ನಾ ಸಣ್ಣಂವಾ ಇದ್ದಾಗಿಂದ ’ಬುದ್ದಿ ಎಲ್ಲೆ ಇಟ್ಟಿ, ಏಪ್ರಿಲ್ ಫೂಲ್ ಇದ್ದಂಗ ಇದ್ದಿ ನೋಡ ಮಗನ’…ಅಂತ ಒಬ್ಬರಿಲ್ಲಾ ಒಬ್ಬರಕಡೆ ಅನಿಸ್ಗೊಂಡಿದ್ದಕ್ಕ ಲೆಕ್ಕ ಇಲ್ಲಾ. ಒಂದ ಮನ್ಯಾಗ ನಮ್ಮವ್ವನ ಕಡೆಯಿಂದ ಸ್ಟಾರ್ಟ ಆಗಿದ್ದ ಮುಂದ ಸಾಲ್ಯಾಗ ಮಾಸ್ತರ, ಕಾಲೇಜನಾಗ ಪ್ರೊಫೆಸರ ರಿಂದ ಹಿಡದ ದೋಸ್ತರಿಂದ ಹಿಡದ ಮುಂದ ಲಗ್ನಾ ಮಾಡ್ಕೊಂಡ ಮ್ಯಾಲೆ ಹೆಂಡ್ತಿ ತನಕಾ ಎಲ್ಲಾರ ಕಡೆ ಅನಿಸ್ಗೊಳೊ ಪ್ರಸಂಗ ಬಂದದ ಅಂದರು ತಪ್ಪಿಲ್ಲ. ಹೆಂಡ್ತಿ ’ಬುದ್ದಿ ಎಲ್ಲೆ ಇಟ್ಟೀರಿ’ ಅಂತ ಒಂದ ರ್ರೀ…extra ಹಚ್ಚತಾಳ ಅನ್ನೋದ ಬಿಟ್ಟರ ಎಲ್ಲಾದರ meaning ಒಂದ ’ಬುದ್ದಿ ಎಲ್ಲೆ ಇಟ್ಟಿ…ಏಪ್ರೀಲ್ ಫೂಲ್ ಇದ್ದಂಗ ಇದ್ದಿ’ ಅನ್ನೋದ.
ಸಣ್ಣ ಹುಡಗ ಇದ್ದಾಗ ಏನ ತಪ್ಪ ಕೆಲಸಾ ಮಾಡಿದರು ನಮ್ಮವ್ವ ಮಾತ ಮಾತಿಗೆ ’ಬುದ್ದಿ ಎಲ್ಲೆ ಇಟ್ಟಿ’ ಅಂತ ಅನ್ನೋಕಿ. ಅಕಿಗೆ ನಾ ಶಾಣ್ಯಾತನದ ಏನ ಕೆಲಸಾ ಮಾಡಿದರು ಕಣ್ಣಿಗೆ ಕಾಣ್ತಿದ್ದಿಲ್ಲರಿ, ಬರೇ ತಪ್ಪ ಇಷ್ಟ ಹುಡಕಿ ಬೈಯೋಕಿ. ಮತ್ತ ಏನರ ಅಕಿಗೆ ತಿರಗಿ ಉತ್ತರ ಕೊಟ್ಟರಿಲ್ಲೊ ಮತ್ತ ’ಬುದ್ದಿ ಎಲ್ಲಿ ಇಟ್ಟಿ..ದೊಡ್ಡೊರಿಗೆ ತಿರಗಿ-ತಿರಗಿ ಮಾತಾಡ್ತಿ’ ಅಂತ ಬೈಯೋಕಿ.
