ಇವತ್ತ ಮುಂಜಾನೆ ನಮ್ಮವ್ವ ಅಂಗಳದಾಗ ಪೇಪರ ಬರೋದಕ್ಕ ಒಂದ ರೌಂಡ ಪೇಪರ ಮ್ಯಾಲೆ ಕಣ್ಣ ಆಡಿಸಿ ನನ್ನ ಹೆಂಡತಿಗೆ
“ಏ..ಪ್ರೇರಣಾ ನಿನ್ನ ಗಂಡನ ಗಿರಮಿಟ್ ಇವತ್ತ ಬಂದದ ನೋಡ ಬಾ” ಅಂತ ಒದರಿದ್ಲು.
ನಿದ್ದಿ ಗಣ್ಣಾಗ ಕ್ಯಾಗಸಾ ಹೊಡಿಲಿಕತ್ತಿದ್ದ ನನ್ನ ಹೆಂಡ್ತಿ
’ಇವತ್ತ ಶುಕ್ರವಾರ, ಇವತ್ಯಾಕ ಬರ್ತದ? ನಂಗೊತ್ತ ತೊಗರಿ, ನೀವು ಏಪ್ರಿಲ್ ಫೂಲ ಮಾಡ್ಲಿಕತ್ತೀರಿ” ಅಂತ ಅಂದ್ಲು.
’ಇಲ್ಲ ನಮ್ಮವ್ವಾ ಖರೇನ…ನೋಡೇರ ನೋಡ ಬಾ…ನಿಂಗ ಏಪ್ರಿಲ್ ಫೂಲ್ ಮಾಡೊ ಜರೂರತ ಏನ ಅದ” ಅಂತ ಅಂದ ಬಿಟ್ಲು.
ತೊಗೊ ಮುಂಜ-ಮುಂಜಾನೆ ಅತ್ತಿ ಸೊಸಿದ ಶುರು ಆತ
“ಹೌದ, ನಾ ಫೂಲ್ ಇದ್ದೇನಿ..ನಂಗ್ಯಾಕ ಏಪ್ರಿಲ್ ಫೂಲ ಮಾಡೋ ಜರೂರತ್ ಅದ ಅಂತ ಅನ್ನಲಿಕತ್ತೀರಿ ತೊಗೊರಿ. ಯಾವಾಗ ನಿಮ್ಮ ಬಣ್ಣ-ಬಣ್ಣದ ಮಾತ ಕೇಳಿ ನಿಮ್ಮ ಮೊನೋಕ್ರೋಮ್ ಮಗನ ಲಗ್ನಾ ಮಾಡ್ಕೊಂಡೇ ಅವತ್ತ ನಾ ಫೂಲ್ ಆಗೇನಿ’ ಅಂತ ಶುರು ಹಚಗೊಂಡ್ಲು. ಕಡಿಕೆ ನಮ್ಮವ್ವನ ಹೋಗ್ಲಿ ಬಿಡ ಮುಂಜಾನೆ ಎದ್ದ ಎಲ್ಲೆ ಇಕಿ ಬಾಯಿ ಹತ್ತೋದ, ಅಕಿ ಗಂಡನ್ನ ಆರ್ಟಿಕಲ್ ಬೇಕಾರ ಓದ್ಲಿ ಬ್ಯಾಡಾರ ಬಿಡ್ಲಿ ಅಂತ ಸುಮ್ಮನಾದ್ಲು.
ಹಂಗ ಇತ್ತೀಚಿಗೆ ಏಪ್ರಿಲ್ ಫೂಲ್ ಮಾಡೋದ ಕಡಮಿ ಆಗೇದ. ಆದರ ನಮ್ಮ ಕಾಲದಾಗ ಇದರ ಹಾವಳಿ ಭಾಳ ಇತ್ತ. ದೊಡ್ದೊರಿಂದ ಹಿಡದ ಸಣ್ಣೋರ ತನಕಾ ಎಲ್ಲಾರೂ ಇಡಿ ದಿವಸ ಏಪ್ರಿಲ್ ಫೂಲ್ ಮಾಡೋರ. ಎಲ್ಲಾ ಮಷ್ಕೀರಿಗೆ ಮತ್ತ, ಸಿರಿಯಸ್ ಆಗಿ ಏನ ಅಲ್ಲಾ ಖರೆ ಆದರೂ ಯಾರರ ಫೂಲ್ ಆದರ
’ಏಪ್ರಿಲ್ ಫೂಲ್ ಹೆಂಗ ಮಾಡಿದೆ’ ಅಂತ ಕಾಡಸೋರ.
