜ್ಜಿ, ಕಡಗ, ಪೆಂಡಾರ ಗೆಜ್ಜಿ, ಪೈಜಣಾ, ರುಳಿ….ಅಂತ ಹೇಳ್ಕೋತ ಹೊಂಟ್ಲು.
ನಾ ಕಡಿಕೆ ತಲಿ ಕೆಟ್ಟ ನಮ್ಮಜ್ಜಿಗೆ ’ಸಾಕ ಮುಗಸವಾ ಇದನ್ನೇಲ್ಲಾ ಕೇಳಿ ಎಲ್ಲೆರ ಬಂಗಾರ ಭಾಗಕ್ಕ ನನ್ನ ಹೆಂಡ್ತಿ ಮೈಯಾಗ ಬಂದರ ನನ್ನ ಕಥಿ ಮುಗದಂಗ’ ಅಂತ ಅಂದ ನಮ್ಮಕಿಗೆ
’ನೋಡಿಲ್ಲೇ… ನೀ ಒಂದ ಕೆಲಸಾ ಮಾಡ ಧಾರವಾಡದ ಅನಸಕ್ಕಜ್ಜಿ ಇವೇಲ್ಲಾ ವಸ್ತಾ- ವಡವಿನ ಸಂಡಿಗುಂಬಳ, ಹುಣಸಿ, ಕಲ್ಲಂಗಡಿ ಬೀಜದ್ಲೇ ಮಾಡಿ ಭಾಡಗಿ ಕೊಡ್ತಾಳ ನೀ ಬೇಕಾರ ಅವನ್ನ ಈ ಸರತೆ ಅಕ್ಷಯ ತ್ರಿತೀಯಾಕ್ಕ ಖರೀದಿ ಮಾಡ, ನಾನ ರೊಕ್ಕಾ ಕೊಡ್ತೇನಿ…..ಆ ಬಂಗಾರದ ಭಾಗಕ್ಕನ್ನ ತಲ್ಯಾಗಿಂದ ತಗಿ ಅಂತ ಟಾಪಿಕ್ ಚೇಂಜ್ ಮಾಡಿದೆ. ಅದ ಏನೋ ಅಂತಾರಲಾ
’ಸರಕನಕಿ ಸರಗಿ ಹಾಕ್ಕೊಂಡರ ನೆರಮನಿಯಕಿ ಊರಲ ಹಾಕೊಂಡಿದ್ಲಂತ’ ಹಂಗ ಆಗ್ತದ ಈ ಬಂಗಾರದ ಚಟಾ ಬಿದ್ದರ ಇಷ್ಟ ಆದರೂ ನಾ ಆ ಬಂಗಾರ ಭಾಗಕ್ಕನ ಮ್ಯಾಲೆ ಆಣಿ ಮಾಡಿ ಹೇಳ್ತೇನಿ ಇಷ್ಟ ನಮ್ಮನಿ ಬಂಗಾರದ ವಸ್ತಾ-ವಡವಿ ಇರ್ತಾವ ಅಂತ ನಂಗ ಗೊತ್ತ ಇದ್ದಿದ್ದಿಲ್ಲ ಬಿಡ್ರಿ.
ಇನ್ನ ಈ ಬಂಗಾರ ಭಾಗಕ್ಕನ ಪುರಾಣ ಎಲ್ಲಾ ಬಿಟ್ಟ ಇವತ್ತ ಯಾಕ ಬಂತ ಅಂದರ ಒಂದ ವಾರದಿಂದ ಈಗ ಇಕಿ ಮತ್ತ ’ರ್ರೀ..ಈ ಸರತೆ ಅಕ್ಷಯ ತ್ರಿತೀಯಾಕ್ಕ ನನಗ ಬಂಗಾರದ ಏನ ಕೊಡಸ್ತೀರಿ’ ಅಂತ ಗಂಟ ಬಿದ್ದಿದ್ದಕ್ಕ ಇಷ್ಟ ಬಂಗಾರದ್ದ ಪುರಾಣ ಬರಿಬೇಕಾತ…ಇರಲಿ ಹಂಗೇನರ ಅಕ್ಷಯ ತ್ರಿತೀಯಾಕ್ಕ ಬಂಗಾರ ಖರೀದಿ ಮಾಡೋರಿದ್ದರ ಈಗ ಪ್ಲ್ಯಾನ್ ಮಾಡ್ರಿ.