Oct 14, world standard dayದ ನಿಮಿತ್ತ ಬರೆದ ಲೇಖನ
ಇವತ್ತ world standards day, ಅಂದರ ಜಗತ್ತಿನಾಗ ಸ್ಟ್ಯಾಂಡರ್ಡ ಇದ್ದೋರದ ಅಷ್ಟ ಡೇ ಅಂತ ಅಲ್ಲಾ ಮತ್ತ, ಜಗತ್ತಿನಾಗ ಎಲ್ಲಾರಿಗೂ, ಎಲ್ಲಾದಕ್ಕೂ ಒಂದ ಗುಣಮಟ್ಟ ಇರಲಿ ಅಂತ ಸ್ಟ್ಯಾಂಡರ್ಡ್ಸ ಡೇ ಆಚರಿಸೋದ. ಈ ISO (international organization for standardization) ಇರೋದ ಎಲ್ಲಾದಕ್ಕೂ ಒಂದ ಸ್ಟ್ಯಾಂಡರ್ಡ ಕೊಡಲಿಕ್ಕೆ.
ಇತ್ತೀಚಿಗೆ ನನಗೂ ಯಾಕ ನಮ್ಮ ಫ್ಯಾಮಿಲಿನ an ISO 9001 ಫ್ಯಾಮಿಲಿ ಮಾಡಬಾರದು ಅಂತ ಅನಸಲಿಕತ್ತಿತ್ತು. ನನ್ನ ಹೆಂಡತಿ- ಮಕ್ಕಳಿಗೆ ಅವೇರನೆಸ್, ಟ್ರೇನಿಂಗ ಕೊಟ್ಟ ಮನಿ ಮಂದಿಗೇಲ್ಲಾ ಕ್ವಾಲಿಟಿ ಮ್ಯಾನೇಜಮೆಂಟ ಪ್ರಿನ್ಸಿಪಲ್ಸ್ ಕಲಸಬೇಕು, ಒಟ್ಟ ಇಡಿ ಕುಟಂಬ ಸ್ಟ್ಯಾಂಡರ್ಡೈಸ್ ಮಾಡಬೇಕು ಅಂತ ತಲ್ಯಾಗ ಹೋತು. ಹಂಗರ ಒಂದ ಸರತೆ ನಮ್ಮ ಮನಿದ ಟಾಪ್ ಮ್ಯಾನೇಜಮೆಂಟ ಅಂದರ ನನ್ನ ಹೆಂಡತಿಗೆ ಕೇಳಿ ಡಿಸೈಡ ಮಾಡೋಣ ಅಂತ ಅಕಿನ್ನ ಕರದ
“ಲೇ, ನಾವು ಯಾಕ ನಮ್ಮ ಫ್ಯಾಮಿಲಿ ‘an ISO-9001ಫ್ಯಾಮಿಲಿ’ ಮಾಡಬಾರದು?” ಅಂತ ಕೇಳಿದೆ.
“ರ್ರಿ, ನಂದ ಈಗಾಗಲೇ ಆಪರೇಶನ್ ಆಗೇದ. ಮತ್ತೇನ ತಲಿ ಮಾಡೋದು” ಅಂದ್ಲು.
ಹಕ್ಕ ಅವನೌನ, ನಾ ಹೇಳೋದ ಏನು, ಈಕಿ ತಿಳ್ಕೊಂಡಿದ್ದ ಏನು? ನಾ an ISO- 9001 ಫ್ಯಾಮಿಲಿ ಅಂದರ ಅಕಿ ಅದು ಒಂದ ಫ್ಯಾಮಿಲಿ ಪ್ಲ್ಯಾನಿಂಗ ಮೆಥಡ ಅಂತ ತಿಳ್ಕೊಂಡಾಳ? ಏನ ಹಣೇಬರಹಪಾ ನಂದ ಅಂತ ಅಕಿಗೆ ನಾ ISO ಅಂದರ ಏನು ಅಂತ ತಿಳಿಸಿ ಹೇಳಿದೆ.