ಹಂಗ ಮದ್ವಿ ಆಗಿ ಹೊಸ್ತಾಗಿ ಬಂದಾಗ ನನ್ನ ಹೆಂಡ್ತಿನೂ ಭಾರಿ ಖುಷಿಲೇ ಒಂದ್ಯಾರಡ ವರ್ಷ ಸಣ್ಣ-ಸಣ್ಣ ವಿಷಯಕ್ಕ ಏಪ್ರಿಲ್ ಫೂಲ್ ಮಾಡ್ತಿದ್ಲು, ಆಮ್ಯಾಲೆ ನಾ ತಲಿ ಕೆಟ್ಟ
’ಲೇ…ನಾ ಒಮ್ಮೆ ನಿನ್ನ ಲಗ್ನ ಆಗೇನಿ ಅಂದರ ವರ್ಷಾನಗಟ್ಟಲೇ, ಜೀವನ ಪರ್ಯಂತ ಫೂಲ್ ಇದ್ದಂಗ. ನೀ ಸುಮ್ಮನ ಮತ್ತ ಸಪರೇಟ್ ಏಪ್ರಿಲ್ ಒಂದಕ್ಕ ಏಪ್ರಿಲ್ ಫೂಲ್ ಮಾಡ್ಲಿಕ್ಕೆ ಹೋಗಬ್ಯಾಡ’ ಅಂತ ಗಪ್ ಕೂಡಿಸಿದೆ.
ಒಂದ ಸರತೆ ನಮ್ಮ ತಂಗಿ ನನ್ನ ಹೆಂಡ್ತಿಗೆ ಏಪ್ರಿಲ್ ಫೂಲ ಮಾಡ್ಲಿಕ್ಕೆ, ಏಪ್ರಿಲ್ ಒಂದಕ್ಕ ವಧು-ವರರ ಕೇಂದ್ರದಾಗ ’ಕನ್ಯಾ ಕೊಡುವದಿದೆ’ ಲಿಸ್ಟ ಒಳಗ ಅಕಿ ಕಂಟ್ಯಾಕ್ಟ ನಂಬರ ಬರದ ಹೆಸರ ಹಚ್ಚಿ ಬಿಟ್ಲು. ಹಂಗ ನಮ್ಮ ತಂಗಿ ಅಲ್ಲೇ ಕೆಲಸಾ ಮಾಡ್ತಿದ್ಲು. ಅವತ್ತ ಕನ್ಯಾ ಬೇಕ ಅಂತ ಬಂದೋರಿಗೆಲ್ಲಾ ’ಇವರ ಮನ್ಯಾಗ ಕನ್ಯಾ ಛಲೋ ಅದ ನೋಡ್ರಿ’ ಅಂತ ನನ್ನ ಹೆಂಡ್ತಿ ಕುಂಡ್ಲಿ, ಫೋಟೊ ತೋರಿಸಿ ನಂಬರ ಕೊಟ್ಲು. ತೊಗೋ ಕೇಳ್ತಿರೇನ, ಏನಿಲ್ಲದ ಜನಾ ಕನ್ಯಾ ಕಂಡೇನಿಲ್ಲೋ ಅನ್ನೊರಂಗ ಮಾಡ್ತಿದ್ದರು ಅವರೇಲ್ಲಾ ನನ್ನ ಹೆಂಡ್ತಿಗೆ ಫೋನ ಹೊಡದಿದ್ದ ಹೊಡದಿದ್ದ. ನನ್ನ ಹೆಂಡ್ತಿಗೆ ನಮ್ಮ ಮನ್ಯಾಗ ಯಾವದು ಕನ್ಯಾ ಇಲ್ಲಾ ಅಂತ ಹೇಳಿ ಹೇಳಿ ಸಾಕಾತ. ಕಡಿಕೆ ತಲಿಕೆಟ್ಟ
