ನಿನ್ನೆ sslc ರಿಸಲ್ಟ ಬಂತ…ಅಲ್ಲಾ….ಹಂಗ ಒಂದ ವಾರದಿಂದ ಹಿಂತಾ ದಿವಸ ರಿಸಲ್ಟ ಬರ್ತದ ಅಂತ ಪೇಪರನಾಗ ಬರಲಿಕತ್ತಿತ್ತಲಾ ಆವಾಗಿಂದ ನನ್ನ ಹೆಂಡತಿ ಒಂದ ತುತ್ತ ಕಡಮಿನ ಉಣ್ಣಲಿಕತ್ತಿದ್ಲು. ಅಲ್ಲಾ ಹಂಗ ಅಕಿ ಪ್ರಕೃರ್ತಿಗೂ ಅದು ಛಲೋ ಬಿಡ್ರಿ. ನಾ ನಿಂದ ವೇಟ್ ಜಾಸ್ತಿ ಆಗೇದ ಡಯಟ್ ಮಾಡ ಅಂದರ
“ನಾ ದಪ್ಪಾದರ ನಿಂಬದೇನ ಗಂಟ ಹೋತ” ಅಂತ ಪಿಜ್ಜಾ ಹಟ ಗೇ ಫೋನ ಮಾಡಿ ರೆಗೂಲರ್ ಬದ್ಲಿ ಮಿಡಿಯಮ್ ಇರಲಿ ಅಂತ ಗಾರ್ಲಿಕ್ ಪಿಜ್ಜಾ ತರಿಸಿಗೊಂಡ ತಿನ್ನೋಕಿ ಇನ್ನ ಹಂತಾಕಿ ಮಗನ ರಿಸಲ್ಟ ಸಂಬಂಧ ಟೆನ್ಶನ್ ತೊಗೊಂಡಾಳ ಅಂತ ಕ್ಲೀಯರ್ ಆಗಿ ಗೊತ್ತಾಗತಿತ್ತ. ಹಂಗ ಅಕಿ ದಪ್ಪ ಆದರ ನಂದೇನ ಗಂಟ ಹೋಕ್ದದ ಅಂದ್ರು ಅಕಿ ಸಂಸಾರದ ಭಾರಾ ಹೊರೊಂವಾ ನಾನ ಅಲಾ.
ಹಂಗ ನಾ ನನ್ನ ಮಗನ ರಿಸಲ್ಟ ಬಗ್ಗೆ ಭಾಳ ತಲಿಗೆಡಸಿಗೊಂಡಿದ್ದಿಲ್ಲ ಖರೆ ಆದರೂ ರಿಸಲ್ಟ ಬರೋ ತನಕ ತಲ್ಯಾಗ ಕೊರಿತಿತ್ತ. ಕಡಿಕೆ ನಿನ್ನೆ ರಿಸಲ್ಟ ಬಂತು, ಮನ್ಯಾಗ ಇಂಟರ್ನೆಟ್ಟ, ಲ್ಯಾಪ್ ಟಾಪ್ ಎಲ್ಲಾ ಇದ್ದದ್ದಕ್ಕ ರಿಸಲ್ಟ ಹತ್ತ ನಿಮಿಷದಾಗ ಗೊತ್ತಾತ. ಅಂವಾ ಪಾಸ್ ಆಗಿದ್ದಾ, ಮ್ಯಾಲೆ ಫಸ್ಟಕ್ಲಾಸನಾಗ (೬೩.೩೬ % )
ಅವನವ್ವಾ, ನಮ್ಮವ್ವಾ ರಿಸಲ್ಟ್ ಪಾಸ ಅನ್ನೋದ ತಡಾ ಒಂದ ರೌಂಡ ಬಚ್ಚಲಕ್ಕ ಹೋಗಿ ಕೈಕಾಲ ತೊಳ್ಕೊಂಡ ಬಂದ ಬನಶಂಕರಿ ಫೋಟೊಕ್ಕ ಕೈಮುಗದ ಬಂದ ಆಮ್ಯಾಲೆ ಯಾವ್ಯಾವ ಸಬ್ಜೆಕ್ಟಗೆ ಎಷ್ಟೇಷ್ಟ ಮಾರ್ಕ್ಸ ಬಿದ್ದಾವ ಅಂತ ಕೇಳಿದ್ರು.