ಇನ್ನ ಕನ್ನಡ ಸಾಲ್ಯಾಗ ಮಾಸ್ತರು ಹಂಗ ಇದ್ದರ ಅವರ ಬೈಗಳಂತು ಮನಿ ಮಂದಿಕಿಂತ ಒಂದ ಗುಂಜಿ ಜಾಸ್ತಿ ಇದ್ದವು. ಹಂಗ ನಾ ಒಂದಿಷ್ಟ ಬೈಗಳಾ ಕಲತದ್ದ ಘಂಟಿಕೇರಿ ಕನ್ನಡ ಸಾಲಿ ಮಾಸ್ತರ ಕಡೆಯಿಂದ ಬೈಸ್ಗೊಂಡ ಬೈಸ್ಗೊಂಡ ಅನ್ನರಿ. ’ಹದಿನಾರ ಆರಲೇ’ ಅಂತ ಅವರ ಕೇಳಿದಾಗ ಒಂದ ಚೂರ ಹೇಳೊದ ಲೇಟ್ ಆದರ ಸಾಕ ’ಬುದ್ದಿ ಎಲ್ಲೆ ಇಟ್ಟ ಬಂದಿ ಮಗನ, ಮ್ಯಾಲೆ ತುಪ್ಪಾ ತಿಂದ ತಲಿ ಅಂತಿ…ಏಪ್ರಿಲ್ ಫೂಲ್ ಇದ್ದಂಗ ಇದ್ದಿ’ ಅಂತ ಬೈತಿದ್ದರು. ನಮಗ ಹದಿನಾರ ಆರಲೇ ಅಂತ ಅವರ ಕೇಳಿದಾಗ ಮನಸ್ಸಿನಾಗ ಹದಿನಾರ ಒಂದಲೇ ಹದಿನಾರ…ಹದಿನಾರ ಎರಡಲೇ ಮೂವತ್ತ್ಯಾರಡೊ ದಿಂದ ಶುರು ಮಾಡಿ ಹದಿನಾರ ಆರಲೇ ಬರೋ ತನಕಾನೂ ಮಾಸ್ತರಿಗೆ ಪುರಸತ್ತ ಇರತಿದ್ದಿಲ್ಲಾ. ಮುಂದ ಕಾಲೇಜನಾಗ ಪ್ರೊಫೆಸರ್ ಕಡೆ, ದೋಸ್ತರ ನಡಕ ಅನ್ನೋದ – ಅನಿಸ್ಗೊಳ್ಳೊದ ಕಾಮನ್ ಇರ್ತಿತ್ತ.
ಒಂದ ಸರತೆ ನಮ್ಮ ದೋಸ್ತ ಸಿಂಗ್ ಸೆಕೆಂಡ್ ಹ್ಯಾಂಡ್ ಕಾರ್ ನೋಡ್ಲಿಕತ್ತಿದ್ದಾ, ನಮ್ಮಪ್ಪನ ಫ್ರೇಂಡ್ ಒಬ್ಬರದ ಒಂದ ಕಾರ ಕೊಡೊದ ಅಂತ ನಾ ಅವಂಗ ಸಹಜ ಅನ್ನೊದಕ್ಕ ಅಂವಾ ’ಏ..ಈಗ ಇಮ್ಮಿಡಿಯೇಟ್ ನಿಮ್ಮಪ್ಪಗ ಕೇಳ’ ಅಂತ ನಾವ ಎಲ್ಲೆ ಇದ್ದವಿ ಅಲ್ಲಿಂದ PCUದಿಂದ ನಮ್ಮ ಮನಿಗೆ ಫೋನ ಹಚ್ಚಿಸಿಸಿದಾ. ನಾ ನಮ್ಮಪ್ಪಗ ಕೇಳಿದೆ ಅಂವಾ ’ಆತ ತೊಗೊ ನಾಳೆ ನಮ್ಮ ದೋಸ್ತಗ ಕೇಳಿ ಹೇಳ್ತೇನಿ’ ಅಂತ ಅಂದಾ. ನಾ ಫೋನ್ ಇಡಬೇಕಾರ ’ಆತ ನೆನಪಲೇ ಕೇಳಿ ಇಟ್ಗೊ ಅಪ್ಪಾ, ನಾ ನಾಳೆ ಮತ್ತ ಫೋನ್ ಮಾಡ್ತೇನಿ’ ಅಂತ ಫೋನ್ ಇಟ್ಟೆ. ಅಲ್ಲೇ ಬಾಜು ಇದ್ದ ದೋಸ್ತ
’ಲೇ ಹಾಫ್ ನನ್ನ ಮಗನ..ಬುದ್ಧಿ ಎಲ್ಲೇ ಇಟ್ಟಿ. ನೀ, ನಿಮ್ಮಪ್ಪನ ಮನ್ಯಾಗ ಇರಂಗಿಲ್ಲೋ ಇಲ್ಲಾ ನಿಮ್ಮಪ್ಪ ನಿಮ್ಮ ಮನ್ಯಾಗ ಇರಂಗಿಲ್ಲೋ…ನಾಳೆ ಮತ್ತ ನಿಮ್ಮಪ್ಪಗ ಯಾಕ ಫೋನ್ ಮಾಡಿ ಕೇಳ್ತಿ, ಮನಿಗೆ ಬಂದ ಮ್ಯಾಲೆ ನಿಮ್ಮಪ್ಪಗ ಕೇಳಿ ನನಗ ಫೋನ್ ಮಾಡಿ ಹೇಳಲೇ…..’ ಅಂದಾ.