’ಹೌದ ನಮ್ಮ ಮನ್ಯಾಗ ನಾನ ಕನ್ಯಾ, ಆದರ ನಂಗ ಮೂರ ವರ್ಷದ ಮಗಳ ಇದ್ದಾಳ, ಮ್ಯಾಲೆ ನಂದ ಲಗ್ನ ಆಗೇದ’ ಅಂತ ಹೇಳಿ ಫೋನ ಕಟ್ ಮಾಡ್ಲಿಕತ್ಲು. ಯಾವಾಗ ರಾತ್ರಿ ನಮ್ಮ ತಂಗಿ ಫೋನ ಮಾಡಿ ಏಪ್ರಿಲ್ ಫೂಲ್ ಹೆಂಗ ಮಾಡಿದೆ ಅಂತ ಅಂದ್ಲು ಆವಾಗ ಇಕಿಗೆ ಪಿತ್ತ ನೆತ್ತಿಗೇರತ. ಹಂಗ ಮರದಿವಸ ಅಕಿ ನನ್ನ ಹೆಂಡ್ತಿ ಹೆಸರ ಕನ್ಯಾದ ಲಿಸ್ಟನಾಗಿಂದ ಡಿಲೀಟ್ ಮಾಡಿದ್ಲ ಖರೆ ಆದರ ನನ್ನ ಹೆಂಡ್ತಿ ಮುಂದ ಅಕಿ ಜೊತಿ ಜಗಳಾಡಿ ಒಂದ ತಿಂಗಳ ಚಾಳಿ ಟು ಬಿಟ್ಲು.
ಖರೇ ಹೇಳ್ಬೇಕಂದರ ಇದರಾಗ ಫೂಲ್ ಆದೋರ ನನ್ನ ಹೆಂಡ್ತಿ ಕನ್ಯಾ ಅಂತ ತಿಳ್ಕೊಂಡ ನಮ್ಮನಿಗೆ ಫೋನ ಮಾಡಿದವರ ಆ ಮಾತ ಬ್ಯಾರೆ.
ಇನ್ನ ಕಲಿಬೇಕಾರ ದೋಸ್ತರೊಳಗ ಏಪ್ರಿಲ್ ಫೂಲ್ ಮಾಡೋದ, ಆಜು ಬಾಜುದವರ ಮಾಡೋದ ಅಗದಿ ಕಾಮನ್ ಇತ್ತ. ಕಾಲೇಜನಾಗ ದೋಸ್ತರ
’ಏ..ನಾಳೆ ಫಸ್ಟ ಡೇ ಫಸ್ಟ ಶೋ…ಅಮೃತ ಟಾಕೀಜ್, ನಾ ಟಿಕೇಟ್ ತಗಿಸಿರ್ತೇನಿ ನೀ ಬಂದ ಬಿಡ’ ಅಂತ ಕರಿತಿದ್ದರ, ನಾ ಹುಚ್ಚರಂಗ ಇಂಗ್ಲೀಷ ಪಿಕ್ಚರ್ ಆಶಾಕ್ಕ CBT ಇಂದ ಬಸ್ ಹತ್ತಿ ವಿದ್ಯಾನಗರಕ್ಕ ಹೋಗ್ತಿದ್ದೆ, ಅಲ್ಲೇ ನೋಡಿದರ ಯಾ ಮಕ್ಕಳು ಇರ್ತಿದ್ದಿಲ್ಲಾ. ಆಮ್ಯಾಲೆ ಸಂಜಿಗೆ ಸಿಕ್ಕಾಗ ’ಹೆಂಗ ಏಪ್ರಿಲ್ ಫೂಲ್ ಮಾಡಿದ್ವಿ’ ಅಂತಿದ್ದರು.