ಹಂಗ ನನ್ನ ಮಗಾ ಪಾಸ್ ಆಗಿದ್ದ ನನಗೇನ ಆಶ್ಚರ್ಯ ಆಗಲಿಲ್ಲಾ. ಅಲ್ಲಾ ನನಗೋತ್ತ ಇತ್ತಿತ್ತಲಾಗ sslc ಒಳಗ ಹಂಗ ಸರಳ ಬೋರ್ಡನವರ ಫೇಲ್ ಮಾಡಂಗಿಲ್ಲಾ ಅಂತ ಆದರ ಇಂವಾ ೬೩% ಪರ್ಸೇಂಟ್ ಮಾಡಿದ್ದ ಒಂದ ಸ್ವಲ್ಪ ಆಶ್ಚರ್ಯ ಆತ ಅನ್ನರಿ. ಅಲ್ಲಾ ಅದಕ್ಕ ಕಾರಣನೂ ಇತ್ತ. ಈ ನನ್ನ ಮಗಾ 9th ಕ್ಕ ಅರವತ್ತ ಪರ್ಸೆಂಟ್ ಮಾಡಿದ್ದಾ. ಅವಂದ ಹಳೇ ಮಾರ್ಕ್ಸ ಕಾರ್ಡ ಎಲ್ಲಾ ತಗದ ಯಾವದರ ಎರಡ ವರ್ಷದ ಮಾರ್ಕ್ಸ ಕೂಡಿಸಿದರು ಯಾವತ್ತೂ 90% ದಾಟಿಲ್ಲಾ, ಯಾವಾಗ ಅವಂದ ಕ್ಯಾಪ್ಯಾಸಿಟಿ ಇಷ್ಟ ಅಂತ ನನಗ ಗೊತ್ತಾತ ನಾ ಆವಾಗಿಂದ ಇಂವಾ ಅಭ್ಯಾಸದಾಗೂ ಅವರವ್ವನ ಹೋತಾನ ತೊಗೊ ಅಂತ ಅವನ ಬಗ್ಗೆ ತಲಿ ಕೆಡಸಿಗೊಳ್ಳೊದ ಬಿಟ್ಟ ಬಿಟ್ಟೆ.
“ಆತ ತೊಗೊ ನೀ ಹಿಂಗ ಆದರ sslc ಪಾಸ್ ಆದಂಗ” ಅಂತ ಆವಾಗ ನಾನೂ ಅಂದಿದ್ದೆ. ಹಿಂಗಾಗಿ ಇಂವಾ ಇವತ್ತ ಇಷ್ಟ ಪರ್ಸೆಂಟ್ ಮಾಡಿದ್ದ ಸ್ವಲ್ಪ ಆಶ್ಚರ್ಯನೂ ಆತ ಅನ್ನರಿ.
ಇನ್ನ ನನ್ನ ಮಗಾ ಯಾವಾಗ ಒಂಬತ್ತನೇತ್ತಾ ಪಾಸ್ ಆಗಿ ಹತ್ತನೇತ್ತಕ್ಕ ಬಂದನೋ ಆವಾಗ ಒಂದೊಂದ ಇಶ್ಯೂ ಶುರು ಆದ್ವು. ನಾ ಎಲ್ಲರ ರೊಕ್ಕಾ ಕೊಟ್ಟ ಛಲೋ ಟೂಶನಗೆ ಹಾಕೋಣ ಅಂದ್ರ ನನ್ನ ಮಗಾ
“ಬ್ಯಾಡ ಪಪ್ಪಾ, ಸುಳ್ಳ ಟೈಮ ವೇಸ್ಟ ಆಗ್ತದ, ನಾ ಮನ್ಯಾಗ tv ಮುಂದ ಒದತೇನಿ” ಅಂದಾ.