ಅದಕ್ಕ ಅಕಿ “ಅಲ್ಲಾ, ಎಲ್ಲಾ ಬಿಟ್ಟ ನಿಮಗ ಅದ್ಯಾಕ ತಲ್ಯಾಗ ಹೋತ, ನಮ್ಮದ ISO ಫ್ಯಾಮಿಲಿ ಆದರ ನಿಮಗ ಯಾರರ ಇನ್ನೊಂದ ಹೆಣ್ಣ ಕೊಡ್ತಾರೇನ?” ಅಂದ್ಲು. ಏನ್ಮಾಡ್ತಿರಿ!
ಇಕಿಗೆ ಏನರ ಹೇಳೋದು ತ್ರಾಸ, ಏನರ ಅಂದ್ರ ಏನರ ಅಂತಾಳ, ಇಕಿಗೆ ಜೀವನದಾಗ ಫ್ಯಾಮಿಲಿ ಫೋಕಸ ಇಲ್ಲಾ ಅಂತ ನಾ
“ಹಂಗ ಅಲ್ಲಲೇ, ನಮ್ಮ ಕುಟುಂಬ ಛಂದಾಗಿ ಸಿಸ್ಟಿಮ್ಯಾಟಿಕ್ಕಾಗಿ ಇದ್ದರ ನಮಗ ಸಮಾಜದಾಗ ಛಲೋ ಗೌರವ ಸಿಗತದ, ನಮ್ಮ ಬಗ್ಗೆ ಸೋಸಿಯಲ್ ಫೀಡಬ್ಯಾಕ ಛಲೊ ಇರ್ತದ” ಅಂತ ಅಂದೆ.
“ರ್ರೀ ಅದಕ್ಕೇಲ್ಲಾ ಮನ್ಯಾಗ ಛಲೋ ಲೀಡರಶಿಪ್ ಇರಬೇಕು. ನೀವೇನ ಹಗಲಹೊತ್ತಿನಾಗ ನಿಮ್ಮವ್ವ ಹೇಳಿದ್ದಕ್ಕ ಹೂಂ ಅಂತೀರಿ, ರಾತ್ರಿ ಆದಕೂಡಲೇ ನಾ ಹೇಳಿದ್ದಕ್ಕ ಹೂಂ ಅಂತೀರಿ. ಹಿಂಗಾದರ ISO ಫ್ಯಾಮಿಲಿ ಅಲ್ಲಾ ಐಸೋಲೇಟೆಡ್ ಫ್ಯಾಮಿಲಿ ಆಗ್ತದ ಇಷ್ಟ” ಅಂದ್ಲು.
ಏ ಇಕಿಗೆ ಸಂಸಾರದಾಗ ಮನಿ ಮಂದಿನ್ನ ಇನ್ವಾಲ್ವಮೆಂಟ ಮಾಡ್ಕೋಳೊದು, ಪ್ರೊಸೆಸ್ ಅಪ್ರೋಚ್ ಅಂದರನ ಗೊತ್ತಿಲ್ಲಾ, ನಾ ಇಕಿನ ಕಟಗೊಂಡ ಫ್ಯಾಮಿಲಿ ಒಳಗ ಕಂಟಿನ್ಯೂವಲ್ ಇಂಪ್ರೂವಮೆಂಟ್ ಮಾಡಲಿಕ್ಕೆ ಸಾಧ್ಯನ ಇಲ್ಲಾ ಅನಸಲಿಕತ್ತ.
“ಲೇ, ನೀ ಖರೇನ ನಮ್ಮ ಮನ್ಯಾಗ NC (ನಾನ್ ಕನ್ಫರ್ಮಿಂಗ್) ಪ್ರೊಡಕ್ಟ ಇದ್ದಂಗ ಇದ್ದಿ ನೋಡ, ಒಟ್ಟ ಬುದ್ಧಿನ ಇಲ್ಲಾ. ನಿನಗ ಮ್ಯಾನೇಜಮೆಂಟ ರಿಸ್ಪಾನ್ಸಿಬಿಲಿಟಿನ ಇಲ್ಲಾ” ಅಂದೆ.