ಇನ್ನ ಸಣ್ಣಂವ ಇದ್ದಾಗ ಓಣ್ಯಾಗಿನ ದೋಸ್ತರ
’ಲೇ ರೇಶನ್ ಅಂಗಡಿ ಒಳಗ ಚಿಮಣಿ ಎಣ್ಣಿ ಕೊಡ್ಲಿಕತ್ತಾರ’ ಅಂತ ಹೇಳೋರ. ನಾ ಐದ ಲಿಟರ್ ಪ್ಲ್ಯಾಸ್ಟಿಕ್ ಕ್ಯಾನ ಹಿಡ್ಕೊಂಡ ಹಲಗಿ ಬಾರಿಸಿದಂಗ ಬಾರಿಸ್ಗೋತ ಬೆಂಡಿಗೇರಿ ಓಣಿ ತನಕ ಓಡಿ ಹೋಗಿ ನೋಡಿದರ ಅಲ್ಲೆ ಚಿಮಣಿ ಎಣ್ಣಿ ಗಾಡಿನ ಬಂದಿರ್ತಿದ್ದಿಲ್ಲಾ. ವಾಪಸ ಬಂದ ಮ್ಯಾಲೆ ಏಪ್ರಿಲ್ ಫೂಲ್ ಅಂತಿದ್ದರು.
ನಮ್ಮ ದೋಸ್ತರ ಹೋಗ್ಲಿ ನಮ್ಮಪ್ಪ ಸಹಿತ ಏಪ್ರಿಲ್ ಫೂಲ್ ಎಂಜಾಯ್ ಮಾಡ್ತಿದ್ದಾ. ನಮ್ಮವ್ವಗ ಸುಮ್ಮ-ಸುಮ್ಮನ
’ಏ, ನಳಾ ಬಂತ’ ಅಂತ ಮನಿಗೆ ಬಂದ ಹೇಳೋಂವಾ. ಆವಾಗ ಸರ್ಕಾರಿ ನಳದ್ದ ನೀರ ತುಂಬತಿದ್ವಿ, ನಮ್ಮವ್ವ ಹೊರಗ ಹೋಗಿ ನೋಡಲಾರದ ಗಂಡನ ಮಾತ ನಂಬಿ ಇದ್ದ ಎರಡ ಕೊಡಾ ಕುಡಿಯೋ ನೀರ ಭಡಾ ಭಡಾ ಬಚ್ಚಲಕ್ಕ ಸುರುವಿ, ಗಲಬರಸಿ ಕೊಡಾ ತಿಕ್ಕೊಂಡ ಸರ್ಕಾರಿ ನಳಕ್ಕ ಹೋಗೊಕಿ, ಅಲ್ಲೇ ನೋಡಿದರ ನಳಾನ ಬಂದಿರ್ತಿದ್ದಿಲ್ಲಾ.
ಕಡಿಕೆ ನಮ್ಮಪ್ಪಗ ಬೈದ ಬಾಜು ಮನಿಯವರ ಕಡೆ ಕುಡಿಯೊ ನೀರ ಕಡಾ ಇಸ್ಗೊಂಡ ಬರತಿದ್ಲು.