ಏನ್ಮಾಡ್ತೀರಿ, ನಾ ನಮ್ಮಪ್ಪನ ಜೊತಿ ಮಾತಾಡ್ಬೇಕಾರ ನಾ ಅವನ ಮನ್ಯಾಗ ಇರ್ತೇನಿ, ಅಂವಾ ನಂಗ ದಿವಸಾ ಭೇಟ್ಟಿ ಆಗೆ ಆಗ್ತಾನ ಅನ್ನೋದ ತಲ್ಯಾಗ ಹೊಳದಿದ್ದಿಲ್ಲಾ, ನಮ್ಮ ದೋಸ್ತ ನಾಳೆ ಫೋನ್ ಮಾಡಿ ಹೇಳ ಅಂದಿದ್ದಕ್ಕ ನಾ ನಮ್ಮಪ್ಪಗೂ ನಾಳೆ ನಾ ಫೋನ್ ಮಾಡ್ತೇನಿ ಅಂತ ಅಂದಿದ್ದೆ.
ಒಮ್ಮೆ ನಮ್ಮ ದೋಸ್ತ ಶಾಸ್ತ್ರಿಮಠನ ಅಪ್ಪಾರ ತಿರ್ಕೊಂಡಿದ್ದರ. ಮರದಿವಸ ನಾವ ನಾಲ್ಕ ಮಂದಿ ದೋಸ್ತರ ಸೇರಿ ಮಾತಾಡಸಲಿಕ್ಕೆ ಹೋಗಿದ್ವಿ, ಪಾಪ ಅವರ ಮನ್ಯಾಗ ಕರ್ಟಸಿಗೆ ಚಹಾ ಮಾಡ್ತೇವಿ ಅಂತ ಅಂದರ. ಅದರಾಗ ಎಲ್ಲಾರೂ ಚಹಾ ಕುಡಿತಿದ್ದರ ನಾ ಒಬ್ಬೊಂವ ಕುಡಿತಿದ್ದಿಲ್ಲಾ, ನಾ ಚಹಾ ಅಸಿಡಿಟಿ ಆಗ್ತದ ಅಂತ ಹೋದಲ್ಲೆ-ಬಂದಲ್ಲೆ ಹಾಲ ಕುಡಿತಿದ್ದೆ. ನಾ ಗಬಕ್ಕನ
’ಏ..ನಾ ಚಹಾ ಕುಡಿಯಂಗಿಲ್ಲಾ…..ಹಾಲ ಕೊಡ್ರಿ’ ಅಂದ ಬಿಟ್ಟೆ. ಪಾಪ ಅವರ ಎಲ್ಲಾರಿಗೂ ಚಹಾ ಮಾಡಿ ನಾ ಬಾಯಿ ಬಿಟ್ಟ ಹಾಲ ಕೇಳಿದ್ದಕ್ಕ ನಂಗೊಬ್ಬವಂಗ ಹಾಲ ಕೊಟ್ಟರ. ನಾ ಹೊರಗ ಬರೋ ಪುರಸತ್ತ ಇಲ್ಲದ ನಮ್ಮ ದೋಸ್ತರ ಎಲ್ಲಾ ಸೇರಿ
’ಏ..ಸತ್ತೋರ ಮನಿಗೆ ಮಾತಾಡಸಲಿಕ್ಕೆ ಹೋದಾಗ ಸಹಿತ ಹಾಲ ಕೇಳ್ತಿ ಅಲ್ಲಲೇ…ಬುದ್ದಿ ಎಲ್ಲೆ ಇಟ್ಟಿ ಮಗನ ಅಂತ ಬೈಸ್ಗೊಂಡಿದ್ದೆ.