“ಅಯ್ಯ ಕಂಡೇನ ತೊಗರಿ ನಿಮ್ಮ ರಿಸ್ಪಾನ್ಸಿಬಿಲಿಟಿ, ಹನ್ನೆರಡ ವರ್ಷಾತ ನೋಡಲಿಕ್ಕತ್ತೇನಿ, ಮನ್ಯಾಗ ಒಂದ ಸುಡಗಾಡ ಕ್ವಾಲಿಟಿ ಪಾಲಿಸಿ ಇಲ್ಲಾ, ಆಬ್ಜೆಕ್ಟಿವ್ಜ ಇಲ್ಲಾ, ಒಬ್ಬರಿಗೊಬ್ಬರಿಗೆ ಇಂಟರ್ನಲ್ ಕಮ್ಯುನಿಕೇಶನ ಅಂತು ಇಲ್ಲೇ ಇಲ್ಲಾ. ಬರೇ ನನಗ ರಿಸ್ಪಾನ್ಸಿಬಿಲಿಟಿ ಕೊಟ್ಟ ನಿಮ್ಮವ್ವಗ ಅಥಾರಿಟಿ ಕೊಟ್ಟರ ಸಂಸಾರ ನಡೀತದೇನ? ನಿಮ್ಮ ಸಂಸಾರಕ್ಕ ಒಂದ ಸುಡಗಾಡ ಪ್ಲ್ಯಾನಿಂಗ ಇಲ್ಲಾ ” ಅಂತ ಅಂದ ಬಿಟ್ಟಳು.
ಅಲ್ಲಾ ನಾ ಪ್ಲ್ಯಾನಿಂಗ ಇಲ್ಲದ ಒಂದ ಗಂಡ-ಒಂದ ಹೆಣ್ಣ ಅದು ಕರೆಕ್ಟ ಆರ ವರ್ಷ ಗ್ಯಾಪ ಇಟ್ಟ ಹಡದೇನಿನ ಅನ್ನೊವ ಇದ್ದೆ ಆದರ ಹೋಗಲಿ ಬಿಡ ಅಂತ ಸುಮ್ಮನಾದೆ. ಆದರ ನಾ ಹಿಂತಾ ಮ್ಯಾನೆಜಮೆಂಟ ಕಮಿಟಮೆಂಟ ಇದ್ದೋಕಿನ ಕಟಗೊಂಡ ನಮ್ಮ ಫ್ಯಾಮಿಲಿಗೆ ISO ತೊಗೊಳ್ಳಿಕ್ಕೆ ಹೊಂಟರ ನಂಗ ಸಿಕ್ಕಂಗ ತೊಗೊ ಅನಸ್ತು.
ಹಂಗ ನಾ ಇಕಿನ್ನ ಲಗ್ನ ಆಗಬೇಕಾರ ನನ್ನ ರಿಸೊರ್ಸ್ ಮ್ಯಾನೇಜಮೆಂಟ ಅಷ್ಟಕ್ಕ ಅಷ್ಟ ಇತ್ತು, ಭಾಡಗಿ ಇನ್ಫ್ರಾಸ್ಟ್ರಕ್ಚರ್ ಒಳಗ ಸಂಸಾರ ನಡಿಸ್ಗೋತ ಹೊಂಟಿದ್ದೆ. ಇಕಿನ್ನ ಮಾಡ್ಕೊಂಡರು ನಮ್ಮ ಅತ್ತಿ ಮನಿಯಿಂದ ಪ್ರುವಿಸನ್ ಆಫ್ ರಿಸೊರ್ಸಿಸ್ ಏನ್ ಆಗಲಿಲ್ಲಾ. ಲಗ್ನಾ ಮಾಡ್ಕೋಬೇಕಾರ ಹುಡಗಿದು, ಹುಡಗಿ ಮನಿಯವರದು ಸರಿಯಾಗಿ ಮೇಸರಮೆಂಟ, ಅನಲೈಸಿಸ್ ಮಾಡಲಿಲ್ಲಾಂದ್ರ ಗಂಡಾ ಅನ್ನೋವಾ ಜೀವನದಾಗ ಇಂಪ್ರುವಮೆಂಟ ಆಗಂಗಿಲ್ಲಾ ಅಂತಾರಲಾ ಅದು ಖರೆ ನೋಡ್ರಿ. ಈಗ ಏನಿದ್ದರು corrective action ತೊಗೊಬೇಕು, preventive action ನಡಿಯಂಗಿಲ್ಲಾ.