ಒಂದ ಸರತೆ ನಮ್ಮವ್ವಗ ನಿಮ್ಮ ಕೆರಳ್ಳಿ ಅಬಚಿ ಹೋದ್ಲಂತ ನೋಡ ಅಂತ ಹೇಳಿದಾ. ಪಾಪ ನಮ್ಮವ್ವ ಒಂದ ಹತ್ತ ಸರತೆ ಮರಗಿ ಬಾಜು ಮನಿ ಗಿರಜಕ್ಕನ ಕರದ ನಮಗ ಬರೇ ನೀರ ಇಷ್ಟ ತೊಗೊ ಅಂತ ನೀರ ಹಾಕಿಸಿಕೊಂಡಿದ್ಲು. ಅಕಿದ ನೀರ ಆದ ಮ್ಯಾಲೆ ಏಪ್ರಿಲ್ ಫೂಲ್ ಅಂತ ಅಂದ ಬೈಸ್ಗೊಂಡಾ ಆ ಮಾತ ಬ್ಯಾರೆ. ಒಂದ ಮಜಾ ಅಂದರ ಆ ನಮ್ಮವ್ವನ ಅಬಚಿ ಕರೆಕ್ಟ ಹತ್ತ ವರ್ಷ ಬಿಟ್ಟ ಏಪ್ರಿಲ್ ಒಂದಕ್ಕ ಸತ್ತಳು. ಅಲ್ಲಾ ನಮ್ಮಪ್ಪಾ ಅಕಿಗೆ ಇದ್ದಾಗ ಕೊಂದದ್ದಕ್ಕ ಅಕಿ ಆಯುಶ್ಯ ಮತ್ತ ಹತ್ತ ವರ್ಷ ಜಾಸ್ತಿ ಆಗಿತ್ತ ಅನ್ನರಿ.
ಇನ್ನ ನನಗ ಭಾಳ ಮಂದಿ ಮಾರವಾಡಿ ದೋಸ್ತರ, ಅವರದೇಲ್ಲಾ ಬಾರಾದಾನ ಸಾಲ್, ಬಟರ್ ಮಾರ್ಕೇಟನಾಗ ಅಂಗಡಿ ಇರ್ತಿದ್ದವು. ಹಂಗ ಅವರದ ಚೀಟಿ ವ್ಯವಹಾರ. ಪಕ್ಕಾ ಬಿಲ್ ಗಿರಾಕಿ ಅಲ್ಲಾ. ಹಂತಾದರಾಗ ಒಮ್ಮೆ ದೋಸ್ತರೇಲ್ಲಾ ಸೇರಿ ಏಪ್ರಿಲ್ ಒಂದಕ್ಕ ನಮ್ಮ ಮಾರವಾಡಿ ದೋಸ್ತನ ಅಂಗಡಿಗೆ ಹೋಗಿ
’ಲೇ, ಕಂಚಗಾರ ಗಲ್ಲಿ ಒಳಗ ಸೇಲ್ಸ ಟ್ಯಾಕ್ಸ್ ಗಾಡಿ ಬಂದೈತಿ, ಮೂರ ಅಂಗಡಿಗೆ ಹೋಗ್ಯಾರ, ನಿಮ್ಮ ಅಂಗಡಿಗೂ ಬಂದರ ಬರಬಹುದು’ ಅಂತ ಹೇಳಿದ್ವಿ. ಅದನ್ನ ಕೇಳಿ ನಮ್ಮ ದೋಸ್ತ ಮತ್ತ ಅವರಪ್ಪಾ ಟೇನ್ಶನ್ ತೊಗೊಂಡರ, ಅದರಾಗ ನಾ ಒಂದ ದಿವಸ ಮೊದ್ಲ ನಮ್ಮ ದೋಸ್ತನ ಮೋಬೈಲ್ ತೊಗೊಂಡ ಅವನ ಕಂಟ್ಯಾಕ್ಟ ಒಳಗ ನನ್ನ ಹೆಸರ ಎಡಿಟ್ ಮಾಡಿ SALES TAX ಅಂತ ಸೇವ ಮಾಡಿದ್ದೆ. ಹಿಂಗ ನಾ ಅವರ ಟೆನ್ಶನ್ ತೊಗೊಳೊದಕ್ಕ ಸೈಡಿಗೆ ಹೋಗಿ ನಮ್ಮ ದೋಸ್ತಗ ಫೋನ ಹೊಡದೆ. ಅದ ರಿಂಗ್ ಆತ, ಸ್ಕ್ರೀನ್ ಮ್ಯಾಲೆ SALES TAX ಅಂತ ತೋರಸ್ತ. ಅಂವಾ ಫುಲ್ ಗಾಬರಿ ಆದಾ. ಅಂವಾ ಬರೇ ಸೇಲ್ಸಟ್ಯಾಕ್ಸ ಓದಿದ್ದಾ, ನಂಬರ ನೋಡಿದ್ದಿಲ್ಲಾ. ಅಲ್ಲಾ ಹಂಗ ನಂಬರ ಯಾರ ನೋಡ್ತಾರ, ಹೆಸರ ನೋಡಿ ಹೆದರಿ ಬಿಟ್ಟಾ. ತೊಗೊ ಅಪ್ಪಾ ಮಗಾ ಕೂಡಿ ಇದ್ದ ಬಿದ್ದ ಚೀಟಿ ಬುಕ್, ಕ್ಯಾಶ ಬುಕ್, ಲೆಡ್ಜರ್ ಎಲ್ಲಾ ತೊಗೊಂಡ ಅಂಗಡಿ ಶಟರ್ ಎಳದ ಬಿಟ್ಟರ.