ಹಿಂಗ ಒಮ್ಮೊಮ್ಮೆ ನಾವ ಬುದ್ದಿ ಇಲ್ಲದೊರಂಗ ಮಾಡ್ತಿರ್ತೆವಿ. ಇದ ಒಂಥರಾ ನಮ್ಮಷ್ಟಕ್ಕ ನಾವ ಏಪ್ರಿಲ್ ಫೂಲ್ ಮಾಡ್ಕೊಂಡಂಗ ಅನ್ನರಿ.
ಇನ್ನೊಮ್ಮೆ ನಮ್ಮ ಸೀನ್ಯಾನ ಜೊತಿ ಒಂದ ಫಂಕ್ಶನಗೆ ಅವನ ಕಾರನಾಗ ಹೋಗಿದ್ದೆ, ಅಂವಾ ವಾಪಸ ಬರತ ನಮ್ಮನಿ ಕ್ರಾಸ್ ಕಡೆ ನನಗ ಬಿಟ್ಟ ಹೋದಾ. ನಾ ಮುಂದ ಹತ್ತ ಹೆಜ್ಜಿ ನಡ್ಕೊಂಡ ಬರೋದರಾಗ ಮ್ಯಾಲಿನ ಕಿಸೇದಾಗ ನೋಡ್ತೇನಿ ಮೋಬೈಲ ಇದ್ದಿದ್ದಿಲ್ಲಾ. ಅಯ್ಯೋ ಮೋಬೈಲ ಕಾರನಾಗ ಬಿಟ್ಟ ಬಂದೆ ಅಲಾ ಅಂತ ಇಮ್ಮಿಡಿಯೇಟ್ ಅವಂಗ ಫೋನ್ ಹೊಡದೆ ’ದೋಸ್ತ ಭಾಳ ದೂರ ಹೋಗಿ ಏನ, ನನ್ನ ಮೋಬೈಲ್ ನಿನ್ನ ಕಾರನಾಗ ಬಿಟ್ಟೇನಿ’ ಅಂದೆ. ಅಂವಾ ಕಾರ ನಿಲ್ಲಿಸಿ ಹಿಂದಿನ ಸೀಟ ಮ್ಯಾಲೆ, ಬುಡಕ ಎಲ್ಲಾ ಹುಡಕ್ಯಾಡಿ ’ಕಾರನಾಗ ಇಲ್ಲಲೇ …ನೀ ಬ್ಯಾರೆಕಡೆ ಎಲ್ಲೇರ ಬಿಟ್ಟಿರ ಬೇಕ ನೋಡ’ ಅಂದಾ. ನಂಗ ಅಷ್ಟರಾಗ ನನ್ನ ಶಾಣ್ಯಾತನ ರಿಯಲೈಜ್ ಆಗಿತ್ತ. ಇರಲಿ ತೊಗೊ ದೋಸ್ತ ಅಂದ ಫೋನ್ ಇಟ್ಟೆ.