ನಮ್ಮವ್ವರ ನನ್ನ ಮಗಾ ಮ್ಯಾಟ್ರಿಕ್ ಬರೋದ ತಡಾ ಹೊಟಿಬ್ಯಾನ ಹಚಗೊಂಡ ಬಿಟ್ಟಿದ್ಲು. ಪಾಪ ಅಕಿಗೆ ತನ್ನ ಮಗಾ sslc ಇದ್ದಾಗ ತಾ ಕಷ್ಟ ಪಟ್ಟಿದ್ದ ನೆನಪಾತ ಕಾಣ್ತದ. ಅಲ್ಲಾ ಹಂಗ ಅಕಿ ಅಂತೂ ತನ್ನ ಮಗಂದ ಎಷ್ಟ ಜೀವಾ ತಿಂದಿದ್ಲು ಅಂದರ ಬ್ಯಾಡ ಅದ. ಹಂಗ ಆವಾಗ ಅಕಿ ಕಷ್ಟ ಪಟ್ಟಿದ್ದಕ್ಕ ಅಕಿ ಮಗಾ sslc ಒಳಗ just ಫಸ್ಟಕ್ಲಾಸ್ ಪಾಸ್ ಆಗಿ ಮುಂದ ಜೀವನದಾಗನೂ ಪಾಸ್ ಆಗಿದ್ದ ……ಅಲ್ಲಾ ನಾ ಹೇಳಲಿಕತ್ತಿದ್ದ ನನ್ನ ಬಗ್ಗೆನ ಮತ್ತ……ಇನ್ನ ನಮ್ಮವ್ವ ನನ್ನ ಮಗಗ ಹೇಳಿ ಕೊಡಬೇಕಂದರ ಅಂವಾ english ಮೀಡಿಯಮ್, ನಮ್ಮವ್ವಾ ಕನ್ನಡಾ ಮಿಡಿಯಮ್, ಅದರಾಗ ಆಗಿನ ಕಾಲದ syllabusಕ್ಕೂ ಈಗಿನ ಕಾಲದ syllabusಕ್ಕೂ ಅಜಗಜಾಂತರ. ಹಿಂಗಾಗಿ ನಮ್ಮವ್ವ ಮತ್ತ ನನ್ನ ಜೀವಾ ತಿನ್ನಲಿಕತ್ಲು.
“ನೋಡಿಲ್ಲೇ…ಪ್ರಥಮಂದ ಈ ವರ್ಷ ಮ್ಯಾಟ್ರಿಕ್, ಹಂಗ ಸಂಜೀಗೆ ಆಫೀಸ ಬಿಟ್ಟಮ್ಯಾಲೆ ಸೀದಾ ಮನಿಗೆ ಬಂದ ಮಗನ ಹಿಡಕೊಂಡ ಒಂದ್ಯಾರಡ ತಾಸ ಕೂಡ, ಅಂವಾ ಅವರವ್ವನ ಮಾತ ನನ್ನ ಮಾತ ಅಂತು ಕೇಳಂಗಿಲ್ಲಾ ನೀನ ಬರೋಬ್ಬರಿ ಅವಂಗ” ಅಂತ ನಂಗ ಬೆನ್ನ ಹತ್ತೋಕಿ. ನನಗರ ನಂದ ನನಗ ರಗಡ ಇನ್ನ ಹಂತಾದರಾಗ ಮಗನ ಎಲ್ಲೆ ಹಿಡಕೊಂಡ ಕೂಡೋದ ಅಂತ ನಾ ತಲಿಕೆಡಸಿಗೊಳ್ಳಲಿಕ್ಕೆ ಹೋಗಲಿಲ್ಲಾ.
ಅದರಾಗ ನಮ್ಮ ಬಂಧು ಬಳಗದವರೇಲ್ಲಾ “ಈ ವರ್ಷ ಮಗನ sslc, ಅಂವಾ ಹೆಂಗ ನಡಿಸ್ಯಾನ…ಏನರ ಹೇಳಿ ಕೊಡ್ತಿಯೋ ಏನ ನಂಗ ಟೈಮ ಇಲ್ಲಾ ಅಂತ ಬರೇ ಊರ ಹಿರೇತನ ಮಾಡ್ಕೋತ ಹೊಂಟಿಯೋ” ಅಂತ ಭೆಟ್ಟಿ ಆದಾಗೋಮ್ಮೆ ಕೇಳೆ ಕೇಳೋರ. ನಂಗ ಅಂತು ನಮ್ಮ ಮನಿ ಮಂದಿಕಿಂತಾ ಈ ಊರ ಮಂದಿ ಕಾಟನ ರಗಡ ಆಗಿತ್ತ. ಅಲ್ಲಾ ನನ್ನ ಮಗನ sslc ಬಗ್ಗೆ ತಲಿಕೆಡಸಿಕೊಂಡ ಇವರೇನ ಮಾಡೋರ ಅಂತ? ಹೋಗಲಿ ಬಿಡ್ರಿ ಈಗ ಯಾಕ ಆ ಮಾತ, ನನ್ನ ಮಗನ sslcನೂ ಮುಗಿತ, ರಿಸಲ್ಟ ಪಾಸನೂ ಆತ.