ಆಮ್ಯಾಲೆ ನಾವ ನಮ್ಮ ದೋಸ್ತನ ಕರಕೊಂಡ ಭಾಳ ಟೆನ್ಶನ್ ತೊಗೊಬ್ಯಾಡಾ ಪಿಕ್ಚರ ಹೋಗೋಣ ನಡಿ ಅಂತ ಗಣೇಶ ಟಾಕೀಜಗೆ ಪಿಕ್ಚರಗೆ ಕರಕೊಂಡ ಹೋಗಿ ರಾತ್ರಿ ಬರಬೇಕಾರ
’ಲೇ..ಮಗನ ನಿನ್ನ ಮೋಬೈಲನಾಗ ನೀ ಸೇಲ್ಸಟ್ಯಾಕ್ಸ್ ನಂಬರ ಸೇವ ಮಾಡಿದ್ದರ ಇಷ್ಟ ಕಾಲ್ ಬಂದಾಗ ಹೆಸರ ತೋರಸ್ತೈತಿ, ನಿಂಗಷ್ಟು ತಲಿ ಇಲ್ಲಲೇ…ಅದ ಆಡ್ಯಾನ ನಂಬರ, ನಿಂಗ ಏಪ್ರಿಲ್ ಫೂಲ್ ಮಾಡಾಕ ಹೆಸರ ಎಡಿಟ್ ಮಾಡಿದ್ವಿ’ ಅಂತ ಹೇಳಿ ಮುಂದ ಅವನ ಕಡೆ ಬೈಸ್ಗೊಂಡ್ವಿ ಆ ಮಾತ ಬ್ಯಾರೆ.
ಹಿಂಗ ಏಪ್ರಿಲ್ ಫೂಲ್ ದಿವಸ ಮಸ್ಕೀರಿ ಮಾಡೋರ ಮಾಡ್ತಿರ್ತಾರ.
ಹಂಗ ಮತ್ತ ನಾಳೆ ನನ್ನ ಆರ್ಟಿಕಲ್ ಬರ್ತದ ಅಂತ ಕಾಯ್ಕೋತ ಕೂತೋರಿಗೆ ಏಪ್ರಿಲ್ ಫೂಲ್ ಮಾಡ್ಲಿಕ್ಕೆ ಇವತ್ತ ನಾ ಬರದಿಲ್ಲ. ಇವತ್ತ ಏಪ್ರಿಲ್ ಫೂಲ್ ಅಂತ ಹೇಳಿ ಮುದ್ದಾಮ ಬರದಿದ್ದ.
ನಿನ್ನೆ ಅಲ್ದ್ ಮೊನ್ನೆ ದಿನಾ ವಿಜಯವಾಣಿ ಯೊಳಗಿನ
ಗಿರಮಿಟ್ ಕಾಲಮ್ ನ್ಯಾಗ ಈ ನಿಮ್ಮ ಹಾಸ್ಯ ಪ್ರಹಸನ ಓದಿ ಭಾಳಂದ್ರ ಭಾಳ ನಕ್ಕೆ ಭಾಳ ಖುಷಿಯಾಯ್ತರ್ರೀ ಸರ 😄😄✍️👌👌💞💞