ಅಲ್ಲಾ ಕೈಯಾಗ ಮೋಬೈಲ್ ಹಿಡ್ಕೊಂಡ ಕಿಸಿದಾಗ ಮೋಬೈಲ್ ಕಂಡಿಲ್ಲಾ ಅಂತ ಒಮ್ಮಿಕ್ಕಲೇ ಗಾಬರಿ ಆಗಿ ಆ ಕೈಯಾಗಿನ ಫೋನಲೇನ ದೋಸ್ತಗ ಫೋನ್ ಮಾಡಿ ಫೋನ್ ಹುಡಕಿಸಿದ ನನಗ ಬುದ್ದಿ ಇಲ್ಲಾ ಅನಬೇಕೊ ಇಲ್ಲಾ ನನ್ನ ಫೋನಲೇ ನಾನ ಮಾಡಿದ್ದ ಫೋನ್ ರೀಸಿವ್ ಮಾಡಿ ಮತ್ತ ಕಾರ್ ಸೈಡಿಗೆ ಹಚ್ಚಿ ನನ್ನ ಮೋಬೈಲ ಫೋನ ಹುಡಕಿದ ಸೀನ್ಯಾಗ ಬುದ್ದಿ ಇಲ್ಲಾ ಅನಬೇಕೊ ಒಂದು ತಿಳಿಲಿಲ್ಲಾ.
ಇದು ಒಂದ ’ಬುದ್ದಿ ಎಲ್ಲಿ ಇಟ್ಟಿ…ಏಪ್ರಿಲ್ ಫೂಲ್ ಮುಮೆಂಟ್ ಅನ್ನರಿ.
ಇನ್ನೊಂದ ಅಲ್ಟಿಮೇಟ್ ’ಬುದ್ದಿ ಎಲ್ಲಿ ಇಟ್ಟಿ’ ಕಥಿ ಕೇಳ್ರಿ…ಇದ ನಂದ ಅಲ್ಲಾ, ನನ್ನ ಹೆಂಡ್ತಿದ. ಹಂಗ ಇಷ್ಟೋತನಕಾ ಬರೇ ನನ್ನ ಬುದ್ದಿ ಇಲ್ಲದ್ದ ಕಥಿ ಓದಿ-ಓದಿ ನನ್ನ ಹೆಂಡ್ತಿ ಅಗದಿ ಖುಶ್ ಆಗಿರ್ತಾಳ ಮತ್ತ ಅಕಿ ಬಗ್ಗೆ ಒಂದ ನಾಲ್ಕ ಅಕ್ಷರ ಬರಿಲಿಲ್ಲಾ ಅಂದರ ನಂಗ ಉಂಡದ್ದ ಹೆಂಗ ಜೀರ್ಣ ಆಗಬೇಕ.
ಮೊನ್ನೆ ನಮ್ಮವ್ವ ಬಾಥರೂಮಗೆ ಹೋಗಿ ಬಂದೋಕಿನ ಒಮ್ಮಿಕ್ಕಲೇ ನಿತ್ರಾಣ ಆದೋರಗತೆ ಬಂದ ಸೋಫಾ ಮ್ಯಾಲೆ ಕೂತ
’ಪ್ರೇರಣಾ ಯಾಕೋ ಒಮ್ಮಿಂದೊಮ್ಮಿಲೇ ಕಣ್ಣಿಗೆ ಕತ್ತಲಿ ಬಂದಂಗ ಆತ್ವಾ’ ಅಂತ ಅಂದಳು. ಅಕಿ ಮೊದ್ಲ ವಯಸ್ಸಾದೋಕಿ ಮ್ಯಾಲೆ ಒಂದ ವಾರದಿಂದ ಆರಾಮ ಬ್ಯಾರೆ ಇದ್ದಿದ್ದಿಲ್ಲಾ, ಅಕಿ ಮಾತ ಕೇಳಿ ನಮ್ಮಕಿ ಏನ ಅಂದ್ಲ ಹೇಳ್ರಿ…’ ಅಯ್ಯ ಕಣ್ಣಿಗೆ ಕತ್ತಲಿ ಬಂದಂಗ ಆದರ ಲೈಟ್ ಹಚಗೋ ಬೇಕಿಲ್ಲ’ ಅಂದ್ಲು.