ಇವಂದ ರಿಸಲ್ಟ ಬಂದ ಇನ್ನೂ ಅರ್ಧಾ ತಾಸ ಆಗಿತ್ತ ಇಲ್ಲೋ ಮತ್ತ ಶುರು ಆತ ನೋಡ್ರಿ ಮತ್ತ ಊರ ಮಂದಿ ಉಸಾಬರಿ…
ಮೊದ್ಲ ನಮ್ಮ ತಂಗಿ ಫೋನ್, ಅಕಿಗೆ ಗ್ಯಾರಂಟಿ ಇತ್ತ ಕಾಣ್ತದ ಪ್ರಥಮ ಪಾಸ್ ಆಗ್ತಾನ ಅಂತ ಅಕಿ ಸೀದಾ
“ಎಷ್ಟ ಆತ ಪರ್ಸೆಂಟ್” ಅಂದ್ಲು, ಅಕಿಗೆ ಮಾರ್ಕ್ಸ ಶೀಟಿಂದ ಒಂದ ಸ್ಕ್ರೀನ್ ಶಾಟ್ ವಾಟ್ಸಪ್ ಮಾಡಿ ಕಡಿಕೆ ಅಕಿ ಕಡೆ
’ನೋಡ ಟೂಷನ್ ಇಲ್ಲದ ಫಸ್ಟ ಕ್ಲಾಸ್ ಮಾಡ್ಯಾನ, ನೀ ಒಂದ ಸ್ವಲ್ಪ ಅವನ ಬಗ್ಗೆ ಕಾಳಜಿ ತೊಗೊಂಡಿದ್ದರ ಇನ್ನೂ ಛಲೋ ಮಾಡ್ತಿತ್ತ ಹುಡುಗ’ಅಂತ ನಂಗ ತಿವದ ಫೋನ ಇಟ್ಟಳು….
ಮುಂದ ನಮ್ಮ ಮಾವನ ಫೋನ, ಅವರಂತು ಪಾಪ ಮೊಮ್ಮಗನ sslc ರಿಸಲ್ಟ ಸಂಬಂಧ ಮನಸಿಗೆ ಹಚಗೊಂಡ ಬಿಟ್ಟಿದ್ರು..ಅದರಾಗ ಇಂವಾ ಅವರ ಪ್ರೀತಿ ಮೊಮ್ಮಗ ಬ್ಯಾರೆ, ಎಲ್ಲೇ ಮೊಮ್ಮಗ ಪರ್ಸೆಂಟ್ ಕಡಮಿ ಮಾಡ್ತಾನ ನಾ ಎಲ್ಲೇ ’ನಿಮ್ಮ ಮೊಮ್ಮಗಾ ಎಲ್ಲಾ ನಿಮ್ಮ ಮಗಳನ ಹೋತಾನ…’ ಅಂತ ಅಂತೇನಿ ಅಂತ ತಲಿ ಕೆಡಸಿಕೊಂಡಿದ್ದರು ಹಿಂಗಾಗಿ ಇಂವಾ ಫಸ್ಟ ಕ್ಲಾಸ್ ಮಾಡ್ಯಾನ ಅಂದ ಕೂಡಲೇ ಅಗದಿ ಖುಷ್ ಆಗಿಬಿಟ್ಟರು. ಪಾಪ ಅವರಿಗೇನ ಗೊತ್ತ ಇಷ್ಟ ಪರ್ಸೆಂಟ್ ಈಗಿನ ಕಾಲದಾಗ ಎತ್ತಲಾಗೂ ಹತ್ತಂಗಿಲ್ಲಾ, ನಾಳೆ ಸೈನ್ಸ ಅಡ್ಮಿಶನ್ ಮಾಡಸಬೇಕಂದರ ಲಕ್ಷಗಟ್ಟಲೇ ರೊಕ್ಕಾ ಕೊಡಬೇಕ, ಅಳಿಯಾ ನಾಳೆ ಬಂದ ರೊಕ್ಕಾ ಕೇಳಿದರು ಕೇಳಬಹುದು ಅಂತ.
ಮುಂದ ಹಿಂಗ ಒಬ್ಬೊಬ್ಬರ ಶುರು ಹಚಗೊಂಡರು, ನನ್ನ ಹೆಂಡತಿ ಅಂತೂ ತನ್ನ ಫೋನ ತೊಗೊಂಡ ತಮ್ಮ ತವರಮನಿಯವರಿಗೆಲ್ಲಾ ಫೋನ ಮಾಡಿದ್ದ ಮಾಡಿದ್ದ. ಅಕಿಗೆ ತಾ sslc ಪಾಸ್ ಆದಾಗರ ಇಷ್ಟ ಖುಷಿ ಆಗಿತ್ತೊ ಇಲ್ಲೊ ಆ ದೇವರಿಗೆ ಗೊತ್ತ. ಏನ ಅಗದಿ ಮಗಗ ಕನ್ಯಾ ಗೊತ್ತಾಗಿ ಒಂದ ಹತ್ತ ತೊಲಿ ಬಂಗಾರ, ಒಂದ ಪ್ಲಾಟ್, ಐದ ಲಕ್ಷ ವರದಕ್ಷಣಿ ಸಿಕ್ಕೊರಂಗ ಎಲ್ಲಾರಿಗೂ ಹೇಳಿದ್ದ ಹೇಳಿದ್ದ. ಬಹುಶಃ ಇತಿಹಾಸದಾಗ ಅವರ ಪೈಕಿ sslc ಒಳಗ first class ಯಾರೂ ಪಾಸ್ ಆಗಿದ್ದೇಲ ಕಾಣ್ತದ ಹಿಂಗಾಗಿ ಅವರೇಲ್ಲಾ ಖುಷ್ ಆದರು.