ನಂಗ ಇಕಿನ್ನ ಕಟಗೊಂಡ ಇಷ್ಟ ವರ್ಷದಾಗ ರಿಯಲೈಸ್ ಆಗಿದ್ದ ಅಂದರ ಎರಡ ಪ್ರೊಡಕ್ಟ, ಒಂದ ಗಂಡು ಒಂದ ಹೆಣ್ಣು. ಅದು ವರ್ಷಾನ ಗಟ್ಟಲೇ ನನ್ನ ಹೆಂಡತಿಗೆ ಅವೇರನೆಸ್, ಟ್ರೇನಿಂಗ ಕೊಟ್ಟ ಮುಂದ ಡಿಸೈನ್, ಡೆವಲಪಮೆಂಟ ಮಾಡಿದ ಮ್ಯಾಲೆ ಎರಡ ಹ್ಯುಮನ ರಿಸೊರ್ಸಿಸ್ ಹುಟ್ಟಿದ್ದ.
ನಾ ಕಡಿಕೆ ತಲಿಕೆಟ್ಟ ಈ ISO ಉಸಾಬರಿನ ಬ್ಯಾಡ, ನಮ್ಮ ಸಂಸಾರಕ್ಕ ಒಂದ ಸ್ಟ್ಯಾಂಡರ್ಡ ಇಲ್ಲದಿದ್ದರು ನಾವೇಲ್ಲಾ ಸ್ಯಾಟಿಸ್ಫೈಡ ಇದ್ದೇವಲಾ ಅಷ್ಟ ಸಾಕ, ಇನ್ನ ಸುಳ್ಳ ನನ್ನ ಹೆಂಡತಿದ ಇಂಟರ್ನಲ ಆಡಿಟ ಮಾಡಲಿಕ್ಕೆ ಹೋಗಿ ಸಂಸಾರದ ವರ್ಕಿಂಗ್ ಎನ್ವಿರಾನ್ವಮೆಂಟ್ ಹಾಳ ಮಾಡ್ಕೊಳೊದ ಬ್ಯಾಡ, ಹಂಗ ಸಮಸ್ಯೆ ಬಂದಾಗ ಮನಿ ಮಂದೇಲ್ಲಾ ಕೂತ ಮ್ಯಾನೆಜಮೆಂಟ ರಿವಿವ್ ಮಾಡಿ ಅವಶ್ಯಕತೆ ಇದ್ದಲ್ಲೆ ಅಮೆಂಡಮೆಂಟ ಮಾಡ್ಕೊಂಡ ಬದಕೋದ ಜೀವನದಾಗ ಭಾಳ ಇಂಪಾರ್ಟೆಂಟ ಅಂತ ಸುಮ್ಮನಾದೆ.
ಅಲ್ಲಾ, ಹಂಗ ಇಗೇನ ನಮ್ಮ ದೇಶದಾಗ ಈ ISO ಸರ್ಟೀಫಿಕೇಟ ಸಹಿತ ಮಾರಲಿಕ್ಕೆ ಸಿಗತಾವ. ಹಂಗ ಬೇಕಾರ ನಮ್ಮ ಫ್ಯಾಮಿಲಿಗೂ ಒಂದ ತೊಗಂಡರಾತ ಬಿಡು ಅಂತ ಅನ್ಕೊಂಡೇನಿ. ಕಿಸೆದಾಗ ರೊಕ್ಕ ಇದ್ದರ ಇವತ್ತ ನಾವು ಸ್ಟ್ಯಾಂಡರ್ಡ್ಸ ಸಹಿತ ಖರೀದಿ ಮಾಡಬಹುದು.