ನಮ್ಮವ್ವ ಒಂದ ಸರತೆ ಅಕಿ ಮಾರಿ ಒಂದ ಸರತೆ ನನ್ನ ಮಾರಿ ನೋಡಿ ನನ್ನ ಹೆಂಡ್ತಿಗೆ ’ಬುದ್ದಿ ಎಲ್ಲಿ ಇಟ್ಟಿ’ ಅಂತ ಅನಬೇಕೊ ಇಲ್ಲಾ ಅಕಿನ್ನ ಕಟಗೊಂಡಿದ್ದಕ್ಕ ನನಗ ’ಬುದ್ದಿ ಎಲ್ಲಿ ಇಟ್ಟಿದ್ದಿ’ ಅಂತ ಅನಬೇಕೋ ಒಂದೂ ತಿಳಿಲಾರದ ಹಣಿ-ಹಣಿ ಬಡ್ಕೊಂಡ ಅಲ್ಲೇ ಸೋಫಾ ಮ್ಯಾಲೆ ಅಡ್ಡಾದ್ಲು.
ಏನ್ಮಾಡ್ತೀರಿ? ಖರೇ ಹೇಳ್ತೇನಿ ನಮ್ಮವ್ವ ಕಣ್ಣಿಗೆ ಕತ್ತಲಿ ಬಂದಂಗ ಆತ ಅಂದರ ನನ್ನ ಹೆಂಡ್ತಿ ಲೈಟ್ ಹಚಗೋಬೇಕಿಲ್ಲ ಅಂದಿದ್ದ ಕೇಳಿ ನನಗ ಕಣ್ಣಿಗೆ ಅಲ್ಲಾ ಬುದ್ದಿಗೆ ಕತ್ತಲಿ ಹಿಡದಂಗ ಆತ.
ಇರಲಿ ಹಿಂತಾ ಪ್ರಸಂಗ ಎಲ್ಲಾರ ಲೈಫ್ ಒಳಗ ರಗಡ ಆಗಿರ್ತಾವ, ಎಷ್ಟ ಶಾಣ್ಯಾರಿದ್ದರೂ ಆಗಿರ್ತಾವ. ಅದನ್ನ ಒಪ್ಪಗೊ ಬೇಕ ಇಷ್ಟ. ಇವತ್ತ ಏಪ್ರಿಲ್ ಫೂಲ್ಸ್ ಡೇ ಅಲಾ, ಹಿಂಗಾಗಿ ನಾ ಮಂದಿಗೆ ಏಪ್ರಿಲ್ ಫೂಲ್ ಮಾಡಿದ್ದ ಬರೇಯೋದರಾಗ ಏನ ಶಾಣ್ಯಾತನ ಸ್ವಂತ ನನ್ನವ ರಗಡ ಹಿಂತಾ ಫೂಲಿಶನೆಸ್ ಇದ್ದಾಗ ಅಂತ ನಿಮ್ಮ ಜೊತಿ ಒಂದ್ಯಾರಡ ಹಂಚಗೊಂಡೆ ಅನ್ನರಿ.
ಅಲ್ಲಾ, ಹಂಗ ನಿತ್ಯ ಜೀವನದಾಗ ಹಿಂತಾ ಎಷ್ಟೊ ಫೂಲಿಶ್ ಕೆಲಸಾ, ಬುದ್ದಿಗೇಡಿ ಕೆಲಸಾ ಮಾಡೇ ಮಾಡ್ತಿರ್ತೇವಿ ಮತ್ಯಾಕ ಸಪರೇಟ್ april fool’s day ಅಂತ ಮಾಡ್ಬೇಕೊ ಗೊತ್ತಿಲ್ಲಾ. ಆದರು ಲೈಫ್ ಒಳಗಿನ ಸಣ್ಣ-ಸಣ್ಣ ಮೂರ್ಖತನಾಗೂ ಒಮ್ಮೋಮ್ಮೆ ವಿಚಾರ ಮಾಡಿದಾಗ ’ನಾ ಬುದ್ದಿ ಎಲ್ಲೇ ಇಟ್ಟಿದ್ದೆ’ ಅಂತ ನಮ್ಮಷ್ಟಕ್ಕ ನಾವ ಕೇಳ್ಕೋಳೊ ಹಂಗ, ನಮ್ಮಷ್ಟಕ್ಕ ನಾವ ಏಪ್ರಿಲ್ ಫೂಲ್ ಮಾಡ್ಕೊಂಡಂಗ ಆಗ್ತಾವ ಅನ್ನರಿ.