ಇನ್ನ ನಮ್ಮ ಕಡೆದವರಿಗೆ ನಾ ಏನ ಫೋನ ಮಾಡಲಿಕ್ಕೆ ಹೋಗಲಿಲ್ಲಾ, ಯಾಕಂದರ ನಾ ಒಂದ ದಿವಸ ಮೊದ್ಲ ನನ್ನ ಮಗನ ರೆಜಿಸ್ಟ್ರೇಶನ್ ನಂ ಫೇಸಬುಕ್ಕಿನಾಗ ಹಾಕಿ ಬಿಟ್ಟಿದ್ದೆ, ಯಾರಿಗೆ ಇಂಟರೆಸ್ಟ ಅದ ನನ್ನ ಮಗನ ರಿಸಲ್ಟ ಬಗ್ಗೆ ಅವರ ನೀವ ನೋಡ್ಕೋರಿ ಅಂತ. ಆದರೂ ಒಬ್ಬೊಬ್ಬರ ಫೋನ್ ಮಾಡಿ ರಿಪೋರ್ಟ್ ತೊಗೊಳಿಕತ್ರು…
“ಯೇ..ಅಡ್ಡಿಯಿಲ್ಲಾ ಫಸ್ಟಕ್ಲಾಸ್ ಮಾಡ್ಯಾನ ತೊಗೊ……ನೀ ಪಾಸ್ ಆಗ್ತಾನೋ ಇಲ್ಲೋ ಅಂತಿದ್ದಿ” ಅಂತ ಒಬ್ಬರು…
“ಏ..ಸಾಕ್ ತೊಗೊ…ನಿನ್ನಕಿಂತ ಜಾಸ್ತಿ ಮಾಡ್ಯಾನ ಇಲ್ಲ..ಹೋಗಲಿ ಬಿಡ” ಅಂತ ಮತ್ತೊಬ್ಬರು…
“೬೩%…ಯಾಕ? ಭಾಳ ಕಡಮಿ ಆತಲೋ? ಮುಂದ ಹೆಂಗ….ಛಲೋ ಕಾಲೇಜಿಗೆ ಡೊನೇಶನ್ ಇಲ್ಲದ ಹಾಕಬೇಕಂದರ ಒಂದ ೯೩ %ರ ಆಗಬೇಕಿತ್ತ ಬಿಡಪಾ” ಅಂತ ನಮ್ಮ ಕಾಕಾ…
“ನೋಡ…ನಾವೇಲ್ಲಾ ಎಷ್ಟ ಬಡ್ಕೊಂಡ್ವಿ ಇರೊಂವ ಒಬ್ಬ ಖಾಸ ಮಗಾ ಒಂದ ಸ್ವಲ್ಪ ಕಾಳಜಿ ತೊಗೊಂಡ ಮನ್ಯಾಗ ಅಭ್ಯಾಸ ಹೇಳಿ ಕೊಡ ಅಂತ, ಒಬ್ಬರದರ ಮಾತ ಕೇಳಿದಿನ ನೀ?”…ನಮ್ಮ ಅತ್ಯಾ
“ನಿನ್ನ ಮಗಾ, ಅದು ಬರೇ ೬೩% ಅಂದರ…. ಭಾಳ ಕಡಮಿ ಆತಲೋ…ಯಾಕ ಸರಿ ಓದತಿದ್ದಿಲ್ಲೇನ್?” ಅಂತ ನಮ್ಮ ಮೌಶಿ…
ನಂಗ ತಲಿ ಕೆಟ್ಟ ಹೋಗಿತ್ತ..ಹಿಂಗ ಒಬ್ಬೊಬ್ಬರಿಗೆ ರಿಸಲ್ಟ ಹೇಳೋದರಾಗ ನಮ್ಮ ಮಾಮಿವೂ ಮೂರ ಮಿಸ್ ಕಾಲ್ ಇದ್ವು, ಅಕಿ ಅಂತೂ ಟೀಚರ್ ಬ್ಯಾರೆ, MA, B.Ed ಪ್ರತಿಯೊಬ್ಬರ ಮಾರ್ಕ್ಸ ಕಾರ್ಡ ಪೋಸ್ಟ ಮಾರ್ಟಮ್ ಮಾಡೋ ಚಟಾ..ಹಂತಾಕಿ ಇನ್ನ ನನ್ನ ಮಗಂದ ಬಿಟ್ಟಾಳ…. ನಾ ವಾಪಸ್ಸ ಫೋನ್ ಮಾಡೋ ಪುರಸತ್ತ್ ಇಲ್ಲದ
’ಅಲ್ಲೋ.. ಸೈನ್ಸ್ ಭಾಳ ಕಡಮಿ ಆತಲಾ, ಇಂಗ್ಲೀಷ ಅಂತೂ ಅಷ್ಟ ಬಿದ್ದದ್ದ ರಗಡ ಆತ ಬಿಡ, ಅವನ ಇಂಗ್ಲೀಷ ಅಷ್ಟಕ್ಕಷ್ಟ ಇತ್ತ…ಇದ್ದದ್ದರಾಗ ಕನ್ನಡಾ ಅಡ್ಡಿಯಿಲ್ಲ ನೋಡ’ ಅಂತ ಒಂದ ಅರ್ಧಾ ತಾಸ ಇವತ್ತ ಬಿದ್ದ ಮಾರ್ಕ್ಸ ಬಗ್ಗೆ ಮುಂದ ಅಂವಾ ಸೈನ್ಸ ಹಚ್ಚಿದರ ಬಿಳೋ ಮಾರ್ಕ್ಸ ಬಗ್ಗೆ ತಲಿ ತಿಂದ ಇಟ್ಟಳು.
ಹಂಗ ಇಕಿ ನಾ ಕಲಿಬೇಕಾರದಿಂದ ಈ ವಿಷಯದಾಗ ತಲಿ ತಿನ್ನಲಿಕತ್ತಾಳ ಬಿಡ್ರಿ, ನಾ ಡಿಗ್ರಿ ಫೈನಲ್ ಇಯರದಾಗ chemistry ಒಳಗ ಯುನಿವರ್ಸಿಟಿಗೆ ಥರ್ಡ್, ಕಾಲೇಜಿಗೆ ಫಸ್ಟ ಬಂದರು, ನಿನ್ನ ಕೆಮಿಸ್ಟ್ರಿ ವೀಕ್ ಅದ ಅಂತ ಹೇಳಿದ್ಲು..ನಾ ಮುಂದ ದೊಡ್ಡಂವಾಗಿ ಹದಿನೈದ ವರ್ಷದಾಗ ಕರೆಕ್ಟ ಒಂದ ಗಂಡ ಒಂದ ಹೆಣ್ಣ ಹಡದ ನನ್ನ ಕೆಮಿಸ್ಟ್ರಿ ಕರೆಕ್ಟ ಅದ ಅಂತ ಪ್ರೂವ್ ಮಾಡಿದೆ ಆ ಮಾತ ಬ್ಯಾರೆ.
ಅಲ್ಲಾ ಹಂಗ ಮಂದಿಗೆ ನಾವ ಎಷ್ಟ ಮಾಡಿದರು ಸಮಾಧಾನ ಇರಂಗಿಲ್ಲ ಬಿಡ್ರಿ. ನಾ ಇಕಿಗೆ ಫೊನ ಮಾಡಿದರ ಇಕಿ ಹಿಂಗ ತಲಿ ತಿಂತಾಳ ಅಂತ ಹೇಳಿನ ಇಕಿಗೆ ಮೊದ್ಲ ಫೋನ ಮಾಡಿದ್ದಿಲ್ಲಾ, ಇಕಿಗೆ ನಮ್ಮ ಇನ್ನೊಬ್ಬ ಮಾಮಿ ನನ್ನ ಮಗನ ರಿಸಲ್ಟ ತಿಳ್ಕೊಂಡ ಫೊನ್ ಮಾಡಿ
“ಅಂತು ಇಂತೂ ಪ್ರಶಾಂತನ ಮಗಾ ಪಾಸ್ ಆದಾ” ಅಂತ ಹೇಳಿದ್ಲಂತ, ಇಕಿಗೆ ಆವಾಗ ನನ್ನ ಮಗನ ರಿಸಲ್ಟ ಗೊತ್ತಾಗಿ ನಂಗ ಫೋನ ಹಚ್ಚಿ ಇಷ್ಟ ಕೊರದಿದ್ಲ.
ನನಗ ಹಿಂಗ ’ಅಂತೂ ಇಂತೂ ಪ್ರಶಾಂತನ ಮಗಾ ಪಾಸ್ ಆದಾ’ ಅಂತ ಜನಾ ಅಂದಾರ ಅಂದ ಕೂಡಲೇ ಕೆಟ್ಟ ಅನಸ್ತ ಖರೆ ಆದರ ಅವರ ಹೇಳೋದ ಖರೆ ಇತ್ತ ಅಂತ ಸುಮ್ಮನಾದೆ. ಯಾಕಂದರ ನನ್ನ ಮಗಾ ಎಷ್ಟ ಓದಿದ್ದಾ, ಅಂವಾ ಹಿಂದ ಎಷ್ಟ ಪರ್ಸೆಂಟ್ ಮಾಡಿದ್ದಾ, ಅಂವಾ ಎಷ್ಟ exam ಬಗ್ಗೆ ಸಿರಿಯಸ್ ಇದ್ದಾ, ಇವನೇಲ್ಲಾ ನೋಡಿದ್ರ ನಂಗು ’ಅಂತು ಇಂತೂ ನನ್ನ ಮಗಾ ಪಾಸ್ ಆದಾ’ ಅಂತನ ಅನಸ್ತದ….ಇರಲಿ..ಅಂವಾ ಪಾಸ್ ಆಗ್ಯಾನ…ಮ್ಯಾಲೆ ೬೩% ಪರ್ಸೆಂಟ್ ಬ್ಯಾರೆ ಮಾಡ್ಯಾನ್…ಇನ್ನೇನ ಇದ್ದರು ಮುಂದಿಂದ ವಿಚಾರ ಮಾಡೋದು…
ಇನ್ನೇನ ಫೋನ ಬರೋವು ಮಾಡೋವು ಮುಗದ್ವು ಅನ್ನೋದರಾಗ ಮತ್ತೊಂದ ಫೋನ ಬಂತ, ಬೆಂಗಳೂರಿಂದ ನಮ್ಮ ದೋಸ್ತ ಅನಂತಂದ ಅಂವಾ ಮಾತ್ರ ಫೋನ ಎತ್ತೊ ಪುರಸತ್ತ ಇಲ್ಲದ ನನ್ನ ಮಗನ ರಿಸಲ್ಟ ಕೇಳಲಿಲ್ಲಾ…ಯಾಕಂದರ ಅಂವಾ ತನ್ನ ಮಗನ ರಿಸಲ್ಟ ಹೇಳಲಿಕ್ಕೆ ಫೋನ್ ಮಾಡಿದ್ದಾ. ಅವನ ಮಗಾನೂ sslc, ಅವನ ಲೆವೆಲ್ ನಮ್ಮ ಪ್ರಥಮನ ಲೆವೆಲ್ ಇಬ್ಬರದು ಸೇಮ್..ಹಿಂಗಾಗಿ ನಾವಿಬ್ಬರು ಆವಾಗ ಇವಾಗ ಟೈಮ ಸಿಕ್ಕರ, ಮಕ್ಕಳ ಬಗ್ಗೆ ನೆನಪಾದರ ’ನಿನ್ನ ಮಗಾ ಹೆಂಗ ನಡಸ್ಯಾನ’ ಅಂತ ಏನ ಅಗದಿ responsible fathers ಗತೆ ಮಕ್ಕಳ ಭವಿಷ್ಯದ ಬಗ್ಗೆ ಡಿಸ್ಕಸ್ ಮಾಡ್ತಿದ್ದವಿ. ಹಿಂಗಾಗಿ ಅವನೂ ತನ್ನ ಮಗಾ ಪಾಸ್ ಆಗಿದ್ದಕ್ಕ ಭಾಳ ಖುಷ್ ಆಗಿ ’ನನ್ನ ಮಗಾ ಪಾಸ್ ಆದಾ, ಅದು ಫಸ್ಟಕ್ಲಾಸನಾಗ’ ಅಂತ ಫೋನ್ ಮಾಡಿ ಹೇಳಿದಾ. ನಾ ಖರೆ ಹೇಳ್ತೇನಿ ಅಂವಾ ಇಷ್ಟ ಅವನ ಮಗಾ ಪಾಸ್ ಆಗಿದ್ದಕ್ಕ ಖುಷ ಆಗಿದ್ದನಲಾ ಅವಂಗ ನನ್ನ ಮಗಾನೂ sslc, ನನ್ನ ಮಗಂದೂ ಇವತ್ತ result ಬಂದದ, at least courtesyಗರ ನನ್ನ ಮಗನ ರಿಸಲ್ಟ ಕೇಳಬೇಕು ಅನ್ನೋ ಖಬರ ಸಹಿತ ಇರಲಿಲ್ಲಾ. ಹೋಗ್ಲಿ ಬಿಡ್ರಿ ’ನನ್ನ ಮಗಾ ಪಾಸ್ ಆದ್ನಿಲ್ಲೋ…ಊರ ಮಂದಿ ಮಕ್ಕಳದ ತೊಗೊಂಡ ಏನ ಮಾಡ್ಬೇಕ’ ಅನ್ಕೊಂಡಿರಬೇಕ ಅಂವಾ. ಅಲ್ಲಾ ಅದರಾಗ ತಪ್ಪು ಇಲ್ಲ ಬಿಡ್ರಿ.
ನಾ ನಮ್ಮವ್ವಗ ಅನಂತನ ಮಗಾ ಪಾಸ್ ಆದಾ ಅಂದರ ನಮ್ಮವ್ವ ಏನ ಅನಬೇಕ ಹೇಳ್ರಿ
“ಅಂತೂ ಇಂತೂ ಅಂತೂನ ಮಗಾ ಪಾಸ್ ಆದಾ” ಅನ್ನಬೇಕ…..ಅಲ್ಲಾ ಆ ಹುಡಗ ಅಷ್ಟ ಕಷ್ಟ ಪಟ್ಟ ಓದೇದ, ಅವರವ್ವ-ಅಪ್ಪಾ ಎಷ್ಟ ಕಷ್ಟ ಪಟ್ಟಾರ, ಅವನ ಅಜ್ಜಾ – ಅಜ್ಜಿಗೆ ಎಷ್ಟ ದೇವರಿಗೆ ಹರಕಿ ಹೊತ್ತಾರ…ಹಂ…ಇಷ್ಟೇಲ್ಲಾ ಮಾಡಿ ಆ ಹುಡಗ ಪಾಸ್ ಆದರ ನಮ್ಮವ್ವನಂಥಾವರ ಹಿಂಗ ಮಾತಾಡ್ತಾರ. ಏನ ಮಾಡ್ತೀರಿ ಹಿಂತಾ ಜನಕ್ಕ. ಅಲ್ಲಾ, ನಾ ಮನ್ಯಾಗ ನಮ್ಮವ್ವನ್ನ ಇಟಗೊಂಡ ನಾ ಊರ ಮಂದಿ ಬಗ್ಗೆ ಬರದೇನಿ… ಎಲ್ಲಾರೂ ಅವರ.
ಆದರ ನಾ ಒಂದ ಮಾತ ಸಿರಿಯಸ್ ಆಗಿ ಹೇಳ್ತೇನಿ…ಈ ಮಂದಿ ಯಾರ ಮಕ್ಕಳ ಎಷ್ಟ ಪರ್ಸೆಂಟ್ ಮಾಡಿದರು, ಅಷ್ಟs ಯಾಕ ಮಾಡಿದರು, ಅವರ ಮುಂದ ಏನ ಮಾಡ್ತಾರಂತ ಅಂತೇಲ್ಲಾ ಊರ ಉಸಾಬರಿ ಮಾಡೋದ ಬಿಡಬೇಕ, ಅದೇನೋ ಅಂತಾರಲಾ ಊರ ಚಿಂತಿ ಮಾಡಿ ಮುಲ್ಲಾ ಸೊರಗಿದ್ನಂತ…ಹಂಗ ನಮ್ಮದ ಎಷ್ಟ ಅಷ್ಟ ನೋಡ್ಕೊಂಡ ಇರೋದ ಬಿಟ್ಟ ಬರೇ ಹಿರೇತನಾ ಮಾಡೋರ ಭಾಳ ಇದ್ದಾರ.
ಅನ್ನಂಗ ಈ ನನ್ನ ಮಗನ % ವಿಚಾರದಾಗ ಇನ್ನೊಂದ ವಿಷಯ ಹೇಳೊದ ಮರತೆ, ನಾಳೆ ಹನ್ನೇರಡನೇ ತಾರೀಖಿಗೆ ಇಲೇಕ್ಷನ್ ಅದರಿಪಾ..ನೀವೇಲ್ಲಾ ಓಟ್ ಹಾಕಿ ನಮ್ಮ ರಾಜ್ಯದ್ದ voting % ನನ್ನ ಮಗನ sslc % ಕಿಂತಾ ಜಾಸ್ತಿ ಮಾಡ್ರಿ ಮತ್ತ.